ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಟೋಲ್ ವಿನಾಯಿತಿ : ಕಾಪು ಶಾಸಕರ ನೇತೃತ್ವದಲ್ಲಿ ಮನವಿ
Posted On:
24-03-2025 03:36PM
ಪಡುಬಿದ್ರಿ : ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ವಾಹನಗಳಿಗೆ ಹೆಜಮಾಡಿ ಟೋಲ್ ಗೇಟ್‌ನಲ್ಲಿ ಸುಂಕ ವಿನಾಯಿತಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಮನವಿ ನೀಡಲಾಯಿತು.
ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜಮಾಡಿಯಲ್ಲಿ ಹಲವಾರು ವರ್ಷಗಳಿಂದ ಟೋಲ್ ಗೇಟ್ ನಿರ್ಮಾಣಗೊಂಡು ಸುಂಕ ವಸೂಲಾತಿಯನ್ನು ಮಾಡುತ್ತಿದ್ದು, ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಬೇಕೆಂದು ಮನವಿಯನ್ನು ಮಾಡಿದ್ದರು. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಸ್ತಾನ ಟೋಲ್ ಗೇಟ್ ನಲ್ಲಿ ಕೋಟಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಿದ್ದು, ಅದರಂತೆ ಹೆಜಮಾಡಿ ಟೋಲ್ ಗೇಟ್ ನಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯತ್ ನ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿಗೊಳಿಸುವಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶರಣ್ ಕುಮಾರ್ ಮಟ್ಟು, ಪಕ್ಷದ ಹಿರಿಯರಾದ ರಮಕಾಂತ್ ಪಡುಬಿದ್ರಿ, ಮಿಥುನ್ ಆರ್ ಹೆಗ್ಡೆ ಉಪಸ್ಥಿತರಿದ್ದರು.