ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶೇ. 90 ರಷ್ಟು ಕ್ರಿಮಿನಲ್ ಪ್ರಕರಣಗಳು ಮಾದಕ ವ್ಯಸನಿಗಳಿಂದ ನಡೆಯುತ್ತಿದೆ : ಪ್ರಸನ್ನ ಎಮ್.ಎಸ್

Posted On: 14-04-2025 07:26AM

ಮುಲ್ಕಿ : ವಿವಿಧ ರೀತಿಯ ಮಾದಕ ವಸ್ತುಗಳು ಬಳಕೆಯಾಗುತ್ತಿದ್ದು, ಮಾದಕ ವಸ್ತುಗಳಿಗೆ ಅತೀ ಹೆಚ್ಚಾಗಿ ವಿದ್ಯಾರ್ಥಿಗಳು ಬಲಿಯಾಗುತಿದ್ದಾರೆ. ಅದರಲ್ಲಿಯೂ ಇಂಜಿನಿಯರ್ ಹಾಗೂ ವ್ಯೆದ್ಯಕೀಯ ವಿದ್ಯಾರ್ಥಿಗಳನ್ನು ಮಾದಕ ಮಾರಾಟಗಾರರು ಗುರಿಯಾಗಿಸಿದ್ದಾರೆ. ಶೇ. 90 ರಷ್ಟು ಕ್ರಿಮಿನಲ್ ಪ್ರಕರಣಗಳು ಮಾದಕ ವ್ಯಸನಿಗಳಿಂದ ನಡೆಯುತ್ತಿರುವುದು ಆಘಾತಕಾರಿದೆ. ನಮ್ಮ ರಾಜ್ಯ ಮಾದಕ ಮುಕ್ತ ರಾಜ್ಯವಾಗಲು ಎಲ್ಲರೂ ಸಹಕರಿಸಬೇಕು. ತಲಪಾಡಿಯಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗುವ ಅಪಘಾತದಿಂದ ಒಂದು ವರ್ಷಕ್ಕೆ ಆರುನೂರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಬೇರೆ ಬೇರೆ ಕಾರಣದಿಂದ ಸಾವನ್ನಪ್ಪುವರ ಸಂಖ್ಯೆಗಿಂತ ದುಪ್ಪಟ್ಟು ಆಗಿದೆ. ಆದ್ದರಿಂದ ರಸ್ತೆ ನಿಯಮಗಳನ್ನು ತಮ್ಮ ಜೀವದ ರಕ್ಷಣೆಗಾಗಿ ಪಾಲಿಸಿ ಯಾವುದೇ ಅಧಿಕಾರಿಗಳ ಹೆದರಿಕೆಗೆ ಅಲ್ಲ ಎಂದು ಪಡುಬಿದ್ರಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಎಮ್ ಎಸ್ ಹೇಳಿದರು. ಅವರು ವಿಜಯ ಕಾಲೇಜು ಮುಲ್ಕಿ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ.,ರೆಡ್ ಕ್ರಾಸ್ , ರೋವಸ್೯ & ರೇಂಜರ್ ಸಂಯುಕ್ತಾಶ್ರಯದಲ್ಲಿ ರಚನ್ ಸಾಲ್ಯಾನ್ ನೇತೃತ್ವದ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ಇದರ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯ ವ್ಯಸನ ತಡೆಗಟ್ಟುವಿಕೆ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

ಮುಲ್ಕಿ ಠಾಣಾಧಿಕಾರಿ ಅನಿತಾರವರು ಮಾತನಾಡಿ, ಹೆಚ್ಚಿನ ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಉಲ್ಲಂಘಿಸಿ, ವಾಹನ ಚಲಿಸುವುದು ಕಂಡು ಬರುತ್ತಿದೆ. ಇದರಿಂದ ಪ್ರತಿದಿನ ರಸ್ತೆ ಅಪಘಾತಗಳು ಜಾಸ್ತಿಯಾಗುತ್ತಿದೆ. ರಸ್ತೆ ದಾಟುವಾಗ ಕೂಡಾ ನಿಯಮಗಳನ್ನು ಪಾಲಿಸದಿರುವುದು, ಮಾದಕ ವಸ್ತುಗಳನ್ನು ಮತ್ತು ಮದ್ಯಪಾನ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಜಾಸ್ತಿ ಯಾಗಿದೆ. ಇಂತಹ ಚಟಗಳಿಗೆ ಬಲಿಯಾಗದೆ, ಶಿಸ್ತುಬದ್ಧವಾಗಿ ಬಾಳಿ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು.

ಮುಲ್ಕಿ ವಿಜಯ ಕಾಲೇಜು ಪ್ರಾಂಶುಪಾಲ ಪ್ರೊ. ವೆಂಕಟೇಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಸಂಸ್ಥಾಪಕ ಡಾ.ಶಿವಕುಮಾರ್ ಕರ್ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ , ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರಿ ರೋಟರಿ ಪೂರ್ವಾಧ್ಯಕ್ಷ ಸಂತೋಷ್ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಪದಾಧಿಕಾರಿಗಳಾದ ಶಶಾಂಕ್ ಸುವರ್ಣ, ಸೌಮಿಕ್ ಶ್ರೀಯಾನ್, ವಿಜೇತ್ ಆಚಾರ್ಯ, ಸಚಿನ್ ಕುಂದರ್, ಪ್ರತೀಕ್ ಶೆಟ್ಟಿ ಕಾರ್ಕಳ, ಶಶಾಂಕ್ ಆಚಾರ್ಯ, ಸುಜನ್ ಕೋಟ್ಯಾನ್ ಹೆಜ್ಮಾಡಿ, ಯಶ್ ಅಮೀನ್ ಹೆಜ್ಮಾಡಿ, ಅದಿತ್ಯ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅರುಣಾ ಕುಮಾರಿ ಸ್ವಾಗತಿಸಿದರು. ಎನ್.ಎಸ್.ಎಸ್ ಸ್ವಯಂ ಸೇವಕ ಅಭಿಷೇಕ್ ವಂದಿಸಿದರು. ಲಾವಣ್ಯ ನಿರೂಪಿಸಿದರು.