Updated News From Kaup
ಶಿರ್ವ ಗ್ರಾ.ಪಂ SLRM ಘಟಕಕ್ಕೆ ಲಯನ್ಸ್ ಜಿಲ್ಲಾ ಗವರ್ನರ್ ಭೇಟಿ
Posted On: 09 Sep 2020, 05:43 PM
ಜಿಲ್ಲಾ ಲಯನ್ಸ್ ನ "ಸ್ವಚ್ಚನಾಡು - ನಮ್ಮ ನಾಡು" ಕಾರ್ಯಕ್ರಮದಡಿ ಲಯನ್ಸ್ ಕ್ಲಬ್ ಬಂಟಕಲ್ಲು - ಬಿ.ಸಿ ರೋಡು ಇವರ ಆಶ್ರಯದಲ್ಲಿ ಶಿರ್ವ ಗ್ರಾಮ ಪಂಚಾಯತ್ ನ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ, ಸ್ವಚ್ಚತಾ ವಾರಿಯರ್ಸ್ ರವರಿಗೆ ಗೌರವ ಸಲ್ಲಿಸುವ ವಿನೂತನ ಕಾರ್ಯಕ್ರಮವು ಲಯನ್ಸ್ ಜಿಲ್ಲಾ ಗವರ್ನರ್ ಲ.ಎನ್.ಎಮ್ ಹೆಗಡೆಯವರ ಉಪಸ್ಥಿತಿಯಲ್ಲಿ ಇಂದು ನಡೆಯಿತು.
ಲಯನ್ಸ್ ಜಿಲ್ಲಾ ಕಾರ್ಯಕ್ರಮ ನಮ್ಮ ನಾಡು ಸ್ವಚ್ಚ ನಾಡು ಕಾರ್ಯಕ್ರಮದಡಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಘಟಕದಲ್ಲಿ ಸ್ವಚ್ಚತ ಸಿಬ್ಬಂಧಿಯವರು ನಿರ್ವಹಿಸುವ ಕಾರ್ಯ ವಿಧಾನದ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಕಸ ವಿಂಗಡಣೆ, ತ್ಯಾಜ್ಯದಿಂದ ಗೊಬ್ಬರ ತಯಾರಿ, ಪ್ಲಾಸ್ಟಿಕ್ ನಿರ್ವಹಣೆ ಮಾಡುವ ಬಗ್ಗೆ ಮಾಹಿತಿ ಪಡಕೊಳ್ಳಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ 11 ಮಂದಿ ಸ್ವಚ್ಚತಾ ವಾರಿಯರ್ಸ್ ರವರನ್ನು ಲಯನ್ಸ್ ಜಿಲ್ಲಾ ಗವರ್ನರ್ ರವರು ಶಾಲು ಹೊದಿಸಿ ಗೌರವಿಸಿ ಎಲ್ಲರಿಗೂ ಮೈಗವಸನ್ನು ವಿತರಿಸಿದರು.
ಬಂಟಕಲ್ಲು ಲಯನ್ಸ್ ಕ್ಲಬ್ ನ ಈ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿ ಈ ಘಟಕಕ್ಕೆ ಮುಂದಿನ ದಿನಗಳಲ್ಲಿ ಸಹಕರಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿ ಸ್ವಚ್ಚತಾಗಾರರ ಈ ಕಾರ್ಯವು ಸೈನಿಕರ ಸೇವೆಯಷ್ಟೇ ಪ್ರಾಮುಖ್ಯತೆ ಪಡೆದಿದೆ , ಇವರನ್ನು ಗೌರವಿಸುವ ಕೆಲಸ ನಿರಂತರವಾಗಿರಲಿ ಎಂದರು.
ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀ ಅನಂತಪದ್ಮನಾಭ ನಾಯಕ್ ರವರು ಘಟಕದ ಕಾರ್ಯನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಲಯನ್ಸ್ ಸಂಸ್ಥೆಯ ಸಹಕಾರವನ್ನು ಕೋರಿದರು. ಗ್ರಾ.ಪಂ ಮಾಜಿ ಅಧ್ಯಕ್ಷೆ ಶ್ರೀಮತಿ ವಾರಿಜಾ ಪೂಜಾರ್ತಿಯವರು ಶುಭಹಾರೈಸಿದರು.
ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಲ.ವಿಜಯ್ ಧೀರಜ್ ರವರು ಅಧ್ಯಕ್ಷತೆ ವಹಿಸಿದ್ದರು. ನಮ್ಮ ನಾಡು ಸ್ವಚ್ಟ ನಾಡು ಯೋಜನೆಯ ಲಯನ್ಸ್ ಪ್ರಾಂತೀಯ ಸಂಯೋಜಕ ಲ.ಕೆ ಆರ್ ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬಂಟಕಲ್ಲು ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ಲ.ದಿನೇಶ್, ಲಯನ್ಸ್ ಸದಸ್ಯರಾದ ಲ.ವೈಲೇಟ್ ಕಸ್ತಲಿನೊ, ಲ.ಅರುಣ್ ಬರ್ಬೋಜಾ, ಲ ಸದಾನಂದ ಪೂಜಾರಿ , ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಶಾಲೆಟ್ ದೀಪಿಕಾ ಡಿ'ಸೋಜಾ, ಘಟಕದ ಮೇಲ್ವಿಚರಕರಾದ ಕಿಶೋರ್, ರಕ್ಷಿತ್ ಉಪಸ್ಥಿತರಿದ್ದರು.
ಲಯನ್ಸ್ ಕಾರ್ಯದರ್ಶಿ ಲ.ಅರುಂಧತಿ ಜಿ ಪ್ರಭುರವರು ಧನ್ಯವಾದವಿತ್ತರು.
ಲಯನ್ಸ್ ಸದಸ್ಯರಾದ ಲ.ವೈಲೇಟ್ ಕಸ್ತಲಿನೊ, ಲ.ಅರುಣ್ ಬರ್ಬೋಜಾ, ಲ ಸದಾನಂದ ಪೂಜಾರಿ , ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಶಾಲೆಟ್ ದೀಪಿಕಾ ಡಿ'ಸೋಜಾ, ಘಟಕದ ಮೇಲ್ವಿಚರಕರಾದ ಕಿಶೋರ್, ರಕ್ಷಿತ್ ಉಪಸ್ಥಿತರಿದ್ದರು.
ಲಯನ್ಸ್ ಕಾರ್ಯದರ್ಶಿ ಲ.ಅರುಂಧತಿ ಜಿ ಪ್ರಭುರವರು ಧನ್ಯವಾದವಿತ್ತರು.
34 ವರ್ಷಗಳ ಹಿಂದೆ ವಿದ್ಯೆ ಕಲಿಸಿದ ಗುರುಗಳನ್ನು ಸಮ್ಮಾನಿಸಿದ ಉಡುಪಿಯ ತಂಡ
Posted On: 08 Sep 2020, 12:49 PM
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮತ್ತು ಹತ್ತನೇ ತರಗತಿ (1986.87 ) ವಿದ್ಯಾರ್ಥಿ ಗಳು ಸರಕಾರಿ ಪ. ಪೂ. ಕಾಲೇಜ್ ಫಿಶರೀಸ್ ಮಲ್ಪೆ ಇವರ ವತಿಯಿಂದ ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯೆ ಕಲಿಸಿದ ಗುರುಗಳಾದ ಲೀಲಾ ಟೀಚರ್ ಮತ್ತು ಭಾಸ್ಕರ್ ಶೆಟ್ಟಿಯವರನ್ನು ಗೌರವಿಸಲಾಯಿತು. ಕಾರ್ಯಕ್ರಮ ದಲ್ಲಿ ವಿಘ್ನೇಶ್ವರ ಪ್ರಿಂಟರ್ಸ್ ಮಾಲಕ ಎಮ್ ಮಹೇಶ್ ಕುಮಾರ್, ಉದ್ಯಮಿ ಚಿತ್ರ ಕುಮಾರ್, ಸಿವಿಲ್ ಇಂಜಿನಿಯರ್ ಜಯರಾಮ್, ಉದ್ಯಮಿ ಲಕ್ಷ್ಮೀಶ್ ಬಂಗೇರ, ಉದ್ಯಮಿ ಸುಧಾಕರ್, ಜಿಲ್ಲಾ ಪಂಚಾಯತ್ ಉದ್ಯೋಗಿ ರೋಹಿಣಿ, ಉದ್ಯಮಿ ವಸಂತಿ ಉಪಸ್ಥಿತರಿದ್ದರು ಗುರು ಗಳ ಸ್ವಗೃಹ ಕ್ಕೆ ಹೋಗಿ ಗುರುವಂದನೆ ಮಾಡಿರುವುದು ನಮ್ಮೆಲ್ಲರ ಭಾಗ್ಯ ಎಂದು ಸದಸ್ಯರು ಸಂತೋಷ ವ್ಯಕ್ತಪಡಿಸಿದರು, ಅದೇ ರೀತಿ ಭಾಸ್ಕರ್ ಶೆಟ್ಟಿ ಹಾಗೂ ಲೀಲಾವತಿ ಟೀಚರ್ ದಂಪತಿಗಳು ವಿದ್ಯಾರ್ಥಿಗಳಿಗೆ ಆಶೀರ್ವಾದ ನೀಡಿದರು.
ಹರಿದಾಸ ಬಿ. ಸಿ. ರಾವ್ ದಂಪತಿಗಳಿಗೆ ಕಲ್ಯಾಣಪುರ ರೋಟರಿ ವತಿಯಿಂದ ಸಮ್ಮಾನ
Posted On: 07 Sep 2020, 01:16 PM
ಉಡುಪಿ ಕಲ್ಯಾಣಪುರ ರೋಟರಿ ಕ್ಲಬ್ ಮತ್ತು ಶ್ರೀ ವಿಘ್ನೇಶ್ವರ ಪ್ರಿಂಟರ್ಸ್, ಮಲ್ಪೆ ಇವರ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ನಡೆಸಲಾಯ್ತು. ಈ ಸಲುವಾಗಿ ಹೆಬ್ರಿ ಸಮೀಪದ ಶಿವಪುರದ ವಿಶ್ರಾಂತ ಶಿಕ್ಷಕ, ಹರಿದಾಸ ಬಿ. ಸಿ. ರಾವ್, ಶಿವಪುರ ದಂಪತಿಗಳನ್ನು ಅವರ ಶಿವಪುರದ ಪಾಂಡುಕಲ್ಲಿನ ಸ್ವಗೃಹ ‘ಗುರುಪದ’ ದಲ್ಲಿ ಯಥೋಚಿತ ಗೌರವಿಸಿ ಸಂಮಾನಿಸಲಾಯ್ತು. ರೋಟರಿ ಅಧ್ಯಕ್ಷ ಡೆಸ್ಮಂಡ್ ವಾಸ್ ಸ್ವಾಗತಿಸಿದರು, ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮಾಲಕ, ರೋಟರಿ ಸದಸ್ಯ ಎಂ. ಮಹೇಶ್ ಕುಮಾರ್ ಮಲ್ಪೆ ಪ್ರಸ್ತಾವನೆಗೈದು, ಅಭಿನಂದನ ಪತ್ರ ವಾಚಿಸಿ, ಸನ್ಮಾನಿತರನ್ನು ಕುರಿತು ಮಾತನಾಡಿದರು. ಸಭೆಯಲ್ಲಿ ರೋಟರಿ ಕಾರ್ಯದರ್ಶಿ, ಲಿಯೋ ವಿಲಿಯಂ ಅಂದ್ರಾದೆ, ಶ್ರೀಮತಿ ಅಹಲ್ಯಾ ಸಿ. ರಾವ್ ಟಿಸಿಎಸ್ ಉದ್ಯೋಗಿ, ಬಿ. ಆದರ್ಶ ರಾವ್ ಉಪಸ್ಥಿತರಿದ್ದರು. ಸನ್ಮಾನಿತರು ಈ ಗೌರವ ಮುದ ನೀಡಿದೆ ಎಂದು ಹೇಳಿ ಕೃತಜ್ಞತೆ ಸೂಚಿಸಿದರು. ಚೆಲುವರಾಜ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು, ಶೇಖರ ಪೂಜಾರಿ ವಂದಿಸಿದರು. ಬರಹ : ಬಿ.ಸಿ. ರಾವ್ ಶಿವಪುರ (ಹೆಬ್ರಿ) ಹವ್ಯಾಸಿ ಪತ್ರಕರ್ತರು
ಕುಲಾಲ ಸಮಾಜ ಕಳತ್ತೂರು ನೂತನ ಅಧ್ಯಕ್ಷರಾಗಿ ರಾಜೇಶ್ ಕುಲಾಲ್ ಪೈಯಾರು ಆಯ್ಕೆ
Posted On: 06 Sep 2020, 06:12 PM
ಕುಲಾಲ ಸಮಾಜ ಕಳತ್ತೂರು ಇದರ ನೂತನ ಅಧ್ಯಕ್ಷರಾಗಿ ರಾಜೇಶ್ ಕುಲಾಲ್ ಪೈಯಾರು ಹಾಗೂ ಕಾರ್ಯದರ್ಶಿಯಾಗಿ ಶಕ್ತಿ.ಆರ್. ಕುಲಾಲ್ ಮತ್ತು ಕೋಶಾಧಿಕಾರಿಯಾಗಿ ಹರೀಶ್ ಕೆ ಮೂಲ್ಯ ಇವರುಗಳು ಅಯ್ಕೆಯಾಗಿರುತ್ತಾರೆ. ತಮ್ಮ ಅವಧಿಯಲ್ಲಿ ಕುಲಾಲ ಸಂಘಟನೆಯು ಇನ್ನಷ್ಟು ಸುಘಟಿತವಾಗಲಿ, ಉತ್ತಮ ಸಮಾಜಮುಖಿ ಕಾರ್ಯಕ್ರಮದೊಂದಿಗೆ ಸಾಗಲಿ ತಮಗಿದೋ ಹಾರ್ದಿಕ ಅಭಿನಂದನೆಗಳು.
ಶಿರ್ವ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರಿಂದ ರಸ್ತೆ ಸ್ವಚ್ಛತಾ ಕಾರ್ಯ
Posted On: 06 Sep 2020, 03:01 PM
ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಶಿರ್ವ ವಿಷ್ಣುಮೂರ್ತಿ ಘಟಕ ದ ನೇತೃತ್ವದಲ್ಲಿ ಸತತ 3 ಭಾನುವಾರ ಭೂತಬೆಟ್ಟುನಿಂದ ಶಿರ್ವ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಕೊಪ್ಪದಿಂದ ನಡಿಬೆಟ್ಟು ತನಕ ರಸ್ತೆ ಸ್ವಚ್ಛತಾ ಕಾರ್ಯ ನಡೆಯಿತು.ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು,ಶಿರ್ವ ವಲಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ,ಬಜರಂಗದಳ ವಲಯ ಸಂಯೋಜಕ ಪ್ರಕಾಶ್ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನು ಅಭಿನಂದಿಸಿ ಶುಭಹಾರೈಸಿದರು.ಕಾಪು ಪ್ರಖಂಡ ಸುರಕ್ಷಾ ಪ್ರಮುಖ್ ಆನಂದ ಕೊಪ್ಪ,ವಿಷ್ಣುಮೂರ್ತಿ ಘಟಕದ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಆನಂದ ಶೆಟ್ಟಿ,ಬಜರಂಗದಳ ಸಂಯೋಜಕ ರಾಕೇಶ್ ಶೆಟ್ಟಿ,ಸೇವಾ ಪ್ರಮುಖ್ ಅವಿನಾಶ್ ಶೆಟ್ಟಿ,ಗೋರಕ್ಷಾ ಪ್ರಮುಖ್ ಸುಕೇಶ್ ಶೆಟ್ಟಿ,ಮಾತೃಶಕ್ತಿ ಸಂಯೋಜಕಿ ಚಂದ್ರಾವತಿ,ದುರ್ಗಾವಾಹಿನಿ ಸಂಯೋಜಕಿ ಸುಮಲತಾ,ಘಟಕದ ಜವಾಬ್ದಾರಿಯುತರು ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲ್ಪೆ ರಾಘವೇಂದ್ರ
Posted On: 05 Sep 2020, 03:13 PM
ರೋಟರಿ ಕಲ್ಯಾಣಪುರ ಮತ್ತು ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರು ವಂದನೆ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲ್ಪೆ ರಾಘವೇಂದ್ರ ಹಾಗೂ ಅವರ ಪತ್ನಿ ಕೆ ರತ್ನ ಎಮ್ ಆರ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಡೆಸ್ಮನ್ಡ್ ವಾಜ್, ಕಾರ್ಯದರ್ಶಿ ಲಿಯೋ ಅಂದ್ರಾದೆ, ವಿಘ್ನೇಶ್ವರ ಪ್ರಿಂಟರ್ಸ್ ಮಾಲಕರಾದ ಎಮ್ ಮಹೇಶ್ ಕುಮಾರ್, ನಿವೃತ್ತ ತರಂಗ ಸಂಪಾದಕರಾದ ಚೆಲುವ ರಾಜ್ ಪೆರಂಪಳ್ಳಿ, ನಿವೃತ್ತ ಪೋಸ್ಟ್ ಮಾಸ್ಟರ್ ಶೇಖರ್ ಪೂಜಾರಿ ಕಲ್ಮಾಡಿ, ಪ್ರಮೋದ್ ಸುವರ್ಣ, ಮನೀಶ್ ಕೃಷ್ಣ, ಮಧು ಕಿರಣ್, ಮಧುಸ್ಮಿತಾ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅರಿವು ಸಾಲದ ಮೊತ್ತ ವಿಳಂಬ ಬಿಡುಗಡೆಗೆ ಒತ್ತಾಯಿಸಿ ಮನವಿ
Posted On: 05 Sep 2020, 01:12 PM
ಕರ್ನಾಟಕ ಸರ್ಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ಅರಿವು ಸಾಲದ ಮೊತ್ತ ಜೂನ್ ತಿಂಗಳಲ್ಲಿ ಮಂಜೂರು ಆಗುತ್ತಿದ್ದು ಆದರೆ ಈ ಬಾರಿ ಬಹಳ ವಿಳಂಬವಾಗಿದ್ದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಬಹಳ ಕಷ್ಟಕರವಾಗುತ್ತಿದೆ ಎಂದು ಎಸ್ ಐ ಓ ಜಿಲ್ಲಾದ್ಯಕ್ಷ ನಾಸೀರ್ ಹೂಡೆ ತಿಳಿಸಿದ್ದಾರೆ. ಇವರು ಇಂದು ಮುಖ್ಯಮಂತ್ರಿ ಮತ್ತು ರಾಜ್ಯ ಅಲ್ಪಸಂಖ್ಯಾತ ಇಲಾಖೆಯಗೆ ಮನವಿಯನ್ನು ಸಲ್ಲಿಸುತ್ತಾ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ಧರ್ಮಧ ವಿದ್ಯಾರ್ಥಿಗಳಿಗೆ ಇದುವರೆಗೂ ಯಾವುದೇ ರೀತಿಯ ಸಾಲದ ಮೊತ್ತವನ್ನು ಆಯಾ ಕಾಲೇಜುಗಳಿಗೆ ಲಭಿಸಲಿಲ್ಲ. ಮತ್ತು ಕೆ. ಎಂ. ಡಿ. ಸಿ ಯವರು ಜೂನ್ ತಿಂಗಳಿಂದ ಹಣ ಬಿಡುಗಡೆ ಆಗುತ್ತದೆ ಎಂಬ ಸುಳ್ಳು ಭರವಸೆಯನ್ನು ನೀಡುತ್ತಲೇ ಇದ್ದು. ಸಾಲದ ಮೊತ್ತವನ್ನೇ ನಂಬಿದ ವಿದ್ಯಾರ್ಥಿಗಳಿಗೆ ಇದೀಗ ದಿಕ್ಕಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸಂಬಂಧ ಪಟ್ಟವರು ಇದರ ಬಗ್ಗೆ ಪ್ರಶ್ನಿಸಿ ವಿದ್ಯಾಥಿಗಳ ಜೀವನಕ್ಕೆ ಆಸರೆಯಾಗಬೇಕಿದೆ. ಅದರ ಜೊತೆಯಲ್ಲೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವು ಲಭಿಸುತ್ತಿದ್ದು ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಲಭಿಸದೆ ವಿಳಂಬವಾಗುತ್ತಿದೆ ಈ ಬಗ್ಗೆ ತಾವುಗಳು ಸಂಬಂಧಪಟ್ಟ ಇಲಾಖೆಯ ಜೊತೆ ಚರ್ಚಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಲಿ ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ಶಾರೂಕ್, ಸದಸ್ಯರಾದ ಅಫ್ವಾನ್, ವಸೀಮ್, ಸಲಾವುದ್ದೀನ್, ಅಯಾನ್ ಮತ್ತು ರಿಝಾನ್ ಉಪಸ್ಥಿತರಿದ್ದರು.
ಮನದ ಕತ್ತಲೆ ತೊಲಗಿಸಿ ಭರವಸೆಯ ದೀಪ ಬೆಳಗಿದ ಗುರುವನ್ನು ನೆನೆಯೋಣ
Posted On: 04 Sep 2020, 01:42 PM
ಗುರುವಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಅದಕ್ಕಾಗಿ ನಾವು ಗುರುವಿನ ಸಮಾನ ನಾಗುವ ವರೆಗೆ ಕೆಲಸ ಮಾಡಿದರೆ ಅದುವೇ ಗುರುವಿಗೆ ನೀಡುವ ದೊಡ್ಡ ಕೊಡುಗೆ. ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ತಮ್ಮ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ
"ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು " ಉತ್ತಮ ಗುರುಗಳು ಅದೇ ರೀತಿ ಉತ್ತಮ ಶಿಷ್ಯರಿದ್ದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗಬಹುದು.
ಹಳಸಿದ ಗುರು-ಶಿಷ್ಯರ ಸಂಬಂಧ: ದಿನ ಬೆಳಗಾದರೆ ಸಾಕು ಕೆಲವು ವಿದ್ಯಾರ್ಥಿ ಸಂಘಟನೆಗಳಿಂದ ಸರ್ಕಾರದ ವಿರುದ್ಧ ಧರಣಿ. ಶಿಕ್ಷಕರಿಂದಲೂ ನಾನಾ ಹಕ್ಕುಗಳಿಗಾಗಿ ಪ್ರತಿಭಟನೆಗಳನ್ನು ನಾವು ಸಮಾಜದಲ್ಲಿ ನೋಡುತ್ತಿದ್ದೇವೆ. ಸೇವೆಯ ಮುಖ್ಯ ಭಾಗವಾಗಿದ್ದ ಶಿಕ್ಷಣವು ಇಂದು ವ್ಯಾಪರೀಕರಣವಾಗಿ ಮಾರ್ಪಟ್ಟಿರುವುದು ಸರಿಯಲ್ಲ. ಶ್ರೀಮಂತರಿಗೆ ಅತ್ಯಂತ ಸುಲಭವಾಗಿ ಸಿಗುವ ಉನ್ನತ ವ್ಯಾಸಂಗದ ಸೀಟುಗಳು, ಓದಿನಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗೆ ಸಿಗದಂತಾಗಿದೆ. ಮೀಸಲಾತಿಯಲ್ಲಿ ಬದಲಾವಣೆಯಾಗಬೇಕಾದ ಅಗತ್ಯ ಇದೆ ಕೇವಲ ಜಾತಿಯ ದೃಷ್ಟಿಯಲ್ಲಿ ಮೀಸಲಾತಿ ನೀಡದೆ ಆಥಿ೯ಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿ ಅವರಿಗೂ ಉತ್ತಮ ಅವಕಾಶ ನೀಡಬೇಕು.
ಹಿಂದೆ ಗುರು-ಶಿಷ್ಯರ ಸಂಬಂಧ ಉತ್ತಮವಿತ್ತು. ವಿಶ್ವದಲ್ಲೇ ಭಾರತದ ಶಿಕ್ಷಣ ವ್ಯವಸ್ಥೆ ಶ್ರೇಷ್ಠಮಟ್ಟದಲ್ಲಿತ್ತು. ಬಂಗಾಳ, ನಲಂದಾ, ಕಂಚಿಯಲ್ಲಿ ಅಷ್ಟೇ ಏಕೆ ಧಾರವಾಡ, ಬಿಜಾಪುರ ಹಾಗೂ ಅರಸೀಕೆರೆಯೂ ಕೂಡ ಪ್ರಮುಖ ವಿದ್ಯಾಕೇಂದ್ರವಾಗಿತ್ತು ಎಂಬುದಾಗಿ ಚರಿತ್ರೆ ಹೇಳುತ್ತದೆ.
ಗುರುಕುಲ ಪದ್ಧತಿ ಪುನರುತ್ಥಾನವಾಗಬೇಕಾಗಿದೆ
:ನಾನಾ ವಿಷಯಗಳಲ್ಲಿ ವಿಶ್ವಮಟ್ಟದಲ್ಲಿ ಬೆಳಗಬಲ್ಲ ಅತ್ಯಂತ ಶ್ರೇಷ್ಠ ವಿದ್ವಾಂಸರು ನಮ್ಮಲ್ಲಿದ್ದರು. ಅವರೆಲ್ಲರ ಸಾಧನೆ ಹಿಂದೆ ಗುರುಗಳ ಮಾರ್ಗದರ್ಶನವಿರುದನ್ನು ನಾವು ಕಾಣಬಹುದು. ಆದರೆ ದುರದೃಷ್ಟವೆಂದರೆ ಅವರ ಹೆಚ್ಚಿನ ಸಂಶೋಧನೆಗಳು ಬರೀ ಕಡತದಲ್ಲಿ ಕೊಳೆಯುವಂತಾಗಿದೆ ವಿಪರ್ಯಾಸ.
ಈ ಹಿಂದೆ ಗುರುಕುಲ ಶಿಕ್ಷಣಪದ್ಧತಿಯಲ್ಲಿ ಗುರುಶಿಷ್ಯರು ಒಂದೆಡೆ ನೆಲೆಸಿ, ಒಂದೇ ಬಗೆಯ ಆಹಾರ ಸೇವಿಸಿ, ಸಮವಸ್ತ್ರ ಧರಿಸಿಕೊಳ್ಳುತ್ತಿದ್ದರು. ಮುಂಜಾನೆಯಿಂದ ಮುಸ್ಸಂಜೆಯವರೆಗೂ ಕಟ್ಟುನಿಟ್ಟಿನ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಬಗೆಯ ವಿದ್ಯೆಯನ್ನು ಕಲಿಯುವ ಅವಕಾಶವಿತ್ತು.
ಜಾತಿ ಭೇದವಿಲ್ಲದ ವಾತಾವರಣದಲ್ಲಿ, ಪ್ರಕೃತಿಯ ಮಡಿಲಲ್ಲಿ ಸದ್ವಿದ್ಯೆಯನ್ನು ಪಡೆಯಬಹುದಾಗಿತ್ತು. ಈಗ ಈ ರೀತಿಯ ವಾತಾವರಣ ಕಲ್ಪಿಸಲು ಅಸಾದ್ಯವಾಗಿದೆ .ಆದರೆ ಸಂತೋಷದ ವಿಷಯವೆಂದರೆ ಕೆಲವು ಕಡೆಗಳಲ್ಲಿ ಗುರುಕುಲ ಮಾದರಿಯ ಶಿಕ್ಷಣ ಸಂಸ್ಥೆಗಳು ಕಾಯ೯ ನಿವ೯ಹಿಸುತ್ತಿವೆ.
"ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರುವೆ ನಮ: "
-ಜ್ಞಾನವೆಂಬ ಸಲಾಕೆಯಿಂದ, ಶಿಷ್ಯರ ಅಜ್ಞಾನವೆಂಬ ಅಹಂಕಾರವನ್ನೂ ತೊಡೆದು
ಜ್ಞಾನಚಕ್ಷುವನ್ನು ತೆರೆಸಿ ಕಾಪಾಡುವ ಗುರುವಿಗೆ ನಮಸ್ಕಾರ ನಮ್ಮಲ್ಲಿಡಗಿರಬಹುದಾದ ಜ್ಞಾನವೆಂಬ ಬೆಳಕನ್ನು ಹೊರಜಗತ್ತಿಗೆ ತೋರುವ ಕೆಲಸವಾಗಬೇಕಾಗಿದೆ. ನಮ್ಮಲ್ಲಿರುವ ಅಂತ :ಶಕ್ತಿಯನ್ನು ನಮಗರಿವಾಗುವಂತೆ ಮಾಡುವುದೇ ಗುರುವಿನ ಕಾಯಕ.
'ವಿದ್ಯೆಯಂ ಕಲಿಸಿದಾತಂ ಗುರು' ಎನ್ನುವಾಗ ಜ್ಞಾನ ಬೋಧನೆ ಯಾರಿಂದಾದರೂ ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಒಳಿತು.
ಇಂದು ನಮ್ಮಲ್ಲಿ ಕಮ್ಮಿಯಾಗಿರುವುದು ವಿನಯ .
*ಗುರುಗಳ ಮಹತ್ವ ಕಡಿಮೆ?:*
ಇಂದಿನ ವೇಗದ ಯುಗದ ವ್ಯವಸ್ಥೆಯಿಂದ ಗುರುಗಳ ಮಹತ್ವ ಕಡಿಮೆಯಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಶಿಕ್ಷಕರನ್ನೇ ನೋಡದೆ ಆನ್‌ಲೈನ್ ಶಿಕ್ಷಣ, ವರ್ಚ್ಯುಯಲ್ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಹೊಸ ಸಂಶೋಧನೆಗಳನ್ನು ರಚನಾತ್ಮಕ ಕೆಲಸಗಳಿಗೆ ಉಪಯೋಗಿಸದೇ ವಿಧ್ವಂಸಕ ಕೃತ್ಯಗಳಿಗೆ ಪ್ರಯೋಗಿಸುತ್ತಿರುವುದು ಆತಂಕಕಾರಿ ವಿಷಯ. ಅನೇಕ ಪಿ.ಎಚ್.ಡಿ ಸಂಶೋಧನಾ ಪ್ರಬಂಧಗಳು ಕಪಾಟಿನ ಮೂಲೆಯಲ್ಲಿದೆ ಅದನ್ನು ಎಲ್ಲಾ ಕಾಲೇಜಿನ ಗ್ರಂಥಾಲಯದಲ್ಲಿಡುವ ಕಾಯ೯ ನಡೆಯಬೇಕು .ವಿದ್ಯಾಥಿ೯ಗಳು ಅದರ ಮೂಲಕ ಪ್ರೇರಣೆ ಪಡೆಯಬೇಕು.
ವಿದ್ಯೆ ನೀಡಿದ ಗುರುವಿಗೆ ಪ್ರತಿಯಾಗಿ ಗುರುದಕ್ಷಿಣೆ ನೀಡುವ ಕಾಯಕ ಹಿಂದಿನಿಂದ ಬಂದಿದೆ. ಆದರೆ ಹಿಂದೆಲ್ಲಾ ಗುರುವಿಗೆ ಗೌರವಪೂರ್ವಕವಾಗಿ ಗುರುದಕ್ಷಿಣೆ ಸಲ್ಲುತ್ತಿತ್ತು. ಕಾಣದ ಗುರುವು ತನ್ನೆಡೆಗೆ ಬಂದು ಗುರುದಕ್ಷಿಣೆ ಕೇಳಿದಾಗ ಕೈಬೆರಳನಿತ್ತ ಏಕಲವ್ಯನ ಕತೆ ಜನಜನಿತ. ಗುರುಗಳಲ್ಲಿ ಹೇಗೆ ಅರ್ಪಣಾ ಮನೋಭಾವ ಅಗತ್ಯವೋ ಹಾಗೆ ಶಿಷ್ಯರಲ್ಲಿ ಗುರುವನ್ನು ಸತ್ಕರಿಸುವ ಮನಸ್ಸಿರಬೇಕು. ಸತ್ಕಾರವೆಂದರೆ ದ್ರವ್ಯರೂಪದಲ್ಲಿ ಸಂತೋಷಪಡಿಸುವುದಷ್ಟೇ ಅಲ್ಲ. ಕನಿಷ್ಠ ವರ್ಷಕ್ಕೊಂದು ದಿನವಾದರೂ (ಗುರುವಿನ ಹುಟ್ಟುಹಬ್ಬದ ದಿನವಾದರೆ ಇನ್ನು ಚೆನ್ನ) ಗುರುವಿಗೆ ನಮ್ಮ ನಮನ ಸಲ್ಲಿಸುವ ಕಾಯ೯ ನಡೆದರೆ ಉತ್ತಮ.
ಗುರುವಿಗೆ ಸಮಾನನಾದ ವ್ಯಕ್ತಿ ಇಲ್ಲ:
ಗುರುಗಳಿಗೆ ಶಿಷ್ಯರು ಅನೇಕರಿರಬಹುದು ಆದರೆ ಗುರು ಒಬ್ಬರೆ ಹೀಗಾಗಿ ಈ ಗುರುವಿನ ಬಗ್ಗೆ
ಭಾರತದಲ್ಲಿ ನೆನಪಿಕೊಳ್ಳುವಂತೆ ಮಾಡಿದ ಕೀರ್ತಿ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರಿಗೆ ಸಲ್ಲುತ್ತದೆ. ಉದಾರ ಮನೋಭಾವನೆಯಿಂದ ತಾವು ಹುಟ್ಟಿದ ದಿನವನ್ನು (ಸೆಪ್ಟೆಂಬರ್ 5) ಶಿಕ್ಷಕರ ದಿನವೆಂದು ಆಚರಿಸಲು ತಮ್ಮ ಶಿಷ್ಯ ವೃಂದಕ್ಕೆ ಕರೆಯನ್ನಿತ್ತರು.
ಹೆಚ್ಚಿನ ಟಿ.ವಿ ಮಾಧ್ಯಮಗಳಲ್ಲಿ ಶಿಕ್ಷಕರ ಮಹತ್ವವನ್ನು ತೋರಿಸುವ ಕಾರ್ಯಕ್ರಮಗಳು ಕಾಣೆಯಾಗಿವೆ. ಜೊತೆಗೆ ಚಲನಚಿತ್ರಗಳಲ್ಲಿ ಶಿಕ್ಷಕರನ್ನು ಸರ್ಕಸ್‌ನ ಬಫೂನ್‌ಗಳಂತೆ ಚಿತ್ರಿಸುತ್ತಿರುವುದು ವಿಷಾದನೀಯ ಸಂಗತಿ. ಗುರು ಶಿಷ್ಯರ ನಡುವಿನ ಅಂತರವನ್ನು ಹೆಚ್ಚಿಸುವಲ್ಲಿ ಇಂತಹ ಕೆಟ್ಟ ಅಭಿರುಚಿಯ ಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆಂದರೆ ತಪ್ಪಾಗಲಾರದು.
ತಾಯಿಯೇ ಮೊದಲ ಗುರು :
ಮಗುವಿಗೆ ಮೊದಲು ಕೇಳಿಸುವುದು ತನ್ನಮ್ಮನ ಮಾತುಗಳೇ. ತಾಯಿಯಾದವಳು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ. ತಾಯಿಯ ಮಮತೆ ತಂದೆಯಂತೆ ಜವಾಬ್ದಾರಿಯಿಂದ ಪೋಷಣೆ ಮಾಡಬಲ್ಲವನೇ ನಿಜವಾದ ಗುರು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.
'ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮನ್ನು ಪೋಷಿಸಿದವರನ್ನು ಒಮ್ಮೆ ಹಿಂದುರಿಗಿ ನೋಡಿದಾಗಲೇ ತೃಪ್ತಿ ದೊರೆಯುವುದು.'
ನೂತನ ಶಿಕ್ಷಣ ನೀತಿ ಶಿಕ್ಷಣಕ್ಕೆ ಹೊಸ ದಿಕ್ಕು ತೋರಿಸಲಿದೆ
ಸಕಾ೯ರ ಜಾರಿಗೆ ಉದ್ದೇಶಿಸಿರುವ ಈ ನೀತಿಯಿಂದ ಖಂಡಿತವಾಗಿಯೂ ಬದಲಾವಣೆ ತರಲು ಸಾಧ್ಯ ಬ್ರಿಟಿಷರು ತಂದ ಶಿಕ್ಷಣವನ್ನು ಕಲಿತು ಯಾವುದೇ ರೀತಿಯ ಸಾಧನೆ ಅಸಾದ್ಯ.ಈ ನೀತಿಯಿಂದ ವಿದ್ಯಾಥಿ೯ಗಳ ಇತರ ಪ್ರತಿಭೆಗೆ ಕೂಡ ಗೌರವ ಸಿಗಬಹುದು.
ಒಟ್ಟಾಗಿ ಶಿಕ್ಷಕರ ದಿನದಂದು ಅವರಿಗೆ ಧನ್ಯವಾದ ತಿಳಿಸಿ ಮತ್ತಷ್ಟು ಉತ್ತಮ ಸಾಧನೆ ಮಾಡಲು ಗುರುಗಳ ಪ್ರೇರಣೆ ಪಡೆಯೋಣ.
ಗುರುವೇ ನಮ:
ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ಹೆಜಮಾಡಿಯ ಗಜಷೃಷ್ಠಾಕಾರದ ಗರ್ಭಗುಡಿಯ ಗ್ರೀವದಲ್ಲಿ ಶಿಲ್ಪಗಳ ಕುಸುರಿ
Posted On: 01 Sep 2020, 08:20 PM
ದೇವಾಲಯ ರಚನೆಯಲ್ಲಿ ಶಿಲ್ಪದ
ಸೊಗಸು ಸೊಗಯಿಸುವುದು ಸಹಜ ಮತ್ತು
ಅನಿವಾರ್ಯ. ಇಂತಹ ಒಂದು ಅಪೂರ್ವ ಕುಶಲ ಕುಸುರಿಯ ರಚನಾಕಾರ್ಯವು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮರುನಿರ್ಮಾಣದಲ್ಲಿ ನಡೆಯತ್ತಿದೆ .
ಗಜಪೃಷ್ಠಾಕಾರದ ಗರ್ಭಗುಡಿಯ ನಿರ್ಮಾಣ ನಡೆಯುತ್ತಿದ್ದು ಪ್ರತಿಬಂಧ ಕ್ರಮದ ಅಧಿಷ್ಠಾನ , ಭಿತ್ತಿ ಸ್ತಂಭ - ಪಂಜರ - ಘನದ್ವಾರ - ಉತ್ತರವಲ್ಲಭೀಕಪೋತ ಮುಂತಾದ ಶಾಸ್ತ್ರೀಯ ನಿರ್ಮಿತಿಗಳಿಂದ ಭಿತ್ತಿಯು ಸ್ದಿದ್ಧಗೊಂಡಿದೆ .ಈಗ ಗ್ರೀವದಲ್ಲಿ ( ಪ್ರಸ್ತರ ಮತ್ತು ಸ್ತೂಪಿಯ ಎರಡು ಛಾವಣಿಯ ಮಧ್ಯದ ಸ್ಥಳಾವಕಾಶ) ಇಟ್ಟಿಗೆ , ಸಿಮೆಂಟ್ ಬಳಸಿ ಅಸಾಧಾರಣ ಕುಸುರಿನ ಕಲೆಯ ಕೌಶಲ್ಯ ಪಡಿಮೂಡುತ್ತಿವೆ.
ಗ್ರೀವದಲ್ಲಿ ಕೂಟಗಳ( ಪುಟ್ಟ ಸ್ತಂಭಗಳ ಚೌಕಟ್ಟಿನಿಂದಾದ ಗೂಡು) ರಚನೆ . ಇಲ್ಲಿ ಭಿತ್ತಿ ಸ್ತಂಭವನ್ನು ವಿಸ್ತರಿಸಿ ಕೂಟವಾಗಿ ಮಾಡುವ , ಘನದ್ವಾರವನ್ನು ಹಿಗ್ಗಿಸಿ 'ಶಾಲಾ'
(ಇಳಿಜಾರಾಗಿರುವಂತಹ ಮಾಡನ್ನು ಹೊಂದಿರುವ ಆಯತಾಕಾರದ ಗೂಡು) ನಿರ್ಮಾಣ. ಪಂಜರಗಳನ್ನು ನಾಸಿಕಗಳಾಗಿ ಪರಿವರ್ತಿಸಿ ಅಂತಸ್ತವಾಗಿ ಪಂಜರ , ಕುಂಭಲತೆಗಳಿಂದ ಅಲಂಕೃತವಾಗಿದೆ .ಕೂಟ ಮತ್ತು ನಾಸಿಕಗಳ ಮಧ್ಯೆ ಒದಗುವ ಅವಕಾಶದಲ್ಲಿ ಸ್ತಂಭ ಗೋಪುರಗಳನ್ನು ಅಳವಡಿಸಲಾಗಿದೆ .ಈ ರಚನೆಯು ಶಿಲ್ಪದ ಶ್ರೀಮಂತಿಕೆಯ ಅಭಿವ್ಯಕ್ತಿಯಾಗಿದೆ .
ಶಾಲಾ ರಚನೆಯು ಉಭಯ ಪಾರ್ಶ್ವಗಳಲ್ಲಿ ಪಂಜರಗಳನ್ನು ಒಳಗೊಂಡಿದೆ .ಒಟ್ಟು ರಚನೆಯು ಹತ್ತು ಅಂಶದ ಪಡಿ,ವೇದಿಕೆ , ಭಿತ್ತಿ ಅಲಂಕಾರ, ಉತ್ತರವಲಭಿಕಪೋತ , ಪಿಂಡಿ ಹೀಗೆ ಹಂತಹಂತವಾಗಿ ಸೃಷ್ಟಿ ಯಾಗುತ್ತಿದೆ .
ಗಜಪೃಷ್ಠಾಕಾರದ ವೃತ್ತಭಾಗದ ಪಂಜರದಲ್ಲಿ ಹೆಚ್ಚಿನ ಔನ್ನತ್ಯದಲ್ಲಿ ವೃತ್ತ ಸ್ಪುಟಿತಕಗಳಿವೆ .
ಚತುರಸ್ರದಿಂದ ವೃತ್ತಕ್ಕೆ ತಿರುಗುವ ಭಾಗದಲ್ಲಿ
ಅರ್ಧ ಶಾಲಾ ವಿಭಜಿಸಲ್ಪಟ್ಟಿದೆ .ಇಂತಹ ರಚನೆಗಳಿಂದ ಗ್ರೀವದ ಕೆಲಸ ನಡೆಯುತ್ತಿದೆ.
ಹೆಜಮಾಡಿಯ ಬಸ್ತಿಪಡ್ಪುವಿನಲ್ಲಿರುವ ಸುಮಾರು ಹತ್ತನೇ ಶತಮಾನದ ಗಜಪೃಷ್ಠಾಕಾರದ ಗರ್ಭಗುಡಿಯ ಮರು ನಿರ್ಮಾಣದ ವೇಳೆ ಗ್ರೀವದಲ್ಲಿ ಮೇಲೆ ವಿವರಿಸಿದ ವಿನ್ಯಾಸಗಳು ನಿರ್ಮಾಣವಾಗುತ್ತಿದೆ .
ಗರ್ಭಗುಡಿಯ ಒಳಸುತ್ತಿನಲ್ಲಿ ( ಮೂರು ಪದರಗಳಲ್ಲಿ ಒಳಗಿನದ್ದು) ಕರ್ಣ ಮುಚ್ಚಿಕೆಯ ಬದಲಿಗೆ ಕೆಂಪುಕಲ್ಲಿನ 'ತೊರವು' ಗಮನಸೆಳೆಯುತ್ತದೆ . ಗರ್ಭಗುಡಿಯ
ಚತುರಸ್ರ ಆಕಾರದ ( ಗಜಪೃಷ್ಠಕ್ಕೆ ತಿರುಗುವ ಮೊದಲಿನ ಆಕಾರ) ಮೇಲೆ ಅದೇ ಆಕಾರದಲ್ಲಿ ಆರಂಭಗೊಂಡು ಅಷ್ಟಪಟ್ಟಿಯಾಗಿ ವಿಸ್ತರಿಸಲ್ಪಟ್ಟು ಮುಂದೆ ವೃತ್ತವಾಗಿ ಮೇಲೆ ಗೋಲಾಕಾರವಾಗಿ ನಿರ್ಮಿಸಲ್ಪಟ್ಟ ಪುರಾತನ ಕರ್ಣಮುಚ್ಚಿಕೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ .ಇಂತಹ ರಚನೆಗಳು ವಿರಳ ಲಭ್ಯ .
ದೇವಾಲಯದ ಸ್ಥಪತಿ ಅವದಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರ ನಿರ್ದೇಶನದಂತೆ ನಿರ್ಮಾಣಕಾರ್ಯ ನಡೆಯುತ್ತಿದೆ .ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಪುಣೆ , ಆಡಳಿತೆ ಮೊಕ್ತೇಸರ ದಯಾನಂದ ಹೆಜಮಾಡಿಯವರ ಮುತುವರ್ಜಿಯಿಂದ ಕಾಮಗಾರಿ ನಡೆಯುತ್ತಿದೆ.
ನೋಂಪು, ಅನಂತವ್ರತ, ಅನಂತಾನಂತ ದೇವೇಶ - ಕೆ ಎಲ್ ಕುಂಡಂತಾಯ
Posted On: 01 Sep 2020, 11:57 AM
' ಕ್ಷೀರಸಾಗರದಲ್ಲಿ ಮಹಾಶೇಷನ ಮೇಲೆ ಮಲಗಿರುವ ಶ್ರೀಮನ್ನಾರಾಯಣ' ಈ ಸನ್ನಿವೇಶದ ಯಥಾವತ್ತಾದ ಪರಿಕಲ್ಪನೆಯೊಂದಿಗೆ ನೆರವೇರುವ ಉಪಾಸನೆಯ ಅಲೌಕಿಕ ಅನುಸಂಧಾನವೇ 'ಶ್ರೀಮದನಂತವ್ರತ' , 'ಅನಂತವ್ರತ, ಅಥವಾ 'ನೋಂಪು'. ಭಾದ್ರಪದ ಶುದ್ಧ ಚತುರ್ದಶಿ ತಿಥಿಯಲ್ಲಿ 'ಅನಂತ ಚತುರ್ದಶಿ' ಆಚರಣೆ .
ಇದು ವ್ರತವಾಗಿ ನೆರವೇರುತ್ತದೆ .
ಕ್ಷೀರ ಸಾಗರವನ್ನು ಸಾಂಕೇತಿಸುವ ಜಲ ಪೂರಿತ ಕಲಶ . ಅದರ ಮೇಲೆ ದರ್ಭೆಯಿಂದ ನಿರ್ಮಿಸಿರುವ ಏಳು ಹೆಡೆಯುಳ್ಳ ಶೇಷಾಕೃತಿ . ಈ ಶೇಷಾಕೃತಿಯ ಮೇಲೆ ಶಾಲಗ್ರಾಮ .ಈ ಪರಿಕಲ್ಪನೆಯಲ್ಲಿ ಅನಂತನಾಮಕನಾದ ಶೇಷನ ಮೇಲೆ ಶಯನ ಮಾಡಿದ ಅನಂತಪದ್ಮನಾಭನ ಚಿಂತನೆಯೊಂದಿಗೆ ಆರಾಧನೆ ನೆರವೇರುವುದು .ವೈಕುಂಠವನ್ನೆ ಸಾಕಾರ ಗೊಳಿಸುವ , ವಾಸ್ತವದ ಸ್ಥಾಪನೆಯಾಗಿ ವ್ರತ ನಡೆಯುವುದು . ಲೌಕಿಕದಲ್ಲಿ ಅಲೌಕಿಕವನ್ನು ನಿರ್ಮಿಸುವ ವೈದಿಕದ ಉಪಾಸನಾ ವಿಧಾನ ಅದ್ಭುತ .
ಹದಿನಾಲ್ಕು ಗಂಟುಗಳುಳ್ಳ ಕೆಂಪು ಬಣ್ಣದ "ದಾರ ಅಥವಾ ದೋರ"ವನ್ನು ಪ್ರತಿಷ್ಠಾಪಿತ ಕಲಶದಲ್ಲಿ ಪ್ರಧಾನ ಪೂಜಾಕಾಲದಲ್ಲಿ ಇರಿಸಿ ಪೂಜಾನಂತರದಲ್ಲಿ ಧರಿಸಿಕೊಳ್ಳುವುದು ಅನಂತವ್ರತದ ಮುಖ್ಯ ಅಂಗ .ಪುರುಷರಾದರೆ ಬಲಕೈಯ ತೋಳಿನಲ್ಲಿ , ಸ್ತ್ರೀಯರಾದರೆ ಎಡಕೈಯ ತೋಳಿನಲ್ಲಿ ಕಟ್ಟಿಕೊಳ್ಳುವುದು ಸಂಪ್ರದಾಯ .
ಪೂಜೆ - ದೋರ ಬಂಧನ
ಶ್ರೀಮದನಂತವ್ರತ ಕಲ್ಪೋಕ್ತ ಪೂಜಾವಿಧಿಯು ಹಂತಹಂತವಾಗಿ ಸಂಪನ್ನಗೊಳ್ಳುತ್ತದೆ.
ಯಮುನಾ ಪೂಜೆ , ಅಂಗಪೂಜೆ , ಪತ್ರಪೂಜೆ , ಪುಷ್ಪಪೂಜೆ ,ನಾಮಪೂಜೆ ,
ಧೂಪದೀಪಾದಿ ಸಮರ್ಪಣೆ .ಕಲಶಸ್ಥಾಪನೆ ,
ಶೇಷ ಪೂಜೆ , ಧ್ಯಾನಾವಾಹನಾದಿ , ಅಭಿಷೇಕ ,ವಸ್ತ್ರಯುಗ್ಮ ಸಮರ್ಪಣೆ , ಅಂಗಪೂಜೆ , ಅನಂತಪೂಜೆ ,ಧ್ಯಾನಮ್ ,
ಮಂಟಪ ಧ್ಯಾನಮ್ ,ಪೀಠಪೂಜೆ , ನವಶಕ್ತಿಪೂಜೆ , ಆವಾಹನಮ್ , ನವದೋರ ಸ್ಥಾಪನೆ ,ಷೋಡಶೋಪಚಾರ ಪೂಜೆ , ಅಂಗಪೂಜೆ ,ಷೋಡಶಾವರಣ ಪೂಜೆ ,ಶಕ್ತಿಪೂಜೆ ,ದೋರಪೂಜೆ ,ಪತ್ರಪೂಜೆ, ಪುಷ್ಪಪೂಜೆ ,ಅಷ್ಟೋತ್ತರನಪೂಜೆ ,
ಧೂಪದೀಪನೈವೇದ್ಯ, ಫಲನಿವೇದನೆ , ನೀರಾಜನ ,ಪ್ರಸನ್ನಾರ್ಘ್ಯ, ಪ್ರದಕ್ಷಿಣ ನಮಸ್ಕಾರ, ಪ್ರಾರ್ಥನೆ, ದೋರಪ್ರಾರ್ಥನೆ , ದೋರನಮಸ್ಕಾರ - ಬಂಧನ ,ಜೀರ್ಣದೋರ ವಿಸರ್ಜನೆ ,ಉಪಾಯನದಾನಮ್ ,
ಉದ್ವಾಸನ ,ಕ್ಷಮಾಪಣ ,ಸಮಾಪನ .ಹೀಗೆ ವಿವಿಧ ಹಂತಗಳಲ್ಲಿ ಪೂಜೆ ನೆರವೇರಿ ಒಂದು ಭಕ್ತಿ ಭಾವದ ವ್ರತಾಚಾರಣೆಯ ಸಾರ್ಥಕತೆ ಸನ್ನಿಹಿತವಾಗುತ್ತದೆ .
ಜಲಸಂಗ್ರಹ - ಯಮುನಾಪೂಜೆಯಿಂದ ಕಲಶ ಪ್ರತಿಷ್ಠೆ , ಶೇಷ ಕಲ್ಪನೆ , ಮತ್ತೆ ಶಾಲಗ್ರಾಮ ಸ್ಥಾಪನೆಯ ಚಿಂತನೆ ಬಳಿಕ ದೋರದ ಮಹತ್ವ - ಧಾರಣೆ . ಇವು ಅನಂತವ್ರತದಲ್ಲಿ ವ್ಯಕ್ತವಾಗುವ ಮುಖ್ಯ ಅಂಶಗಳು .
ಸಂಕ್ಷಿಪ್ತ ಅನಂತ ವ್ರತಕಥಾ
ಅನಂತವ್ರತಕಥೆಯು ಯಾರಿಂದ ಯಾರಿಗೆ ಹೇಳಲ್ಪಟ್ಟಿತು ,ಕಲ್ಪೋಕ್ತ ಪೂಜಾವಿಧಾನದೊಂದಿಗೆ ದೋರ (ದಾರ) ಬಂಧನದ ಮಹತ್ವ. ಇತ್ಯಾದಿ.
ಕಪಟ ದ್ಯೂತದ ಪರಿಣಾಮವಾಗಿ ವನವಾಸಕ್ಕೆ ದ್ರೌಪದಿ ಸಹಿತ ಪಂಡವರು ಹೊರಡುತ್ತಾರೆ . ವಿಷಯ ತಿಳಿದ ಕೃಷ್ಣ ಕಾಡಿಗೆ ಬರುತ್ತಾನೆ .ಒದಗಿದ ಕಷ್ಟ ಪರಂಪರೆಗೆ ನಿವೃತ್ತಿ ಹೇಗೆ ಎಂದು ಧರ್ಮರಾಯನು ಕೇಳಲು ,
ಶ್ರೀಕೃಷ್ಣನು 'ಅನಂತವ್ರತ'ವನ್ನು ಮಾಡುವಂತೆ ಸೂಚಿಸುತ್ತಾನೆ . "ಅನಂತನೆಂದರೆ" ನಾನೆ ಆಗಿದ್ದೇನೆ ,ಆ ಅನಂತ ಸ್ವರೂಪವು ನನ್ನದೇ ಆಗಿದೆ ಎಂದು ತಿಳಿ" ಎಂದು ಅವತಾರದ ಸೂಕ್ಷ್ಮವನ್ನು ತಿಳಿಸುತ್ತಾನೆ .ಇಂತಹ ಅನಂತಸ್ವರೂಪವೇ ತಾನು ಎಂದು ಹೇಳುತ್ತಾನೆ ಕೃಷ್ಣ.
ಕೃತಯುಗದಲ್ಲಿದ್ದ ಸುಮಂತನೆಂಬ ಬ್ರಾಹ್ಮಣನ ಕತೆಯನ್ನು ಹೇಳುವ ಮೂಲಕ ಅನಂತ ವ್ರತದ ಫಲಪ್ರಾಪ್ತಿಯ ವಿವರಣೆಯನ್ನು ನೀಡುತ್ತಾನೆ ಶ್ರೀಕೃಷ್ಣ. ಸುಮಂತನು ತನ್ನ ಮಗಳನ್ನು ಕೌಂಡಿನ್ಯನೆಂಬ ಮಹರ್ಷಿಗೆ ಗೃಹ್ಯಸೂತ್ರದ ಕ್ರಮದಲ್ಲಿ ಮದುವೆಮಾಡಿ ಕೊಡುತ್ತಾನೆ .
ನವವಧೂವರರಿಗೆ ಬಳುವಳಿಯಾಗಿ ಉತ್ತಮ ವಸ್ತುವನ್ನು ಕೊಡಬೇಕೆಂದು ಬಯಸಿ ಪತ್ನಿಯಲ್ಲಿ ಹೇಳಲು ,ಆಕೆ ಕೋಪಗೊಂಡು ಮನೆಯಲ್ಲಿದ್ದ ಸುವಸ್ತುಗಳನ್ನೆಲ್ಲ ಪೆಟ್ಟಿಗೆಯಲ್ಲಿ ಹಾಕಿ ಬಚ್ಚಿಡುತ್ತಾಳೆ . ಕೌಂಡಿನ್ಯನು ತನ್ನ ಶಿಷ್ಯರ ಸಹಿತ ನವ ವಧುವಿನೊಂದಿಗೆ ಹೊರಡುತ್ತಾನೆ. ಬರಬರುತ್ತಾ ಯಮುನಾ ನದಿಯ ದಡದಲ್ಲಿ ಮಧ್ಯಾಹ್ನದ ಆಹ್ನಿಕಕ್ಕಾಗಿ ಪ್ರಯಾಣವನ್ನು ನಿಲ್ಲಿಸಿ ಅನುಷ್ಠಾನ ಪೂರೈಸಲು ನದಿ ಬದಿಗೆ ಹೋಗುತ್ತಾನೆ .
ನವ ವಧು ಶೀಲೆಯು ಹೊಳೆ ಬದಿ ಹೋಗುತ್ತಾ ಕೆಂಪುಬಟ್ಟೆಯನ್ನು ಧರಿಸಿದ ಹೆಂಗಸರ ಗುಂಪು ಅನಂತ ವ್ರತದಲ್ಲಿ ತೊಡಗಿರುವುದನ್ನು ಕಾಣುತ್ತಾಳೆ . ವ್ರತದ ವಿವರವನ್ನು ತಿಳಿದುಕೊಂಡ ಶೀಲೆ ತಾನು ವ್ರತ ಮಾಡಲು ಸಿದ್ಧಳಾಗುತ್ತಾಳೆ . ಆಗ ಹೆಂಗಸರು ವ್ರತವಿಧಿಯನ್ನು ಹೇಳುತ್ತಾರೆ. ಈ ವ್ರತ ವಿಧಿಯಲ್ಲಿ ಅನಂತನು ಪೂಜಿಸಲ್ಪಡುತ್ತಾನೆ .
ಒಂದು ಸೇರು ಅಕ್ಕಿಯಿಂದ ಪುರುಷನಾಮಕನಾದ ಪರಮಾತ್ಮನ ನಿಮಿತ್ತದಿಂದ ಪಾಕಮಾಡಿ ಅನಂತನಿಗರ್ಪಿಸಿ ಅರ್ಧವನ್ನು ಬ್ರಾಹ್ಮಣನಿಗೆ ದಾನಮಾಡಿ ಉಳಿದರ್ಧವನ್ನು ತಾನು ಭೋಜನಮಾಡಬೇಕು .ದ್ರವ್ಯದಲ್ಲಿ ವಂಚನೆಮಾಡದೆ ತನ್ನ ಶಕ್ತಿಯಿದ್ದಷ್ಟು ದಕ್ಷಿಣೆ ಕೊಡಬೇಕು .ನದಿಯ ದಡದಲ್ಲಿ ಅನಂತನನ್ನು ಪೂಜಿಸಬೇಕು .ದರ್ಭೆಯಿಂದ ಶೇಷನ ಪ್ರತಿಮೆಯನ್ನುಮಾಡಿ ಬಿದಿರಿನ ಪಾತ್ರದಲ್ಲಿಟ್ಟು ಸ್ನಾನಮಾಡಿ ಮಂಡಲದ ಮೇಲೆ ಗಂಧ ,ಪುಷ್ಪ, ,ಧೂಪ,ದೀಪಗಳಿಂದ ಅನೇಕವಿಧಿ ಪಕ್ವಾನ್ನಗಳಿಂದೊಡಗೂಡಿದ ನೈವೇದ್ಯಗಳಿಂದ ದೇವರ ಮುಂಭಾಗದಲ್ಲಿ ಕುಂಕುಮದಿಂದ ಕೆಂಪಾದ ದೃಢವಾದ ಹದಿನಾಲ್ಕು ಗಂಟುಗಳುಳ್ಳ ದೋರವನ್ನಿಟ್ಟು ಪೂಜಿಸಬೇಕು .ಅನಂತರ ದೋರವನ್ನು ಮೇಲೆಹೇಳಿದಂತೆ ಕಟ್ಟಿಕೊಳ್ಳಬೇಕು .
" ಸಂಸಾರವೆಂಬ ಮಹಾಸಮುದ್ರದಲ್ಲಿ ಮುಳುಗಿದ್ದ ನನ್ನನ್ನು ,ಎಲೈ ,ಅನಂತನೆ,
ವಾಸುದೇವನೆ ಉದ್ಧರಿಸು ,ನಾಶವಿಲ್ಲದ ನಿನ್ನ ರೂಪದಲ್ಲಿ ನನ್ನನ್ನು ವಿನಿಯೋಗಿಸು , ಸಾರೂಪ್ಯವೆಂಬ ಮೋಕ್ಷವನ್ನು ಕೊಡು .ಅನಂತರೂಪಿಯಾದ ನೀನು ಈ ಸೂತ್ರದಲ್ಲಿ ಸನ್ನಿಹಿತನಾಗಿರುವೆ ,ನಿನಗೆ ನಮಸ್ಕಾರ " ಎಂಬ ಮಂತ್ರದಿಂದ ದೋರವನ್ನು ಕಟ್ಟಿಕೊಳ್ಳಬೇಕು . ಹೀಗೆ ದೋರವನ್ನು ಕಟ್ಟಿಕೊಂಡ ಶೀಲೆಯು ಮನೆಗೆ ಬರಲಾಗಿ ಮನೆಯು ಧನ ದಾನ್ಯಗಳಿಂದ ತುಂಬಿತ್ತು, . ಒಂದು ದಿನ ಕೌಂಡಿನ್ಯನು ಶೀಲೆಯ ತೋಳಿನಲ್ಲಿದ್ದ ದೋರವನ್ನು ಕಂಡು ಕುಪಿತನಾಗಿ "ನನ್ನನ್ನು ವಶೀಕರಿಸಿಕೊಳ್ಳಲು ಇದನ್ನು ಕಟ್ಟಿಕೊಂಡಿರುವೆಯಾ" ಎಂದು ಮೂದಲಿಸುತ್ತಾ ದೋರವನ್ನು ಕಿತ್ತು ಬೆಂಕಿಗೆ ಹಾಕುತ್ತಾನೆ . ಆಕ್ಷಣ ಶೀಲೆಯು ದೋರವನ್ನು ಬೆಂಕಿಯಿಂದ ತೆಗೆದು ಹಾಲಿಗೆ ಹಾಕುತ್ತಾಳೆ .
[ಪ್ರಸ್ತುತ ವ್ರತಾಚರಣೆಯಲ್ಲಿ ತೊಡಗುವವರು , ಕಳೆದ ವರ್ಷ ಆರಾಧಿಸಿ ಕಟ್ಟಿಕೊಂಡ ದೋರವನ್ನು ಮತ್ತೆ ಕಟ್ಟಿಕೊಂಡು ,ಕಲ್ಪೋಕ್ತಪೂಜೆಯನ್ನು ನೆರವೇರಿಸಿ ಬಳಿಕ ನೂತನವಾಗಿ ಪೂಜಿಸಲ್ಪಟ್ಟ ದೋರವನ್ನು ಕಟ್ಟಿಕೊಂಡು ಹಳೆದೋರವನ್ನು ಬಿಚ್ಚಿ ಹಾಲಿಗೆ ಹಾಕುವ ವಿಧಿ ಪೂಜಾಕ್ರಮದ ಅವಿಭಾಜ್ಯ ಅಂಗವಾಗಿದೆ.]
ಇಂತಹ ಘಟನೆಯಿಂದ ಸಕಲಸಂಪತ್ತನ್ನು ಕೌಂಡಿನ್ಯನು ಕಳೆದುಕೊಂಡು ನಿರ್ಗತಿಕನಾದನು . ಎಂದು ಶ್ರೀಕೃಷ್ಣನು ಧರ್ಮರಾಯನಿಗೆ ವಿಸ್ತಾರವಾದ ಕಥೆಯನ್ನು ಹೇಳುತ್ತಾ ಕೌಂಡಿನ್ಯನು ಅನಂತನನ್ನು ಹುಡುಕಿ ಹೊರಟು ಕೊನೆಗೆ ಹೇಗೆ ಮರಳಿ ವ್ರತವನ್ನು ಮಾಡಿ ಅನಂತನ ಅನುಗ್ರಹದಿಂದ ಕಳಕೊಂಡ ಸಂಪತ್ತನ್ನು ಪಡೆದು ಬಾಳಿ ಬದುಕಿ ವೈಕುಂಠವನ್ನು ಸಿದ್ಧಿಸಿಕೊಂಡ ಎಂಬ ವಿವರವನ್ನು ಹೇಳುತ್ತಾನೆ .
ಯಾರು ಸಂಸಾರಿಯಾಗಿ ಸುಖಿಗಳಾಗಿ ಋಜುಮಾರ್ಗಿಗಳಾಗಿ ಬದುಕಲು ಬಯಸುವರೋ ಅವರು ಮೂರುಲೋಕಕ್ಕೂ ಸ್ವಾಮಿಯಾದ ಅನಂತದೇವನ್ನು ಭಕ್ತಿಯಿಂದ ಪೂಜಿಸಿ ಉತ್ತಮ ದೋರವನ್ನು ಬಲತೋಳಿನಲ್ಲಿ ಕಟ್ಟಿಕೊಳ್ಳುತ್ತಾರೆ.
ಬಹಳಷ್ಟು ಮನೆಗಳಲ್ಲಿ ನೋಂಪು ವ್ರತಾಚರಣೆ ಶತಮಾನಗಳಿಂದ ನಡೆದುಬಂದಿದೆ ,ಶ್ದಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಪರ್ವ ವ್ರತವಾಗಿ ನೆರವೇರುತ್ತದೆ .ಪ್ರಸಿದ್ಧ ವಿಷ್ಣು ದೇವಾಲಯಗಳಲ್ಲಿ ,ಅನಂತ ಪದ್ಮನಾಭ ದೇವಳಗಳಲ್ಲಿ ಅನಂತವ್ರತ ಸಂಭ್ತಮದಿಂದ ನಡೆಯುತ್ತದೆ.
ಲೇಖನ : ಕೆ .ಎಲ್ .ಕುಂಡಂತಾಯ
