Updated News From Kaup

ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ : ದೈವದ ಪಾತ್ರಿ ಮೋಹನ್ ಪೂಜಾರಿಯವರಿಗೆ ಸನ್ಮಾನ

Thumbnail
Posted On: 03 Sep 2025, 09:51 AM

ಮೂಲ್ಕಿ: ಮೂಲ್ಕಿ ಹೊಸ ಅಂಗಣ ಮಾಸ ಪತ್ರಿಕೆಯ ಪ್ರತಿ ತಿಂಗಳ ತಿಂಗಳ ಬೆಳಕು ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಮೂಲ್ಕಿ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಮಾತನಾಡಿ, “ಧಾರ್ಮಿಕ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಾಧಕರನ್ನು ಗುರುತಿಸಿ ಗೌರವಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯ” ಎಂದು ಹೇಳಿದರು. ಮೂಲ್ಕಿಯ ಏಕೈಕ ಪತ್ರಿಕೆಯಾದ ‘ಹೊಸ ಅಂಗಣ’, ಹತ್ತು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದೆ. ಪತ್ರಿಕೆಯನ್ನ ನಡೆಸೋದು ಸುಲಭದ ಕೆಲಸವಲ್ಲ. ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಸಾಹಿತ್ಯದ ಮೇಲೆ ತಮ್ಮ ಆಸಕ್ತಿಯನ್ನು ಇರಿಸಿಕೊಂಡು ಪತ್ರಿಕೆಯನ್ನು ಮುನ್ನಡೆಸುತ್ತಿರುವ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ ಪ್ರಯತ್ನ ನಿಜಕ್ಕೂ ಮೆಚ್ಚುವಂತಹದ್ದು ಎಂದರು. ಹತ್ತು ವರ್ಷಗಳಿಂದ ಪತ್ರಿಕೆ ಹಲವಾರು ಹೊಸ ಲೇಖಕರಿಗೆ ಪ್ರೋತ್ಸಾಹ ನೀಡಿದೆ. ಮೂಲ್ಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾರು ಗುರುತಿಸದ ಸಾಧಕರನ್ನು ಗುರುತಿಸಿ ಅವರಿಗೆ ಪ್ರತಿ ತಿಂಗಳು ಸನ್ಮಾನ ಮಾಡುವ ಈ ಪ್ರಯತ್ನಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಬ್ಯಾಂಕ್ ಪ್ರಬಂಧಕ ವಿಠಲ್ ವಾಗ್ಲೆಯವರು ಪತ್ರಿಕೆಯ ಕಾರ್ಯವನ್ನು ಮೆಚ್ಚಿ, ಮೂಲ್ಕಿಯ ಜನಮನ ಗೆದ್ದಿರುವ ‘ಹೊಸ ಅಂಗಣ’ಕ್ಕೆ ತಮ್ಮ ಬ್ಯಾಂಕ್‌ನಿಂದ ಸಾಧ್ಯವಾದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು. ಸುಮಾರು 33 ವರ್ಷಗಳಿಂದ ದೈವ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಹಳೆಯಂಗಡಿಯ ಮೋಹನ್ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಸದಾನಂದ, ಮುಂಬೈ ಮೊಗವೀರ ಪತ್ರಿಕೆಯ ಅಶೋಕ್ ಸುವರ್ಣ, ಚಿತ್ರಾಪು ಕೇಶವಾನಂದ ಸ್ವಾಮೀಜಿ, ಸತೀಶ್ ಕಿಲ್ಪಾಡಿ, ಸರೋಜಿನಿ ಸುವರ್ಣ, ಲ. ಪುಷ್ಪರಾಜ್ ಚೌಟ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಜೋನ್ ಕ್ವಾಡ್ರಸ್, ವಾಸು ಪೂಜಾರಿ ಚಿತ್ರಾಪು, ದಿನೇಶ್ ಶೆಟ್ಟಿ, ವಕೀಲ ರವೀಶ್ ಕಾಮತ್, ಅಬ್ದುಲ್ ರಜಾಕ್, ಜಯ ಕುಮಾರ್ ಕುಬೆವೂರು, ಜಯರಾಮ್ ಬಿ.ಎಸ್. ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ದಿನೇಶ್ ಶೆಟ್ಟಿ ವಂದಿಸಿದರು. ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು.

ಕಾಪು : ಸೆ.3 ರಿಂದ ಸೀರತ್ ಅಭಿಯಾನ

Thumbnail
Posted On: 03 Sep 2025, 09:45 AM

ಕಾಪು : ಪ್ರವಾದಿ ಮುಹಮ್ಮದ್ (ಸ) ರವರು ಅರೆಬಿಕ್ ಕ್ಯಾಲೆಂಡರ್ ಪ್ರಕಾರ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಜನಿಸಿದರು, ಅವರ ಸಾರ್ವಕಾಲಿಕ ಬೋಧನೆಗಳನ್ನು ಜನತೆಗೆ ತಿಳಿಯಪಡಿಸಲು ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕದ ವತಿಯಿಂದ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) ಶೀರ್ಷಿಕೆಯಡಿ ಸೆಪ್ಟೆಂಬರ್ 3 ರಿಂದ 14ರ ವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾದಿ ಮುಹಮ್ಮದ್ (ಸ)ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು. ಈ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ. ಕಾಪು ವರ್ತುಲದಿಂದ ವಿಚಾರ ಗೋಷ್ಠಿ. ಚಹಾ ಕೂಟ, ಆಸ್ಪತ್ರೆ ಸಂದರ್ಶನ, ಹಣ್ಣು ಹಂಪಲು ವಿತರಣೆ, ವೃದ್ದಾಶ್ರಮ ಭೇಟಿ, ಅನಾಥಶ್ರಮ ಭೇಟಿ, ಪುಸ್ತಕ ಬಿಡುಗಡೆ ಕಾರ್ಯಕ್ರಮ, ವೈಯಕ್ತಿಕ ಮತ್ತು ತಂಡ್ಡ ಭೇಟಿ, ಫೋಲ್ಡರ್ಸ್ ವಿತರಣೆ, ವೈದ್ಯಕೀಯ ತಪಾಸಣಾ ಶಿಬಿರ ಇತ್ಯಾದಿ ಕಾರ್ಯಕ್ರಮಗಳು ಹಾಕಿ ಕೊಂಡ್ದಿದ್ದು ಅದನ್ನು ಈ ಅಭಿಯಾನದಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಕಾಪು ವರ್ತುಲದ ಜಮಾ ಅತೆ ಇಸ್ಲಾಮೀ ಹಿಂದ್ ನ ಅಧ್ಯಕ್ಷರಾದ ಅನ್ವರ್ ಅಲಿ ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಸಾರಿಗೆ ಇಲಾಖೆಯ ಸಹಾಯಕ ಆಯುಕ್ತರ ಭೇಟಿ

Thumbnail
Posted On: 01 Sep 2025, 10:55 AM

ಕಾಪು : ಕರ್ನಾಟಕ ಸರಕಾರದ ಸಾರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ಉಮಾ ಶಂಕರ್ ಅವರು ಭಾನುವಾರ ಪತ್ನಿ ಮತ್ತು ಪುತ್ರನೊಂದಿಗೆ ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಕಾಪು ಇಲ್ಲಿಗೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನವನ್ನು ಪಡೆದರು. ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನಲ್ಲಿ ಪ್ರಾರ್ಥಿಸಿ ಅನುಗ್ರಹ ಪ್ರಸಾದವನ್ನು ನೀಡಿದರು. ದೇವಳದ ಅಭಿವೃದ್ಧಿ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿ ವತಿಯಿಂದ ಗೌರವಿಸಲಾಯಿತು. ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಮತ್ತು ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಅವರು ಜೀರ್ಣೋದ್ಧಾರ ನಡೆದು ಬಂದ ಹಾದಿ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ವಿವರಣೆಯನ್ನು ನೀಡಿದರು.

ಬನ್ನಂಜೆಯ ನಾರಾಯಣಗುರು ವೃತ್ತ ತೆರವು ; ದಾರ್ಶನಿಕ ಪುರುಷರಿಗೆ ಮಾಡಿದ ಅಪಮಾನ - ರಘುಪತಿ ಭಟ್ ಖಂಡನೆ

Thumbnail
Posted On: 31 Aug 2025, 06:02 PM

ಉಡುಪಿ : ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಉಡುಪಿ ಬನ್ನಂಜೆಯ ನಾರಾಯಣಗುರು ವೃತ್ತವನ್ನು ತೆರವುಗೊಳಿಸಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ನಾರಾಯಣ ಗುರು ಹೆಸರಿನ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮ ಫಲಕದ ವೃತ್ತ ರಚಿಸಿದ್ದು, ಇಲ್ಲಿದ್ದ ವೃತ್ತವನ್ನು ಪೊದೆಗಳಲ್ಲಿ ಬಿಸಾಡಿರುವುದು ಖಂಡನೀಯ. ಇದು ದಾರ್ಶನಿಕ ಮಹಾನ್ ಪುರುಷರಿಗೆ ಮಾಡಿದ ಮಹಾ ಅಪಮಾನವಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ವಿಶೇಷವಾಗಿ ಪ್ರಯತ್ನಿಸಿದ ಫಲವಾಗಿ ಬನ್ನಂಜೆ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ಪದನಾಮಕರಣ ಮಾಡಿ ಸರ್ಕಾರ ಅನುಮತಿ ನೀಡಿ ಆದೇಶಿಸಿತ್ತು. ಆದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ವೃತ್ತ ತೆರವುಗೊಳಿಸಿ ಆ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮ ಫಲಕದ ವೃತ್ತ ರಚಿಸಿದವನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಡುಪಿಯ ನಿಕಟಪೂರ್ವ ಶಾಸಕರಾದ ಕೆ ರಘುಪತಿ ಭಟ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ. ನಾರಾಯಣ ಗುರುಗಳು ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು. ಜಾತಿ ಪದ್ಧತಿಯ ಅನ್ಯಾಯಗಳ ವಿರುದ್ಧ ಹೋರಾಡಿ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಗೌರವದ ಪ್ರತೀಕವಾಗಿ ಬನ್ನಂಜೆ ವೃತ್ತವನ್ನು ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ನಿರ್ಣಯಿಸಲಾಗಿತ್ತು. ನಾನು ಶಾಸಕನಾಗಿದ್ದ ಅವಧಿಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಬರುವ ವೃತ್ತ ಹಾಗೂ ಜಂಕ್ಷನ್ ಗಳಿಗೆ ಮಹಾಪುರುಷರ ಹಾಗೂ ಗಣ್ಯವ್ಯಕ್ತಿಗಳ ಹೆಸರುಗಳನ್ನು ಪದನಾಮಕರಣ ಮಾಡುವ ಬಗ್ಗೆ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿ ತೀರ್ಮಾನ ಕೈಗೊಂಡು ಬಳಿಕ ಈ ಕುರಿತಾಗಿ ಸಾರ್ವಜನಿಕರ ಆಕ್ಷೇಪಣೆ ಹಾಗೂ ಶಾಂತಿ ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧೀಕ್ಷಕರ ವರದಿ ಕೇಳಲಾಗುತ್ತದೆ. ಈ ಎಲ್ಲಾ ವೃತ್ತ/ಜಂಕ್ಷನ್ ಗಳಿಗೆ ನಗರ ಸಭೆ ನಿರ್ಣಯಿಸಿ ತೀರ್ಮಾನಿಸಿದ ಹೆಸರುಗಳಿಗೆ ಯಾವುದೇ ಆಕ್ಷೇಪಣೆ ಇಲ್ಲದೆ ಇರುವ ಬಗ್ಗೆ ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ವರದಿ ಸಲ್ಲಿಸಿ ಬಳಿಕ ನಾನು ಸರ್ಕಾರದ ಮಟ್ಟದಲ್ಲಿ ‌ಹಂತ ಹಂತವಾಗಿ ವಿಶೇಷವಾಗಿ ಪ್ರಯತ್ನಿಸಿದ ಫಲವಾಗಿ 2022, ನವೆಂಬರ್ ರಲ್ಲಿ ಕರ್ನಾಟಕ ಪುರಸಭೆಗಳ ಅಧಿನಿಯಮ 1964 211ರ ಅನ್ವಯದಂತೆ ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ವೃತ್ತಗಳಿಗೆ, ಜಂಕ್ಷನ್ ಗಳಿಗೆ ಮಹಾಪುರುಷರ ಹಾಗೂ ಗಣ್ಯವ್ಯಕ್ತಿಗಳ ಹೆಸರುಗಳನ್ನು ಪದನಾಮಕರಣ ಮಾಡಲು ಸರ್ಕಾರ ಅನುಮತಿ ನೀಡಿ ಆದೇಶಿಸಿತ್ತು. ಅದರಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ಸರ್ಕಲ್ ಗೆ "ನಾರಾಯಣಗುರು ವೃತ್ತ", ಕಲ್ಸಂಕ ವೃತ್ತಕ್ಕೆ "ಮಧ್ವಾಚಾರ್ಯ ವೃತ್ತ", ಡಯಾನಾ ಸರ್ಕಲ್ ಗೆ "ವಾದಿರಾಜ ವೃತ್ತ", ಸಂತೆಕಟ್ಟೆ ಕಲ್ಯಾಣಪುರ ರಸ್ತೆ ಜಂಕ್ಷನ್ ಗೆ "ಕೋಟಿ - ಚೆನ್ನಯ್ಯ ವೃತ್ತ", ಬ್ರಹ್ಮಗಿರಿ ದೊಡ್ಡ ಸರ್ಕಲ್ ಗೆ "ಆಸ್ಕರ್ ಫೆರ್ನಾಂಡಿಸ್ ಸರ್ಕಲ್" ಹಾಗೂ ಪರ್ಕಳದಿಂದ ಕೋಡಂಗೆ ಹಾಗೂ ಕೋಡಂಗೆಯಿಂದ ಸರಳಬೆಟ್ಟುಗೆ ಹಾದುಹೋಗುವ ಮಧ್ಯದಲ್ಲಿರುವ ವೃತ್ತಕ್ಕೆ "ಶ್ರೀರಾಮ ವೃತ್ತ" ಎಂದು ನಾಮಕರಣ ಮಾಡಲು ಆದೇಶಿಸಲಾಗಿತ್ತು. ಸರ್ಕಾರದ ಆದೇಶದಂತೆ ಈ ಎಲ್ಲಾ ಸರ್ಕಲ್ ಗಳನ್ನು ನಗರ ಸಭೆಯಿಂದ ಸುಂದರವಾಗಿ ನಿರ್ಮಿಸುವ ಯೋಜನೆ ನನ್ನದಾಗಿತ್ತು. ಆದರೆ ಇದರಲ್ಲಿ ಈಗ ನಾರಾಯಣ ಗುರು ವೃತ್ತವನ್ನು ತೆರವುಗೊಳಿಸಿ ಆ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮ ಫಲಕದ ವೃತ್ತ ರಚಿಸಿದ್ದು ತಪ್ಪು. ಇದು ಸರ್ಕಾರದ ಆದೇಶದ ಉಲ್ಲಂಘನೆಯಾಗಿದ್ದು, ತಪ್ಪು ಮಾಡಿದವರನ್ನು ತಕ್ಷಣದಲ್ಲಿ ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಬನ್ನಂಜೆ ವೃತ್ತದಲ್ಲಿ ನಗರ ಸಭೆ ವತಿಯಿಂದ ಸುಂದರವಾದ ನಾರಾಯಣ ಗುರು ವೃತ್ತ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಈ ಬಗ್ಗೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನಾನು ನೀಡುತ್ತೇನೆ ಎಂದು ತಿಳಿಸಿದ್ದಾರೆ.

ನಾರಾಯಣಗುರುಗಳಿಗೆ ಅವಮಾನ : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ಖಂಡನೆ

Thumbnail
Posted On: 31 Aug 2025, 03:57 PM

ಉಡುಪಿ : ಇಲ್ಲಿನ ನಗರಸಭೆಯಿಂದ ಅಧಿಕೃತವಾಗಿ ಸ್ಥಾಪನೆಗೊಂಡಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಬನ್ನಂಜೆ ವೃತ್ತದಿಂದ ಕಿತ್ತು ಬಿಸಾಕಿ, ಉಡುಪಿ ನಗರ ಸಂಚಾರಿ ಠಾಣೆಯ ಪಾಲುಬಿದ್ದ ಜಾಗದ ಪೊದೆಗಳ ಮಧ್ಯೆ ಬಿಸಾಡಿದ್ದು, ಶ್ರೀ ನಾರಾಯಣ ಗುರುಗಳ ಹೆಸರಿನ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕದ ವೃತ್ತವನ್ನು ರಚಿಸಿದ್ದು ಇದು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ತೋರಿದ ದೊಡ್ಡ ಅಗೌರವ, ಇದನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯು ತೀವ್ರವಾಗಿ ಖಂಡಿಸಿದೆ. ಸ್ಥಳೀಯ ಜಿಲ್ಲಾಡಳಿತ ತಕ್ಷಣ ಹೆಚ್ಚೆತ್ತು ಸ್ಪಷ್ಟನೆಯನ್ನು ಕೊಡಬೇಕು ಇಲ್ಲದಿದ್ದಲ್ಲಿ ಇಡೀ ಸಮಾಜವನ್ನು ಒಗ್ಗೂಡಿಸಿಕೊಂಡು ಮುಂದಿನ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಮ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ : ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ ಸ್ವಾಮಿಗಳ ಪಟ್ಟಾಭಿಷೇಕ ವರ್ಧಂತಿ ಉತ್ಸವ

Thumbnail
Posted On: 29 Aug 2025, 05:38 PM

ಉಡುಪಿ : ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾ ಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರ ಪಟ್ಟಾಭಿಷೇಕದ 17ನೇ ವರ್ಧಂತ್ಯುತ್ಸವ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ಸೆಪ್ಟೆಂಬರ್ 3, ಬೆಳಿಗ್ಗೆ 11 ಗಂಟೆಗೆ ಜರುಗಲಿದೆ. ಧರ್ಮಸ್ಥಳ ಶ್ರೀ ರಾಮ ಕ್ಷೇತ್ರದ ಉಡುಪಿ ರಾಮ ಸಮಿತಿಯ ಎಜುಕೇಶನಲ್ ಟ್ರಸ್ಟ್ ನ ಗೌರವ ಅಧ್ಯಕ್ಷರು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರಾದ ಕೆ. ರಘುಪತಿ ಭಟ್ ರವರು ಈ ಪಟ್ಟಾಭಿಷೇಕ ವರ್ಧಂತಿ ಉತ್ಸವದಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕಾಗಿ ವಿನಂತಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಒಬೂ ಪೂಜಾರಿ ಹಾಗೂ ಬಿ. ಎಸ್. ನಾರಾಯಣ್ ಮತ್ತು ರಘುನಾಥ್ ಉಪಸ್ಥಿತರಿದ್ದರು.

ಎಬಿವಿಪಿ ಉಡುಪಿ : ನಿಟ್ಟೆ ಭಾಗದಲ್ಲಿ ಅಸಮರ್ಪಕ ಬಸ್ ವ್ಯವಸ್ಥೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ

Thumbnail
Posted On: 29 Aug 2025, 02:01 PM

ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ನಿಟ್ಟೆ ಭಾಗದಲ್ಲಿ ಅಸಮಪರ್ಕ ಬಸ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು. ಕಾರ್ಕಳ ತಾಲೂಕಿನ ನಿಟ್ಟೆ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದು ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿಕೊಂಡು ಪ್ರಯಾಣಿಸುತ್ತಿದ್ದಾರೆ. ಈ ಮಾರ್ಗದಲ್ಲಿ ವಿಪರೀತವಾದ ಬಸ್ ಸಮಸ್ಯೆಯಿದ್ದು ಇದನ್ನು ತಕ್ಷಣದಲ್ಲಿ ಪರಿಹರಿಸುವ ಅವಶ್ಯಕತೆಯಿದೆ. ಪ್ರತಿನಿತ್ಯ ಬಸ್ಸಿನ ಫೂಟ್ ಬೋರ್ಡ್ ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುತ್ತಿದ್ದು ಪರದಾಡುವಂತಾಗಿದೆ. ಈಗಾಗಲೇ ಈ ಮಾರ್ಗದಲ್ಲಿ ಸರ್ಕಾರಿ ಬಸ್ ಮಂಜೂರಾಗಿದ್ದರು ಖಾಸಗಿ ಬಸ್ ಮಾಲೀಕರು ಹೂಡಿದ ದಾವೆಯಿಂದಾಗಿ ಅದೂ ಇಲ್ಲದಂತಾಗಿದೆ ಮತ್ತು ಖಾಸಗಿ ಬಸ್ ಗಳು ಅಗತ್ಯಕ್ಕೆ ಬೇಕಾದಷ್ಟು ಇಲ್ಲದೆ ಇರುವುದರಿಂದ ಸಮಸ್ಯೆಯಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಒಬ್ಬ ವಿದ್ಯಾರ್ಥಿ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುವ ವೇಳೆ ಕಾಲು ಜಾರಿ ಬಿದ್ದು, ಏನು ಹೆಚ್ಚಿನ ಅಪಾಯವಾಗದೆ ಇರುವುದು ನಾವು ಗಮನಿಸಬೇಕು. ಮತ್ತೊಮ್ಮೆ ದೊಡ್ಡ ಅಪಾಯ ಆಗುವ ಮುಂಚೆ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಜನಿತ್ ಶೆಟ್ಟಿ ಎನ್ನುವ ವಿದ್ಯಾರ್ಥಿಯ ದುರ್ಮರಣದ ನಂತರ ಅನೇಕ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ ಪೊಲೀಸ್ ಇಲಾಖೆ ಬಸ್ಸುಗಳಲ್ಲಿ ಕಡ್ಡಾಯವಾಗಿ ಬಾಗಿಲನ್ನು ಅಳವಡಿಸಲು ಸೂಚಿಸುವುದಾಗಿ ತಿಳಿಸಿದ್ದರು ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಾವುದೇ ರೀತಿಯ ಪ್ರಯತ್ನ ನಡೆಯದೆ ಇರುವುದು ಶೋಚನೀಯ. ಹಾಗಾಗಿ ತಕ್ಷಣ ಈ ಸಂಬಂಧ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಈ ಸಂದರ್ಭದಲ್ಲಿ ವಿವಿಧ ಮಾರ್ಗಗಳಲ್ಲಿ ನಿಟ್ಟೆಗೆ ಸಂಪರ್ಕಿಸುವ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ, ವಿಶೇಷವಾಗಿ ಸರಕಾರಿ ಬಸ್ಸುಗಳನ್ನು ಸೇರಿಸುವುದು, ಬಸ್ಸಿನಲ್ಲಿ ಮಿತಿಮೀರಿ ಪ್ರಯಾಣಿಕರನ್ನು ಕೊಂಡೊಯ್ಯದಂತೆ ನೋಡಿಕೊಳ್ಳುವುದು ಎಲ್ಲಾ ಬಸ್ಸುಗಳಲ್ಲಿ ಕಡ್ಡಾಯವಾಗಿ ಬಾಗಿಲನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಬಸ್ಸಿನ ವೇಗವನ್ನು ನಿಗ್ರಹದಲ್ಲಿ ಇಡಲು ಬೇಕಾದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಶ್ರೇಯಸ್ ಅಂಚನ್ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಿಯದರ್ಶಿನಿ ಕೊ-ಆಪರೇಟಿವ್‌ ಸೊಸೈಟಿ ಪಡುಬಿದ್ರಿ ಶಾಖೆ ವತಿಯಿಂದ ಅಶಕ್ತ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಣೆ

Thumbnail
Posted On: 29 Aug 2025, 01:57 PM

ಪಡುಬಿದ್ರಿ : ಪ್ರಿಯದರ್ಶಿನಿ ಕೊ-ಆಪರೇಟಿವ್‌ ಸೊಸೈಟಿ ಲಿ. ಇದರ ಪಡುಬಿದ್ರಿ ಶಾಖೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅಶಕ್ತ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಶುಕ್ರವಾರ ಪಡುಬಿದ್ರಿ ಶಾಖೆಯ ಆವರಣದಲ್ಲಿ ಜರಗಿತು. ತುಳುನಾಡು ಕಲಾವಿದರು ಪಡುಬಿದ್ರಿ ಇದರ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ ಮುಖ್ಯ ಅತಿಥಿಯಾಗಿ ಆಗಮಿಸಿ, ಹೊಲಿಗೆ ಯಂತ್ರ ವಿತರಿಸಿ ಮಾತನಾಡಿ, ಪ್ರಿಯದರ್ಶಿನಿ ಕೊ-ಆಪರೇಟಿವ್‌ ಸೊಸೈಟಿಯು ಕಡಿಮೆ ಅವಧಿಯಲ್ಲಿ ಗ್ರಾಹಕ ಸ್ನೇಹಿಯಾಗಿ ಉತ್ತಮ ಸೇವೆಯನ್ನು ನೀಡುತ್ತಿದೆ. ಲಾಭಾಂಶದಲ್ಲಿ ಪ್ರತಿವರ್ಷ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದರು. ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಪಡುಬಿದ್ರಿ ವಲಯ ಅಧ್ಯಕ್ಷೆ ಪುಷ್ಪಲತಾ ಗಂಗಾಧರ್ ಸೊಸೈಟಿಯ ಕಾರ್ಯಗಳನ್ನು ಶ್ಲಾಘಿಸಿ, ಶುಭ ಹಾರೈಸಿದರು. ಪ್ರಿಯದರ್ಶಿನಿ ಕೊ-ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾದ ಎಚ್. ವಸಂತ್ ಬೆರ್ನಾಡ್೯ ಮಾತನಾಡಿ, ಹಳೆಯಂಗಡಿಯಲ್ಲಿ ಸೊಸೈಟಿಯ ಪ್ರಧಾನ ಕಚೇರಿಯಿದೆ. ಪಡುಬಿದ್ರಿ ಶಾಖೆಯು ಮೂರನೇ ವರ್ಷದಲ್ಲಿ 4.5 ಕೋಟಿ ಠೇವಣಿ ಹೊಂದಿದ್ದು, 4.25 ಕೋಟಿ ಸಾಲ ನೀಡಲಾಗಿದೆ. ಶೇ.98.5 ಸಾಲ ವಸೂಲಾತಿ ಮಾಡಲಾಗಿದೆ. ಗ್ರಾಹಕರಿಗೆ ಶೇ.8 ಡಿವಿಡೆಂಡ್ ನೀಡಲಾಗುತ್ತಿದೆ. ಲಾಭಾಂಶದಲ್ಲಿ ಕಳೆದ ಬಾರಿ ವಿಕಲಚೇತನರಿಗೆ ವ್ಹೀಲ್ ಚೇರ್, ಈ ಬಾರಿ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ. 2023-24 ರಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ವಿಶಿಷ್ಟ ಸಾಧನ ಪ್ರಶಸ್ತಿ ಪಡೆದಿದ್ದು, ಈ ಬಾರಿಯು ಸೊಸೈಟಿಯ ಸಾಧನೆಗೆ ದೊರೆಯಲಿದೆ ಎಂದರು. ಆಡಳಿತ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಡುಬಿದ್ರಿ ಶಾಖಾ ಪ್ರಬಂಧಕಿ ಅಂಜಲಿ ಉಳ್ಳಾಲ್ ಎಸ್‌. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು.

ತಿರುವನಂತಪುರದಲ್ಲಿ ಕನ್ನಡ ಕೃತಿ `ಗುರುದರ್ಶನ' ಬಿಡುಗಡೆ

Thumbnail
Posted On: 27 Aug 2025, 12:02 PM

ಕಾಪು : ಲೇಖಕ ಶಿವಾನಂದ ಕೋಟ್ಯಾನ್ ಕಟಪಾಡಿ ಅವರು ನಾರಾಯಣ ಗುರುಗಳ ಕುರಿತು ಬರೆದ ಗುರುದರ್ಶನ ಕನ್ನಡ ಕೃತಿಯನ್ನು ಕೇರಳದ ತಿರುವನಂತಪುರದಲ್ಲಿ ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಭಾರತ್ ಭವನ ತಿರುವನಂತಪುರ ಕೇರಳ ಸರಕಾರಗಳ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ 2025ರ ಸಮಾರೋಪ ಸಮಾರಂಭದಲ್ಲಿ ರಾಜ್ಯ ಶಿಕ್ಷಣ ಸಚಿವ ಶಿವನ್ ಕುಟ್ಟಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆಯನ್ನು ಮುಂದಿನ ತಲೆಮಾರಿಗೆ ನೀಡಿದ ಲೇಖಕರ ಶ್ರಮ ಶ್ಲಾಘನೀಯ ಎಂದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಲೇಖಕ ಶಿವಾನಂದ ಕೋಟ್ಯಾನ್ ಕಟಪಾಡಿ,ಶ್ರೀಧರ ಶೆಟ್ಟಿ ಮುಟ್ಟಮ್ ತಿರುವನಂತಪುರ ಕನ್ನಡ ಸಂಘದ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಕಾಸರಗೋಡು, ಸಮಾಜಸೇವಕ ಮಂಜುನಾಥ ಆಳ್ವ ಮಡ್ವ, ನಿವೃತ್ತ ಅಂಡರ್ ಸೆಕ್ರಟೆರಿ ಕೇರಳ ಲೋಕಸೇವಾ ಆಯೋಗದ ಗಣೇಶ್ ಪ್ರಸಾದ್ ಪಾಣೂರು, ಅನಂತಪುರಿ ಗಡಿನಾಡ ಸಾಂಸ್ಕೃತಿಕ ಉತ್ಸವದ ಪ್ರಧಾನ ಸಂಚಾಲಕ ಎ.ಆರ್. ಸುಬ್ಬಯ್ಯ ಕಟ್ಟೆ, ತಿರುವನಂತಪುರ ತೆಲುಗು ಸಾಂಸ್ಕೃತಿಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೆ ಜಿ ಕೆ ಕಿಶೋರ್, ಸಂಘಟಕ ಸರಿನ್ ಮೊಹಮ್ಮದ್,ಡಾ ಮಲ್ಲಿಕಾರ್ಜುನ ನಾಸಿ ಏರ್ನಾಕುಲಂ, ಪ್ರೊಫೆಸರ್ ವೀರಣ್ಣ ತುಪ್ಪದ ಬೀದರ್ ಪ್ರೋ.ಶ್ರೀನಾಥ್, ವಕೀಲ ಎಂ.ಎಸ್. ಥೋಮಸ್ ಡಿ.ಸೋಜ, ಝಡ್ ಎ. ಕಯ್ಯಾರು, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪಾಲ್ಗೊಂಡಿದ್ದರು. ಲೇಖಕ ಪತ್ರಕರ್ತ ರವಿ ನಾಯ್ಕಾಪು ನಿರೂಪಣೆಗೈದರು. ಕಾಸರಗೋಡು ಗ.ಸಾ.ಸಾ. ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ ವಂದಿಸಿದರು.

ಬನ್ನಂಜೆ : ನಾರಾಯಣಗುರು ಸಂದೇಶ ಸಾಮರಸ್ಯ ಜಾಥಾ ಆಮಂತ್ರಣ ಬಿಡುಗಡೆ

Thumbnail
Posted On: 27 Aug 2025, 11:58 AM

ಉಡುಪಿ : ನಾರಾಯಣಗುರುಗಳ 171ನೇ ಜನ್ಮದಿನಾಚರಣೆಯನ್ನು ಸೆ.21ರಂದು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಯುವಜನತೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾ ದರ್ಶಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ‘ಗುರು ಸಂದೇಶ ಸಾಮರಸ್ಯ ಜಾಥಾ’ದ ಆಮಂತ್ರಣ ಪತ್ರಿಕೆ ಬಿಡುಗಡೆ ಬನ್ನಂಜೆ ಬಿಲ್ಲವರ ಸೇವಾ ಸಂಘದಲ್ಲಿ ನಡೆಯಿತು. ರಘು ಪೂಜಾರಿ ಕಲಂಜೆ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರವೀಣ್ ಎಂ. ಪೂಜಾರಿ ಅವರು, ನಾರಾಯಣಗುರು ಸಂದೇಶ ಸಾಮರಸ್ಯ ಜಾಥಾದ ಬಗ್ಗೆ ಪ್ರಸ್ತಾವನೆಗೈದರು. ಯುವ ವೇದಿಕೆ ಗೌರವಾಧ್ಯಕ್ಷ ದಿವಾಕರ ಸನಿಲ್, ಬನ್ನಂಜೆ ಬಿಲ್ಲವರ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಮಲ್ಪೆ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ಯುವವಾಹಿನಿ ಉಡುಪಿ ಘಟಕ ಅಧ್ಯಕ್ಷ ದಯಾನಂದ್ ಕರ್ಕೇರ, ಮಣಿಪಾಲ ಸೀತಾ ಲಾಜಿಸ್ಟಿಕ್ ಮಾಲಕ ಪ್ರವೀಣ್ ಪೂಜಾರಿ ಹಿರೇಬೆಟ್ಟು, ಮಾರ್ಪಳ್ಳಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ಸಂಜೀವ ಕೆ. ಪೂಜಾರಿ, ಬೊಳ್ವೆ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ದಿನೇಶ್ ಎಂ. ಸಾಲ್ಯಾನ್, ಶ್ರೀ ನಾರಾಯಣಗುರು ಯುವ ವೇದಿಕೆ ಅಧ್ಯಕ್ಷ ಮಿಥುನ್ ಪೂಜಾರಿ, ಸಂತೆಕಟ್ಟೆ-ಕಲ್ಯಾಣಪುರ ಬಿಲ್ಲವ ಸಂಘದ ಅಧ್ಯಕ್ಷ ಶೇಖರ್ ಗುಜ್ಜರಬೆಟ್ಟು, ಮಣಿಪುರ ಬಿಲ್ಲವ ಸಂಘದ ಅಧ್ಯಕ್ಷ ನಟರಾಜ ಪೂಜಾರಿ, ಉದ್ಯಾವರ ಬಿಲ್ಲವ ಸಂಘದ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಇಂದಿರಾನಗರ-ಕುಕ್ಕಿಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ, ಮೂಡನಿಡಂಬೂರು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಜೀರ್ಣೋದ್ಧಾರ ಸಮಿತಿ ಜತೆಕಾರ್ಯದರ್ಶಿ ಸಂದೀಪ್ ಸನಿಲ್, ನಿರ್ದೇಶಕ, ಚಿತ್ರನಟ ಸೂರ್ಯೋದಯ ಪೆರಂಪಳ್ಳಿ, ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಅಧ್ಯಕ್ಷ ಹರೀಶ್ ಕುಮಾರ್, ನಿಡಂಬಳ್ಳಿ, ಪಕ್ಕಿಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಪಡುಮನೆ, ಕಿದಿಯೂರು ಬಿಲ್ಲವ ಸಂಘದ ಅಧ್ಯಕ್ಷ ಸುಧಾಕರ್ ಕಲ್ಯಾಡಿ, ದೆಂದೂರು ಕಲಂಜೆ ಬಿಲ್ಲವ ಸಂಘದ ಅಧ್ಯಕ್ಷ ಸುಧಾಕರ್ ಪೂಜಾರಿ ದೆಂದೂರು, ಬಿಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ಶ್ರೀಧರ್ ಅಮೀನ್, ಯೂತ್ ಬಿಲ್ಲವ ಮೂಡುಬೆಳ್ಳೆ ಅಧ್ಯಕ್ಷ ತಿಲಕ್‌ ರಾಜ್ ಪೂಜಾರಿ, ಕೆಸ್ತೂರು ಬಿಲ್ಲವ ಸಂಘದ ಅಧ್ಯಕ್ಷ ದೀಪಕ್ ಸನಿಲ್, ಇನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಜಗದೀಶ್ ಅಮೀನ್, ಯುವವಾಹಿನಿ ಕಟಪಾಡಿ ಘಟಕ ಅಧ್ಯಕ್ಷ ಪ್ರತಿಮಾ ವಿ. ಪೂಜಾರಿ, ಬಿಲ್ಲವ ಯುವ ವೇದಿಕೆ ಗೌರವ ಸಲಹೆಗಾರರು, ಗುರು ಸಂದೇಶ ಜಾಥಾ ಸಂಚಾಲಕರು, ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಬಿಲ್ಲವ ಯುವ ವೇದಿಕೆ ಉಪಾಧ್ಯಕ್ಷ ಮಹೇಶ್ ಕುಮಾರ್ ಮಲ್ಪೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಜೇಯ ಪೂಜಾರಿ ಮೇಲ್ಮನೆ ವಂದಿಸಿದರು. ತೇಜಸ್ ಬಂಗೇರ ನಿರೂಪಿಸಿದರು.