ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುತ್ಯಾರು ಗ್ರಾಮಾಂತರ ಪ್ರದೇಶಕ್ಕೆ ಬಸ್ಸು ಸೌಲಭ್ಯ ಒದಗಿಸಿ : ಸಾಮಾಜಿಕ ಕಾರ್ಯಕರ್ತ ಜಯರಾಮ ಆಚಾರ್ಯ

Posted On: 14-05-2025 04:57PM

ಕಾಪು : ತಾಲೂಕಿನ ಕುತ್ಯಾರು ಗ್ರಾಮಾಂತರ ಪ್ರದೇಶಕ್ಕೆ ಸರಕಾರಿ ಬಸ್ಸಿನ ಸೌಲಭ್ಯ ಅಥವಾ ಖಾಸಗಿ ಬಸ್ಸಿನ ಸೌಲಭ್ಯವನ್ನು ಮುಂದುವರಿಕೆ ಮಾಡುವಂತೆ ಈಗಾಗಲೇ ಮನವಿ ನೀಡಿದ್ದು ಪುನರ್ ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ಜಯರಾಮ ಆಚಾರ್ಯ ಕಾಪು ಇವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ರವರಿಗೆ ಮನವಿ ಮಾಡಿದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಕಾಪು ಪಡುಕುತ್ಯಾರು ಇರಂದಾಡಿ ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಸ್ವಾಮಿಗಳಾದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಸಾರ್ವಜನಿಕರು ನೀಡಿದ ಮನವಿಗೆ ಸ್ಪಂದಿಸಿದ ಮಾನ್ಯ ಸಚಿವರು ಈ ಗ್ರಾಮಾಂತರ ಭಾಗಕ್ಕೆ ಬಸ್ಸು ಸೌಲಭ್ಯ ಒದಗಿಸುವರೆ ಉಡುಪಿ ಜಿಲ್ಲಾಧಿಕಾರಿ ಮುಖೇನ, ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಮೂಲಕ, ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೆ.ಎಸ್.ಆರ್.ಟಿ.ಸಿ ಬಿಜೈ ಮಂಗಳೂರುರವರಿಗೆ ಪತ್ರ ಮುಖೇನ ಕುತ್ಯಾರು ಗ್ರಾಮಂತರ ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವರೆ ತಿಳಿಸಿರುತ್ತಾರೆ. ಈ ಬಗ್ಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರಿಗೂ ಮನವಿಯನ್ನು ಸಲ್ಲಿಸಲಾಗಿರುತ್ತದೆ. ನಂತರ ನಡೆದ ಬೆಳವಣಿಗೆ ಗಮನಿಸಿದಾಗ ಖಾಸಗಿ ಬಸ್ಸಿನವರು ಗ್ರಾಮಂತರ ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯನ್ನು ಪಡೆದಿರುವ ಮಾಹಿತಿಯು ತಿಳಿದು ಬಂದಿರುತ್ತದೆ. ಹಲವಾರು ವರ್ಷಗಳಿಂದ ನಮ್ಮ ಪ್ರದೇಶಕ್ಕೆ ಸರಕಾರಿ ಅಥವಾ ಖಾಸಗಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಲಿಲ್ಲ. ಅಂತೆಯೇ ಮನವಿಯನ್ನು ನೀಡಿ ಒಂದು ವರ್ಷ ಐದು ತಿಂಗಳು ಕಳೆದರೂ ಯಾವುದೇ ವ್ಯವಸ್ಥೆಯಾಗಲಿಲ್ಲ. ಈ ಬಗ್ಗೆ ಮಾನ್ಯ ಉಸ್ತುವಾರಿ ಸಚಿವರಿಗೆ ಮತ್ತು ಮಾನ್ಯ ಜಿಲ್ಲಾಧಿಕಾರಿ ಮತ್ತು ಉಡುಪಿ ಜಿಲ್ಲೆ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಪುನರಪಿ ಜ.15ರಂದು ಮನವಿಯನ್ನು ಸಲ್ಲಿಸಲಾಯ್ತು.

ಯಾವ ಕಾರಣಕ್ಕಾಗಿ, ಕುತ್ಯಾರು ಗ್ರಾಮಾಂತರ ಪ್ರದೇಶಕ್ಕೆ ಬಸ್ಸು ಸೌಲಭ್ಯ ಒದಗಿಸಲಾಗಿರುವುದಿಲ್ಲ ಎಂದು ನಮಗೆ ತಿಳಿದಿರುವುದಿಲ್ಲ. ಖಾಸಗಿ ಬಸ್ಸಿನವರು ಸರಕಾರಿ ಬಸ್ಸು ಹಾಕದಂತೆ ತಡೆ ಮಾಡಿಸಿದರೆ ತಡೆ ತೆರವಿಗೆ ಯಾರು ಸ್ಪಂದಿಸಬೇಕೆಂದು ಮನವರಿಕೆಯಾಗುವುದಿಲ್ಲ. ತಡೆ ತೆರವಿನ ನಂತರ ನಮ್ಮ ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಬರಲಿ ಎಂದು ಆಶಿಸುತ್ತಿದ್ದೇನೆ.

ಅಂತೆಯೇ ತಮ್ಮಲ್ಲಿ ನಿವೇದಿಸುವುದೆಂದರೆ, ಪ್ರಸ್ತುತ ಉಡುಪಿಯಿಂದ ಹೊರಟು ಕಾಪು ಮೂಲಕ ಈಗ ಸಂಚರಿಸುತ್ತಿರುವ ಖಾಸಗಿ ಬಸ್ಸುಗಳು ಕುತ್ಯಾರು ಗ್ರಾಮದ ಪುಂಚಲಕಾಡು ಪ್ರದೇಶದಲ್ಲಿ 45 ನಿಮಿಷಕ್ಕೂ ಮೇಲ್ಪಟ್ಟು ನಿಲುಗಡೆಯಾಗುತ್ತಿದ್ದು, ಸದ್ರಿ ಬಸ್ಸುಗಳ ಮುಂದಿನ ನಿಲುಗಡೆ ವ್ಯಾಪ್ತಿಯನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕುತ್ಯಾರು ಗ್ರಾಮದ ಇರಂದಾಡಿ, ಆನೆಗುಂದಿ ಶ್ರೀ ಮಹಾಸಂಸ್ಥಾನ ಸರಸ್ವತಿ ಪೀಠ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೋರಾರ್ಜಿ ದೇಸಾಯಿ ವಸತಿ ಶಿಕ್ಷಣ ಶಾಲೆ, ಶ್ರೀ ದುರ್ಗಾಮಂದಿರ ಮತ್ತು ಇತರ ಸಂಘ ಸಂಸ್ಥೆಗಳು ಇರುವ ಸ್ಥಳದಲ್ಲಿ ನಿಲುಗಡೆ ಮಾಡಿ ಅಲ್ಲಿಂದ ಪುಂಚಲಕಾಡು ಮಾರ್ಗವಾಗಿ ಕಾಪುವಿನಿಂದ ಉಡುಪಿಗೆ ತಲುಪಬಹುದು. ಪ್ರಸ್ತುತ ಪುಂಚಲಕಾಡಿನಿಂದ ನಮ್ಮ ಪ್ರದೇಶಕ್ಕೆ ಕ್ರಾಂಕ್ರಿಟ್ ರಸ್ತೆಯಾಗಿದ್ದು ಯಾವುದೇ ಆಡಚನೆಯಾಗುವುದಿಲ್ಲ. ಈ ಬಗ್ಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ಇದಕ್ಕೆ ಬೇಕಾದ ಖಾಸಗಿ ಬಸ್ಸುಗಳ ಪರ್ಮಿಟ್ ವ್ಯವಸ್ಥೆಯನ್ನು ಮಾರ್ಪಾಡು ಮಾಡಿ ಸಾರ್ವಜನಿಕರಿಗೆ ಬಸ್ಸಿನ ಸೌಕರ್ಯವನ್ನು ಒದಗಿಸಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.