ಸರಕಾರದ ವಿದ್ಯಾರ್ಥಿನಿಲಯಗಳ ಮಕ್ಕಳಿಗೆ ನೀಡುವ ಸೌಲಭ್ಯಗಳು ಪರಿಪೂರ್ಣವಾಗಿ ತಲುಪಬೇಕು : ಡಾ. ವಿದ್ಯಾಕುಮಾರಿ
Posted On:
03-05-2025 12:44PM
ಉಚ್ಚಿಲ : ಪೋಷಕರ ಉದ್ಯೋಗದ ನಿಮಿತ್ತ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂಬ ನಿಲುವಿನ ಮೂಲಕ ದೇವರಾಜ ಅರಸುರವರು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮನೆಯ ಪ್ರೀತಿ, ವಾತ್ಸಲ್ಯ , ಗುಣಮಟ್ಟದ ಆಹಾರವನ್ನು ನ್ಯಾಯಯುತವಾಗಿ ನೀಡುವುದು ಎಲ್ಲಾ ಸಿಬ್ಬಂದಿಗಳ ಜವಾಬ್ದಾರಿ. ನಮ್ಮ ಮಕ್ಕಳು ಎಂಬ ಭಾವನೆಯಿರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದರು.
ಅವರು ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತಿ ಉಡುಪಿ, ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಅಡುಗೆಯವರು ಮತ್ತು ಅಡುಗೆ ಸಹಾಯಕರುಗಳಿಗೆ ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆ ಕುರಿತು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಭಾಭವನದಲ್ಲಿ ಜರಗಿದ ವಿಶೇಷ ಪುನಶ್ಚೇತನ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಇಂದು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರಕಾರದ ವಿದ್ಯಾರ್ಥಿನಿಲಯಗಳ ಮೂಲಕ ವಿದ್ಯಾರ್ಜನೆ ಮಾಡಿದವರಿದ್ದಾರೆ. ಮಕ್ಕಳಿಗೆ ನೀಡುವ ಸೌಲಭ್ಯಗಳು ಪರಿಪೂರ್ಣವಾಗಿ ಅವರಿಗೆ ತಲುಪಬೇಕು. ಇಲ್ಲವಾದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹಾಕಪ್ಪ ಆರ್ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ್ ಸುವರ್ಣ, ಲೆಕ್ಕಾಧೀಕ್ಷಕರಾದ ಸುಗುಣ, ಕಾರ್ಕಳ ತಾಲೂಕು ಕಲ್ಯಾಣಾಧಿಕಾರಿ ಮೇಘಶ್ರೀ ಉಪಸ್ಥಿತರಿದ್ದರು.
ಉಡುಪಿ ತಾಲೂಕು ಕಲ್ಯಾಣಾಧಿಕಾರಿ ಶ್ರೀಕಾಂತ್ ಗುಣಗ ಸ್ವಾಗತಿಸಿ, ನಿರೂಪಿಸಿದರು.
ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ ಕಾರ್ಯವು ಜರಗಿತು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರ ನಡೆಯಿತು.