ಕಾಪು : ರಾಣಿ ಅಬ್ಬಕ್ಕನ ಸ್ಮರಣೆ ನಮ್ಮ ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಲಿ - ಸುರೇಶ್ ಶೆಟ್ಟಿ ಗುರ್ಮೆ
Posted On:
21-09-2025 11:44AM
ಕಾಪು : ಆತ್ಮವಿಶ್ವಾಸ ಹೊಂದಿದ್ದರೆ ಅಪರಿಮಿತವಾದದ್ದನ್ನು ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಹೆಮ್ಮೆಯ ಅಬ್ಬಕ್ಕ ರಾಣಿಯೇ ಸಾಕ್ಷಿ. ಇಂತಹ ಸಾಧಕರ ಚರಿತ್ರೆಯು ನಮ್ಮಲ್ಲಿ ಸಂಸ್ಕಾರವನ್ನು ಮೂಡಿಸುತ್ತದೆ. ಸಂಸ್ಕಾರದ ಸ್ಪರ್ಶದಿಂದ ಕಲ್ಲು ದೇವರಾಗಬಹುದು, ಹೆಪ್ಪು ತುಪ್ಪವಾಗಬಹುದು, ಕವಿಮನಸ್ಸು ಕಾಳಿದಾಸನೆನಿಸಬಹುದು. ಆತ್ಮವಿಶ್ವಾಸದೊಂದಿಗಿನ ನಿಮ್ಮ ಪ್ರಯತ್ನವೇ ಇಲ್ಲಿ ಬಹಳ ಮುಖ್ಯವಾದದ್ದು. ರಾಣಿ ಅಬ್ಬಕ್ಕನ ಸ್ಮರಣೆ ನಮ್ಮ ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಲಿ. ನೀವೂ ನಿಮ್ಮ ಬದುಕಿನಲ್ಲಿ ಅಪರಿಮಿತವಾದದನ್ನು ಸಾಧಿಸುವಂತಾಗಲಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಹಾರೈಸಿದರು.
ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಹಾಗೂ ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ರಾಣಿ ಅಬ್ಬಕ್ಕನ ಕುರಿತಾದ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಕಾಂತ್ ಭಟ್ ಮಾತನಾಡಿ ರಾಣಿ ಅಬ್ಬಕ್ಕನ ಚರಿತ್ರೆ ತಮಗೆಲ್ಲರಿಗೂ ಕೂಡ ಅತಿ ಹೆಚ್ಚು ಸ್ಪೂರ್ತಿದಾಯಕವಾದದ್ದು ಯಾಕೆಂದರೆ ಒಂದು ಕಾಲದಲ್ಲಿ ಜಗತ್ತನ್ನು ಆಳಿದ ಅತಿ ದೊಡ್ಡ ಸಾಮ್ರಾಜ್ಯ ಎಂಬ ಖ್ಯಾತಿ ಪಡೆದ ಪೋರ್ಚುಗೀಸರ ಸೈನ್ಯವನ್ನು ಆಕೆ ತನ್ನಲ್ಲಿದ್ದ ಕಚ್ಚಾ ವಸ್ತುಗಳನ್ನೇ ಬಳಸಿಕೊಂಡು ಅತ್ಯಂತ ಚತುರತೆಯಿಂದ ನುಚ್ಚುನೂರಾಗಿಸುವಲ್ಲಿ, ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವಳು. ಅಬ್ಬಕ್ಕನ ಧೀಮಂತ ವ್ಯಕ್ತಿತ್ವ ನಮ್ಮೆಲ್ಲರ ಒಳಗೂ ದೇಶಪ್ರೇಮವನ್ನೂ, ಧೈರ್ಯವನ್ನು ತುಂಬಲಿ. ನಮ್ಮ ಬದುಕಿಗೆ ಪ್ರೇರಣೆ ನೀಡಲಿ ಎಂದು ಅಭಿಪ್ರಾಯಪಟ್ಟರು.
ದಂಡತೀರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನೀಲಾನಂದ ನಾಯ್ಕ್, ಕೆ ಆರ್ ಎಂ ಎಸ್ ಎಸ್ ನ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಮಾಧವ ಎಂ ಕೆ, ಸದಸ್ಯರಾದ ಡಾ| ಶರಣ್ ಶೆಟ್ಟಿ, ದಂಡ ತೀರ್ಥ ಸಮೂಹ ವಿದ್ಯಾರ್ಥಿಗಳ ಆಡಳಿತ ಮಂಡಳಿಯ ಶಿಕ್ಷಣ ಸಂಯೋಜಕರಾದ ಶಿವಣ್ಣ ಉಪಸ್ಥಿತರಿದ್ದರು.
ಡಾ| ಶರಣ್ ಶೆಟ್ಟಿ ಅವರು ಸ್ವಾಗತಿಸಿ, ಸುಮನ ಕಾರ್ಯಕ್ರಮವನ್ನು ನಿರೂಪಿಸಿ, ಶಿವಣ್ಣ ವಂದಿಸಿದರು.