ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತುಳುವಿನಲ್ಲಿ ಗುಡ್ಡೆಡ್ ಇತ್ತಿನಾರ್ ಎಂದು ಕರೆಯಲ್ಪಡುವ ಉಚ್ಚಿಲ ಶ್ರೀ ಮಹಾಲಿಂಗೇಶ್ವರ

Posted On: 05-03-2020 04:59PM

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕ್ಷೇತ್ರ ಪರಿಚಯ. ಪಡ್ಡಾಯಿ ಮುಕುಡ್ದ್ ಕುಲ್ದಿನಾರ್, ಗುಡ್ಡೆಡಿತ್ತಿನಾರ್, ಒಡೆಯ, ಉಲ್ಲಾಯ, ಈಶ್ವರ ದೇವೆರ್ ಹೀಗೆ ನಾನಾ ಹೆಸರಿನಿಂದ ಕರೆಸಿಕೊಂಡು. ಸಂಸ್ಕೃತಿ ಸಮ್ಮಿಲನಗಳ ಪ್ರತಿಕವಾಗಿಯೂ. ಸಾಂಸ್ಕೃತಿಕ ಸುಗಮ ಸಮಾಗಮದ ದ್ಯೋತಕವಾಗಿಯೂ. ಈಶ್ವರ ದೇವರು ನೆಲೆನಿಂತದ್ದು ಉಚ್ಚಿಲ ಶ್ರೀ ಮಹಾಲಿಂಗೇಶ್ವರನಾಗಿ. ಕ್ಷೇತ್ರದಲ್ಲಿ ಗಣಪತಿ ಜೊತೆಯಾಗಿರುವುದರಿಂದ ಇದು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಾಗಿದೆ. ಇದು ಕರಾವಳಿ ಕಡಲ ಕಿನಾರೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಸ್ಥಳನಾಮ : ಉಚ್ಚಿಲ ಎಂಬುದು ಗ್ರಾಮದ ಹೆಸರಲ್ಲ. ಅದು ಒಂದು ನಿರ್ದಿಷ್ಟವಾದ ಸ್ಥಳನಾಮ. ಎತ್ತರದ ಭೂಪ್ರದೇಶ, ಉನ್ನತ, ಶ್ರೇಷ್ಠ, ಗಂಭೀರವಾದ ಇಲ ಎಂದರೆ ಸ್ಥಳವಾಗಿದ್ದು ಉಚ್ಚಿಲವಾಯಿತು. ಉಚ್ಚ ಶಿಲೆಯೇ ಉಚ್ಚಿಲವಾಯಿತು. ಉಚ್ಚ ಊರ್ದ್ವ ಎಂಬ ಸಂಸ್ಕೃತ ಶಬ್ದದಿಂದ ಉಚ್ಚಿಲ ಎಂಬುವುದು ಪೂರಕವಾದ ನಿರೂಪಣೆ. ಉಚ್ಚಯ (ಉತ್ಸವ) ನಡೆಯುವ ಸ್ಥಳವಾಗಿ ಉಚ್ಚಿಲ ಎಂಬುದು ಇನ್ನೊಂದು ಆಯಾಮದ ಚಿಂತನೆ ಒಟ್ಟಿನಲ್ಲಿ ಎತ್ತರದಿಂದ, ಶ್ರೇಷ್ಠತೆಯಿಂದ ಉಚ್ಚ ಶಬ್ದವು ಮೂಲವಾಗಿ ಈ ನೆಲೆಯೇ ಉಚ್ಚಿಲವೆಂದು ನಿರ್ಧರಿಸಬಹುದು. ಪುರಾಣ : ಖರಸುರನು ತಲೆಯಲ್ಲಿ ಮತ್ತು ಉಭಯ ಕೈಗಳಲ್ಲಿ ಹೊತ್ತು ತಂದು ಸ್ಥಾಪಿಸಿದ ಶಿವಲಿಂಗಗಳಲ್ಲಿ ಉಚ್ಚಿಲದ ಮಹಾಲಿಂಗೇಶ್ವರ ಲಿಂಗವು ಒಂದು ಎಂಬುದು ಒಂದು ಪುರಾಣದ ಕಥೆ ಪ್ರಚಲಿತವಿದೆ. (ಖರಸುರ ಮೂರು ಲಿಂಗಗಳನ್ನು ತನ್ನ ಎರಡು ಕೈಯಲ್ಲಿ ಮತ್ತು ಒಂದನ್ನು ತನ್ನ ತಲೆಯಲ್ಲಿ ಹೊತ್ತು ತಂದಿದ್ದನು ಒಂದನ್ನು ಕಾಪುವಿನ ಉಚ್ಚಿಲ ಮತ್ತು ಒಂದನ್ನು ಸುರತ್ಕಲ್ಲಿನಲಿ ಹಾಗೂ ಇನ್ನೊಂದನ್ನು ಸೋಮೇಶ್ವರ ಉಚ್ಚಿಲ ಇಲ್ಲಿ ಪ್ರತಿಷ್ಠಾಪಿಸಿದನು. ಕಾಪು ಉಚ್ಚಿಲದಿಂದ ಮತ್ತು ಸೋಮೇಶ್ವರ ಉಚ್ಚಿಲದಿಂದ ಸುರತ್ಕಲ್ ದೇವಸ್ಥಾನಕ್ಕೆ ಇರುವ ಅಂತರ ಒಂದೆ ಆಗಿದೆ) ಸ್ಕಂದ ಪುರಾಣದ ಸಹ್ಯಾದ್ರಿ ಕಾಂಡದಲ್ಲಿ ಬರುವ ಖರ ಮತ್ತು ರಟ್ಟರೆಂಬ ಸಹೋದರರಿಬ್ಬರು ಮಹಾಶಿವನ ಭಕ್ತರಾಗಿದ್ದು. ಕರಾವಳಿಯುದ್ದಕ್ಕೂ ಹಲವು ಶಿವಾಲಯಗಳನ್ನು ಸ್ಥಾಪಿಸಿದರು ಎಂಬ ಉಲ್ಲೇಖ ''ಖರಪ್ರತಿಷ್ಠೆ'' ಎಂಬ ಜನಜನಿತವಾದ ಒಡಂಬಡಿಕೆಗೆ ಪ್ರಾಶಸ್ತ್ಯ ಒದಗುತ್ತದೆ. (ದೇವಸ್ಥಾನದ ನಂದಿಯು ಮೇಯುತ್ತಾ ಕಾರ್ಕಳದ ಕಡೆಗೆ ಹೋದಾಗ ಅದನ್ನು ಅಲ್ಲಿಯ ಜನರು ಹೊಡೆದೋಡಿಸಿದರು ಆಗ ನಂದಿಯು ಬಂದು ಶಿವನ ಗುಡಿಯ ಹಿಂಭಾಗದಲ್ಲಿ ಅಳುತ್ತ ಕುಳಿತಿರುತ್ತದೆ. ಇದನ್ನು ಗಮನಿಸಿದ ಶಿವನು ಪೂರ್ವಬಿಮುಖವಾಗಿ ಇದ್ದವನು ಪಶ್ಚಿಮಾಭಿಮುಖವಾಗುತ್ತಾನೆ ಇದನ್ನು ಕಂಡ ಸಮುದ್ರ ಅಲೆಗಳೇ ಹಿಂದೆ ಸರಿದಿದ್ದವು) ಇತಿಹಾಸ : ಪಶ್ಚಿಮಾಭಿಮುಖವಾಗಿರುವ ಶ್ರೀ ಮಹಾಲಿಂಗೇಶ್ವರ ದೇವಳದ ಗರ್ಭಗುಡಿಯ ರಚನಾಶೈಲಿ, ಮಹಾಲಿಂಗ ಹಾಗು ಪಾಣಿಪೀಠ ಆನೆಕಲ್ಲುಗಳ ನಿರ್ಮಾಣದ ವಿಧಾನವನ್ನು ಗಮನಿಸಿರುವ ಖ್ಯಾತ ಇತಿಹಾಸ ತಜ್ಞ ದಿ! ಡಾ ಗುರುರಾಜ್ ಭಟ್ ಇವರು ದೇವಳವು ಸುಮಾರು ಕ್ರಿ.ಶ. 9, 10 ನೇ ಶತಮಾನದ ನಿರ್ಮಿತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ತೀರ್ಥಮಂಟಪ (ನಂದಿಮಂಟಪ) ದಲ್ಲಿರುವ ಆಕರ್ಷಕ ನಂದಿಯ ವಿಗ್ರಹವು ಗಮನ ಸೆಳೆಯುತ್ತದೆ. ಕುಳಿತ ಭಂಗಿಯು ವಿಧೇಯತೆಯನ್ನು ತೋರಿಸುತ್ತದೆ. ಕನಿಷ್ಠ ಆಭರಣಗಳಿವೆ ಆದುದರಿಂದ ಇದರ ನಿರ್ಮಾಣ ಕಾಲವು ಕ್ರಿ.ಶ. 9, 10 ಶತಮಾನದ್ದು ಎಂದು ನಿರ್ಧರಿಸುವ ಡಾ ಗುರುರಾಜ ಭಟ್ಟರು ದೇವಾಲಯ ನಿರ್ಮಾಣವನ್ನು ಈ ನಂದಿಯ ಪ್ರತಿಮೆಯ ಆಧಾರದಲ್ಲಿ ದೃಡೀಕರಿಸುತ್ತಾರೆ. ಉಪಸ್ಥಾನ, ಪರಿವಾರ : ಉಪಸ್ಥಾನ ಮಹಾಗಣಪತಿ ದೇವರ ಬಿಂಬವು ಚತುರ್ಬಹುವಾಗಿದೆ. ಪರಶು ದಂತ ಪಾಶ ಅಂಕುಶ ಆಯುದ್ದಗಳನ್ನು ಧರಿಸದೇ. ಪಟ್ಟಿಯಂತಹ ಪ್ರಭಾವಳಿಯನ್ನು ಹೊಂದಿದೆ. ಜಟಾಮುಕುಟ ಮತ್ತು ಉದರಬಂಧದಿಂದ ಅಲಂಕರಿಸಲ್ಪಟ್ಟಿದೆ. ಪ್ರಾಚೀನತೆ ಸುಮಾರು ಕ್ರಿ.ಶ. 9-12 ಶತಮಾನದ ಅವಧಿಯದ್ದಾಗಿದೆ. ಈ ಕಾಲನಿರ್ಣಯಗಳನ್ನು ದೇವಸ್ಥಾನಕ್ಕೆ ಒದಗಿಸುವ ಐತಿಹಾಸಿಕ ಹಿನ್ನೆಲೆಯಾಗಿ ಪರಿಗ್ರಹಿಸಬಹುದು. ಗರ್ಭಗುಡಿಯು ದೀರ್ಘ ಚತುರಸ್ರ ಆಕಾರದ್ದಾಗಿದೆ. ದ್ವಿತಳದ ರಚನೆ, ಷಡ್ವರ್ಗ ಕ್ರಮದಲ್ಲಿದೆ. ತಾಮ್ರದಿಂದ ಅಚ್ಚದಿರವಾಗಿದೆ. ಸುತ್ತು ಪೌಳಿ, ಸರಳ ರಚನೆ, ಪ್ರದಾನ ಬಲಪೀಠ ಮತ್ತು ದ್ವಜಸ್ಥಂಭಗಳಿದ್ದು. ಆಗಮೋಕ್ತ ದೇವಾಲಯದ ಸರ್ವ ಅಂಗಗಳನ್ನು ಹೊಂದಿ ಬೃಹತ್ ದೇವಾಲಯ ಸಂಕೀರ್ಣವಾಗಿದೆ. ಅಗ್ರಸಭೆಯ ಕಲ್ಪನೆಯು ನಿಚ್ಚಳವಾಗಿದೆ. ಪರಿವಾರವಾಗಿ ರಕ್ತೇಶ್ವರಿ ಸನ್ನಿದಾನವು ದೇವಳದ ಉತ್ತರದ ಹೊರ ಸುತ್ತಿನಲ್ಲಿದೆ. ನಾಗದೇವರ ಸಂಕಲ್ಪವು ಈಶಾನ್ಯದಲ್ಲಿದೆ. ಉತ್ತರ ಬದಿಯಲ್ಲಿ ಸ್ವಲ್ಪ ಕೆಳಮಟ್ಟದಲ್ಲಿ ದೇವಳದ ಸರೋವರವಿದೆ. ಓಲಗ ಮತ್ತು ಮುಖಮಂಟಪವು ಪೂರ್ವದಲ್ಲಿದೆ. ಇದನ್ನು ಆಧರಿಸಿ ದೇವಾಲಯದ ದಿಕ್ಕು ಬದಲಾಗಿದೆ ಎಂಬ ಒಂದು ಸಣ್ಣ ಊಹೆಗೆ ಅವಕಾಶವಿದೆ. ಪೂರಕ ದಂತಕಥೆಯು ಇದೆ. ದೇವಳದ ಮುಂಭಾಗದಲ್ಲಿ ನಿಂತು ನೋಡಿದರೆ ದೇವಳವು ಎತ್ತರದ ಪ್ರದೇಶದಲ್ಲಿದೆ. ಕೆಳಗೆ ಸಮುದ್ರ ಇದ್ದಿರಬಹುದಾದ (ಸಮುದ್ರ ಇಲ್ಲಿಯವರೆಗೆ ಇದ್ದ) ನೋಟವು ದೊರೆಯುತ್ತಿದೆ. ಬೌಗೋಳಿಕ ಸ್ವರೂಪ ಪರಿವರ್ತನೆಯಂತಹ ಸಹಜ ಸ್ವರೂಪ ಪರಿವರ್ತನೆ ನಡೆದಿರುವ ಸಾಧ್ಯತೆ ಇದೆ. ಉಚ್ಚಿಲ ಮಹಾಲಿಂಗೇಶ್ವರ ದೇವಳದ ವಿಶೇಷತೆಗಳು (ಮಕರ ಸಂಕ್ರಾಂತಿ ದಿನದಂದು ಸೂರ್ಯನ ಕಿರಣ ನಂದಿಗೋಣನ ಎರಡು ಕೊಂಬುಗಳ ನಡುವೆ ಹಾದು ಹೋಗಿ ಈಶ್ವರ ದೇವರ ಮುಖಕ್ಕೆ ಬೀಳುತ್ತದೆ) ಹೆಸರಿನಂತೆ ಮಹಾಲಿಂಗವು ಮೂಲಸ್ಥಾನ ಸನ್ನಿಧಾನವಾಗಿದೆ ನಿಂತು ಪೂಜೆ ಮಾಡಬೇಕಾದ ಅನಿವಾರ್ಯತೆ ಇದೆ ಪಾಣಿಪೀಠ ಹಾಗು ಮಹಾಲಿಂಗವು ಅಳೆತ್ತರದಷ್ಟು ಇದೆ. ನಂದಿ ಮಂಟಪದಲ್ಲಿರುವ ನಂದಿ ವಿಶೇಷತೆಯೊಂದನ್ನು ಹೊಂದಿದ್ದು ಬೆಣ್ಣೆ, ಎಣ್ಣೆ ಮುಂತಾದವುಗಳನ್ನು ಲೇಪಿಸಿಕೊಂಡು ಜಾನುವಾರುಗಳ ರಕ್ಷಕನಾಗಿದ್ದಾನೆ. ಶಿಲ್ಪದ ಚಮತ್ಯತಿಯಾಗಿ ಅಥವಾ ನಂಬಿಕೆಯಾಗಿ ಕಣ್ಣು ಮುಚ್ಚುವ- ತೆರೆಯುವ ಬದಲಾವಣೆ ನಂದಿ ವಿಗ್ರಹದಲ್ಲಿದೆ. ಮದುವೆ ಸಂತಾನ ಪ್ರಾಪ್ತಿಯಂತಹ ವಿಶೇಷ ಫಲಗಳನ್ನು ಮಹಾಲಿಂಗೇಶ್ವರ ದೇವರು ಅನುಗ್ರಹಿಸುತ್ತಾರೆ. ತುಲಾಭಾರ ಮತ್ತು ಹೂವಿನ ಪೂಜೆಯಿಂದ ದೇವರು ಅನನ್ಯವಾಗಿ ಒಲಿಯುತ್ತಾರೆ. ಎರ್ಮಾಳಿನ ಜನಾರ್ದನ ದೇವರು ಅವಭ್ರತಕ್ಕಾಗಿ ಉಚ್ಚಿಲ ಮಹಾಲಿಂಗೇಶ್ವರ ದೇವರ ಸನ್ನಿದಿಗೆ ಬರುವ ವೇಳೆ ಗರ್ಭಗುಡಿಯಲ್ಲಿ ಜನಾರ್ದನ ದೇವರಿಗೆ ಮಹಾಲಿಂಗೇಶ್ವರ ದೇವರೊಂದಿಗೆ ಏಕಕಾಲದಲ್ಲಿ ಪೂಜೆ ನಡೆಯುವ ಅಪೂರ್ವ ಸಂದರ್ಭವೊಂದು ಇಲ್ಲಿ ಸನ್ನಿಹಿತವಾಗುತ್ತದೆ. (ಆದ್ದರಿಂದ ಇದನ್ನು ಹರಿಹರ ಕ್ಷೇತ್ರ ಎಂದು ಕರೆಯುತ್ತಾರೆ) ಅಕ್ಕಿ, ತೆಂಗಿನಕಾಯಿ, ಎಣ್ಣೆ, ತರಕಾರಿ, ಹೆಡಿಗೆ, ಹಗ್ಗ, ಸೆಗಣಿ ಸಾರಿಸುವ ಹಾಳೆತುಂಡು ಹೀಗೆ ಬಹುವಿಧದ ವಂತಿಗೆ ಕ್ಷೇತ್ರಕ್ಕೆ ಎಲ್ಲೆಡೆಯಿಂದ ಹರಿದುಬರುತ್ತದೆ. ಆಗಲೇ ಮಹಾಲಿಂಗೇಶ್ವರ ದೇವರ ಕೀರ್ತಿ, ಜನಪ್ರಿಯತೆ ಎಷ್ಟು ವಿಸ್ತಾರವಾಗಿದೆ, ಎಲ್ಲಿಯವರೆಗೆ ಹಬ್ಬಿದೆ ಎಂಬುದನ್ನು ಗಮನಿಸಬಹುದು.. ಜಾರಂದಾಯ ದೈವದ ದೇವಾಲಯ ಭೇಟಿಯ ಜಾನಪದ ಮತ್ತು ಶಿಷ್ಟ ಸಂಸ್ಕೃತಿಗಳ ಸುಗಮ ಸಮಾಗಮವಾಗಿದೆ. ಉಚ್ಚಿಲ ಮಹಾಲಿಂಗೇಶ್ವರ ದೇವರ ಅಯನೋತ್ಸವದಂದು ಸಿರಿಜಾತ್ರೆ ನಡೆಯುತಿತ್ತು ಎಂಬ ಒಂದು ಹೇಳಿಕೆಯು ಇದೆ. ಕೆಲವು ವರ್ಷಗಳ ಹಿಂದೆ ದೇವಳದಲ್ಲಿ ಸಿರಿಗಳ ನಂದಿಗೊಣನ ಪ್ರತೀಕಗಳಿತ್ತು. ಪ್ರತ್ಯೇಕ ಸಿರಿ ಆಲಡೆ ನಿರ್ಮಾಣವಾದ ಮೇಲೆ ಈ ಮೂರ್ತಿಗಳನ್ನು ವಿಸರ್ಜಿಸಲಾಗಿದೆ ಇದು ಕೂಡ ಜಾನಪದ ಹಿನ್ನೆಲೆಯಾಗಿದೆ. ಎರ್ಮಾಳು ಬೀಡಿನ ಮಾರಮ್ಮ ಹೆಗ್ಗಡೆಯವರು ನಾವಡರ ಮನೆತನ ಹಾಗು ಅರ್ಚಕರು ನೇತೃತ್ವ ವಹಿಸಿ ಸರ್ವವರ್ಗದ ಜಾತಿಯ ಭಕ್ತರ ನೆರವಿನೊಂದಿಗೆ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವರ ನಡಾವಳಿ ಮತ್ತು ಪಂಚಪರ್ವಗಳು ನಡೆಯುತ್ತವೆ. ಭದ್ರಂ ಶುಭಂ ಮಂಗಳಂ ವರದಿ : ಕೆ.ಎಲ್.ಕುಂಡಂತ್ತಾಯ (ಕ್ಷೇತ್ರಕ್ಕೆ ಆಗಮಿಸುವವರು ಸಂತೋಷ್ ಪುತ್ರನ್ ಇವರನ್ನು ಸಂಪರ್ಕಿಸಬಹುದು +91 81474 70317 ) ನಮ್ಮ ಕಾಪು