Updated News From Kaup
ಆಟೋಚಾಲಕಿ, ಆಶಾಕಾರ್ಯಕರ್ತೆ ರಾಜೀವಿಯವರ ಮಾನವೀಯ ಸೇವೆ ಅಪೂವ೯
Posted On: 25 Jul 2020, 12:21 PM
ರಾಜೀವಿ ಕರೋನಾ ವಾರಿಯರ್ ಮಾನವೀಯ ಸೇವೆ ಅಪೂವ೯ ಗುರುವಾರ ರಾತ್ರಿ 3 ಗಂಟೆಗೆ ಊರಿನ ಒಂದು ಹೆಣ್ಣು ಮಗಳಿಗೆ ಹೆರಿಗೆ ನೋವು ಕಾಣಿಸಿತು. ಆಶಾ ಕಾರ್ಯಕರ್ತೆ ರಾಜೀವಿ ಅವರು ಸ್ವತಃ ರಿಕ್ಷಾ ಚಲಾಯಿಸಿ ಪೆರ್ನಂಕಿಲ ದಿಂದ 18 ಕಿ.ಮಿ. ದೂರ ಇರುವ ಉಡುಪಿಯ ಬಿ.ಆರ್.ಶೆಟ್ಟಿ ಆಸ್ಪತ್ರೆಗೆ ಮಹಿಳೆಯನ್ನು ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ. ಗಭಿ೯ಣಿ ಮಹಿಳೆಯರಿಗೆ ಉಚಿತ ಸೇವೆ ನೀಡುತ್ತಿರುವ ಇವರು ಬಹುಮುಖ ಪ್ರತಿಭೆಯವರು ತನ್ನ ಬದುಕು ಮತ್ತೊಬ್ಬರಿಗೆ ಸಹಾಯವಾಗಬೇಕು. ಎನ್ನುವ ಪರಿಕಲ್ಪನೆ ಯಿಂದ ಊರಿನಲ್ಲಿಯೂ ಕೂಡ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ತನ್ನ ರಿಕ್ಷಾವನ್ನು ಕರೋನಾಕ್ಕೆ ಅನುಗುಣವಾಗಿ ಬದಲಾವಣೆ ಮಾಡಿ ವಿವಿಧ ಸಂದೇಶ ಉಳ್ಳ ಭಿತ್ತಿಪತ್ರ ಅಳವಡಿಸಿರುತ್ತಾರೆ. *ರಾಜೀವಿ ಅವರ ಮನದಾಳದ ಮಾತು* ನಾನು ಆಟೋ ಓಡಿಸಲು ಶುರುಮಾಡಿದಾಗ ಈ ಭಾಗದಲ್ಲಿ ಬಸ್ಸಿನ ಸೌಕರ್ಯ ಇರಲಿಲ್ಲ. ಹಾಗಾಗಿ, ಇತರರಿಗೆ ಸಹಾಯವಾದಂತಾಯಿತು, ನನ್ನ ಬದುಕಿಗೂ ಆಧಾರವಾದಂತಾಯಿತು ಎಂಬ ಧೋರಣೆಯಲ್ಲಿ ಈ ಕಾಯಕಕ್ಕೆ ಕಾಲಿರಿಸಿದೆ. ಈಗ ನಾನು ಆಟೋ ಚಾಲಕಿ ಮಾತ್ರವಲ್ಲ, ಆಶಾ ಕಾರ್ಯಕರ್ತೆಯಾಗಿಯೂ ದುಡಿಯುತ್ತಿದ್ದೇನೆ. ಈ ಭಾಗದ ಮಹಿಳೆಯರಿಗೆ ಹೆರಿಗೆನೋವು ಕಂಡುಬಂದರೆ, ರಾತ್ರಿಯಾಗಲಿ ಹಗಲಾಗಲಿ ನಾನು ಆಟೋ ಹತ್ತಿಬಿಡುತ್ತೇನೆ. ಒಮ್ಮೆ ಮಹಿಳೆಯೊಬ್ಬರಿಗೆ ಹೆರಿಗೆನೋವು ಬಂದಾಗ 108 ಆ್ಯಂಬುಲೆನ್ಸ್ ಗೆ ಫೋನ್ ಮಾಡಿದ್ದರು. ಆ್ಯಂಬುಲೆನ್ಸ್ ಬರುವುದು ತಡವಾದಾಗ, ನಾನೇ ಆಟೋದಲ್ಲಿ ಅವರನ್ನು ಕರೆದೊಯ್ದೆ. ತುಸು ದೂರ ಚಲಿಸುವಾಗ ಎದುರಿನಿಂದ ಆ್ಯಂಬುಲೆನ್ಸ್ ಬಂತು. ಗರ್ಭಿಣಿಯನ್ನು ಆ್ಯಂಬುಲೆನ್ಸ್ ಹತ್ತಿಸಿ ಮತ್ತೈದು ನಿಮಿಷದಲ್ಲಿಯೇ ಹೆರಿಗೆ ಆಯಿತು. ಈ ಘಟನೆ ಪತ್ರಿಕೆಗಳಲ್ಲಿಯೂ ವರದಿಯಾಗಿತ್ತು. ಆ ಮಗು ಈಗ ನಾನು ಕೆಲಸ ಮಾಡುವ ಅಂಗನವಾಡಿಗೆ ಬರುತ್ತಿದೆ. ಮಗುವಿನ ಮುಖ ನೋಡುವಾಗ ಬಹಳ ಖುಷಿ ಆಗುತ್ತದೆ. ಆಟೋ ಚಾಲನೆ ಆರಂಭದ ದಿನಗಳಲ್ಲಿ ಅಡೆತಡೆಗಳನ್ನು ಎದುರಿಸಿದ್ದೇನೆ. ಆದರೂ ಯಾವುದನ್ನೂ ಲೆಕ್ಕಿಸದೆ ನನ್ನ ಕಾಯಕವನ್ನು ಮುಂದುವರಿಸಿದೆ. ಕೆಲವೊಮ್ಮೆ ರಾತ್ರಿ ಹೊತ್ತು ಆಟೋ ಅಡ್ಡಹಾಕಿದ ಘಟನೆಗಳೂ ನಡೆದಿವೆ. ಆದರೆ ನಾನು ರಾತ್ರಿ ಎಲ್ಲಿಯೂ ಆಟೋ ನಿಲ್ಲಿಸುವುದೇ ಇಲ್ಲ. ಎಲ್ಲವನ್ನೂ ಎದುರಿಸಿ ಮುನ್ನುಗ್ಗಿದ ಮೇಲೆ ತೊಂದರೆ ಕೊಡುವವರೆಲ್ಲ ಹಿಮ್ಮೆಟ್ಟಿದ್ದಾರೆ. ಈಗ ಸಮಾಜಮುಖಿಯಾಗಿಯೂ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ಪ್ರಧಾನಮಂತ್ರಿ ಗಳ ಸ್ವಚ್ಛತಾ ಅಭಿಯಾನದ ಮಾಸ್ಟರ್ ಟ್ರೈನರ್ ಆಗಿದ್ದೇನೆ. ಕೊಡಿಬೆಟ್ಟು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಗ್ರಹ ಮಾಡುವ ವಿಂಗಡಿಸುವ ಕೆಲಸ ಮಾಡುತ್ತೇನೆ. ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಲಸಗಳಲ್ಲಿ ಸಕ್ರಿಯಳಾಗಿದ್ದೇನೆ. ಹೀಗೆ ಬಹುಮುಖಿಯಾಗಿ ಕೆಲಸಮಾಡಲು ಧೈರ್ಯ ನನಗೆ ಕೊಟ್ಟಿದ್ದು ಇದೇ ಆಟೋ. ಇನ್ನೊಂದು ಆಟೋ ಖರೀದಿಸಿ, ಅದನ್ನು ಇನ್ನೊಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದೇನೆ. ಆಟೋರಿಕ್ಷಾದಲ್ಲಿ ದೂರದೂರಿಗೆ ಪ್ರಯಾಣಿಸು ವುದು ನನಗೆ ಖುಷಿ ಅನಿಸುತ್ತೆ, ನನ್ನ ತವರುಮನೆ ಸುಳ್ಯದಲ್ಲಿದೆ ನಾವೆಲ್ಲ ರಿಕ್ಷಾದಲ್ಲಿಯೇ ಸುಳ್ಯಕ್ಕೆ ಹೋಗುತ್ತೇವೆ. ಧರ್ಮಸ್ಥಳ, ಬೆಳ್ತಂಗಡಿ ಮುಂತಾದ ಕಡೆಗೂ ರಿಕ್ಷಾದಲ್ಲಿಯೇ ಪ್ರಯಾಣಿಸಿದ್ದೇನೆ. ದೂರದ ಪ್ರಯಾಣ ಎಂದರೆ ನನಗೆ ಇಷ್ಟವೇ ಎಂದು ಹೇಳುತ್ತಾರೆ. ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಾಜೀವಿಯವರು ಹಲವಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಅದೆಷೋ ಮಹಿಳೆಯರು ಚಾಲಕ ಕೆಲಸ ನಿವ೯ಹಿಸಲು ಹಿಂಜರಿಯುವ ಈ ಸಂದಭ೯ದಲ್ಲಿ ಅತ್ಯಂತ ಗಟ್ಟಿಮನಸ್ಸಿನಿಂದ ಈ ಚಾಲಕ ವೃತ್ತಿಯನ್ನು ನಡೆಸುತ್ತಿದ್ದಾರೆ. ಸರಕಾರ ಇವರ ಕೆಲಸಗಳನ್ನು ಗುರುತಿಸಿ ಗೌರವಿಸಬೇಕಾಗಿದೆ. ಈ ರೀತಿಯ ಗಟ್ಟಿ ಮನಸ್ಸಿನ ಕರೋನಾ ವಾರಿಯರ್ಸ್ ನಿಂದ ಈ ಕರೋನಾ ವ್ಯಾಧಿ ಸಮಥ೯ವಾಗಿ ಎದುರಿಸಲು ದೇಶಕ್ಕೆ ಸಾಧ್ಯವಾಗಿದೆ.ಇವರಿಗೆ ಜಿಲ್ಲಾಡಳಿತ ಗುರುತಿಸಿ ಪ್ರೋತ್ಸಾಹ ನೀಡಲಿ ಎನ್ನುವುದು ನಮ್ಮ ಆಶಯವಾಗಿದೆ. ಈಗಾಗಲೇ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ರವರು ತಮ್ಮ ಟ್ವಿಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ರಾಘವೇಂದ್ರ ಪ್ರಭು ಕವಾ೯ಲು
ತುಳುವರ ನಾಗಾರಾಧನೆಯ ಹಿನ್ನೋಟ - ಕೆ. ಎಲ್. ಕುಂಡಂತಾಯ
Posted On: 24 Jul 2020, 11:12 PM
ಗಿಡ ,ಮರ , ಬಳ್ಳಿ ,ಪ್ರಾಣಿ ,ಪಕ್ಷಿ , ನದಿ , ಸಮುದ್ರ , ಪರ್ವತ , ಬೆಟ್ಟ , ಗುಡ್ಡಗಳನ್ನು ಆರಾಧಿಸುವ ಭಾರತೀಯ ಆಚಾರ - ವಿಚಾರ ಪ್ರಪ್ರಥಮ ದೈವೀಕರಿಸಿದ ಪ್ರಾಣಿ "ನಾಗ" ಅಥವಾ "ಸರ್ಪ" . ಪರಶುರಾಮ ಸೃಷ್ಟಿ ಎಂದು ನಂಬಲಾಗುವ ಈ ಪಶ್ಚಿಮ ಕರಾವಳಿಯಲ್ಲಂತೂ ನಾಗ ಶ್ರದ್ಧೆ ವಿಶಿಷ್ಟವಾದುದು .ವಿಶ್ವದ ಬೇರೆಲ್ಲೂ ಕಾಣಸಿಗದ ನಂಬಿಕೆ - ನಡವಳಿಕೆಗಳು ನಾಗ ಸಂಬಂಧಿಯಾಗಿದೆ .ನಾಗ ಪ್ರೀತಿ - ಭಕ್ತಿ - ಒಡಂಬಡಿಕೆ - ಸ್ವೀಕಾರಗಳು ನಮ್ಮಲ್ಲಿರುವಷ್ಟು ವೈವಿಧ್ಯಮಯವಾಗಿ ಬೇರೆಲ್ಲೂ ಇಲ್ಲ . ಈ ಭರವಸೆ - ವಿಶ್ವಾಸವು ಪುರಾತನವಾದರೂ ಬಲಗುಂದದೆ ಸಾಗಿಬಂದಿದೆ . ಸಹಸ್ರಾರು ವರ್ಷಕಳೆದರೂ "ನಾಗ ನಂಬಿಕೆ" ಪ್ರಸ್ತುತ , ಅಷ್ಟೇ ಗಾಢವಾದುದಾಗಿದೆ . ಮೃತ ನಾಗನ ಕಳೇವರ ಸಿಕ್ಕಿದರೆ ಸಂಸ್ಕಾರ ವಿಧಿ ಪೂರೈಸುವ ಭಯ ,ಭಕ್ತಿಯ ಸರ್ಪ ಸಂಸ್ಕಾರ ಧಾರ್ಮಿಕ ವಿಧಿವಿಧಾನಗಳನ್ನು( ಇದು ಬಹುಶಃ ವೈದಿಕ ಆಗಮನದ ಬಳಿಕದ ಅನುಸಂಧಾನ - ವಿರಬಹುದು) ಗಮನಿಸಿದಾಗ ,ನಮಗೇನು ನಾಗನೊಂದಿಗೆ ಪೈತೃಕದ ಸಂಬಂಧವೇ ಎಂದು ಅನ್ನಿಸುವುದಿಲ್ಲವೇ ? ಹೀಗೆ ಲೋಕ ಪ್ರಿಯ ನಾಗನನ್ನು ಭೂಮಿಪುತ್ರನೆಂದೇ ಒಪ್ಪಿದೆ ನಮ್ಮ ಧರ್ಮಶ್ರದ್ಧೆ . ಬ್ರಹ್ಮ ಸೃಷ್ಟಿಯ ಬಳಿಕ ಸಂಭವಿಸಿದ ಅಥವಾ ಗೋಚರಿಸಿದ ಈ ಭೂಭಾಗದ ಮೂಲನಿವಾಸಿಯೇ ನಾಗ ಎಂದು ಭಾವಿಸುವ ನಮ್ಮ ಮನಸ್ಸುಗಳು ನಾಗ ಸಂತತಿಯ ಕುರಿತಾಗಿ ಯೋಚಿಸುವಾಗ ಭಕ್ತಿ ಇರುತ್ತದೆ , ಹಿನ್ನೆಲೆಯಲ್ಲಿ ಭಯವೂ ಸ್ಪಷ್ಟ . 'ಮೂಲದ ನಾಗ'ಎಂದು ಜನಪದರಲ್ಲಿರುವ ರೂಢಿಯನ್ನು ನೆನಪಿಸಿಕೊಳ್ಳಬಹುದು . ವಿಶ್ವದ ಹಲವು ಸಂಸ್ಕೃತಿಗಳಲ್ಲಿ ನಾಗ ನಂಬಿಕೆಗಳಿವೆ ,ವೈವಿಧ್ಯಮಯ ಆಚರಣೆಗಳಿವೆ . ಭಾರತದಲ್ಲಂತೂ ಸಾವಿರಾರು ವಿಶ್ವಾಸಗಳು - ಸ್ವೀಕಾರಗಳಿವೆ .ಉತ್ತರ ಭಾರತಕ್ಕಿಂತ ದಕ್ಷಿಣದಲ್ಲಿ ಭಿನ್ನತೆ ಇದೆ .ಕರ್ನಾಟಕದಲ್ಲೆ ಹಲವು ಕ್ರಮಗಳ ಆಚರಣೆಗಳು .ಕೇರಳದ ಕರಾವಳಿಯಲ್ಲಿ ಅನೇಕ ವಿಧಿವಿಧಾನಗಳು. ಆದರೆ ನಮ್ಮ ಜಿಲ್ಲೆಗಳ ಕರಾವಳಿಯದ್ದು ಪ್ರತ್ಯೇಕ ಅನುಸಂಧಾನ - ಆರಾಧನಾ ವೈವಿಧ್ಯ . |ವೈದಿಕ ಅನುಸಂಧಾನ| ನಾಗ ಶ್ರದ್ಧೆಗೆ , ಆರಾಧನಾ ಸ್ವರೂಪಕ್ಕೆ ವಿಸ್ತಾರವಾದ ಆಯಾಮ ದೊರೆಯುವುದು ವೈದಿಕದಿಂದ . ನಾಗ ಸಂಬಂಧಿಯಾದ ವೇದ ಮಂತ್ರಗಳು ಎಲ್ಲೆಡೆ ವ್ಯಾಪ್ತನಾದ ನಾಗ - ಸರ್ಪದ ಕುರಿತು ವ್ಯಾಖ್ಯಾನಿಸುತ್ತದೆ . ಮಹಾಶೇಷನು ತನ್ನ ತಮ್ಮನಾದ ವಾಸುಕಿಗೆ ಭೂಮಿಯ ಅಧಿಕಾರವನ್ನು ಕೊಟ್ಟು ನಾಗರಾಜನಾಗಿರು ಎನ್ನುತ್ತಾನೆ. ಹಾಗಾಗಿಯೇ ನಮ್ಮಲ್ಲಿ "ವಾಸುಕೀ ನಾಗರಾಜ" ಎಂಬ ಸಂಕಲ್ಪ ರೂಢವಾಯಿತು .ವೈದಿಕದ ಪೂಜಾ ವಿಧಾನಗಳು ಒಪ್ಪಿತವಾದುವು . ಆಸ್ತಿಕನೆಂಬ ಬ್ರಾಹ್ಮಣ ವಟುವಿನಿಂದ ಸರ್ಪ ಸಂತತಿ ಉಳಿಯಿತು . ಇದು ಜನಮೇಜಯನ ಸರ್ಪಯಾಗದ ಪ್ರಸಂಗದಲ್ಲಿ (ಮಹಾಭಾರತ) . ಹಾಗಾಗಿಯೇ ನಾಗಬನಗಳಲ್ಲಿ , ವಿಶೇಷ ಪೂಜೆಗಳ ಸಂದರ್ಭ "ವಟುವಾರಾಧನೆ" ನಾಗ ಪ್ರೀತ್ಯರ್ಥವಾಗಿ ನೆರವೇರುತ್ತವೆ .ಇದನ್ನು ಆಸ್ತಿಕರು ಪ್ರೀತಿಯಿಂದ ನೆರವೇರಿಸುತ್ತಾರೆ . ಇಂತಹ ಹತ್ತಾರು ನಾಗ ಉಪಾಸನಾ ಪದ್ಧತಿಗಳು ವೈದಿಕ - ಅವೈದಿಕದ ಸುಗಮ ಸಮಾಗಮವಾಗಿ ಕಂಡುಬರುತ್ತವೆ .ಹಾಗಾಗಿ ಆಶಯದಲ್ಲಿ ವೈದಿಕ ಸಂಕಲ್ಪವು ಉದಾತ್ತವಾದುದಾಗಿದೆ. |ಸಮೂಹ ಪೂಜೆ| ಕರಾವಳಿಯಲ್ಲಿ ದೊರೆಯುವ ಮಾಹಿತಿಗಳಂತೆ ಮಾನವ ತನಗೆ ಆರಾಧಿಸಬೇಕೆಂದು ಬಯಸಿದುದನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ (ಮರದ ಬುಡದಲ್ಲಿ ಪ್ರತೀಕವಾಗಿ ಕಲ್ಲಿನ ತುಂಡೊಂದನ್ನಿರಿಸಿ) ನಂಬ ತೊಡಗಿರುವುದು ನಿಖರವಾಗುತ್ತದೆ . ಇದಕ್ಕೆ ಆಧಾರವಾಗಿ ಈಗ ಇರುವ ಬ್ರಹ್ಮಸ್ಥಾನಗಳು , ಆಲಡೆಗಳು , ಬೂತ - ದೈವಗಳ ಸಹಿತದ ಸಮೂಹ ಆರಾಧನಾ ನೆಲೆಗಳು ಇವೆ .ಆ ಸಂದರ್ಭದಲ್ಲಿ ನಾಗನು ಸಮೂಹದಲ್ಲೆ ಬೂತ - ದೈವಗಳೊಂದಿಗೆ ಪೂಜೆಗೊಳ್ಳುತ್ತಿದ್ದ . ಮುಂದೆ "ಬೆರ್ಮೆರ್", ಬೆಮ್ಮೆರ್ , ಬಿಮ್ಮೆರ್ ಎಂದರೆ 'ತುಳುವಿನ ದೇವರು' ( ಡಾ.ಜನಾರ್ದನ ಭಟ್ ಅವರ ಸಂಶೋಧನೆ) . ಈ 'ಬ್ರಹ್ಮ'( ಬೆರ್ಮೆರ್) ಪ್ರಧಾನವಾಗಿ ಆರಾಧನೆಗಳು ನಿಚ್ಚಳವಾದಾಗ ಬೆರ್ಮೆರ್(ಬ್ರಹ್ಮ) ಮುಖ್ಯವಾಯಿತು . ಬ್ರಹ್ಮನ ನೆಲೆಯಿಂದಾಗಿ ಅವು ಬ್ರಹ್ಮಸ್ಥಾನಗಳಾದುವು .ಹೇಗೆ ಬೆರ್ಮೆರ್ ತುಳುವಿನ ದೇವರೋ ಹಾಗೆಯೇ ಬ್ರಹ್ಮ - ಬೆರ್ಮೆರ್ ಇರುವ ತಾಣ ತುಳುವರ ದೇವಸ್ಥಾನ ಅದೇ ಬ್ರಹ್ಮಸ್ಥಾನವಾಯಿತು. ಇವೇ ಮೂಲದ ಬೆರ್ಮೆರ್ ಪ್ರಧಾನವಾದ ಸಮೂಹ ಪೂಜಾ ಸ್ಥಾನ . ಇತ್ತೀಚೆಗಿನ ದಶಕಗಳಲ್ಲಿ ತುಳುನಾಡಿನ ಅಥವಾ ಕರೆನಾಡಿನ ಬೆರ್ಮೆರ್ - ಬೆಮ್ಮೆರ್ - ಬಿಮ್ಮೆರ್ ಉತ್ತರಕನ್ನಡದಲ್ಲಿ ಗುರುತಿಸಲಾಗುವ 'ಬೊಮ್ಮಯ' ಮುಂತಾದ ಹೆಸರುಗಳಿಂದ ನಂಬಲಾದ ಬೆರ್ಮೆರ್ ಬಗ್ಗೆ ಸ್ಪಷ್ಟತೆ ಇಲ್ಲವಾಯಿತು , ನಾಗ ಪಾರಮ್ಯ ಅಧಿಕವಾಯಿತು ಹಾಗಾಗಿ ನಮ್ಮ ಪುರಾತನ 'ಬೆರ್ಮಸ್ಥಾನ'ಗಳು"ನಾಗ - ಬ್ರಹ್ಮಸ್ಥಾನ" ಗಳಾಗಿ ಪರಿವರ್ತನೆಯಾದುವು . |ಮೂಲದ ನಾಗಾರಾಧನೆ| ವೈದಿಕ ಆಗಮನ ಪೂರ್ವದ ನಾಗಾರಾಧನಾ ವಿಧಾನಗಳು ಅಲ್ಲಲ್ಲಿ ಉಳಿಕೆಯಾಗಿ ಉಳಿದುಕೊಂಡಿವೆ . ಈ ಲೇಖಕ ಗುರುತಿಸಿ ಪತ್ರಿಕೆಗೆ ಬರೆದಿರುವ 12 -13 ನಾಗಬನಗಳಲ್ಲಿ ಇಂದಿಗೂ ಮೂಲದ ನಾಗನ ಆರಾಧನೆ ಮೂಲಕ್ರಮದಂತೆ ನಡೆಯುತ್ತಿದೆ ( ಇನ್ನೂ ಇರಬಹುದು , ಇದೆ . ಪತ್ರಿಕೆಗಳು ಆ ಕುರಿತ ಲೇಖನಗಳನ್ನು ಪ್ರಕಟಿಸಿವೆ) . ಕಾಡ್ಯನ ಮನೆಗಳಲ್ಲಿ , ಮೂಲಿಗರ ಮೂಲಸ್ಥಾನಗಳಲ್ಲಿ ನಾಗರಪಂಚಮಿ ಆರಾಧನೆ ಇರುವುದಿಲ್ಲ . ಈ ಆರಾಧನಾ ಉಳಿಕೆಗಳನ್ನು ಮತ್ತು ಅಲ್ಲಿಯ ವಿಧಿಯಾಚರಣೆಗಳನ್ನು ಆಧರಿಸಿ "ನಾಗರಪಂಚಮಿ ತುಳುನಾಡಿನ ನಾಗಾರಾಧನಾ ಪರ್ವ ದಿನವೇ" ಎಂಬ ಸಂಶಯ ಬರುತ್ತದೆ . ಇವುಗಳೆಲ್ಲ ಪುರಾತನ ಬನಗಳು , ಮೂಲದ ಜನವರ್ಗದವರ ಆರಾಧನಾ ನೆಲೆಗಳು ಎಂಬುದು ಮತ್ತಷ್ಟು ಮೇಲಿನ ಊಹೆಗೆ ಪುಷ್ಟಿ ನೀಡುತ್ತದೆ . ನಮ್ಮಲ್ಲಿದ್ದ ,ಈಗಲೂ ಉಳಿದಿರುವ 'ಬೇಷದ ತನು" ಎಂಬ ಆಚರಣೆ ಈ ಸಂಶಯವನ್ನು ದೃಢಪಡಿಸುತ್ತದೆ .ಅಂದರೆ ಕೃಷಿ - ಬೇಸಾಯಕ್ಕೆ ಪೂರ್ವಭಾವಿಯಾಗಿ ನಮ್ಮ ದೈವ - ದೇವರನ್ನು ಪೂಜಿಸುವ ಪದ್ಧತಿಯೊಂದು ನಮ್ಮಲ್ಲಿದೆ . ಅದಕ್ಕಾಗಿಯೇ ಬೇಷದ ತನು - ತಂಬಿಲ ನಮ್ಮಲ್ಲಿ ಮುಖ್ಯವಾದುದು. ಪಗ್ಗು ತಿಂಗಳು ಬರುವ ಸಂಕ್ರಮಣ (ಮೇಷ ಸಂಕ್ರಮಣ) ಎಂದರೆ 'ಪಗ್ಗು ಬರ್ಪಿ ಸಂಕ್ರಾಂದಿ'ಯಂದು ಆಚರಣೆಗಳು , ತನು ಹೊಯ್ಯುವ ವಿಧಿಗಳು ನಡೆಯುವ ಬನಗಳು ಗುರುತಿಸಲ್ಪಟ್ಟಿವೆ . ಹಾಗೆಯೇ ಇಂತಹ ಅಪೂರ್ವ ನಾಗಬನಗಳು ವೈದಿಕೀಕರಣಕ್ಕೆ ಮತ್ತು ವೈಭವೀಕರಣಕ್ಕೆ ಒಳಗಾಗುತ್ತಿವೆ . ಇದು ವೈದಿಕಾನುಕರಣೆಯ ಪ್ರಭಾವದಿಂದ . ನಮ್ಮ ಕಾಳಜಿ ಆರಾಧನಾ ವಿಧಾನದ ಮೂಲ ಮತ್ತು ವೈವಿಧ್ಯತೆಯ ಅನ್ವೇಷಣೆ ಅಥವಾ ತಿಳಿದುಕೊಳ್ಳುವುದೇ ಹೊರತು ಆಕ್ಷೇಪಗಳಲ್ಲವಲ್ಲ . ನಾಗನಿಗೆ 'ಅಭಿಷೇಕ'ವಲ್ಲ , ತನು ಹೊಯ್ಸುವುದು ( ತನು ಮಯಿಪಾವುನು). 'ಪ್ರಸನ್ನಪೂಜೆಯಲ್ಲ ; ತಂಬಿಲಕಟ್ಟಾವುನು . "ತನು ಮಯಿಪಾವೊಡು ತಂಬಿಲಕಟ್ಟಾವೊಡು" ಎನ್ನವುದೇ ನಾಗಸ್ಥಾನ - ಮೂಲತಾನಗಳ ಸಂದರ್ಶನದ ಉದ್ದೇಶವಾಗಿರುತ್ತದೆ . | 'ನಾಗಬನ'ಗಳು 'ವನ'ಗಳಾಗಿಯೇ ಇರಲಿ | ಮಾನವ ವಾಸ್ತವ್ಯದ ಹರವು ವಿಸ್ತಾರವಾಗುತ್ತಿರುವಂತೆ ಅಥವಾ ನಾಗ ಹರಿದಾಡುವುದು ಹೆಚ್ಚಾದಾಗ , ದರ್ಶನವಾದಾಗ ನಾಗ ಪ್ರೀತ್ಯರ್ಥವಾಗಿ ನಾಗನನ್ನು ಮಾತ್ರ ಪ್ರತ್ಯೇಕವಾಗಿ ನಂಬುವ ಅನಿವಾರ್ಯತೆ ಬಂದೊದಗಿತು .ಆಗ ನಾಗಬನಗಳು ಅಸ್ತಿತ್ವಕ್ಕೆ ಬಂದಿರುವುದನ್ನು ಸಂಶೋಧಕರು ಗಮನಿಸಿದ್ದಾರೆ . ಮಾನವ ಸಂಕಲ್ಪ - ಪ್ರಕೃತಿ ನಿರ್ಮಿಸಿದ ,ಶ್ರದ್ಧೆಯಿಂದ ಕಾಪಿಟ್ಟನಾಗ ಬನ ಎಂದರೆ ,ಅದೊಂದು ದಟ್ಟವಾದ ಅರಣ್ಯದ ಸಣ್ಣ ಮಾದರಿ . ಇದೊಂದು ಸುರಕ್ಷಿತ ಪರಿಸರ . ಮಾನವ ಅಭಿಯೋಗವಾಗದ ಒಂದು ನಾಗ ಬನದಲ್ಲಿ ಕನಿಷ್ಠ 50-60 ವೃಕ್ಷ - ಗಿಡ - ಬಳ್ಳಿ - ಪೊದೆಗಳ ಪ್ರಭೇದ , 20-30 ಔಷಧೀಯ ಸಸ್ಯಗಳು ಇರುತ್ತವೆ ಎಂಬುದು ಸಂಶೋಧಕರ , ಪರಿಸರ ಆಸಕ್ತರ ಅಭಿಪ್ರಾಯ . ಇಲ್ಲಿ ಬೆಳೆದ ಮರ- ಗಿಡ- ಬಳ್ಳಿಗಳನ್ನು ಆಶ್ರಯಿಸಿ ಪಕ್ಷಿಸಂಕುಲ ನಿರ್ಭಯದಿಂದ ಬದುಕುತ್ತವೆ . ಕ್ರಿಮಿಕೀಟಗಳಿಗೂ ಇದು ಆಶ್ರಯಸ್ಥಾನ .ಹೀಗೆ ನಾಗಬನಗಳು ಜೀವ ವೈವಿಧ್ಯಗಳ ತಾಣವೂ ಹೌದು . ಇದು ನಿಜ ಅರ್ಥದ ವನ , ಬನ.ಮರ ಗಿಡಗಳಿಲ್ಲದ "ನಾಗ ಬನ"ದಲ್ಲಿ ನಾಗವೇದಿಕೆ , ನಾಗಗುಡಿ , ನಾಗಮಂದಿರಗಳು ನಿರ್ಮಾಣವಾಗುತ್ತಿರುವುದನ್ನು ಇತ್ತೀಚೆಗಿನ ನಾಲ್ಕೈದು ದಶಕಗಳಿಂದ ಕಾಣುತ್ತಿದ್ದೇವೆ . ತಂಪನ್ನು ಬಯಸಿ ತಂಪನ್ನು ಆಶ್ರಯಿಸುವ ಪ್ರಾಣಿ ನಾಗ ಹುತ್ತದ ಆಳದಲ್ಲಿ , ವಿಶಾಲವಾದ ಮರಗಳ ಬುಡದಲ್ಲಿ , ಒತ್ತೊತ್ತಾಗಿ ಗಿಡ ಮರಗಳು ಬೆಳೆದಿರುವಲ್ಲಿ , ಮನುಷ್ಯ ಸಂಚಾರವಿಲ್ಲದೆ ತರಗೆಲೆಗಳು ಬಿದ್ದು ದಪ್ಪನೆಯ ಹಾಸು ನಿರ್ಮಾಣವಾದಲ್ಲಿ ಅದರಡಿಯಲ್ಲಿ ನಾಗನ ವಾಸಸ್ಥಾನ . ಇಲ್ಲೆ ಸಂತಾನಾಭಿವೃದ್ಧಿ . ಇಂತಹ ಸಹಜವಾದ ವ್ಯವಸ್ಥೆ ಇದ್ದುದನ್ನು ಹಾಳುಗೆಡಹದೆ ರಕ್ಷಿಸಿದರೆ ಇದೂ ಒಂದು ರೀತಿಯ ನಾಗಾರಾಧನೆ .ಹಿಂದೆ ಆಟಿ( ಕರ್ಕಾಟಕ ಮಾಸ) ತಿಂಗಳ ಅಮಾವಾಸ್ಯೆಯಂದು ಮಾತ್ರ ನಾಗಬನಗಳ ಅನಗತ್ಯ ಬೆಳವಣಿಗೆಗಳನ್ನು ಮಾತ್ರ ಕಡಿದು ನಾಗರಪಂಚಮಿಗೆ ಬನ ಪ್ರವೇಶಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದರು . ಆದರೆ ಇದೇ ರೀತಿಯ ನಾಗಬನಗಳ ನಾಶ ಪ್ರಕ್ರಿಯೆ , ಆಶಯ ಮರೆತ ವೈಭವೀಕರಣ ಅವ್ಯಾಹತವಾಗಿ ನಡೆದರೆ ಮುಂದೊಂದು ದಿನ ಕಾಂಕ್ರೀಟ್ ಕಟ್ಟೆಯನ್ನೊ , ಗುಡಿಯನ್ನೊ , ಮಂದಿರವನ್ನೋ ನಾಗಬನವೆಂದು ನಮ್ಮ ಮಕ್ಕಳಿಗೆ ತೋರಿಸಬೇಕಾಗಬಹುದು. ಆಗ ಮಾತ್ರ ಮಕ್ಕಳು ' ಬನ ಎನ್ನುತ್ತೀರಿ ಎಲ್ಲಿದೆ ವನ' ಎಂದು ಪ್ರಶ್ನಿಸಿದರೆ ನಮ್ಮಲ್ಲಿ ಉತ್ತರ ಇದೆಯಾ ? ಪ್ರತಿ ವರ್ಷ ಕನಿಷ್ಠ ಒಂದೆರಡು ಬಾರಿಯಾದರೂ ನಾಗ ಮೂಲಸ್ಥಾನಕ್ಕೆ "ತನುತಂಬಿಲ" ಸೇವೆಸಲ್ಲಿಸಲು ಹೋಗುವ ನಾವು ನಾಗರಪಂಚಮಿಯ ಪರ್ವದಲ್ಲಿ ಮೂಲಕ್ಕೆ ಹೋಗುವಾಗ ಒಂದು ಗಿಡವನ್ನು ಕೊಂಡೊಯ್ಯುವ ,ಬನದ ಪರಿಸರದಲ್ಲಿ ನೆಟ್ಟು ವನ ಮಹೋತ್ಸವ ಆಚರಿಸೋಣ . ಆ ವೇಳೆಯಲ್ಲಿ ಗಿಡನೆಡುವ ಅಭಿಯಾನ ಎಲ್ಲೆಡೆ ನೆರವೇರುತ್ತಿರುತ್ತವೆ . ಈ ವರ್ಷ ಮೂಲಕ್ಕೆ ಹೋಗುವ , ಗಿಡ ನೆಡುವ ಪ್ರಯತ್ನಬೇಡ . ಬನಗಳ ಮರುನಿರ್ಮಾಣಕ್ಕೆ ಹೀಗೊಂದು ಅವಕಾಶವಿದೆ. ಬರಹ : ಕೆ .ಎಲ್ .ಕುಂಡಂತಾಯ
ಕರೋನಾ ಹೊಸ ಬದುಕು ರೂಪಿಸಲು ಅಪೂವ೯ ಅವಕಾಶ
Posted On: 23 Jul 2020, 07:25 PM
ಕರೋನಾದಿಂದ ಎಲ್ಲಾ ಜನರ ಮನಸ್ಥಿತಿಯಲ್ಲಿ ತುಂಬಾ ಬದಲಾವಣೆಯಾಗುತ್ತಿದೆ.ಈ ವೈರಸ್ ಪರೋಕ್ಷವಾಗಿ ಜನರ ಸಂಬಂಧ ಮತ್ತು ಬದುಕಿನ ಗುಣಮಟ್ಟವನ್ನು ಬದಲಾಯಿಸುತ್ತಿದೆ. ಆದರೆ ನಾವು ಈ ಬದಲಾವಣೆ ಒಪ್ಪಿಕೊಳ್ಳಲು ತಯಾರಾಗಿಲ್ಲ. ಬದುಕು ಎಂದಿನಂತೆ ಸಹಜ ಸ್ಥಿತಿಗೆ ಬರುತ್ತದೆ ನಾವು ಯಾಕೆ ಬದಲಾವಣೆಯಾಗಬೇಕು ಎನ್ನುವ ಪ್ರಶ್ನೆ, ಹಲವರದ್ದಾಗಿದೆ. ಇದನ್ನು ನಾವು ಗುಣಾತ್ಮಕ ಸ್ಥಿತಿಗತಿಗಿಂತಲೂ ಬದಲಾವಣೆಗೆ ಒಗ್ಗಿಕೊಳ್ಳಲು ಸಿದ್ದವಾಗದ ಹೆದರಿಕೆ ಎಂದು ಹೇಳಬಹುದು. ಮಾನವ ಜನಾಂಗ ಸಹಸ್ರಾರು ವಷ೯ಗಳಿಂದ ಎಲ್ಲಾ ಸಂಕಷ್ಟಗಳು ಎದುರಿಸಿಯೂ ವಿಕಸನಗೊಂಡು ಬಲಗೊಳ್ಳಲು ಅದಕ್ಕೆ ಕಾರಣ ನಮ್ಮ ಲಕ್ ಅಲ್ಲ ಬದಲಾಗಿ ಬದಲಾವಣೆಗೆ ತ್ವರಿತವಾಗಿ ಒಗ್ಗಿಕೊಳ್ಳುವ ಗುಣ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಈ ವಷ೯ ಜನರ ಬಿಡುವಿಲ್ಲದ ಜಂಜಾಟಕ್ಕೆ ಬ್ರೇಕ್ ಬಿದ್ದಿದೆ.ಜನರ ಅಸೆ ಆಕಾಂಕ್ಷೆಗಳ ಈಡೇರಿಕೆಗೆ ತೊಂದರೆಯಾದರೂ ಹಲವಾರು ವಷ೯ಗಳಿಂದ ಸವಿ೯ಸ್ ಇಲ್ಲದೆ ತೊಂದರೆಗಳ ಮಧ್ಯೆ ಸಿಲುಕಿದ ಬದುಕಿಗೆ ಹೊಸ ಚೈತನ್ಯ ತುಂಬಿ ರಿಪೇರಿ ಮಾಡಲು ಹೊಸ ಅವಕಾಶ ಈ ಕರೋನಾ ಅವಧಿ ನಮಗೆ ಕೊಟ್ಟಿದೆ. ಹಲವಾರು ಜನರಿಗೆ ಅದರಲ್ಲಿಯೂ ಉದ್ಯೋಗಿಗಳಿಗೆ, ಹೊಸ ಉದ್ಯಮಿಗಳಿಗೆ ಈಗ ನಿಸ್ಸಂದೇಹವಾಗಿ ಅತ್ಯಂತ ಬಿಕ್ಕಟ್ಟಿನ ಸಮಯವಾದರೂ ಈ ಹಿನ್ನಲೆಯಲ್ಲಿ ಸಾಗಿ ಬಂದ ಹಾದಿಯ ಅವಲೋಕನ ನಡೆಸಿ ಹೊಸ ರೂಪುರೇಶೆ ಮತ್ತು ನಾವು ಮುಂದೆ ಯಾವ ರೀತಿಯಲ್ಲಿರಬೇಕು ಎಂದು ಯೋಜನೆ ರೂಪಿಸಲು ಅಪೂವ೯ ಅವಕಾಶ. ಈ ಕರೋನಾ ನಮಗೆ ನೀಡಿದೆ ಇದನ್ನು ಸಮಥ೯ವಾಗಿ ಎಲ್ಲರೂ ಬಳಸಿದರೆ ಮುಂದೆ ಉತ್ತಮ ಜೀವನ ಸಾಗಿಸಲು ಸಹಾಯವಾಗುತ್ತದೆ. ಜಗತ್ತಿನ ಹಲವಾರು ದೇಶಗಳು ಸೇರಿದಂತೆ ನಮ್ಮ ವಿವಿಧ ರಾಜ್ಯಗಳಲ್ಲಿ ಜನರು ತಮ್ಮ ಬದುಕಿನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ ಸರಕು ಸರಂಜಾಮುಗಳೊಂದಿಗೆ ನಗರ ಬಿಟ್ಟು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ.ಇವರು ನಗರಗಳಿಗೆ ಹೆದರಿ ಹೋಗುತ್ತಿದ್ದಾರೆ ಎಂದರೆ ತಪ್ಪಾಗ ಬಹುದು ಅವರು ಹಳ್ಳಿಗೆ ಹೋದಾಗ ತಮ್ಮ ಹೊಸ ಜೀವನ ರೂಪಿಸಲು ಬೇಕಾದ ಯೋಜನೆ ರೂಪಿಸಲು ಪ್ರಾರಂಭಿಸಿದ್ದಾರೆ.ಭಾರತದಲ್ಲಿ ಇಷ್ಟು ವಷ೯ಗಳಲ್ಲಿ ನಡೆಯದ ಕೃಷಿ ಕ್ರಾಂತಿ ಈ ವಷ೯ ನಡೆಯುತ್ತಿದೆ. ಪಾಳು ಬಿದ್ದ ಹಲವಾರು ಗದ್ದೆಗಳು ಕೃಷಿಯ ಹೊಸ ಉಡುಗೆಯಲ್ಲಿ ಕಂಗೊಳ್ಳಿಸುತ್ತಿದೆ.ಹಳ್ಳಿಗಳಲ್ಲಿ ನವೀನ ಮಾದರಿಯ ಉದ್ಯಮಗಳು ಪ್ರಾರಂಭವಾಗಿವೆ. ನಿಧಾನವಾಗಿ ಉದ್ಯೋಗ ಸೃಷ್ಠಿಯ ಹೊಸ ಪವ೯ ಪ್ರಾರಂಭವಾಗಿದೆ. Back to Basic ಎಂಬಂತೆ ಮೂಲ ತತ್ವಕ್ಕೆ ನಾವು ಬರಲಾರಂಭಿಸಿದ್ದೆವೆ.ಚೀನಾ ಸೇರಿದಂತೆ ವಿದೇಶಿ ವಸ್ತುಗಳ ಬಳಕೆ ಕಡಿಮೆಯಾಗುತ್ತಿವೆ. ಆತ್ಮ ನಿಭ೯ರ ದೇಶವಾಗಲು ನಾವು ಸಾಗುತ್ತಿದ್ದೇವೆ. ಆದರೆ ಕೆಲವರು ಒತ್ತಡಗಳಿಗೆ ಒಳಗಾಗಿ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಎಲ್ಲಿ ನಮ್ಮ ಇಮೇಜ್ ಕಡಿಮೆಯಾಗಬಹುದು ಎಂಬ ಕಾರಣದಿಂದ ಹತಾಶೆಯ ಮನೋಭಾವನೆ ಕಾಡಲಾರಂಭಿಸಿದೆ. ಎಲ್ಲಿ ನಾವು ಬೇರೆಯವರ ಎದುರು ಇಮೇಜ್ ಕಡಿಮೆಯಾಗಿ ಅವರಲ್ಲಿ ನಗೆಪಾಟಳಿಗೆ ಒಳಗಾಗುತ್ತವೆಯೋ ಎಂಬ ಹತಾಶೆ ಬೇಗುದಿಯಿಂದ ಸಾಲ ಮಾಡಿದರೂ ಪರವಾಗಿಲ್ಲ ನಮ್ಮ ಜೀವನ ಮೊದಲಿನ ರೀತಿಯಲ್ಲಿ ಇರಬೇಕು ಯಾವುದೇ ಬದಲಾವಣಿ ಯಾಗಬಾರದು ಎಂದು ಸಾಲ ಮಾಡಿ ನಿಜವಾದ ರೀತಿಯಲ್ಲಿ ನಗೆಪಾಟಿ ಒಳಗಾಗುತ್ತಿರುವುದು ದುರಂತದ ವಿಷಯ. ಸಾಮಾಜಿಕ ಸ್ಟೇಟಸ್‌ಗೆ ಹೆದರಿ ಈ ರೀತಿ ಮಾಡುವುದು ಸರಿಯಲ್ಲ ಯಾರದೋ ಎದುರು ನನ್ನ ಇಮೇಜ್ ಕಾಪಾಡಲು ಈ ರೀತಿ ಮಾಡುವುದು ಬಿಟ್ಟು ನಾವು ಬಿದ್ದಾಗ ನೆಗಾಡುವವರನ್ನು ಬಿಟ್ಟು ಬಿದ್ದಾಗ ಕೈ ಎತ್ತಿ ನಡೆಸುವವರ ಬಗ್ಗೆ ನಾವು ಚಿಂತನೆ ಮಾಡೋಣ .ಈಗ ನಮ್ಮ ಸ್ಟೇಟಸ್ ಮುಖ್ಯವಲ್ಲ ಬೇರೆಯವರನ್ನು ಒಲೈಸಲು ಸಾಲ ಮಾಡಿ ಅದನ್ನು ಕಟ್ಟಲು ಸಾಧ್ಯವಾಗದೆ ಒತ್ತಡಕ್ಕೆ ಒಳಗಾಗಿ ಮಾನಸಿಕ ದುಗುಡವನ್ನು ಮೈಗೆ ಎಳೆಯುವುದು ಸರಿಯಲ್ಲ. ಈ ರೀತಿಯಲ್ಲಿ ನಡೆಯದೆ ಹೊಸ ಬದುಕಿಗೆ ಪರಿವತ೯ನೆಗೊಳ್ಳವ ಸಂದಭ೯ ಆಗುವ ಬದಲಾವಣೆಗೆ ನಾವು ಸಿದ್ದರಿರಬೇಕು . *ನಮ್ಮ ಬದುಕು ನಮ್ಮ* *ಕೈಯಲ್ಲಿದೆ*: - ಯಾವ ರೀತಿಯ ನಿಧಾ೯ರ , ನಮ್ಮ ಬದುಕಿಗೆ ಅದೇ ರೀತಿ ನಮ್ಮನ್ನು ನಂಬಿರುವವರ ಬದುಕಿಗೆ ಒಳ್ಳೆಯದು ಮಾಡುತ್ತದೆ ಯೋ ಆ ನಿಧಾ೯ರ ಕೈಗೊಳ್ಳಲು ಹಿಂದೆ ಸರಿಯಬಾರದು. ನಾವು ಬದುಕುವುದು ನಮಗಾಗಿ ಬೇರೆಯವರು ಏನೆಂದಾರು ಎಂದು ಯೋಚಿಸುವ ಬದಲು ನಮ್ಮ ಆತ್ಮಕ್ಕೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸೋಣ. ಇನ್ನೋಬ್ಬರಿಗಾಗಿ ನಾವು ಕಟ್ಟಿಕೊಂಡ ಭ್ರಮೆ ಕನಸುಗಳನ್ನು ತ್ಯಾಗ ಮಾಡದೆ ನಮಗಾಗಿ ನಾವು ಯೋಚಿಸೋಣ ಯೋಜನೆ ಹಾಕಿಕೊಳ್ಳಲು ತಯಾರಾಗೋಣ. ಬೇರೆಯವರ ಎದುರು ನಾವು ಸಂತೋಷವಾಗಿದ್ದೇವೆ ಎಂದು ನಂಬಿಸಲು ಪ್ರಯತ್ನ ಮಾಡದೆ ನಮಗೆ ನಾವು ಸಂತೋಷಗೊಳ್ಳಬೇಕಾಗಿದೆ. ಇದಕ್ಕಿಂತ ದೊಡ್ಡ ಇಮ್ಯುನಿಟಿ ಮತ್ತೊoದಿಲ್ಲ. ಮತ್ತೊಬ್ಬರ ಖುಷಿಗಾಗಿ ನಮ್ಮ ಖುಷಿಯನ್ನು ಬಲಿ ಕೊಡದೆ ಮತ್ತೊಬ್ಬರಿಗೆ ನಾವು ನಗುವಾಗದಿದ್ದರೂ ಪರವಾಗಿಲ್ಲ ನಮಗಾಗಿ ನಾವು ನಗೋಣ. ನಮ್ಮ ನಕಲಿ ನಗುಮುಖ ಮತ್ತೊಬ್ಬರಿಗೆ ತೋರಿಸುವುದು ಬೇಡ ಆ ನಿಜವಾದ ನಗು ಮುಖ ನಮ್ಮ ಅಂತರಂಗದ ಹೊಸ ಭಾವನೆ ಬೆಳೆಸಲು ಸಹಾಯವಾಗುತ್ತದೆ. ಕರೋನಾಕ್ಕಾಗಿ ಅಳದೆ ಅದನ್ನು ಅಭಿಮನ್ಯುವಿನಂತೆ ಎದುರಿಸಬೇಕು. ನಮ್ಮ ಆರೋಗ್ಯ ಸಕಾ೯ರ ಕೈಯಲಿಲ್ಲ ಅದು ನಮ್ಮ ಕೈಯಲ್ಲಿದೆ. ಹೊಸ ಪವ೯ತೆ ಎರಲು ತಯಾರು ಮಾಡಿಕೊಳ್ಳಿ ಏಳು ಬೀಳು ಸಹಜ ಇದರೊಂದಿಗೆ ಬದುಕಿದಾಗ ಮಾತ್ರ ನಮ್ಮ ಬದುಕಿಗೆ ಸಾರ್ಥಕ್ಯ ಬರುವುದು. ಕರೋನಾದೊಂದಿಗೆ".ಕುಚ್ ತೋ ಕರನಾ ಹೈ " ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ದೈವಾರಾಧಕರ ಒಕ್ಕೂಟದಿಂದ ಧಾರ್ಮಿಕ ಕಾರ್ಯಕ್ರಮ ನಡೆಸಲು ಕಾಪು ಶಾಸಕ ಲಾಲಾಜಿಗೆ ಮನವಿ
Posted On: 23 Jul 2020, 06:59 PM
ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಹಾಗೂ ಕಾಪು ಘಟಕ ವತಿಯಿಂದ ಕಾಪು ವಲಯ ಶಾಸಕರಾದ ಲಾಲಾಜಿ ಮೆಂಡನ್ ಅವರಿಗೆ ಉಡುಪಿ ಜಿಲ್ಲಾ ಸಮಸ್ತ ದೈವ ಚಾಕ್ರಿ ವರ್ಗದವರ ಮನವಿಯನ್ನು ಕೊಡಲಾಯಿತು, ಈ ಮನವಿಯಲ್ಲಿ ದೈವ ಚಾಕ್ರಿ ವರ್ಗದವರಿಗೆ ಸಿಕ್ಕಬೇಕಾದ ಸರ್ಕಾರದಿಂದ ಸವಲತ್ತು ಹಾಗೂ ಕೋರನದ ತುರ್ತು ಸಂದರ್ಭದಲ್ಲಿ ತಕ್ಕಮಟ್ಟಿಗೆ 150 ಜನರ ಒಳಗೆ ದೈವಸ್ಥಾನದ ಧಾರ್ಮಿಕ ಕಾರ್ಯಕ್ರಮ ನೇಮೋತ್ಸವ ಮಾರಿಪೂಜೆ ದರ್ಶನ ಸೇವೆ ಇತರ ಸೇವೆಗಳಿಗೆ ಸರ್ಕಾರದಿಂದ ಅನುಮತಿ ಕೊಡಬೇಕಾಗಿ ಮನವಿ ಸಲ್ಲಿಸಿರುತ್ತಾರೆ. ನಂತರ ಶಾಸಕರು ಮನವಿಯನ್ನು ತೆಗೆದುಕೊಂಡು ನಿಮ್ಮ ಸಮಸ್ಯೆಗೆ ನಾನು ಡಿಸಿ ಅವರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಯವರಿಗೆ ಇದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಎಲ್ಲಾ ಸದಸ್ಯರಿಗೆ ಧೈರ್ಯ ತುಂಬಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಜಿಲ್ಲಾಧ್ಯಕ್ಷರಾದ ರಾಘವ ಸೇರಿಗಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ ಕೋಶಾಧಿಕಾರಿ ಶ್ರೀಧರ್ ಪೂಜಾರಿ ಕ್ರೀಡಾ ಕಾರ್ಯದರ್ಶಿ ದಯೆಶಾ ಕೋಟ್ಯಾನ್ ಕಾಪು ಘಟಕದ ಅಧ್ಯಕ್ಷರಾದ ಯಶೋಧರ್ ಶೆಟ್ಟಿ ಉಪಾಧ್ಯಕ್ಷರಾದ ಮಾಧವ ಪಂಬದ ಸತೀಶ್ ಪೂಜಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಕ್ಕಳಿಗಾಗಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ
Posted On: 23 Jul 2020, 03:06 PM
ಜೆಸಿಐ ಕಟಪಾಡಿ ರೀಜನ್ ಎ ಝೋನ್ xv ಮತ್ತು ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಕ್ಕಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ. ಮನೆಯಲ್ಲಿಯೇ ರಚಿಸಿ ಕಳುಹಿಸಿದ ಉತ್ತಮ ಚಿತ್ರಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ, ಟ್ರೋಫಿ, ಪ್ರಮಾಣಪತ್ರವಿದ್ದು, ಭಾಗವಹಿಸಿದ ಎಲ್ಲರಿಗೂ ಇ-ಸರ್ಟಿಫಿಕೇಟ್ ನೀಡಲಾಗುವುದು. ಬಹುಮಾನವನ್ನು ಆಗಸ್ಟ್ 15 ರಂದು ಕಟಪಾಡಿ ಪಳ್ಳಿಗುಡ್ಡೆ ಜೆಸಿ ಭವನದಲ್ಲಿ ವಿತರಿಸಲಾಗುವುದು. ಕಿರಿಯ ಪ್ರಾಥಮಿಕ ವಿಭಾಗ (LKG-UKG-1std) ನಮ್ಮ ರಾಷ್ಟ್ರ ಧ್ವಜ, ಪ್ರಾಥಮಿಕ ವಿಭಾಗ (2-3-4std) ಧ್ವಜಾರೋಹಣ ಸಮಾರಂಭ. ಹಿರಿಯ ಪ್ರಾಥಮಿಕ ವಿಭಾಗ (5-6-7std) ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ, ಹೈಸ್ಕೂಲ್ ವಿಭಾಗ (8-9-10std) ಸೇವ್ ಅವರ್ ನೇಶನ್- ಸ್ಟಾಪ್ ಚೈನ ಮೆಟೀರಿಯಲ್ಸ್ ಅಥವಾ ಮೈ ನೇಶನ್ ಮೈ ಆರ್ಮಿ. ಆಗಸ್ಟ್ 12 ರೊಳಗೆ ಮಕ್ಕಳ ಹೆಸರು, ತರಗತಿ, ಶಾಲೆಯ ಹೆಸರು, ಮನೆಯ ವಿಳಾಸ, ಮೊಬೈಲ್ ಸಂಖ್ಯೆ ಸಹಿತ ಚಿತ್ರವನ್ನು ಕೆ. ನಾಗೇಶ್ ಕಾಮತ್, ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್, ದೇವ ಸುಮ, ಚಿಲ್ಮಿ ಮನೆ, ಕಟಪಾಡಿ-574105 ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಜೆಸಿ ದಿನೇಶ್ ಎಸ್. ಜೆ : 9448623400 ಕೆ.ನಾಗೇಶ್ ಕಾಮತ್ : 9886432197
ಜಿಲ್ಲಾ ರಂಗಮಂಟಪ ಮೈದಾನ ದುಸ್ಥಿತಿ ವರದಿಗೆ ಸ್ಪಂದಿಸಿದ ನಗರಾಭಿವೃದ್ಧಿ ಪ್ರಾಧಿಕಾರ
Posted On: 21 Jul 2020, 10:36 PM
ಉಡುಪಿ ಬೀಡಿನಗುಡ್ಡೆ ಜಿಲ್ಲಾ ರಂಗ ಮಂದಿರ ರ ಆವರಣ ಗೋಡೆ ಕುಸಿದು 3 ತಿಂಗಳಾದರೂ ಇನ್ನೂ ದುರಸ್ತಿಯಾಗದ ಕಾರಣ ರಂಗಮಂದಿರ ಆವರಣದಲ್ಲಿ ಕುಡುಕರು, ಅಲೆಮಾರಿಗಳು ತನ್ನ ಆಶ್ರಯತಾಣವಾಗಿ ಮಾಡಿದ್ದರು ಈ ಬಗ್ಗೆ ವರದಿ ಗೆ ಸ್ಪಂದಿಸಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಈಗಾಗಲೇ ಈ ಕಟ್ಟಡವನ್ನು ನಗರಸಭೆಗೆ ಹಸ್ತಾoತರಿಸಲಾಗಿದೆ.ಈ ಕೂಡಲೇ ಈ ಬಗ್ಗೆ ಕಾಮಗಾರಿ ನಡೆಸುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಈ ರೀತಿಯ ತುತು೯ ಸ್ಪಂದನೆಗೆ ಸಾವ೯ಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ
ಉಡುಪಿಯಲ್ಲಿ ಮಾಸ್ಕ್ ಹಾಕದ, ಸಾಮಾಜಿಕ ಅಂತರ ಪಾಲನೆಯಾಗದಿದ್ದರೆ ದಂಡ ವಸೂಲಿ
Posted On: 21 Jul 2020, 08:31 PM
ಉಡುಪಿ ಜುಲೈ 21 (ಕರ್ನಾಟಕ ವಾರ್ತೆ): ಕೋವಿಡ್ -19 ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಪಾಲನೆ ಕುರಿತಂತೆ ,ಸಾರ್ವಜನಿಕರು ಈ ನಿಯಮಗಳ ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು , ಜಿಲ್ಲಾಧಿಕಾರಿ ಜಿ.ಜಗದೀಶ್ ಮಂಗಳವಾರ , ಉಡುಪಿ ನಗರದಲ್ಲಿ ದಿಡೀರ್ ದಾಳಿ ನಡೆಸಿ, ನಿಮಯಗಳ ಪಾಲನೆ ಮಾಡದವರಿಗೆ ದಂಡ ವಿಧಿಸುವ ಮೂಲಕ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದರು. ಮಂಗಳವಾರ ಜಿಲ್ಲೆಯ ಎಲ್ಲಾ ನಗರ ಸ್ಥಳಿಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಏಕಕಾಲಕ್ಕೆ ನಡೆಸಲಾದ ಈ ಕಾರ್ಯಾಚರಣೆಯಲ್ಲಿ , ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಜೊತೆಯಲ್ಲಿ , ಕೋವಿಡ್-19 ನಿಯಂತ್ರಣ ಕುರಿತಂತೆ ಪ್ರತಿಯೊಬ್ಬರ ಜವಾಬ್ದಾರಿ ಕುರಿತು ಅರಿವು ಮೂಡಿಸಲಾಯಿತು. ಬಸ್ ಸ್ಟಾöಡ್ ಬಳಿಯ ಹೋಟೆಲ್ ಒಂದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಹೋಟೆಲ್ ನಲ್ಲಿ ಗ್ರಾಹಕರಿಗೆ ಕೈ ತೊಳೆಯಲು ಸೋಪ್ ಇಡದ ಕಾರಣ ಮಾಲೀಕರಿಗೆ ದಂಡ ವಿಧಿಸಿದರು, ಪೆಟ್ರೋಲ್ ಬಂಕ್ ನಲ್ಲಿ ಕ್ಯಾಷಿಯರ್ ಕೈಗವಸು ತೊಡದೆ ಹಣ ಪಡೆಯುವುದನ್ನು ಕಂಡ ಜಿಲ್ಲಾಧಿಕಾರಿಗಳು, ನೋಟಿನಿಂದಲೂ ಸಹ ಕೋವಿಡ್-19 ಹರಡಲಿದ್ದು , ಎಚ್ಚರಿಕೆ ವಹಿಸುವಂತೆ ಸೂಚಿಸಿ, ಸುರಕ್ಷತಾ ಕ್ರಮ ಪಾಲಿಸಿದ ಕ್ಯಾಷಿಯರ್ ಗೆ ದಂಢ ವಿಧಿಸಿದರು. ಮೆಡಿಕಲ್ ಶಾಪ್ ಒಂದರಲ್ಲಿ ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸದ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ ಜಿಲ್ಲಾಧಿಕಾರಿ, ಮೆಡಿಕಲ್ ನಲ್ಲಿ ವೈದ್ಯರ ಅನುಮತಿಯಿಲ್ಲದೇ ಜ್ವರ ಶೀತ ಕೆಮ್ಮು ರೋಗಗಳಿಗೆ ಔಷಧ ವಿತರಿಸದಂತೆ ಸೂಚನೆ ನೀಡಿದರು. ಅಂಗಡಿಯಲ್ಲಿ ಮಾಸ್ಕ್ ಧರಿಸದ ಅಂಗಡಿ ಮಾಲೀಕ ಮತ್ತು ಸಿಬ್ಬಂದಿಗಳಿಗೆ ದಂಡ ವಿಧಿಸಿದರು. ಹೋಟೆಲ್ ಒಂದರಲ್ಲಿ ಅಗತ್ಯ ಸುರಕ್ಷತಾ ಕ್ರಮ ಪಾಲಿಸುತ್ತಿರುವ ಕುರಿತು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ರಿಲಯನ್ಸ್ ಮಳಿಗೆಗೆ ತೆರಳಿದ ಜಿಲ್ಲಾಧಿಕಾರಿ, ಮಳಿಗೆ ಒಳಗೆ ಸೀಮಿತ ಸಂಖ್ಯೆಯ ಗ್ರಾಹಕರಿಗೆ ಮಾತ್ರ ಅನುಮತಿ ನೀಡುವಂತೆ ಹಾಗೂ ಎಲ್ಲಾ ಗ್ರಾಹಕರು ಮಾಸ್ಕ್ ಧರಿಸಿ ಖರೀದಿ ನಡೆಸುವ ಕುರಿತು ಪರಿಶೀಲನೆ ನಡೆಸಲು ಸೂಚಿಸಿ, ಒಂದೇ ವಸ್ತುಗಳ ಬಳಿ ಸಾಮಾಜಿಕ ಅಂತರವಿಲ್ಲದೇ ಗ್ರಾಹಕರು ಖರೀದಿ ನಡೆಸದಂತೆ ಒಬ್ಬ ಸಿಬ್ಬಂದಿಯನ್ನು ಪರಿಶೀಲನೆಗೆ ನಿಯೋಜಿಸುವಂತೆ ಸೂಚನೆ ನೀಡಿದರು. ನಗರಸಭೆಯ ಅಧಿಕಾರಿಗಳು ಪ್ರತಿದಿನ ಕೋವಿಡ್-19 ನಿಯಮ ಉಲ್ಲಂಘನೆ ಕುರಿತು ಪರಿಶೀಲಿಸಿ, ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಒಟ್ಟು 14 ಪ್ರಕರಣಗಳನ್ನು ದಾಖಲಿಸಿ, 2100 ರೂ ದಂಡ ವಸೂಲಿ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್ ರಾಜ್, ಇಂಜಿನಿಯರ್ ದುರ್ಗಾಪ್ರಸಾದ್, ಕಂದಾಯ ಅಧಿಕಾರಿ ಧನಂಜಯ, ಮೆನೇಜರ್ ವೆಂಕಟರಮಣಯ್ಯ, ಸಮುದಾಯ ಆರೋಗ್ಯ ವಿಭಾಗದ ನಾರಾಯಣ್, ಆರೋಗ್ಯ ನಿರೀಕ್ಷಕ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಾವರದಲ್ಲಿ ಹೀಗೊಬ್ಬ ಮಾದರಿ ಜನ ಸೇವಕನನ್ನು ನೋಡಿ
Posted On: 21 Jul 2020, 08:01 PM
ಇವರ ಹೆಸರು ಸತೀಶ್ ಸುವಣ೯ ವೃತ್ತಿಯಲ್ಲಿ ತನ್ನದೇ ಆದ ಸಲೂನ್ ಶಾಪ್ ಇಟ್ಟುಕೊಂಡಿರುವ ಇವರು ಕಳೆದ ಹಲವಾರು ವಷ೯ಗಳಿಂದ ಸಲ್ಲಿಸುತ್ತಿರುವ ಸೇವೆಯಿಂದ ಜನ ಪ್ರೀತಿಗೆ ಪಾತ್ರರಾಗಿದ್ದಾರೆ.ಇವರ ಬಗ್ಗೆ ನಿಮಗೆ ತಿಳಿಸಲು ಕಾರಣವಿದೆ ಇವರು ಬೇರೆ ಕ್ಷವ್ರಿಕರಂತೆ ಅಲ್ಲ ತನ್ನ ವಾರದ ರಜೆಯನ್ನು ಸಮಾಜಮುಖಿಯಾಗಿ ಕಳೆಯುತ್ತಾರೆ.ಜಿಲ್ಲೆಯಲ್ಲಿರುವ ಅನಾಥಾಶ್ರಮ, ವೃದ್ದಾಶ್ರಮದ ಆಶ್ರಮವಾಸಿಗಳಿಗೆ ಉಚಿತವಾಗಿ ಕ್ಷವ್ರ ಮಾಡುವ ಕಾಯಕವನ್ನು ಕಳೆದ ಹಲವಾರು ವಷ೯ಗಳಿಂದ ನಿರಂತರವಾಗಿ ಮಾಡುತ್ತಿದ್ದಾರೆ. ಸ್ಪoದನ ವಿಶೇಷ ಮಕ್ಕಳ ಶಾಲೆ, ಆಶಾ ನಿಲಯ, ಹೊಸ ಬೆಳಕು ಮಣಿಪಾಲ, ಕಾರುಣ್ಯ ಕಟಪಾಡಿ ಅದೇ ರೀತಿ ಕಾಕ೯ಳ ವಿಜೇತ ವಿಶೇಷ ಶಾಲೆಯ ನಿವಾಸಿಗಳಿಗೆ ಕ್ಷವ್ರ ಮಾಡಿ ಅವರಿಗೆ ನೆರವಾಗುತ್ತಿದ್ದಾರೆ. ಆಶ್ರಮವಾಸಿಗಳಿಗೆ ಕ್ಷವ್ರ ಮಾಡಲು ಈ ಹಿಂದೆ ಸಲೂನ್ ಗಳಿಗೆ ಕರೆದುಕೊಂಡು ಹೋಗಬೇಕಾದ ಅನಿವಾಯ೯ತೆ ಆಶ್ರಮದ ಮುಖ್ಯಸ್ಥರಿಗೆ ಇತ್ತು. ಅಲ್ಲದೆ ಹಿರಿಯ ನಾಗರೀಕರಾದ ಕಾರಣ ಅವರನ್ನು ಕರೆದುಕೊಂಡು ಹೋಗುವುದು ಕಷ್ಟದ ಕಾಯ೯ ವಾಗಿತ್ತು. ಇದಕ್ಕಾಗಿ ಸಾವಿರಾರು ರೂ ಆಶ್ರಮಕ್ಕೆ ವ್ಯಯವಾಗುತ್ತಿತ್ತು ದಾನಿಗಳ ನೆರವಿನಿಂದ ನಡೆಯುವ ಈ ಆಶ್ರಮಗಳಿಗೆ ಈ ಹಣವನ್ನು ಭರಿಸುವ ಶಕ್ತಿ ಇರಲಿಲ್ಲ ಹೀಗಾಗಿ ಸತೀಶ್ ರವರು ಪ್ರತಿ ತಿಂಗಳು ತಪ್ಪದೆ ಭೇಟಿ ನೀಡಿ ಉಚಿತವಾದ ಸೇವೆ ನೀಡಲಾರಂಭಿಸಿರುದರಿಂದ ಆಶ್ರಮದ ಮುಖ್ಯಸ್ಥರು ನಿರಾಳರಾಗಿದ್ದಾರೆ. ಅದೇ ರೀತಿ ಆಶ್ರಮವಾಸಿಗಳಿಗೆ ತುಂಬಾನೇ ಖುಷಿಯಾಗಿದೆ. ಸತೀಶ್ ರವರು ಕೆಲವು ವಷ೯ ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡಿದ ಅನುಭವ ಇದೆ ನಂತರ ಊರಿಗೆ ಬಂದು ಕೆಲಸದೊಂದಿಗೆ ಈ ರೀತಿಯ ಸಮಾಜ ಸೇವೆ ಮಾಡುತ್ತಿರುವುದು ಅಭಿನಂದನೀಯ. ಕರೋನಾ ಬರುವ ಮುಂಚೆಯೇ ಮಾಸ್ಕ್ ಅದೇ ರೀತಿ ವಿವಿಧ ಆರೋಗ್ಯ ಕ್ರಮ ಕೈಗೊಂಡಿದ್ದರು. ಸದಾ ಕಾಲ ಬಿಳಿ ಬಣ್ಣದ ಅಂಗಿ ಧರಿಸುವ ಸತೀಶ್ ರವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಜನರಿಗೆ ಊಟ ನೀಡುವಲ್ಲಿ ಸಹಕರಿಸಿದ್ದಾರೆ.ಹೋಂ ಡಾಕ್ಟರ್ಸ್ ಫ್oಡೇಶನ್ ತಂಡದ ಸಕ್ರೀಯ ಸದಸ್ಯರಾಗಿ ವಿವಿಧ ಸಮಾಜ ಮುಖಿ ಕಾಯ೯ದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.ಈ ರೀತಿಯ ಅಪೂವ೯ ಸೇವಕರಿಗೆ ಹಲವಾರು ಸನ್ಮಾನ ದೊರಕಿದೆ. ಸಕಾ೯ರ ಕೂಡ ಇವರ ಸೇವೆಯನ್ನು ಗುರುತಿಸಬೇಕಾಗಿದೆ. ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ಬಂಟಕಲ್ಲು ಪರಿಸರದಲ್ಲಿ ಉಚಿತ ಆಂಬುಲೆನ್ಸ್ ಸೇವೆ ಆರಂಭ
Posted On: 20 Jul 2020, 09:47 PM
ನಾಗರೀಕ ಸೇವಾ ಸಮಿತಿ (ರಿ) ಬಂಟಕಲ್ಲು ಇವರ ಮಹತ್ವಾಕಾಂಕ್ಷೆ ಯೋಜನೆ ಬಂಟಕಲ್ಲು ಪರಿಸರದ ನಾಗರಿಕರಿಗೆ ಅಪಘಾತ ಮುಂತಾದ ತುರ್ತು ಸಂಧರ್ಭದಲ್ಲಿ ಉಪಯೋಗವಾಗುವ ನಿಟ್ಟಿನಲ್ಲಿ ಉಚಿತ ಸೇವೆಯ ಅಂಬುಲೆನ್ಸ್ ಸೇವೆ ಯನ್ನು ನೀಡುವ ಸಲುವಾಗಿ ಖರೀದಿಸಿದ ನೂತನ ಅಂಬುಲೆನ್ಸ್ ವಾಹನ ಸೇವೇಯನ್ನು ಪಾಂಬೂರ್ ಚರ್ಚ್ ನ ಧರ್ಮಗುರುಗಳಾದ ರೆ.ಫಾ ಹೆನ್ರಿ ಮೆಸ್ಕರೇನಸ್ರವರು ಹಸಿರು ನಿಶಾನೆ ತೋರುವುದರ ಮೂಲಕ ಲೋಕಾರ್ಪಣೆಗೈದರು. ಬಂಟಕಲ್ಲು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶಶಿಧರ ವಾಗ್ಲೆ, ಶಿರ್ವ ಗ್ರಾ.ಪಂ ಆಡಳಿತಾಧಿಕಾರಿ ಡಾ. ಅರುಣ್ ಹೆಗ್ಡೆ, ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಶಿರ್ವ ದ ಕೊರೊನಾ ವಾರಿಯರ್ಸ್ ಆಗಿ ಕೊರೋನಾ ವಿರುದ್ದ ಕೆಲಸ ನಿರ್ವಹಿಸುತ್ತಿರುವ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಸಂತೋಷ್ ಕುಮಾರ್ ಬೈಲೂರು, ಶಿರ್ವ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶ್ರಿ ಅನಂತಪದ್ಮನಾಭ ನಾಯಕ್, ಶಿರ್ವ ಗ್ರಾಮ ಕರಣಿಕರಾದ ಶ್ರೀ ವಿಜಯ್ ಕುಕ್ಯಾನ್ ಇವರ ಗೌರವ ಉಪಸ್ಥಿತಿಯಲ್ಲಿ ಅವರನ್ನು ನಾಗರೀಕ ಸೇವಾ ಸಮಿತಿ ಪರವಾಗಿ ಅಭಿನಂದಿಸಲಾಯಿತು. ನಾ ಸೇ ಸಮಿತಿ ಅಧ್ಯಕ್ಷರಾದ ಕೆ.ಆರ್ ಪಾಟ್ಕರ್ ರವರು ಯೋಜನೆ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿ ಈ ಯೋಜನೆಯ ಯಶಸ್ವಿಗೆ ಕಾರಣಕರ್ತರಾದ ಎಲ್ಲಾ ದಾನಿಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಸಮಿತಿ ಕಾರ್ಯದರ್ಶೀ ಶ್ರೀ ದಿನೇಶ್ ದೇವಾಡಿಗ, ಕೋಶಾಧಿಕಾರಿ ಶ್ರೀ ಜಗದೀಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಶ್ರೀಮತಿ ರೋಹಿಣಿ ನಾಯಕ್ ಸಮಿತಿ ಸದಸ್ಯರು , ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶ್ರೀ ಉಮೇಶ್ ಪ್ರಭು ಬಂಟಕಲ್ಲು ರಾ.ಸಾ ಯುವ ವೃಂದದ ಅಧ್ಯಕ್ಷ ವಿಶ್ವನಾಥ್ ಬಾಂದೇಲ್ಕರ್, ಕಾರ್ಯದರ್ಶಿ ಆಷಿಶ್ ಪಾಟ್ಕರ್ ಹಾಗೂ ಯುವ ವೃಂದದ ಸದಸ್ಯರು, ಬಂಟಕಲ್ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ಬಂಟಕಲ್ಲು ಪರಿಸರದ ನಾಗರಿಕರು ಉಪಸ್ಥಿತರಿದ್ದರು.
ಕೊಡಂಗಳದ ಈ ಕೋರಿ ರೊಟ್ಟಿಗಿದೆ ಕಡಲಾಚೆಯೂ ಬೇಡಿಕೆ
Posted On: 20 Jul 2020, 07:50 PM
ಸೆಗಣಿ ನೀರಲ್ಲಿ ಗುಡಿಸಿದ ನೆಲ. ಗೂಟಕ್ಕೆ ಕಟ್ಟಿದ ಹತ್ತು ಹದಿನೈದು ಅಂಕದ ಕೋಳಿಗಳು. ಗದ್ದೆ ಹುಣಿಯ ಅಂಚಿನಲ್ಲಿ ಅವಳು ಕಾಣಿಸುವುದೇ ತಡ ಕಿಟಕಿಯ ಸರಳಿಗೆ ಕಟ್ಟಿ ಹಾಕಿದ ನಾಯಿಗಳ ಬೊಬ್ಬೆ. ಮನೆಯ ಯುವಕರು ಚುರುಕು! ಸಮಯ ವ್ಯರ್ಥವಿಲ್ಲ. ಒಂದಷ್ಟು ಕಲ್ಲುಗಳನ್ನು ಜೋಡಿಸಿ ಅಂಗಳದಲ್ಲೇ ಒಲೆ ನಿರ್ಮಿಸಲಾಗುತ್ತದೆ. ಕಟ್ಟಿಗೆಗಳ ರಾಶಿಯನ್ನೂ ಪಕ್ಕದಲ್ಲೇ ತಂದು ಹೇರಲಾಗುತ್ತದೆ. ಕಡೆಯುವ ಕಲ್ಲಿಗೆ ಸೋನಾಮಸೂರಿ ಅಕ್ಕಿಯ ನುಚ್ಚು, ಉದ್ದು, ಜೀರಿಗೆ, ಉಪ್ಪು ಬೀಳುತ್ತದೆ. ಅವಳು ಅಂಗಳದಲ್ಲಿ ನಿಂತದ್ದೇ ಕುಳಿತುಕೊಳ್ಳಲು ಕಾಲು ಮಣೆ ಊಐಕೊಟ್ಟರಾಯ್ತು. ಹಿಟ್ಟು ತಯಾರಾಗುವ ಹೊತ್ತಿಗೆ ಕಾವಲಿ ಹದವಾಗುತ್ತದೆ. ಅವಳು ಅಂದರೆ ಕಮಲ, ಜಲಜ, ಪಿಲ್ಲು, ಗುಲಾಬಿ, ಬೇಬಿ. ಯಾರೂ ಆಗಿರಬಹುದು. ಕಾದ ಕಾವಲಿಗೆ ನೀರ ಹನಿಗಳನ್ನು ಚಿಮುಕಿಸಿ ಉಷ್ಣತೆಯನ್ನು ಪರೀಕ್ಷಿಸಲಾಗುತ್ತದೆ. ಬೋಗುಣಿ ಅಥವಾ ದೊಡ್ಡ ಸೌಟಿನಲ್ಲಿ ಹಿಟ್ಟನ್ನು ಕಾವಲಿಗೆ ಸುರಿದು, ತೆಳ್ಳಗೆ ಸವರಿದ ಮೇಲೆ ಬಿಸಿ ಹೊಗೆಯೊಂದು ಏಳುತ್ತದಲ್ಲ! ಅಂಗಳದಲ್ಲಿದ್ದ ಕೋಳಿಗಳೂ ಆ ಹೊತ್ತಿಗೊಮ್ಮೆ ಕತ್ತು ಮೇಲೆತ್ತುತ್ತವೆ. ಸೋರ್ತಿ, ಮಾರಿ, ತಂಬಿಲ, ತಮ್ಮಣದ ಊಟಕ್ಕೆ ಅದಾವುದರ ತಲೆ ಬಲಿಯಾಗುತ್ತದೋ, ಅವುಗಳಿಗೂ ಗೊತ್ತಿಲ್ಲ. ಒಲೆಯನ್ನು ಸುತ್ತುವರಿದ ಮಕ್ಕಳ ಬಾಯಲ್ಲಂತೂ ನೀರು ಸುರಿಯುತ್ತದೆ. ಇಡೀ ಮನೆಯವರಿಗೆ ನಾಟಿ ಕೋಳಿ ಸುಕ್ಕ, ಸಾರು ಮತ್ತು ಊರ ರೊಟ್ಟಿಯ ಊಟದ್ದೇ ಕನಸು. ಕಾವಲಿಯಿಂದ ತೆಗೆದ ರೊಟ್ಟಿಯನ್ನು ಸ್ವಲ್ಪ ಹೊತ್ತು ಬಿಸಿಲಿಗೆ ಹಾಕೋದಕ್ಕಿದೆ. ಒಣಗಿಸಲು ಇಟ್ಟಲ್ಲಿಂದಲೇ, ಜಾಸ್ತಿ ಸುಟ್ಟು ಕೆಂಪಗಾದ ರೊಟ್ಟಿಯ ತುಂಡನ್ನು ಹುಡುಕಿ, ಎಗರಿಸಿ, ಕುರು ಕುರು ಎಂದು ತಿನ್ನುವುದಿದೆಯಲ್ಲ! ಊ ಕೋಳಿ ರೊಟ್ಟಿಗೋಸ್ಕರವೇ ಮತ್ತೆ ಮತ್ತೆ ತುಳುನಾಡಲ್ಲೇ ಹುಟ್ಟಬೇಕೆನಿಸುತ್ತದೆ. ಹಿಂದಿನ ಕಾಲದ ಹಳ್ಳಿ ಮನೆಗಳಲ್ಲಿ ಒಬ್ಬರಿಗಾದರೂ ರೊಟ್ಟಿಯ ವಿದ್ಯೆ ಗೊತ್ತಿತ್ತು. ಊರಲ್ಲಿ ಒಂದೆರಡು ಹೆಂಗಸಾದರೂ ಮನೆ ಮನೆಗೆ ಹೋಗಿ ರೊಟ್ಟಿ ತಯಾರಿಸುವ ಕಾಯಕದಲ್ಲಿ ಹೆಸರು ಪಡೆದವರುಂಟು. ಆದರೀಗ ಈ ಸರಳ ವಿದ್ಯೆ ಮರೆತೇ ಹೋದಂತಿದೆ. ಕೊಡಂಗಲದ ಶಾರದಕ್ಕನ ಕಥೆಯೂ ಅಷ್ಟೇ ಆಗಿತ್ತು. ಅವರ ಅಮ್ಮ, ಅಜ್ಜಿ ಮಾಡ್ತಿದ್ದರು. ಗಂಡನ ಮನೆಯಲ್ಲಿ ಅತ್ತೆಯ ಕೈರುಚಿಯೂ ಚೆನ್ನಾಗಿತ್ತು. ಅಂಗಡಿಯಲ್ಲಿ ಸಿಗೋಕೆ ಶುರುವಾದ ಮೇಲೆ ಆ ರಗಳೆ ಯಾರಿಗೆ ಬೇಕು? ಗರಿ ಗರಿಯಾದ, ರುಚಿಕಟ್ಟಾದ, ಹಿಟ್ಟಿಗೆ ಯಾವುದೇ ಕಲಬೆರಕೆ ಇಲ್ಲದ, ಆರೋಗ್ಯಕರ ತಿನಿಸು ಬರೀ ನೆನಪು ಮಾತ್ರ ಅಂದುಕೊಂಡಾಗ ಅವರ ಕುಟುಂಬದಲ್ಲಿ ಎದುರಾದ ಅನಿವಾರ್ಯವೊಂದು ರೊಟ್ಟಿಯ ಕಾಯಕವನ್ನು ಮುಂದುವರೆಸುವಂತೆ ಮಾಡಿತು. ಶಾರದಕ್ಕನಿಗೆ ಒಟ್ಟು ಮೂರು ಜನ ಹೆಣ್ಮಕ್ಕಳು. ಮೂವರಿಗೂ ಮದುವೆಯಾಗಿದೆ. ಇಬ್ಬರು ಮುಂಬೈಯಲ್ಲಿದ್ದರೆ ಕಡೆಯವಳನ್ನು ಮನೆಯಲ್ಲೇ ಇರಿಸಿಕೊಂಡಿದ್ದಾರೆ. ಅಳಿಯ ಆಟೋ ಚಾಲಕ. ಆದರೆ ಅದೊಂದು ದಿನ ಅಪಘಾತವಾಗಿ ರಿಕ್ಷಾ ಮಗುಚಿ ಬೀಳುತ್ತದೆ. ಪ್ರವೀಣ್ ಪೂಜಾರಿಯವರ ಕಾಲಿನ ಎಲುಬು ಮುರಿಯುತ್ತೆ . ಮುಂದಿನ ಆರು ತಿಂಗಳು ಅವರು ಮನೆಯಲ್ಲೇ. ಶಾರದಕ್ಕ ಹಾಗೂ ಹಿರಿಯಣ್ಣ ದಂಪತಿಗಳದ್ದು ಸಣ್ಣ ಮಟ್ಟದ ಬೇಸಾಯದ ಮನೆ. ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೆ. ಅಳಿಯನಿಗೆ ಬೇಸರ, ಪಶ್ಚತ್ತಾಪ. ಕಾಲಿನ ಮೂಳೆಯೇ ಮುರಿದದ್ದರಿಂದ ಹೊರಗೆಲ್ಲೂ ಕೆಲಸಕ್ಕೆ ಹೋಗುವಂತಿಲ್ಲ. ಆಲೋಚನೆ ಮಾಡಿ ಮಾಡಿ ಕೊನೆಗೆ ಅತ್ತೆಯ ಬಳಿ ಕೇಳಿಯೇ ಬಿಟ್ಟರು. ನೀವು ಹಿಂದೆ, ಮನೆಯ ಖರ್ಚಿಗೆ ಅಕ್ಕಿ ರೊಟ್ಟಿ ಮಾಡ್ತಿದ್ರಿ ಅಂತಿದ್ರಲ್ಲ. ಈಗ ಮತ್ತೆ ಮಾಡ್ಬಹುದಾ? ನಮ್ಗೆ ಕಲಿಸಿಕೊಡ್ಬಹುದಾ? ಒಂದಷ್ಟು ಅಂಗಡಿಗಳನ್ನು ಗೊತ್ತು ಮಾಡ್ಕೋಬಹುದು. ಕೂತಲ್ಲೇ ಮಾಡಬಹುದಾದ ಕೆಲಸವಿದು ಎಂದು ಕೇಳಿಕೊಂಡರು. ಶಾರದಕ್ಕನಿಗೆ ಅಳುಕು. ನಾವು ನಾವೇ ತಿನ್ನೋಕೆ ಮಾಡ್ತಿದ್ದದ್ದು. ಮಾರೋದಕ್ಕಾಗುತ್ತಾ? ಬೇರೆಯವ್ರಿಗಿದು ಇಷ್ಟವಾಗುತ್ತಾ? ಮಗಳು, ಅಳಿಯ ಹಠ ಬಿಡಲೇ ಇಲ್ಲ. ಮನೆಯೊಳಗಿದ್ದೇ ಒಲೆ, ಸಣ್ಣ ಕಾವಲಿಯಲ್ಲಿ ಮಾಡೋಕೆ ಶುರು ಮಾಡಿದರು. ಅಳಿಯ ಬೇರೊಂದು ರಿಕ್ಷಾ ಗೊತ್ತು ಮಾಡಿ ಊರ ಅಂಗಡಿಗಳಿಗೆ ಅಲೆದರು. ಮೊದಲ ದಿನ ಸ್ಯಾಂಪಲ್ ಗಳನ್ನು ಕೊಟ್ಟು ಬಂದರು. ಮರು ದಿನ ಆಶ್ಚರ್ಯ. ಅಂಗಡಿಗಳಿಂದ ಒಳ್ಳೆಯ ಬೇಡಿಕೆ ಬರಲಾರಂಭಿಸಿತು. 20 ಕೇಜಿ ಅಕ್ಕಿಯಿಂದ ಹಿಡಿದು ದಿನಕ್ಕೆ 100 ಕೇಜಿ ರೊಟ್ಟಿಯವರೆಗೂ ಡಿಮಾಂಡ್ ಬರಲು ಶುರು. ಶಾರದಕ್ಕನ ಕೈಗುಣವಿರಬೇಕು. ಸಾಮಾನ್ಯ ಊರ ರೊಟ್ಟಿ ಇಷ್ಟೊಂದು ಗರಿ ಗರಿಯಾಗಿರುವುದಿಲ್ಲ. ಆದರಿವರ ಶ್ರೀ ವಿಷ್ಣು ಅಕ್ಕಿ ರೊಟ್ಟಿ ತೆಳುವಾಗಿ, ಗರಿ ಗರಿಯಾಗಿ ಬಾಯೊಳಗೆ ಹಾಕಿದ ಕೂಡಲೇ ನೀರು! ಹೀಗೆ ರೊಟ್ಟಿಯ ವ್ಯಾಪಾರ ಶುರುವಾಗಿ 8 ವರ್ಷಗಳಾಗಿವೆ. ಪ್ರತೀ ದಿನ ಬೆಳಿಗ್ಗೆ 5 ಗಂಟೆಗೆಯಿಂದ 11 ಗಂಟೆಯ ವರೆಗೆ ಹೊಗೆ ಹಾಗೂ ತಡೆಯಲಾಗದ ಬಿಸಿಯ ನಡುವೆ ತಯಾರಿ. ಆ ನಂತರ ಪ್ಯಾಕಿಂಗ್. ಮಧ್ಯಾಹ್ನದ ಬಳಿಕ ಅಂಗಡಿಗಳಿಗೆ ವಿತರಣೆ. ಉಡುಪಿಯಲ್ಲೂ ಕೊಡಂಗಳದ ಈ ರೊಟ್ಟಿಗೆ ಬಹಳ ಬೇಡಿಕೆ ಇದೆ. ಶ್ರೀ ವಿಷ್ಣು ರೊಟ್ಟಿಯೇ ಬೇಕೆಂದು ಹಠ ಹಿಡಿಯುವ ಗ್ರಾಹಕರಿದ್ದಾರೆ. ಆದರೆ ಮನೆಯ ಈ ಮೂವರಷ್ಟೇ ಸೇರಿ ಮಾಡುವುದರಿಂದ, ಸಣ್ಣ ಶೆಡ್ ಒಂದರ ಅಡಿಯಲ್ಲಿ ಸೀಮಿತ ಪ್ರಮಾಣದಲ್ಲಷ್ಟೇ ತಯಾರಿಸಲು ಸಾಧ್ಯವಾಗ್ತಿದೆ. ತಮ್ಮ ಮನೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಗುಡ್ಡೆಯಂಗಡಿ, ಕೊಡಂಗಳ, ದೆಂದೂರುಕಟ್ಟೆ, ಕುಕ್ಕಿಕಟ್ಟೆ, ಕುಂತಲನಗರ, ಮರ್ಣೆಯ ಅಂಗಡಿಗಳಲ್ಲೇ ಇವರು ತಯಾರಿಸಿದ ರೊಟ್ಟಿ ಮುಗಿಯುತ್ತದೆ. ಕೆಲವು ಕೆಟರಿಂಗ್ ಸಂಸ್ಥೆಗಳು ಮೊದಲೇ ಹೇಳಿಟ್ಟು, ಮನೆಗೇ ಬಂದು ಖರೀದಿಸುವುದುಂಟು. ಬೆಂಗ್ಳೂರು, ಮುಂಬೈ, ದುಬೈಗೂ ಇವರ ರೊಟ್ಟಿ ಹೋಗುವುದುಂಟು. ಸರಕಾರ ನೆರವಾದರೆ ಸಣ್ಣ ಪ್ರಮಾಣದ ಉದ್ಯಮವನ್ನಾಗಿಸುವ ಕನಸು ಈ ಕುಟುಂಬದ್ದು. ಬ್ಯಾಂಕುಗಳಲ್ಲಿ ವಿಚಾರಿಸಿದಾಗ ಸಾಮಾನ್ಯ ಸಾಲ ವ್ಯವಸ್ಥೆ ಬಿಟ್ಟರೆ ವಿಶೇಷ ನೆರವು, ಸಬ್ಸಿಡಿ ಇಲ್ಲವೆಂದರಂತೆ. ಆತ್ಮನಿರ್ಭರ ಭಾರತ ಕಟ್ಟುವ ಪ್ರತಿಜ್ಞೆಗಳಾಗುತ್ತಿರುವ ಈ ಹೊತ್ತಿನಲ್ಲಿ ಕಡಲಾಚೆಗೂ ಬೇಡಿಕೆ ಇರುವ ಕೊಡಂಗಲದ ಈ ರೊಟ್ಟಿಯ ತಯಾರಿ, ಮಾರಾಟದ ವಿಸ್ತರಣೆಗೆ ಸರಕಾರದಿಂದ ಸಹಕಾರ ದೊರೆಯಲಿ ಎಂಬೊಂದು ಆಶಯ. ಮಂಜುನಾಥ್ ಕಾಮತ್
