ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸೆ. 22 - ಅ. 2 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ - 2025

Posted On: 20-09-2025 09:48AM

ಕಾಪು : ಇಲ್ಲಿನ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಸೆ.22 ರಿಂದ ಅ.2ರವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವವು 11 ದಿನಗಳ ಪರ್ಯಂತ ಅಮ್ಮನ ಸನ್ನಿಧಾನದಲ್ಲಿ ಮಾರಿಗುಡಿಯ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ಜ್ಯೋತಿಷ್ಯ ವಿದ್ವಾನ್ ಶ್ರೀ ಕೆ.ಪಿ. ಕುಮಾರಗುರು ತಂತ್ರಿಗಳ ಹಾಗೂ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಇವರ ಸಹಯೋಗದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾಹಿತಿ ನೀಡಿದರು. ಕಾಪುವಿನ ಹೊಸ ಮಾರಿಗುಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸೆಪ್ಟೆಂಬರ್ 22ರಂದು ಬೆಳಿಗ್ಗೆ 8:30ಕ್ಕೆ ಸರಿಯಾಗಿ ಶರನ್ನವರಾತ್ರಿ ಮಹೋತ್ಸವದ ಉದ್ಘಾಟನೆಯನ್ನು 9 ಜನ ಗಣ್ಯ ಮಹಿಳೆಯರು ಮಾಡಲಿದ್ದಾರೆ. ಕಾಪು ಕ್ಷೇತ್ರ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಭಕ್ತರು ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಎಲ್ಲೆಡೆಯೂ 9 ದೀಪಗಳನ್ನು ಬೆಳಗುವ ಬಗ್ಗೆ ಕಾಪುವಿನ ಅಮ್ಮನ ಸಾನಿಧ್ಯ ಬೆಳಗಿದೆ. ಹಾಗಾಗಿ ಈ ಬಾರಿಯ ನವರಾತ್ರಿಯಲ್ಲಿ 9 ದೀಪಗಳನ್ನು ಬೆಳಗಿ ಉದ್ಘಾಟನೆ ನೆರವೇರಿಸಲಾಗುವುದು. ಬೆಳಿಗ್ಗೆ 10.00 ರಿಂದ ಶ್ರೀದೇವಿಗೆ ಹರಕೆಯಾಗಿ ಬಂದಿರುವ ಸೀರೆಗಳನ್ನು ದೇವಳದ ಪ್ರಾಂಗಣದಲ್ಲಿ ಏಲಂ ಮಾಡಲಾಗುವುದು.

ಅಕ್ಟೋಬರ್ 1ರಂದು ಬೆಳಿಗ್ಗೆ 08:00 ಗಂಟೆಯಿಂದ ನವದುರ್ಗಾ ಲೇಖನ ಸಂಕಲ್ಪ, ಪುಸ್ತಕಸ್ಥ ವಾಗ್ಗೇವತಾಪೂಜನಮ್ ನಡೆಯಲಿದ್ದು, ಈಗಾಗಲೇ ಪುಸ್ತಕ ಬರೆದವರು ಈ ಪೂಜೆಯಲ್ಲಿ ಭಾಗಿಯಾಗಬೇಕೆಂದು ನವದುರ್ಗಾ ಲೇಖನ ಯಜ್ಞ ಸಮಿತಿ ತಿಳಿಸಿದೆ. ಅದೇ ದಿನ ಸಂಜೆ 05:30 ರಿಂದ ಶ್ರೀದೇವೀ ದುರ್ಗಾ ನಮಸ್ಕಾರ ಪೂಜಾ ನಡೆಯಲಿದೆ. ಭಾಗಿಯಾಗುವ ಭಕ್ತರು ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯಲ್ಲಿ ಭಾಗಿಯಾಗಬಹುದು. ಪ್ರತಿನಿತ್ಯ ಶ್ರೀದೇವಿಗೆ ಕಟ್ಟೋಕ್ತ ಪೂಜೆ ನಡೆಯಲಿದ್ದು, ಪೂಜಾ ಪ್ರಸಾದ ಸ್ವೀಕರಿಸಲು ಅವಕಾಶವಿದೆ. ಪ್ರತಿದಿನ ಸಂಜೆ ಗಂಟೆ 05:30 ರಿಂದ 07.00 ರವರೆಗೆ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ. ಸಂಜೆ 07:00ರಿಂದ ಸಾಂಸ್ಕೃತಿಕ ವೈಭವದ ಮೆರುಗನ್ನು ನೀಡಲು ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಪ್ರದರ್ಶನ ನಡೆಯಲಿದೆ. ನವರಾತ್ರಿಯ ಎಲ್ಲಾ ದಿನಗಳಲ್ಲೂ ಭಕ್ತರಿಗೆ ಬೆಳಿಗ್ಗೆ ಗಂಟೆ 9:00 ರಿಂದ ಸಂಜೆ ಗಂಟೆ 06.00ರ ವರೆಗೆ ಘಂಟಾನಾದ ಸೇವೆಯನ್ನು ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.

ಭಕ್ತರು ಸನ್ನಿದಾನದಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಉಚ್ಚಂಗಿ ಸಹಿತ ಕಾಪು ಶ್ರೀ ಮಾರಿಯಮ್ಮನ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಹಾಗೂ ಅಭಿವೃದ್ಧಿಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಪರವಾಗಿ ವಾಸುದೇವ ಶೆಟ್ಟಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯರಾದ ಮನೋಹರ ರಾವ್ ಕಲ್ಯ, ಮಾಧವ ಪಾಲನ್, ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್, ಬಾಲಾಜಿ ಯೋಗೀಶ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.