ಪಾಜಕ ಕ್ಷೇತ್ರದಲ್ಲಿ ಭಕ್ತಿ ರಥ ಯಾತ್ರೆಗೆ ವೈಭವದ ಚಾಲನೆ
Posted On:
31-03-2025 08:49AM
ಕಾಪು : ಜಗದ್ಗುರು ಮಧ್ವಾಚಾರ್ಯರ ಪವಿತ್ರ ಜನ್ಮಭೂಮಿ ಉಡುಪಿ ಜಿಲ್ಲೆ ಪಾಜಕ ಕ್ಷೇತ್ರದಲ್ಲಿ ಭಕ್ತಿ ರಥಯಾತ್ರೆಗೆ ಅಧ್ವರ್ಯುಗಳೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು , ರಥದಲ್ಲಿ ಶ್ರೀ ಸೀತಾಲಕ್ಷ್ಮಣ ಆಂಜನೇಯ ಸಹಿತ ರಾಮದೇವರ ಪಂಚಲೋಹದ ಮೂರ್ತಿಯನ್ನು ಕುಳ್ಳಿರಿಸಿ ಪವಿತ್ರ ಮಂತ್ರೋದಕದಿಂದ ಶುದ್ಧೀಕರಿಸಿ ಅಲಂಕಾರಾದಿಗಳನ್ನು ಮಾಡಿ ಮಂಗಳಾರತಿ ಬೆಳಗಿದ ಬಳಿಕ ಭಗವಾಧ್ವಜ ಕೇಸರಿ ಪತಾಕೆಯ ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ಸಂದರ್ಭ ಸಂದೇಶ ನೀಡಿದ ಶ್ರೀಗಳು , ತ್ರೇತಾಯುಗದಲ್ಲಿ ಹನುಮನಾಗಿ ದ್ವಾಪರದಲ್ಲಿ ಭೀಮನಾಗಿ ಅವತರಿಸಿದ ವಾಯುದೇವರೇ ಕಲಿಯುಗದಲ್ಲಿ ಮಧ್ವಾರಾಗಿ ಉಡುಪಿಯಲ್ಲಿ ಅವತರಿಸಿ ತತ್ವವಾದವೆಂಬ ಸರಳ ಸುಲಭವೂ ಆದ ಭಕ್ತಿಸಿದ್ಧಾಂತ ಸುಧೆಯನ್ನು ನಮಗೆಲ್ಲ ಉಣಬಡಿಸಿ ತಮ್ಮ ತಪಸ್ಸಿಗೆ ಒಲಿದ ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ನಮ್ಮೆಲ್ಲರನ್ನೂ ಧನ್ಯರಾಗಿಸಿದ್ದಾರೆ .ಭಗವಂತನ ಒಲುಮೆಗೆ ಪರಿಶುದ್ಧವಾದ ನಿಷ್ಕಲ್ಮಶ ಭಕ್ತಿಯೇ ಪರಮ ಸಾಧನ ಎಂದು ಸಾರಿ ಹೇಳಿದ ಮಧ್ವ ಗುರುಗಳು ನಾಡಿನೆಲ್ಲೆಡೆ ಈ ಸರಳ ಸಿದ್ಧಾಂತದ ಪ್ರಸಾರಕ್ಕಾಗಿ ಮಠಗಳನ್ನು ಸ್ಥಾಪಿಸಿ ತಾವೂ ದೇಶಾದ್ಯಂತ ಸಂಚರಿಸಿದರು. ಅಷ್ಟು ಮಾತ್ರವಲ್ಲದೇ ಹರಿದಾಸ ಸಾಹಿತ್ಯದ ಉಗಮಕ್ಕೂ ಕಾರಣರೆನಿಸಿ, ವ್ಯಾಸರಾಜರು ವಾದಿರಾಜರು ಜಯತೀರ್ಥರು ರಾಘವೇಂದ್ರ ತೀರ್ಥರು ಕನಕ ಪುರಂದರದಾಸರು ಜಗನ್ನಾಥದಾಸರು ಶ್ರೀಪಾದರಾಜರು, ಗೋಪಾಲದಾಸರು ವಿಜಯದಾಸರು ಮೊದಲಾದ ದಾಸವರೇಣ್ಯರ ಮೂಲಕ ಭಕ್ತಿ ಸಿದ್ಧಾಂತದ ಜ್ಞಾನಗಂಗೆ ಈ ನಾಡಿನಲ್ಲಿ ಸಮೃದ್ಧವಾಗಿ ಹರಿಯುವಂತೆ ಮಾಡಿ ಈ ನೆಲವನ್ನು ಪಾವನಗೊಳಿಸಿದರು. ಮಧ್ವಗುರುಗಳು ಕೊಟ್ಟ ಇಂಥಹ ಅರ್ಪಣಾ ಭಾವದ ಭಕ್ತಿಯ ಸಿದ್ಧಾಂತವನ್ನು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥರು ದೇಶದೆಲ್ಲೆಡೆ ಪ್ರಸಾರ ಮಾಡುವ ಕಾರ್ಯವನ್ನು ನಿರಂತರ ಮಾಡಿದ್ದರು. ಅದನ್ನು ಯಥಾಮತಿ ಮುಂದುವರೆಸುವ ಪ್ರಯತ್ನ ಮಾಡ್ತಾ ಇದ್ದೇವೆ. ಅಂದರ ಅಂಗವಾಗಿ ಪಾಜಕದಿಂದ ಪ್ರಾರಂಭಿಸಿ ಈ ಕರಾವಳಿ ಜಿಲ್ಲೆಗಳಲ್ಲಿ ಮಧ್ವರು ಸಂದರ್ಶಿಸಿದ ಕ್ಷೇತ್ರಗಳು ಹಾಗೂ ಇತರೆ ಧರ್ಮಕ್ಷೇತ್ರಗಳನ್ನು ಸಂದರ್ಶಿಸಿ ಭಕ್ತ ಜನರಿಗೆ ಭಕ್ತಿ ಸಿದ್ಧಾಂತದ ಸಾರ ಸಂದೇಶಗಳನ್ನು ತಿಳಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಂಡಿದ್ದೇವೆ. ಸಮಸ್ತ ಆಸ್ತಿಕ ಜನತೆ ಇದರಲ್ಲಿ ಸಹಯೋಗ ಸಹಕಾರ ನೀಡಿ ಇದನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ತಿಳಿಸಿದರು.
ಆರಂಭದಲ್ಲಿ ಶ್ರೀಗಳು ಮಧ್ವಾಚಾರ್ಯರ ಮನೆ ದೇವರಾದ ಶ್ರೀ ಅನಂತಪದ್ಮನಾಭ ದೇವರು ಮತ್ತು ಶ್ರೀ ವಾದಿರಾಜ ಪ್ರತಿಷ್ಠಿತ ಮಧ್ವಗುರುಗಳ ಮಂಗಳಾರತಿ ಬೆಳಗಿ, ಗೋಗ್ರಾಸ ಸಮರ್ಪಿಸಿದರು. ವಿದ್ವಾನ್ ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ನಂದಳಿಕೆ ವಿಠಲ ಭಟ್ಟರು ಮಧ್ವರಾಜ ಭಟ್, ವಾದಿರಾಜ ಭಟ್ ಶ್ರೀಕರ ಭಟ್ವರ ಸಹಯೋಗದಲ್ಲಿ ರಾಮತಾರಕ ಮಂತ್ರ ಹೋಮ ನೆರವೇಸಿದರು.
ನೂರಾರು ರಾಮ ಭಕ್ತರು, ಭಜಕರು, ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಸಾವಿರಕ್ಕೂ ಅಧಿಕ ಜನ ಸೇರಿದ್ದರು.
ರಥಯಾತ್ರೆಗೆ ವಿಶ್ವಹಿಂದು ಪರಿಷತ್ ಸಹಕಾರ ದೊರೆತಿದೆ. ಪ್ರಾಂತ ವಿ ಹಿಂ ಪ ಅಧ್ಯಕ್ಷ ಪ್ರೊ ಎಂ ಬಿ ಪುರಾಣಿಕ್, ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಠದ ದಿವಾನರಾದ ಎಂ ರಘುರಾಚಾರ್ಯ, ಸಿ ಇ ಒ ಸುಬ್ರಹ್ಮಣ್ಯ ಭಟ್, ಭಕ್ತಿಸಿದ್ಧಾಂತೋತ್ಸವ ರಾಮೋತ್ಸವ ಸ್ವಾಗತ ಸಮಿತಿಯ ಪ್ರ ಕಾರ್ಯದರ್ಶಿ ನಿಟ್ಡೆ ಪ್ರಸನ್ನಾಚಾರ್, ಕುಂಜಾರು ದುರ್ಗಾ ದೇವಳದ ಪರ್ಯಾಯ ಅರ್ಚಕ ರಾಘವೇಂದ್ರ ಭಟ್, ಪರಶುರಾಮ ದೇವಳದ ಅರ್ಚಕ ವಿನಯ ಪ್ರಸಾದ್ ಭಟ್,ಬೆಳ್ಳೆ ಗ್ರಾ ಪಂ ಅಧ್ಯಕ್ಷೆ ದಿವ್ಯಾ ಆಚಾರ್ಯ, ಗಿರಿಬಳಗದ ಗೌರವಾಧ್ಯಕ್ಷ ಗೋವಿಂದ ಭಟ್, ಬೆಳ್ಳೆ ವಿ ಹಿಂ ಪ ಅಧ್ಯಕ್ಷ ವಿಕಾಸ್, ಕುರ್ಕಾಲು ಪಟ್ಟಾಚಾವಡಿ ಸುಂದರ ಶೆಟ್ಟಿ, ಸದಾನಂದ ಶೆಣೈ, ಸುರೇಂದ್ರ ಶೆಟ್ಟಿ ಕುಳೆದು, ಪಾಜಕ ಭಕ್ತಿರಥ ಯಾತ್ರಾ ಸಮಿತಿಯ ಅಧ್ಯಕ್ಷರಾದ ಕುರ್ಕಾಲು ದಿನೇಶ ಶೆಟ್ಟಿ , ಪ್ರ.ಕಾರ್ಯದರ್ಶಿ ಪಟ್ಟಾಭಿರಾಮ ಆಚಾರ್ಯ, ಮಧ್ವರಾಜ ಭಟ್, ಪಡುಬೆಳ್ಳೆ ವಿಶ್ವನಾಥ ಶೆಟ್ಟಿ , ಸುದರ್ಶನ್ ರಾವ್, ಕುರ್ಕಾಲು ವಿಶ್ವನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸಗ್ರಿ ಅನಂತ ಸಾಮಗ , ವಿಷ್ಣುಮೂರ್ತಿ ಆಚಾರ್ಯ ಪೆರಣಂಕಿಲ ಶ್ರೀಶ ನಾಯಕ್, ಗಿರಿಧರ ಐತಾಳ್, ಕೃಷ್ಣರಾಜ ಕುತ್ಪಾಡಿ, ಸತೀಶ್ ಕುಮಾರ್, ಪ್ರಶಾಂತ್ ಶೆಟ್ಟಿ, ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.