5 ನೇ ವರ್ಷದ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಉಳ್ತೂರು ಅಣ್ಣಯ್ಯ ಕುಲಾಲ್ ಆಯ್ಕೆ
Posted On:
14-04-2025 07:00AM
ಉಡುಪಿ : ಕೋಟಾದ "ಕಾರಂತ ಥೀಮ್ ಪಾರ್ಕ್"ನಲ್ಲಿ ಮೇ 4 ರಂದು ನಡೆಯಲಿರುವ
5 ನೇ ವರ್ಷದ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಉಳ್ತೂರು ಅಣ್ಣಯ್ಯ ಕುಲಾಲ್ ರವರು ಆಯ್ಕೆಯಾಗಿದ್ದಾರೆ.
ತೆಕ್ಕಟ್ಟೆ ಸಮೀಪದ, ಉಳ್ತೂರಿನಲ್ಲಿ ಜನಿಸಿದ, ಅಣ್ಣಯ್ಯ ಕುಲಾಲರು, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ.
ಮಂಗಳೂರಿನ ಪ್ರತಿಷ್ಠಿತ ಕೆಎಂಸಿಯಲ್ಲಿ ಎಂಬಿಬಿಎಸ್ ಮುಗಿಸಿದರು. ಐಎಮ್ಎ ಕರ್ನಾಟಕದ ನಿಯೋಜಿತ ರಾಜ್ಯ ಅಧ್ಯಕ್ಷರು.
ಕುಟುಂಬ ವೈದ್ಯರ ಕರ್ನಾಟಕ ರಾಜ್ಯ ಅಧ್ಯಕ್ಷರು.ಪ್ರತಿಷ್ಠಿತ IMA ಮಂಗಳೂರು, ಇದರ ಅಧ್ಯಕ್ಷರಾಗಿದ್ದರು. ಶ್ರೀನಿವಾಸ್ ಯೂನಿವರ್ಸಿಟಿ ಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಬಳಿಕ, ಈಗ 5 ವರ್ಷಗಳಿಂದ ಮನಪಾ ಮಂಗಳೂರು ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಳೂರಿನ ಮಂಗಳಾದೇವಿ ಹಾಗೂ ಪಡೀಲ್ ಪರಿಸರದಲ್ಲಿ ಕಳೆದ 3 ದಶಕಗಳಿಂದ "ಕುಲಾಲ್ ಹೆಲ್ತ್ ಕೇರ್ ಸೆಂಟರ್" ಮತ್ತು "ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್" ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಭಾಷೆ, ನಾಡು, ಸಂಸ್ಕೃತಿಯ ಬಗ್ಗೆ ಸದಾ ತುಡಿಯುವ ಡಾಕ್ಟರ್ ಮನಸ್ಸು, ಮತ್ತು ಆ ನೆಲೆಯಲ್ಲಿ ಅವರ ಹೋರಾಟ ಎಂತವರನ್ನೂ ಬೆರಗುಗೊಳಿಸುತ್ತದೆ. ನಮ್ಮ ಸ್ಥಳೀಯ ಭಾಷೆಗಳ ಉಳಿವಿಗಾಗಿ, ಕುಂದಾಪ್ರ ಕನ್ನಡ, ಅರೆಕನ್ನಡ, ತುಳು, ಹವ್ಯಕ, ಬ್ಯಾರಿ ಭಾಷೆಗಳ ಸಮಾನ ಮನಸ್ಕರ ಹೋರಾಟಗಾರರ ವೇದಿಕೆ "ಕನ್ನಡಿಕಟ್ಟೆ"ಗೆ ಇವರದೇ ನೇತೃತ್ವ.
ಸರ್ವಜ್ಞ ವೃತ್ತ ಮಂಗಳೂರು,
ರಾಷ್ಟ್ರಕವಿ "ಗೋವಿಂದ ಪೈ ವೃತ್ತ",
ಕಯ್ಯಾರ ಕಿಂಜಣ್ಣ ರೈ ವೃತ್ತ, ಅಂಪಣ್ಣ ಕಟ್ಟೆ
ಬಜಾಲ್ ಪಡೀಲ್ ರೈಲ್ವೆ ಬ್ರಿಡ್ಜ್ ಎಲ್ಲವೂ ಡಾಕ್ಟರ್ ಕುಲಾಲ್ ರವರ ತಂಡದ ಹೋರಾಟದ ಫಲಶ್ರುತಿ. ಇವೆಲ್ಲವುಗಳ ಸ್ಥಾಪನೆಯ ಹಿಂದಿನ ಹೋರಾಟದ ಶಕ್ತಿ ಇವರಾಗಿದ್ದಾರೆ.
ಮಂಗಳೂರಲ್ಲಿ "ಕುಡ್ಲಂಗಿಪ್ಪ ಕುಂದಾಪ್ರ" ಬಳಗದ ಕ್ರಿಯಾ ಶೀಲ ವ್ಯಕ್ತಿ. ಮಂಗಳೂರಿನ ಕುಂದಗನ್ನಡಿಗರನ್ನು ಒಗ್ಗೂಡಿಸಿ, ಸಹಕಾರ, ಸಾಮರಸ್ಯ ಬೆಸೆಯುವ ಕೊಂಡಿಯಾಗಿದ್ದಾರೆ. ಪ್ರತಿಷ್ಠಿತ "ದೇವರಾಜು ಅರಸು" ಪ್ರಶಸ್ತಿ ಪಡೆದ ಕರಾವಳಿಯ ಏಕಮೇವ ವ್ಯಕ್ತಿ.
ಡಾಕ್ಟರ್ ಸಮುದಾಯದವರ ಬರವಣಿಗೆಗೆ ಪ್ರೋತ್ಸಾಹ ಕೊಡುತ್ತಾ, ಹತ್ತಾರು ಪುಸ್ತಕಗಳ ಪ್ರಕಟಣೆಯ ಹಿಂದಿನ ಕ್ರಿಯಾಶೀಲ ಶಕ್ತಿ. ರಾಜ್ಯ ವೈದ್ಯ ಬರಹಗಾರರನ್ನು ಒಗ್ಗೂಡಿಸಿ, ಪುಸ್ತಕ ಪ್ರಕಟಿಸುತ್ತಿರುವ ಅವರ ಕೆಲಸ ಸ್ತುತ್ಯರ್ಹ. ಇವರ ಲೇಖನಗಳುಗಳು ಕರ್ನಾಟಕದ ಉದ್ದಗಲದಕ್ಕೂ ತಲುಪಿದೆ. ರೇಡಿಯೋ, ದೂರದರ್ಶನಗಳಲ್ಲಿ, ನಾಡು ನುಡಿಯ ಬಗ್ಗೆ ಅವರ ಹೆಮ್ಮೆ ತುಂಬಿದ ಸಾತ್ತ್ವಿಕ ಹೋರಾಟವನ್ನು, ಕನ್ನಡಿಗರು ಗುರುತಿಸಿದ್ದಾರೆ.