ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇಂದಿನಿಂದ(ಎ.11) ಕನ್ನಂಗಾರ್ ಉರೂಸ್

Posted On: 11-04-2025 12:47PM

ಕಾಪು : ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಂಗಾರ್ ಜುಮ್ಮಾ ಮಸೀದಿಯ ಮುಂಭಾಗದಲ್ಲಿರುವ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ನಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಕನ್ನಂಗಾರ್ ಉರೂಸ್ ಸಮಾರಂಭವು ಎ. 11ರಿಂದ 19ರವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಗುಲಾಂ ಮುಹಮ್ಮದ್ ಹೆಜಮಾಡಿ ತಿಳಿಸಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಉರೂಸ್ ಸಮಾರಂಭಕ್ಕೆ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಮುಸ್ಲಿಮರು ಮಾತ್ರವಲ್ಲದೆ ಹಿಂದೂ ಹಾಗೂ ಕ್ರಿಶ್ಚಿಯನ್ ಬಾಂಧವರು ಭಾಗವಹಿಸುತ್ತಾರೆ. ಇದೊಂದು ಸೌಹಾರ್ದತೆಯ ಕೇಂದ್ರವೂ ಆಗಿದೆ.

ಎ.11ರಂದು ಶುಕ್ರವಾರ ಜುಮಾ ನಮಾಜಿನ ಬಳಿಕ ಧ್ವಜಾರೋಹಣ ನೆರವೇರಲಿದ್ದು, ಅಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ. ಅಂದು ರಾತ್ರಿ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಲಿದ್ದಾರೆ. ಅಸಯ್ಯದ್ ಅಬ್ದರ್ರಹ್ಮಾನ್ ಮಸ್ಊದ್ ತಂಙಳ್ ಕೂರತ್ ದುವಾ ನೆರವೇರಿಸಲಿದ್ದಾರೆ. ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಗುಲಾಂ ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಉರೂಸ್ ಪ್ರಯುಕ್ತ ವಿವಿಧ ದಿನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ, ಅಬ್ದರ್ರಹ್ಮಾನ್ ಮದನಿ, ಪೇರೋಡ್ ಅಬ್ದರ್ರಹ್ಮಾನ್ ಸಖಾಫಿ, ಅಬ್ದರ್ರಹ್ಮಾನ್ ವಿಪಿಎ ತಂಙಳ್ ದಾರಿಮಿ ಆಟೀರಿ, ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ, ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಹಂಝ ಮದನಿ ಮಿತ್ತೂರು, ನೌಫಲ್ ಸಖಾಫಿ ಕಳಸ, ನೂರುಸ್ಸಾದಾತ್ ಅಬ್ದರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್, ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ಮಳ್ಹರ್, ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್ ಭಾಗವಹಿಸಲಿದ್ದಾರೆ. ಎ.16ರಂದು ಅಸಯ್ಯದ್ ಕೆ.ಎಸ್. ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್ ಇವರ ನೇತೃತ್ವದಲ್ಲಿ ಜಲಾಲಿಯ್ಯ ದ್ಸಿಕ್ರ್ ಮಜ್ಲಿಸ್ ನೆರವೇರಲಿದೆ.

ಎ. 19ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರ, ಬದ್ರುಸ್ಸಾದಾತ್ ಅಸಯ್ಯದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವರಾದ ಜಿ. ಪರಮೇಶ್ವರ್, ಝಮೀರ್ ಅಹಮದ್, ಮಂಕಾಳ ವೈದ್ಯ, ದಿನೇಶ್ ಗುಂಡುರಾವ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ , ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮತ್ತಿತರರ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಸರಕಾರದಿಂದ 25ಲಕ್ಷ ರೂ. ಅನುದಾನ: ಕನ್ನಂಗಾರ್ ಉರೂಸ್ಗೆ ಅಲ್ಪಸಂಖ್ಯಾತ ಇಲಾಖೆಯಿಂದ 25ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ವಿಧನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಶಿಫಾರಸಿನ ಮೇರೆಗೆ ಮುಖ್ಯಮತ್ರಿ ಸಿದ್ಧರಾಮಯ್ಯ ಅವರ ಆದೇಶದಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಝಮೀರ್ ಅಹಮದ್ ಬಿಡುಗಡೆ ಮಾಡಿದ್ದಾರೆ. ಎ. 13ರಂದು ಹೈಬಾ ಸಭಾಂಗಣದಲ್ಲಿ ಬೆಳಗ್ಗೆ ಸೌಹಾರ್ದ ಸಂಗಮ ಮತ್ತು ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ಶಿಬಿರವು ಶ್ರೀನಿವಾಸ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಕಾರ್ಯದರ್ಶಿ ರಕೀಬ್ ಕನ್ನಂಗಾರ್, ಮಸೀದಿ ಅಧ್ಯಕ್ಷರಾದ ಹಮಿದ್ ಹಾಜಿ, ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಮಿಲಾಫ್ ಉಪಸ್ಥಿತರಿದ್ದರು.