ದೇಶದಲ್ಲಿ ಅಶಾಂತಿ ಉಂಟುಮಾಡಲು ಕೇಂದ್ರದ ಬಿಜೆಪಿ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಮಂಡನೆ : ಶರ್ಫುದ್ದೀನ್ ಶೇಖ್
Posted On:
02-04-2025 10:55PM
ಕೇಂದ್ರ ಸರ್ಕಾರ ದೇಶದಲ್ಲಿ ಹಿಂದೂ ಮುಸ್ಲಿಂ ಸಮುದಾಯ ವಿಭಜನೆ ಮಾಡಲು ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿ ವಕ್ಪ್ ಬೋರ್ಡ್ ಹಸರಿನಲ್ಲಿ ದೇಶದ ಜನರಿಗೆ ಶುದ್ದ ಸುಳ್ಳುಗಳನ್ನು ಹೇಳಿ ಇವತ್ತು ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಬಿಲ್ಲನ್ನು ಮಂಡಿಸಿದೆ. ವಕ್ಪ್ ವಿಚಾರದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಯಾರಿಗೂ ಅನ್ಯಾಯವಾಗಿರಲಿಲ್ಲ. ಆದರೆ ವಖ್ಫ್ ವಿಚಾರದಲ್ಲಿ ಜನರಿಗೆ ವಾಸ್ತವ ವಿಚಾರವನ್ನು ಮರೆಮಾಚಿ ಸುಳ್ಳು ಹೇಳಿಕೆಗಳನ್ನು ನೀಡಿ ಕೇಂದ್ರ ಸರ್ಕಾರ ತನ್ನ ವೈಪಲ್ಯಗಳನ್ನು ಮರೆಮಾಚಲು ತಯಾರಿ ನಡೆಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಖಂಡಿಸಿದ್ದಾರೆ.
ಈ ದೇಶಕ್ಕೆ ಅಲ್ಪಸಂಖ್ಯಾತರ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವುದೇ ಜಾತಿಮತ ಭೇದ ಇಲ್ಲದೆ ಎಲ್ಲರೂ ಸೇರಿ ಭಾರತ ದೇಶಕ್ಕೆ ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ ಮತ್ತು ಬಲಿದಾನಗೈದಿದ್ದಾರೆ. ಆದರೆ ಇಂದು ವಕ್ಫ್ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತಂದು ದೇಶದಲ್ಲಿ ಅಶಾಂತಿ ಉಂಟುಮಾಡಲು ತಯಾರಿ ಮಾಡಿದ ಬಿಜೆಪಿ ಮತ್ತು ಸಂಘಪರಿವಾರದ ತ್ಯಾಗ ಏನು ಎಂಬುದು ನಾಡಿನ ಜನರ ಪ್ರಶ್ನೆಯಾಗಿದೆ.
ನಿಜವಾಗಿಯೂ ವಕ್ಫ್ ಭೂಮಿ ಇರುವ ಪ್ರಮಾಣಕ್ಕಿಂತ ಅದೆಷ್ಟೋ ಪ್ರಮಾಣ ಕಡಿಮೆ ಇದೆ. ಭಾಗಶ: ಭೂಮಿ ಕಬಳಿಕೆ ಮಾಡಲಾಗಿದೆ. ಭೂಸುಧಾರಣೆ ಕಾನೂನಿಂದಾಗಿ ಕಳೆದುಕೊಂಡದ್ದು ಮತ್ತು ಸರ್ಕಾರಿ ಕಚೇರಿಗಳಿಗೆ ಕೊಟ್ಟು ಇರುವ ಭೂಮಿಯನ್ನು ಕೂಡ ಕಬಳಿಕೆ ಮಾಡಿ ತಮ್ಮ ಪರವಿರುವ ಉದ್ಯಮಿಗಳಿಗೆ ಹಂಚುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವಿದೆ. ಇದು ಖಂಡನೀಯ. ಧಾರ್ಮಿಕ ವಿಚಾರಗಳನ್ನೇ ಎತ್ತಿಕೊಂಡು ಸಮುದಾಯಗಳ ನಡುವೆ ಸಾಮರಸ್ಯ ಕದಡುವುದನ್ನು ಕಾಯಕವನ್ನಾಗಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಇದೆಲ್ಲವನ್ನು ಬಿಟ್ಟು ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಕೋಮುವಾದ ನಿರ್ಮೂಲನೆ ಕುರಿತು ಕಾಳಜಿ ವಹಿಸಬೇಕು. ದೇಶದಲ್ಲಿ ಶಾಂತಿ ಕದಡುವುದೇ ದೊಡ್ಡ ದೇಶದ್ರೋಹ. ಈ ಜ್ಞಾನ ಕೇಂದ್ರ ಸರ್ಕಾರ ಬೆಳೆಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.