ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್ ಟಿ ಪಿ) ನಿರ್ಮಾಣ ವಿರೋಧಿಸಿ ಹೋರಾಟಕ್ಕೆ ಸಜ್ಜಾದ ಮೂಳೂರು ಗ್ರಾಮಸ್ಥರು

Posted On: 22-04-2025 02:25PM

ಕಾಪು : ತಾಲೂಕಿನ ಮೂಳೂರು ಗ್ರಾಮದಲ್ಲಿ ಪುರಸಭೆಯು ಸುಮಾರು 1.78 ಎಕರೆ ಜಾಗದಲ್ಲಿ ಕಾಪು ಪೇಟೆಯ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್ ಟಿ ಪಿ) ನಿರ್ಮಿಸುವ ಬಗ್ಗೆ ಸ್ಥಳೀಯರು ಹೋರಾಟಕ್ಕೆ ಸಜ್ಜಾಗಿದ್ದು ಪೂರ್ವಭಾವಿಯಾಗಿ ಎ.24 ರಂದು ಅಧಿಕಾರಿವರ್ಗ ಮತ್ತು ಜನಪ್ರತಿಧಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮಸ್ಥ ಪುರುಷೋತ್ತಮ ಸಾಲ್ಯಾನ್ ಕಾಪು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೂಳೂರಿನ ಗ್ರಾಮಸ್ಥರು ಒಟ್ಟಾಗಿ ಎ.24 ರಂದು ಗುರುವಾರ ಬೆಳಿಗ್ಗೆ 8.30 ಕ್ಕೆ ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದ ಬಳಿ ಸೇರಿ ಕಾಪು ಪುರಸಭೆಗೆ,ತಾಲೂಕು ಕಚೇರಿಗೆ, ಶಾಸಕರಿಗೆ, ಮಾಜಿ ಸಚಿವರಿಗೆ ಪ್ರತಿಭಟನೆಯೊಂದಿಗೆ ತೆರಳಿ ಮನವಿ ಪತ್ರ ನೀಡಲು ಉದ್ದೇಶಿಸಲಾಗಿದೆ. ಪುರಸಭಾ ಸದಸ್ಯರಿಗೆ ಮಾಹಿತಿ ನೀಡದೆ ಕೆಲವು ದಿನಗಳ ಹಿಂದೆ ಸುಮಾರು 1.78 ಎಕರೆ ಸರಕಾರಿ ಜಮೀನನ್ನು ತಾಲೂಕು ಆಡಳಿತ ಕಾಪು ಪುರಸಭೆಗೆ ಮಂಜೂರು ಮಾಡಿದೆ. ಮೂಳೂರಿನ ಸೂಜಿಮೊನೆಯಷ್ಟು ಜಾಗವನ್ನು ಬಿಟ್ಟು ಕೊಡುವುದಿಲ್ಲ ಎಂದರು.

ಗ್ರಾಮಸ್ಥರಾದ ಪ್ರಭಾತ್ ಶೆಟ್ಟಿ ಬಿಕ್ರಿಗುತ್ತು ಮಾತನಾಡಿ, ಕಾಪು ಪೇಟೆಯನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಅವೈಜ್ಞಾನಿಕ ಯೋಜನೆಯನ್ನು ನಮ್ಮ ಊರಿಗೆ ತಂದು ಹಾಳು ಮಾಡಲೆತ್ನಿಸುವುದು ದುರಂತ. ಸದ್ರಿ ಜಮೀನು ನಂಜ ಜಮೀನು ಆಗಿದ್ದು, ಮೇಲ್ಮಟ್ಟದ ಅಂತರ್ಜಲದ ಜೊತೆಗೆ 60-70 ಮೀ. ಅಂತರದಲ್ಲಿ ಮನೆ, ಕೃಷಿ ಭೂಮಿ, ತೋಟ, ನಾಗಬನ, ದೈವರಾಧನೆ ಸ್ಥಳಗಳು ಹಾಗೂ ಕುಡಿಯುವ ನೀರಿನ ಬಾವಿಗಳಿದ್ದು ಒಂದು ವೇಳೆ ಈ ಘಟಕ ನಿರ್ಮಾಣವಾದರೆ ಇಡೀ ಗ್ರಾಮದ ಕುಡಿಯುವ ನೀರಿನ ಭಾವಿ ಕಲುಷಿತಗೊಳ್ಳುತ್ತದೆ ಹಾಗೂ ಇದರಿಂದ ಹೊರ ಸೂಸುವ ದುರ್ನಾತ ವಾಸನೆ ಹಾಗೂ ಕೆಮಿಕಲ್ ಮಿಶ್ರಿತ ತ್ಯಾಜ್ಯ ಇಡೀ ಪರಿಸರವನ್ನು ಕಲುಷಿತ ಆಗುವುದರ ಜತೆಗೆ ಮಾರಕ ರೋಗ ಕ್ಯಾನ್ಸರ್, ಮಲೇರಿಯಾ, ಡೆಂಗ್ಯೂನಂತಹ ಮಾರಕಾ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಸತೀಶ್ಚಂದ್ರ, ಮೊಹಮ್ಮದ್ ಆಸೀಫ್, ಚಿತ್ತನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.