ಪಡುಬಿದ್ರಿ ಸಿ.ಎ.ಸೊಸೈಟಿಯ ಹೆಜಮಾಡಿ ಶಾಖಾ ಕಟ್ಟಡದಲ್ಲಿ ನೂತನ ಸಭಾಂಗಣ ಉದ್ಘಾಟನೆ
Posted On:
08-06-2025 03:11PM
ಪಡುಬಿದ್ರಿ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಹೆಜಮಾಡಿ ಶಾಖಾ ಕಟ್ಟಡದಲ್ಲಿರುವ 'ಎಚ್. ನಾರಾಯಣ' ನೂತನ ಸಭಾಂಗಣವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಹಿತ ಗಣ್ಯರು ಭಾನುವಾರ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಸಹಕಾರಿ ರಂಗದ ತತ್ವದಂತೆ ಕಾರ್ಯನಿರ್ವಹಿಸುತ್ತಿರುವ ಪಡುಬಿದ್ರಿ ಸಿ.ಎ.ಸೊಸೈಟಿ ಕಾರ್ಯ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ. ಸರಕಾರಿ ಬ್ಯಾಂಕುಗಳಿಗಿಂತ ಸಹಕಾರಿ ಸೊಸೈಟಿಗಳಿಂದ ಜನಸಾಮಾನ್ಯರಿಗೆ ಅನುಕೂಲಕರವಾಗಿದೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ವಿದ್ಯೆ, ಆರೋಗ್ಯ, ಸಾಮಾಜಿಕ ಒಳಿತನ್ನು ಮಾಡುವ ದೃಷ್ಟಿಯಲ್ಲಿ ನಮ್ಮ ಜವಾಬ್ದಾರಿ ಎಂಬಂತೆ ಪಡುಬಿದ್ರಿ ಸಿ.ಎ. ಸೊಸೈಟಿ ಜನಸೇವೆ ಮಾಡುತ್ತಿದೆ ಎಂದರು.
ಸನ್ಮಾನ : ದೈನಿಕ ಠೇವಣಿ ಸಂಗ್ರಹಕಾರರಾಗಿರುವ ವಿಠ್ಠಲ ದೇವಾಡಿಗ ಮತ್ತು ಗೋಪಾಲ ದೇವಾಡಿಗ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 5ನೇ ರ‌್ಯಾಂಕ್ ಪಡೆದ ಭೂಮಿಕಾ ಎಚ್.ಪುತ್ರನ್, ಸೊಸೈಟಿ ವ್ಯಾಪ್ತಿಯ ಶೇ. 95 ಕ್ಕಿಂತ ಅಧಿಕ ಅಂಕ ಗಳಿಸಿದ ರಿಷಿಕಾ ಕಿಶೋರ್, ಪ್ರಣವ್ ಪೂಜಾರಿ, ಶೇ. 100 ಫಲಿತಾಂಶ ದಾಖಲಿಸಿದ ಶಾಲೆಗಳನ್ನು ಗೌರವಿಸಲಾಯಿತು. ಕೆ.ಎಂ.ಎಫ್. ಬೆಂಗಳೂರು ನಿರ್ದೇಶಕರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ನಿವೃತ್ತ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಭಟ್, ಶಕುಂತಳಾರವರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ. ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕೆ.ಎಂ.ಎಫ್. ಬೆಂಗಳೂರು ನಿರ್ದೇಶಕರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷರಾದ
ಬಿ. ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ನಿರ್ದೇಶಕ ಬಿ. ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಲ್ಲಿ, ಹೆಜಮಾಡಿ ಅಲ್-ಅಝರ್ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಶೇಖಬ್ಬ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ವಹಿಸಿದ್ದರು.
ಈ ಸಂದರ್ಭ ಹೆಜಮಾಡಿ ಗ್ರಾ.ಪಂ.ಅಧ್ಯಕ್ಷೆ ರೇಶ್ಮಾ ಮೆಂಡನ್, ಹೆಜಮಾಡಿ ಗ್ರಾ.ಪಂ.ಉಪಾಧ್ಯಕ್ಷ ಮೋಹನ್ ಸುವರ್ಣ, ಪಡುಬಿದ್ರಿ ಸಿ.ಎ ಸೊಸೈಟಿ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭ ಎಚ್ ಪುತ್ರನ್, ಪ್ರಭಾರ ಶಾಖಾ ವ್ಯವಸ್ಥಾಪಕಿ ಕೀರ್ತಿ, ಸೊಸೈಟಿ ನಿರ್ದೇಶಕರುಗಳು ಉಪಸ್ಥಿತರಿದ್ದರು.
ವೈ.ಸುಧೀರ್ ಕುಮಾರ್ ಸ್ವಾಗತಿಸಿ, ವೀಕ್ಷಿತ ನಿರೂಪಿಸಿ, ಗುರುರಾಜ್ ಪೂಜಾರಿ ವಂದಿಸಿದರು.