ಕೆಎಂಎಫ್ ನಿರ್ದೇಶಕರಾಗಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಆಯ್ಕೆ
Posted On:
21-05-2025 03:18PM
ಕಾಪು : ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ ನಿ. ಬೆಂಗಳೂರು ಇದರ ನಿರ್ದೇಶಕರಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಐಕಳ ಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಇವರು ಆಯ್ಕೆಗೊಂಡಿದ್ದಾರೆ.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿರುವ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಇವರನ್ನು ಮಂಗಳವಾರ ನಡೆದ ಒಕ್ಕೂಟದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯ ಕೆಎಂಎಫ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾ ಯಿತು. ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಶಿಫಾರಸ್ಸಿನ ಮೂಲಕ ಈ ಆಯ್ಕೆ ನಡೆದಿದೆ.
ಈ ಮೊದಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಡಾ.ಎಂ. ಎನ್. ರಾಜೇಂದ್ರಕುಮಾರ್ ನೇತೃತ್ವದ ಹೈನುಗಾರರ ಬಳಗದ 13 ಮಂದಿ ನಿರ್ದೆಶಕರು ಆಯ್ಕೆಗೊಂಡಿದ್ದು, ಬಳಿಕ ಡಾ.ಎಂಎನ್ ಆರ್ ಬಳಗದ ರವಿರಾಜ ಹೆಗ್ಡೆ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಉದಯ ಎಸ್. ಕೋಟ್ಯಾನ್ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಇದೀಗ ಡಾ.ದೇವಿಪ್ರಸಾದ್ ಶೆಟ್ಟಿಯವರು ಕೂಡ ರಾಜೇಂದ್ರ ಕುಮಾರ್ ಅವರ ಶಿಫಾರಸ್ಸಿನ ಮೂ ಲಕ ರಾಜ್ಯ ಕೆಎಂಎಫ್ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು ಹಾಗೂ ಎಸ್ ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿರುವ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರು ಬೆಳಪು ವ್ಯವಸಾಯ ಸೇವಾ ಸಹಕಾರ ಸಂಘ, ಬೆಳಪು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.