Updated News From Kaup
ಬೇಲಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಬೇಲಾಡಿ ಆಯ್ಕೆ
Posted On: 25 Aug 2025, 07:05 PM
ಕಾರ್ಕಳ : ಕಾಂತಾವರ ಗ್ರಾಮದ ಬೇಲಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಬೇಲಾಡಿ ಅವರನ್ನು ಆಯ್ಕೆ ಮಾಡಲಾಯಿತು. ಬೇಲಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘದ ಸಭೆಯಲ್ಲಿ ಪ್ರದೀಪ್ ಬೇಲಾಡಿ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದೊಂದಿಗೆ ಆಯ್ಕೆ ಮಾಡಲಾಯಿತು. ಹಾಗೂ ಉಪಾಧ್ಯಕ್ಷರಾಗಿ ಅರುಣ್ ಕೋಟ್ಯಾನ್ ಕೇಪ್ಲಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಪೂಜಾರಿ ಗುಡ್ಡೆಯಂಗಡಿ, ಕ್ರೀಡಾ ಕಾರ್ಯದರ್ಶಿಯಾಗಿ ಧೀರಜ್ ಶೆಟ್ಟಿ ಪಡ್ಡಲ್ಲಬೆಟ್ಟು, ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಪ್ರತಿನಿಧಿಯಾಗಿ ಪ್ರಶಸ್ತ್ ಶೆಟ್ಟಿ ಮುದಲೆಮನೆ ಬೇಲಾಡಿ ಅವರನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್.ಎಸ್.ಆರ್ ಅವರು ಸಂಘದ ಕೋಶಾಧಿಕಾರಿಯಾಗಿರುತ್ತಾರೆ. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ನಂತರ ನವರಾತ್ರಿ ಸಂದರ್ಭದಲ್ಲಿ ಶಾಲೆಯಲ್ಲಿ ನಡೆಯಲಿರುವ ಶಾರದಾ ಪೂಜಾ ಮಹೋತ್ಸವದ ಕಾರ್ಯಕ್ರಮಗಳ ರೂಪುರೇಷೆಗಳು ಹಾಗೂ ಶಾಲಾ ಅಭಿವೃದ್ಧಿಯ ಕುರಿತಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್.ಎಸ್.ಆರ್, ಹಳೆ ವಿದ್ಯಾರ್ಥಿ ಸಂಘದ ನಿರ್ಗಮಿತ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿಗಳಾದ ರಂಜಿತ್ ಶೆಟ್ಟಿ ಪುಂಚಾಡಿ ಮತ್ತು ಪ್ರಭಾಕರ ಕುಲಾಲ್, ಶಾರದಾ ಪೂಜಾ ಮಹೋತ್ಸವದ ಅರ್ಚಕರಾದ ಸುಧೀರ್ ಭಟ್ ನ್ಯಾಯತೋಟ, ಹಿರಿಯ ಹಳೆ ವಿದ್ಯಾರ್ಥಿಗಳಾದ ಸುರೇಶ್ ಭಟ್ ನ್ಯಾಯತೋಟ, ವಿದ್ಯಾ.ವಿ. ಶೆಟ್ಟಿ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೇವರು ಬಟ್ರು ನೀರೆ ಶ್ರೀಪತಿ ಭಟ್ ನಿಧನ
Posted On: 25 Aug 2025, 07:02 PM
ಕಾಪು : ಶ್ರೀ ಕ್ಷೇತ್ರ ಪೆರ್ಣಂಕಿಲದಲ್ಲಿ ಹಲವಾರು ವರ್ಷಗಳಿಂದ ಪಾರಂಪರಿಕವಾಗಿ ಉದ್ಭವ ಮಹಾಗಣಪತಿಯ ಉತ್ಸವ ಮೂರ್ತಿಯನ್ನು ಹೊತ್ತು ಬಲಿ ಉತ್ಸವ ನೆರವೇರಿಸಿ ಕೊಡುತ್ತಿದ್ದ ದೇವರು ಬಟ್ರು ಎಂದೇ ಪ್ರಸಿದ್ಧರಾದ ನೀರೆ ಶ್ರೀಪತಿ ಭಟ್ ಇಂದು ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಅಸುನೀಗಿದರು. ಕಣಂಜಾರು ಮಡಿಬೆಟ್ಟು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಹಲವಾರು ದೇವಸ್ಥಾನಗಳಲ್ಲಿ ದೇವರ ಬಲಿಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಕಾಪು ದಂಡತೀರ್ಥ ವಿದ್ಯಾಸಂಸ್ಥೆ : ಶಿಕ್ಷಕ - ರಕ್ಷಕ ಸಂಘದ ಮಹಾಸಭೆ
Posted On: 24 Aug 2025, 11:27 AM
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯ ಶಿಕ್ಷಕ - ರಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಕಾಲೇಜಿನ ಸಭಾಭವನದಲ್ಲಿ ಶನಿವಾರ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಚಾಲಕ ಡಾ|| ಕೆ. ಪ್ರಶಾಂತ್ ಶೆಟ್ಟಿಯವರು, ಶಿಕ್ಷಕ -ರಕ್ಷಕ ಸಂಘವು ಯಾವುದೇ ವಿದ್ಯಾಸಂಸ್ಥೆಗೆ ಬೆನ್ನೆಲುಬಾಗಿದ್ದು, ಮಕ್ಕಳ ಪ್ರಗತಿಯಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಆಡಳಿತ ಮಂಡಳಿಯ ಜೊತೆಗೆ ಅತ್ಯುತ್ತಮ ಸಲಹೆ ಸೂಚನೆಗಳು ಹೆತ್ತವರಿಂದ ದೊರಕಿದಾಗ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳು ದೊರಕುತ್ತದೆ ಹಾಗೂ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಮೂಡಿಬರಲು ಕಾರಣರಾದ ಹೆತ್ತವರ ಸಹಕಾರಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಮಂಜುಳಾ ಆರ್. ಶೆಟ್ಟಿಯವರು ಮಾತನಾಡಿ, ಪ್ರೌಢ ಮತ್ತು ಪದವಿಪೂರ್ವ ವಿಭಾಗದ 2025 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕದೊಂದಿಗೆ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಗೌರವಿಸಿ, ಈ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುವ ಯೋಗ ನನ್ನದಾಯಿತು ಹಾಗೂ ತಮ್ಮೆಲ್ಲರ ಸಹಕಾರದಿಂದ ನನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ ಎಂಬ ಹೆಮ್ಮೆ ನನಗಿದೆ ಎಂದರು. ಹೆತ್ತವರನ್ನು ಉದ್ದೇಶಿಸಿ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್ ಮಾತನಾಡಿದರು. ಪ್ರಾಂಶುಪಾಲ ನೀಲಾನಂದ್ ನಾಯ್ಕ್ ಗತ ಸಭೆಯ ವರದಿ ಮತ್ತು ಫಲಿತಾಂಶ ವಿಶ್ಲೇಷಣೆಯನ್ನು ಮಾಡಿದರು. ಕೋಶಾಧಿಕಾರಿ ಶಿವಣ್ಣ ಬಾಯರ್ ಲೆಕ್ಕ ಪತ್ರವನ್ನು ಮಂಡಿಸಿದರು. ವಿದ್ಯಾರ್ಥಿಗಳಾದ ರಿತಿಕಾ ಆರ್. ಶೆಟ್ಟಿ, ಮೊಹಮ್ಮದ್ ಅಫ್ನಾನ್, ದಿವ್ಯಲಕ್ಷ್ಮೀ, ಶ್ರೀಪ್ರದಾ ಎಸ್. ಬಾಯರ್, ಸಾನಿಧ್ಯ ವಿ. ಶೆಟ್ಟಿ ಇವರನ್ನು ಉಪನ್ಯಾಸಕಿ ಸುಮನ ಇವರು ಪರಿಚಯಿಸಿದರು. ಪ್ರಾಥಮಿಕ ವಿಭಾಗದ ಶಕುಂತಳಾ ಬಿ. ಮತ್ತು ಪ್ರೌಢ ಹಾಗೂ ಕಾಲೇಜು ವಿಭಾಗದ ಹಸನಬ್ಬ ಇವರು ರಕ್ಷಕ - ಶಿಕ್ಷಕ ಸಂಘದ ನೂತನ ಅಧ್ಯಕ್ಷರುಗಳಾಗಿ ಆಯ್ಕೆಗೊಂಡರು. ರಸಾಯನಶಾಸ್ತ್ರ ಉಪನ್ಯಾಸಕ ಸುರಥ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಕವಿತಾ ವಂದಿಸಿದರು.
ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ : ಶಿರ್ವ ಶಾಖೆಯಿಂದ ಅಗತ್ಯ ವಸ್ತುಗಳ ದೇಣಿಗೆ
Posted On: 24 Aug 2025, 10:59 AM
ಕಾಪು : ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆಯ ವತಿಯಿಂದ ಮಾನಸದ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ವಸ್ತುಗಳ ದೇಣಿಗೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಹೋಲಿ ಕ್ರಾಸ್ ಚರ್ಚಿನ ಧರ್ಮಗುರುಗಳು ಹಾಗೂ ಉಡುಪಿ ಧರ್ಮಕ್ಷೇತ್ರದ ನ್ಯಾಯಾಧಿಕರಣದ ಮುಖ್ಯಸ್ಥರಾದಂತಹ ವ. ಫಾ. ಡಾ|ರೋಶನ್ ಡಿಸೋಜಾ, ಶಿರ್ವ ಪೋಲೀಸ್ ಉಪಠಾಣಾ ಅಧಿಕಾರಿಗಳಾದ ಶ್ರೀಧರ್ ಕೆ.ಜೆ, ಶಿರ್ವಾ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಪಾಂಬೂರು ಚರ್ಚ್ ಪಾಲನಾ ಆಯೋಗಗಳ ಸಂಯೋಜಕಿ ವೈಲೆಟ್ ಕ್ಯಾಸ್ತಲಿನೋ, ಬಂಟಕಲ್ಲಿನ ಉದ್ಯಮಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಸುಧನ್ವ ಎಂಟರ್ ಪ್ರೈಸಸ್ ಮಾಲಕಿ ವಿದ್ಯಾ ಎಸ್ ಭಟ್, ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮಿನೇಜಸ್, ಸ್ಥಾಪಕ ಟ್ರಸ್ಟಿ ಉಡುಪಿ ಡಯಾಸಿಸ್ ಹೆಲ್ತ್ ಕಮಿಷನ್ ನಿರ್ದೇಶಕ, ಹಿರಿಯ ವೈದ್ಯರೂ ಆದ ಡಾ. ಎಡ್ವರ್ಡ್ ಲೋಬೋ, ಮಾನಸ ವಿಶೇಷ ಶಾಲೆಯ ಪ್ರಾಂಶುಪಾಲರಾದ ವ. ಸಿಸ್ಟರ್ ವಿನ್ನಿ ಗೊನ್ಸಾಲ್ವಿಸ್, ಸೈಂಟ್ ಮಿಲಾಗ್ರಿಸ್ ಸಹಕಾರಿಯ ಆಡಳಿತ ಮಂಡಳಿಯ ಪರವಾಗಿ ಉಡುಪಿ ಮಂಗಳೂರು ವಿಭಾಗದ ಅಭಿವೃಧ್ಧಿ ವ್ಯವಸ್ಥಾಪಕರದ ಮನೀಷ್ ಮತ್ತು ಸಾಲ ವಸೂಲಾತಿ ಅಧಿಕಾರಿ ಗೌತಮ್ ರೈ, ಶಿರ್ವ ಶಾಖಾ ವ್ಯವಸ್ಢಾಪಕ ವಿಲ್ಸನ್ ಪ್ರಿತೇಶ್ ಡಿಸೋಜಾ ರವರು ಉಪಸ್ಥಿತರಿದ್ದರು. ಶಿರ್ವ ಶಾಖಾ ಸಿಬ್ಬಂದಿಗಳು ಹಾಗೂ ಮಾನಸ ಶಾಲೆಯ ಶಿಕ್ಷಕ, ಶಿಕ್ಷಕೇತರ ವರ್ಗದವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮಿನೇಜಸ್ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲೆ ಸಿಸ್ಟರ್ ವಿನ್ನಿ ಗೊನ್ಸಾಲ್ವಿಸ್ ವಂದಿಸಿದರು.
ಉಡುಪಿ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ನೂತನ ಅಧ್ಯಕ್ಷೆಯಾಗಿ ಸರಳಾ ಆರ್ ಕಾಂಚನ್ ಆಯ್ಕೆ
Posted On: 24 Aug 2025, 10:45 AM
ಉಡುಪಿ : ಉಡುಪಿ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಉಡುಪಿ ತಾಲೂಕು ಶಿಶು ಅಭಿವೃದ್ಧಿ ಕೇಂದ್ರದಲ್ಲಿ ನಡೆಯಿತು. ತಾಲೂಕು ಶಿಶು ಅಭಿವೃದ್ಧಿ ವಿಜಯ ನಾರಾಯಣ್ ನೂತನ ಪಧಾಧಿಕಾರಿಗಳ ಆಯ್ಕೆ ಪ್ರಕಿಯೆಯನ್ನು ನಡೆಸಿಕೊಟ್ಟರು. ನೂತನ ಅಧ್ಯಕ್ಷೆಯಾಗಿ ಸರಳಾ ಅರ್. ಕಾಂಚನ್ ಆಯ್ಕೆಗೊಂಡರು. ಉಪಾಧ್ಯಕ್ಷೆಯಾಗಿ ಲಕ್ಷ್ಮಿ ಉಡುಪಿ, ಕಾರ್ಯದರ್ಶಿ ಜಯಂತಿ ಎಸ್ ಪೂಜಾರಿ ಬೆಣ್ಣೆಕುದ್ರು, ಕೋಶಾಧಿಕಾರಿ ವೀಣಾ ನಾಯಕ್ ಹೆರಾಂಜೆ, ಸಮಿತಿ ಸದಸ್ಯರಾಗಿ ಪುಷ್ಪಾ ಕುಂದರ್ ಪಲಿಮಾರ್, ಲತಾ ಎಸ್ ಅಚಾರ್ಯ ಕುತ್ಯಾರ್, ಸುಮಿತ್ರಾ ಬ್ರಹ್ಮಾವರ, ಪ್ರೇಮ ಬ್ರಹ್ಮಾವರ, ಆಶಾ ಶೆಟ್ಟಿ ಉಡುಪಿ, ಅನುಸೂಯೆ ಉಡುಪಿ ಆಯ್ಕೆಗೊಂಡಿರುತ್ತಾರೆ. ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಅದಿಮನೆ, ಹಾಗೂ ಮೇಲ್ವಿಚಾರಕರರು ಉಪಸ್ಥಿತರಿದ್ದರು.
ಕಾಪು ಮಾರಿಯಮ್ಮ ಕ್ಷೇತ್ರ ಭೇಟಿಯಾಗಿ ಘಂಟಾನಾದ ಸೇವೆ ಸಲ್ಲಿಸಿದ ನಟಿ ರಕ್ಷಿತಾ
Posted On: 20 Aug 2025, 07:02 PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಟಿ ರಕ್ಷಿತಾ ಪ್ರೇಮ್ ಅವರು ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು. ದೇವಳದ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಕಲ್ಯಾ ಅವರು ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಸಮ್ಮುಖದಲ್ಲಿ ಗೌರವಿಸಿ, ಅನುಗ್ರಹ ಪ್ರಸಾದ ನೀಡಿದರು. ರಕ್ಷಿತಾ ಪ್ರೇಮ್ ಅನ್ನದಾನ ಸೇವೆಯ ಜೊತೆಗೆ ಇಷ್ಟಾರ್ಥ ಸಿದ್ಧಿಗಾಗಿ ಘಂಟಾನಾದ ಸೇವೆಯನ್ನು ಸಲ್ಲಿಸಿದರು. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ವಾರವಷ್ಟೇ ನನ್ನ ತಾಯಿ ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡಿದ್ದರು. ನಾನು ಕೂಡಾ ಬರಬೇಕೆಂದು ಅಂದುಕೊಂಡಿದ್ದೆ. ಆದರೆ ಅಮ್ಮ ನನ್ನನ್ನು ಇಷ್ಟು ಬೇಗ ಕರೆಸಿಕೊಳ್ಳುತ್ತಾಳೆ ಅಂದುಕೊಂಡಿರಲಿಲ್ಲ. ದೇವಸ್ಥಾನ ಬಹಳ ಸುಂದರವಾಗಿ ಮೂಡಿಬಂದಿದೆ ಎಂದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ, ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ರವೀಂದ್ರ ಮಲ್ಲಾರ್, ಚರಿತ ದೇವಾಡಿಗ, ಪ್ರಚಾರ ಸಮಿತಿಯ ಸಂಚಾಲಕ ಜಯರಾಮ್ ಆಚಾರ್ಯ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ ಏಳು ಮಾಗಣೆಯ ಶ್ರೀಕೋಡ್ದಬ್ಬು ದೈವಸ್ಥಾನಗಳಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ ತುಳಸಿ ಕಟ್ಟೆ ಸಮರ್ಪಣೆಗೆ ಸಂಕಲ್ಪ, ಸಮ್ಮತಿ ಪತ್ರ ಹಸ್ತಾಂತರ
Posted On: 19 Aug 2025, 09:55 PM
ಪಡುಬಿದ್ರಿ : ಇತಿಹಾಸ ಪ್ರಸಿದ್ಧ ಪಡುಬಿದ್ರಿ ಮಾಗಣೆಯ ಶ್ರೀ ಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಸ್ಥಾನವು ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಪರ್ವಕಾಲದಲ್ಲಿ ದೈವರಾಜ ಶ್ರೀ ಕೋಡ್ದಬ್ಬು ದೈವಸ್ಥಾನಗಳು- ಏಳು ಮಾಗಣೆ (ಮುಂಡಾಲ ಸಮುದಾಯ) ಪಡುಬಿದ್ರಿ ವತಿಯಿಂದ ನೂತನ ತುಳಸಿ ಕಟ್ಟೆ(ವೃಂದಾವನ ಕಟ್ಟೆ)ಯ ಸಂಪೂರ್ಣ ವೆಚ್ಚವನ್ನು ನೀಡಲು ಸಂಕಲ್ಪಿಸಲಾಗಿದೆ. ಏಳು ಮಾಗಣೆಯ ಶ್ರೀಕೋಡ್ದಬ್ಬು ದೈವಸ್ಥಾನದ ನಿಯೋಗವು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯನ್ನು ಭೇಟಿ ಮಾಡಿ, ಸಂಕಲ್ಪಿತ ಧರ್ಮಕಾರ್ಯವನ್ನು ಪ್ರಸ್ತಾಪಿಸಿ ಸಮ್ಮತಿ ಪತ್ರವನ್ನು ನೀಡಿ, ದೇವಸ್ಥಾನದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ದೇವತಾ ಪ್ರಾರ್ಥನಾ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಶ್ರೀನಾಥ್ ಹೆಗ್ಡೆ, ಪ್ರಕಾಶ್ ದೇವಾಡಿಗ, ಅನಿಲ್ ಶೆಟ್ಟಿ, ಏಳು ಮಾಗಣೆಯ ಶ್ರೀಕೋಡ್ದಬ್ಬು ದೈವಸ್ಥಾನದ ಗೌರವಾಧ್ಯಕ್ಷರಾದ ಶೇಖರ್ ಅಂಗಡಿಬೆಟ್ಟು, ಅಧ್ಯಕ್ಷರಾದ ಸದಾನಂದ ಬೊಗ್ಗರಿಲಚ್ಚಿಲ್, ಪ್ರಧಾನ ಕಾರ್ಯದರ್ಶಿ ಸಂತೋಷ್ ನಂಬಿಯಾರ್ ,ಕೋಶಾಧಿಕಾರಿ ರಮೇಶ್, ಪ್ರಮುಖರಾದ ಬಾಬು ಕೋಟ್ಯಾನ್ ಕೊಂಕನಡ್ಪು, ಕಿಟ್ಟು ಕುಮಾರ್, ಸುರೇಶ್ ಪಡುಬಿದ್ರಿ, ಪ್ರಸನ್ನ ಕುಮಾರ್, ಬಾಲಕೃಷ್ಣ ಉಪಸ್ಥಿತರಿದ್ದರು.
ಪಡುಬಿದ್ರಿಯಲ್ಲಿ ಗಾಂಧಿ ಭಾರತ ಬೃಹತ್ ಸಮಾವೇಶ
Posted On: 18 Aug 2025, 10:41 AM
ಪಡುಬಿದ್ರಿ : ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಪಡುಬಿದ್ರಿಯಲ್ಲಿ ಗಾಂಧಿ ಭಾರತ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು. ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮ್ಮದ್ ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ ಮತ್ತು ಮೌಲ್ಯಗಳನ್ನು ಜನರೊಳಗೆ ತಲುಪಿಸುವ ಅಗತ್ಯವಿದೆ. ಬಿಜೆಪಿ ಸರ್ಕಾರ ಜನರ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, ಕಾಂಗ್ರೆಸ್ ಮಾತ್ರ ಜನಪರ ಆಡಳಿತ ನೀಡಬಲ್ಲ ಪಕ್ಷವಾಗಿದೆ ಎಂದು ಹೇಳಿದರು. ಸುಧೀರ್ ಕುಮಾರ್ ಮೊರೋಳಿ ಮಾತನಾಡಿ, ಬಿಜೆಪಿ ಮತ ಕದಿಯುವ ರಾಜಕಾರಣ ನಡೆಸುತ್ತಿದೆ. ಅವರು ಚುನಾವಣಾ ಆಯೋಗದ ನಿಲುವಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ, ಗಾಂಧಿಯವರ ತತ್ವಗಳ ಆಧಾರದ ಮೇಲೆ ದೇಶವನ್ನು ಬಲಪಡಿಸುವ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದರು. ಕಾರ್ಯಕ್ರಮದಲ್ಲಿ ಅಬ್ದುಲ್ ಮುನೀರ್ ಜನ್ಸಾಲೆ, ನವೀನ್ ಚಂದ್ರ ಸುವರ್ಣ, ಶರ್ಪುದ್ದೀನ್ ಶೇಖ್, ಮಹಮ್ಮದ್ ನಿಯಾಜ್, ದಿವಾಕರ್ ಶೆಟ್ಟಿ, ನವೀನ್ ಚಂದ್ರ ಜೆ. ಶೆಟ್ಟಿ, ಗೀತಾ ವಾಗ್ಲೆ, ಜೀತೇಂದ್ರ ಫುರ್ಟಾಡೋ, ನವೀನ್ ಚಂದ್ರ ಎನ್. ಶೆಟ್ಟಿ, ಕರುಣಾಕರ್ ಪೂಜಾರಿ, ಯಶ್ವಂತ್ ಪಲಿಮಾರು, ಸುಧೀರ್ ಹೆಜಮಾಡಿ, ಕಿಶೋರ್ ಎರ್ಮಾಳು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್ ಸ್ವಾಗತಿಸಿದರು. ರಾಜೇಶ್ ಶೇರಿಗಾರ್ ನಿರೂಪಿಸಿ, ಸಂತೋಷ್ ಕುಮಾರ್ ವಂದಿಸಿದರು.
ಬೋರ್ಡ್ ಆಫ್ ಇಸ್ಲಾಮಿಕ್ ಕರ್ನಾಟಕ ಕಾಪು ಸೆಂಟರ್ - ಅಭಿನಂದನಾ ಸಮಾರಂಭ
Posted On: 18 Aug 2025, 10:27 AM
ಕಾಪು : ಸಂಪತ್ತಿಗಿಂತ ವಿದ್ಯೆ ಮನುಷ್ಯನಿಗೆ ಮುಖ್ಯವಾಗಿದೆ. ವಿದ್ಯೆ ಇಲ್ಲದಿದ್ದರೆ ಆತನ ಬದುಕು ಬರೀ ಶೂನ್ಯ. ಸಂಪತ್ತಿನಿಂದ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ. ವಿದ್ಯೆಯಿಂದ ಜ್ಞಾನ ಗಳಿಸಲು ಪ್ರಯತ್ನಿಸಬೇಕು. ಲೌಕಿಕ ಜ್ಞಾನದ ಜೊತೆಗೆ ಧಾರ್ಮಿಕ ಜ್ಞಾನವನ್ನು ಕೂಡ ಮುತುವರ್ಜಿಯಿಂದ ಗಳಿಸಬೇಕು. ದೇವನ ವತಿಯಿಂದ ಬಂದ ಕೊನೆಯ ಗ್ರಂಥ ಕುರಾನ್ ಆಗಿದ್ದು, ಅದರಲ್ಲಿ ಇರುವ ಮೊದಲ ವಾಕ್ಯವೇ ಜ್ಞಾನ ಗಳಿಸುವ ಕುರಿತಾಗಿದೆ ಎಂದು ಆಯಿಷಾ ಮಸ್ಜಿದ್ ನೆಜಾರ್ ನ ಧರ್ಮ ಗುರುಗಳಾದ ಮೌಲಾನ ಆದಿಲ್ ನದ್ವಿ ಯವರು ಹೇಳಿದರು. ಅವರು ಕಾಪು ಕೆ. ಒನ್ ಹೋಟೆಲ್ ನ ಸಭಾಂಗಣ ದಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಕರ್ನಾಟಕ ಕಾಪು ಸೆಂಟರ್ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು ಜಮಾ ಅತೆ ಇಸ್ಲಾಮಿ ಹಿಂದ್ ನ ಸದಸ್ಯೆ ರೇಷ್ಮಾ ಬೈಲೂರು ರವರು ಮಾತನಾಡಿ, ಮನುಷ್ಯನು ಭೂಮಿಗೆ ಬಂದ ಉದ್ದೇಶವೇನು? ಬಂದ ನಂತರ ಏನು ಮಾಡಬೇಕು? ಮರಣದ ನಂತರದ ಬದುಕಿಗೆ ಇಹಲೋಕದಲ್ಲಿ ಯಾವ ಕೆಲಸ ಮಾಡಬೇಕು ಎಂಬುದರ ಬಗ್ಗೆ ನಾವು ಅಧ್ಯಯನ ಮಾಡಬೇಕು. ಮತ್ತು ಈ ಅಧ್ಯಯನದಿಂದ ಸಿಗುವ ಜ್ಞಾನವನ್ನು ತನ್ನಲ್ಲಿ ಅಳವಡಿಸಿಕೊಂಡು ಅದರ ಪ್ರಯೋಜನ ಸಮಾಜದಲ್ಲಿರುವ ಇತರರಿಗೂ ಸಿಗಬೇಕು. ಆಗ ಮಾತ್ರ ಆತ ಗಳಿಸಿದ ಜ್ಞಾನ ಸಾರ್ಥಕವಾಗುವುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಾಕೀರ್ ಹುಸೈನ್, ಆಸೀಫ್ ಜಿ. ಡಿ, ಅಷ್ಫಾಕ್ ಅಹಮದ್ ಮುಜಾವರ್ ರವರು, ಬಿ. ಐ. ಇ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಅಭಿನಂದಿಸುತ್ತಾ, ಪ್ರಶಸ್ತಿ ಮತ್ತು ಸರ್ಟಿಫಿಕೇಟ್ ಮತ್ತು ಎಸ್. ಐ. ಓ ಮತ್ತು ಜಿ. ಐ. ಓ ವರ್ತುಲದಲ್ಲಿ ಭಾಗವಹಿಸಿದ ಎಸ್.ಎಸ್.ಎಲ್.ಸಿಯಲ್ಲಿ ಮತ್ತು ಪಿ.ಯು.ಸಿ ಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು ಹಾಗೂ ಸಿ. ಐ. ಓ ನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಅಧ್ಯಕ್ಷರಾದ ಅನ್ವರ್ ಅಲಿಯವರು ಮಾತನಾಡಿ, ಜಮಾ ಅತೆ ಇಸ್ಲಾಮಿ ಹಿಂದ್ ಈ ರಾಷ್ಟ್ರದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವ, ಕೆಡುಕನ್ನು ಅಳಿಸಿ ಒಳಿತನ್ನು ಸಂಸ್ಥಾಪಿಸುವ, ಯುವ ಪೀಳಿಗೆಯನ್ನು ನೈತಿಕ ಮೇರೆಯಲ್ಲಿ ಮುನ್ನಡೆಸುವ, ಸಮಾಜದಲ್ಲಿ ಶಾಂತಿ, ಪ್ರೀತಿ ಸೌಹಾರ್ದತೆ ಕಾಪಿಡುವ ಕೆಲಸ ಮಾಡುತ್ತಿದೆ ಇದರೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಿ ಎಂದರು. ಫರಾನ ಬೇಗಮ್ ರವರು ಕುರಾನ್ ಪಠಿಸಿದರು. ಮುಹಮ್ಮದ್ ಶರೀಫ್ ಶೇಕ್ ಸ್ವಾಗತಿಸಿದರು. ಬಿ. ಐ. ಇ.ನ ಸಂಚಾಲಕಿ ಶೇಹೇನಾಜ್ ಪ್ರಸ್ತಾವನೆಗೈದರು. ಮೆಹರೂಫರವರು ನಿರೂಪಿಸಿ, ಸಯ್ಯದ್ ಮುಸ್ತಖೀಮ್ ವಂದಿಸಿದರು.
ಶಿರ್ವ ಸಂತ ಮೇರಿ ಪ. ಪೂ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೆ ಆರ್ ಪಾಟ್ಕರ್ ಬಂಟಕಲ್ಲು ಆಯ್ಕೆ
Posted On: 18 Aug 2025, 09:55 AM
ಶಿರ್ವ : ಇಲ್ಲಿನ ಸಂತಮೇರಿ ಪ. ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ, ಸಂತ ಮೇರಿ ಅಲುಮ್ನಿ ಎಸೋಸಿಯೇಶನ್ ನ ನೂತನ ಅಧ್ಯಕ್ಷರಾಗಿ ಶಿರ್ವ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಕೆ ಆರ್ ಪಾಟ್ಕರ್ ಬಂಟಕಲ್ಲು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ. ಗ್ರೇನಲ್ ಡಿ'ಮೆಲ್ಲೊ, ಕಾರ್ಯದರ್ಶಿಯಾಗಿ ಮೋಹನ್ ನೊರೊನ್ನಾ, ಜೊತೆ ಕಾರ್ಯದರ್ಶಿ ಕ್ಲಾರ ಪಿರೇರಾ, ಕೋಶಾಧಿಕಾರಿಯಾಗಿ ಜುಲಿಯಾನ್ ರೊಡ್ರಿಗಸ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೊಬಾರ್ಟ್ ಮಚಾದೋ, ಮೆಲ್ವಿನ್ ಅರಾನ್ನಾ, ಫೆಡ್ರಿಕ್ ಪಿಂಟೊ, ಡೆನಿಸ್ ಮಥಾಯಸ್, ಮರ್ವಿನ್ ಮೆನೇಜಸ್, ಅರ್ವಿನ್ ಡಿ' ಸೋಜಾ, ಅನಿತಾ ಮೆಂಡೋನ್ಸಾ, ಮನೋಜ್ ಮೆನೆಜಸ್, ವಸಂತ ಅಂಚನ್, ಮ್ಯಾಕ್ಸಿಮ್ ಡಿ' ಸೋಜಾ ಆಯ್ಕೆಯಾದರು.
