Updated News From Kaup
ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಡಿಲಿಗೆ ಸಂಗೊಳ್ಳಿ ರಾಯಣ್ಣ ಪುರಸ್ಕಾರ
Posted On: 25 Sep 2025, 05:18 PM
ಉಡುಪಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದ.ಕ. ಉಡುಪಿ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ಸಂಗೊಳ್ಳಿ ರಾಯಣ್ಣ ಪುರಸ್ಕಾರವನ್ನು ಖ್ಯಾತ ಮನೋವೈದ್ಯ ಹಾಗೂ ಸಾಮಾಜಿಕ ಹೋರಾಟಗಾರ ಡಾ.ಪಿ.ವಿ.ಭಂಡಾರಿ ಅವರಿಗೆ ಉಡುಪಿ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮವನ್ನು ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ವಹಿಸಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಪಿ.ವಿ.ಭಂಡಾರಿ, ಓದು ನನಗೆ ಬದುಕಿನಲ್ಲಿ ಸಾಕಷ್ಟು ಸಹಾಯ ಮಾಡಿದೆ. ನಾಗರಿಕ ಸಮಾಜ ಪ್ರಶ್ನೆ ಮಾಡದಿದ್ದರೆ ಸರಕಾರ ಯಾವುದೇ ಸಮಸ್ಯೆಗೆ ಸ್ಪಂದಿಸುವುದಿಲ್ಲ. ಜನಪ್ರತಿನಿಧಿಗಳು ಕೆಲಸ ಮಾಡದೇ ಇದ್ದಾಗ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಅವರು ಜನಸೇವಕರೇ ಹೊರತು ನಾಯಕ ರಲ್ಲ. ಶಿಕ್ಷಣ ಮತ್ತು ಆರೋಗ್ಯವನ್ನು ಸರಕಾರ ನಮಗೆ ನೀಡಬೇಕು. ಆದರೆ ಅದು ಇಂದಿಗೂ ಸಾಧ್ಯವಾಗಿಲ್ಲ ಎಂದರು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕರ್ನಾಟಕ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್ ಶೆಣೈ, , ಬಳಗದ ಕಾರ್ಯಾಧ್ಯಕ್ಷ ಕುಮಾರ್, ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ಹುನಮಂತ ಎಸ್.ಡೊಳ್ಳಿನ ಉಪಸ್ಥಿತರಿದ್ದರು. ನಿರೂಪಕ ಅವಿನಾಶ್ ಕಾಮತ್ ಅಭಿನಂದನಾ ಮಾತುಗಳನ್ನಾಡಿದರು. ಕಸಾಪ ಉಡುಪಿ ತಾಲೂಕು ಘಟಕಾಧ್ಯಕ್ಷ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಗೌರವಾಧ್ಯಕ್ಷ ಜನಾರ್ದನ ಕೊಡವೂರು ಸ್ವಾಗತಿಸಿದರು. ಸತೀಶ್ ಕೊಡವೂರು ಸನ್ಮಾನ ಪತ್ರ ವಾಚಿಸಿದರು. ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ರಾಘವೇಂದ್ರ ಪ್ರಭು ಕರ್ವಾಲ್ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದ ಮೊದಲು ಗಣೇಶ್ ಗಂಗೊಳ್ಳಿ ಮತ್ತು ತಂಡದಿಂದ ಕ್ರಾಂತಿ ಗೀತೆಗಳು ಸಂಪನ್ನಗೊಂಡವು.
ಶಿರ್ವ : ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಚಿಂತನ ಹೆಗಡೆ ಮಾಳಕೋಡ್ ರವರಿಗೆ ಸನ್ಮಾನ
Posted On: 25 Sep 2025, 05:07 PM
ಶಿರ್ವ : ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಜರುಗುತ್ತಿರುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಬುಧವಾರ "ಯಕ್ಷ ಪಲ್ಲವಿ" ಚಿಂತನ ಹೆಗಡೆ ಮಾಳಕೋಡ್, ಹೊನ್ನಾವರ ಇವರ ಬಳಗದ ವತಿಯಿಂದ ಜರುಗಿದ "ಯಕ್ಷಗಾನ -ನೃತ್ಯ ವೈಭವ" ಕಾರ್ಯಕ್ರಮದಲ್ಲಿ ಯುವ ಪ್ರತಿಭೆ, ಕಂಚಿನ ಕಂಠದ ಭಾಗವತರಾಗಿ ಮಿಂಚುತ್ತಿರುವ ಚಿಂತನ ಹೆಗಡೆ ಮಾಳಕೋಡ್ ಇವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಿ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಜಯರಾಮ ಪ್ರಭು ಗಂಪದಬೈಲು, ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಪ್ರಾಯೋಜಕತ್ವ ವಹಿಸಿದ ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್, ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್, ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಸೇವಾ ವೃಂದದ ಪದಾಧಿಕಾರಿಗಳಾದ ಅನಂತರಾಮ ವಾಗ್ಲೆ, ರಾಘವೇಂದ್ರ ನಾಯಕ್ ಪಾಲಮೆ ಉಪಸ್ಥಿತರಿದ್ದರು.
ಸರಕಾರದ ಜಾತಿ ಗಣತಿ ಸಮೀಕ್ಷೆ : ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಬಿ ಕಾಳು ಕುಲಾಲ್ ರಿಂದ ಸಮುದಾಯದವರಿಗೆ ಮನವಿ
Posted On: 25 Sep 2025, 04:49 PM
ಕಾಪು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಯಲ್ಲಿ ಜಾತಿ ಕಾಲಂನಲ್ಲಿ ಕುಂಬಾರ ಎಂದು ಬರೆಸುವಂತೆ ಪೆರ್ಡೂರು ಕುಲಾಲಸಂಘದ ಅಧ್ಯಕ್ಷರಾದ ಬಿ.ಕಾಳು ಕುಲಾಲ್ ಸಮುದಾಯ ಬಾಂಧವರಿಗೆ ಮನವಿ ಮಾಡಿದ್ದಾರೆ. ಜಾತಿಗಣತಿ (ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ) ಯಲ್ಲಿ ಕುಲಾಲ ಸಮುದಾಯದ ಪ್ರತಿಯೊಬ್ಬರೂ ತಪ್ಪದೇ ಭಾಗವಹಿಸಬೇಕು ಹಾಗೂ ಜಾತಿ ಬರೆಸುವಾಗ ಜಾತಿ ಕಾಲಂ ನಲ್ಲಿ ಕುಂಬಾರ (ಕೋಡ್ ನಂ.A-0781) ಎಂದು ನಮೂದಿಸುವಂತೆ ಮನವಿ ಮಾಡಲಾಯಿತು. ಪ್ರಶ್ನೆ 8: ಧರ್ಮ ಕಾಲಂನಲ್ಲಿ – ಹಿಂದೂ, ಪ್ರಶ್ನೆ 9: ಜಾತಿ ಕಾಲಂನಲ್ಲಿ – ಕುಂಬಾರ (A – 0781) ಪ್ರಶ್ನೆ 10: ಉಪಜಾತಿ ಕಾಲಂನಲ್ಲಿ – ಇಲ್ಲ, ಪ್ರಶ್ನೆ 11: ಜಾತಿಗೆ ಇರುವ ಸಮಾನಾರ್ಥಕ (ಪರ್ಯಾಯ) ಹೆಸರು ಕಾಲಂನಲ್ಲಿ – ಆಯಾ ಪ್ರದೇಶದಲ್ಲಿ ನೀವು ಗುರುತಿಸಲ್ಪಟ್ಟಿರುವ ಹೆಸರು (ಉದಾ: ಕುಲಾಲ, ಮೂಲ್ಯ, ಬಂಗೇರ, ಸಾಲಿಯಾನ್ ಹಾಂಡ ಇನ್ನಿತರ ಯಾವುದೇ ಬಳಿಯ ಹೆಸರಿನಲ್ಲಿ ಗುರುತಿಸಿಕೊಂಡಿದ್ದರೂ ಭವಿಷ್ಯದಲ್ಲಿ ಸಮುದಾಯದ ಹಿತಕ್ಕಾಗಿ ಜಾತಿ ಕಾಲಂನಲ್ಲಿ ಕುಂಬಾರ ಎಂದು ನಮೂದಿಸಿ ತೀರಾ ಅತ್ಯಗತ್ಯ) ಪ್ರಶ್ನೆ 24 (e) ಮೀಸಲಾತಿಯಿಂದ ಪಡೆದ ಇತರೆ ಸೌಲಭ್ಯಗಳು ಕಾಲಂನಲ್ಲಿ – ಸೌಲಭ್ಯಗಳನ್ನು ಪಡೆದಿದ್ದರೆ ಅದನ್ನು ಬರೆಸುವುದು ಇಲ್ಲದಿದ್ದರೆ ಯಾವುದೂ ಇಲ್ಲ ಎಂದು ಬರೆಸುವುದು, ಪ್ರಶ್ನೆ – 30 ಕುಲಕಸುಬು ಕಾಲಂನಲ್ಲಿ – 53 ರಲ್ಲಿ ನೀಡಿರುವ ಕುಂಬಾರರು (Potters) ಎಂದು ಪ್ರಶ್ನೆ 32: ನಿಮ್ಮ ಕಸುಬಿನಿಂದ ಬಂದ ಕಾಯಿಲೆಗಳು ಕಾಲಂನಲ್ಲಿ – ಯಾವುದೂ ಇಲ್ಲ ಎಂದು ಬರೆಸುವಂತೆ ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರಾದ ಬಿ.ಕಾಳು ಕುಲಾಲ್ ರವರು ಉಡುಪಿ ತಾಲೂಕಿನ ಸಮಸ್ತ ಕುಲಾಲ ಸಮುದಾಯ ಬಾಂಧವರಿಗೆ ಸಂಘದ ಪರವಾಗಿ ಮನವಿ ಮಾಡಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಶಿರ್ವ : ನೂತನ ಅಧ್ಯಕ್ಷರಾಗಿ ಗೋಪಾಲ ಪೂಜಾರಿ ಆಯ್ಕೆ
Posted On: 25 Sep 2025, 04:43 PM
ಶಿರ್ವ : ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ 2026-2028ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಗೋಪಾಲ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ವೀರೇಂದ್ರ ಎಸ್ ಪೂಜಾರಿ ಶಿರ್ವ, ಜೊತೆ ಕಾರ್ಯದರ್ಶಿಯಾಗಿ ರಮೇಶ್ ಪೂಜಾರಿ ಶಿರ್ವ ಹಾಗೂ ಕೋಶಾಧಿಕಾರಿಯಾಗಿ ಸುಕೇಶ್ ಪೂಜಾರಿ ವಲದೂರು ಪುನರಾಯ್ಕೆ ಯಾಗಿರುತ್ತಾರೆ.
ಶಿರ್ವ : ಬಂಟಕಲ್ ಸನ್ ಶೈನ್ ಸೀನಿಯರ್ ಚೇಂಬರ್ ವತಿಯಿಂದ ವನಮಹೋತ್ಸವ
Posted On: 25 Sep 2025, 04:38 PM
ಶಿರ್ವ : ತಾಲೂಕಿನ ಬಂಟಕಲ್ ಸನ್ ಶೈನ್ ಸೀನಿಯರ್ ಚೇಂಬರ್ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನೆರವೇರಿತು. ಅಧ್ಯಕ್ಷರಾದ ಸೀನಿಯರ್ ರಮೇಶ್ ಬಂಟಕಲ್ ಗಿಡ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಪೂರ್ವಾಧ್ಯಕ್ಷರಾದ ಸೀನಿಯರ್ ಸಂದೀಪ್ ಬಂಗೇರ, ಕಾರ್ಯದರ್ಶಿ ಸೀನಿಯರ್ ರವೀಂದ್ರ ಪಾಟ್ಕರ್, ಸದಸ್ಯೆ ಸೀನಿಯರ್ ಪ್ರೀತಿ ಲತಾ ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಲೇಖನ ಯಜ್ಞದ ಪುಣ್ಯ ಭೂಮಿಗೆ ಚಾಲನೆ
Posted On: 25 Sep 2025, 04:30 PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿಯಲ್ಲಿ ಶರನ್ನವರಾತ್ರಿ ಮಹೋತ್ಸವದ 4 ನೇ ದಿನವಾದ ಸೆ. 25ರಂದು ಬೆಳಿಗ್ಗೆ ನವದುರ್ಗಾ ಲೇಖನ ಯಜ್ಞ ಲೇಖನ ಮಂಟಪದಲ್ಲಿ ದೇವಳದಲ್ಲಿಯೇ ನವದುರ್ಗಾ ಲೇಖನವನ್ನು ಬರೆಯಲು ಲೇಖನ ಯಜ್ಞದ ಪುಣ್ಯ ಭೂಮಿಗೆ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೊರಂಗ್ರಪಾಡಿ ಕೆ. ಪಿ ಕುಮಾರಗುರು ತಂತ್ರಿ ಮತ್ತು ಪ್ರಧಾನ ಅರ್ಚಕರಾದ ವೇ.ಮೂ. ಶ್ರೀನಿವಾಸ ತಂತ್ರಿ ಕಲ್ಯಾ ಇವರ ಉಪಸ್ಥಿತಿಯಲ್ಲಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಸಮಕ್ಷಮದಲ್ಲಿ ಚಾಲನೆ ನೀಡಲಾಯಿತು. ಕಾಪುವಿನ ಅಮ್ಮ ನೂತನ ದೇವಳದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೊದಲು ತಾತ್ಕಾಲಿಕ ಸಾನಿಧ್ಯದಲ್ಲಿ ನೆಲೆಯಾಗಿದ್ದು, ಅದೇ ಜಾಗದಲ್ಲಿ ಇದೀಗ ನವದುರ್ಗಾ ಲೇಖನ ಮಂಟಪ ರಚನೆಯಾಗಿದ್ದು, ವಿಶೇಷವಾಗಿ ಲೇಖನವನ್ನು 9 ದಿನಗಳವರೆಗೆ ಸಾನಿಧ್ಯದಲ್ಲೇ ಬರೆಯಲು ಅಥವಾ ಒಂದು ದಿನ ದೇವಳದಲ್ಲಿಯೇ ಬರೆದು ನಂತರದ ದಿನಗಳನ್ನು ಮನೆಯಲ್ಲಿ ಪೂರೈಸಿ ಲೇಖನ ಪುಸ್ತಕವನ್ನು ಶಾಶ್ವತ ಸೇವೆಯ ಸಹಿತವಾಗಿ ದೇವಳಕ್ಕೆ ಸಮರ್ಪಿಸುವ ಪುಣ್ಯಾವಕಾಶವನ್ನು ದೇವಳದ ಅಭಿವೃದ್ಧಿ ಸಮಿತಿಯಿಂದ ಒದಗಿಸಲಾಗಿದೆ. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ, ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗಿಶ್ ವಿ. ಶೆಟ್ಟಿ, ಧಾರ್ಮಿಕ ಸಮಿತಿಯ ಪ್ರಧಾನ ಸಂಚಾಲಕರಾದ ಭಗವಾನ್ ದಾಸ್ ಶೆಟ್ಟಿಗಾರ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಕೋಶಾಧಿಕಾರಿ ಕೆ. ವಿಶ್ವನಾಥ್, ಮಹಿಳಾ ಪ್ರಧಾನ ಸಂಚಾಲಕರಾದ ಸಾವಿತ್ರಿ ಗಣೇಶ್ ಮತ್ತು ಆರ್ಥಿಕ ಸಮಿತಿಯ ಸಂಚಾಲಕರಾದ ಸುನಿಲ್ ಎಸ್. ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಳೆ : ರೋಜ್‌ಗಾರ್ ದಿವಸ್ ಮತ್ತು ಆರೋಗ್ಯ ತಪಾಸಣೆ
Posted On: 21 Sep 2025, 05:45 PM
ಶಿರ್ವ : ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರ "ರೋಜ್‌ಗಾರ್ ದಿವಸ್" ಆಚರಣೆ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮ ಶನಿವಾರ ಶ್ರೀಪಾಜಕ ಕ್ಷೇತ್ರದ ಆವರಣದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ ವಹಿಸಿದ್ದರು. ಪಾಕಜಕ್ಷೇತ್ರದ ಪ್ರಧಾನ ಅರ್ಚಕರಾದ ವೇ.ಮೂ.ಮಾಧವ ಉಪಾಧ್ಯಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ಮಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹರಿಕೃಷ್ಣ ಉಪಾಧ್ಯಾಯ ಸಾಂಪ್ರದಾಯಿಕ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಯೋಜನೆಯ ತಾಲೂಕು ಮಟ್ಟದ ಬಿಎಫ್‌ಟಿ ಶಂಕರ್ ಸಕಾಲಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಿಡಿಒ ಆನಂದ್ ಕುಲಕರ್ಣಿ, ಪಂಚಾಯತ್ ಸದಸ್ಯರಾದ ಪ್ರೇಮಾ ವೆಂಕಟೇಶ್, ಹರೀಶ್ ಶೆಟ್ಟಿ, ಯೋಜನೆಯ ತಾಲೂಕು ತಾಂತ್ರಿಕ ಸಂಯೋಜಕ ಪವನ್, ಯೋಜನೆಯ ವಿಷಯ ನಿರ್ವಾಹಕಿ ನೀತಾ ನಾಯಕ್, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯರ್ತರು, ಪಂಚಾಯತ್ ಸಿಬ್ಬಂದಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಪರಶುರಾಮ ಭಟ್ ಸ್ವಾಗತಿಸಿದರು. ಪಂಚಾಯತ್ ಉಪಾಧ್ಯಕ್ಷ ಶಶಿಧರ ವಾಗ್ಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಂತರ ಸಾಮೂಹಿಕ ಆರೋಗ್ಯ ತಪಾಸಣೆ ನಡೆಯಿತು.
ಹೆಜಮಾಡಿ ವಿಶ್ವ ಹಿಂದೂ ಪರಿಷತ್, ಸಾರ್ವಜನಿಕ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿಯಿಂದ ರೂ.1,11,111 ದೇಣಿಗೆ
Posted On: 21 Sep 2025, 02:53 PM
ಹೆಜಮಾಡಿ : ಇಲ್ಲಿನ ವಿಶ್ವ ಹಿಂದೂ ಪರಿಷತ್, ಹೆಜಮಾಡಿ ಸಾರ್ವಜನಿಕ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿಯ ವತಿಯಿಂದ ರೂ.1,11,111 (ಒಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು) ಮೊತ್ತದ ಹಣವನ್ನು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವಿಶ್ವ ಹಿಂದೂ ಪರಿಷತ್, ಹೆಜಮಾಡಿ ಅಧ್ಯಕ್ಷರು, ಪದಾಧಿಕಾರಿಗಳು, ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆಯ ಪ್ರಮುಖರು ಉಪಸ್ಥಿತರಿದ್ದರು.
ನಿನಾದ ಕ್ರಿಯೇಷನ್ ಯುಟ್ಯೂಬ್ ಚಾನಲ್ ನಲ್ಲಿ ಕಾಪು ಮಾರಿಯಮ್ಮನ ಭಕ್ತಿ ಗಾಯನ - ಕಾಪು ಶಾಸಕರಿಂದ ಬಿಡುಗಡೆ
Posted On: 21 Sep 2025, 02:14 PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಿನಾದ ಕ್ರಿಯೇಷನ್ ಯುಟ್ಯೂಬ್ ಚಾನಲ್ ಅರ್ಪಿಸುವ ಕಾಪು ಮಾರಿಯಮ್ಮನ ಭಕ್ತಿ ಗಾಯನವು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಇವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾರಿಗುಡಿಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ಮಾರಿಗುಡಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಯೋಗೀಶ್ ವಿ. ಶೆಟ್ಟಿ ಬಾಲಾಜಿ, ರಮೇಶ್ ಹೆಗ್ಡೆ ಕಲ್ಯ, ರವೀಂದ್ರ ಮಲ್ಲಾರು, ಜಯ ರಾಣ್ಯ ಮಲ್ಲಾರು, ಬಿ ಕೆ ಶ್ರೀನಿವಾಸ್ ಮಲ್ಲಾರು, ಹಾಗು ಚಂದ್ರಶೇಖರ್ ಎಸ್. ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಗೆಳೆಯರ ಬಳಗ ಅಂಬಾಗಿಲು : ಬಾಲಕಿಯೋರ್ವಳ ವೈದ್ಯಕೀಯ ವೆಚ್ಚಕ್ಕೆ ಧನ ಸಹಾಯ
Posted On: 21 Sep 2025, 01:49 PM
ಕಾಪು : ಗೆಳೆಯರ ಬಳಗ ಅಂಬಾಗಿಲು ಇವರ ವತಿಯಿಂದ ಪ್ರಥಮ ಸೇವಾರ್ಥವಾಗಿ ಚಾರ್ವಿ (9 ವರ್ಷ) ಅವರ ಶಸ್ತ್ರ ಚಿಕಿತ್ಸೆಗೆ, ಗುಂಪಿನ ಸಹಕಾರದೊಂದಿಗೆ ರೂ.21,000 ಧನ ಸಂಗ್ರಹಿಸಿ ಹಸ್ತಾಂತರಿಸಲಾಯಿತು. ಗೆಳೆಯರ ಬಳಗ ಅಂಬಾಗಿಲು ಇದರ ಸದಸ್ಯರು ಉಪಸ್ಥಿತರಿದ್ದರು.
