ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬೆಳಪುವಿನಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಗೆ ಭೂಮಿ ಪೂಜೆ

Posted On: 21-05-2025 02:57PM

ಉಚ್ಚಿಲ : ಬೆಳಪುವಿನಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಯ ಮೂಲಕ ಗುಣಾತ್ಮಕ ಶಿಕ್ಷಣ ನೀಡುವ ಕನಸು. 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬೆಳಪು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ನಡೆಸಲ್ಪಡುವ ಬೆಳಪುವಿನ ಮೌಲಾನಾ ಆಜಾದ್ ಮಾದರಿ ಶಾಲೆಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಪು ಗ್ರಾ.ಪಂ.ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪುವಿನಲ್ಲಿ ಈಗಾಗಲೇ ಪಾಲಿಟೆಕ್ನಿಕ್ ಕಾಲೇಜು, ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಗತಿಯಲ್ಲಿದೆ. ಕೈಗಾರಿಕಾ ಪಾಕ್೯ ಕಾರ್ಯಾಚರಿಸುತ್ತಿದೆ. ಬೆಳಪು ಗ್ರಾಮ ಬಡ ಗ್ರಾಮವಾಗಿದ್ದು ಆರ್ಥಿಕವಾಗಿ ಹಿಂದುಳಿದ ಜನರಿಗೆ ಶೈಕ್ಷಣಿಕ, ಕೈಗಾರಿಕೆ, ಉದ್ಯೋಗ, ವಸತಿಯ ಯೋಜನೆಯ ಅವಕಾಶ ಸಿಗಬೇಕಾಗಿದೆ. ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಉತ್ತಮ ಮೌಲ್ಯಾಧಾರಿತ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ಇದರ ಪಕ್ಕದಲ್ಲಿಯೇ 17 ಎಕರೆಯಲ್ಲಿ ಐಪಿಎಲ್ ಮಾದರಿಯ ಕ್ರೀಡಾಂಗಣಕ್ಕೆ ಕ್ರಿಕೆಟ್ ಬೋರ್ಡ್ ಸಮ್ಮತಿಸಿದ್ದು, ಜಿಲ್ಲಾಧಿಕಾರಿ ಜಾಗವನ್ನು ಮೀಸಲಿರಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಅವಕಾಶದ ಜೊತೆಗೆ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳು ಆಡುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದರು.

ಬೆಳಪು ಗ್ರಾ.ಪಂ. ಉಪಾಧ್ಯಕ್ಷರಾದ ಶೋಭಾ ಭಟ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಮನೋಹರ್, ಪಂಚಾಯತ್ ಸದಸ್ಯರಾದ ಶರತ್ ಕುಮಾರ್ ಕುಮಾರ್, ಸುಲೇಮಾನ್, ಸೌಮ್ಯ, ರೂಪ, ನಫೀಸ ಮತ್ತಿತರರು ಉಪಸ್ಥಿತರಿದ್ದರು. ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಎಚ್ ಸ್ವಾಗತಿಸಿದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಪೂರ್ಣಿಮ ಚೂರಿ ಪ್ರಸ್ತಾವನೆಗೈದರು. ಸಂತೋಷ್ ಕುಮಾರ್ ನಿರೂಪಿಸಿ, ವಂದಿಸಿದರು.

ಉಚ್ಚಿಲ ಮಹಾಲಕ್ಷ್ಮಿ ದೇವಳದ ಅರ್ಚಕ ಶ್ರೀನಿವಾಸ ಉಪಾಧ್ಯಾಯ ಭೂಮಿ ಪೂಜೆಯ ವಿಧಿ ವಿಧಾನ ನೆರವೇರಿಸಿ, ಬೆಳಪು ಖತೀಬ್ ಮಿನಾರ ಮಸೀದಿ ಧರ್ಮಗುರು ಎಂ.ಡಿ.ಅರ್ಷಾದ್ ರೇಝ ದುವಾ ನೆರವೇರಿಸಿದರು.