ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟಕಲ್ಲು : ನೂರಹನ್ನೊಂದನೇ ಕಸಾಪ ಸಂಸ್ಥಾಪನಾ ದಿನಾಚರಣೆ ಸಂಪನ್ನ

Posted On: 09-05-2025 03:00PM

ಶಿರ್ವ: ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತಿಗಳಿಗೆ ಮಾತ್ರ ಸೇರಿದ್ದಲ್ಲ. ಪ್ರತೀಯೊಬ್ಬ ಕನ್ನಡಿಗನಿಗೂ ಸೇರಿದ ಸ್ವಾಯತ್ತ ಸಂಸ್ಥೆಯಾಗಿದೆ. ೧೧೧ನೇ ವರ್ಷ ಪೂರೈಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತು ಆಗಿ ಕಾರ್ಯನಿರ್ವಹಿಸುತ್ತಿದ್ದು ಇದೇ ಅದರ ದೀರ್ಘ ಅಸ್ತಿತ್ವಕ್ಕೆ ಕಾರಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನಾಡು,ನುಡಿ, ಸಂಸ್ಕೃತಿ, ಸಾಹಿತ್ಯ, ಜಾನಪದ, ಕನ್ನಡ,ಕನ್ನಡಿಗ, ಕರ್ನಾಟಕ ಇದೇ ಧ್ಯೇಯೋದ್ಧೇಶಗಳನ್ನು ಅನುಷ್ಠಾನ ಮಾಡಲು ಬದ್ದವಾಗಿದೆ. ಪ್ರೀತಿಯ ಬಾಂಧವ್ಯ ಬೆಳೆಸುವುದೇ ಇದರ ಆಶಯವಾಗಿದೆ ಎಂದು ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ನುಡಿದರು. ಅವರು ಸೋಮವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಪು ತಾಲೂಕು ಕಸಾಪ ಘಟಕದ ಸಹಭಾಗಿತ್ವದಲ್ಲಿ ಬಂಟಕಲ್ಲು ಬಸ್ಸು ನಿಲ್ದಾಣದ ಸಾರ್ವಜನಿಕ ತರೆದ ವಾಚನಾಲಯದಲ್ಲಿ ಜರುಗಿದ ೧೧೧ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ,ಜನಸಾಮಾನ್ಯರೆಲ್ಲ ಬಂದು ನಿಲ್ಲುವ ಬಸ್ಸು ತಂಗುದಾಣದಲ್ಲಿ ಶತಮಾನೋತ್ತರ ಇತಿಹಾಸ ಹೊಂದಿರುವ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿರುವುದು ನಾಡಿನ ಸಮಸ್ತರ ಭಾವನೆಗಳಿಗೆ ಸ್ಪಂದಿಸುವುದೇ ಆಗಿದೆ. ಈ ಸಂಸ್ಥೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು, ಅವರಿಗೆ ಬೆಂಬಲವಾಗಿ ನಿಂತ ಮಹಾನ್ ದಿವಾನರಾಗಿದ್ದ ಸರ್.ಎಂ.ವಿಶ್ವಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್‌ರವರು. ಇದು ಸಾಹಿತಿಗಳ ಪರಿಷತ್ತು ಅಲ್ಲ. ಜನಸಾಮಾನ್ಯರ ಪರಿಷತ್ತು. ನಾವು ಆಡುವ ಭಾಷೆ ನೆಲದಭಾಷೆ, ಹೃದಯದ ಭಾಷೆ ಆಗಿದೆ, ಆಗಬೇಕು. ಇದು ಭಾವದ ಪ್ರತೀಕ ಎಂದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದ ಸಾಹಿತಿ,ಕವಯತ್ರಿ ಪ್ರೊ.ಡಾ.ಫ್ಲಾವಿಯಾ ಕಸ್ತಲಿನೊ ಮಣಿಪಾಲ ಇವರು ಮಾತನಾಡಿ ಕರಾವಳಿ ಭಾಗದಲ್ಲಿ ಹೆಚ್ಚಿನವರ ಮಾತೃಭಾಷೆ, ತುಳು, ಕೊಂಕಣಿ, ಕುಂದಾಪ್ರ ಕನ್ನಡ ಇದ್ದರೂ ಶಾಲೆಯಲ್ಲಿ ಕನ್ನಡವನ್ನು ಕಲಿಯುತ್ತೇವೆ. ಕನ್ನಡದ ನೆಲದಲ್ಲಿ ನಾವೆಲ್ಲ ಕನ್ನಡಿಗರೇ ಆಗಿದ್ದೇವೆ. ಕನ್ನಡದ ಶ್ರೀಮಂತ ಸಂಸ್ಕೃತಿ,ಪರಂಪರೆಯನ್ನು ನೂರಾರು ಕವಿಗಳು,ಸಾಹಿತಿಗಳು ಸಾಹಿತ್ಯ ಗ್ರಂಥಗಳ ಮೂಲಕ ಅನಾವರಣಗೊಳಿಸಿದ್ದಾರೆ ಎಂದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯನುಡುಗಳನ್ನಾಡಿ ಉಡುಪಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಸಾಹಿತ್ಯದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸುತ್ತಿರುವುದು ಜಿಲ್ಲೆಯ ಸಾಧನೆಗೆ ಪ್ರೇರಣೆಯಾಗಿದೆ. ಸಾಹಿತ್ಯ ಚಟುವಟಿಕೆಗಳಿಗೆ ರಾಜ್ಯದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು. ದತ್ತಿ ಉಪನ್ಯಾಸ : ಹಿರಿಯ ಸಾಹಿತಿ ಕುರಾಡಿ ಸೀತಾರಾಮ ಅಡಿಗ ಮತ್ತು ಟಿ.ಎಸ್.ಕಮಲಾಕ್ಷಿ ಅಡಿಗ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಬೆನಗಲ್ ವಿಶ್ವಭಾರತ ಕರ್ನಾಟಕ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಮಾತನಾಡಿ ಕುರಾಡಿ ಸೀತಾರಾಮ ಅಡಿಗರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ ಅವರ ಸಾಹಿತ್ಯ, ಮಕ್ಕಳ ಗೀತೆಗಳು, ಕವನಗಳ ಬಗ್ಗೆ ಗಮನ ಸೆಳೆದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ದಂಪತಿಗಳಾದ ದೇವೇಂದ್ರ ನಾಯಕ್ ಶಿರ್ವ ಮತ್ತು ವನಿತಾ ಡಿ,ನಾಯಕ್‌ರವರನ್ನು ದತ್ತಿಗೌರವದೊಂದಿಗೆ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಬಂಟಕಲ್ಲು ನಾಗರಿಕ ಸೇವಾ ಸಮಿತಿ ಕೋಶಾಧಿಕಾರಿ ಜಗದೀಶ ಆಚಾರ್ಯ, ಬೆಳ್ಳೆ ಗ್ರಾ.ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಕಸಾಪ ಜಿಲ್ಲಾ ಸಮಿತಿಯ ನರಸಿಂಹಮೂರ್ತಿ, ರಿಕ್ಷಾ ಯೂನಿಯನ್ ಅಧ್ಯಕ್ಷ ಮಂಜುನಾಥ ಪೂಜಾರಿ, ಡೇನಿಸ್ ಡಿಸೋಜ, ಉಮೇಶ್ ರಾವ್, ರವೀಂದ್ರ ಪಾಟ್ಕರ್, ಉಷಾ ಮರಾಠೆ, ಕಸಾಪ ಕಾಪು ಘಟಕದ ಗೌ.ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಸಮಿತಿಯ ಸದಸ್ಯರುಗಳಾದ ಮಧುಕರ್ ಎಸ್, ಪ್ರೊ.ವಿದ್ಯಾ ಅಮ್ಮಣ್ಣಾಯ, ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ ಉಪಸ್ಥಿತರಿದ್ದರು.

ಕು.ದೀಕ್ಷಿತಾ, ದೀಕ್ಷಾ ನಾಡಗೀತೆ ಹಾಡಿದರು. ಕಸಾಪ ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಸ್ವಾಗತಿಸಿದರು. ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಹಾಗೂ ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಗೌ.ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು.