ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ 84ನೇ ಪ್ರತಿಷ್ಠಾ ವರ್ಧಂತೋತ್ಸವ ಸಂಪನ್ನ
Posted On:
08-04-2025 11:20AM
ಶಿರ್ವ : ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ 84ನೇ ಪ್ರತಿಷ್ಠಾ ವರ್ಧಂತ್ಯೋತ್ಸವ ಸೋಮವಾರ ಸಂಪನ್ನಗೊಂಡಿತು.
ಕ್ಷೇತ್ರದ ಪ್ರಧಾನ ವೈದಿಕರಾದ ವೇ.ಮೂ.ಸಂದೇಶ್ ಭಟ್ ನೇತೃತ್ವದಲ್ಲಿ ಸಹವೈದಿಕರ ಸಹಭಾಗಿತ್ವದಲ್ಲಿ ಪೂರ್ವಾಹ್ನ ವಿವಿಧ ಧಾರ್ಮಿಕ ಅನುಷ್ಠಾನಗಳು,ಮಹಾಗಣಪತಿ ಹೋಮ, ಪ್ರಧಾನಹೋಮ, ನವಕ ಕಲಶಾಭಿಷೇಕ, ಪರಿವಾರ ಸಾನಿಧ್ಯಗಳ ಆರಾಧನೆ, ಮಹಾಪೂಜೆ, ಶ್ರೀದೇವಿಯ ಪಲ್ಲಕಿ ಉತ್ಸವ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಅಪರಾಹ್ನ ಶ್ರೀದುರ್ಗಾ ಯಕ್ಷಬಳಗದ ಸದಸ್ಯರಿಂದ ಯಕ್ಷಗಾನ ಬಯಲಾಟ, ಸಂಜೆ ಭಜನೆ, ರಾತ್ರಿ ರಂಗಪೂಜೆ, ರಥೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಧ್ಯಾಹ್ನ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದೇವಳದ ನೂತನ ಸಭಾಭವವನ ನಿರ್ಮಾಣ ಸಮಿತಿಯ ಗೌರವ ಅಧ್ಯಕ್ಷ, ಖ್ಯಾತ ಜ್ಯೋತಿಷಿಗಳಾದ ಮಾಣ್ಯೂರು ವೈ.ಉಪೇಂದ್ರ ಪ್ರಭು ವಹಿಸಿದ್ದರು. ಕ್ಷೇತ್ರದ ನಿಕಟಪೂರ್ವ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಧರ್ಮೆಟ್ಟು ಗೋಪಿನಾಥ್ ನಾಯಕ್ ಸಭಾಭವನದ ವಿನ್ಯಾಸ, ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿ, ಶ್ರೀದೇವಳದ ಸಂಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದ ಹಿರಿಯ ನಾಯಕರು ಹಾಗೂ ಕೊಡುಗೆಗಳು, ನಂತರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಸಮಾಜದ ಪ್ರಮುಖರು, 83 ವರ್ಷಗಳಲ್ಲಿ ಕ್ಷೇತ್ರದಲ್ಲಿ ಆದ ಪರಿವರ್ತನೆ, ಸಾನಿಧ್ಯದ ಕಾರಣಿಕದ ಬಗ್ಗೆ ಬೆಳುಕು ಚೆಲ್ಲಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು, ರಾಜಾಪುರ ಸಾರಸ್ವತ ಸೇವಾವೃಂದದ ಅಧ್ಯಕ್ಷ ಕೆ.ಆರ್. ಪಾಟ್ಕರ್, ಹಂಸಚೈತನ್ಯ ಸಹಕಾರಿ ಸಂಘದ ಅಧ್ಯಕ್ಷ ಸುಧೀಶ್ ಕುಕ್ಕೆಹಳ್ಳಿ ಮಾತನಾಡಿದರು.
ವೇದಿಕೆಯಲ್ಲಿ ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ವಾಮನ ಪಾಟ್ಕರ್ ಜೋಗೇಶ್ವರಿ ಉಪಸ್ಥಿತರಿದ್ದರು. ರಾಮದಾಸ್ ಪ್ರಭು ಸ್ವಾಗತಿಸಿದರು. ರಚಿತಾ ಪಾಟ್ಕರ್ ಪ್ರಾರ್ಥಿಸಿದರು. ಎಳ್ಳಾರೆ ಪಾಂಡುರಂಗ ಕಾಮತ್ ನಿರೂಪಿಸಿ, ಉಮೇಶ್ ನಾಯಕ್ ಪೆರ್ಣಂಕಿಲ ವಂದಿಸಿದರು.