ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪುವಿನ ಕಾಲಗರ್ಭದೊಳಗಿನ ಇತಿಹಾಸವನ್ನು ಸಂರಕ್ಷಿಸೋಣವೇ

Posted On: 05-03-2020 04:59PM

ಸಾಂಸ್ಕೃತಿಕ , ಧಾರ್ಮಿಕ ಬಹುತ್ವಗಳೊಂದಿಗೆ ಸಮೃದ್ಧವಾದ " ಐತಿಹಾಸಿಕ " ಹಿನ್ನೆಲೆಯನ್ನು ಹೊಂದಿದೆ . ಕಾಪು ಪುರಸಭೆ ವ್ಯಾಪ್ತಿಯಲ್ಲಿ ಅಂದರೆ "ಪಡು , ಉಳಿಯಾರಗೋಳಿ , ಮೂಳೂರು , ಮಲ್ಲಾರು" ಗ್ರಾಮಗಳಲ್ಲಿ ಕಾಲಗರ್ಭ ಸೇರುತ್ತಿರುವ ಅಥವಾ ಈಗಾಗಲೇ ಸೇರಿರುವ ಐತಿಹಾಸಿಕ ಉಳಿಕೆಗಳಿವೆ . ಧಾರ್ಮಿಕ , ಸಾಂಸ್ಕೃತಿಕ ಮಹತ್ವಗಳಿರುವ ಪುರಾತನ ಅವಶೇಷಗಳಿವೆ . ನವ ನಿರ್ಮಾಣದ ಉತ್ಸಾಹದಲ್ಲಿ ಅವಗಣಿಸಲ್ಪಟ್ಟ , ನಶಿಸಿ ಹೋಗುತ್ತಿರುವ ಹಳಮೆಗಳಿವೆ . ಕಾಪು ಪುರಸಭೆ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಮೊತ್ತ ಬಿಡುಗಡೆಯಾಗುತ್ತಿದೆ . ಸರ್.....ಈ ಬೃಹತ್ ಮೊತ್ತದಲ್ಲಿ ಕೇವಲ ಕೆಲವೇ ಸಾವಿರ ರೂಪಾಯಿ ವೆಚ್ಚದಲ್ಲಿ ಕಾಪುವಿನ ಇತಿಹಾಸವನ್ನು ಕಾಪಿಡಬಹುದು . ಇತಿಹಾಸ ಕಾಪಿಡುವ ಈ ಸಂಸ್ಕೃತಿ ಪ್ರೀತಿಯ ಕಾರ್ಯವನ್ನು ಸಾಧಿಸಿದ ಕೀರ್ತಿ ತಮ್ಮದಾಗುತ್ತದೆ . 1988 -1989ರ ವೇಳೆ "ಕಾಪು ಕ್ಷೇತ್ರ ಚರಿತ್ರೆ" ಎಂಬ ಯಕ್ಷಗಾನ ಪ್ರಸಂಗ ರಚನೆಗೆ ಕತೆ ಸಂಗ್ರಹದ ವೇಳೆ ಕಾಪುವಿನಲ್ಲಿ ನಡೆಸಿದ ಕ್ಷೇತ್ರ ಕಾರ್ಯದ ವೇಳೆ ಕಾಪುವಿನ ಇತಿಹಾಸ ಗಮನಸೆಳೆಯಿತು . ಅಂದಿನಿಂದ ನಾಲ್ಕು ಬಾರಿ ತರಂಗ ,ಉದಯವಾಣಿ ಪತ್ರಿಕೆಗಳಲ್ಲಿ ' ಕಾಪಿಡಲಾದೀತೇ ಕಾಪುವಿನ ಇತಿಹಾಸ' ಎಂಬ ಶಿರೋನಾಮೆಲ್ಲಿ ಲೇಖನಗಳನ್ನು ಬರೆದಿದ್ದೆ . ಕಾಪುವಿನ " ಉಪ್ಪಿನೊಂದಿಗೆ ಕರಗುತ್ತಿದೆ ಕಾಪುವಿನ ಇತಿಹಾಸ " ಎಂದು ಉದಯವಾಣಿಯ ಜನತಾವಾಣಿ ವಿಭಾಗದಲ್ಲಿ ಆಗಿನ ವರದಿಗಾರರು ಬರೆದಿದ್ದರು ( ಕಳೆದ ವರ್ಷ ಈ ಶಾಸನ ಸ್ಥಳಾಂತರಗೊಂಡಿದೆ ) . 2002 ನೇ ಇಸವಿಯಲ್ಲಿ ಕಾಪುವಿನ ಲಕ್ಷ್ಮೀ ಜನಾರ್ದನ ದೇವಳದ ಜೀರ್ಣೋದ್ಧಾರ ಸಂದರ್ಭ ನಾನು ಸಂಪಾದಿಸಿದ ಕೈಪಿಡಿ "ಒಡೆಯ ಲಕ್ಷ್ಮೀ ಜನಾರ್ದನ" ಕಾಪು ಕ್ಷೇತ್ರ ಪರಿಚಯ ಪುಸ್ತಕ ಪ್ರಕಟಗೊಂಡಿತ್ತು . ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಈ ಪುಸ್ತಕವನ್ನು ಪ್ರಕಟಿಸಿತ್ತು . ನಾನು ಕನಿಷ್ಠ ಐದಾರು ಬಾರಿ ಕಾಪುವಿನಲ್ಲಿ ನಡೆದ , ಗಣ್ಯರ ಉಪಸ್ಥಿತಿಯ ಸಭೆಗಳಲ್ಲಿ ಕಾಲಗರ್ಭ ಸೇರುತ್ತಿರುವ ಕಾಪುವಿನ ಐತಿಹಾಸಿಕ ಉಳಿಕೆಗಳ ಕುರಿತು ಭಾಷಣ ಮಾಡಿದ್ದೆ .ಇವುಗಳಿಂದ ಯಾವ ಪ್ರಯೋಜನವೂ ಆಗಿಲ್ಲ . ಆಧುನಿಕತೆಯ ಚಿಂತನೆಯೊಂದಿಗೆ ಮುಂದೆ ಗಮಿಸುವ ವರ್ತಮಾನದಲ್ಲಿ ಭೂತ ಕಾಲವನ್ನು ಗಮನಿಸಿ ಭವಿಷ್ಯವನ್ನು ಕಟ್ಟಬೇಕಾದರೆ ಇತಿಹಾಸ ಏನೆಂದು ತಿಳಿಯುವುದು ಅಗತ್ಯತಾನೆ ?.ಆ ಇತಿಹಾಸ ರಕ್ಷಿಸುವ ಅಗತ್ಯವಿಲ್ಲವೇ ? * ಅಡಕ : ಐತಿಹಾಸಿಕ ಅವಶೇಷಗಳ ಪಟ್ಟಿ. ***************** ಅಡಕ‌. ಕಾಪು : ಕಾಲಗರ್ಭ ಸೇರುತ್ತಿರುವ , ಅವಗಣಿಸಲ್ಪಟ್ಟಿರುವ ಐತಿಹಾಸಿಕ - ಧಾರ್ಮಿಕ ಅವಶೇಷಗಳು ಮತ್ತು ಅವುಗಳ ಮಹತ್ವ ಉಡುಪಿ ಜಿಲ್ಲೆಯ ಕಾರ್ಕಳ , ಬಾರಕೂರು , ಉದ್ಯಾವರ ಮುಂತಾದ ಪ್ರಸಿದ್ಧ ಚಾರಿತ್ರಿಕ ಸ್ಥಳಗಳಂತೆ ಕಾಪು ಸಹ ಇತಿಹಾಸ ಪ್ರಸಿದ್ಧಸ್ಥಳ . ಇವತ್ತಿಗೂ " ಕಾಪು " ಎಂಬುದು ಒಂದು ಗ್ರಾಮದ ಹೆಸರಲ್ಲ . ತುಳುನಾಡಿನ ಮಧ್ಯಯುಗೀನ ಇತಿಹಾಸ ಕಾಲದಲ್ಲಿ ಕಾಪು ಒಂದು ಸೀಮೆ . ಒಂದು ಅರಸೊತ್ತಿಗೆಯ ಅಧಿಕಾರವ್ಯಾಪ್ತಿ . ಈ ಕಾಲಘಟ್ಟದಲ್ಲಿ ಒಂದು ವಿಧಾನಸಭಾ ಕ್ಷೇತ್ರದ ಹೆಸರು .ಪ್ರಸಕ್ತ ಒಂದು ಪುರಸಭೆ. ತಾಲೂಕು ಕೇಂದ್ರ. * ಕ್ರಿ . ಶ . 8 ನೇ ಶತಮಾನದ ಬೆಳ್ಮಣ್ಣಿನ ತಾಮ್ರಶಾಸನದಲ್ಲಿ ಮೊತ್ತಮೊದಲು ' ಕಾಪು' ಉಲ್ಲೇಖವಿದೆ .ಇದು ಕಾಪು ಸ್ಥಳನಾಮಕ್ಕಿರುವ ಚಾರಿತ್ರಿಕ ಪ್ರಾಚೀನತೆಗೆ ಆಧಾರ. ಕಾಪು ಹೆಸರು ಸುಮಾರು 1300 ವರ್ಷ ಪುರಾತನವಾದುದು . ಈಗ ಕಾಪು ಪುರಸಭೆಯಾಗಿದೆ . ಕಾಪು ಎಂಬ ಹೆಸರು ರಕ್ಷಣೆ ಎಂಬ ಅರ್ಥ ದಿಂದ ಬಂದುದಲ್ಲ .ಕಾಪು ಎಂದರೆ 'ಕಾವು' ಶಬ್ದದಿಂದ ನಿಷ್ಪತ್ತಿಯಾದುದು .ಕಾವು = ಕಾಡು.ಎನ್ನುತ್ತಾರೆ ಸ್ಥಳನಾಮ ಸಂಶೋಧಕರು. * ಕಾಪು ಲೈಟ್ ಹೌಸ್ ಪಕ್ಕದ ಹೆಬ್ಬಂಡೆಯ ಮೇಲೆ ಇರುವ ಕೆಂಪು ಕಲ್ಲಿನ ಪುರಾತನ ಕಟ್ಟಡವೊಂದರ ಪಂಚಾಂಗವು ಒಂದು ಕಾಲದ "ಮನೋಹರಗಡ" . ಕೆಳದಿಯ ನಾಯಕರ ಚರಿತ್ರೆ ಯನ್ನು ವಿವರಿಸುವ ಲಿಂಗಣ್ಣ ಕವಿ ಬರೆದಿರುವ "ಕೆಳದಿನೃಪ ವಿಜಯ" ದಲ್ಲಿ : ಈ ಪರಿಯಲ್ಲದೆ ಪಡುವಣ | ಕೂಪಾರದ ತೀರದೊಳ್ ವಿರಾಜಿಸುತಿರ್ಪಾ | ಕಾಪಿನ ಸಮೀಪದೊಳತ| ದ್ಭೂಪಂ ನೆಲೆಗೊಳಿಸಿದಮ್ ಮನೋಹರಗಡಮಂ || ಎಂಬ ಕಂದ ಪದ್ಯ ಒಂದಿದೆ . ಆದರೆ ಇಂದು ಈ ಹೆಸರನ್ನು ಯಾರೂ ಹೇಳುತ್ತಿಲ್ಲ .ಬೀಚ್ ಉತ್ಸವಗಳಲ್ಲಿ ಈ ಹೆಸರನ್ನು ಬಳಸಬಹುದು .ಏಕೆಂದರೆ ಹೆಸರು ಸುಂದರವಾಗಿಲ್ಲವೆ. ಪ್ರವಾಸೋದ್ಯಮಕ್ಕೆ ಈ ಹೆಸರು ಪ್ರಶಸ್ತವಾಗಿಲ್ಲವೆ ? *'ಕೆಳದಿ ನೃಪ ವಿಜಯ'ದ ಪ್ರಕಾರ ಕ್ರಿ . ಶ . 1743 ರಲ್ಲಿ ಬಸಪ್ಪ ನಾಯಕ ಕಟ್ಟಿಸಿದ . ಅದೇ ವೇಳೆ 'ಮಲ್ಲಾರ'ದಲ್ಲಿ ಸೇನೆ ನಿಲ್ಲಲು ಕೋಟೆಯನ್ನು ಕಟ್ಟಿಸಿದ ಎಂದು ಹೇಳಲಾಗುತ್ತದೆ . ಪೂರ್ವ ದಲ್ಲಿದ್ದ ಜೇರ್ಣಗೊಂಡ ಕೋಟೆಯನ್ನು ಸುಭದ್ರವಾಗಿ , ಸುಸಜ್ಜಿತವಾಗಿ ಬಸಪ್ಪನಾಯಕರು ಕಟ್ಟಿಸಿದರು ಎಂದೂ ಹೇಳಲಾಗುತ್ತದೆ . * ಕಾಪು ಪೇಟೆಯ ದಕ್ಷಿಣದ ಕೊನೆಯಲ್ಲಿ ಅಂಗಡಿಯೊಂದರ ಮುಂಭಾಗದಲ್ಲಿರುವ ಶಿಲಾಶಾಸನವೊಂದು ಉಪ್ಪಿನ ಗೋಣಿಯನ್ನು ಪೇರಿಸಿಡಲು ಬಳಸಲಾಗುತ್ತಿದೆ .1985 ರಿಂದ ಈ ಶಾಸನದ ಕುರಿತು ಬರೆಯಲಾಗಿದೆ ,ಹೇಳಲಾಗಿದೆ . ಈಶಾಸನ ತುಳುನಾಡನ್ನು ಬಲುದೀರ್ಘಾವಧಿಗೆ ಆಳಿದ ಆಳುಪ ವಂಶದ ದೊರೆ ಸೋಯಿದೇವಾಳುಪೇಂದ್ರನ ಕಾಲದ್ದು . ಶಾ . ಶ . 1247ರಲ್ಲಿ ಬರೆದುದು .ಇದು ದಾನಶಾಸನ . ಈ ಶಾಸನದಲ್ಲಿ ಕಾಪು ಸೀಮೆಯ ನಿರ್ದಿಷ್ಟ ಪ್ರದೇಶಗಳ ಹೆಸರುಗಳಿವೆ( ಈ ಶಾಸನ ಇತ್ತೀಚೆಗೆ ಸ್ಥಳಾಂತರವಾಗಿದೆ , ರಕ್ಷಿಸಲ್ಪಟ್ಟಿದೆ ) . * ಕಾಪು ಪೇಟೆಯಲ್ಲಿ ಸಂವತ್ಸರ , ದಿನ ಮಾತ್ರ ನಮೂದಿಸಿರುವ ಶಕ ವರ್ಷ ಇಲ್ಲದ ಎರಡು ವೀರಗಲ್ಲುಗಳಿವೆ . ಇವುಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು . * ತುಳುನಾಡಿನ ಪ್ರಸಿದ್ಧ ಅರಸು ಮನೆತನದಲ್ಲೊಂದಾದ ಕಾಪುವಿನ ತಿರುಮಲರಸ ಮರ್ದ ಹೆಗಡೆ ( ವದ್ದ ಹೆಗಡೆ )ಅರಸರು ಕಾಪುವಿನ ಜನಾರ್ದನ ದೇವಾಲಯ ಕಟ್ಟಿಸಿದರು .ಇವರ ಅಧಿಕಾರ ವ್ಯಾಪ್ತಿಯಲ್ಲಿ ಕಾಪು ಸೀಮೆ ಎಂದು ಪಡು , ಮಲ್ಲಾರು , ಮೂಳೂರು , ಪಾದೂರು , ಹೇರೂರು , ಮಜೂರು , ಇನ್ನಂಜೆ ಗ್ರಾಮಗಳಿದ್ದವು ( ಮುಂದೆ ಪಾದೂರು ಗ್ರಾಮ ಎಲ್ಲೂರು ಸೀಮೆಗೆ ಸೇರ್ಪಡೆಯಾಗುವುದನ್ನು ಚರಿತ್ರೆ ಯ ಪುಟಗಳಲ್ಲಿ ಕಾಣುತ್ತೇವೆ ).ಸುಮಾರು 300 - 400 ವರ್ಷಕಾಲ ಕಾಪು ಸೀಮೆಯ ಆಡಳಿತ ಮರ್ದ ಹೆಗಡೆ ಮನೆತನದ್ದಾಗಿತ್ತು . ಅವರು ವಾಸಿಸುತ್ತಿದ್ದ ಬೀಡು ಯಾವತ್ತೆ ಅಳಿದು ಹೋಯಿತು . * ಕಾಪು ಜನಾರ್ದನ ದೇವಾಲಯದಲ್ಲಿ ಒಳ ಸುತ್ತಿನಲ್ಲಿ ಆಗ್ನೇಯ ದಿಕ್ಕಿನಲ್ಲಿದ್ದ ಶಿಲಾಶಾಸನವು ಈಗ ತುಂಡಾದ ಸ್ಥಿತಿಯಲ್ಲಿ ದೇವಳದ ಕೆರೆಯ ಪಕ್ಕದಲ್ಲಿದೆ . ಇದೊಂದು ಒಪ್ಪಂದ ಶಾಸನವಾಗಿದೆ . ಅಪೂರ್ವವಾದ ಶಾಪಾಶಯದ ದಾಖಲು ಇದರಲ್ಲಿದೆ . ಇದು ಶಾ.ಕ.1421( ಕ್ರಿ. ಶ . 1499) ರಲ್ಲಿ ಬರೆದುದು . * ಕಾಪುವಿನ ಇದೇ ದೇವಾಲಯದ ಜೀರ್ಣೋದ್ಧಾರದ ವೇಳೆ ಬದಲಾಯಿಸಿದ್ದ ಪುರಾತನ ಪಾಣಿಪೀಠ , ವಿವಿಧ ಪ್ರಾಚೀನ ಶಿಲ್ಪಗಳುಳ್ಳ ಕಲ್ಲುಗಳು ಇವೆ .ಇವುಗಳ ರಕ್ಷಣೆಯಿಂದ ದೇವಾಲಯ ನಿರ್ಮಾಣ ಕಾಲವನ್ನು ನೆನಪಿಸಿಕೊಳ್ಳ ಬಹುದು . * "ಬೀಡು ಧರ್ಮನಾಥ ಬಸದಿ" ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ(ತುಳು ನಾಡು ) 180 ಬಸದಿಗಳಲ್ಲಿ ಒಂದು . ಇದು ಕಾಪಿನಲ್ಲಿದೆ . ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದೆ . ಇದರ ಪಾಗಾರ ರಾಷ್ಟ್ರೀಯ ಹೆದ್ದಾರಿಗೆ ಹೋಗಿದೆ . ಹೆದ್ದಾರಿಗೆ ಬಹಳ ಸಮೀಪದಲ್ಲಿದ್ದು , ಇದರ ರಕ್ಷಣೆಗೆ ಸೂಕ್ತ ಕ್ರಮ ಅಗತ್ಯವಿದೆ . ಈ ಬಸದಿ ಕಾಪುವಿನ ಇತಿಹಾಸಕ್ಕೆ ಮಹತ್ವದ ಆಧಾರವಾಗಿದೆ. * ಕ್ರಿ . ಶ .1743 ರಲ್ಲಿ ಬಸಪ್ಪನಾಯಕರು ಕಟ್ಟಿಸಿದ ಮಲ್ಲಾರಿನ ಕೋಟೆಯ ಅಧಿಕಾರವು1784 ರಲ್ಲಿ ಟಿಪ್ಪುಸುಲ್ತಾನನ ವಶವಾಯಿತು (ಬ್ರಿಟಿಷರೊಂದಿಗೆ ಟಿಪ್ಪುಸುಲ್ತಾನನಿಗೆ ನಡೆದ 'ಮಂಗಳೂರು ಒಪ್ಪಂದ'ದ ಬಳಿಕ) . 1799ರಲ್ಲಿ ಟಿಪ್ಪುಸುಲ್ತಾನರ ನಿಧನಾನಂತರ , ಮುಂದಿನ ದಿನಗಳಲ್ಲಿ ಕ್ರಮೇಣ ಕೋಟೆ ಅರಾಜಕವಾಗ ತೊಡಗಿತು . 1985 ರ ವೇಳೆ ಕೋಟೆಯ ಒಂದು ಬಾಗಿಲು ಮಾತ್ರ ಇತ್ತು , ಒಳಗೆ ವಿಶಾಲವಾದ ಮೈದಾನವಿತ್ತು . ಆನೆಗಳನ್ನು ಕಟ್ಟುವ ಕಲ್ಲುಗಳಿದ್ದವು . ಒಂದು ಗುಡಿಇದ್ದ ಅವಶೇಷವಿತ್ತು . ಈ ಗುಡಿ ಆಂಜನೇಯ ದೇವಸ್ಥಾನವಾಗಿತ್ತಂತೆ . ಹೌದು.... ಎಂಬುದಕ್ಕೆ ಆಂಜನೇಯ ಮೂರ್ತಿ ಈಗ ಕಾಪು ಜನಾರ್ದನ ದೇವಳದಲ್ಲಿದೆ . ಅದನ್ನು ಕೋಟೆ ಆಂಜನೇಯ ಎನ್ನಲಾಗುತ್ತಿದೆ . ಕೋಟೆಯ ಒಂದು ಬದಿಯಲ್ಲಿ ( ನೈಋತ್ಯದಲ್ಲಿ) 'ನಂದಿ ಕೆರೆ ' ಎಂಬ ಕೆರೆಯೊಂದಿತ್ತು ಕೆರೆಗೆ ಇಳಿಯುವ ಮೆಟ್ಟಿಲುಗಳಿದ್ದವು , ಇಕ್ಕೆಲಗಳಲ್ಲಿ ಸರಳ , ಸುಂದರ ಶಿಲ್ಪಗಳಿದ್ದವು . ಅಲ್ಲೆ ಮೈದಾನದಲ್ಲಿ ದೇವಾಲಯಗಳಲ್ಲಿರುವ ಆನೆಕಲ್ಲು (ಹಸ್ತಿಹಸ್ತ) ಒಂದು ಬಿದ್ದಿತ್ತು . ಆದರೆ ಈಗ ಅಲ್ಲಿ ಒಂದು ಕೋಟೆ ಇತ್ತು ಎನ್ನುವ ಯಾವ ಪುರಾವೆಯೂ ಇಲ್ಲ . ಇತಿಹಾಸ ಪ್ರಸಿದ್ಧ ಕೋಟೆ ಹೀಗೆ ಕಾಲಗರ್ಭ ಸೇರಿ ಹೋಯಿತು . * ಕಾಪು ದೇವಸ್ಥಾನದ ಜೀರ್ಣೋದ್ಧಾರ ನಿಮಿತ್ತ ಮೂಲ ಗರ್ಭಗುಡಿಯನ್ನು ಬಿಚ್ಚುವ ವೇಳೆ ಕಂಡು ಬಂದ ಪುರಾತನ ಶಿಲೆಕಲ್ಲಿನ "ಅಧಿಷ್ಠಾನ" ವು ದೇವಳದ ಪ್ರಾಚೀನತೆ ನಿಷ್ಕರ್ಷೆಗೆ ಆಧಾರವಾಗುತ್ತಿತ್ತು ,ಆದರೆ ಇದನ್ನು ಅವಶೇಷವೆಂದು ಕಾಪಿಡುವ ಉದ್ದೇಶದಿಂದ ತೆಗೆದು ಒಂದು ಕಡೆ ರಾಶಿ ಹಾಕಲಾಗಿತ್ತು . ಈ ಐತಿಹಾಸಿಕ ಮಹತ್ವದ ಉಳಿಕೆಯೂ ಇತ್ತೀಚೆಗೆ ಕಾಲಗರ್ಭ ಸೇರಿ ಹೋಯಿತು . * ಕಾಪು ಕೋತಲಕಟ್ಟೆ ಬಳಿ‌‌ ಇದ್ದ ಎರಡು‌ ವೀರಗಲ್ಲುಗಳಿಗೆ ತಾತ್ಕಾಲಿಕ‌ ರಕ್ಷಣೆ ಕೊಡಲಾಗಿದೆ . * ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಏಳು ಪ್ರಸಿದ್ಧ ಜಾತ್ರೆಗಳಲ್ಲಿ " ಕಾಪು ಮಾರಿಪೂಜೆ "ಒಂದು. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಅಪೂರ್ವ ಜಾತ್ರೆ . ಪಿಲಿಕೋಲ ಜನಪ್ರಿಯ ಆಚರಣೆ . ಕಾಪು ಸಾವಿರ ಸೀಮೆಯ ಎಲ್ಲ ದೈವಸ್ಥಾನಗಳಿಗೂ , ಬ್ರಹ್ಮಸ್ಥಾನಗಳಿಗೂ ಜಾನಪದ ಹಿನ್ನೆಲೆಗಳಿವೆ . * ಶ್ರೀವೆಂಕಟರಮಣ ದೇವಸ್ಥಾನ , ಶ್ರೀ ವೀರಭದ್ರ ದೇವಸ್ಥಾನ , ಶ್ರೀ ಕಾಳಿಕಾಂಬಾ ದೇವಸ್ಥಾನಗಳು ಐತಿಹಾಸಿಕ , ಧಾರ್ಮಿಕ - ಸಾಂಸ್ಕೃತಿಕ ಹಿನ್ನೆಲೆ ಹೊಂದಿದವುಗಳು .ಇವು ವ್ಯವಸ್ಥಿತವಾಗಿ ನಿರ್ವಹಿಸಲ್ಪಡುತ್ತಿವೆ . * ಕಾಪು ; ಪುರಾಣ ,ಇತಿಹಾಸಗಳೊಂದಿಗೆ ದಟ್ಟವಾದ ಜಾನಪದ ಹಿನ್ನೆಲೆ ಹೊಂದಿದೆ . * ಮೇಲೆ ನಮೂದಿಸಿರುವ ವಿವರಗಳಿಗಿಂತಲೂ ಇನ್ನೂ ಹೆಚ್ಚಿನ ಅಪೂರ್ವ ಸಂಗತಿಗಳು ಕಾಪುವಿನಲ್ಲಿದೆ . ಅವುಗಳನ್ನು ಗುರುತಿಸ ಬಹುದು.ಕಾಪಿಡಲು ಸಂಗ್ರಹಿಸ ಬಹುದು . * ಚಾರಿತ್ರಿಕ ಅವಶೇಷಗಳನ್ನು ದೇವಳ ಪರಿಸರ , ಪಂಚಾಯತ್ ಕಚೇರಿ ಪರಿಸರ , ಪುರಸಭೆ ಕಚೇರಿ ಆವರಣ , ಅಥವಾ ಯಾವುದಾದರೊಂದು ಸ್ಥಳದಲ್ಲಿ ಓರಣಗೊಳಿಸಿ ಇಟ್ಟು " ಕಾಪುವಿನ ಗತ ಇತಿಹಾಸ " ಎಂದು ಹೆಸರಿಸಿ ಕಾಪಿಡುವ ಸಾಧ್ಯತೆ ಇದೆ . # ಸರ್... ಪುರಸಭೆ , ತಾಲೂಕು ಕಲ್ಪನೆಗಳ ಸಾಕಾರಕ್ಕೆ ವ್ಯಯವಾಗುವ ಕೋಟಿ ಕೋಟಿ ಮೊತ್ತದಲ್ಲಿ ಕೆಲವೇ ಕೆಲವು ಸಾವಿರ ರೂಪಾಯಿ ವೆಚ್ಚದಲ್ಲಿ ಒಂದು ಇತಿಹಾಸವನ್ನು , ಸಂಸ್ಕೃತಿ ಯನ್ನು ಕಾಪಿಡಬಹುದು . ಇನ್ನು ತಾವು ನಿರ್ಧರಿಸ ಬೇಕು . ✍️ ಕೆ . ಎಲ್ .ಕುಂಡಂತಾಯ