ಇದು ಕಾಪು ಫಿರ್ಕದಲ್ಲಿರುವ ನಮ್ಮೆಲ್ಲರ ಪ್ರೀತಿಯ ಹಳೇ ಬಂಟಕಲ್ಲು. ನನ್ನ ಹುಟ್ಟು ಇಲ್ಲಿಂದ ಎರಡು ಕಿಲೋಮೀಟರು ದೂರದ 92, ಹೆರೂರಿನಲ್ಲಿ ಆಗಿದ್ದರೂ, ಪ್ರಾಥಮಿಕ ಶಿಕ್ಷಣ ಬಂಟಕಲ್ಲಿನ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು. ಹಾಗಾಗಿ ಬಂಟಕಲ್ಲಿಗೂ ನನಗೂ ಅವಿನಾಭಾವ ಸಂಬಂಧವಿದೆ. ಅದರಲ್ಲಿಯೂ ಪೇಟೆಯ ನಡುವೆ ಇದ್ದ ಈ ಹಾಳೆ ಮರ ಅಂದರೆ ನಮಗೆಲ್ಲರಿಗೂ ಪಂಚ ಪ್ರಾಣ. ನಾನು ಬಹಳ ಚಿಕ್ಕವನಿದ್ದಾಗ ಉಡುಪಿಯಿಂದ ಮಂಚಕಲ್ಲಿಗೆ ಎರಡು ಬಸ್ಸುಗಳು ಬರುತ್ತಿದ್ದವು. ಒಂದು ‘’ಮರವೂರು’’ ಮತ್ತೊಂದು ‘’ಹನುಮಾನ್’’. ಇವೆರಡೂ ಇದೇ ಮರದ ಅಡಿಯಲ್ಲಿ ತಂಗುತ್ತಿದ್ದವು. ಹಾಗಾಗಿ ಬಂಟಕಲ್ಲಿನ ಮೊದಲ ಬಸ್ ತಂಗುದಾಣ ಇದೆ ಮರ ಎಂದು ಗುರುತಿಸಲಾಗುತ್ತಿತ್ತು. ಮಳೆಗಾಲ ಬರುವ ಹೊತ್ತಿಗೆ ದೂರದ ಊರಿಂದ ಕೊರಂಬು (ಗೊರಬು), ಕನ್ನಡಿ ಪುಡಾಯಿ (ಗೊಬ್ಬರ ಹೊರುವ ಬುಟ್ಟಿ), ತತ್ರ (ತಾಳೆ ಮರದ ಗರಿಯಿಂದ ತಯಾರಿಸಿದ ಕೊಡೆ) ಇತ್ಯಾದಿ ತಂದು ಮಾರಾಟ ಮಾಡುತ್ತಿದ್ದರು. ಮೇ ತಿಂಗಳಲ್ಲಿ ಹತ್ತಿರದ ಕುರ್ಕಾಲು ಗ್ರಾಮದಿಂದ ಗೆಣಸು ತುಂಬಿದ ಗೋಣಿ ಚೀಲಗಳ ಮೂಟೆಗಳನ್ನೂ ಇಲ್ಲಿ ಕಾಣಬಹುದಾಗಿತ್ತು. ಒಂದುರೀತಿಯಲಿ ಹೇಳುವುದಾದರೆ ಸೋಮವಾರ ಇದರಡಿಯಲ್ಲಿ ಒಂದು ಚಿಕ್ಕ ಸಂತೆ ನಡೆಯುತ್ತಿತ್ತು. ತಾಮ್ರದ ಕೊಡಪಾನ ರೆಪೇರಿ ಮತ್ತು ಕಲಾಯಿ ಹಾಕುವ ಕಟಪಾಡಿಯ ಹಾಜಬ್ಬನವರ ವರ್ಕಶಾಪ್ ಇದ್ದುದು ಇದೇ ಮರದಡಿ. ಬಸ್ಸುಗಳು ಹೆಚ್ಚಾಗುತ್ತಿದ್ದಂತೆ ಬಸ್ಸು ನಿಲ್ದಾಣವನ್ನು ಈ ಮರದಡಿಯಿಂದ ಈಗಿನ ಹೊಸ ತಂಗುದಾಣಕ್ಕೆ ಎತ್ತಂಗಡಿ ಮಾಡಲಾಯ್ತು. ಇದು ಹಕ್ಕಿಗಳಿಗೆ ವರದಾನವಾಯ್ತು. ಮರತುಂಬಾ ಹಕ್ಕಿಗಳ ಕಲರವ ನೋಡುವುದೇ ಚೆಂದ. ಆ ಕಾಲದಲ್ಲಿ ಈಗಿನ ಹಾಗೆ ಕೃಷಿಗೆ ವಿಷ ಹಾಕುತ್ತಿರಲಿಲ್ಲ ಹಾಗಾಗಿ ಬಣ್ಣ ಬಣ್ಣದ ಹಕ್ಕಿಗಳು ಎಲ್ಲಾ ಕಡೆ ಹಳ್ಳಿಗಳಲ್ಲಿ ಕಾಣಸಿಗುತ್ತಿದ್ದವು. ಹೂ ಬಿಟ್ಟಾಗಂತೂ ಮರತುಂಬ ಜೇನುನೊಣಗಳು ಮುತ್ತಿ ಬಿಡುತ್ತಿದ್ದವು. ಮದುವಣಗಿತ್ತಿ ಶೃಂಗರಿಸಿ ನಿಂತಂತೆ ಇಡೀ ಮರ ಹೂಬಿಟ್ಟು ನಿಂತಾಗ ನೋಡುವುದೇ ಚೆಂದ.
ಮದ್ದಿನ ಗುಣ:
ತುಳುನಾಡಿನಲ್ಲಿ, ಆಷಾಢ ಅಮವಾಸ್ಯೆಯ ದಿನ ಮುಂಜಾನೆ ಸೂರ್ಯ ಉದಯಿಸುವ ಮುನ್ನವೇಈ ಹಾಳೆ ಮರದ ಬಳಿಗೆ ತೆರಳಿ ಮೊಣಚಾದ ಕಲ್ಲಿನಿಂದ ಹಾಳೆಮರದ ತೊಗಟೆಯನ್ನು ತೆಗೆದು ಅದನ್ನು ಮನೆಗೆ ತಂದು ಚೆನ್ನಾಗಿ ಅರೆದು, ನಂತರ ಕುದಿಸಿ, ಕಾಳುಮೆನಸು, ಬೆಳ್ಳುಳ್ಳಿ ಹಾಕಿ, ನಂತರ ಚೆನ್ನಾಗಿ ಬೆಂಕಿಯಿಂದ ಕಾಯಿಸಿದ ಬಿಳಿಕಲ್ಲನ್ನು ಆ ಕಷಾಯಕ್ಕೆ ಹಾಕಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲಾರೂ ಈ ಕಷಾಯ ಕುಡಿಯಿವ ಪದ್ಧತಿ ಇದೆ. ಒಂದು ವೇಳೆ ಯಾವುದಾದರೂ ವಿಷಕಾರಿ ಅಂಶಗಳು ಅದರಲ್ಲಿ ಸೇರಿದ್ದರೆ ಕಾಯಿಸಿದ ಕಲ್ಲು ಅದನ್ನು ಹೀರುತ್ತದೆ ಎಂಬ ನಂಬಿಕೆ. ಅಮವಾಸ್ಯೆಯ ದಿನವೇ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಎಂಬ ನಿಯಮವಿದೆ. ಇದು ಅತ್ಯಂತ ಕಹಿಯಾಗಿರುವುದರಿಂದ ಇದನ್ನು ಕುಡಿದ ನಂತರ ಮೆಂತೆ ಗಂಜಿ, ಗೋಡಂಬಿ ಬೀಜ ಹಾಗೂ ಬೆಲ್ಲವನ್ನು ಸೇವಿಸುವುದು ವಾಡಿಕೆಯಾಗಿದೆ. ಹೀಗೆ ಸೇವಿಸಿದ್ದಲ್ಲಿ ವರ್ಷಪೂರ್ತಿ ನಾವು ಆರೋಗ್ಯವಂತರಾಗಿರುತ್ತೇವೆ ಎಂಬುವುದು ಹಾಗೂ ಮಾರಕ ಖಾಯಿಲೆಯಿಂದ ತಪ್ಪಿಸಿಕೊಳ್ಳಬಹುದು ಎಂಬುವುದು ಹಿಂದಿನ ಕಾಲದಿಂದಲೂ ಹೇಳಿಕೊಂಡು ಬಂದ ಹಾಗೂ ಆಚರಿಸಿಕೊಂಡು ಬಂದ ನಂಬಿಕೆಇದೆ. ಹಾಗಾಗಿ ಯಾವುದೇ ಹೊಸ ವೈರಸ್ ತುಳುವರಿಗೆ ತಟ್ಟುವುದು ಕಡಿಮೆ.
ಈ ಮರದಲ್ಲಿ ಫ್ಲಾವನೈಟ್, ನೈಸರ್ಗಿಕ ಸ್ಟೀರಾಯ್ಡ್, ಟರ್ಫೆನೈಟ್ಸ್ ಎಂಬ ಅಂಶ ಆಷಾಢ ಅಮವಾಸ್ಯೆಯ ದಿನ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಧರ್ಮಸ್ಥಳ ಆಯುರ್ವೇದ ಸಂಶೋಧನಾ ಕೇಂದ್ರ ತಿಳಿದಿದೆ. ಹಾಳೆ ಮಾರಕ್ಕೆ ಆಯುರ್ವೇದದಲ್ಲಿ “ಸಪ್ತಪರಣಿ” ಎಂದು ಕರೆಯುತ್ತಾರೆ. ಇದರ ಒಂದು ತೊಟ್ಟಿನಲ್ಲಿ ಏಳು ಎಲೆಗಳು ಇರುವ ಕಾರಣ ಇದಕ್ಕೆ ಸಪ್ತಪರಣಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಈ ಮರದ ತೊಗಟೆಯ ಕಷಾಯವನ್ನು ಅಮವಾಸ್ಯೆಯ ದಿನ ಸ್ವೀಕರಿಸಿದರೆ ಅದಕ್ಕೆ ಜ್ವರ, ಕ್ಯಾನ್ಸರ್ ಸಹಿತ ಮಾರಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ.
ವಿಹಂಗಮ ನೋಟ:
ನಾನು ಪ್ರಕೃತಿ ಪ್ರಿಯ. ನೋಡುವ ಕಣ್ಣುಗಳು, ಗ್ರಹಿಸುವ ಬುದ್ದಿ ಶಕ್ತಿ ಇದ್ದರೆ ನಮ್ಮ ಮನ:ಪಟಲದಲ್ಲಿ ಕಾಲ ಕಾಲಕ್ಕೆ ಪ್ರಕೃತಿ ವೀಕ್ಷಣೆಯಿಂದ ವಿಭಿನ್ನ ಚಿತ್ರಣಗಳನ್ನು ಗ್ರಹಿಸಬಹುದು. ಈ ಮರವನ್ನು ನಾನು ಎಲ್ಲಾ ದಿಕ್ಕುಗಳಿಂದ ಹಾಗೂ ಎಲ್ಲಾ ಕೋನಗಳಿಂದ ಬೇರೆ ಬೇರೆ ಸಮಯದಲ್ಲಿ ವೀಕ್ಷಿಸಿದ್ದೇನೆ. ಆಗ ಕಾಣುತ್ತಿದ್ದ ಅದ್ಭುತ ಚಿತ್ರಣ ಅದು ವಿವರಿಸಲಾಗದ ಮಾತು. ಈಗ ಈ ಮರವಿಲ್ಲ. ಅಭಿವೃದ್ದಿ ನೆಪದಿಂದ ಸಂಹಾರ ಮಾಡಲಾಗಿದೆ. ಆದರೂ ನನ್ನ ಸ್ಮೃತಿಪಟಲದಲ್ಲಿ ನಾನು ನೋಡಿದ ಚಿತ್ರಣ ಇನ್ನೂ ಹಸನಾಗಿದೆ.
ಪೇಟೆಯ ಪಡುವಣ ಭಾಗದಲ್ಲಿದ್ದ ಈ ಮರವನ್ನು ದಿನಾಲೂ ಮುಂಜಾನೆ ಸೂರ್ಯೋದಯದ ವೇಳೆ ನೋಡಿದ್ದೇನೆ. ಹೊತ್ತು ನಿಧಾನವಾಗಿ ಮೇಲೇರುತ್ತಿದ್ದಂತೆ ಆ ಮರ ಒಮ್ಮೆಲೇ ಹೊಂಬಣ್ಣ ತಾಳುತ್ತಿತ್ತು. ಎಲೆಗಳು ಜೀವಂತಿಕೆಯಿಂದ ತುಂಬಿತುಳುಕುತ್ತಿತ್ತು. ನೋಡುನೋಡುತ್ತಿದ್ದಂತೆ ಆ ಮರದ ಆಪೂರ್ವ ಸೌಂದರ್ಯ ಸುತ್ತಮುತ್ತಲಿನ ಪ್ರದೇಶದ ಮೇಲೆಲ್ಲ ಹಬ್ಬಿಕೊಳ್ಳುತ್ತಿತ್ತು. ಹೊತ್ತು ಇನ್ನೂ ಮೇಲಕ್ಕೇರಿದಾಗ ಮರದ ಎಲೆಗಳು ಗಾಳಿಗೆ ಶಬ್ದ ಮಾಡುತ್ತ ಕುಣಿಯಲು ಆರಂಭಿಸುತ್ತಿದ್ದವು. ಪ್ರತಿಕ್ಷಣವೂ ಆ ಮರ ಹೊಸ ಹೊಸ ರೂಪ ತಾಳುವಂತೆ ಭಾಸವಾಗುತ್ತಿತ್ತು. ಸೂರ್ಯೋದಯದ ಮೊದಲು ಆ ಮರ ಕಪ್ಪು ರಾಶಿಯ ವೈಭವದಂತೆ, ಸ್ತಬ್ದವಾಗಿ ಮಂಕು ಕವಿದಂತೆ ನಮ್ಮಿಂದೆಲ್ಲ ದೂರ ಒಂಟಿಯಾಗಿ ನಿಂತಂತೆ ಕಂಡರೆ, ಬೆಳಕು ಹರಿದಂತೆ ಎಲೆಗಳು, ಬೆಳಕಿನ ಜತೆ ಆಡುತ್ತಾ ಸಂಪೂರ್ಣ ಹೊಸ ಅನುಭವ ಕೊಡುತ್ತಿತ್ತು. ಹೊತ್ತು ನೆತ್ತಿಗೇರುತ್ತಿದ್ದಂತೆ ಆ ಮರದ ನೆರಳು ದಟ್ಟವಾಗಿ, ಅದರಡಿಯಲ್ಲಿ ಕೂತು ನೀನು ಉರಿ ಬಿಸಿಲಿನ ಝಳದಿಂದ ರಕ್ಷಣೆ ಪಡೆಯುತ್ತಿಯಾ ಅಂತ ಕೇಳುತ್ತಿತ್ತು. ಸಂಜೆಯಾದಂತೆ ಹೊತ್ತು ಕಂತುವ ಸಮಯದಲ್ಲಿ ಪಶ್ಚಿಮದ ದಿಗಂತವೂ ಕೆಂಪು, ಹಳದಿ, ಹಸುರು ಬಣ್ಣಗಳಿಂದ ಕಂಗೊಳಿಸುತ್ತಿರುವಂತೆಯೇ ಆ ಮರ ಕಪ್ಪಾಗುತ್ತಾ ಮಬ್ಬಾಗುತ್ತಿತ್ತು. ತನ್ನೊಳಗೆ ತಾನು ನಿಧಾನವಾಗಿ ಮುಚ್ಚಿಕೊಳ್ಳುತ್ತಾ ಪ್ರಶಾಂತವಾಗಿ, ರಾತ್ರಿಯ ವಿಶ್ರಾಂತಿಗೆ ತಯಾರಾಗುತ್ತಿದ್ದಂತೆ ಕಾಣುತ್ತಿತ್ತು. ಈಗ ಈ ಮರ ನೆನಪು ಮಾತ್ರ.
ಶ್ರೀನಿವಾಸ್ ಪಭು.
‘’ಸ್ಪೂರ್ತಿ’’ ಬಂಟಕಲ್ಲು.
92, ಹೇರೂರು. ಉಡುಪಿ.
shrinitech@gmail.com