ಕೊಚ್ಚಿ, ಪನ್ವೇಲ್, ಕನ್ಯಾಕುಮಾರಿ ನಡುವೆ ಸಂಪರ್ಕ ಸಾಗಿಸುವ ರಾಷ್ಟೀಯ ಹೆದ್ದಾರಿ 66ರಲ್ಲಿ ಹಾದುಹೋಗುವಾಗ ಸಿಗುವ ಚಿಕ್ಕ ಮತ್ತು ಚೊಕ್ಕವಾದ ಪೇಟೆಯೇ
#ಕಾಪು_ಪೇಟೆ
ಪ್ರವಾಸೋದ್ಯಮ, ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿರುವ ಕಾಪು ಕಳೆದ ನಾಲ್ಕೈದು ವರ್ಷಗಳಿಂದ ಪುರಸಭೆ ಮತ್ತು ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದ್ದು.
ನಂತರದಲ್ಲಿ ಕಾಪು ಪೇಟೆ ಕೂಡ ಹಂತ ಹಂತವಾಗಿ ಬೆಳೆಯುತ್ತಾ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ.
ಕಳೆದ ನಾಲ್ಕು ದಶಕಗಳಿಂದ ಕಾಪು ಕ್ಷೇತ್ರವನ್ನಾಳಿದ ಶಾಸಕರುಗಳು ಕಾಪುವಿನ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದು.
2016 ರಲ್ಲಿ ಕಾಪು ಪುರಸಭೆಯಾದ ಬಳಿಕ ಮತ್ತು 2018 ರಲ್ಲಿ ಕಾಪು ತಾಲೂಕು ಆಗಿ ರಚನೆಯಾದ ಬಳಿಕ ಕಾಪು ಪೇಟೆ ಮತ್ತಷ್ಟು ಗುರುತಿಸಲ್ಪಡುತ್ತಿದೆ.
ಹಾಗಾಗಿಯೇ ಈಗ ಎಲ್ಲರ ಕಣ್ಣು ಕಾಪುವಿನ ಮೇಲೆ ಎಂಬಂತಾಗಿದೆ.
ಮೂರು ಗ್ರಾಮ ಪಂಚಾಯತ್ಗಳನ್ನು ಸೇರಿಸಿಕೊಂಡು 2015-16 ರಲ್ಲಿ ರಚನೆಗೊಂಡ ಕಾಪು ಪುರಸಭೆಯು ಕಾಪುವಿನ ಅಭಿವೃದ್ಧಿಗೆ ಹೊಸ ಶಕೆಯನ್ನು ತೆರೆದಿಟ್ಟಿದೆ.
ಕಾಪು ಪೇಟೆಗೆ ತಾಗಿಕೊಂಡಿರುವ ಕಾಪು, ಉಳಿಯಾರಗೋಳಿ ಮತ್ತು ಮಲ್ಲಾರು ಗ್ರಾಮ ಪಂಚಾಯತ್ಗಳನ್ನು ಸೇರಿಸಿಕೊಂಡು ರಚಿಸಿದ ಕಾಪು ಪುರಸಭೆಯು ಕಾಪುವಿನ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆದುಕೊಟ್ಟಿದೆ.
ಸುಮಾರು 23.44 ಚದರ ಕೀಮೀ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿರುವ ಕಾಪು ಪುರಸಭೆ ವ್ಯಾಪ್ತಿಯ ಒಟ್ಟು ಜನಸಂಖ್ಯೆ 2011 ರ ಜನಗಣತಿಯ ಆಧಾರದಲ್ಲಿ 21,887 ಪ್ರಸ್ತುತ 23,000 ದಷ್ಟು ಇರಬಹುದು. ಇಲ್ಲಿರುವ ವಾಣಿಜ್ಯ (1,020) ಮತ್ತು ವಸತಿ (7,103) ಸಹಿತವಾದ ಒಟ್ಟು ಕಟ್ಟಡಗಳ ಸಂಖ್ಯೆ (8,123)
ಕಾಪು ಪುರಸಭೆಯ ವಾರ್ಷಿಕ ಆದಾಯ ಅಂದಾಜು 1.50 ಕೋಟಿ ರೂ. ದಿನವೊಂದಕ್ಕೆ ಕನಿಷ್ಠ 2.50 ಕೋಟಿ ರೂ ವಹಿವಾಟು ಮಾಡುವ ಸಾಮರ್ಥ್ಯ ಕಾಪು ಪೇಟೆಯದ್ದಾಗಿದೆ.
ಕಾಪು ಪುರಸಭೆ ವ್ಯಾಪ್ತಿಗೆ ಬರುವ ಕಾಪು, ಉಳಿಯಾರಗೋಳಿ, ಮೂಳೂರು, ಕೈಪುಂಜಾಲು, ಮಲ್ಲಾರು ಗ್ರಾಮಗಳು ಮಾತ್ರವಲ್ಲದೆ ಪಾಂಗಳ, ಇನ್ನಂಜೆ, ಮಜೂರು, ಪಾದೂರು, ಹೇರೂರು, ಶಂಕರಪುರ, ಉಚ್ಚಿಲ, ಬೆಳಪು, ಎಲ್ಲೂರು, ಎರ್ಮಾಳು, ಪುಂಚಲಕಾಡು ಸಹಿತ ಹಲವು ಪ್ರದೇಶಗಳ ಜನರು ದಿನವಹಿ ವಹಿವಾಟಿಗಾಗಿ ಕಾಪು ಪೇಟೆಯನ್ನೇ ಅವಲಂಬಿಸಿದ್ದಾರೆ.
ಕಾಪು ಪುರಸಭೆಯಾಗಿ ರಚನೆಯಾದ ಬಳಿಕ ಕಾಪು ಪೇಟೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.
ಪೊಲಿಪು ಸರಕಾರಿ ಆಸ್ಪತ್ರೆಯಿಂದ ಕಾಪು ಪೇಟೆಯ ಸರ್ಕಲ್ ವರೆಗೆ ಎರಡು ಬದಿಗೆ ಇಂಟರ್ಲಾಕ್ ಅಳವಡಿಕೆ, ಒಳಚರಂಡಿ ಯೋಜನೆಗೆ ಪೈಪ್ಲೈನ್ ಅಳವಡಿಕೆ, ಪೇಟೆಯ ಒಳಗಡೆ ಮಳೆ ನೀರು ಹರಿಯುವ ಚರಂಡಿ ರಚನೆ, ಸರ್ಕಲ್ ನಲ್ಲಿ ಹೈವೋಲ್ಟ್ ಲೈಟ್ ಅಳವಡಿಕೆ, ಹಳೆ ಮಾರಿಗುಡಿ ರಸ್ತೆ ಬಲಿ ಪುಟ್ಪಾತ್ ರಚನೆ, ಕಾಪು ಲಕ್ಷ್ಮೀ ಜನಾರ್ಧನ ಹೋಟೆಲ್ ಬಳಿಯಿಂದ ವಿದ್ಯಾನಿಕೇತನ ಶಾಲಾ ಜಂಕ್ಷನ್ ವರೆಗೆ ಚರಂಡಿ ನಿರ್ಮಾಣ ಸಹಿತ ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟಿಕರಣ ಕಾಮಗಾರಿ ಪ್ರಗತಿಯಲ್ಲಿದೆ.
ರಾಷ್ಟ್ರೀಯ ಹೆದ್ದಾರಿ 66 ರಿಂದ ಕಾಪು ಪೇಟೆಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಗಳ ಅಭಿವೃದ್ಧಿ, ಪೇಟೆಯಲ್ಲಿ ಒಳಚರಂಡಿ ನೀರು ಸರಬರಾಜಿಗೆ ವ್ಯವಸ್ಥೆ, ಪೇಟೆಯುದ್ದಕ್ಕೂ ಪುಟ್ಪಾತ್ ರಚನೆ, ಘನತ್ಯಾಜ್ಯ ನಿವಾರಣೆಗೆ ಯೋಜನೆ, ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯಿಂದ ವಿದ್ಯಾನಿಕೇತನ ಜಂಕ್ಷನ್ ವರೆಗೆ ಮತ್ತು ವೈಶಾಲಿ ಹೋಟೆಲ್ ನಿಂದ ಸರ್ಕಾರಿ ಆಸ್ಪತ್ರೆಯವರೆಗೆ ಮಳೆನೀರು ಹರಿಯುವ ಚರಂಡಿ ರಚನೆ, ಸುಗಮ ಸಂಚಾರ ಮತ್ತು ಸುವ್ಯವಸ್ಥಿತ ಪಾರ್ಕಿಂಗ್ ಗೆ ವ್ಯವಸ್ಥೆ,
ಪೇಟೆಯೊಳಗೆ ಪಬ್ಲಿಕ್ ಟಾಯ್ಲೆಟ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ,
ಸಹಿತವಾಗಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಸಹಿತ ವಿವಿಧ ಮೂಲಭೂತ ಸೌಕರ್ಯಗಳ ಜೋಡಣೆ ಅತಿ ಅಗತ್ಯವಾಗಿದೆ.
ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳೇ ಕಾಪುವಿನ ಅಭಿವೃದ್ಧಿಯ ಮೂಲ ಕೇಂದ್ರಗಳಾಗಿವೆ. ಕಾಪು ಪೇಟೆಯಲ್ಲಿ ಅಭಿವೃದ್ಧಿಗೆ 1990-2000 ನೇ ಇಸವಿಯಲ್ಲಿ ಕಾಪುವಿನಲ್ಲಿ ಅಸ್ತಿತ್ವಕ್ಕೆ ಬಂದ ಕಾಪು ಅಭಿವೃದ್ಧಿ ಸಮಿತಿಯ ಕೊಡುಗೆಯು ಅಪಾರವಾಗಿದೆ.
ಆ ಕಾಲದಲ್ಲಿ ಸಚಿವರಾಗಿದ್ದ ವಸಂತ ವಿ ಸಾಲ್ಯಾನ್ ಅವರ ಇಚ್ಛಾ ಶಕ್ತಿ, ಅವರ ನಂತರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಂದ ಲಾಲಾಜಿ ಆರ್ ಮೆಂಡನ್ ಮತ್ತು ವಿನಯ್ ಕುಮಾರ್ ಸೊರಕೆ, ಮತ್ತೇ ಶಾಸಕರಾಗಿರುವ ಲಾಲಾಜಿ ಆರ್ ಮೆಂಡನ್ ಅವರುಗಳ ಸಹಕಾರದೊಂದಿಗೆ ಕಾಪು ಪೇಟೆಯನ್ನು ಅಭಿವೃದ್ಧಿಯ ಪಥದತ್ತ ಕೊಂಡಯ್ಯಬೇಕೆನ್ನುವುದು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ಮನೋಹರ್ ಅವರ ಇಚ್ಛೆಯಾಗಿದೆ..
ಮಾಹಿತಿ : ರಾಕೇಶ್ ಕುಂಜೂರು (ಕಾಪು ಉದಯವಾಣಿ ವರದಿಗಾರರು)
ನಮ್ಮ ಕಾಪು