ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಳೆ ವಿಪತ್ತು ನಿರ್ವಹಣೆ ಕುರಿತು ಕಾಪು ತಾಲೂಕು ಮಟ್ಟದ ಇಲಾಖಾಧಿಕಾರಿಗಳ ಸಭೆ

Posted On: 21-05-2025 04:01PM

ಕಾಪು : ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಹಾಗೂ ವಿಪತ್ತು ನಿರ್ವಹಣಾ ವಿಷಯಗಳ ಕುರಿತು ಕಾಪು ತಾಲೂಕು ಮಟ್ಟದ ಸಭೆಯು ಬುಧವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾಪು ತಾಲೂಕು ಆಡಳಿತ ಸೌಧದಲ್ಲಿ ಜರಗಿತು.

ಸಭೆಯಲ್ಲಿ ರಾ.ಹೆ. 66 ರ ಹೆಜಮಾಡಿಯಿಂದ ಉದ್ಯಾವರದವರೆಗಿನ ಬೈ-ಪಾಸ್ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಕಡೆಗಳಲ್ಲಿ ಬ್ಯಾರೀಕೇಡ್ ಗಳನ್ನು ಅಳವಡಿಸಿದ್ದು ಸುಭದ್ರ ಸ್ಥಿತಿಯಲ್ಲಿ ಇರಿಸುವಂತೆ ಹಾಗೂ ಪ್ರತಿಫಲನಗಳನ್ನು ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಕಾಣುವಂತೆ ಅಳವಡಿಸುವಂತೆ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಿದ್ದು ಮಳೆಯಿಂದ ಮಣ್ಣು ಒದ್ದೆಯಾಗಿ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಸೂಚಿಸಲಾಯಿತು ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯುಂಟಾದ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ/ ಪಂಚಾಯತ್ ರಾಜ್ ಅಧಿಕಾರಿಗಳು ಸಮನ್ವಯತೆಯಿಂದ ಸ್ಥಳ ಪರಿಶೀಲನೆ ನಡೆಸಿ ಗರಿಷ್ಠ ಪರಿಹಾರ ನೀಡಬೇಕು. ರಸ್ತೆ ಬದಿಗಳಲ್ಲಿರುವ ಹಳೆ ವಿದ್ಯುತ್ ತಂತಿಗಳನ್ನು ಮತ್ತು ಅಪಾಯಕಾರಿ ಮರಗಳನ್ನು ತೆರವು ಗೊಳಿಸುವಂತೆ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಜಲ್ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಪೈಪ್ ಲೈನ್ ಅಳವಡಿಸಲು ತೆಗೆದ ಹೊಂಡ ಗುಂಡಿಗಳನ್ನು ಸರಿಯಾಗಿ ಮುಚ್ಚದ ಕಾರಣ ಅಪಘಾತ ಸಂಭವಿಸುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಶಾಲಾ ಕಾಲೇಜುಗಳು ಆರಂಭವಾಗಲಿದ್ದು ವಿದ್ಯಾರ್ಥಿಗಳಿಗೆ ಜಾತಿ ಆದಾಯ ಪ್ರಮಾಣ ಪತ್ರ ಅಗತ್ಯವಾಗಿದ್ದು, ಜಾತಿ ಆದಾಯ ಪ್ರಮಾಣ ಪತ್ರ ನೀಡಲು ವಿಳಂಬ ಮಾಡದಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ, ಅತಿಸಾರ ಮುಂತಾದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಉಲ್ಬಣವಾಗಲಿದ್ದು ಇದರ ತಡೆಗೆ ಮುಂಜಾಗ್ರತ ಕ್ರಮ ಹಾಗೂ ಸಾರ್ವಜನಿಕರಿಗೆ ಜಾಗೃತಿ ಉಂಟುಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆರೋಗ್ಯ ಇಲಾಖೆಯವರಿಗೆ ಸೂಚಿಸಲಾಯಿತು.

ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛ ಪರಿಸರ ಹಿತದೃಷ್ಟಿಯಿಂದ ಮಲೀನ ನೀರು ಮತ್ತು ಮಲೀನ ತ್ಯಾಜ್ಯಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮತ್ತು ಮಳೆಗಾಲದ ಸಂದರ್ಭದಲ್ಲಿ ಪುರಸಭೆಯಲ್ಲಿ ತುರ್ತು ಸೇವಾ ಕೇಂದ್ರ ತೆರೆದು ಜವಾಬ್ದಾರಿಯುತ ಸಿಬ್ಬಂದಿಗಳನ್ನು ನೇಮಕ ಮಾಡಿ ಅರ್ಜಿಗಳನ್ನು ಸ್ವೀಕರಿಸಿ ತುರ್ತು ಪರಿಹಾರೋಪಾಯ ಕೈಗೊಳ್ಳವಂತೆ ಪುರಸಭಾ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಯಿತು. ರಾಷ್ಟೀಯ ಹೆದ್ದಾರಿಯ ಅಪಘಾತ ವಲಯದಲ್ಲಿ ಸೂಚನಾ ಫಲಕ, ಸ್ಪೀಡ್ ಬ್ರೇಕರ್, ಬ್ಯಾರಿ ಗೇಟ್ ಗಳನ್ನು ಅಳವಡಿ ಸಂಭಾವ್ಯ ಅಪಘಾತ ತಡೆಯಲು ಕ್ರಮ ವಹಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು. ಕಡಲ್ಕೊರೆತ ಬಾದಿತ ಪ್ರದೇಶಗಳ ಕಡಲ್ಕೊರೆತ ತಡೆಗೆ ಯೋಜನೆ ಸಿದ್ಧಪಡಿಸುವಂತೆ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ ಕಿಂಡಿ ಅಣೆಕಟ್ಟುಗಳಗೆ ಅಳವಡಿಸಲಾದ ಹಲಗೆಗಳನ್ನು ನೀರಿನ ಮಟ್ಟಕ್ಕೆ ಅನುಗುಣವಾಗಿ ತೆರವುಗೊಳಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಮಳೆಗಾಲದ ಸಂದರ್ಭದಲ್ಲಿ ಕೆರೆ, ತೋಡು, ನದಿಗಳು ಅಪಾಯಕಾರಿ ಮಟ್ಟವನ್ನು ಮೀರಿ ನೀರು ಹರಿಯುವುದು ಸ್ವಾಭಾವಿಕ ಇಂತಹ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ ತುರ್ತು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳುವುದು ಇದಕ್ಕೆ ಅವಶ್ಯಕತೆ ಇರುವ ಪೂರಕ ಸಲಕರಣೆಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವಂತೆ ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ತಹಶೀಲ್ದಾರರಾದ ಡಾ.ಪ್ರತಿಭಾ ಆರ್., ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನಾಗರಾಜ್, ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ ಹಾಗೂ ಕಾಪು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಕಾಪು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.