ಮಾ.30 : ಆಚಾರ್ಯ ಮಧ್ವರ ಜನ್ಮಭೂಮಿ ಶ್ರೀಕ್ಷೇತ್ರ ಪಾಜಕದಿಂದ ಭಕ್ತಿ ರಥಯಾತ್ರೆ ಪ್ರಾರಂಭ
Posted On:
28-03-2025 01:53PM
ಕಾಪು : ಅಯೋಧ್ಯೆಯಲ್ಲಿ ಶ್ರೀರಾಮ ಭಕ್ತರಿಂದ ನಿರ್ಮಿಸಲ್ಪಟ್ಟ ನೂತನ ಮಂದಿರದಲ್ಲಿ ಶ್ರೀರಾಮಚಂದ್ರ ದೇವರನ್ನು ಪ್ರತಿಷ್ಠಾಪಿಸಿದ ನಂತರ, ನಮ್ಮಲ್ಲಿ ನಿರಂತರ ರಾಮದೇವರ ಪ್ರಜ್ಞೆ ಜಾಗೃತಿಯಲ್ಲಿರಬೇಕೆಂಬ ಸದುದ್ದೇಶದಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸಮಿತಿಯವರ ಯೋಚನೆಯಂತೆ ಅದರ ಟ್ರಸ್ಟಿಗಳೂ ಆಗಿರುವ ಉಡುಪಿ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರತಿಯೊಬ್ಬರ ಮನೆಯಲ್ಲೂ ನಿರಂತರ ಶ್ರೀರಾಮ ಜಪ ನಡೆಯಬೇಕೆಂಬ ದೃಷ್ಠಿಯಿಂದ ರಾಮತಾರಕ ಮಂತ್ರದ ಮಹತ್ವವನ್ನು ತಿಳಿಸಲು ಹಾಗೂ ಭಕ್ತಿ ಸಿದ್ಧಾಂತವನ್ನು ಪ್ರಸಾರ ಮಾಡಲು "ಭಕ್ತಿ ರಥಯಾತ್ರೆ"ಯನ್ನು ಆಚಾರ್ಯ ಮಧ್ವರ ಅವತಾರ ಭೂಮಿ ಶ್ರೀಕ್ಷೇತ್ರ ಪಾಜಕದಿಂದ ಮಾ.30, ರವಿವಾರ ಪ್ರಾರಂಭಿಸುವುದಾಗಿ ಸಂಕಲ್ಪಿಸಿದ್ದಾರೆ ಎಂದು ಪಾಜಕ ಭಕ್ತಿ ರಥಯಾತ್ರೆ ಸಮಿತಿಯ ಸದಸ್ಯರಾದ ಪಡುಬೆಳ್ಳೆ ಮಧ್ವರಾಜ ಭಟ್ ಗುರುವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಕ್ತಿ ರಥವು ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ. ಪೇಜಾವರ ಶ್ರೀಪಾದರ ಮಾರ್ಗದರ್ಶನದಲ್ಲಿ ಎ.10 ರಿಂದ 12ರ ವರೆಗೆ ಭಕ್ತಿ ಸಿದ್ಧಾಂತೋತ್ಸವ, ರಾಮೋತ್ಸವ, ಎ.13 ರಂದು ಭಕ್ತರೆಲ್ಲರೂ ಸೇರಿ ಜಪಿಸಿದ ದಶಕೋಟಿ ರಾಮತಾರಕ ಮಂತ್ರದ ಯಾಗ, ಸಂತ ಸಂಗಮ, ಹಿಂದೂ ಸಮಾವೇಶ ಶ್ರೀಕ್ಷೇತ್ರ ಪೆರ್ಣಂಕಿಲದಲ್ಲಿ ನಡೆಯಲಿದೆ. ಯಾಗದಂದು ರಾಮತಾರಕ ಮಂತ್ರ ಜಪಿಸಿದ ಭಕ್ತರಿಗೆ ಮಂತ್ರಾಕ್ಷತೆ ಸಹಿತ ಪ್ರಸಾದ ವಿತರಿಸಲಾಗುವುದು.
ಮಾ.30 ರವಿವಾರ ಬೆಳಿಗ್ಗೆ ಗಂಟೆ 9ಕ್ಕೆ ಶ್ರೀಪಾಜಕ ಕ್ಷೇತ್ರದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ವಿಶ್ವಹಿಂದೂ ಪರಿಷದ್ ಪ್ರಾಂತೀಯ ಅಧ್ಯಕ್ಷ ಎಂ.ಬಿ.ಪುರಾಣಿಕ್, ಭಕ್ತಿ ಸಿದ್ಧಾಂತೋತ್ಸವ, ರಾಮೋತ್ಸವ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ಪೆರ್ಣಂಕಿಲ, ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ಆಚಾರ್ಯ, ಕುರ್ಕಾಲು ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಪೂಜಾರಿ ಸಹಿತ ಇನ್ನಿತರ ಗಣ್ಯದ ಉಪಸ್ಥಿತಿಯಲ್ಲಿ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಕ್ತಿರಥಯಾತ್ರೆಗೆ ಚಾಲನೆ ನೀಡಿ ಆಶೀರ್ವಚನ ನೀಡುವರು. ನಂತರ ವೇದಘೋಷ,ಪೂರ್ಣಕುಂಭ,ಕುಣಿತ ಭಜನೆ, ಡೋಲು, ಮಂಗಲವಾದ್ಯ ಸಹಿತ ಭಕ್ತಸಮೂಹದೊಂದಿಗೆ ಶ್ರೀಪರಶುರಾಮ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಸಾಗಿ, ಅಲ್ಲಿಂದ ಬೈಕ್ ರ‍್ಯಾಲಿಯೊಂದಿಗೆ ದಂಡತೀರ್ಥಕ್ಕೆ ಸಾಗುವುದು. ಅಲ್ಲಿಂದ ಮುಂದೆ ಮಂಗಳುರು, ಕಾಸರಗೋಡು ಜಿಲ್ಲೆಯಲ್ಲಿ ಸಾಗಿ ಎ.9 ಬುಧವಾರ ಪಾಜಕದಲ್ಲಿಯೇ ಸಮಾಪನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವ ಸಲಹೆಗಾರರು ಹಾಗೂ ಶ್ರೀಮಧ್ವಮಠ ಪಾಜಕಕ್ಷೇತ್ರದ ಪ್ರಧಾನ ವ್ಯವಸ್ಥಾಪಕರಾದ ವೇದಮೂರ್ತಿ ಮಾಧವ ಉಪಾಧ್ಯಾಯ, ಸಮಿತಿಯ ಅಧ್ಯಕ್ಷ ಕುರ್ಕಾಲು ಪಟ್ಟಚಾವಡಿ ದಿನೇಶ್ ಶೆಟ್ಟಿ, ಪ್ರಧಾನಕಾರ್ಯದರ್ಶಿ ಪಟ್ಟಾಭಿರಾಮ ಆಚಾರ್ಯ, ವಿಶ್ವನಾಥ ಪೂಜಾರಿ ಕುರ್ಕಾಲು, ಪರಶುರಾಮ ಭಟ್ ಉಪಸ್ಥಿತರಿದ್ದರು.