ಕಾಪು ಶ್ರೀ ಹಳೇ ಮಾರಿಯಮ್ಮ ದೇವಳ : ಸಮಗ್ರ ಜೀರ್ಣೋದ್ಧಾರ ಮಹಾ ಸಂಕಲ್ಪ - ಮೂಲನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಚಾಲನೆ
Posted On:
26-03-2025 04:13PM
ಕಾಪು : ಕಾಪು ಶ್ರೀ ಹಳೇ ಮಾರಿಯಮ್ಮ ದೇವಳದ ಸಮಗ್ರ ಜೀರ್ಣೋದ್ಧಾರ ಮಹಾಸಂಕಲ್ಪ- ಮೂಲನಿಧಿ ಸಮರ್ಪಣಾ ಮಹಾ ಅಭಿಯಾನ ಕಾರ್ಯಕ್ರಮಕ್ಕೆ ಮಂಗಳವಾರ ದೇಗುಲದ ವಠಾರದಲ್ಲಿ ಚಾಲನೆ ನೀಡಲಾಯಿತು.
ಸನ್ನಿಧಾನದ ಜೀರ್ಣೋದ್ಧಾರ ಮತ್ತು ಸುತ್ತುಪೌಳಿ ಪುನರ್ ನಿರ್ಮಾಣ ಉದ್ದೇಶದೊಂದಿಗೆ ಶ್ರೀ ಕಾಶೀ ಮಠಾಧಿಶರಾದ ಶ್ರೀ ಸಂಯ್ಯಮೀಂದ್ರತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ 2023ರಲ್ಲಿ ಮುಷ್ಟಿಕಾಣಿಕೆ ಸಮರ್ಪಣೆ ಮೂಲಕ ಚಾಲನೆ ನೀಡಲಾಗಿತ್ತು. ಈಗ ಕಾಪು ಪೇಟೆಯ ಹತ್ತು ಸಮಸ್ತರು ಮತ್ತು ಮಾರಿಯಮ್ಮ ದೇವರ ಸಮಸ್ತ ಭಕ್ತರ ಅಪೇಕ್ಷೆಯಂತೆ ಮೂಲನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಪೂರ್ವಭಾವಿಯಾಗಿ ಸಮಸ್ತ ಭಕ್ತರಿಗೆ ಕಾಣಿಕೆ ಡಬ್ಬಿ ವಿತರಣೆ, ಜೀರ್ಣೋದ್ದಾರ ಲಾಂಛನ ಅನಾವರಣ ಕಾರ್ಯಕ್ರಮ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಕೆ. ಕಮಲಾಕ್ಷ ಭಟ್, ಮಂಗಳೂರು ವೆಂಕಟರಮಣ ದೇವಸ್ಥಾನದ ತಂತ್ರಿ, ಧಾರ್ಮಿಕ ವಿದ್ವಾಂಸ ಡಾ. ಎಂ. ಪಂಡಿತ್ ನರಸಿಂಹ ಆಚಾರ್ಯ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತಾನಾಡಿ, 42 ವರ್ಷಗಳ ಹಿಂದೆ ಊರು ಬಿಟ್ಟು ಪರವೂರಿಗೆ ಹೋಗುವ ಸಂಧರ್ಭದಲ್ಲಿ ಕೈಯಲ್ಲಿ ಇದದ್ದು ಹಳೆ ಮಾರಿಯಮ್ಮನ ಗದ್ದಿಗೆ ಪೂಜೆಯ ಪ್ರಸಾದ ಇವತ್ತು ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಸಂಕಲ್ಪ ಮಾಡಿದರೆ ಸಿದ್ದಿಯಾಗುವ ಸಮಯ ತುಂಬಾ ದೂರವಿಲ್ಲ ಎಂದರು.
ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ ಮಾತಾನಾಡಿ, ಕಾಪು ಸುಗ್ಗಿ ಮಾರಿಪೂಜೆ ಕಾಪುವಿಗೆ ಹಬ್ಬವಾಗಿದೆ. ಜಿಎಸ್ಬಿ ಸಮಾಜ ನೂರಾರು ಕೋಟಿ ರೂಪಾಯಿಯನ್ನು ಶೈಕ್ಷಣಿಕ -ಧಾರ್ಮಿಕ-ವೈದ್ಯಕೀಯ ರಂಗಕ್ಕೆ ನೀಡಿದೆ. ಹಾಗಾಗಿ ಇವತ್ತಿನ ಮೂಲಧನ ಸಂಗ್ರಹ ಕೂಡ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ ಎಂದರು.
ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಆನಂದ್ರಾಯ ಶೆಣೈ, ಶಾಸಕರಾದ ಪ್ರತಾಪ್‌ಸಿಂಹ ನಾಯಕ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿಎಸ್‌ಬಿ ಸರ್ವ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಅಜಿತ್ ಕುಡ್ವ ಮುಲ್ಕಿ, ಪ್ರಮುಖರಾದ ಮನೋಹರ್ ಎಸ್. ಶೆಟ್ಟಿ ಕಾಪು, ಕೆ. ವಾಸುದೇವ ಶೆಟ್ಟಿ, ವಿಕ್ರಂ ಕಾಪು, ಮೋಹನ್ ಎಂ. ಬಂಗೇರ, ಲಕ್ಷ್ಮೀನಾರಾಯಣ ನಾಯಕ್ ಕಾಪು, ಡಾ.ಕೆ. ನಾಗಾನಂದ ಭಟ್ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಗೋಕುಲ್‌ದಾಸ್ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಸದಾನಂದ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.