ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪ್ರವಾದಿಗಳು ದೇವನ ಆದೇಶದಂತೆ ಬದುಕಿ ತೋರಿಸಿದವರು : ಆಲ್ಬನ್ ರೋಡ್ರಿಗಸ್

Posted On: 12-09-2025 03:01PM

ಕಾಪು : ಪ್ರವಾದಿ ಮುಹಮ್ಮದರು ದೇವನ ವತಿಯಿಂದ ಭೂಮಿಯ ಮೇಲೆ ನಿಯುಕ್ತಿಗೊಂಡ ಪ್ರವಾದಿ. ದೇವನ ಆದೇಶದಂತೆ ಬದುಕಿ ತೋರಿಸಿದವರು. ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಸಮಾಜ ಕೆಟ್ಟು ಹೋದ ಸಂಧರ್ಭದಲ್ಲಿ ಜನ ಕಲ್ಯಾಣಕ್ಕಾಗಿ ದೇವನು ಆಯಾಯ ಕಾಲದಲ್ಲಿ ಮನುಷ್ಯರ ನಡುವಿನಿಂದಲೇ ಪ್ರವಾದಿಗಳನ್ನು ಸೃಷ್ಟಿಸುತ್ತಾನೆ ಎಂದು ಕಾಪು ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ಹೇಳಿದರು. ಅವರು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕಾಪು ತಾಲೂಕು ಘಟಕ ವತಿಯಿಂದ ಹೋಟೆಲ್ ಕೆ. ಒನ್. ನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಪರಿಸ್ಥಿತಿ ಮತ್ತು ಪ್ರವಾದಿ ಸಂದೇಶ ಎಂಬ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಮಾತನಾಡಿ, ಕೋಮುವಾದ ಮತ್ತು ಜಾತಿ ವಾತ್ಸಲ್ಯಕ್ಕೆ ಮಹತ್ವ ನೀಡುವ ಕಾರಣ ಸಮಾಜದಲ್ಲಿ ಮಾನವೀಯತೆ, ಸೌಹಾರ್ದತೆ ಕೆಡುತ್ತದೆ. ಆದ್ದರಿಂದ ನಾವು ಹೃದಯ ವೈಶ್ಯಾಲ್ಯತೆ ಮೆರೆತು ಅನೋನ್ಯತೆಯಿಂದ ಬದುಕಬೇಕು ಎಂದು ತಿಳಿಸಿದರು. ಜಮಾ ಅತೆ ಇಸ್ಲಾಮೀ ಹಿಂದ್ ನ ಮಂಗಳೂರು ವಲಯ ಸಂಚಾಲಕರಾದ ಸಯೀದ್ ಇಸ್ಮಾಯಿಲ್ ರವರು ಮಾತನಾಡಿ, ಪ್ರವಾದಿ ಮುಹಮ್ಮದ್ ಸ. ರವರು ಸಮಾಜದಲ್ಲಿ ಇರುವ ಬಡ್ಡಿ, ವ್ಯಭಿಚಾರ, ಮಧ್ಯಪಾನ, ಜೂಜಾಟ, ಮೋಸ, ವಂಚನೆ, ಅವ್ಯವಹಾರ ಮಿತವಿಲ್ಲದ ಬಹು ಪತ್ನಿತ್ವ ದ ಬಗ್ಗೆ ಕುರ್ ಆನ್ ನ ಆದೇಶದಂತೆ ಯಾವಾಗ ಧ್ವನಿ ಎಬ್ಬಿಸಿದರೋ, ಅಂದಿನಿಂದ ಪ್ರಾಮಾಣಿಕ ಮತ್ತು ಸತ್ಯವಂತ ಎಂಬ ಬಿರುದಾಂಕಿತ ವ್ಯಕ್ತಿಯೆಂದು ನೋಡದೆ ಅರಬರು ಪ್ರವಾದಿಯನ್ನು ಮಕ್ಕಾ ತೊರೆಯುವಂತೆ ಮಾಡುತ್ತಾರೆ. ಆದರೆ ಅದೇ ಪ್ರವಾದಿ, ಜನರೊಂದಿಗೆ ಉತ್ತಮವಾಗಿ ವರ್ತಿಸಲು, ಮರ್ದಿತರಿಗೆ ನೆರವಾಗಲು, ವಿಧವೆಯರಿಗೆ ಆಶ್ರಯ ನೀಡಲು, ಜನರೊಂದಿಗೆ ಕರುಣೆ ತೋರಲು, ಮುಗುಳು ನಗೆಯೊಂದಿಗೆ ವರ್ತಿಸಲು , ಜನರೊಂದಿಗೆ ನ್ಯಾಯ ಪಾಲಿಸಲು ಬೋಧಿಸುತಿದ್ದರು. ಅವರು ಕೆಟ್ಟು ಹೋಗಿದ್ದ ಅರಬ್ ರಾಷ್ಟ್ರದಲ್ಲಿ 23 ವರ್ಷಗಳಷ್ಟು ಕಾಲ ಸದ್ಬೋಧನೆ ಮಾಡುತ್ತಾ, ಕೆಡುಕುಗಳನ್ನು ಒಳಿತುಗಳ ಮೂಲಕ ದೂರಿಕರಿಸುತ್ತಾ, ನ್ಯಾಯ ಪಾಲಿಸುತ್ತಾ, ಅನೋನ್ಯತೆಯಿಂದ, ಸಹೋದರತೆಯಿಂದ, ಸೌಹಾರ್ದಾತೆಯಿಂದ ಕೂಡಿದ ಸಮಾಜವನ್ನು ಕಟ್ಟುತ್ತಾರೆ. ಅವರ ಬೋಧನೆಯನ್ನು ಇಂದೂ ಜನರು ಪಾಲಿಸಿ ಅನುಸರಿಸಿದರೆ ನಮ್ಮಲ್ಲಿಯೂ ಕೂಡಾ ಅಂತಹ ವಾತಾವರಣವನ್ನು ನಿರ್ಮಿಸಬಹುದು ಎಂದು ಹೇಳಿದರು.

ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಮುಹಮ್ಮದ್ ಮೌಲಾರವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಂತಿ ಪ್ರಕಾಶನ ಮಂಗಳೂರು ಪ್ರಕಟಿಸಿದ ಪತ್ರಕರ್ತ ಅಬ್ದುಸ್ಸಲಾಮ್ ಪುತ್ತಿಗೆ ಬರೆದ ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ (ಸ) ಆದರ್ಶದ ಔಚಿತ್ಯ ಮತ್ತು ಪ್ರವಾದಿ ಮುಹಮ್ಮದರನ್ನು (ಸ) ಅರಿಯಿರಿ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷರು ಜನಾಬ್ ಶಭಿಹ್ ಅಹಮದ್ ಕಾಝಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಫರೀದ್ ಉಪಸ್ಥಿತರಿದ್ದರು. ಕಾರ್ಯಕ್ರಮವು ಮಾಸ್ಟರ್ ಮುಹಮ್ಮದ್ ರಾಯಿಫ್ ರವರ ಕುರ್ ಆನ್ ಪಠನದೊಂದಿಗೆ ಪ್ರಾರಂಭವಾಯಿತು. ಕಾಪು ತಾಲೂಕು ಘಟಕದ ಅಧ್ಯಕ್ಷರಾದ ನಸೀರ್ ಅಹಮದ್ ರವರು ಸ್ವಾಗತಿಸಿದರು. ಒಕ್ಕೂಟದ ಜಿಲ್ಲಾ ಸಮಿತಿಯ ಸದಸ್ಯರು ಅನ್ವರ್ ಅಲಿ ಕಾಪು ಪ್ರಸ್ತಾವನೆಗೈದರು. ಕೋಶಾಧಿಕಾರಿ ಬಿ. ಎಂ. ಮೊಯಿದಿನ್ ವಂದಿಸಿ, ತಾಲೂಕು ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ರವರು ಕಾರ್ಯಕ್ರಮ ನಿರೂಪಿಸಿದರು.