ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ : ಲೈಟ್ ಹೌಸ್ ಚಲನಚಿತ್ರ ನೇತ್ರದಾನ ವಾಗ್ದಾನ ಕಾಯ೯ಕ್ರಮ

Posted On: 14-05-2025 05:34PM

ಉಡುಪಿ : ಲೈಟ್ ಹೌಸ್ ಚಲನಚಿತ್ರ ತಂಡ ಮತ್ತು ಪ್ರಸಾದ್ ನೇತ್ರಾಲಯ ಉಡುಪಿ ಇದರ ವತಿಯಿಂದ ನೇತ್ರದಾನ ಅರಿವು ಮೂಡಿಸುವ ಉದ್ದೇಶದಿಂದ ನೇತ್ರದಾನ ವಾಗ್ದಾನ ಕಾರ್ಯಕ್ರಮ ಪ್ರಸಾದ್ ನೇತ್ರಾಲಯದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಪ್ರಸಾದ್ ನೇತ್ರಾಲಯ ಇದರ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು, ಮಾತನಾಡಿ ಭಾರತದಲ್ಲಿ ನೇತ್ರದಾನದ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಇದರಿಂದ ದೃಷ್ಟಿ ಕಳೆದುಕೊಂಡವರಿಗೆ ಶ್ರೀಲಂಕಾದಿಂದ ಕಣ್ಣಿನ ಕರಿಗುಡ್ಡೆಯನ್ನು ಆಮದು ಮಾಡಿ ರೋಗಿಗಳಿಗೆ ನೀಡಲಾಗುತ್ತಿದೆ. ಬೌದ್ಧ ಧರ್ಮದಲ್ಲಿ ನೇತ್ರದಾನಕ್ಕೆ ವಿಶೇಷವಾದ ಆದ್ಯತೆ ಇರುವ ಕಾರಣ ಅವರು ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನ ಮಾಡಲು ಮುಂದೆ ಬರುತ್ತಿದ್ದಾರೆ. ಒಂದು ಕರಿಗುಡ್ಡೆಯಿಂದ ನಾಲ್ಕು ಜನರಿಗೆ ದೃಷ್ಟಿ ನೀಡಲು ಸಾಧ್ಯ ಈ ನಿಟ್ಟಿನಲ್ಲಿ ಲೈಟ್ ಹೌಸ್ ಚಲನಚಿತ್ರ ತಂಡದ ಕಾರ್ಯ ಅಭಿನಂದನೀಯ ನೇತ್ರದಾನದ ಬಗ್ಗೆ ಇರುವ ಅಪನಂಬಿಕೆಯನ್ನು ದೂರ ಮಾಡಲು ಈ ರೀತಿಯ ಕಾರ್ಯಕ್ರಮ ಪೂರಕವಾಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ಕಾಕ೯ಳ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುರೇಂದ್ರನಾಥ ಎಂ.ವಿ ಮಾತನಾಡಿ, ದೃಷ್ಟಿ ಕಳೆದುಕೊಂಡವರು ಪ್ರಪಂಚವನ್ನು ನೋಡಲು ಅಸಾಧ್ಯ ಈ ನಿಟ್ಟಿನಲ್ಲಿ ನೇತ್ರದಾನದ ಅರಿವು ಮೂಡಿಸುವ ಕಾರ್ಯಕ್ರಮ ಎಲ್ಲಾ ಕಡೆಯಲ್ಲಿ ನಡೆಯಬೇಕು ಎಂದು ಶುಭ ಹಾರೈಸಿದರು. ಸಾಮಾಜಿಕ ಕಾರ್ಯಕರ್ತ ಲೇಖಕ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿ, ನಾವು ಕಣ್ಣು ಮುಚ್ಚಿದಾಗ ಮತ್ತೊಬ್ಬರು ಕಣ್ಣು ತೆರೆಯಬೇಕು. ಈ ನಿಟ್ಟಿನಲ್ಲಿ ನೇತ್ರದಾನ ಮತ್ತು ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಮೂಢನಂಬಿಕೆ. ದೂರ ಮಾಡಲು ನೇತ್ರದಾನ ವಾಗ್ದಾನ ಶಿಬಿರಗಳು ಪ್ರತಿಯೊಂದು ಗ್ರಾಮದಲ್ಲಿ ನಡೆಯಬೇಕು. ದೃಷ್ಟಿ ಕಳೆದುಕೊಂಡವರು ಸಮಾಜದಲ್ಲಿ ಯಾವ ರೀತಿಯ ಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂಬ ಕಥೆಯನ್ನು ಹೊಂದಿರುವ ಲೈಟ್ ಹೌಸ್ ಚಲನಚಿತ್ರ ತಂಡದ ಈ ಕಾರ್ಯ ಶ್ಲಾಘನೀಯ ಎಂದರು. ವೈದ್ಯರಾದ ಡಾ. ಶಮಂತ್ ಶೆಟ್ಟಿ, ಡಾ. ಸ್ನೇಹ ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು.

ಲೈಟ್ ಹೌಸ್ ಚಲನಚಿತ್ರದ ನಿರ್ಮಾಪಕರಾದ ದತ್ತಾತ್ರೇಯ ಪಾಟ್ಕಾರ್' ಮಾತನಾಡಿದರು. ಚಿತ್ರದ ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಸ್ವಾಗತಿಸಿ ಮತ್ತು ಪ್ರಸ್ತಾವನೆಗೈದರು, ರಂಗಭೂಮಿ ಕಲಾವಿದ ರಾಮಾಂಜಿ ನಮ್ಮ ಭೂಮಿ ನಿರೂಪಿಸಿ, ವಂದಿಸಿದರು.