Updated News From Kaup
ಬಂಟಕಲ್ಲು ಪರಿಸರದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ
Posted On: 15 Aug 2020, 07:45 PM
ನಾಗರಿಕ ಸೇವಾ ಸಮಿತಿ (ರಿ) ಬಂಟಕಲ್ಲು ಹಾಗೂ ಕಾರು ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಇವರ ಜಂಟಿ ಆಶ್ರಯದಲ್ಲಿ 74 ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮವು ಇಂದು ಬಂಟಕಲ್ಲು ಪೇಟೆಯಲ್ಲಿ ನಡೆಯಿತು. ಬಂಟಕಲ್ಲು ಕಾರು ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾದ ಶ್ರಿ ಮಾದವ ಕಾಮತ್ ರವರು ಧ್ವಜಾರೋಹಣಗೈದು ಮತ್ತು ಶುಭಾಶಯ ಕೋರಿದರು. ಈ ಸಂಧರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾದ ಬಂಟಕಲ್ಲು ಪರಿಸರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಶ್ರಿ ಕೆ.ಆರ್ ಪಾಟ್ಕರ್ ರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಕಮಲ, ಸವಿತಾ, ವಿನೋದ ಆಚಾರ್ಯ, ಶ್ರೀಮತಿ ವಿಜಯ, ಶ್ರೀಮತಿ ಶಕುಂತಳ ಉಪಸ್ಥಿತರಿದ್ದರು. ಕಾರು ಚಾಲಕರ & ಮಾಲಕರ ಸಂಘದ ಅಧ್ಯಕ್ಷ ಉಮೇಶ್ ರಾವ್, ವಿನ್ಸಂಟ್ ಪಲ್ಕೆ, ನಾಗರಿಕ ಸಮಿತಿ ಕಾರ್ಯದರ್ಶಿ ದಿನೇಶ್ ದೇವಾಡಿಗ, ಬಂಟಕಲ್ಲು ಕಾರು ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ರಿಕ್ಷಾ ಚಾಲಕರ ಮಾಲಕರ ಸಂಘದ ಪದಾಧಿಕಾರಿಗಳು; ಸದಸ್ಯರು, ಬಂಟಕಲ್ಲು ಪರಿಸರದ ಸಾರ್ವಜನಿಕರು ಭಾಗವಹಿಸಿದ್ದರು.
ಬಂಟಕಲ್ಲು ಪರಿಸರದ ನಾಗರಿಕರಿಗೆ ಪೊಲೀಸ್ ಮಾಹಿತಿ ಕಾರ್ಯಕ್ರಮ
Posted On: 13 Aug 2020, 10:13 PM
ನಾಗರಿಕ ಸೇವಾ ಸಮಿತಿ ರಿ ಬಂಟಕಲ್ಲು ಇವರ ಆಶ್ರಯದಲ್ಲಿ ಬಂಟಕಲ್ಲು ಪರಿಸರದ ನಾಗರಿಕರಿಗೆ ಪೊಲೀಸ್ ಮಾಹಿತಿ ಕಾರ್ಯಕ್ರಮ ಇಂದು ಬಂಟಕಲ್ಲು ದೇವಸ್ಥಾನದ ವಠಾರದಲ್ಲಿ ನಡೆಯಿತು ಸಮಿತಿಯ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು ಶಿರ್ವ ಠಾಣಾಧಿಕಾರಿ ಶ್ರೀ ಶೈಲ ಮುರುಗೋಡು ಇವರು ಪೊಲೀಸ್ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು ಬಂಟಕಲ್ಲು ನಾಗರಿಕ ಸಮಿತಿಯ ಉಚಿತ ಆಂಬುಲೆನ್ಸ್ ಯೋಜನೆ ಹಾಗೂ ಕೊರೋನಾ ಜಾಗೃತಿಯ ಬಗ್ಗೆ ಸ್ಟಿಕ್ಕರ್ ಬಿಡುಗಡೆಗೊಳಿಸಿದರು ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿಯ ಶ್ರೀ ಸುರೇಂದ್ರ ನಾಯಕ್ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ಶ್ರೀ ದಿನೇಶ್ ದೇವಾಡಿಗ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು ಬಂಟಕಲ್ಲು ಪರಿಸರದ ನಾಗರಿಕರು ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಕಾರು ಚಾಲಕ ಮತ್ತು ಮಾಲಕರ ಸಂಘದ ಪದಾಧಿಕಾರಿಗಳು ಯುವ ವೃಂದ ಬಂಟಕಲ್ಲು ಪದಾಧಿಕಾರಿಗಳು ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು ಕೊರೊನ ಜಾಗೃತಿ ಸ್ಟಿಕ್ಕರ್ ಬಿಡುಗಡೆಯ ಕ್ಷಣ ಪೊಲೀಸ್ ಮಾಹಿತಿ ಕಾರ್ಯಕ್ರಮ
ಭಾರತ ಮತ್ತೆ ಎದ್ದು ನಿಲ್ಲಲು ಸ್ವಾತಂತ್ರ್ಯ ದಿನ ದಾರಿ ದೀಪವಾಗಲಿ
Posted On: 13 Aug 2020, 09:27 PM
ಬ್ರಿಟೀಷರ ಆಡಳಿತದಿಂದ ಭಾರತ ಸ್ವತಂತ್ರವಾದ ದಿನವನ್ನು ನಾವೆಲ್ಲರೂ ಪ್ರತಿ ವರ್ಷ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾ 1ಗಿ ಆಚರಿಸಲಾಗುತ್ತದೆ. ಎಲ್ಲಾ ಕಡೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ "ಜನ ಗಣ ಮನ"ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ. ಅವರೆಲ್ಲರ ತ್ಯಾಗ ಮತ್ತು ಬಲಿದಾನದ ಮೂಲಕ ನಾವೆಲ್ಲರೂ ಇಂದು ಖುಷಿಯಾಗಿ ಜೀವಿಸುತ್ತಿದ್ದೇವೆ. ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ರವರ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ಜೂನ್ 3,1947 ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿಷ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ 1947 ರ ಅನ್ವಯ ಆಗಸ್ಟ್ 15, 1947 ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ, ನೆಹರು ರವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ( 'ಭಾಗ್ಯದೊಡನೆ ಒಪ್ಪಂದ' ಭಾಷಣ) ಮಾಡಿದರು. ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಬಹಳ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ . ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ..... ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ ಮತ್ತು ಭಾರತವು ತನ್ನನ್ನು ತಾನು ಮತ್ತೆ ಹೊಸತನ ಕಂಡುಕೊಳ್ಳುತ್ತಿದೆ . ಭಾರತದ ಸ್ವಾತಂತ್ರ್ಯ ದಿನಾಚರಣೆ ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆಯಲು ಕೋರಿದರು. ಆದರೆ ಜೂನ್ 1948 ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ ಅಧಿಕಾರ ಸ್ವೀಕರಿಸಿದರು. ಪಟೇಲರು 565 ರಾಜಸಂಸ್ಥಾನಗಳ ಭಾರತದ ರಾಜಕೀಯ ಏಕೀಕರಣ ದ ಜವಾಬ್ದಾರಿಯನ್ನು ವಹಿಸಿಕೊಂಡರು, ನಂತರ ಕಾಯ೯ ಪ್ರವೃತ್ತರಾದ ಅವರು ಜುನಾಗಢ, ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ ಸೈನಿಕ ಬಲವನ್ನು ಉಪಯೋಗಿಸಿ "ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ" ತಂತ್ರವನ್ನು ಉಪಯೋಗಿಸಿದರು.ಈ ಮೂಲಕ ಭಾರತದ ಏಕೀಕರಣದ ಯುಗ ಪುರುಷರಾದರು.ನಂತರ ಭಾರತವು ಸಂವಿಧಾನ ರಚನೆ ಮಾಡುವ ಸಲುವಾಗಿ, ಸಂವಿಧಾನ ರಚನಾಸಭೆಯು ಸಂವಿಧಾನದ ಕರಡು ಸಭೆಯನ್ನು 26 ನವೆಂಬರ್ 1949; ರಂದು ಸಿದ್ಧಗೊಳಿಸುವ ಕಾರ್ಯವನ್ನು ಸಂಪೂರ್ಣಗೊಳಿಸಿತು . 26 ಜನವರಿ 1950 ರಂದು ಭಾರತೀಯ ಗಣರಾಜ್ಯ ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಂವಿಧಾನ ರಚನಾಸಭೆಯು ಡಾ. ರಾಜೇಂದ್ರಪ್ರಸಾದರನ್ನು ದೇಶದ ಪ್ರಥಮ ರಾಷ್ಟ್ರಪತಿ ಯನ್ನಾಗಿ ಚುನಾಯಿಸಿತು . ಅವರು ಗವರ್ನರ್ ಜನರಲ್ ರಾಜಗೋಪಾಲಾಚಾರಿಯವರಿಂದ ಅಧಿಕಾರವನ್ನು ಸ್ವೀಕರಿಸಿದರು .ನಂತರ ಸ್ವತಂತ್ರ ಸಾರ್ವಭೌಮ ಭಾರತವು ಪಟೇಲರ ಸಾಧನೆಯ ಮೂಲಕ ಇನ್ನೆರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು . ಅವು 1961ರಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ ಮತ್ತು ಫ್ರೆಂಚರು 1954ರಲ್ಲಿ ಒಪ್ಪಿಸಿದ ಪಾಂಡಿಚೇರಿ ಯನ್ನು ದೇಶದಲ್ಲಿ ಸೇರಿಸಲಾಯಿತು. 1952 ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. 62ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಅದರಿಂದಾಗಿ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಯಿತು.ಈ ಚುನಾವಣೆಯು ದೇಶದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆಯಲು ನೆರವಾಯಿತು. ಸ್ವಾತಂತ್ರ್ಯ ಪಡೆದ ನಂತರದ ಭಾರತದ ಸ್ಥಿತಿ ಪ್ರಸ್ತುತ ನಾವು ಸ್ವತಂತ್ರ ಭಾರತದಲ್ಲಿ ವಾಸಿಸುತ್ತಿದ್ದೇವೆ. ಇಂದು ನಮ್ಮ ದೇಶದಲ್ಲಿ ನಮಗೆ ಯಾವ ರೀತಿಯ ಚಿತ್ರಣ ಕಾಣಿಸುತ್ತಿದೆ ? ಇಂದು ಎಲ್ಲೆಡೆ ಭಯೋತ್ಪಾದನೆ ಹಬ್ಬಿಕೊಂಡಿದೆ. ಭಾರತದಲ್ಲಿನ ಕಾಶ್ಮೀರ, ಪಂಜಾಬ, ಗುಜಾರಾತ, ಸಿಕ್ಕಿಂ ಮುಂತಾದ ರಾಜ್ಯಗಳ ಮೇಲೆ ಗಡಿಯಲ್ಲಿರುವ ದೇಶಗಳಿಂದ ಆಕ್ರಮಣಗಳಾಗುತ್ತಿವೆ. ಪ್ರತಿದಿನ ಬಹುದೊಡ್ಡ ಪ್ರಮಾಣದಲ್ಲಿ ಅತಿಕ್ರಮಣಕಾರರು ದೇಶದೊಳಗೆ ನುಸುಳಿ ದೊಡ್ಡ ದೊಡ್ಡ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸುತ್ತಿದ್ದಾರೆ. ಭಯೋತ್ಪಾದಕರು ನೀಡುತ್ತಿರುವ ಬೆದರಿಕೆಯಿಂದಾಗಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ಸಹ ಪೊಲೀಸು ಬಂದೋಬಸ್ತಿನಲ್ಲಿ ಆಚರಿಸಬೇಕಾಗುತ್ತದೆ. ಹಾಗಾದರೆ ನಮ್ಮ ಭಾರತ ದೇಶವು ನಿಜವಾದ ಅರ್ಥದಲ್ಲಿ ಸ್ವತಂತ್ರವಾಗಿದೆಯೇನು ? ರಕ್ಷಣೆಯು ನಮಗೆ ಲಭಿಸುತ್ತಿದೆಯೇ?ನಿಮಗೆಲ್ಲ ಏನನಿಸುತ್ತದೆ ? ಇಲ್ಲವಲ್ಲ ! ಇದಕ್ಕಾಗಿ ನಾವೆಲ್ಲರೂ ರಾಷ್ಟ್ರಾಭಿಮಾನ ಬೆಳೆಸುವುದು ಅತ್ಯಗತ್ಯವಾಗಿದೆ. ನಮಗೆ ದೇಶದ ಸಂವಿಧಾನ ಮೊದಲು ಧಮ೯ ನಂತರ ವಾಗಬೇಕಾಗಿದೆ. ಇದಕ್ಕಾಗಿ ನಾವು ಏನು ಮಾಡಬಹುದು ? 1 ರಾಷ್ಟ್ರಧ್ವಜದ ಗೌರವವನ್ನು ಕಾಪಾಡೋಣ ಆಗಸ್ಟ್ 15 ಮತ್ತು ಜನವರಿ 26 ಈ ರಾಷ್ಟ್ರೀಯ ದಿನಗಳಂದು ಚಿಕ್ಕ ಆಕಾರದ ಕಾಗದದ ರಾಷ್ಟ್ರ ಧ್ವಜಗಳನ್ನು ವ್ಯಾಪಕ ಸ್ತರದಲ್ಲಿ ಮಾರಾಟ ಮಾಡುತ್ತಾರೆ. ಚಿಕ್ಕ ಮಕ್ಕಳ ಸಹಿತ ಅನೇಕ ಜನರು ರಾಷ್ಟ್ರಭಕ್ತಿ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಲು ಈ ರಾಷ್ಟ್ರಧ್ವಜಗಳನ್ನು ಖರೀದಿಸುತ್ತಾರೆ (ಪ್ಯಾಸ್ಟಿಕ್ ನಿಂದ ತಯಾರಿಸಲಾದ) ಮತ್ತು ಅವುಗಳನ್ನು ಹೇಗೇಗೋ ಇಡುತ್ತಾರೆ. ಕೆಲವು ದಿನಗಳ ನಂತರ ಇದೇ ಧ್ವಜಗಳನ್ನು ಹರಿದು ರಸ್ತೆಯ ಮೇಲೆ, ಕಸದ ತೊಟ್ಟಿಯಲ್ಲಿ ಮತ್ತು ಇತರ ಕಡೆಗಳಲ್ಲಿ ಬಿಸಾಡುತ್ತಾರೆ. ಹೀಗೆ ಮಾಡಿ ನಾವು ರಾಷ್ಟ್ರಧ್ವಜವನ್ನು ಅಂದರೆ ರಾಷ್ಟ್ರವನ್ನೇ ಅವಮಾನ ಮಾಡುತ್ತೇವೆ. ಅಲ್ಲದೆ ಕರೋನಾದ ಈ ಸಂದಭ೯ದಲ್ಲಿ ದೇಶದ ಧ್ವಜವನ್ನು ಹೋಲುವ ಮಾಸ್ಕ್ ಹಾಕಲಾಗುತ್ತಿದೆ. ಇದು ಸರಿಯಲ್ಲ ಈ ಬಗ್ಗೆ ಸಕಾ೯ರ ಸ್ಪಷ್ಟವಾದ ನಿಣ೯ ಯ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ನಮ್ಮ ದೇಶದ ಧ್ವಜ ನಮಗೆ ಪವಿತ್ರವಸ್ತುವಾಗಿದೆ. ನಾವೆಲ್ಲರೂ ನಮ್ಮ ಧ್ವಜದ ಗೌರವವನ್ನು ಕಾಪಾಡಬೇಕು. ಇತರ ಯಾರಾದರೂ ಧ್ವಜದ ಅಪಮಾನ ಮಾಡುತ್ತಿದ್ದಲ್ಲಿ ಅವರಿಗೆಲ್ಲ ನಾವು ತಿಳಿಸಿ ಹೇಳಬೇಕು.ಮತ್ತು ನಮ್ಮ ರಾಷ್ಟ್ರೀಯ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಆಗಸ್ಟ್ 15ಮತ್ತು ಜನವರಿ 26 ರ ನಂತರ ಇತರೆಡೆಗಳಲ್ಲಿ ಬಿದ್ದಿರುವ ಧ್ವಜಗಳನ್ನು ನಾವು ಎತ್ತಿಡೋಣ. ಇದರ ಕುರಿತು ನಾವು ನಮ್ಮ ಮಿತ್ರರಿಗೂ, ನೆರೆಹೊರೆಯವರಿಗೂ ತಿಳಿಸುವ ಕಾಯ೯ ಮಾಡಬೇಕು ಇದು ಕೂಡ ದೇಶ ಸೇವೆ ಮಾಡಿದ ಹಾಗೆ. ರಾಷ್ಟ್ರೀಯ ಹಬ್ಬಗಳಂದು ಸ್ವಾತಂತ್ರ್ಯವೀರರು ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನು ನೆನಪಿಸಿಕೊಂಡು ಅವರ ಆದಶ೯ ವನ್ನು ಜೀವನದಲ್ಲಿ ರೂಡಿಸಿಕೊಳ್ಳಲು ಪ್ರಯತ್ನಿಸೋಣ. ವಿದ್ಯಾಥಿ೯ಗಳೇ ನೆನಪಿಡಿ; ಆಗಸ್ಟ್ 15 ರಂದು ಬೆಳಗ್ಗೆ ಧ್ವಜವಂದನೆಗಾಗಿ ನಾವೆಲ್ಲರೂ ಒಟ್ಟಾಗೋಣ ( ಕರೋನಾದ ನಿಯಮ ಪಾಲಿಸಿ) ವಿದ್ಯಾಥಿ೯ಗಳು ಧ್ವಜವಂದನೆಯಾದ ಬಳಿಕ ಶಾಲೆಗೆ ರಜೆ ಇರುವುದು ಎಲ್ಲರಿಗೂ ಗೊತ್ತಿರುವುದರಿಂದ ಹೆಚ್ಚಿನ ಮಕ್ಕಳು ಶಾಲೆಗೆ ಹೋಗದೇ ಮನೆಯಲ್ಲಿಯೇ ತುಂಬಾ ಹೊತ್ತಿನ ತನಕ ಮಲಗುವುದು, ಮನೆಯಲ್ಲಿ ಟಿ.ವಿ ಮೊಬೈಲ್ ನೋಡುತ್ತಾ ಕುಳಿತುಕೊಳ್ಳುವುದು, ಊರಿಗೆ ಹೋಗುವುದು ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ. ಅದರ ಬದಲು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯವೀರರನ್ನು ಮತ್ತು ಕ್ರಾಂತಿಕಾರರನ್ನು ನೆನಪಿಸಿಕೊಂಡು ಅವರಲ್ಲಿರುವ ಯಾವ ಗುಣದಿಂದಾಗಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರೋ, ಆ ಗುಣಗಳನ್ನು ನಾವು ನಮ್ಮಲ್ಲಿ ಪಾಲಿಸಿಅವರಂತೆ ಆದರ್ಶರಾಗಿ ವರ್ತಿಸಲು ಪ್ರಯತ್ನಿಸೋಣ. ಲೋಕಮಾನ್ಯ ತಿಲಕರು, ಸ್ವಾತಂತ್ರ ವೀರ ಸಾವರಕರರು ಮುಂತಾದ ದೇಶಭಕ್ತರು ತಮ್ಮ ಶರೀರ ಮತ್ತು ಮನಸ್ಸುಗಳನ್ನು ಸುದೃಢವಾಗಿಟ್ಟುಕೊಳ್ಳಲು ಸಹ ಪ್ರಯತ್ನ ಮಾಡುತ್ತಿದ್ದರು. ನಮ್ಮ ಮನಸ್ಸು ಸುದೃಢವಾಗಿದ್ದರೆ ನಾವು ಯಾವುದೇ ಪ್ರಸಂಗವನ್ನು ಧೈರ್ಯದಿಂದ ಎದುರಿಸಬಲ್ಲೆವು. ಮನಸ್ಸು ಸುದೃಢವಾಗಲು ನಮ್ಮಲ್ಲಿ ಆತ್ಮವಿಶ್ವಾಸ ಬರುವುದು ಅತ್ಯಗತ್ಯವಾಗಿದೆ. ನಮ್ಮಲ್ಲಿ ಅಮಿತವಾದ ಆತ್ಮವಿಶ್ವಾಸವಿದ್ದರೆ ಯಾವುದೇ ಕೆಲಸಗಳನ್ನು ಮಾಡಲು ಕಷ್ಟವಾಗುವುದಿಲ್ಲ. ಅದಕ್ಕಾಗಿ ಪ್ರತಿಯೊಂದು ಕೆಲಸ ಮಾಡುವಾಗ ಶ್ರದ್ದೆಯಿಂದ ಮಾಡಬೇಕು ರಾಷ್ಟ್ರದ ಕೆಲಸ ದೇವರ ಸೇವೆಯಾಗಿದೆ. ವಿದ್ಯಾಥಿ೯ಗಳು ಸೇರಿದಂತೆ ಯುವ ಜನಾಂಗವು ತನ್ನ ಶರೀರವು ಸುದೃಢವಾಗಲು ವ್ಯಾಯಾಮ ಮಾಡುವುದು ಈಗಿನ ಕಾಲದಲ್ಲಿ ಮನಸ್ಸನ್ನು ಸುದೃಢಗೊಳಿಸುವಂತೆ ನಮ್ಮ ಶರೀರವನ್ನು ಸಹ ಸುದೃಢವನ್ನಾಗಿಡುವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ನಾವು ಪ್ರತಿದಿನ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ. ನಮ್ಮಲ್ಲಿ ನೈತಿಕಮೌಲ್ಯಗಳನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡುವುದು ಪ್ರತಿಯೊಂದು ವಿಷಯವನ್ನು ಸಮಯಕ್ಕೆ ಸರಿಯಾಗಿ ಮಾಡುವುದು, ಪ್ರಾಮಾಣಿಕವಾಗಿ ಮಾಡುವುದು ಹಿರಿಯರನ್ನು ಗೌರವಿಸುವುದು, . ಮುಂತಾದ ವಿಷಯಗಳನ್ನು ಅಂದರೆ ನೈತಿಕ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದು ಆವಶ್ಯಕವಾಗಿದೆ. ಆದುದರಿಂದ ಇಂದಿನಿಂದಲೇ ನಾವು ನಮ್ಮ ದೇಶದ ಉತ್ತಮ ಪ್ರಜೆಗಳಾಗಲು ಪ್ರಯತ್ನ ಮಾಡಬೇಕು. ನಮ್ಮ ಪುಸ್ತಕದಲ್ಲಿ ನೀಡಿದ ಪ್ರತಿಜ್ಞೆಯಂತೆ ನಾವು ರಾಷ್ಟ್ರಾಭಿಮಾನ ಮತ್ತು ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸೋಣ ಮತ್ತು ಇಡೀ ಜಗತ್ತಿನಲ್ಲಿ ನಮ್ಮ ರಾಷ್ಟ್ರದ ಹೆಸರನ್ನು ಉಜ್ವಲಗೊಳಿಸಲು ಸನ್ನದ್ಧರಾಗಬೇಕು. ಇಂದಿನ ದಿನದಂದು ಭಾರತಮಾತೆಯನ್ನು ಆನಂದದಲ್ಲಿಡುವ ಪ್ರತಿಜ್ಞೆಯನ್ನು ಮಾಡೋಣ. ನಾವು ಇಂದು ರಾಜಕೀಯ ಸ್ವಾತಂತ್ರ ಮಾತ್ರ ಪಡೆದಿಲ್ಲ ಬದಲಾಗಿ ವಿವಿಧ ರೀತಿಯ ಸ್ವಾತಂತ್ರ್ಯ ಪಡೆದಿದ್ದೇವೆ. ನಮ್ಮ ಸಂವಿಧಾನ ನಮಗೆ ಮೂಲಭೂತ ಹಕ್ಕುಗಳೊಂದಿಗೆ ಕತ೯ವ್ಯವನ್ನು ನೀಡಿದೆ ಇದನ್ನು ನಾವು ಮನಗಾಣಬೇಕು ಸಮಾಜದಲ್ಲಿ ಇಂದು ನಡೆಯುತ್ತಿರುವ ಗಲಭೆಗಳು ಸಾವ೯ಜನಿಕ ಆಸ್ತಿಪಾಸ್ತಿಯನ್ನು ಹಾನಿ ಮಾಡುವುದು ಇದನ್ನು ಕಂಡಾಗ ನಾವು ನಮ್ಮ ಕತ೯ವ್ಯದಲ್ಲಿ ಎಲ್ಲಿಯೋ ಒಂದು ಕಡೆ ಸೋತಿದ್ದೇವೆ - ದೇಶದ ಭದ್ರತೆಗೆ ಕುಂದು ತರುವ ದೇಶ ವಿರೋಧಿಗಳನ್ನು ಶಿಕ್ಷಿಸಬೇಕು. ಸ್ವಾತಂತ್ರ್ಯ ಕೇವಲ ಒಂದು ದಿನದ ಆಚರಣೆಯಲ್ಲ ಬದಲಾಗಿ ಅದು ತ್ಯಾಗದ ಸಂಕೇತವಾಗಿದೆ ಎಂಬುದನ್ನು ನಾವು ಮರೆಯಬಾರದು. *ದೇಶ ಮೊದಲು..* ನಮಗೆ ಜಾತಿ ಮತ ಧಮ೯ ಮನೆಯ ಆಚರಣೆಗೆ ಮಾತ್ರ ಸೀಮಿತವಾಗಬೇಕು ದೇಶವು ಎಲ್ಲಕ್ಕಿಂತ ಮೊದಲು ' ಎಂಬುದನ್ನು ಮರೆಯಬಾರದು ನಮ್ಮ ಸೈನಿಕರು ಗಡಿಯಲ್ಲಿ ಬಿಸಿಲು ಚಳಿಯನ್ನು ಲೆಕ್ಕಿಸದೆ ಎಚ್ಚರವಾಗಿ ಕತ೯ವ್ಯ ನಿವ೯ಹಿಸುತ್ತಿರುವ ಕಾರಣ ನಾವು ಆರಾಮವಾಗಿ ಮಲಗಲು ಸಾಧ್ಯವಾಗಿದೆ ಹೀಗಾಗಿ ನಾವೆಲ್ಲರೂ ಅವರನ್ನು ಅಭಿನಂದಿಸಬೇಕಾಗಿದೆ."ಜನನಿ ಜನ್ಮ ಭೂಮಿಶ್ಚ ಸ್ವಗ೯ದಪಿ ಗರಿಯಸಿ " ಎಂಬಂತೆ ತಾಯಿ ಮತ್ತು ಭೂಮಿ ಸ್ವಗ೯ ಕ್ಕಿಂತ ಮೇಲು .ದೇಶ ಉಳಿದರೆ ಮಾತ್ರ ನಾವು ಉಳಿಯುವುದು ಎಂಬ ಸತ್ಯ ನಮಗೆ ತಿಳಿದಿರಬೇಕು.ನಮ್ಮ ದೇಶ ಮತ್ತೆ ಜಗತ್ತಿಗೆ ಗುರುವಾಗ ಬೇಕಾದರೆ ಪ್ರತಿಯೊಬ್ಬರ ಕೊಡುಗೆ ಅಗತ್ಯವಿದೆ.ಈ ಸ್ವಾತಂತ್ರ ನಮಗೆ ದಾರಿದೀಪವಾಗಲಿ. ಲೇಖನ : ರಾಘವೇ೦ದ್ರ ಪ್ರಭು,ಕವಾ೯ಲು, ಯುವ ಲೇಖಕ
ಇನ್ನಂಜೆ ವಿಷ್ಣುವಲ್ಲಭ ಘಟಕದಿಂದ ವಿ.ಎಚ್.ಪಿ ಸಂಸ್ಥಾಪನಾ ದಿನಾಚರಣೆ
Posted On: 11 Aug 2020, 10:28 PM
ಇನ್ನಂಜೆ, 11.ಆಗಸ್ಟ್ : ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಇನ್ನಂಜೆಯ "ವಿಷ್ಣು ವಲ್ಲಭ" ಘಟಕದಲ್ಲಿ ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕರ್ತರು ಭಾರತಮಾತೆಗೆ ಪುಷ್ಪರ್ಚಾನೆ ಮಾಡಿದ ನಂತರ ಅಧ್ಯಕ್ಷರಾದ ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿಯವರು ದೀಪ ಪ್ರಜ್ವಲಿಸುವ ಮೂಲಕ ಮಾತನಾಡಿ ಹಿಂದೂ ಧರ್ಮದ ಬಗ್ಗೆ ಅಪಹಾಸ್ಯ ಅಥವಾ ಅವಹೇಳನ ಮಾಡಿದ್ದಲ್ಲಿಅವರು ಯಾರೇ ಆಗಿರಲಿ ಅವರ ವಿರುದ್ಧ ನಾವು ಹೋರಾಡಬೇಕು, ಹಿಂದೂ ಧರ್ಮದ ಐಕ್ಯತೆ, ಒಗ್ಗಟ್ಟನ್ನು ಇಡೀ ವಿಶ್ವಕ್ಕೆ ತೋರಿಸಬೇಕು ಎಂದರು. ಕಾಪು ಪ್ರಖಂಡ ಕಾರ್ಯದರ್ಶಿ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಇವರು ಮಾತನಾಡಿ ವಿಶ್ವ ಹಿಂದೂ ಪರಿಷತ್ 56 ವರ್ಷಗಳನ್ನು ಪೂರೈಸಿದೆ . ಈ ಸಂದರ್ಭದಲ್ಲಿ 55 ವರ್ಷ ವಿಶ್ವ ಹಿಂದೂ ಪರಿಷದ್ಗೆ ಮಾರ್ಗದರ್ಶನ ನೀಡಿದ ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿಗಳನ್ನು ಸ್ಮರಿಸಿದರು. ಗೋಹತ್ಯೆ, ಲವ್ ಜಿಹಾದ್ ನಂತಹ ಧರ್ಮ ವಿರೋಧಿ ಕಾರ್ಯಗಳನ್ನು ನಿಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು, ವಿದ್ಯಾರ್ಥಿ ಪ್ರಮುಖ್ ಸ್ವಸ್ತಿಕ್ ಮಡುಂಬು ಇವರು ಹಿಂದೂ ಸಮಾಜದ ಬಗ್ಗೆ ಒಂದೆರಡು ಮಾತುಗಳನಾಡಿದರು.. ಈ ಸಂದರ್ಭದಲ್ಲಿ ಭಜರಂಗ ದಳದ ಸಂಚಾಲಕರು ರಾಜೇಶ್ ನಿಸರ್ಗ, ವಿ ಹಿಂ ಪ ಉಪಾಧ್ಯಕ್ಷರು ಆದ ರಾಘುವೇಂದ್ರ ಶೆಟ್ಟಿ, ಮಾಲಿನಿ ಇನ್ನಂಜೆ, ದಿವೇಶ್ ಕಲ್ಯಾಲು, ವರುಣ್ ಮಡುಂಬು, ವಿ ಹಿಂ ಪ ಪದಾಧಿಕಾರಿಗಳು ಭಜರಂಗದಳ ಕಾರ್ಯಕರ್ತರು , ಮತ್ತಿತರು ಉಪಸ್ಥಿತರಿದ್ದರು. ಕಾರ್ಯದರ್ಶಿಯಾದ ನಿತೀಶ್ ಕಲ್ಯಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಕೇಶ್ ಮಡುಂಬು ಇವರು ಧನ್ಯವಾದಗೈದರು. ದೀಪ ಪ್ರಜ್ವಲನೆ ಯ ಕ್ಷಣ
ಸಂಕಷ್ಟದಲ್ಲಿರುವ ಕಾರ್ಕಳದ ಇನ್ನಾ ನಿವಾಸಿ ಪ್ರವೀಣ್ ಕುಟುಂಬಕ್ಕೆ ನೆರವಾಗುವಿರಾ?
Posted On: 11 Aug 2020, 03:48 PM
ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಈ ಮಹಾಮಾರಿ ಕೊರೋನಾ ಈಗಾಗಲೇ ಸ್ಥಿತಿವಂತರ ಜಂಘಾಬಲವನ್ನೇ ಉಡುಗಿಸಿ ಜನಸಾಮಾನ್ಯರ ಪಾಡಂತೂ ದೇವರೂ ಕೇಳದಂತಹಾ ಈ ಕೆಟ್ಟ ದಿನಗಳಲ್ಲಿ ಸಣ್ಣ ಅನಾರೋಗ್ಯ ಕಾಡಿದರೂ ಕೇಳುವವರಿಲ್ಲ.ಕೊರೋನಾ ನಿಯಮಗಳ ಹೆಸರಲ್ಲಿ ,ಇನ್ನಿಲ್ಲದಷ್ಟು ಕಾಟ ನೀಡುವ ನಮ್ಮ ವ್ಯವಸ್ಥೆಯ ನಡುವೆ ದೊಡ್ಡ ಆರೋಗ್ಯ ಸಮಸ್ಯೆ ಬಂದರೆ ಹೇಗಾದೀತು ಯೋಚಿಸಿ. ಹೌದು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಪ್ರವೀಣ್ ಕುಲಾಲ್ ಇವರು ತಾನು ಬಾರ್ ಮ್ಯಾನೇಜರ್ ವೃತ್ತಿ ನಿರ್ವಹಿಸುತ್ತಿದ್ದು ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿ ತನ್ನ ಮಡದಿ ಹಾಗೂ ಪ್ರಾಯದ ತನ್ನ ತಾಯಿಯ ಜತೆ ಬದುಕು ಸಾಗಿಸುತ್ತಿದ್ದರು. ಇದ್ದಕಿದ್ದಂತೆ ತೀವ್ರ ತರದ ಜ್ವರ ಕಾಣಿಸಿಕೊಂಡಿದ್ದು ಕಿನ್ನಿಗೋಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.ಜಾಂಡೀಸ್ ನ ಲಕ್ಷಣಗಳು ಕಂಡಿದ್ದು ಈಗ ಮೂತ್ರಕೋಶ ಹಾಗೂ ಪಿತ್ತ ಕೋಶದ ಸಮಸ್ಯೆ ಕಾಡುತ್ತಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ. ಇದೀಗ ವಾರ ಒಂದು ಕಳೆದರೂ ಆರೋಗ್ಯದಲ್ಲಿ ಚೇತರಿಕೆ ಕಾಣದೆ ತೀವೃನಿಗಾ ಘಟಕದಲ್ಲಿ ಮಲಗಿದ್ದಾರೆ.ದಿನಕ್ಕೆ ₹20000 ಖರ್ಚಾಗುತ್ತಿದ್ದು ಕುಟುಂಬಕ್ಕೆ ಬೇರೆ ಆದಾಯವಿಲ್ಲದೆ ಪತ್ನಿಯ ಚಿನ್ನಾಭರಣಗಳನ್ನು ಅಡವಿಟ್ಟು ಬಿಲ್ಲು ಪಾವತಿಸುವ ಸ್ಥಿತಿ ತಲುಪಿದ್ದಾರೆ.ಇತ್ತ ICU ಒಳಗೆ ಅವರನ್ನು ಕಾಣಲೂ ಆಗದೆ ,ಅತ್ತ ದಿನದಿಂದ ದಿನಕ್ಕೆ ಹಣ ಪಾವತಿಸಿದರೂ ಪ್ರವೀಣ್ ಕುಲಾಲರು ಮಾತನಾಡಲೂ ಆಗದೆ ತನ್ನವರ ಗುರುತು ಹಿಡಿಯಲು ಅಶಕ್ತರಾಗಿದ್ದಾರೆ. ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ದಾನಿಗಳ ಸಹಾಯದ ಅಗತ್ಯವಿದೆ.ತೀರಾ ಸಂಕಷ್ಟದಲ್ಲಿರುವ ಇವರಿಗೆ ಸಹಾಯ ಮಾಡಿ ಒಂದಿಷ್ಟು ದೈರ್ಯ ತುಂಬೋಣ. ಸಹಾಯ ಮಾಡಲಿಚ್ಛಿಸುವ ದಾನಿಗಳು ಈಕೆಳಗಿನ ಬ್ಯಾಂಕ್ ಖಾತೆಗೆ ಜಮ ಮಾಡಬಹುದು. Name - mohini, Branch - moodumarnadu, Account no - 520101267800222, IFSC CODE - CORP0001601
ಯುವವಾಹಿನಿ ಕಾಪು ಘಟಕದ ನೂತನ ಅಧ್ಯಕ್ಷರಾಗಿ ಸೌಮ್ಯ ರಾಕೇಶ್ ಕುಂಜೂರು ಆಯ್ಕೆ
Posted On: 10 Aug 2020, 10:59 PM
ಶುಭ ಸತ್ಕಾರ 'ಕಾಪುದಪ್ಪೆ'..,ಈ ಭಕ್ತಿ ಶ್ರದ್ಧೆಯಲ್ಲಿ ನಮ್ಮನ್ನುದ್ಧರಿಸುವ ಮಹಾನ್ ಶಕ್ತಿ ಮಾತೆಯ ಪುಣ್ಯ ನೆಲೆ ಬೀಡೇ ಕಾಪು. ಹಲವು ವೈಶಿಷ್ಟ್ಯಗಳಿಂದಾವೃತ್ತವಾದ ಈ ಊರಿನ ಹೆಗ್ಗಳಿಕೆಯಲ್ಲಿ ಬಹುರೂಪಿ ಸಂಘ ಸಂಸ್ಥೆಗಳ ಪಾತ್ರವೂ ಗಣನೀಯ. ಕಾಪುವಿನಲ್ಲಿರುವ *ಯುವವಾಹಿನಿ* ಯಂತಹ ಅಪ್ಪಟ ಸಮಾಜಾಭ್ಯುದಯದ ಬಳಗಕ್ಕೆ ಪ್ರಸ್ತುತ ಸಾಲಿನ ಅಧ್ಯಕ್ಷರಾಗಿ ಅಲಂಕೃತರಾದವರು ಶ್ರೀಮತಿ ಸೌಮ್ಯ ರಾಕೇಶ್ ಸಾಂಘಿಕ ಚಿರಪರಿಚಿತವಾದ ಈ ನಾಮಧೇಯದ ಮುನ್ನಡೆಯಲ್ಲಿ ಸಕ್ರೀಯ ನೈಪುಣ್ಯತೆಗಳು ತುಂಬಿಕೊಂಡಿವೆ. ಹೆಣ್ಣೊಬ್ಬಳು ಆದರ್ಶನೀಯ ಸಂಸ್ಥೆಯನ್ನು ಕಾರ್ಯದಕ್ಷವಾಗಿ ಮುನ್ನಡೆಸಬಲ್ಲರೆಂಬುದಕ್ಕೆ ಸಮರ್ಥನೀಯಾಂಶಗಳು ಸೌಮ್ಯ ರಾಕೇಶ್ ಪಾಲಿಗೆ ಬಹಳಷ್ಟಿದೆ. ಅಂತರಾಷ್ಟ್ರೀಯ ಕೂಟ ಜೇಸಿಐ ಸಂಸ್ಥೆಯಲ್ಲಿ ವಿವಿಧ ಮುಖ್ಯನೆಲೆಯ ಪ್ರತಿನಿಧಿಯಾಗಿ ತನ್ನ ಜವಾಬ್ದಾರಿಯ ಯೋಗ್ಯ ನ್ಯಾಯಕ್ಕೆ ಪ್ರಶಂಸನೀಯರೆನಿಸಿದ್ದಾರೆ. ಇನ್ನು ಸದ್ದುಗದ್ದಲವಿಲ್ಲದೆ ಅನೇಕ ಐಕ್ಯತೆಯ ಚಟುವಟಿಕೆಗಳಲ್ಲಿ ಜೊತೆಯಾಗುತ್ತಿದ್ಧಾರೆ ಸೌಮ್ಯರವರ ಎಲ್ಲಾ ಅರ್ಹನ ಡೆಯ ರೂವಾರಿ ನಲ್ಮೆಯ ನಲ್ಲ ರಾಕೇಶ್ ಕುಂಜೂರು. ಪ್ರತಿಷ್ಠಿತ ಜೇಸೀ ವಲಯ 15 ರ ಅಧ್ಯಕ್ಷರಾಗಿ, ಪಂಚಪುಣ್ಯ ಮಹಾಸಾನಿಧ್ಯ ಕಟಪಾಡಿ ವಿಶ್ವನಾಥ ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರಾಗಿ ಹತ್ತು ಹಲವು ಸೇವಾ ಸಂಸ್ಥೆಗಳ ಸಕ್ರೀಯ ಸಹಭಾಗಿಯಾಗಿ ಶ್ರೇಷ್ಠ ಸಾಮಾಜಿಕ ಕಳಕಳಿಯ ಪ್ರತಿನಿಧಿಯೂ, ಜನಮನದ ಜೀವನಾಡಿ ಉದಯವಾಣಿ ಪತ್ರಿಕೆಯ ಪತ್ರಕರ್ತರಾಗಿ ಜನಮನ್ನಣೆಯ ಸೃಜನಶೀಲ ಸಂಪನ್ನ ರಾಕೇಶ್ ಕುಂಜೂರು, ಸಹಧರ್ಮಿಣಿಯ ಯುವವಾಹಿನಿ ಹುದ್ದೆಯ ಯಶೋಗಾಥೆಗೆ ಸಾಥ್ ಆಗುವುದಂತೂ ನಿಚ್ಚಳ. ಮಾನವೀಯ ಮನಸ್ಸುಗಳಿಂದ ಮಾತ್ರ ಮನುಷ್ಯ ಸಹ್ಯ ಸಮಾಜ ನಿರ್ಮಾಣ ಸಾಧ್ಯವೆಂದ ಪರಮಪೂಜ್ಯ ನಾರಾಯಣ ಗುರುಗಳ ಸಂದೇಶಾನುಷ್ಠಾನದ ಬದ್ಧ ಪ್ರಯತ್ನಗಳು ಸೌಮ್ಯ ರಾಕೇಶ್‌ರವರ ನೇತೃತ್ವದಲ್ಲಿ ಸಾಕಾರವಾಗಲಿ. ಒಗ್ಗಟ್ಟನ್ನು ಬಲಗೊಳಿಸುವ ಚೈತನ್ಯ ಚಿಗುರಲಿ. ಹೊಸ ಕನಸುಗಳು ಗಮ್ಯ ತಲುಪಲಿ. ಅವಿಸ್ಮರಣೀಯ ಸೇವೆಗಳ ಸರದಿ ಕಾಪು ಯುವವಾಹಿನಿಯದ್ದಾಗಲಿ. ಅಭಿನಂದನೆಯ ಅಕ್ಷತೆ... ಸೌಮ್ಯ ರಾಕೇಶ್.
ಇಪ್ಪತ್ತು ವರ್ಷ ಹಿಂದೆ ಹಡಿಲು ಬಿದ್ದಿದ್ದ ಗದ್ದೆಯನ್ನು ಹಸುರಾಗಿಸಿದ ಬೆಳ್ಮಣ್ ರೋಟರಿ ಕ್ಲಬ್
Posted On: 10 Aug 2020, 06:38 PM
ರೋಟರಿ ಕೃಷಿ ಕ್ರಾಂತಿ 2020 - 21 ಬೆಳ್ಮಣ್ಣು: ರೋಟರಿ ಕ್ಲಬ್ ಬೆಳ್ಮಣ್ ಒಂದಲ್ಲ ಒಂದು ವಿಶೇಷ ಸಾರ್ವಜನಿಕ ಕಾರ್ಯಕ್ರಮದಿಂದ ಕ್ಲಬ್ ಗುರುತಿಸಿಕೊಂಡಿದ್ದು, ಸಾರ್ವಜನಿಕ ರಂಗಮಂದಿರ, ಬಾಲವನ, ಸುಮಾರು ಲಕ್ಷದಲ್ಲಿ ಸುಸಜ್ಜಿತ ಪಾರ್ಕಿಂಗ್, ಸುಮಾರು ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ರುದ್ರಭೂಮಿ, ರಸ್ತೆ ವಿಭಜಕದ ಅಳವಡಿಕೆ ಮುಂತಾದ ಶಾಶ್ವತ ಯೋಜನೆಯೊಂದಿಗೆ ಮನೆಮಾತಾಗಿದೆ. 2020 -21 ಸಾಲಿನ ಪ್ರಸ್ತುತ ವರ್ಷದ ಅಧ್ಯಕ್ಷರಾದ ರೋಟರಿಸುಭಾಷ್ ಕುಮಾರ್ ರವರ ನೇತೃತ್ವದಲ್ಲಿ ಕೃಷಿ ಕ್ರಾಂತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಸುಮಾರು ಎಕರೆಗಟ್ಟಲೆ 20 ವರ್ಷಕ್ಕೂ ಹಿಂದೆ ಹಡಿಲು ಬಿದ್ದಭೂಮಿಯನ್ನು ಲಾಕ್ ಡೌನ್ ಸಂದರ್ಭದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಕೃಷಿಭೂಮಿಯನ್ನು ಪುನಶ್ಚೇತನಗೊಳಿಸಿ ಈಗಲೇ ಬಿತ್ತನೆ ಕಾರ್ಯಕ್ಕೆ ಕೈ ಹಾಕಿದ್ದಾರೆ. ಇದರಿಂದ ಬಂದಂತಹ ಲಾಭಾಂಶವನ್ನು ಸಾರ್ವಜನಿಕ ಕಾರ್ಯಕ್ಕೆ ವಿನಿಯೋಗಿಸಲು ಚಿಂತನೆ ಮಾಡಿದ್ದಾರೆ. ಇವರಿಗೆ ಇರುವ ಕೃಷಿಯ ಆಸಕ್ತಿಯನ್ನು ಕಂಡು ಪರಿಸರದ ಜನರು ಕೂಡ ಕೈ ಜೋಡಿಸಿದ್ದಾರೆ. ರೋಟರಿ ಅಧ್ಯಕ್ಷರಾದ ಸುಭಾಷ್ ಕುಮಾರ್ ಅವರೇ ಸ್ವತಃ ಹಾರೆಯ ಹಿಡಿದು ಕೃಷಿಯಲ್ಲಿ ತನ್ನನ್ನು ಮತ್ತು ಕಾರ್ಯದರ್ಶಿಯಾದಂತಹ ರೋ.ರವಿರಾಜ್ ಶೆಟ್ಟಿ ಇವರು ಮತ್ತು ಸರ್ವ ಸದಸ್ಯರನ್ನು ತೊಡಗಿಸಿಕೊಂಡು ಕೃಷಿಯ ಕ್ರಾಂತಿ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ.
ಜೀವನ್ಮರಣ ಸ್ಥಿತಿಯಲ್ಲಿದ್ದ ರಾಷ್ಟ್ರಪಕ್ಷಿಯನ್ನು ಉಳಿಸಲು ಪ್ರಯತ್ನ ಪಟ್ಟ ಕಾಪು ತುಳುನಾಡು ಹಿಂದೂ ಸೇನೆ
Posted On: 10 Aug 2020, 05:04 PM
ಪಡುಬಿದ್ರಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ರಾಷ್ಟ್ರ ಪಕ್ಷಿ ನವಿಲಿನ ಜೀವ ಉಳಿಸಲು ಪ್ರಯತ್ನ ಪಟ್ಟ ಕಾಪು ತುಳುನಾಡು ಹಿಂದೂ ಸೇನೆಯ ಕಾರ್ಯಕರ್ತರು. ಪಡುಬಿದ್ರಿ,10.ಆಗಸ್ಟ್ : ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅವರ ಮನೆಯ ಹತ್ತಿರದ ತೋಡಿನ ಹತ್ತಿರದಲ್ಲಿ ಕಳೆದ ಒಂದೆರಡು ದಿನಗಳಿಂದ ನವಿಲೊಂದು ಕಾಲಿಗೆ ಪೆಟ್ಟಾಗಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತಿತ್ತು, ಇದನ್ನು ಗಮನಿಸಿದ ಸ್ಥಳೀಯ ನಾಗರಿಕರು ಕಾಪು ತುಳುನಾಡು ಹಿಂದೂ ಸೇನೆಯ ಪ್ರಮುಖರಾದ ಪ್ರಶಾಂತ್ ಪೂಜಾರಿ ಕಾಪು ಅವರಿಗೆ ತಿಳಿಸಿದರು, ವಿಷಯ ತಿಳಿದ ತಕ್ಷಣ ಪಡುಬಿದ್ರಿಗೆ ಧಾವಿಸಿ ನವಿಲಿನ ಜೀವ ಉಳಿಸಲು ಪ್ರಯತ್ನ ಪಟ್ಟರು, ಪ್ರಯತ್ನ ಫಲಕೊಡದೆ ನವಿಲು ಮರಣ ಹೊಂದಿತು . ಮರಣ ಹೊಂದಿದ ನವಿಲಿನ ಅಂತ್ಯ ಸಂಸ್ಕಾರ ಮಾಡಲು ನವಿಲನ್ನು ಕರ್ನಾಟಕ ಅರಣ್ಯ ಇಲಾಖೆ, ಕಾಪು ಉಪವಲಯದ ಅರಣ್ಯಾಧಿಕಾರಿ ಅಭಿಲಾಷ್ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಿವಾನಂದ್ ಪೂಜಾರಿ ಕಾಪು, ಚಿತ್ತನ್ ಪೂಜಾರಿ ಮತ್ತು ನಿತಿನ್ ಜೊತೆಯಲ್ಲಿದ್ದರು.
ಚಾಂದ್ರ ಕೃಷ್ಣಾಷ್ಟಮಿ : ಕೃಷ್ಣ ಸ್ಮರಣೆ 'ಜಾನಪದ' ಮನಸ್ಸಿನ 'ಜಗನ್ನಾಥ'
Posted On: 10 Aug 2020, 04:34 PM
ಮೋಹಕ ಮಹಿಮಾತಿಶಯದ ವಿಸ್ಮಯ ಪುರುಷ ಕೃಷ್ಣನ ಬದುಕು ಅದ್ಭುತವೆನಿಸಿದಾಗ , ಅಗಾಧ ಹರವನ್ನು ಪಡೆದುಕೊಂಡಾಗ ಲೋಕ ಕ್ಷೇಮಾರ್ಥಕ್ಕೆ ತೊಡಗಿಕೊಂಡಾಗ ಸಹಜವೆಂಬಂತೆ ಸಜ್ಜನರು ಉದ್ಗರಿಸಿದ್ದು "ಕೃಷ್ಣಾವತಾರ ಪರಿಪೂರ್ಣ ಅವತಾರವೆಂದು" . ಈ ಪರಿಪೂರ್ಣತೆಯು ಒಂದು ಸಾಧನೆಯಾಗಿ ,ಜಗನ್ಮೋಹಕವಾಗಿ ಸ್ಥಾಪನೆಯಾಗುವುದು ಜನಸಾಮಾನ್ಯತೆಯ ಮುಗ್ಧ ಮನಸ್ಸುಗಳೊಂದಿಗೆ - ಜನಪದರ ಸಾಂಗತ್ಯದಲ್ಲಿ. ಬಹುಶಃ ಪರಿಪೂರ್ಣತೆಯು ಪರಾಕಾಷ್ಠೆಯನ್ನು ತಲುಪಲು ದೇಸಿ ಪರಿಸರವೇ ಪೂರಕವಾಗುತ್ತದೆ. ಈ ಮನಃಸ್ಥಿತಿಯ ವ್ಯಕ್ತಿತ್ವವೇ ಕೃಷ್ಣನಾಗಿ ಆಕರ್ಷಿಸಲ್ಪಡುತ್ತದೆ , 'ಜಗನ್ನಾಥ' ಎಂಬ ಎತ್ತರಕ್ಕೆ ಏರಿಬಿಡುತ್ತದೆ . ಕೃಷ್ಣ ಬೆಳೆದದ್ದು ,ಆಟವಾಡಿದ್ದು , ಅಪೂರ್ವ ಸಾಧನೆಗಳನ್ನು ಮಾಡಿದ್ದು ಆ ಮೂಲಕ ಜನಜನಿತನಾಗಿ ಜಗದೋದ್ದಾರನೆನ್ನಿಸಿದ್ದು ಗೋಪಾಲಕರ ನಡುವೆ ,ಗೋ ಸಮೂಹದ ಸನ್ನಿಧಿಯಲ್ಲಿ , ಸೆಗಣಿ - ಗಂಜಳಗಳ ಸುವಾಸನೆಯಲ್ಲಿ . ನುಡಿಸಿದ್ದು ಬಿದಿರಿನ ಓಟೆಯನ್ನು ,ಧರಿಸಿದ್ದು ನವಿಲುಗರಿಯನ್ನು . ಬಿದಿರ ಓಟೆ ಮುರಲಿಯಾಗಿ ಉಲಿದಾಗ ಆ ಅನುರಣನ ಅಥವಾ ಸುಶ್ರಾವ್ಯ ನಾದ ಸಮ್ಮೋಹನವಾಯಿತು .ಗೋವುಗಳು - ಗೋಪಾಲಕರು - ಗೋಪಿಯರು ಮಂತ್ರಮುಗ್ಧರಾದರು ,ಆತ್ಮೀಯ ಆನಂದ ಪರವಶರಾದರು. ಕೃಷ್ಣ ಗೋಕುಲವನ್ನು ತೊರೆದು ಮಧುರೆಗೆ ಹೊರಟಾಗ ತನ್ನ ನೆನಪಾಗಿ ಗೋಕುಲದಲ್ಲಿ ಉಳಿಸಿದ್ದು ಕೊಳಲನ್ನು . ತಾನು ಜೊತೆಗೆ ಒಯ್ದದದ್ದು ನವಿಲುಗರಿಯನ್ನು ಮತ್ತು 'ಜನಪದ' ಮನಸ್ಸನ್ನು . ಆದರೆ ಮುಂದಿನ ಕೃಷ್ಣಕಥೆಯ ಯಾವ ದೃಶ್ಯವನ್ನೆ ಕಲಾವಿದ ಚಿತ್ರಿಸಿದರೂ ಕೃಷ್ಣನ ಕೈಯಲ್ಲಿ ಕೊಳಲು ಅನಿವಾರ್ಯ . ಇದು ಮೂಲದ ಜನಪದರ ಮನಸ್ಸುಗಳು ಕೃಷ್ಣನನ್ನು ಅನುಸರಿಸಿದ ಸಂಕೇತವೇ ? ಅಥವಾ ಕೃಷ್ಣ ಅದನ್ನು ಒಪ್ಪಿದ್ದೇ ಆಗಿರಬಹುದಲ್ಲ . ಅಂದರೆ ಕೃಷ್ಣ ಚಿತ್ರದ ಕಲಾವಿದ ಒಬ್ಬ ಜನಪದನೇ ತಾನೆ ? ಗೋಕುಲವನ್ನು ಬಿಟ್ಟ ಬಳಿಕ ಕೃಷ್ಣ ಕೊಳಲು ಊದಿಲ್ಲ . ಆದರೆ ಮರೆತಿಲ್ಲ ಎಂದು ಕೃಷ್ಣಪ್ರೀತಿಯ ಮಂದಿಗೆ ಕೊಳಲು ಇಲ್ಲದ ಕೃಷ್ಣನನ್ನು ಕಲ್ಪಿಸಲಾಗಲೇ ಇಲ್ಲ . ಕೃಷ್ಣನ ಸಮ್ಮೋಹನ ಸಾಮರ್ಥ್ಯಕ್ಕೆ ಕೂಡಿಕೊಂಡದ್ದು ಜಾಣ್ಮೆ , ಚಾಣಾಕ್ಷತೆ , ದೃಢವಾದ ಧೀ ಶಕ್ತಿ , ಅತಿಶಯ ಆತ್ಮವಿಶ್ವಾಸ ಇವುಗಳೇ ಕಾರಣವಾಗಿ ಕೃಷ್ಣ ಯುಗಾಂತದಲ್ಲಿ ಪೂರ್ಣಪುರುಷನಾಗಿ ವಿಜೃಂಭಿಸಿದ .ಆದರೆ ತಾನು ಜನಪದನಾಗಿಯೇ ಉಳಿದ .ಜನ ಸಾಮಾನ್ಯನನ್ನು ಬೆಂಬಲಿಸಿದ , ಅಗತ್ಯಗಳನ್ನು ಪೂರೈಸುತ್ತಾ ರಕ್ಷಣೆ ನೀಡಿದ .ಈ ಕಾರ್ಯಗಳೆಲ್ಲ ಧರ್ಮರಕ್ಷಣೆಯ ಕಾರ್ಯಗಳಾದುವು .ಕೃಷ್ಣ ಧರ್ಮ ಸಂಸ್ಥಾಪಕನಾದ . 'ಯಾದವರು ರಾಜತ್ವ ವಂಚಿತರು' ಎಂಬ ಕಳಂಕವನ್ನು ನಿವಾರಿಸಲು ದ್ವಾರಾವತಿಯ ನಿರ್ಮಾಣ. ಬಳಿಕ ಬಲರಾಮನನ್ನೆ ಅರಸನನ್ನಾಗಿ ಮಾಡಿದ , ತಾನು ತಮ್ಮನಾಗಿಯೇ ಉಳಿದ , ಈ ಸಂದರ್ಭ ಒಂದು ವಿಶಿಷ್ಟ ಮನೋಧರ್ಮವನ್ನು ಪ್ರಕಟಿಸುತ್ತದೆ . ರಾಜಸೂಯಾಧ್ವರದ ಸಂದರ್ಭ ಚಂದ್ರ ವಂಶದ ಪಿತಾಮಹ ಭೀಷ್ಮರಿಂದಲೇ ಕೃಷ್ಣ ಸ್ತುತಿಸಲ್ಪಡುತ್ತಾನೆ , ದೇಶದಾದ್ಯಂತ ಸ್ಥಾಪಿಸಲ್ಪಡುತ್ತಾನೆ . ಇದೊಂದು ಕೃಷ್ಣನ ವ್ಯಕ್ತಿತ್ವಕ್ಕೆ ದೊರೆತ ಪ್ರಚಾರ ,ಅದೂ ಆಚಾರ್ಯ ಭೀಷ್ಮರಿಂದ. ಇದು ಒಬ್ಬ ಸಾಮಾನ್ಯ ಜನಪದನಿಗೆ ಪ್ರಾಪ್ತಿಯಾದ ಯೋಗ . ಜನ ಸಮೂಹ ಬಯಸುವ ಸುಖದ ಜೀವನಕ್ಕೆ ದುಡಿಮೆಯೇ ಆಧಾರವೆಂಬ ಸೂತ್ರವನ್ನು ಪ್ರಚುರಪಡಿಸಿದ . ಕ್ಷತ್ರಿಯರಿಗೆ ಯುದ್ಧವೇ ಧರ್ಮ ಸಮ್ಮತವಾದ ಪರಮಗುರಿ ಎಂಬುದನ್ನು ಬೋಧಿಸಿದ . ಧರ್ಮ - ಅಧರ್ಮ , ಕರ್ಮ - ಅಕರ್ಮಗಳ ವಿವರ ವಿಸ್ತಾರವನ್ನು ಲೋಕಧರ್ಮಿಯಾಗಿ ಪ್ರತಿಪಾದಿಸಿ ಹಸ್ತಿನಾವತಿಯಲ್ಲಿ ಧರ್ಮರಾಯನನ್ನು ಚಕ್ರವರ್ತಿ ಎಂದು ಸ್ಥಿರಗೊಳಿಸಿದ . ಆದರೆ ತಾನು ಮಾತ್ರ ಯಾವ ಅಧಿಕಾರವನ್ನಾಗಲಿ ,ಸ್ಥಾನಮಾನವನ್ನಾಗಲಿ ಪಡೆಯದೆ ಅಸಾಮಾನ್ಯ ಹಂತವನ್ನು ಏರಿ ಜಗದ್ವಂದ್ಯನಾದ . ಸಾಮಾನ್ಯ ಗೊಲ್ಲರವನೊಬ್ಬ ಚಂದ್ರವಂಶದ ಚಕ್ರವರ್ತಿ ಪೀಠದ ಮುಂದೆ ಸಂಧಾನಕಾರನಾಗಿ ಕೌರವನಿಗೆ ಬುದ್ಧಿಹೇಳುವ ಧೈರ್ಯ ತೋರುತ್ತಾನೆ . ಭರತವರ್ಷ ನಿಬ್ಬೆರಗಾಗುತ್ತದೆ . ನಾಗರಿಕತೆಯ ಪಾಠ ಆ ಕಾಲಕ್ಕೆ ನಾಗರಿಕತೆಯ ಪಾಠ ಅಗತ್ಯವಿದ್ದುದು ಗೋಪಾಲಕರಿಗೆ , ಅದೇ ಆತನ ಬಾಲ್ಯದ ಕಾಯಕವಾಯಿತು . ವಿಮೋಚನೆಯಿಂದ ರಕ್ಷಣೆಯನ್ನು ಕೊಡುತ್ತಾ ಸದೃಢ 'ಯಾದವ ಸ್ತೋಮ'ವನ್ನು ರಚಿಸಲು ಕೃಷ್ಣ ಕಷ್ಟಪಟ್ಟ ,ಆ ಮೂಲಕ ಭರತವರ್ಷ ಪೂರ್ತಿ ಒಂದು ಆದರ್ಶವನ್ನು ಸಾರಿದ . ಆರ್ಥಿಕ ಸಬಲತೆ ನಾಗರಿಕತೆಯ ಸ್ಥಿರೀಕರಣಕ್ಕೆ ಹಾಗೂ ಮುಂದುವರಿಕೆಗೆ ಹೇತುವೆಂಬುದನ್ನು ಅರಿತ ಕೃಷ್ಣ ಹೈನುಗಾರಿಕೆಯಂತಹ ಗೋ ಪಾಲನೆ ,ಗವ್ಯಗಳ ವಿನಿಮಯದಿಂದ ಅಗತ್ಯಗಳನ್ನು ಪೂರೈಸಿಕೊಳ್ಳುವ , ಸ್ವತಂತ್ರವಾಗಿ ಬದುಕುವ ವಿಧಾನವನ್ನು ಅನುಷ್ಠಾನಿಸುವ ಪಥ ನಿರ್ದೇಶಕನಾದ .ಅಣ್ಣ ಬಲರಾಮ ಕೃಷಿಯಿಂದ ಸುಭಿಕ್ಷೆ ಎಂದ. ಸಾಂಕೇತಿಕವಾಗಿ ಹಲಧರನಾದ . ಕೃಷ್ಣನಿಗೆ ಮುರಲಿ, ರಾಮನಿಗೆ ಹಲ - ಮುಸಲಗಳು ಭೂಷಣವಾದುವು . ವಿಫುಲವಾದ ಗೋ ಸಂಪತ್ತು - ಅಕ್ಷಯ ಕೃಷಿ ಲಾಭಗಳು ಗೋಪಾಲಕರ ಉತ್ಕರ್ಷಕ್ಕೆ ಕಾರಣವಾದುವು .ಇದೇ ಮುಂದೆ ಭರತವರ್ಷದಲ್ಲಿ ಸ್ಥಾಯಿಯಾಯಿತು . ಸನಾತನವಾಗಿದ್ದ ಹೈನುಗಾರಿಕೆ ಮತ್ತು ಕೃಷಿ ಮರಳಿ ನೆಲೆಯಾಯಿತು . ಬಲರಾಮ - ಕೃಷ್ಣರಿಬ್ಬರೂ ಗೋ ಸಂಪತ್ತು ಮತ್ತು ಕೃಷಿ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದರು ,ಸಾಧಿಸಿ ತೋರಿಸಿದರು .ಇದು ಮಣ್ಣಿನೊಂದಿಗಿನ ಹೋರಾಟ ,ಈ ಸಂಬಂಧ ಜನಪದೀಯವಾದುದು . ಇದು ರಾಮ - ಕೃಷ್ಣರಿಬ್ಬರ ವ್ಯಕ್ತಿತ್ವದ ಒಂದು ಆಯಾಮವಲ್ಲ , ಸಮಗ್ರ ಸ್ವರೂಪ. ಕೃಷ್ಣ ಮಹಾಭಾರತದ ಪ್ರಮುಖ ಪಾತ್ರಧಾರಿಯಾದರೂ , ಗೀತಾಚಾರ್ಯನಾದರೂ ತನ್ನ ಮೂಲದ ಜನಪದೀಯ ಮನೋಧರ್ಮವನ್ನು ಸುಪ್ತವಾಗಿ ಇರಿಸಿಕೊಂಡಿದ್ದು ಸಂದರ್ಭಾನುಸಾರ ಪ್ರಕಟಿಸುತ್ತಿದ್ದ . ಎಷ್ಟುಅನುರಕ್ತನೋ ಅಷ್ಟೇ ವಿರಕ್ತನಾಗುತ್ತಿದ್ದ , 'ಬಂಧಗಳಿಲ್ಲದ ಕರ್ಮ ನಿರತ' ಎಂಬುದನ್ನು ಬದುಕಿನುದ್ದಕ್ಕೂ ಸಾಧಿಸಿ ತೋರಿಸುತ್ತಾನೆ . ಭಗವಂತನ 'ಧರ್ಮಾವತಾರ' ಎಂದೇ ಕೃಷ್ಣನ ಜನ್ಮವನ್ನು ಋಷಿಮುನಿಗಳು ಕೊಂಡಾಡಿದರು . 'ಕಿಷ್ಣ'ನೆಂಬ ಜನಪದ ತುಳು ಜನಪದ ಸಾಹಿತ್ಯಗಳಲ್ಲಿ ಕೃಷ್ಣ ಕತೆಗಳೂ ರೋಚಕವಾಗಿ ಮೂಡಿಬಂದಿದೆ .ಈ ಪಾಡ್ದನಗಳಲ್ಲಿ ಕೃಷ್ಣ ಅತಿಮಾನುಷನೆಂಬ ಗೌರವವಿದೆಯಾದರೂ 'ಜನಪದ'ನೆಂಬ ಸಲುಗೆಯೂ ಸ್ಪಷ್ಟವಾಗಿದೆ . 'ಕಂಸಾಲ ಸುರಿಯಾ' ಪಾಡ್ದನದಲ್ಲಿ : ಕಂಸಾಲ ಸುರಿಯನು ತನ್ನ ತಂಗಿ ಚಿಕ್ಕಿಯಮ್ಮನಿಗೆ ಮದುವೆಗೆ ವರ ಸಿಕ್ಕದಿದ್ದಾಗ ಆನೆಯ ಸೊಂಡಿಲಲ್ಲಿ ಹೂಮಾಲೆ ಕೊಟ್ಟು ,ಅದು ಯಾರಿಗೆ ಮಾಲೆ ಹಾಕುತ್ತದೋ ಅವನಿಗೆ ತನ್ನ ತಂಗಿಯನ್ನು ಮದುವೆಮಾಡಿ ಕೊಡುತ್ತೇನೆ ಎಂದು ನಿರ್ಧರಿಸುತ್ತಾನೆ .ಆನೆ ಚಪ್ಪರದ ಮೂಲೆಯಲ್ಲಿ ಕುಳಿತಿದ್ದ ಮುದುಕನೊಬ್ಬನ ಕೊರಳಿಗೆ ಮಾಲೆ ಹಾಕುತ್ತದೆ .'ಈ ಮುದುಕನಿಗೆ ನಿನ್ನನ್ನು ಮದುವೆಮಾಡಿ ಕೊಡಲಾರೆ' ಎಂದು ಕಂಸಾಲಸುರಿಯನು ಕೋಪಮಾಡಿಕೊಂಡಾಗ ಚಿಕ್ಕಿಯಮ್ಮ 'ತಲೆಯಲ್ಲಿ ಬರೆದುದನ್ನುಎಲೆಯಿಂದ ಅಳಿಸಲಾಗುತ್ತದೆಯೇ ,ನಾನು ಆ ಮುದುಕನನ್ನು ಮದುವೆಯಾಗುತ್ತೇನೆ . ದೇವರು ಆತನನ್ನು ನನಗೋಸ್ಕರ ಕಳುಹಿಸಿದ್ದಾನೆ' ಎನ್ನುತ್ತಾಳೆ. ಆ ಮುದುಕ ಕೃಷ್ಣನಾಗಿ ಮುಂದೆ ಬಂದು ಆಕೆಯ ಕೈ ಹಿಡಿಯುತ್ತಾನೆ .ಆ ಹುಡುಗಿಯು ಮನಸ್ಸಿನಲ್ಲಿ ಮಾಡಿಕೊಂಡ ನಿರ್ಧಾರವನ್ನು ತಿಳಿದು ಆಕೆಯನ್ನು ಅನುಗ್ರಹಿಸುವುದಕ್ಕಾಗಿಯೇ ಕೃಷ್ಣ ಈ ನಾಟಕವಾಡಿದ . 'ಗಾಳಿಮ ಬೊಳ್ಳಿಮ' ಎಂಬ ಪಾಡ್ದನದಲ್ಲಿಅಣ್ಣಂದ್ರಾಯ ಎಂಬವನ ತಂಗಿಗೆ ಮಕ್ಕಳಾಗದಿದ್ದಾಗ ಕೃಷ್ಣನೇ ಗೋವಳನ ವೇಷ ಧರಿಸಿ ಬಂದು ಆಕೆಯ ಜೊತೆಗೂಡಿ ಆಕೆ ಗರ್ಭಿಣಿಯಾಗುವ ಹಾಗೆ ಮಾಡುತ್ತಾನೆ .ಆಕೆಯ ಹೆರಿಗೆಯಾಗುವಾಗಲೂ ಸೂಲಗಿತ್ತಿಯ ಕೆಲಸಮಾಡಿ ಆಕೆಯ ಸೇವೆ ಮಾಡುತ್ತಾನೆ . ಆದರೆ ನಾಗಸಿರಿ ಪಾಡ್ದನದಲ್ಲಿ ಶ್ರೀಕೃಷ್ಣ ಪತಿವ್ರತೆ ನಾಗಸಿರಿ ಎಂಬಾಕೆಯೊಬ್ಬಳ ಪಾತಿವ್ರತ್ಯ ಪರೀಕ್ಷೆ ಮಾಡಲು ಹೋಗಿ ಆಕೆಯ ಕೋಪಕ್ಕೆ ಪಾತ್ರನಾಗಿ ಶಾಪಕ್ಕೊಳಗಾಗುವ ವರ್ಣನೆ ಇದೆ .ದೇವರಾದರೂ ಪತಿವ್ರತಾ ಶಿರೋಮಣಿಗೆ ಕಿರುಕುಳ ಕೊಟ್ಟರೆ ಅದರ ಫಲ ಅನುಭವಿಸಬೇಕಾಗುತ್ತದೆ ಎಂಬುದು ಈ ಪಾಡ್ದನದ ಸಂದೇಶ . ಗೋಪಿಕಾ ಸ್ತ್ರೀಯರ ವಸ್ತ್ರಕದ್ದ ಘಟನೆಯ ಕುರಿತಾದ ಪಾಡ್ದನವೊಂದು ದೇವರಿಗೆ ಸಂಪೂರ್ಣ ಶರಣಾಗತರಾಗಬೇಕೆಂಬ ಸಂಕೇತವನ್ನು ನೀಡುತ್ತಾ ದೇವರಿಗೆ ಸಂಪೂರ್ಣ ಶರಣಾದರೆ ಮಾತ್ರ ದೇವರು ಕಾಪಾಡುತ್ತಾನೆ .ಅರ್ಧ ನನ್ನ ಪ್ರಯತ್ನ ,ಅರ್ಧ ನಿನ್ನದು ಎಂಬುದಿಲ್ಲ . ಇಂತಹ ಕೆಲವು ತತ್ತ್ವಗಳನ್ನು ಪಾಡ್ದನದ ಅಜ್ಞಾತ ಕವಿಗಳು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸಿದ್ದಾರೆ . ಯಶೋದೆಯ ಮುದ್ದುಮಗನನ್ನು ನೋಡಲು ಗೋಪಿಯರು ಬರುತ್ತಾರೆ . ಮಗುವನ್ನು ಹಿಡಿದು ಮುದ್ದಾಡಿದಾಗ ಮಗು ಮುಖನೋಡಿ ನಗುತ್ತದೆ ,ಎದೆಗೆ ಕೈ ಹಾಕಿ ರವಕೆ ಹರಿಯುತ್ತದೆ .ಕುತ್ತಿಗೆಗೆ ಕೈ ಹಾಕಿ ಕರಿಮಣಿ ಎಳೆಯುತ್ತದೆ . ಆಗ ಗೋಪಿಯರು 'ಮಗು ಮಗು ಎನ್ನುತ್ತೀರಲ್ಲ ,ಇವ ಮಗುವಲ್ಲ ಮದನಗೋಪಾಲ' ಎಂದು ದೂರುತ್ತಾರೆ . 'ಚಿಕ್ಕವನಲ್ಲಿ ತಪ್ಪು ಹುಡುಕಬೇಡಿರಿ . ನಿಮ್ಮ ಮನಸ್ಸಿನಲ್ಲಿ ಏನೋ ಕಳಂಕವಿದೆ .ಪುಟ್ಟ ಮಗುವಿನ ಮನಸ್ಸಿನಲ್ಲಿಕಳಂಕವಿಲ್ಲ' ಎಂದು ಯಶೋದೆ ಅವರನ್ನು ಕಳುಹಿಸುತ್ತಾಳೆ . (ಡಾ.ಸುಶೀಲಾ ಉಪಾಧ್ಯಾಯರ ಬರೆಹಗಳ ಸಂಗ್ರಹದಿಂದ ) ತುಳುನಾಡಿನ 'ಕಂಗುಲು ಕುಣಿತ'ದ ಬಗ್ಗೆ ವಿವರಿಸುವ ಡಾ.ಅಶೋಕ ಆಳ್ವ ಅವರು ಕಾಂಗ್ + ಆಳ್ = ಕಾಂಗಾಳ್ ಆಗಿ ಅದೇ 'ಕಂಗುಲು' ಆಗಿರಬೇಕು . ಈ ಕಾಂಗ್ ಅಂದರೆ ಕಪ್ಪು ,ಆಳ್ ಎಂದರೆ ಮನುಷ್ಯ ,ಇವನೇ ಕೃಷ್ಣ ಎನ್ನುತ್ತಾರೆ .ಕಂಗುಲು ಕುಣಿತದಲ್ಲಿ ನಡುವೆ ಕೊಳಲು ಹಿಡಿದುಕೊಂಡು ಕುಣಿಯುವ ವ್ಯಕ್ತಿ ಕೃಷ್ಣ ,ಅತನ ಸುತ್ತ ತೆಂಗಿನಸಿರಿ ಕಟ್ಟಿಕೊಂಡು ಕುಣಿಯುವ ಸಿರಿಗಳೆ ಗೋಪಿಕೆಯರು ಎನ್ನುವುದು ಅವರ ಊಹೆ . ಅವತಾರ ಪುರುಷರಲ್ಲಿರುವ ಕೆಲವು ದೋಷಗಳನ್ನು ಆ ಅಜ್ಞಾತ ಜನಪದ ಕವಿಗಳು ಎತ್ತಿತೋರಿಸಿ ಹಾಡಿದರು , ಕುಣಿದರು . ಇದರೊಳಗೆ ಏನೋ ತತ್ತ್ವವಿದೆ ಎಂಬುದನ್ನು ತಿಳಿಸುವ ಪ್ರಯತ್ನಮಾಡಿದ್ದಾರೆ. ಬರಹ : ಕೆ.ಎಲ್ .ಕುಂಡಂತಾಯ
ಕಾಪು ನಿಕಿಲ ಚಿಕನ್ ಸ್ಟಾಲ್ ಹೊಸ ಮಾರಿಗುಡಿ, ಬೀಚ್ ರೋಡ್ ಇಲ್ಲಿಗೆ ಸ್ಥಳಾಂತರಗೊಂಡಿರುತ್ತದೆ
Posted On: 10 Aug 2020, 02:46 PM
ಕಾಪು ಮೂರನೇ ಮಾರಿಗುಡಿ ಹತ್ತಿರದಲ್ಲಿ ಇದ್ದ ನಿಕಿಲ ಚಿಕನ್ ಸ್ಟಾಲ್ ಈಗ ಹೊಸಮಾರಿಗುಡಿ ಬಳಿ ಇರುವ ಬೀಚ್ ರೋಡ್ ಇಲ್ಲಿಗೆ ಸ್ಥಳಾಂತರಗೊಂಡಿರುತ್ತದೆ.. ಇಲ್ಲಿ ಬಾಯ್ಲರ್ , ಟೈಸನ್, ಊರಿನ ಕೋಳಿ, ಕೋಳಿ ಮಾಂಸ ಸಿಗುತ್ತದೆ ಜೊತೆಗೆ ಹೋಮ್ ಡೆಲಿವರಿ ಕೂಡ ಕೊಡಲಾಗುತ್ತದೆ. ಗ್ರಾಹಕರ ಪ್ರೋತ್ಸಾಹದ ನಿರೀಕ್ಷೆಯಲ್ಲಿ ಜಗದೀಶ್ ಶೆಟ್ಟಿ ಕಾಪು 9845069173, 8197956173
