ಕಾಪು : ನಗರ, ಗ್ರಾಮಾಂತರ ಯೋಜನಾ ಪ್ರಾಧಿಕಾರದಲ್ಲಿ ಜನಸಾಮಾನ್ಯರಿಗೆ ತ್ವರಿತ ಸೇವೆ ಸಿಗಲಿ : ಉಡುಪಿ ಜಿಲ್ಲಾ ಕೃಷಿಕ ಸಂಘ ಆಗ್ರಹ
Posted On:
21-05-2025 04:36PM
ಕಾಪು : ಪ್ರಸ್ತುತ ಕಾಪುವಿನಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರ ಇದೆ. ಇಲ್ಲಿ ಜನಸಾಮಾನ್ಯರ ಅರ್ಜಿ ವಿಲೇವಾರಿಗೆ ಸರಿಯಾದ ವ್ಯವಸ್ಥೆಯೇ ಇಲ್ಲ. ನೂಕು ನುಗ್ಗಲು ಇದೆ. ಒಮ್ಮೆಗೆ 5 -10 ಅರ್ಜಿಗಳನ್ನು ತರುವ ದಲ್ಲಾಳಿಗಳ ಹಾವಳಿ ಇದೆ. ನೇರವಾಗಿ ಅರ್ಜಿ ಸಲ್ಲಿಸಲು ಹೋದವರನ್ನು ಕೇಳುವವರೇ ಇಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ಕಾಯುವ ಪರಿಸ್ಥಿತಿ. ಹಾಗಿದ್ದರೂ ಕೆಲಸವಾಗದೆ ಹಿಂದಿರುಗಿ ಹೋಗಬೇಕು. 10 -12 ಬಾರಿ ಹೋದರೂ ಯೋಜನಾ ಪ್ರಾಧಿಕಾರದ ಅಧಿಕಾರಿಯ ಭೇಟಿ ಅಸಾಧ್ಯ. ಯೋಜನಾ ಪ್ರಾಧಿಕಾರದಲ್ಲಿ ಜನಸಾಮಾನ್ಯರಿಗೆ ತ್ವರಿತವಾದ ಸೇವೆ ಸಿಗುವಂತಾಗಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಆಗ್ರಸಿದ್ದಾರೆ.
ಈ ಬಗ್ಗೆ ಸೋಮವಾರ ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಕಾಪು ತಹಶೀಲ್ದಾರ್‌ರವರ ಮೂಲಕ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಾಧಿಕಾರದ ಕಚೇರಿಗೆ ನೇರವಾಗಿ ಬರುವ ಅರ್ಜಿದಾರರೊಂದಿಗೆ ವಿನಯ ಮತ್ತು ಸೌಜನ್ಯದಿಂದ ವರ್ತಿಸುವಂತೆ ಪ್ರಾಧಿಕಾರದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ನಿರ್ದೇಶ ನೀಡಬೇಕು. ಅರ್ಜಿಯ ಸ್ವೀಕಾರ ಮತ್ತು ಸ್ಥಿತಿಗತಿಯ ಬಗ್ಗೆ ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಅರ್ಜಿಯ ಜೊತೆ ಯಾವುದೆಲ್ಲ ದಾಖಲೆಗಳ ಅಗತ್ಯವಿರುವುದೆಂದು ಪರಿಶೀಲಿಸಿ, ಅರ್ಜಿದಾರರಿಗೆ ಆಗಲೇ ತಿಳಿಸಬೇಕು. ಕ್ರಮವತ್ತಾಗಿ ಕಚೇರಿಯನ್ನು ಸಂಪರ್ಕಿಸುವ ದಿನ ಮತ್ತು ಸಮಯವನ್ನು ದೂರವಾಣಿ ಮೂಲಕ ಅರ್ಜಿದಾರರಿಗೆ ನೀಡುವ ವ್ಯವಸ್ಥೆಯಾಗಬೇಕು ಮತ್ತು ಅಂದೇ ಅರ್ಜಿಯ ವಿಲೇವಾರಿಯಾಗಬೇಕು. ಅರ್ಜಿ ಸಲ್ಲಿಸಿದ ರೀತಿಯಲ್ಲಿ ಕಡ್ಡಾಯವಾಗಿ ಅನುಮೋದನೆ ನೀಡುವುದು. ದಲ್ಲಾಳಿಗಳಿಗೆ ಪ್ರಾಧಿಕಾರದಲ್ಲಿ ಅವಕಾಶ ನೀಡಕೂಡದು. ಒಮ್ಮೆಗೆ ಒಬ್ಬರಿಂದ ಒಂದು ಅರ್ಜಿ ಮಾತ್ರ ಸ್ವೀಕಾರ ಮಾಡುವುದು. ಅವ್ಯವಸ್ಥೆಯಿಂದಾಗಿ ಉಂಟಾಗುತ್ತಿರುವ ನೂಕುನುಗ್ಗಲನ್ನು ನಿಯಂತ್ರಿಸಬೇಕು, ಇದೆಲ್ಲಾ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ಮಾಡಿ ಪ್ರಾಧಿಕಾರವು ಸಾರ್ವಜನಿಕರಿಗೆ ಅನುಕೂಲವಾಗಿ ತ್ವರಿತ ಕೆಲಸ ಮಾಡಲು ತಾವು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಲಾಯಿತು.
ಪ್ರಾಧಿಕಾರದ ಪ್ರಸ್ತುತ ಕಾರ್ಯವೈಖರಿಯಿಂದ ನಮ್ಮ ಸಂಘಟನೆಯ ಸದಸ್ಯರು ಈಗಾಗಲೇ ತೀವ್ರ ಅಸಮಾಧಾನ ಹೊಂದಿದ್ದಾರೆ ಮತ್ತು ಪ್ರತಿಭಟನೆ ನಡೆಸುವ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಇವೆಲ್ಲ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ಮಾಡಿ ಪ್ರಾಧಿಕಾರವು ಸಾರ್ವಜನಿಕರಿಗೆ ಅನುಕೂಲವಾಗಿ ತ್ವರಿತ ಕೆಲಸ ಮಾಡುವಂತೆ ತಾವು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಪಾಂಗಾಳ ಗಣೇಶ ಶೆಟ್ಟಿ, ಡಾ. ರಾಧಾಕೃಷ್ಣ ಶರ್ಮಾ, ವೇಣುಗೋಪಾಲ್ ಎಂ. ಪಡುಕಳತ್ತೂರು, ರಮೇಶ್ಚಂದ್ರ ನಾಯಕ್ ಪಂಜಿಮಾರು ಉಪಸ್ಥಿತರಿದ್ದರು.