ದ.ಕ. ಮೊಗವೀರ ಮಹಾಜನ ಸಂಘದಿಂದ ಮೊಗವೀರ ಗ್ರಾಮಸಭೆಗಳಿಗೆ ಭೇಟಿ
Posted On:
16-06-2025 11:12AM
ಕಾಪು : ದಕ್ಷಿಣ ಕನ್ನಡ ಮೊಗವೀರ ಮಹಾಸಭಾ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ವತಿಯಿಂದ ಮಹಾಜನ ಸಂಘದ ಆಡಳಿತ ಪದಾಧಿಕಾರಿಗಳು ಭಾನುವಾರ ನಾನಾ ಮೊಗವೀರ ಮಹಾಸಭೆಗಳಿಗೆ ಭೇಟಿ ನೀಡಿದರು.
ಹೆಜಮಾಡಿಯ ಗುಂಡಿ ಮೊಗವೀರ ಮಹಾಸಭಾದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ ಮಹಾಸಭಾದ ಅಧ್ಯಕ್ಷ ಜಯ ಸಿ.ಕೋಟ್ಯನ್ ಬೆಳ್ಳಂಪಳ್ಳಿ ಮಾತನಾಡಿ, ಶ್ರೀ ಕ್ಷೇತ್ರ ಉಚ್ಚಿಲಕ್ಕೆ ನಿತ್ಯ ಸಹಸ್ರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಇದೇ ರೀತಿ ಜಗತ್‌ಪ್ರಸಿದ್ಧ ಉಚ್ಚಿಲ ದಸರಾ ಮಹೋತ್ಸವದಲ್ಲಿ ಲಕ್ಷಾತರ ಭಕ್ತರು ಭಾಗವಹಿಸುತ್ತಾರೆ. ಜತೆಗೆ ಧಾರ್ಮಿಕ, ಸಾಮಾಜಿಕ, ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ನಿರಂತರ ಸೇವೆಗಳು ನಡೆಯುತ್ತಾ ಬಂದಿದೆ. ಈ ಬಾರಿ ಹಲವು ಶಾಶ್ವತ ಯೋಜನೆಗಳನ್ನು ಕಾರ್ಯಗತಗೊಳಿಸಲು ಮಹಾಜನ ಸಂಘ ನಿರ್ಧರಿಸಿದ್ದು, ಗ್ರಾಮಸಭೆಗಳು ಸಹಕಾರ ನೀಡಲು ಮುಂದೆ ಬರಬೇಕು ಎಂದರು.
ಗುಂಡಿ ಮೊಗವೀರ ಮಹಾಸಭಾದ ಅಧ್ಯಕ್ಷ ದಿವಾಕರ ಹೆಜ್ಮಾಡಿ ಪ್ರತಿಕ್ರಿಯಿಸಿ, ಮಹಾಜನ ಸಂಘದ ಮನವಿಯಂತೆ ನಮ್ಮ ಗ್ರಾಮ ಸಭಾ ವತಿಯಿಂದ ಸರ್ವರ ಅಭಿಪ್ರಾಯದಂತೆ ಸಹಕಾರ ನೀಡಲು ಬದ್ಧರಿದ್ದೇವೆ ಎಂದರು.
ಈ ಸಂದರ್ಭ ಜಯ ಸಿ.ಕೋಟ್ಯಾನ್‌ರವರು ದಿವಾಕರ ಹೆಜ್ಮಾಡಿಯವರಿಗೆ ಮಹಾಜನ ಸಂಘದ ಮನವಿಯನ್ನು ಹಸ್ತಾಂತರಿಸಿದರು.
ಮೊಗವೀರ ಮಹಾಜನ ಸಂಘದ ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಸಮಿತಿ ಸದಸ್ಯರಾದ ಯಾದವ ವಿ.ಕೆ., ಕಿರಣ್ ಕುಮಾರ್ ಉದ್ಯಾವರ ಮತ್ತು ದಿನೇಶ್ ಎರ್ಮಾಳ್, ಶ್ರೀ ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ, ಗುಂಡಿ ಮೊಗವೀರ ಮಹಾಸಭಾದ ಗುರಿಕಾರ ಲೋಕನಾಥ ಗುರಿಕಾರ, ಪ್ರಧಾನ ಕಾರ್ಯದರ್ಶಿ ದಿನೇಶ್ ಸುವರ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಶುಭ ದಿನೇಶ್, ಮಹಾಸಭಾದ ಜತೆ ಕಾರ್ಯದರ್ಶಿ ಯತೀಶ್ ಕೋಟ್ಯಾನ್, ಕೋಶಾಧಿಕಾರಿ ಮೋಹಿತ್ ಸಾಲ್ಯಾನ್ ಉಪಸ್ಥಿತರಿದ್ದರು.
ಭಾನುವಾರ 10ಕ್ಕೂ ಅಧಿಕ ಗ್ರಾಮಸಭೆಗಳಿಗೆ ಮಹಾಜನ ಸಂಘದ ಪದಾಧಿಕಾರಿಗಳು ಭೇಟಿ ನೀಡಿದ್ದು, ಮಹಾಜನ ಸಂಘ ಅಧೀನದ 169 ಗ್ರಾಮ ಸಭೆಗಳಿಗೂ ಭೇಟಿ ನೀಡಲಿದ್ದಾರೆ.