Updated News From Kaup
ಕಾಪು ಕಿಶೋರ ಯಕ್ಷಗಾನ ಸಂಭ್ರಮ - 2024 ಉದ್ಘಾಟನೆ

Posted On: 15-12-2024 06:29PM
ಕಾಪು : ಪ್ರದರ್ಶನ ಸಂಘಟನಾ ಸಮಿತಿ ಶಿರ್ವ ಸಹಯೋಗದೊಂದಿಗೆ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರು ಆಯೋಜಿಸಿದ ಕಾಪು ಕ್ಷೇತ್ರದ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ "ಕಿಶೋರ ಯಕ್ಷಗಾನ ಸಂಭ್ರಮ - 2024" ಇದರ ಉದ್ಘಾಟನಾ ಸಮಾರಂಭ ರವಿವಾರ ಶಿರ್ವ ಮಹಿಳಾ ಸೌಧದ ಬಳಿ ನಡೆಯಿತು.
ಶಿರ್ವ ಪ್ರದರ್ಶನ ಸಂಘಟನಾ ಸಮಿತಿ ಗೌರವಾಧ್ಯಕ್ಷರು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.
ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ, ಪ್ರದರ್ಶನ ಸಂಘಟನಾ ಸಮಿತಿ, ಶಿರ್ವ ವತಿಯಿಂದ ಆಯೋಜಿಸಲಾದ ಈ "ಕಿಶೋರ ಯಕ್ಷಗಾನ - 2024" ಶಿರ್ವಾ ಮಹಿಳಾ ಸೌಧದ ಬಳಿ ಡಿ. 15 ರಿಂದ ಡಿ. 17ರ ವರೆಗೆ ಸಂಜೆ 5 ರಿಂದ ರಾತ್ರಿ 8 ರ ವರೆಗೆ ದಿನಕ್ಕೆ ಎರಡು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಎರಡು ಪ್ರಸಂಗಗಳಂತೆ ನಡೆಯಲಿದೆ.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕಿ ಶಾರದಾ ಎಂ, ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್, ಶಿರ್ವ ಪ್ರದರ್ಶನಾ ಸಂಘಟನಾ ಸಮಿತಿ ಸಂಚಾಲಕರಾದ ಶ್ರೀಪತಿ ಕಾಮತ್, ಶಿರ್ವ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ವಿಠಲ್ ಬಿ ಅಂಚನ್, ಯಕ್ಷಗಾನ ಕಲಾರಂಗ ರಿ. ಉಪಾಧ್ಯಕ್ಷರಾದ ವಿ.ಜಿ ಶೆಟ್ಟಿ, ಎಸ್.ವಿ ಭಟ್, ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್ ಮತ್ತಿತರರು ಉಪಸ್ಥಿತರಿದ್ದರು.
ಪೇಜಾವರ ಶ್ರೀಗಳ ಅವಹೇಳನ ಸಹಿಸುವುದಿಲ್ಲ - ಪೆರ್ಣಂಕಿಲ ಶ್ರೀಶ ನಾಯಕ್

Posted On: 14-12-2024 07:15PM
ಉಡುಪಿ : ವಿಶ್ವಾದ್ಯಂತ ಕೋಟ್ಯಾಂತರ ಭಕ್ತಾಭಿಮಾನಿಗಳನ್ನು ಹೊಂದಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ, ತೀರಾ ಕೆಳಮಟ್ಟದಲ್ಲಿ ಅವಹೇಳನ ಮಾಡುವ ಘಟನೆಗಳು ನಡೆಯುತ್ತಿರುವ ಅತ್ಯಂತ ಖಂಡನೀಯ. ಉಡುಪಿಯ ಅಷ್ಟ ಮಠಗಳ ಯತಿಗಳ ಪರಂಪರೆಯಲ್ಲಿ ಯಾರೂ ಸಂವಿಧಾನದ ವಿರುದ್ಧ ಮಾತನಾಡಿದ ಉದಾಹರಣೆಗಳಿಲ್ಲ. ಅದರಲ್ಲೂ ಪೇಜಾವರ ಮಠದ ಹಿರಿಯರಾಗಿದ್ದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಂತೂ ಸಂವಿಧಾನದ ಮೇಲೆ ವಿಶೇಷ ಗೌರವವನ್ನು ಹೊಂದಿದ್ದರು, ತಾವೂ ಅದನ್ನು ಪಾಲಿಸುತ್ತಿದ್ದರು, ಇತರರೂ ಪಾಲಿಸುವಂತೆ ಹೇಳುತ್ತಿದ್ದರು.
ಅವರ ಶಿಷ್ಯೋತ್ತಮರಾದ ಶ್ರೀ ವಿಶ್ವಪ್ರಸನ್ನ ತೀರ್ಥರೂ ಈ ದೇಶದ ಸಂವಿಧಾನಕ್ಕನುಗುಣವಾಗಿ, ಸಂವಿಧಾನದ ಆಶಯದಂತೆ ಸಮಾಜೋದ್ಧಾರಕ್ಕಾಗಿ ಶ್ರಮಿಸುತಿದ್ದಾರೆ. ಅವರ ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣದಲ್ಲಿನ ಶ್ರಮ, ಅಸಂಖ್ಯ ಗೋವುಗಳ ಸೇವೆ, ದಲಿತರಿಗೆ ಭಕ್ತಿ ಮಾರ್ಗದರ್ಶನ, ಅಶಕ್ತರಿಗೆ ಮನೆ ನಿರ್ಮಾಣ, ನಕ್ಸಲ್ ಪೀಡಿತ ಪ್ರದೇಶಗಳ ಜನರಿಗೆ ಸಾಂತ್ವಾನ, ಮಠಮಂದಿರಗಳ ಜೀರ್ಣೋದ್ಧಾರ ಇತ್ಯಾದಿ ಸತತ ಮತ್ತು ನಿರಂತರ ಯಶಸ್ವಿ ಸಾಧನೆಗಳನ್ನು ಸಹಿಸದ ಕೆಲವು ಫಡಪೋಶಿಗಳು ವಿಜಯಪುರದಲ್ಲಿ ಶ್ರೀಗಳ ವಿರುದ್ಧ ತೀರಾ ಅಸಂವಿಧಾನಿಕ, ಅಸಂಸದೀಯ, ಕಾನೂನು ಉಲ್ಲಂಘಿತ ಪದಗಳನ್ನು ಬಳಸಿ ಮಾತನಾಡಿರುವುದನ್ನು ಅವರ ಭಕ್ತಕೋಟಿ ಎಂದೂ ಸಹಿಸುವುದಿಲ್ಲ. ಮನುಷ್ಯನ ಘನತೆಯನ್ನೇ ಅವಹೇಳನ ಮಾಡುವ ಇಂತಹ ಪದಗಳ ಬಳಕೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಇದ್ದಿದ್ದರೇ ಉಗ್ರವಾಗಿ ವಿರೋಧಿಸುತಿದ್ದರು, ಆದರೇ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರು ಆಡಿರುವ ಈ ಅಸಂವಿಧಾನಿಕ ಪದಗಳು ಈ ದೇಶದ ಸಂವಿಧಾನವನ್ನು ರೂಪಿಸಿದ ಅಂಬೇಡ್ಕರ್ ಅವರಿಗೆ ಮಾಡಿರುವ ಘೋರ ಅವಮಾನವಲ್ಲದೇ ಬೇರೆನೂ ಅಲ್ಲ.
ಪೇಜಾವರ ಶ್ರೀಗಳು ತಾವು ಸಂವಿಧಾನದ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ, ಆದರೂ ತುಚ್ಛವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸಮಸ್ತ ಹಿಂದೂ ಸಮಾಜ ಸಹಿಸುವುದಿಲ್ಲ. ಆದ್ದರಿಂದ ಇನ್ನು ಮುಂದೆ ಪೇಜಾವರ ಶ್ರೀಗಳ ವಿರುದ್ಧವಾಗಲೀ ಹಿಂದೂ ಧರ್ಮದ ವಿರುದ್ಧವಾಗಲಿ ಸುಳ್ಳು ಆರೋಪಗಳನ್ನು ಹೊರಿಸುವುದಾಗಲಿ ಅವಹೇಳನ ಮಾಡುವುದಾಗಿ ಮಾಡಿದರೇ ಶ್ರೀಗಳ ಅಭಿಮಾನಿಗಳು ಸುಮ್ಮನಿರುವುದಿಲ್ಲ.
ಹಿಂದೂ ನಾಯಕ ಮೇಲೆ ಇಲ್ಲಸಲ್ಲದ ಕಾರಣಗಳಿಗೆ ಸುಮೋಟೋ ಕೇಸು ಹಾಕುವ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ಉಡುಪಿ ಎಸ್ಪಿ ಅವರು, ಪೇಜಾವರ ಶ್ರೀಗಳ ವಿರುದ್ಧ ಸಾರ್ವಜನಿಕವಾಗಿ ಶಾಂತಿಭಂಗವಾಗುವ ರೀತಿಯಲ್ಲಿ ಬೆದರಿಕೆ ರೀತಿಯಲ್ಲಿ ಮಾತುಗಳನ್ನಾಡುವವರ ಮೇಲೆಯೂ ಸುಮೋಟೋ ಕೇಸು ದಾಖಲಿಸಿ ತಮ್ಮ ಸಂವಿಧಾನಬದ್ದತೆಯನ್ನು ತೋರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು ಹೊಸ ಮಾರಿಗುಡಿ : ನೂತನ ಆಡಳಿತ ಮಂಡಳಿ ಪದಗ್ರಹಣ

Posted On: 14-12-2024 05:59PM
ಕಾಪು : ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಅಧೀನದ ಕಾಪು ಹೊಸ ಮಾರಿಗುಡಿ ದೇಗುಲದ ನೂತನ ವ್ಯವಸ್ಥಾಪನ ಸಮಿತಿಯ ಅಧಿಕಾರ ಸ್ವೀಕಾರ ಕಾರ್ಯಕ್ರಮ ಶನಿವಾರ ನಡೆಯಿತು. ದತ್ತಿ ಇಲಾಖೆ ಆಯುಕ್ತ ಪ್ರಶಾಂತ್ ಕುಮಾರ್ ಶೆಟ್ಟಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ರವಿಕಿರಣ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ದೇಗುಲ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರದ ಸುತ್ತೋಲೆ ಪ್ರಕಾರ ಆಡಳಿತ ಕಮಿಟಿ ರಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಜೀರ್ಣೋದ್ದಾರ ಕಮಿಟಿ ಹಾಗೂ ಆಡಳಿತ ಕಮಿಟಿಯ ಜಂಟಿ ನಿಯೋಗ ಮುಖ್ಯಮಂತ್ರಿ ಭೇಟಿ ಮಾಡಿ ಬ್ರಹ್ಮಕಲಶೋತ್ಸವ ಪೂರ್ವಭಾವಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ದೇಗುಲದ ವಿಚಾರವಾಗಿ ಹಗುರವಾಗಿ ಬರೆಯುವುದು ಖಂಡನೀಯವಾಗಿದ್ದು, ಸರ್ಕಾರದ ಸುತ್ತೋಲೆ ಪ್ರಕಾರ ರಾಜಕೀಯ ರಹಿತವಾಗಿ ಸಾಮಾಜಿಕ ಧಾರ್ಮಿಕ ಬದ್ಧತೆಯ ಆಡಳಿತ ಮಂಡಳಿ ರಚನೆಯಾಗಿದೆ, ಈ ಕಮಿಟಿಗೆ ಜವಾಬ್ದಾರಿ ಹೆಚ್ಚಿದ್ದು ಎಲ್ಲರೂ ಒಟ್ಟಾಗಿ ಅಮ್ಮನ ಸೇವೆ ಮಾಡಬೇಕು ಮತ್ತು ಭಕ್ತರು ಸಾಮಾಜಿಕ ಜಾಲತಾಣದ ಸಂದೇಶಗಳಿಗೆ ತಲೆಗೆಡಿಸಿಕೊಳ್ಳದೆ ನಿರಂತರ ಅಮ್ಮನ ಸೇವೆ ಮಾಡಲು ಕಟಿಬದ್ದರಾಗೋಣ ಎಂದರು.
ಈ ಸಂಧರ್ಭದಲ್ಲಿ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯರಾದ ಮಾಧವ ಪಾಲನ್, ವೇದಮೂರ್ತಿ ಶ್ರೀನಿವಾಸ ತಂತ್ರಿ, ಶೇಖರ್ ಸಾಲಿಯಾನ್, ಜಯಲಕ್ಷ್ಮಿ ಸುರೇಶ್ ಶೆಟ್ಟಿ, ಮನೋಹರ್ ರಾವ್, ರವೀಂದ್ರ, ಚರಿತ ದೇವಾಡಿಗ, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಕಾಪು ದಿವಾಕರ ಶೆಟ್ಟಿ, ಯೋಗಿಶ್ ಶೆಟ್ಟಿ ಬಾಲಾಜಿ, ರಮೇಶ್ ಹೆಗ್ಡ ಕಲ್ಯಾ, ಅಧಿಕಾರಿಗಳಾದ ಪ್ರಶಾಂತ್ ಕುಮಾರ್ ಶೆಟ್ಟಿ, ರವಿಕುಮಾರ್, ಕಾಪು ಲಕ್ಷ್ಮೀ ಜನಾರ್ದನ ದೇಗುಲದ ಆಡಳಿತ ಮೊಕ್ತಸರ ಮನೋಹರ್ ಶೆಟ್ಟಿ, ಎಲ್ಲೂರು ವಿಶ್ವೇಶ್ವರ ದೇಗುಲದ ಆಡಳಿತ ಮೊಕ್ತೆಸರ ಅರುಣ್ ಶೆಟ್ಟಿ, ಪೆರ್ಡೂರು ಅನಂತಪದ್ಮನಾಭ ದೇಗುಲದ ಆಡಳಿತ ಮೊಕ್ತೆಸರ ಪ್ರಮೋದ್ ರೈ ಉಪಸ್ಥಿತರಿದ್ದರು.
ಕ್ರಿಯೇಟಿವ್ ಕಾಲೇಜಿನಲ್ಲಿ ಮೈಸೂರು ವಿಭಾಗೀಯ ಮಟ್ಟದ ಸಾಂಸ್ಕೃತಿಕ, ಪಠ್ಯೇತರ ಸ್ಪರ್ಧೆಗಳು

Posted On: 13-12-2024 05:44PM
ಕಾರ್ಕಳ : ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ( ಪದವಿಪೂರ್ವ ) ಉಡುಪಿ ಜಿಲ್ಲೆ ಹಾಗೂ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ಮೈಸೂರು ವಿಭಾಗೀಯ ಮಟ್ಟದ ಸಾಂಸ್ಕೃತಿಕ ಮತ್ತು ಪಠ್ಯೇತರ ಸ್ಪರ್ಧೆಗಳು ಸಪ್ತಸ್ವರ ವೇದಿಕೆ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಮಮತಾ ದೇವಿ ಜಿ ಎಸ್ ರವರು ಮಾತನಾಡಿ, ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅಂದರೆ ಅರ್ಧ ಜಯಶಾಲಿಯಾದಂತೆ. ಪಠ್ಯ ವಿಷಯದ ಕಲಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮ ಪ್ರತಿಭೆಯನ್ನು ತೋರಿಸಿ ವಿಜೇತರಾಗಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಶಿಕ್ಷಣ ಇಲಾಖೆ( ಪದವಿಪೂರ್ವ ) ಉಡುಪಿ ಜಿಲ್ಲೆ ಇದರ ಉಪನಿರ್ದೇಶಕರಾದ ಮಾರುತಿರವರು ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಇಂತಹ ಶೈಕ್ಷಣಿಕ ಸಂಸ್ಥೆಯನ್ನು ಕಟ್ಟಿ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವುದು ಅದ್ಭುತ ಸಾಧನೆಯೇ ಸರಿ. ವಿದ್ಯಾರ್ಥಿಗಳು ಭಾರತದ ಮುಂದಿನ ಆಶಾಕಿರಣಗಳು, ಭವಿಷ್ಯತ್ತಿನಲ್ಲಿ ದೇಶವನ್ನು ಆಳುವವರು,ಆದುದರಿಂದ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಉಪ ನಿರ್ದೇಶಕರಾದ ಮಾರುತಿ, ತಹಶೀಲ್ದಾರರಾದ ಪ್ರದೀಪ್ ಆರ್.,ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನೀತಾ ಪೂಜಾರಿ, ಸಂಸ್ಥೆಯ ಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್, ಡಾ. ಗಣನಾಥ ಶೆಟ್ಟಿ, ಆದರ್ಶ ಎಂ.ಕೆ., ಗಣಪತಿ ಭಟ್ ಕೆ. ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಲೋಹಿತ್ ನಿರೂಪಿಸಿ, ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ವರ್ಗೀಸ್ ಪಿ., ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದಿನೇಶ್ ಎಂ ಕೊಡವೂರು, ಸಹ ಸಂಸ್ಥಾಪಕರಲ್ಲಿ ಓರ್ವರಾದ ಅಶ್ವತ್ ಎಸ್.ಎಲ್., ಉಪ ನಿರ್ದೇಶಕರಾದ ಮಾರುತಿ, ಉಡುಪಿ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಸುಚೇತಾ, ಸಂಸ್ಥಾಪಕರುಗಳಾದ ಅಮೃತ್ ರೈ, ವಿಮಲ್ ರಾಜ್ ಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಿಯಾಂಕ ನಿರೂಪಿಸಿ ವಂದಿಸಿದರು. ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ಕನ್ನಡ ಉಪನ್ಯಾಸಕ ಶಿವಕುಮಾರ್ ವಾಚಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಪು : ಸಮಾಜ ರತ್ನ ದಿ. ಲೀಲಾಧರ ಶೆಟ್ಟಿ, ವಸುಂದರಾ ಶೆಟ್ಟಿ ಪುಣ್ಯಸ್ಮರಣೆ ; ಬೃಹತ್ ರಕ್ತದಾನ ಶಿಬಿರ

Posted On: 12-12-2024 06:27PM
ಕಾಪು : ಕಾಪುವಿನ ಸಮಾಜ ಸೇವಕ, ಸಮಾಜ ರತ್ನ ದಿವಂಗತ ಲೀಲಾಧರ ಶೆಟ್ಟಿ ಮತ್ತು ವಸುಂದರಾ ಶೆಟ್ಟಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಗುರುವಾರ ಕಾಪು ಶ್ರೀ ವೀರಭದ್ರ ಸಭಾಭವನದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದ ಮೊಕ್ತೇಸರ ಮನೋಹರ ಎಸ್ ಶೆಟ್ಟಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ನಾವು ಜೀವನದಲ್ಲಿ ಯಾವುದಾದರೂ ಒಳ್ಳೆಯ ಕೆಲಸ ಮಾಡಿ ಸ್ವಲ್ಪವಾದರೂ ಸಮಾಜ ಸೇವೆ ಮಾಡೋಣ. ದಿ. ಲೀಲಾಧರ ಶೆಟ್ಟಿಯವರು ನಮ್ಮನ್ನು ಅಗಲಿ ಒಂದು ವರ್ಷವಾದರೂ ಅವರು ಮಾಡಿದ ಸಮಾಜ ಸೇವೆ ನಿತ್ಯ ನಿರಂತರ ಎಂದು ಹೇಳಿದರು.
ಕಾಪು ತಹಸೀಲ್ದಾರ್ ಡಾ. ಪ್ರತಿಭಾ ಆರ್ ಮಾತನಾಡಿ, ಸಮಾಜ ಸೇವಕ ದಿ. ಲೀಲಾಧರ ಶೆಟ್ಟಿ ಅವರ ಸಾಮಾಜಿಕ ಸೇವೆ, ರಕ್ತದಾನ ಶಿಬಿರ, ಅಶಕ್ತರಿಗೆ, ಶಾಲಾ ಮಕ್ಕಳಿಗೆ ನೀಡಿದ ಸಹಾಯ ಎಂದೂ ಮರೆಯಲಾಗದ ಉದಾಹರಣೆಯಾಗಿದೆ ಎಂದರು.
ಸನ್ಮಾನ : ಮುಳುಗು ತಜ್ಞ ಅಶೋಕ್ ಶೆಟ್ಟಿ ದೆಂದೂರು ದಂಪತಿಗಳನ್ನು ಹಾಗೂ ಪುರ ಸಭಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬೃಹತ್ ರಕ್ತದಾನ ಶಿಬಿರ ನೆರವೇರಿತು. ಗಣ್ಯರು ದಿ. ಲೀಲಾಧರ ಶೆಟ್ಟಿ ದಂಪತಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಪುರಸಭಾಧ್ಯಕ್ಷೆ ಕುಮಾರಿ ಹರಿಣಾಕ್ಷಿ ದೇವಾಡಿಗ, ಶ್ರೀಧರ್ ಶೆಟ್ಟಿ ಮುಲುಂಡ್, ಯೋಗೇಶ್ ಶೆಟ್ಟಿ, ಜಯಲಕ್ಷ್ಮಿ ಸುರೇಶ್ ಶೆಟ್ಟಿ, ಪ್ರಭಾಕರ್ ಪೂಜಾರಿ, ಡಾ. ವೀಣಾ ಕುಮಾರಿ, ಡಾ. ರಾಜಶ್ರೀ ಕಿಣಿ, ಮೋಹನ್ ದಾಸ್ ಶೆಟ್ಟಿ ಕರಂದಾಡಿ, ಕುತ್ಯಾರು ಪ್ರಸಾದ್ ಶೆಟ್ಟಿ, ರಮೇಶ್ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು. ಪ್ರಭಾತ್ ಶೆಟ್ಟಿ ಸ್ವಾಗತಿಸಿದರು. ಸೂರಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವಾಕರ್ ಶೆಟ್ಟಿ ಮಲ್ಲಾರು ನಿರೂಪಿಸಿದರು.
ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ : ಸೃಜನ ಕುಲಾಲ್ ಗೆ ಚಿನ್ನ, ಬೆಳ್ಳಿ ಪದಕ

Posted On: 11-12-2024 05:06PM
ಕಾರ್ಕಳ : ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಾಲಕಿಯರ 16 ವರ್ಷ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಾಂತವಾರ ಗ್ರಾಮದ ಬಾರಾಡಿಯ ಸೃಜನ ಕುಲಾಲ್ ಇವರು ಭಾಗವಹಿಸಿ ಚಿನ್ನದ ಪದಕ ಕುಮಿಟೆಯಲ್ಲಿ(ಫೈಟಿಂಗ್ ನಲ್ಲಿ) ಹಾಗೂ ಬೆಳ್ಳಿಯ ಪದಕವನ್ನು ಕಟ ವಿಭಾಗದಲ್ಲಿ ಪಡೆದಿರುತ್ತಾರೆ.
ಇವರು ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಇಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿನಿಯಾಗಿದ್ದಾರೆ.
ಇವರು ಕಾಂತಾವರ ಗ್ರಾಮದ ಬಾರಾಡಿ ಜಗದೀಶ್ ಕುಲಾಲ್ ಹಾಗೂ ಜ್ಯೋತಿ ಕುಲಾಲ್ ದಂಪತಿಗಳ ಪುತ್ರಿ. ಇವರಿಗೆ ಕರಾಟೆ ಶಿಕ್ಷಕರಾದ ಸತೀಶ್ ಬೆಳ್ಮಣ್ ಹಾಗೂ ಮೃಣಾಲಿ ಶೆಟ್ಟಿ ಇವರು ತರಬೇತಿ ನೀಡಿರುತ್ತಾರೆ. ಕಾಂತಾವರ ಕುಲಾಲ ಸಂಘದ ಅಧ್ಯಕ್ಷರು ವಿಠಲ ಮೂಲ್ಯ ಬೇಲಾಡಿ, ಸಂಘದ ಸರ್ವ ಸದಸ್ಯರು ಶುಭ ಹಾರೈಸಿದ್ದಾರೆ.
Hi
ಡಿ.23ರಿಂದ 29: ಪಡುಕುತ್ಯಾರಿನಲ್ಲಿರುವ ಆನೆಗುಂದಿ ಮಠದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ - 2024

Posted On: 11-12-2024 04:53PM
ಶಿರ್ವ : ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಡಿಸೆಂಬರ್ 23ರಿಂದ 29ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ 2024 ನಡೆಯಲಿದೆ.
ಮಹಾಸಂಸ್ಥಾನದ ಆನೆಗುಂದಿ ಪ್ರತಿಷ್ಠಾನದ ನೇತೃತ್ವದಲ್ಲಿ ಯಕ್ಷಗಾನ ಕಲಾ ಪೋಷಕರ ಸಹಕಾರದೊಂದಿಗೆ ಸತತ4 ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸಪ್ತಾಹ 2024 ದಶಂಬರ 23 ರಿಂದ ಆರಂಭಗೊಳ್ಳಲಿದೆ. 2021ರಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹ ಆರಂಭಗೊಂಡಿದ್ದು, ಕಾರ್ಯಕ್ರಮದಲ್ಲಿ ಪ್ರಸಿದ್ದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರೂ ಪಾಲ್ಗೊಳ್ಳುತ್ತಿದ್ದಾರೆ.
ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವ ಹಾಗೆಯೇ ಕಲಾವಿದರನ್ನು ಗುರುತಿಸಿ ಗೌರವಿಸುವ ಯಕ್ಷ ಸೇವೆಯನ್ನು ಮಹಾಸಂಸ್ಥಾನದಿಂದ ನಡೆಸಲಾಗುತ್ತಿದೆ. ದಶಂಬರ 23ರಂದು ಸಪ್ತಾಹವನ್ನು ಅಪರಾಹ್ನ 2.30 ಘಂಟೆಗೆ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪಪ್ರಜ್ವಲಗೊಳಿಸಿ ಉದ್ಘಾಟಿಸಲಿರುವರು. ಅತಿಥಿಗಳಾಗಿ ಕಣಿಪುರ ಮಾಸ ಪತ್ರಿಕೆ ಸಂಪಾದಕ ಹಾಗೂ ಯಕ್ಷಗಾನ ಚಿಂತಕ ಶ್ರೀ ಎಂ ನಾ ಚಂಬಲ್ತಿಮಾರ್ ಕುಂಬಳೆ ಭಾಗವಹಿಸುವರು.
ದಿನಾಂಕ 23 ರಂದು ಅಂಗದ ಸಂಧಾನ , 24ರಂದು ಶಲ್ಯ ಸಾರಥ್ಯ, 25ರಂದು ಜಾಂಬವತಿ ಕಲ್ಯಾಣ, 26ರಂದು ಗುರುದಕ್ಷಿಣೆ, 27ರಂದು ಊರ್ವಶಿ ಶಾಪ, 28ರಂದು ಸಮರ ಸನ್ನಾಹ, 29ರಂದು ಸುಧನ್ವಾರ್ಜುನದೊಂದಿಗೆ ಸಂಪನ್ನಗೊಳಲಿದೆ. ದಶಂಬರ್ 29ರಂದು ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪದ ವಿಶೇಷ ಸಮಾರಂಭದಲ್ಲಿ ವಿವಿಧ ಗಣ್ಯರು ಯಕ್ಷಗಾನ ಕಲಾ ಪೋಷಕರು ಭಾಗವಹಿಸುವರು. ಜಿ.ಟಿ ಆಚಾರ್ಯ ಮುಂಬಯಿ, ಜನಾರ್ಧನ ಆಚಾರ್ಯ ಕನ್ಯಾನ ಇವರು ತಾಳಮದ್ದಳೆ ಸಪ್ತಾಹ 2024ರ ಸಂಯೋಜಕರಾಗಿದ್ದಾರೆ ಎಂದು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರ್, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.13 : ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ಕುಟ್ಯಣ್ಣನ ಕುಟುಂಬ ತುಳು ನೂತನ ನಾಟಕ ಪ್ರದರ್ಶನ

Posted On: 11-12-2024 03:26PM
ಕಾಪು : ಸಮಾಜತ್ನ ದಿ| ಕೆ. ಲೀಲಾಧರ ಶೆಟ್ಟಿ ಅವರ ಸಾರಥ್ಯದ ಕಾಪು ರಂಗತರಂಗ ಕಲಾವಿದರು ತಂಡದ ಕುಟ್ಯಣ್ಣನ ಕುಟುಂಬ ತುಳು ನೂತನ ನಾಟಕವು ಡಿ.13 ರಂದು ಸಂಜೆ 6:30ಕ್ಕೆ ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ಪ್ರದರ್ಶನಗೊಳ್ಳಲಿದೆ.
ಇಂದಿನ ಪ್ರಸ್ತುತತೆಗೆ ಅನುಗುಣವಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕುಟ್ಯಣ್ಣನ ಕುಟುಂಬ ತುಳು ನಾಟಕವು ಸಾಂಸಾರಿಕ ಮತ್ತು ಹಾಸ್ಯಮಯವಾಗಿ ಮೂಡಿ ಬಂದಿದ್ದು ಕುಟುಂಬ ಕುಳಿತು ವೀಕ್ಷಿಸುವಂತಿದೆ.
ಸಂದೀಪ್ ಶೆಟ್ಟಿ ಮಾಣಿಬೆಟ್ಟು ರಚನೆಯ ಈ ನಾಟಕಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ನಿರ್ದೇಶನ ಮತ್ತು ಶರತ್ ಉಚ್ಚಿಲ ಸಂಗೀತ ನೀಡಿದ್ದಾರೆ. ಪ್ರಥಮ ಪ್ರದರ್ಶನದಲ್ಲೇ ಜನರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು ಪ್ರದರ್ಶನಗೊಂಡಲ್ಲೆಲ್ಲಾ ಉತ್ತಮ ಜನಸ್ಪಂದನೆ ದೊರಕುತ್ತಿದೆ.
ಕಾಪು ಜೇಸಿಐನ ಜೇಸಿ ಭವನ ಮತ್ತು ತರಬೇತಿ ಕೇಂದ್ರದ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಸಹಾಯಾರ್ಥವಾಗಿ ಕುಟ್ಯಣ್ಣನ ಕುಟುಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಾಪು ಜೇಸಿಐ ಮತ್ತು ಕಾಪು ರಂಗತರಂಗ ಕಲಾವಿದರ ಜಂಟಿ ಪ್ರಕಟಣೆಯು ತಿಳಿಸಿದೆ.
ನಾಳೆ (ಡಿ.12) : ಕಾಪುವಿನಲ್ಲಿ ಬೃಹತ್ ರಕ್ತದಾನ ಶಿಬಿರ

Posted On: 11-12-2024 07:43AM
ಕಾಪು : ಸಮಾಜ ರತ್ನ ದಿ| ಕೆ. ಲೀಲಾಧರ ಶೆಟ್ಟಿ ಮತ್ತು ದಿ| ವಸುಂದರಾ ಎಲ್. ಶೆಟ್ಟಿ ಇವರ ಫ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಮಾಜ ಸೇವಕ ಕಾಪು ಸೂರಿ ಶೆಟ್ಟಿ, ದಿ | ಲೀಲಾಧರ ಶೆಟ್ಟಿ ಕುಟುಂಬಿಕರು ಹಾಗೂ ಅವರ ಅಭಿಮಾನಿ ಬಳಗ, ಕಾಪು ಪುರಸಭೆಯ ಪೌರ ಕಾರ್ಮಿಕರ ಸಹಕಾರದಲ್ಲಿ ಗುರುವಾರ (ಡಿ.12)ದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ಗಂಟೆಯವರೆಗೆ ಶ್ರೀ ವೀರಭದ್ರ ದೇವಸ್ಥಾನ ಸಭಾಂಗಣ, ಕಾಪು ಇಲ್ಲಿ ಬೃಹತ್ ರಕ್ತದಾನ ಶಿಬಿರ ಜರಗಲಿದೆ.
ಕಾರ್ಯಕ್ರಮವನ್ನು ಸಾಯಿರಾಧಾ ಗ್ರೂಪ್ ಆಡಳಿತ ನಿರ್ದೇಶಕ ಮನೋಹರ್, ಎಸ್, ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಕಾಪು ಪುರಸಭೆ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ, ಕಾಪು ತಾಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್., ಕಾಪು ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಚಿಕ್ಕಲಪದನಿ, ಬಾಲಾಜಿ ಯೋಗೀಶ್ ಶೆಟ್ಟಿ ಕಾಪು, ಶ್ರೀಧರ್ ಸಿ, ಶೆಟ್ಟಿ ಮುಲುಂದು, ಮುಂಬೈ, ಉದ್ಯಮಿ ಪ್ರಭಾಕರ್ ಎಸ್, ಪೂಜಾರಿ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವೈದಾಧಿಕಾರಿ ಡಾ| ವೀಣಾ ಕುಮಾರಿ, ಕಾಪು ಬಂಟರ ಸಂಘ ಮಹಿಳಾ ವಿಭಾಗದ ಅಧ್ಯಕ್ಷರಾದ ಜಯಲಕ್ಷ್ಮಿ ಸುರೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಕುಟಚಾದ್ರಿ, ಕರಂದಾಡಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ| ರಾಜಶ್ರೀ ಕಿಣಿ, ವೈದ್ಯಾಧಿಕಾರಿ ಡಾ| ದೃತಿ ವಿ ಆಳ್ವ, ಮಹೇಶ್ ಎಸ್ ಶೆಟ್ಟಿ ಹೊಸರಸು ಹೊಸಮನೆ ಪಣಿಯೂರು, ಉದ್ಯಮಿ ಖಾದರ್ ಶಾಲಿ ಮೂಳೂರು ಭಾಗವಹಿಸಲಿದ್ದಾರೆ.
ಈ ಸಂದರ್ಭ ಕಾಪು ಪುರಸಭೆಯ ಒಟ್ಟು 38 ಜನ ಪೌರಕಾರ್ಮಿಕರಿಗೆ ಹಾಗೂ ಸಮಾಜ ಸೇವಕ ದೆಂದೂರು ಅಶೋಕ್ ಶೆಟ್ಟಿಯವರಿಗೆ ಸನ್ಮಾನವು ನಡೆಯಲಿದೆ.
ಅದೇ ದಿನ ಬೆಳಿಗ್ಗೆ 8 ಗಂಟೆಗೆ ಮಜೂರು ಸರ್ಕಲ್ ಬಳಿಯ ಲೀಲಾಧರ ಶೆಟ್ಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಲಿದೆ ಎಂದು ಸಮಾಜ ಸೇವಕ ಕಾಪು ಸೂರಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ. 15 ರಿಂದ ಮಾ. 12 ರವರೆಗೆ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಢಕ್ಕೆಬಲಿ ಸೇವೆ

Posted On: 11-12-2024 07:13AM
ಪಡುಬಿದ್ರಿ : ಎರಡು ವರ್ಷಗಳಿಗೊಮ್ಮೆ ಜರಗುವ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಈ ಬಾರಿ ದಾಖಲೆಯ 44 ಢಕ್ಕೆಬಲಿ ಸೇವೆಗಳು ನೆರವೇರಲಿದೆ.

ಜ. 15ರಂದು ಮಂಡಲ ಹಾಕುವ ಢಕ್ಕೆಬಲಿ ಸೇವೆಯೊಂದಿಗೆ ಆರಂಭಗೊಳ್ಳಲಿದೆ. ಮಾ. 12ರಂದು ಮಂಡಲ ವಿಸರ್ಜನೆಯ ಢಕ್ಕೆಬಲಿ ಸೇವೆಯೊಂದಿಗೆ ಈ ಬಾರಿಯ ಸೇವೆಗಳು ಸಂಪನ್ನಗೊಳ್ಳಲಿವೆ.
ಇದರಲ್ಲಿ ಜ. 26ರಂದು ನಡೆಯಲಿರುವ ನಾಗಮಂಡಲ ಸೇವೆ, ಜ. 19ರಂದು ಹೆಜಮಾಡಿಯ ಬ್ರಹ್ಮಸ್ಥಾನ ಹಾಗೂ ಜ. 21 ರಂದು ಪಡುಬಿದ್ರಿಯ ಮುರುಡಿ ಬ್ರಹ್ಮಸ್ಥಾನದಲ್ಲಿ ಜರಗುವ ಢಕ್ಕೆಬಲಿ ಸೇವೆಗಳೂ ಸೇರಿರುವುದಾಗಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್ ತಿಳಿಸಿದ್ದಾರೆ.