Updated News From Kaup
ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಟೋಲ್ ವಿನಾಯಿತಿ : ಕಾಪು ಶಾಸಕರ ನೇತೃತ್ವದಲ್ಲಿ ಮನವಿ

Posted On: 24-03-2025 03:36PM
ಪಡುಬಿದ್ರಿ : ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ವಾಹನಗಳಿಗೆ ಹೆಜಮಾಡಿ ಟೋಲ್ ಗೇಟ್ನಲ್ಲಿ ಸುಂಕ ವಿನಾಯಿತಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಮನವಿ ನೀಡಲಾಯಿತು.
ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜಮಾಡಿಯಲ್ಲಿ ಹಲವಾರು ವರ್ಷಗಳಿಂದ ಟೋಲ್ ಗೇಟ್ ನಿರ್ಮಾಣಗೊಂಡು ಸುಂಕ ವಸೂಲಾತಿಯನ್ನು ಮಾಡುತ್ತಿದ್ದು, ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಬೇಕೆಂದು ಮನವಿಯನ್ನು ಮಾಡಿದ್ದರು. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಸ್ತಾನ ಟೋಲ್ ಗೇಟ್ ನಲ್ಲಿ ಕೋಟಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಿದ್ದು, ಅದರಂತೆ ಹೆಜಮಾಡಿ ಟೋಲ್ ಗೇಟ್ ನಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯತ್ ನ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿಗೊಳಿಸುವಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶರಣ್ ಕುಮಾರ್ ಮಟ್ಟು, ಪಕ್ಷದ ಹಿರಿಯರಾದ ರಮಕಾಂತ್ ಪಡುಬಿದ್ರಿ, ಮಿಥುನ್ ಆರ್ ಹೆಗ್ಡೆ ಉಪಸ್ಥಿತರಿದ್ದರು.
ಮಾ.25ರಂದು ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ಜೀರ್ಣೋದ್ದಾರ ಮೂಲನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಚಾಲನೆ

Posted On: 23-03-2025 05:34PM
ಕಾಪು : ಮಾರ್ಚ್ 25 ಮಂಗಳವಾರ ಸುಗ್ಗಿ ಜಾತ್ರೆಯ ಪರ್ವಕಾಲದಂದು “ಕಾಪು ಶ್ರೀ ಹಳೇ ಮಾರಿಯಮ್ಮ ಸನ್ನಿಧಾನ ಜೀರ್ಣೋದ್ಧಾರ ಮಹಾ ಸಂಕಲ್ಪ" ಐತಿಹಾಸಿಕ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾತ್ರಿ 9.30 ಗಂಟೆಗೆ ಶ್ರೀ ದೇವಳದ ಮುಂಭಾಗದ ವೇದಿಕೆಯಲ್ಲಿ "ಜೀರ್ಣೋದ್ದಾರ ಮೂಲನಿಧಿ ಸಮರ್ಪಣಾ ಮಹಾ ಅಭಿಯಾನ ಪ್ರಾರಂಭ ಸಂಬಂಧಿ "ಸಭಾ ಕಾರ್ಯಕ್ರಮ - ಜೀರ್ಣೋದ್ಧಾರ ಲಾಂಛನ ಅನಾವರಣ", ಸಮಸ್ತ ಭಕ್ತರಿಗೆ ಕಾಣಿಕೆ ಡಬ್ಬಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಪ್ರಸಾದ್ ಜಿ ಶೆಣೈ ಹೇಳಿದ್ದಾರೆ. ಅವರು ಶನಿವಾರ ಕಾಪು ಹಳೆಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾಪು ಶ್ರೀ ಹಳೆ ಮಾರಿಯಮ್ಮನ ದೇಗುಲ ಜೀರ್ಣೋದ್ಧಾರ ಆಗಬೇಕೆಂದು ಲಕ್ಷಾಂತರ ಭಕ್ತರ ಬಹು ಕಾಲದ ಕನಸಾಗಿದ್ದು, ಶ್ರೀ ದೇವಿಯ ಸಮ್ಮುಖ ಊರಿನ ಗುರು ಹಿರಿಯರ, ಗಣ್ಯರ, ಸಮಸ್ತ ಭಕ್ತಾಧಿಗಳ ಸಹಭಾಗಿತ್ವದಲ್ಲಿ ಇದಕ್ಕೆ ಮುನ್ನುಡಿ ಇಡಲಾಗುತ್ತಿದೆ.
ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಪು ಶ್ರೀ ವೆಂಕಟರಮಣ ಹಾಗೂ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಕೆ ಕಮಲಾಕ್ಷ ಭಟ್, ಧಾರ್ಮಿಕ ವಿದ್ವಾಂಸರು, ಪ್ರಸಿದ್ದ ಪಂಚಾಂಗಕರ್ತರು ಹಾಗೂ ಶ್ರೀ ವೆಂಕಟರಮಣ ದೇವಸ್ಥಾನದ ತಂತ್ರಿಗಳಾದ ಡಾ. ಎಂ. ಪಂಡಿತ್ ನರಸಿಂಹ ಆಚಾರ್ಯ ಮಂಗಳೂರು ಉಪಸ್ಥಿತರಿರುವರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾಪು ಇದರ ಮಾಜಿ ಅಧ್ಯಕ್ಷ ಗೋಕುಲ್ದಾಸ್ ಆನಂದ್ರಾಯ ಶೆಣೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಶಾಸಕರಾದ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಲಾಲಾಜಿ ಅರ್ ಮೆಂಡನ್, ಜಿ.ಎಸ್.ಬಿ. ಸರ್ವ ದೇವಳಗಳ ಒಕ್ಕೂಟದ ಅಧ್ಯಕ್ಷ ಅತುಲ್ ಕುಡ್ವಾ ಮುಲ್ಕಿ, ಕಾಪು ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕೇಸರ ಮನೋಹರ್ ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ, ಕಾಪು ಬಿಲ್ಲವ ಸಂಘದ ಅಧ್ಯಕ್ಷ ವಿಕ್ರಮ್ ಕಾಪು, ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಮಾಜಿ ಆಡಳಿತ ಮೊಕೇಸರ ಮೋಹನ್ ಬಂಗೇರ, ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಕೆ. ಲಕ್ಷ್ಮೀನಾರಾಯಣ ನಾಯಕ್ ಕಾಪು, ಡಾ. ಕೆ. ನಾಗಾನಂದ ಭಟ್ ಉಪಸ್ಥಿತರಿರುವರೆಂದು ಪ್ರಸಾದ್ ಶೆಣೈ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಹ ಮೊಕ್ತೇಸರರಾದ ಸದಾಶಿವ ಕಾಮತ್, ರಾಮ ನಾಯಕ್, ಶ್ರೀಕಾಂತ್ ಭಟ್, ರಾಜೇಶ್ ಎಂ ಶೆಣೈ, ಸದಸ್ಯರಾದ ಮೋಹನದಾಸ್ ಕಿಣಿ, ಸುನಿಲ್ ಪೈ, ಚಂದ್ರಕಾಂತ್ ಕಾಮತ್, ಕೃಷ್ಣಾನಂದ ನಾಯಕ್ ಮತ್ತು ರಾಜೇಶ್ ಶೆಣೈ ಉಪಸ್ಥಿತರಿದ್ದರು.
ಪಡುಬಿದ್ರಿ : ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನು ಜೆಸಿಬಿಯಿಂದ ಕಿತ್ತೆಸೆದ ವ್ಯಕ್ತಿ ; ದೂರು ದಾಖಲು

Posted On: 21-03-2025 01:49PM
ಪಡುಬಿದ್ರಿ : ಪಡುಬಿದ್ರಿಯ ಅಲಂಗಾರು ಎಂಬಲ್ಲಿ ರಾ. ಹೆ. 66ರ ಬದಿಯಲ್ಲಿ ಬೆಳೆದ ಗಿಡಗಳು ಜಾಹೀರಾತು ಫಲಕಗಳಿಗೆ ಅಡ್ಡವಾಗುತ್ತದೆ ಎಂದು ಅರಣ್ಯ ಇಲಾಖೆ ನೆಟ್ಟ 42 ಗಿಡಗಳು ಹಾಗೂ ಅರಣ್ಯ ಇಲಾಖೆಯ ಬೋರ್ಡನ್ನು ಜಾಹೀರಾತು ಫಲಕ ಹಾಕುವ ವ್ಯಕ್ತಿ ಜೆಸಿಬಿಯಿಂದ ಕಿತ್ತೆಸೆದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
2023 ನೇ ವರ್ಷದ ಜೂನ್ ತಿಂಗಳಲ್ಲಿ ಹೊಳೆ ದಾಸವಾಳ, ಮೇ ಪ್ಲವರ್, ನೇರಳೆ, ಕಕ್ಕೆ ಮುಂತಾದ ಗಿಡಗಳನ್ನು ಅರಣ್ಯ ಇಲಾಖಾ ವತಿಯಿಂದ ನೆಟ್ಟಿದ್ದು ಅದರ ಪೋಷಣೆ ಕರ್ತವ್ಯವನ್ನು ಅರಣ್ಯ ಪಾಲಕ ಅಖಿಲೇಶ್ ನಿರ್ವಹಿಸಿಕೊಂಡು ಬರುತ್ತಿದ್ದು, ಎಂದಿನಂತೆ ಗಸ್ತಿನಲ್ಲಿರುವಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಜಾಹಿರಾತು ಫಲಕಗಳನ್ನು ಹಾಕುವ ರೋಶನ್ ಎಂಬಾತನ ವಿರುದ್ಧ ಅರಣ್ಯ ಪಾಲಕ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಶ್ರೀ ಕ್ಷೇತ್ರ ಶಂಕರಪುರ : ಉಚಿತ ಚಿನ್ನದ ಮೂಗುತಿ ಕಾರ್ಯಕ್ರಮದ ಮಾಹಿತಿ ಪತ್ರ ಬಿಡುಗಡೆ

Posted On: 21-03-2025 01:35PM
ಶಿರ್ವ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ, ಕಾಲಭೈರವ ದೇವಸ್ಥಾನ ವತಿಯಿಂದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಲ್ಲಿ 2025 ನವರಾತ್ರಿಯಂದು ನಡೆಯುವ ಉಚಿತ ಚಿನ್ನದ ಮೂಗುತಿ ಕಾರ್ಯಕ್ರಮದ ಮಾಹಿತಿ ಪತ್ರ ವೀಣಾ ಶೆಟ್ಟಿ ಹಾಗೂ 5 ಕನ್ಯೆಯರಿಂದ ಕ್ಷೇತ್ರದಲ್ಲಿ ಬಿಡುಗಡೆಯಾಯಿತು.
ಸನಾತನ ಹಿಂದೂ ಧರ್ಮದ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಹೆಣ್ಣು ಮಕ್ಕಳ ಭಾಗ್ಯೋದಯದ ಬೆಳಕು ಶ್ರೀ ಸೌಭಾಗ್ಯ ಕಾರ್ಯಕ್ರಮದಡಿಯಲ್ಲಿ 9 ರಿಂದ 19 ವರ್ಷದ 1008 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ನವರಾತ್ರಿ ದುರ್ಗಾಷ್ಟಮಿಯ ಪರ್ವ ಕಾಲದಲ್ಲಿ ನಡೆಯಲಿದೆ.
ಈ ಸಂದರ್ಭ ಶ್ರೀ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ವಾಸ್ತುತಜ್ಞ ಚಂದ್ರಶೇಖರ ಸ್ವಾಮೀಜಿ ದಂಪತಿ ಕಾಪು ಮಾರಿಯಮ್ಮ ಸನ್ನಿಧಾನ ಭೇಟಿ

Posted On: 20-03-2025 06:09PM
ಕಾಪು : ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತು ತಜ್ಞ, ವ್ಯೆಜ್ಞಾನಿಕ ಜ್ಯೋತಿಷಿ ಶ್ರೀಚಂದ್ರಶೇಖರ ಸ್ವಾಮೀಜಿ ದಂಪತಿ ಹಾಗೂ ಪುತ್ರ ಮತ್ತು ಅವರ ಹಿರಿಯ ಸಹೋದರ ವಿಶ್ವನಾಥ್ ಭಟ್ ದಂಪತಿ ಕುಟುಂಬ ಸಮೇತರಾಗಿ ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅವರು ಅಭಿವೃದ್ಧಿ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳ ಸಮಕ್ಷಮದಲ್ಲಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.
ಪ್ರಚಾರ ಸಮಿತಿ ಪ್ರಧಾನ ಸಂಚಾಲಕ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಜಿರ್ಣೋದ್ಧಾರ ನಡೆದು ಬಂದ ಹಾದಿ ಮತ್ತು ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರಿಸಿದರು. ಶ್ರೀ ಚಂದ್ರಶೇಖರ ಸ್ವಾಮೀಜಿ ದೇವಳದ ವಾಸ್ತುಶಿಲ್ಪವನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶೇಖರ್ ಸಾಲ್ಯಾನ್, ಮನೋಹರ್ ರಾವ್ ಕಲ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ, ಕಾರ್ಯಾಧ್ಯಕ್ಷೆ ಸಾವಿತ್ರಿ ಗಣೇಶ್, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ : ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ

Posted On: 20-03-2025 03:25PM
ಪಡುಬಿದ್ರಿ : ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಾಕಷ್ಟು ಸವಲತ್ತುಗಳು ಜನಸಾಮಾನ್ಯರಿಗೆ ಲಭ್ಯವಿದ್ದು, ಅರ್ಹ ಫಲಾನುಭವಿಗಳು ವಿವಿಧ ಇಲಾಖೆಗಳನ್ನು ಸಂಪರ್ಕಿಸಿ, ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ತಿಳಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಡುಬಿದ್ರಿ ಬೇಂಗ್ರೆಯ ಗಜಾನನ ಜ್ಞಾನ ವಿಕಾಸ ಕೇಂದ್ರದ ಮಹಿಳಾ ಸದಸ್ಯರಿಗೆ ಸರಕಾರಿ ಸವಲತ್ತುಗಳ ಕುರಿತು ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸರಕಾರವು ವಿವಿಧ ವರ್ಗಗಳಿಗಾಗಿ ವಿವಿಧ ಇಲಾಖೆ, ನಿಗಮ, ಮಂಡಳಿಗಳನ್ನು ರೂಪಿಸಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಡಾ ಸವಲತ್ತುಗಳಿಗಾಗಿ ಗ್ರಾಮ ಒನ್, ಕರ್ನಾಟಕ ಒನ್, ಸಿಎಸ್ಸಿ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಬೇಂಗ್ರೆಯ ಗಜಾನನ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಸುಶೀಲಾ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಸರಿತಾ, ಭವ್ಯ, ಸೇವಾ ಪ್ರತಿನಿಧಿ ಸುನೀತಾ ಉಪಸ್ಥಿತರಿದ್ದರು. ಶಕುಂತಳ ಸ್ವಾಗತಿಸಿ, ವಂದಿಸಿದರು.
ಕಾಪು ಜಮಾತೆ ಇಸ್ಲಾಂ ವತಿಯಿಂದ ಸೌಹಾರ್ದ ಸಂವಾದ

Posted On: 20-03-2025 11:53AM
ಕಾಪು : ಕಾಪು ಜಮಾತೆ ಇಸ್ಲಾಂ ವತಿಯಿಂದ ಕಾಪು ಕೊಂಬಗುಡ್ಡೆಯಲ್ಲಿ ರಂಜಾನ್ ಪ್ರಯುಕ್ತ ಸೌಹಾರ್ದ ಸಂವಾದವು ಅನ್ವರ್ ಆಲಿ ಇವರ ಗೃಹದಲ್ಲಿ ಬುಧವಾರ ಜರಗಿತು.
ಜಮಾತೆ ಇಸ್ಲಾಂ ನಿಕಟಪೂರ್ವ ಜಿಲ್ಲಾಧ್ಯಕ್ಷ ಶಬೀರ್ ಮಾತನಾಡಿ, ರಂಜಾನ್ ಉಪವಾಸ ಹಸಿವನ್ನು ಅರಿಯುವುದರ ಜೊತೆಗೆ ಅಂಗಾಂಗಳನ್ನು ಹತೋಟಿಯಲ್ಲಿಡುವ ಉಪವಾಸವಾಗಿದೆ. ಇಂದು ಜಿಹಾದ್ ಬಹು ಚರ್ಚಿತ ವಿಷಯವಾಗಿದ್ದು, ನಿಜವಾದ ಅರ್ಥದಲ್ಲಿ ಜಿಹಾದ್ ನಮ್ಮೊಳಗಿನ ಆಂತರ್ಯದ ಸಂಘರ್ಷ. ಭಾರತ ಶಾಂತಿಯ ತೋಟ. ನಾವೆಲ್ಲರೂ ಸಹೋದರತ್ವದಲ್ಲಿ ಬಾಳಬೇಕಾಗಿದೆ ಎಂದರು. ವಾಗ್ಮಿ, ಸಂಸ್ಕೃತ ವಿದ್ವಾಂಸರಾದ ಡಾ.ಗಣೇಶ್ ಭಟ್ ಮಾತನಾಡಿ, ಪ್ರತಿ ಧರ್ಮದ ತಿರುಳು ಸಮಾನತೆಯಾಗಿದೆ. ವಸುದೈವ ಕುಟುಂಬಕಂ ಎನ್ನುವ ಭಾರತ ದೇಶದಲ್ಲಿ ಸರ್ವರೂ ಸಮಾನರು ಎಂದರು.
ಈ ಸಂದರ್ಭ ಕಾಪು ಜಮಾತೆ ಇಸ್ಲಾಂ ಕಾಪು ತಾಲೂಕಿನ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕುರಾನ್ ಪಠಿಸಿ ಸಂದೇಶ ನೀಡಿದರು. ಇದೇ ಸಂದರ್ಭ ಧಾರ್ಮಿಕ ಚಿಂತನೆಗಳ ಬಗೆಗೆ ಸಂವಾದವು ನಡೆಯಿತು.
ಈ ಸಂದರ್ಭ ಪತ್ರಕರ್ತರಾದ ಬಾಲಕೃಷ್ಣ ಪೂಜಾರಿ, ಮಹಮ್ಮದ್ ಶಾರೂಕ್, ದೀಪಕ್ ಬೀರ, ಮಹಮ್ಮದ್ ಇಕ್ಬಾಲ್, ಪತ್ರಿಕಾ ವಿತರಕ ಅರುಣ್ ಕಾಮತ್, ಮಜೂರು ಗ್ರಾ.ಪಂ.ಸದಸ್ಯ ಭಾಸ್ಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಯುಎಇ ಸಂಘಟಕ ಸರ್ವೋತ್ತಮ ಶೆಟ್ಟಿ ಅಬಧಾಬಿಯವರಿಗೆ ಮಾತೃ ವಿಯೋಗ

Posted On: 20-03-2025 11:01AM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಂತರಾಷ್ಟ್ರೀಯ ಸೇವಾ ಸಮಿತಿಯ ಅಧ್ಯಕ್ಷ, ಯುಎಇ ಸಂಘಟಕ ಸರ್ವೋತ್ತಮ ಶೆಟ್ಟಿ ಅಬಧಾಬಿಯವರ ಮಾತೃಶ್ರೀ ಶತಾಯುಷಿ ಸರಸ್ವತಿ ಸೂರಪ್ಪ ಹೆಗ್ಡೆ (102)ಅವರು ನಿಧನರಾಗಿದ್ದಾರೆ.
ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದು, ಗಣ್ಯರು ಅಗಲಿದ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಶಿರ್ವ : ವಿಶ್ವಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗದ ದ್ವಾದಶ ವರ್ಷದ ವಾರ್ಷಿಕೋತ್ಸವ ಸಂಪನ್ನ

Posted On: 20-03-2025 09:53AM
ಶಿರ್ವ : ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗದ ದ್ವಾದಶ ವರ್ಷದ ವಾರ್ಷಿಕೋತ್ಸವವು ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಂಡ್ಕೂರು ಶ್ರೀ ವಿಶ್ವ ಬ್ರಾಹ್ಮಣ ಯುವ ಸೇವಾದಳದ ಗೌರವಾಧ್ಯಕ್ಷರಾದ ಪ್ರಸಾದ್ ತಂತ್ರಿಗಳು ವಿಶ್ವಕರ್ಮರು ಬ್ರಾಹ್ಮಣತ್ವವನ್ನು ಬೆಳೆಸಬೇಕು. ದೇವರನ್ನು ಸೃಷ್ಟಿಸುವ ನಾವು ದೇವರ ಪೂಜೆಯನ್ನು ಯಾಕೆ ಬಿಟ್ಟು ಕೊಟ್ಟಿದ್ದೇವೆ ಎಂದು ಚಿಂತನೆ ಮಾಡುವ ಕಾಲಘಟ್ಟದಲ್ಲಿ ಇದ್ದೇವೆ. ಮುಂದಿನ ಯುವ ಪೀಳಿ ಗೆಯತ್ತ ಮುಖ ಮಾಡಿದ ನಾವು ಜಾಗೃತರಾಗಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ವೈದಿಕರಾದ ಮೋಹನ್ ಪುರೋಹಿತ್ ದಂಪತಿಗಳನ್ನು ಸನ್ಮಾನಿಸಲಾಯಿತು. ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಉಮೇಶ ಆಚಾರ್ಯ ಮತ್ತು ವೇದಾವತಿ ಆಚಾರ್ಯ ಇವರನ್ನು ಅಭಿನಂದಿಸಲಾಯಿತು. ಸುಮಾರು 27 ಜನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. 5 ಜನರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ ನೀಡಲಾಯಿತು. ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.
ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿದರು. ಮಂಜುಳಾ ಉಮೇಶ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಮಾಧವಾಚಾರ್ಯ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಶಾಂತ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಗೌರವಾಧ್ಯಕ್ಷ ಸುರೇಶ ಆಚಾರ್ಯ, ಬಂಟಕಲ್ಲು ಗಾಯತ್ರಿ ವೃಂದದ ಅಧ್ಯಕ್ಷೆ ವಿದ್ಯಾ ಹರೀಶ್ ಆಚಾರ್ಯ, ಕುತ್ತ್ಯಾರು ಶ್ರೀ ದುರ್ಗಾಪರಮೇಶ್ವರಿ ಯುವಕ ವೃಂದದ ಅಧ್ಯಕ್ಷ ಶ್ರೇಯಸ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸಹನಾ ಗಣೇಶ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಉಮೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂಜೀವ ಆಚಾರ್ಯ ವಂದಿಸಿದರು. ಪ್ರೀತಮ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಿಳಾ ಬಳಗದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಮಾ. 20 ರಿಂದ 23 : ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ ವರ್ಣೋತ್ಸವ, ವಾರ್ಷಿಕ ಸಮಾರಂಭ

Posted On: 19-03-2025 07:16PM
ಬಂಟಕಲ್ : ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2024-25 ನೇ ಸಾಲಿನ ವರ್ಣೋತ್ಸವ – 2025 ಮತ್ತು ವಾರ್ಷಿಕ ಸಮಾರಂಭಗಳು ಮಾರ್ಚ್ 20 ರಿಂದ 23ವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸೋದೆ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ರತ್ನಕುಮಾರ್ ಹೇಳಿದ್ದಾರೆ. ಅವರು ಬುಧವಾರ ಕಾಲೇಜಿನ ಸಭಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಗುರುವಾರ ಮಾರ್ಚ್ 20ರಂದು ಬೆಳಗ್ಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 9-30ಕ್ಕೆ ನಡೆಯಲಿದ್ದು, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀನಿವಾಸ ತಂತ್ರಿಗಳು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಪವನ್ಕುಮಾರ್ ಶೆಟ್ಟಿ, ಮ್ಯುಸಿಕ್ ಟಿಬಿಒಎಸ್ಎಮ್ ನ ಹಿರಿಯ ಪ್ರಾಧ್ಯಾಪಕಿ ಶ್ರೀಮತಿ ಉಷಾ ರಾಮಚಂದ್ರ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ವಹಿಸಲಿದ್ದಾರೆ. ವರ್ಣೋತ್ಸವ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪಕ್ಕದ ರಾಜ್ಯ/ಜಿಲ್ಲೆಯ ತಾಂತ್ರಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿವಿಧ ತಾಂತ್ರಿಕ ಸ್ಪರ್ಧೆಗಳ ಜೊತೆಗೆ ನೃತ್ಯ, ಗಾಯನ, ಫೋಟೋಗ್ರಫಿ, ಚಿತ್ರಕಲೆ, ಮುಖವರ್ಣ ಸ್ಪರ್ಧೆ ನಡೆಯಲಿರುವುದು. ಅದೇ ದಿನ ಸಂಜೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ವರ್ಣೋತ್ಸವದ ಸಮಾರೋಪ ಸಮಾರಂಭವು ಶುಕ್ರವಾರ ಮಾರ್ಚ್ 21ರಂದು ಸಂಜೆ ನಡೆಯಲಿದೆ. ಸಮಾರಂಭದಲ್ಲಿ ಬೆಂಗಳೂರಿನ ಉದ್ಯಮಿ ವಿನೋದ್ಜಾನ್, ಖ್ಯಾತ ಚಲನ ಚಿತ್ರ ನಟ ಪೃಥ್ವಿಅಂಬರ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪರಮಪೂಜ್ಯ ಶ್ರೀ ಸೋದೆ ಶ್ರೀಪಾದರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ದಿನ ಸಂಜೆ ಕಾಲೇಜಿನ ಯಕ್ಷಗಾನ ಸಂಘ ಯಕ್ಷಸಿಂಚನದ ವಿದ್ಯಾರ್ಥಿಗಳಿಂದ 3 ಗಂಟೆಯ ಕಾಲ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾರ್ಚ್ ರಂದು 22 ಕಾಲೇಜು ವಾರ್ಷಿಕೋತ್ಸವ ಸಮಾರಂಭವು ಸಂಸ್ಥೆಯ ಆವರಣದಲ್ಲಿ ಪರಮಪೂಜ್ಯ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸಭಾ ಕಾರ್ಯಕ್ರಮ ದೊಂದಿಗೆ ಪ್ರಾರಂಭವಾಗುವ ಸಮಾರಂಭವು ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾಪನಗೊಳ್ಳಲಿದೆ.
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ನಿರ್ದೇಶಕರಾದ ಡಾ. ಎನ್. ಹೆಚ್. ಸಿದ್ದಲಿಂಗ ಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿ ಡಾಟಾ ಪ್ಯಾಟರ್ನ್ಸ್ ಲಿಮಿಟೆಡ್ ಇದರ ಮುಖ್ಯಸ್ಥರು ಮತ್ತು ನಿರ್ದೇಶಕರಾದ ಶ್ರೀನಿವಾಸ ಗೋಪಾಲನ್ ರಂಗರಾಜನ್ ಮತ್ತು ಶ್ರೀಮತಿ ರೇಖಾಮೂರ್ತಿ ರಂಗರಾಜನ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಮೂಡಬಿದ್ರಿಯ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕಚಾರು ಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಈ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ. ಆದಿತ್ಯವಾರ, 23 ಮಾರ್ಚ್ 2025 ರಂದು ಬೆಳಿಗ್ಗೆ 10-00 ರಿಂದ “ಆಟೋಎಕ್ಸ್ಪೋ”ದುಬಾರಿ ವಾಹನಗಳ ಪ್ರದರ್ಶನ ಮತ್ತು ಮದ್ಯಾಹ್ನ 3 ಗಂಟೆಗೆ ಹಳೆ ವಿದ್ಯಾರ್ಥಿಗಳ ಸಮಾವೇಶ ಸಮಾರಂಭ ನಡೆಯಲಿದೆ. ಸಂಜೆ 7 ಗಂಟೆಗೆ ಕೇರಳದ ಪ್ರತಿಷ್ಟಿತ ಮ್ಯುಸಿಕಲ್ ಬ್ಯಾಂಡ್ ಸಂಸ್ಥೆಯಾದ“ತಮರಶ್ಶೇರಿಚೂರಂ” ತAಡದಿಂದ ಸಂಗೀತ ರಸಮಂಜರಿ ಮನೋರಂಜನಾ ಕಾರ್ಯಕ್ರಮ ಜರಗಲಿದೆ ಎಂದೂ ರತ್ನಕುಮಾರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್, ಸಂಯೋಜಕರಾದ ಸಚಿನ್ ಪ್ರಭು, ಡಾ. ಶಿಲ್ಪಾ ಕಾಮತ್ ಉಪಸ್ಥಿತರಿದ್ದರು.