ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆ ಕರಾರುವಕ್ಕಾಗಿ ನಡೆಯಬೇಕು : ತಹಶಿಲ್ದಾರ್ ಡಾ. ಪ್ರತಿಭಾ ಆರ್.

Posted On: 03-05-2025 05:49PM

ಕಾಪು : ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗತಿಗಳಿಗಾಗಿ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯು ಅತ್ಯವಶ್ಯಕವಾಗಿದ್ದು ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯಿಂದ ಒಂದೇ ಒಂದು ಕುಟುಂಬವು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಹೇಳಿದರು. ಕಾಪು ತಾಲೂಕಿನ ತಹಶಿಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಸಮೀಕ್ಷೆದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತು ಕ್ರಮವಹಿಸಲು ಸರ್ಕಾರದಿಂದ ನಡೆಸಲಾಗುತ್ತಿರುವ ಸಮೀಕ್ಷೆ ಇದಾಗಿದೆ. ಈ ಸಮೀಕ್ಷೆಯಲ್ಲಿ ಆನ್ಲೈನ್ ಆ್ಯಪ್ ಮೂಲಕ ಮೊಬೈಲ್ ನಲ್ಲಿ ಮಾಹಿತಿ ದಾಖಲಿಸಲಾಗುತ್ತದೆ. ಮಾಹಿತಿದಾರರು ತಮ್ಮ ರೇಷನ್ ಕಾರ್ಡ್ ಆಥವಾ ಆಧಾರ್ ಕಾರ್ಡ್ ಹಾಜರುಪಡಿಸುವುದು ಕಡ್ಡಾಯವಾಗಿದೆ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆಯು 3 ಹಂತಗಳಲ್ಲಿ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆದಾರರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆಯನ್ನು ಮೇ 5ರಿಂದ ಮೇ 17ರ ವರೆಗೆ ಬೆಳಗ್ಗೆ 8ರಿಂದ ಸಂಜೆ 6.30ರ ವರೆಗೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ಕೈಗೊಳ್ಳಬೇಕು. ಮನೆ ಮನೆ ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಕುಟುಂಬಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿನ ವಿಶೇಷ ಶಿಬಿರಗಳಲ್ಲಿ ಮೇ 19 ರಿಂದ 21 ರವರೆಗೆ ಮಾಹಿತಿ ದಾಖಲಿಸಬಹುದು. ಅದೂ ಸಾಧ್ಯವಾಗದ ಕುಟುಂಬಗಳು ಮೇ 19ರಿಂದ ಮೇ 23ರವರೆಗೆ ಆನ್ ಲೈನ್ ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಲೂ ಸಹ ಅವಕಾಶ ಕಲ್ಪಿಸಲಾಗಿದೆ. ಆಧಾರ್ ನಂಬರ್ ಹಾಗೂ ರೇಷನ ಕಾರ್ಡ್ ನಂಬರ್‌ನೊಂದಿಗೆ ಸ್ವಯಂ ಘೋಷಣೆ (ಆನ್‌ಲೈನ್‌)ಯನ್ನು ಸಲ್ಲಿಸಬಹುದು ಎಂದರು.

ಗ್ರಾಮ ಮಟ್ಟದ ಸಮೀಕ್ಷೆದಾರರು ತಮ್ಮ ವ್ಯಾಪ್ತಿಯ ಮತಗಟ್ಟೆವಾರು ಪ್ರತಿಯೊಂದು ಮನೆಗೆ ತೆರಳಿ, ಜಾಗರೂಕತೆಯಿಂದ ಸಮೀಕ್ಷೆ ನಡೆಸಬೇಕು ಎಂದರು. ಸಮೀಕ್ಷೆಯಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ಭರ್ತಿ ಮಾಡಬಾರದು. ಮನೆ-ಮನೆಗೆ ಭೇಟಿ ನೀಡಿದಾಗ ಅಲ್ಲಿನ ಕುಟುಂಬ ಸದಸ್ಯರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಮಾಹಿತಿಯನ್ನು ಮನೆಯ ಮುಖ್ಯಸ್ಥರಿಂದ ಪಡೆದುಕೊಂಡು ಸಮೀಕ್ಷೆಯ ಪ್ರಶ್ನೆಗಳಿಗೆ ಕುಟುಂಬದ ಸದಸ್ಯರು ನೀಡಿದಂತಹ ಮಾಹಿತಿಯನ್ನು ಮಾತ್ರ ಭರ್ತಿ ಮಾಡಬೇಕು. ಈ ಸಮೀಕ್ಷೆಯಲ್ಲಿ ಯಾವುದೇ ಮಧ್ಯವರ್ತಿ, ಸಂಘ-ಸಂಸ್ಥೆಗಳು ಮತ್ತು ಮಕ್ಕಳಿಂದ ಮಾಹಿತಿ ಭರ್ತಿ ಮಾಡುವಂತಿಲ್ಲ. ಸಮೀಕ್ಷೆಯಲ್ಲಿನ ಎಲ್ಲ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಸರಿಯಾದ ಮಾಹಿತಿ ಸಂಗ್ರಹಿಸಿ ಮೊಬೈಲ್ ಆ್ಯಪ್ ಮೂಲಕವೇ ಸಮೀಕ್ಷೆ ಕೈಗೊಳ್ಳಬೇಕು ಎಂದು ತಹಶಿಲ್ದಾರ್ ಮಾಹಿತಿ ನೀಡಿದರು.

ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿಯವರು ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ, ಮಾರ್ಗದರ್ಶನ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ನಾರಾಯಣಸ್ವಾಮಿ, ಬಸವರಾಜು, ವಿನಾಯಕ, ಉಪ ತಹಶಿಲ್ದಾರರುಗಳಾದ ಅಶೋಕ್, ದೇವಕಿ, ಮಾಸ್ಟರ್ ಟ್ರೈನರ್ ಗಳಾದ ಮಧುರಾಜ್, ಎಡ್ವರ್ಡ್, ನವ್ಯ, ರಾಘವೇಂದ್ರ, ಪುಷ್ಪಲತಾ ಉಪಸ್ಥಿತಿರಿದ್ದರು.