Updated News From Kaup
ಮಹಾಯೋಗಿ ಚಾಪಮ್ಮ ದೇವಿಯ ಕೈಯಲ್ಲಿ ಬಿಡುಗಡೆಯಾಗಲಿದೆ ಕರಾವಳಿಯ ಆದ್ಯಾತ್ಮ App
Posted On: 14 Sep 2020, 11:10 AM
ಉಡುಪಿ: ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರ ಧರ್ಮದರ್ಶಿ ಗುರೂಜೀ ಸಾಯಿ ಈಶ್ವರ್ ಇವರು ಆಧ್ಯಾತ್ಮಿಕ ಸಾಧಕರಿಗಾಗಿ ಮಾಡಿದ ಕರಾವಳಿಯ ಪ್ರಥಮ ಆಧ್ಯಾತ್ಮಿಕ Android Mobile App ಅನ್ನು ಮಹಾಯೋಗಿ ಶ್ರೀ ಶ್ರೀ ಚಾಪ್ಪಮ್ಮ ದೇವಿಯವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ. ಸೆಪ್ಟಂಬರ್ 16 ರಂದು ರಾಯಚೂರಿನ ಸಿಂಧನೂರಿನ ಕಲ್ಮಂಗಿಯಲ್ಲಿರುವ "ಅಮ್ಮನವರ ಕುಟೀರ" ಇಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಗುರೂಜಿ ಸಾಯಿಈಶ್ವರ್ ಸದಾ ಅಸಹಾಯಕರ ಪರವಾಗಿ ಶ್ರಮಿಸುವವರು ಶ್ರೀ ಸಾಯಿ ಬಾಬಾರ ಪರಮಭಕ್ತರು, ಆರಾಧಕರು. ನೊಂದವರಿಗೆ ಸಾಂತ್ವಾನ ನುಡಿಯುವವರು. ಹಸಿದವರಿಗೆ ತುತ್ತು ಅನ್ನ ನೀಡಿದವರು. ಜಿಜ್ಞಾಸುಗಳಿಗೆ ಆಧ್ಯಾತ್ಮದ ಬೆಳಕು ಚೆಲ್ಲಿದವರು. ಆಧ್ಯಾತ್ಮ ವಲಯದಲ್ಲಿ ಇವರು ಮಾದರಿ ಆಧ್ಯಾತ್ಮ ಪರಿಚಾರಕರು. ಈಗಾಗಲೇ ಲಾಕ್ ಡೌನ್ ಸಮಯದಲ್ಲಿ ಆನ್ಲೈನ್ ಮೂಲಕ ಮಕ್ಕಳಿಗೆ "ನನ್ನ ಮನೆ ನನ್ನ ಗುರುಕುಲ" ಎಂಬ ಕಾರ್ಯಕ್ರಮ ಮಾಡಿ ಯಶಸ್ವಿಯಾಗಿರುವಂತೆ ನಂತರ ಆನ್ಲೈನ್ ಮೂಲಕ "ಆತ್ಮ ಶುದ್ಧಿ ಕ್ರಿಯಾ ಧ್ಯಾನ" ಮಾಡಿದ್ದು ಇದರಲ್ಲಿ ಐದುನೂರಕ್ಕೂ ಹೆಚ್ಚು ಜನರು ಭಾಗವಹಿಸಿರುವರು, ನಂತರ "ಪಾಕೆಟ್ ಪೆಂಡುಲಂ" ತರಬೇತಿ ಶಿಬಿರವನ್ನು ಆನ್ಲೈನ್ ಮೂಲಕ ಎರಡು ಅವದಿಯಲ್ಲಿ ಮಾಡಿದ್ದು ಎಲ್ಲವೂ ಯಶಸ್ವಿಯಾಗಿರುತ್ತದೆ ಇದೀಗ ಲೋಕಾರ್ಪಣೆ ಮಾಡಲಾಗುವ Android App ನಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಲು ಬೇಕಾಗುವ ವ್ಯವಸ್ಥೆಯೂ ಇರುತ್ತದೆ. ಈ ಆಫ್ ಮೂಲಕ ಭೌತಿಕ, ಐಶ್ವರ್ಯ, ಆರೋಗ್ಯ, ಶಾಂತಿ, ಧ್ಯಾನ, ಯೋಗ, ಸಾಂತ್ವನ ಮತ್ತು ಆಧ್ಯಾತ್ಮಿಕ ಮಾಹಿತಿಗಳ ಕಣಜವೇ ಆಧ್ಯಾತ್ಮಿಕ ಸಾಧಕರಿಗೆ ಸಿಗಲಿದೆ
ಪ್ರತಿ ಗ್ರಾಮದಲ್ಲಿ ಗೋಶಾಲೆ ಪ್ರಾರಂಭವಾಗಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಕರೆ
Posted On: 14 Sep 2020, 08:54 AM
ಉಡುಪಿ :- ಹಿಂದೆ ಪ್ರತಿ ಮನೆಯಲ್ಲಿಯೂ ಗೋವುಗಳಿದ್ದವು. ಆದರೆ ಯಂತ್ರಾಧಾರಿತ ಕೃಷಿ ಎಲ್ಲೆಡೆ ವ್ಯಾಪಿಸಿದ ಬಳಿಕ ಮನೆಯಲ್ಲಿ ಗೋವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಗೋವುಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ನಮ್ಮ ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಗೋವುಗಳಿಗಾಗಿಯೇ ಇರುವಂತಹ ಗೋಮಾಳಗಳನ್ನು ಅನ್ಯ ಕಾರ್ಯಕ್ಕಾಗಿ ನೀಡದೆ ಅದನ್ನು ಗ್ರಾಮಗಳಲ್ಲಿ ಉಳಿಸುವ ಮೂಲಕ ಪ್ರತಿ ಗ್ರಾಮಗಳಲ್ಲಿಯೂ ಗೋಶಾಲೆಯನ್ನು ನಿರ್ಮಿಸಿ ಗ್ರಾಮಗಳ ನಿಜವಾದ ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದರು. ನೀಲಾವರ ಗೋಶಾಲೆಯಲ್ಲಿ ಸೆ.13ರಂದು ಗೋವಿಗಾಗಿ ಮೇವು ಅಭಿಯಾನದ ಬಗ್ಗೆ ವಿಸ್ತ್ರತವಾಗಿ ಮಾತನಾಡುತ್ತಾ ಗೋವುಗಳ ಅಗತ್ಯತೆಯ ಬಗ್ಗೆ ಶ್ರೀಪಾದರು ಬೆಳಕನ್ನು ಚೆಲ್ಲಿದರು. ಯುವಕ ಮಂಡಲ ಮತ್ತು ಇತರ ಸಂಘಟನೆಗಳ ಮಾಧ್ಯಮದಿಂದ ಯುವಕರು ಮುಂದೆ ಬರುವ ಮೂಲಕ ಗೋವಿಗಾಗಿ ಮೇವು ಅಭಿಯಾನವನ್ನು ಇನ್ನಷ್ಟು ಬಲಪಡಿಸಬೇಕು. ಕೋವಿಡ್ ಸಂದರ್ಭದಲ್ಲಿ ಗೋಶಾಲೆಗಳಿಗೆ ಆರ್ಥಿಕ ಸಹಾಯವು ಬರುವುದು ವಿರಳವಾಗುತ್ತಿರುವ ಸಂದರ್ಭದಲ್ಲಿ ಹಸಿ ಹುಲ್ಲನ್ನು ನೀಲಾವರ ಗೋಶಾಲೆಗೆ ನೀಡಲು ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ. ಹಿಂದೆ ಗೋಗ್ರಾಸ ನೀಡಿ ಮತ್ತೆ ನಾವು ಆಹಾರ ಸ್ವೀಕರಿಸುವ ಪದ್ಧತಿಯಿತ್ತು. ಆದರೆ ಇಂದು ಯಂತ್ರಾಧಾರಿತ ಬದುಕು ಆ ಪದ್ಧತಿಯನ್ನು ಕೈಬಿಡುವಂತೆ ಮಾಡಿದೆ. ಆದರೆ ಊಟ ಮಾಡುವ ಮೊದಲು ಗೋಗ್ರಾಸಕ್ಕಾಗಿ ಕಿಂಚಿತ್ ಧನವನ್ನು ಪ್ರತಿದಿನ ತೆಗೆದಿಟ್ಟು ಬಳಿಕ ಅದನ್ನು ಸ್ಥಳೀಯ ಗೋಶಾಲೆಗೆ ನೀಡಿದರೆ ಗೋವುಗಳ ಪಾಲನೆಗೆ ದೊಡ್ಡ ಮಟ್ಟಿನ ಸಹಕಾರವನ್ನು ನೀಡಿದಂತೆ ಆಗುತ್ತದೆ ಎಂದರು. ಮಳೆಗಾಲದ ಬಳಿಕ ಒಣ ಹುಲ್ಲನ್ನು ಕೂಡ ನೀಡಲು ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಕರೆ ನೀಡಿದ ಪೇಜಾವರ ಶ್ರೀಗಳು, ಗೋವಿನ ಆಹಾರವನ್ನು ವ್ಯರ್ಥಮಾಡಬಾರದು. ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಯ ಬಳಿಕ ಒಣ ಹುಲ್ಲನ್ನು ಗೋವುಗಳಿಗಾಗಿ ಗೋಶಾಲೆಗಳಿಗೆ ಒದಗಿಸಿದರೆ ಅದೊಂದು ಪುಣ್ಯದ ಕಾರ್ಯ ಎಂದರು. ಗೋವಿಗಾಗಿ ಮೇವು ಅಭಿಯಾನದ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮಾತನಾಡುತ್ತಾ, ಆಗಸ್ಟ್ 1 ರಂದು ಮಂದರ್ತಿಯ ಕಾಮಧೇನು ಗೋಸೇವಾ ಸಮಿತಿಯ ವತಿಯಿಂದ ಆರಂಭಿಸಿದ ಗೋವಿಗಾಗಿ ಮೇವು ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಪಕ ರೀತಿಯಲ್ಲಿ ಬಿತ್ತರಿಸಿದ ಪರಿಣಾಮದಿಂದ ಅದರಿಂದ ಪ್ರೇರಣೆ ಪಡೆದ ಯುವಜನರು ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 250 ಸಂಘಟನೆಗಳು ಮುಂದೆ ಬಂದು ನೀಲಾವರ ಗೋಶಾಲೆಗೆ ಹಸಿ ಹುಲ್ಲನ್ನು ನೀಡುವ ಮೂಲಕ ಗೋಸೇವೆಗಾಗಿ ವಿಶೇಷ ರೀತಿಯಲ್ಲಿ ಸಹಕಾರವನ್ನು ನೀಡಿವೆ ಎಂದರು. ಖ್ಯಾತ ವೈದ್ಯರಾದ ಡಾ. ವಿಜಯ್ ನೆಗಳೂರು ಹಾಗೂ ಡಾ. ಚಿತ್ರ ನೆಗಳೂರು ಒಂದು ಟೆಂಪೋ ಹಸಿ ಹುಲ್ಲನ್ನು ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಗಣೇಶ್ ಪ್ರಸಾದ್ ಜಿ. ನಾಯಕ್, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.
ಇಂಡಿಯನ್ ಹ್ಯೂಮಾನಿಟೇರಿಯನ್ ಆಫ್ ದ ಇಯರ್ ಪ್ರಶಸ್ತಿ ಪ್ರಧಾನ
Posted On: 13 Sep 2020, 11:48 PM
ಉಡುಪಿ :- ಇಂಡಿಯನ್ ಬುಕ್ ಆಫ್ ರೆಕಾಡ್೯ ಸಂಸ್ಥೆ ವತಿಯಿಂದ ನೀಡಲಾಗುವ ಪ್ರತಿಷ್ಠಿತ "ಇಂಡಿಯನ್ ಹ್ಯೂಮಾನಿಟೇರಿಯನ್ ಆಫ್ ದ ಇಯರ್" ಪ್ರಶಸ್ತಿ ಗೆ ಯುವ ಲೇಖಕ ರಾಘವೇಂದ್ರ ಪ್ರಭು, ಕವಾ೯ಲು ರವರು ಆಯ್ಕೆಯಾಗಿದ್ದು ಅದನ್ನು ಸೆ.13 ರಂದು ನೀಲಾವರ ಗೋಶಾಲೆಯಲ್ಲಿ ಅಯೋಧ್ಯೆ ರಾಮ ಕ್ಷೇತ್ರದ ಟ್ರಸ್ಟಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀಥ೯ ಶ್ರೀಪಾದರು ಪ್ರಧಾನ ಮಾಡಿದರು. ಕೋವಿಡ್ 19 ಸಂದಭ೯ದಲ್ಲಿ ನಡೆಸುತ್ತಿರುವ ವಿವಿಧ ಸಮಾಜ ಮುಖಿ ಕಾಯ೯ಗಳಿಗೆ ಈ ಪುರಸ್ಕಾರ ನೀಡಲಾಗುತ್ತದೆ. ಈ ಸಂದಭ೯ದಲ್ಲಿ ಉಪನ್ಯಾಸಕ ಗಣೀಶ್ ಪ್ರಸಾದ್ ನಾಯಕ್, ಎಸ್.ಡಿ.ಎಂ ಆಯುವೇ೯ದ ಕಾಲೇಜಿನ ಪ್ರಾಧ್ಯಾಪಕ ಡಾ" ವಿಜಯ್ ನೆಗಳೂರು, ಡಾII ಚಿತ್ರಾ ನೆಗಳೂರು, ಬಿಲ್ಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮುoತಾದವರಿದ್ದರು.
ಶಿರ್ವದಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಐದನೇ ವರ್ಷದ ಪಾದಯಾತ್ರೆ
Posted On: 12 Sep 2020, 06:38 PM
ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಮುಲ್ಕಾಡಿ ಕೋಡು ಪಂಜಿಮಾರು ಶಿರ್ವ ಇವರ ವತಿಯಿಂದ 5 ನೇ ವರ್ಷದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ, ಮುಲ್ಕಾಡಿ ಉಧ್ಬವ ದುರ್ಗಾಪರಮೇಶ್ವರೀ ದೇವಸ್ಥಾನ ಕೋಡು ಪಂಜಿಮಾರುವಿನಿಂದ ಊರ ಪರವೂರ ಭಕ್ತರ ಕೂಡುವಿಕೆಯಿಂದ ಪಾದಯಾತ್ರೆ ಇಂದು ಸಂಜೆ 5 ಗಂಟೆಗೆ ನಡೆಯಿತು.. ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಭಕ್ತರು ಐದನೇ ವರ್ಷದ ಸುಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಮುಲ್ಕಾಡಿ ಭಜನಾ ಮಂಡಳಿಯ ಸದಸ್ಯರಿಗೆ ಸಂತಸ ತಂದಿದೆ..
ಕಾಪುವಿನ ರಾಣ್ಯಕೇರಿಯಲ್ಲಿ ವಿದ್ಯುತ್ ಇಲ್ಲದ ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ
Posted On: 11 Sep 2020, 05:05 PM
ಕಾಪು ಕ್ಷೇತ್ರದ ಪುರಸಭಾ ವ್ಯಾಪ್ತಿಯ ರಾಣ್ಯಕೇರಿ ಎಂಬಲ್ಲಿ ಜಯಲಕ್ಷ್ಮಿ ಎನ್ನುವರವರ ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ್ದನ್ನು ಗಮನಿಸಿದ ಕಾಪುವಿನ ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭುರವರು ಶ್ರೀಕಾಂತ್ ನಾಯಕ್ ಅವರಿಗೆ ತಿಳಿಸಿದಾಗ ಸ್ಥಳೀಯ ಪ್ರಮುಖರಾದ ಸುಧಾಮ ಶೆಟ್ಟಿ ಹಾಗೂ ಪ್ರಶಾಂತ್ ಪೂಜಾರಿ ಇವರೊಂದಿಗೆ ಮನೆಗೆ ಭೇಟಿ ನೀಡಿ ವಿದ್ಯುತ್ ಸಂಪರ್ಕ ಕೊಡಿಸುವ ಭರವಸೆ ನೀಡಿದ್ದರು. ತೀರಾ ಬಡಕುಟುಂಬವಾದ ಇವರು ತಮ್ಮಲ್ಲಿ ಹೆಚ್ಚಿನ ದಾಖಲೆಗಳು ಇಲ್ಲದ್ದನ್ನು ಮನಗಂಡ ಸುಧಾಮ ಶೆಟ್ಟಿಯವರು ಪುರಸಭಾ ಅಧಿಕಾರಿಗಳೊಂದಿಗೆ ಮಾತನಾಡಿ ಮಾನವೀಯ ನೆಲೆಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ನಿರಾಪೇಕ್ಷಣಾ ಪತ್ರ ಕೊಡಿಸಿದರು. ನಂತರದಲ್ಲಿ ಕಾಪು ಮೆಸ್ಕಾಂ ನ್ನು ಸಂಪರ್ಕಿಸಿ ಅವರಿಗೆ ಉಚಿತ ಕಂಬ ಒದಗಿಸಿ ವಿದ್ಯುತ್ ಸಂಪರ್ಕ ಒದಗಿಸಿದ್ದರು. ಇಂದು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರೊಂದಿಗೆ ಫಲಾನುಭವಿಗಳ ಮನೆಗೆ ಭೇಟಿ ನೀಡಿ ವಿದ್ಯುತ್ ಸಂಪರ್ಕದ ಉದ್ಘಾಟನೆ ಮಾಡಿದರು. ಕಾಪುವಿನ ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭುರವರು ಮನೆಗೆ ಬೇಕಾದಂತಹ ಬಲ್ಬ್ಗಳನ್ನು ಹಾಗೂ ಒಂದು ಟೇಬಲ್ ಫ್ಯಾನ್ ನ್ನು ಕೊಡುಗೆಯಾಗಿ ನೀಡಿದ್ದು ಮಾನ್ಯ ಶಾಸಕರ ಮುಖೇನ ಅದನ್ನು ಹಸ್ತಾಂತರಿಸಲಾಯಿತು. ಬಡಕುಟುಂಬವೊಂದಕ್ಕೆ ಸಹಾಯ ಮಾಡಲು ಅವಕಾಶ ನೀಡಿದ ನೀತಾ ಪ್ರಭು, ಪ್ರಶಾಂತ್ ಪೂಜಾರಿ ಮತ್ತು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ಹಾಗೂ ಹಿರಿಯರಾದ ಸುಧಾಮ ಶೆಟ್ಟಿ, ಇವರೆಲ್ಲರಿಗೂ ಶ್ರೀಕಾಂತ್ ನಾಯಕ್ ಧನ್ಯವಾದಗಳನ್ನು ತಿಳಿಸಿದರು.
ಕಾಪು ರಾಷ್ಟ್ರೀಯ ಹೆದ್ದಾರಿ ವಿಭಾಜಕದಲ್ಲಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ
Posted On: 11 Sep 2020, 04:34 PM
ರಾ.ಹೆ. 66ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿ ಡಿವೈಡರ್ ಮೇಲಿನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಯುವತಿಯೋರ್ವಳು ಮೃತಪಟ್ಟ ಘಟನೆ ಶುಕ್ರವಾರ ಕಾಪುವಿನಲ್ಲಿ ನಡೆದಿದೆ.
ಅಪಘಾತದಲ್ಲಿ ಆಶ್ರಿತಾ (24) ಎಂಬ ಯುವತಿ ಮೃತಪಟ್ಟಿದ್ದು, ನಿಹಾಲ್, ಅನೀಷ್, ನಿನಾದ್ ಮತ್ತು ಅಥರ್ವ ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾರು ಕಾಪು ಹಳೇ ಮೆಸ್ಕಾಂ ಕಛೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿ, ಹೆದ್ದಾರಿ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ವಿದ್ಯುತ್ ಕಂಬ ಉರುಳಿ ಬಿದ್ದಿದೆ.
ಮುಂಬಯಿಯಿಂದ ಆಗಮಿಸಿದ್ದ ಯುವಕರ ತಂಡ ಕಾರಿನಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಎಸ್ಸೈ ರಾಜಶೇಖರ ಬಿ. ಸಾಗನೂರು, ಕ್ರೈಂ ಎಸ್ಸೈ ಐ.ಆರ್. ಗಡ್ಡೇಕರ್ ಮೊದಲಾದವರು ಭೇಟಿ ನೀಡಿದ್ದಾರೆ.
ಕಾಪುವಿನ ಮಜೂರಿನಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಮೂರು ಕರುಗಳಿಗೆ ಜನ್ಮ ನೀಡಿದ ಹಸು
Posted On: 10 Sep 2020, 02:06 PM
ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಅಂದರೆ ರೋಹಿಣಿ ನಕ್ಷತ್ರ ವೃಷಭ ರಾಶಿಯ ಪವಿತ್ರವಾದ ಅಷ್ಪಮಿಯ ದಿನದಂದು ಶ್ರೀ ಕೃಷ್ಣನ ಜನನವಾಗಿತ್ತು. ಕೃಷ್ಣನಿಗೆ ಗೋವುಗಳೆಂದರೆ ಅಚ್ಚು ಮೆಚ್ಚು.. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರಿನ ಸಾನದ ಮನೆಯಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ್ದು. ಮಜೂರು ಗ್ರಾಮಸ್ಥರು ಕರುಗಳನ್ನು ನೋಡಲು ಮುಗಿಬಿದ್ದಿದ್ದಾರೆ.
ಬೆಳ್ಮಣ್ಣು ರೋಟರಿಯಿಂದ ನಂದಳಿಕೆ ಚಂದ್ರಶೇಖರ್ ರಾವ್ ಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
Posted On: 10 Sep 2020, 01:12 PM
ಬೆಳ್ಮಣ್ಣು: ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್ ಬೆಳ್ಮಣ್ಣು , ಶಿಕ್ಷಕರ ದಿನಾಚರಣೆ ಅಂಗವಾಗಿ ಅತ್ಯುತ್ತಮ ಶಿಕ್ಷಕ ಪುರಸ್ಕೃತರಾಗಿರುವ ನಂದಳಿಕೆ ಪಡುಬೆಟ್ಟು ಶಾಲೆಯ ಮುಖ್ಯಶಿಕ್ಷಕ ರಾಗಿರುವ ನಂದಳಿಕೆ ಚಂದ್ರಶೇಖರ್ ರಾವ್ ಇವರನ್ನು ರೋಟರಿ ಸಂಸ್ಥೆ ಈ ವರ್ಷದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿರುವ ರೋ. ಸುಭಾಷ್ ಕುಮಾರ್ ನಂದಳಿಕೆ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ಜಿಲ್ಲಾ ಉಪ ಗವರ್ನರ್ ಆಗಿರುವ ರೋ ಸೂರ್ಯಕಾಂತ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ರೋಟೇರಿಯನ್ ಸತ್ಯಪ್ರಸಾದ್ ಶೆಟ್ಟಿ, ರೋ ರಾಜೇಶ್ ಸಾಲಿಯನ್ ಉಪಸ್ಥರಿದ್ದರು, ಕಾರ್ಯದರ್ಶಿ ರೋ ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು
ಜನರು ಸ್ವಯಂ ಪ್ರೇರಿತವಾಗಿ ಕರೋನಾ ಪರೀಕ್ಷೆ ಮಾಡಲು ಮುಂದೆ ಬರಬೇಕಾಗಿದೆ
Posted On: 09 Sep 2020, 06:12 PM
ಕೋವಿಡ್ ಸೋoಕು ಜನರ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಆದರೆ ಇತ್ತಿಚಿಗೆ ಈ ಸೋಂಕು ಸಮುದಾಯಕ್ಕೆ ಹಬ್ಬಿರುವ ಕಾರಣ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ, ಆದರೆ ಈ ಸೋಂಕಿನ ಬಗ್ಗೆ ಜನರು ನಿಲ೯ಕ್ಷ ವಹಿಸುದನ್ನು ನಾವು ಕಾಣಬಹುದು.ಮುಖ್ಯವಾಗಿ ಸಾವ೯ಜನಿಕ ಸಮೂಹದಲ್ಲಿ ಮಾಸ್ಕ್ ಇಲ್ಲದೆ ಓಡಾಟ, ಕಾಯ೯ಕ್ರಮ ಅಯೋಜನೆ ಜೊತೆಗೆ ಯಾವುದೇ ರೀತಿಯ ಕರೋನಾ ನಿಯಮಗಳನ್ನು ಪಾಲನೆ ಮಾಡದಿರುವುದು. ಕರೋನಾದ ಲಕ್ಷಣ ಇದ್ದರೂ ಅದನ್ನು ಮರೆ ಮಾಚಿ ಸಾವ೯ಜನಿಕವಾಗಿ ಓಡಾಟ ಇದನ್ನು ನಾವು ಕಾಣುತ್ತಿದ್ದೇವೆ ಇದು ಸರಿಯಲ್ಲ ಕರೋನಾದ ಕುರಿತು ನಾವು ನಿಲ೯ಕ್ಷ ವಹಿಸಿದರೆ ಅದರ ಪರಿಣಾಮ ಹೆಚ್ಚಾಗಿರುತ್ತದೆ.
ಜಿಲ್ಲಾಧಿಕಾರಿಯವರು ಈಗಾಗಲೇ ತಿಳಿಸಿದಂತೆ ಕರೋನಾ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಲು ಮುಂದೆ ಬರದೆ ಆರೋಗ್ಯಕ್ಕೆ ಹೆಚ್ಚಿನ ತೊಂದರೆಯಾದಾಗ ಆಸ್ಪತ್ರೆಗೆ ಐಸಿಯು ಗೆ ದಾಖಲಾಗುವುದು ಹೆಚ್ಚಾಗಿರುತ್ತಿದೆ. ಇದರಿಂದ ಈಗಾಗಲೇ ಐಸಿಯು ಬೆಡ್ ಗಳ ಕೊರತೆ ಕಂಡು ಬರಲು ಸಾಧ್ಯ .ಹೀಗಾಗಿ ಕರೋನಾ ದ ಲಕ್ಷಣ ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಬೇಕಾಗಿದೆ.
ಜನರು ಸ್ವಯಂ ಪ್ರೇರಿತರಾಗಿ ಪರೀಕ್ಷೆ ಗೆಗೆ ಒಳಗಾಗಬೇಕಾಗಿದೆ.
ಸಕಾ೯ರ ಕರೋನಾದ ಬಗ್ಗೆ ಪರೀಕ್ಷೆ ಮಾಡಲು ಉಚಿತವಾಗಿ ಪರೀಕ್ಷೆ ಕಿಟ್ ಒದಗಿಸುತ್ತಿದೆ. ಆದರೆ ಜನರು ಸ್ವಯಂ ಪ್ರೇರಿತವಾಗಿ ಈ ಕರೋನಾ ಪರೀಕ್ಷೆ ಮಾಡಲು ಹಿಂಜರಿಯುತ್ತಿದ್ದಾರೆ ಇದು ಸರಿಯಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ನಾವು ಪರೀಕ್ಷೆ ಮಾಡಿದರೆ ನಮಗೆ ಒಳ್ಳೆಯದು ಇದನ್ನು ಎಲ್ಲರೂ ಮನಗಾಣಬೇಕು. ಕರೋನಾವನ್ನು ಹಿಮ್ಮೆಟ್ಟಿಸಲು ನಾವೆಲ್ಲರೂ ಪಣ ತೊಡಬೇಕು.
ಕರೋನಾದ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಬೇಕಾಗಿದೆ
ಜನರು ಕರೋನಾಕ್ಕಿಂತ ಹೆಚ್ಚು ಭಯಪಡುತ್ತಿರುವುದು ಮನೆ ಸೀಲ್ ಡೌನ್ ಗೆ. ಅದೇ ರೀತಿ ಇವರನ್ನು ನೋಡಿದಾಗ ಪಕ್ಕದ ಮನೆಯವರು ನೋಡುವ ರೀತಿ, ಮನೆಗೆ ನೋಟಿಸ್ ಅಂಟಿಸುವುದು ಇದರಿಂದ ಮಾನಸಿಕವಾಗಿ ಕಿರಿಕಿರಿ ಅನುಭವಿಸುತ್ತಿರುವುದು ಕಂಡು ಬರುತ್ತಿದೆ. ಈಗಾಗಲೇ ಈ ಬಗ್ಗೆ ತಜ್ಞರ ತಂಡ ಸಕಾ೯ರಕ್ಕೆ ವರದಿ ನೀಡಿದೆ.ಸಕಾ೯ರ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು.
ಕರೋನಾ ದೂರವಾಗಲು ಪರೀಕ್ಷೆ ಅತ್ಯಂತ ಮುಖ್ಯ ಎಂದು ವೈದ್ಯರ ಮಾತಿನಂತೆ ಹೆಚ್ಚು ಪರೀಕ್ಷೆ ನಡೆದರೆ ಸೋಂಕಿತರ ಸಂಖ್ಯೆ ಹೆಚ್ಚಾದರೂ ಮುಂದಿನ ದಿನಗಳಲ್ಲಿ ಕರೋನಾ ಕಡಿಮೆಯಾಗಲು ಸಾಧ್ಯ.
ಜಿಲ್ಲಾಡಳಿತ ಹಾಗೂ ಕರೋನಾ ವಾರಿಯರ್ಸ್ ಗಳಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆಯೇ
ಕಳೆದ 6 ತಿಂಗಳಿನಿಂದ ನಿರಂತರವಾಗಿ ಜಿಲ್ಲಾಡಳಿತ ಮತ್ತು ಸಮಸ್ತ ವೈದ್ಯರ ತಂಡ ಶ್ರಮಿಸುತ್ತಿದೆ ಇವರೊಂದಿಗೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ.
ಆದಷ್ಟು ಬೇಗ ಕರೋನಾ ಮುಕ್ತ ದೇಶವಾಗಲಿ ಮತ್ತೊoಮ್ಮೆ ಭಾರತ ಎದ್ದು ನಿಲ್ಲಲಿ.
ರಾಘವೇಂದ್ರ ಪ್ರಭು, ಕವಾ೯ಲು, ಯುವ ಲೇಖಕ
ಭಗವಂತನ ಧರ್ಮಾವತಾರ ಅದು ಕೃಷ್ಣನೆಂಬ ಬೆರಗು
Posted On: 09 Sep 2020, 06:01 PM
ಭಗವಂತ . ಭಗವಂತನೇ ಧರ್ಮ.
ಧರ್ಮ ಭಗವಂತನಾಗುವುದು . ಧರ್ಮದಲ್ಲಿ ಭಗವಂತ ಸಂಭವಿಸುವುದು.
ಭಗವಂತನಲ್ಲಿ ಅವಿನಾಭಾವವಾಗಿ ಧರ್ಮವಿರುವುದು . ಅದು ಪ್ರಕಟಗೊಳ್ಳುವುದು - ದರ್ಶನ ಸಾಧ್ಯವಾಗುವುದು . ಈ ನಿರೂಪಣೆಯ ಸಾಕಾರವಾಗಿ ಮೂಡಿ ಬರುತ್ತದೆ ಒಂದು 'ಬೆರಗು' ....ಅದೇ ಕೃಷ್ಣ .
ಲಾಲಿತ್ಯ - ಲಾವಣ್ಯಗಳ ಆಕರ್ಷಕ ರೂಪದಿಂದ ಜಗತ್ತನ್ನು ಗೆಲಿದವನಾಗಿ ,
ಮನುಕುಲದ ಪ್ರಿಯಬಂಧುವಾಗಿ ,ಚಾಣಾಕ್ಷ ಸೂತ್ರಧಾರನಾಗಿ , ಮಲ್ಲಯುದ್ಧ ಪ್ರವೀಣನಾಗಿ , ರಾಜಕೀಯ ಮುತ್ಸದ್ಧಿಯಾಗಿ , ಗೀತಾಚಾರ್ಯನಾಗಿ ಭಾರತೀಯರ ಆರಾಧ್ಯನಾದ ಕೃಷ್ಣನ ಜನನ ಭೀತಿಯ ಪರಿಸರದಲ್ಲಿ , ಕಾಲದ ಅಗತ್ಯವಾಗಿ , ಸಜ್ಜನರ ನಿರೀಕ್ಷೆಯಾಗಿ ನೆರವೇರುತ್ತದೆ . ಋಷಿಮುನಿಗಳ ಪ್ರಾರ್ಥನೆ ,
ಶುಭ ಪ್ರತೀಕ್ಷೆ ಹುಸಿಯಾಗದೇ 'ಧರ್ಮ'ವಾಗಿ ಆವಿರ್ಭವಿಸುತ್ತಾನೆ ಕೃಷ್ಣ.
ಮತ್ಸ್ಯ , ಕೂರ್ಮ , ವರಾಹ , ನರಸಿಂಹ ಅವತಾರಗಳು ಕ್ಷಣದಲ್ಲಿ ನಡೆದು ಧರ್ಮವನ್ನು ಉದ್ಧರಿಸಿ ಮೂಲದಲ್ಲಿ ಸೇರಿಹೋಗುತ್ತದೆ .ವಾಮನಾವತಾರ ಏಕೋದ್ದೇಶದಿಂದ ನಡೆದು ಪಾತಾಳ ಸೇರಿಹೋಗುತ್ತದೆ .ಭಾರ್ಗವರಾಮನಾಗಿ ಆಯುಧ ಗ್ರಹಣ ನಿಷಿದ್ಧವಾಗಿದ್ದರೂ ಸಂದರ್ಭದ ಅನಿವಾರ್ಯವಾಗಿ ಕ್ಷತ್ರಿಯ ಸಂಹಾರವಾಗುತ್ತದೆ .ಇಲ್ಲಿ ಧರ್ಮ ಸ್ಥಾಪನೆಯೇ ಪರಮಲಕ್ಷ್ಯವಾಗಿ ನಿರ್ವಹಿಸಲ್ಪಡುತ್ತದೆ . ಬಹುಶಃ ಆಕಾಲಕ್ಕೆ ಅದೇ ಮಾನ್ಯತೆಯ ಮೌಲ್ಯವಾಗಿದ್ದಿರಬೇಕು.
ಮರ್ಯಾದಾ ಪುರುಷೋತ್ತಮನಾದ ಶ್ರೀ ರಾಮಚಂದ್ರ ಮೆರೆದ ಆದರ್ಶ ,ಪಾಲಿಸಿದ ಮಾನವ ಧರ್ಮ,ಬದುಕಿನ ವಿಧಾನಗಳೆಲ್ಲ ಮಾನವ ಜೀವನ ಶೈಲಿಯ ಅಪೂರ್ವ ಸಾಧ್ಯತೆಗಳನ್ನೆಲ್ಲ ಸಾಧಿಸಿದುದು ,ಹೀಗೂ ಬದುಕಬಹುದೇ ? ಎಂದು ಉದ್ಗರಿಸುವುದು ಬಿಟ್ಟರೆ ಆ ವ್ಯಕ್ತಿತ್ವ ಕಷ್ಟಸಾಧ್ಯವೆಂದು ನೆಲ ನೋಟಕರಾಗಬೇಕಾಗುತ್ತದೆ .
ಕೃಷ್ಣಾವತಾರ ಪರಿಪೂರ್ಣವಾಗುತ್ತದೆ
ಆದರೆ ಕೃಷ್ಣಾವತಾರದ ಸಂದರ್ಭ ಮಾತ್ರ ವಿಶಿಷ್ಟ , ವಿಭಿನ್ನ . ಲೋಕೋತ್ತರ ಹಿತ ಸಾಧನೆ ,ಯಾರದ್ದು ಯಾರಿಗೆ ಸಲ್ಲಬೇಕು ಎಂಬ ಲೋಕಧರ್ಮೀ ನ್ಯಾಯದ ಅನುಷ್ಠಾನ ,ದುರ್ಬಲರಿಗೆ ,ಸಜ್ಜನರಿಗೆ ಬಲವಾಗುವ ,ಅಶಕ್ತರಿಗೆ ಶಕ್ತಿಯಾಗುವ ,
ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸುವ ಸದುದ್ದೇಶದೊಂದಿಗೆ ಕಾರ್ಯಪ್ರವೃತ್ತನಾಗುವ ಸಂಕಲ್ಪ ಸ್ವೀಕರಿಸಿದವ 'ವಾಸುದೇವ - ಕೃಷ್ಣ' . ಸಂದರ್ಭದ ಅನಿವಾರ್ಯತೆಯನ್ನು ಬಳಸಿಕೊಂಡು ಕುಬ್ಜೆಯ ವಕ್ರತೆಯನ್ನು ತಿದ್ದಿ ಸೃಷ್ಟಿಯನ್ನೆ ಸರಿಪಡಿಸಬಲ್ಲೆ ಎಂಬ ಸಂದೇಶವನ್ನು ಕೊಡುತ್ತಾನೆ .
ಯಾರು ಹೇಳಿದರು ಕೃಷ್ಣನಿಗೆ ನೀನು ಮನುಕುಲದ ಉದ್ಧಾರಕನಾಗು ,ಯುಗ ಪ್ರವರ್ತಕನಾಗು ,ಧರ್ಮಸಂಸ್ಥಾಪಕನಾಗು ಎಂದು . ಆದರೆ ಕೃಷ್ಣ , ಆ ಕರ್ತವ್ಯ ತನ್ನದೆಂದು ,ತನ್ನ ಜವಾಬ್ದಾರಿ ಎಂದು ಪರಿಭಾವಿಸಿಕೊಂಡು ದ್ವಾಪರದ ಅಂತ್ಯದಲ್ಲಿ ಮಹತ್ಕಾರ್ಯ ಸಾಧಸಿಯೇಬಿಟ್ಟ , ಅಗತ್ಯವಿದ್ದವರಿಗೆ 'ಹೀಗೆಯೇ' ಮಾಡು ಎಂದು ನಿರ್ದೇಶಿಸಿದ .ಧರ್ಮವನ್ನು ಸ್ಥಾಪಿಸಿ ಧರ್ಮಸಂಸ್ಥಾಪನಾಚಾರ್ಯನಾದ .ಶ್ರುತಿ - ಸ್ಮೃತಿಗಳು ಹೇಳುವಂತೆ ಅವನೇ ಭಗವಂತ .
ತಾನು ವಿಶ್ವವ್ಯಾಪಕನಿದ್ದೇನೆ .
ಪರಿಪೂರ್ಣನಿದ್ದೇನೆ ಎಲ್ಲವೂ ನಾನೇ ,ಎಲ್ಲ
ಶ್ರೇಷ್ಠ ವಾದುವುಗಳಲ್ಲಿ ನಾನಿದ್ದೇನೆ ಅಥವಾ ಅದು ನಾನೇ ಆಗಿರುತ್ತೇನೆ . ಯಾವುದು ಯಾರಿಗೆ ಯಾವ ಕಾಲದಲ್ಲಿ ಧರ್ಮವೋ ಅದನ್ನು ಮಾಡು ,ಅದೇ ನಿನಗೆ ಧರ್ಮ ಮುಂತಾದ ವ್ಯಾಖ್ಯಾನವನ್ನು ಬೋಧಿಸುತ್ತಾ ಮಾನವ ಬದುಕಿನ ಸುಂದರ ಅನುಕರಣೀಯ ಸಿದ್ಧಾಂತವು ವಾಚ್ಯವಾಗುವಂತೆ "ವಿರಾಡ್ - ದರ್ಶನ"ದ ಮೂಲಕ ಪ್ರಕಟಗೊಳ್ಳುತ್ತಾನೆ .
ವಿಜಯವನ್ನು ನೆಲೆಗೊಳಿಸುತ್ತಾನೆ . ಈ ನಿರೂಪಣೆ ಅಥವಾ ಉಪದೇಶ "ಭಗವದ್ಗೀತೆ" ಯಾಗಿ ಬಹುಮಾನ್ಯವಾಗುತ್ತದೆ .ಇದು ಮನುಕುಲಕ್ಕೆ ನೀಡಿದ ಅದ್ಭುತ ಕೊಡುಗೆ ,ಈ ಉಪದೇಶದಿಂದ ವಾಸುದೇವ ಭಗವಾನ್ ವಾಸುದೇವನಾಗುತ್ತಾನೆ , ಗೀತಾಚಾರ್ಯನೇ ಆಗುತ್ತಾನೆ .ಮನುಷ್ಯ ಭಾವಕ್ಕಿಂತ ದೂರ , ಎತ್ತರಕ್ಕೆ ಏರುತ್ತಾನೆ ,ತತ್ ಕ್ಷಣ ನಮ್ಮ ಹತ್ತಿರಕ್ಕೆ ಬಂದು ಆತ್ಮೀಯನಾಗುತ್ತಾನೆ.
ಗೋಪಿಗೀತ ,ಉದ್ಧವಗೀತೆಗಳು ಭಗವದ್ಗೀತೆಯಷ್ಟು ಲೋಕಧರ್ಮಿಯಲ್ಲ .
ಅವು ಹೆಸರೇ ಸೂಚಿಸುವಂತೆ ಅವರವರಿಗೆ ಸೀಮಿತವಾಗಿವೆ .
ಯುವಸಮುದಾಯದ ಆಕರ್ಷಣೆ
ಜರಾಸಂಧ ಅಥವಾ ಮಾಗಧ ತಾನು ಭರತವರ್ಷದ ಚಕ್ರವರ್ತಿಯಾಗಬೇಕೆಂಬ ಸಂಚು ರೂಪಿಸಿದ್ದ .ರಾಜಕುಮಾರರನ್ನು ಸೆರೆಯಲ್ಲಿರಿಸಿಕೊಂಡಿದ್ದ . ಮಾಗಧನನ್ನು ಭೀಮನಿಂದ ಕೊಲ್ಲಿಸಿ ರಾಜಕುಮಾರರನ್ನು ಬಂಧಮುಕ್ತಗೊಳಿಸಿದ , ಯುವ ಸಂದೋಹ ಕೃಷ್ಣನಿಗೆ ಆತ್ಮೀಯವಾಗುತ್ತದೆ .ನರಕಾಸುರನ ಸೆರೆಯಲ್ಲಿದ್ದ ಸಾವಿರಾರು ಸ್ತ್ರೀಯರ ಸೆರೆಬಿಡಿಸುತ್ತಾನೆ ,ಮಾತ್ರವಲ್ಲ ಅವರ ಬದುಕಿಗೆ ಭದ್ರತೆಯನ್ನು ಒದಗಿಸುತ್ತಾನೆ .ಇದು ಕೃಷ್ಣ ಪ್ರದರ್ಶಿಸಿದ ಜೀವಪ್ರೀತಿ ,ಮಾನವ ಪ್ರೇಮ . ಈ ಎಲ್ಲಾ ಸಾಧನೆಗೆ ಪ್ರಾರಂಭದ ವೇದಿಕೆಯಾದದ್ದು ಗೋಕುಲ , ಗೋಪಾಲಕರು ಮತ್ತು ಗೋವುಗಳು .
ಹಸ್ತಿನಾವತಿಯ ಚಕ್ರವರ್ತಿ ಪೀಠ ಪ್ರಶ್ನಾರ್ಹವಾಗಬಾರದು , ಅದು ಚಂದ್ರವಂಶೀಯರಿಗೆ ಸಲ್ಲತಕ್ಕದು ಎಂಬ ಕಾಲಧರ್ಮವನ್ನು ಪ್ರತಿಪಾದಿಸಿದ . ಆದರೆ ಹಸ್ತಿನೆಯಲ್ಲಿ ದಾಯಾದ್ಯ ಕಲಹವೇರ್ಪಟ್ಟಾಗ ಧರ್ಮ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸಿ ಸರ್ವಪ್ರಯತ್ನೇನ ಧರ್ಮರಾಯಾದಿ ಪಾಂಡವರಿಗೆ ಹಸ್ತಿನಾವತಿಯ ಚಕ್ರವರ್ತಿ ಪೀಠ ದೊರೆಯುವಂತೆ ಮಾಡುತ್ತಾನೆ ಕೃಷ್ಣ .
ಕೊನೆಗೂ ತಾನು ನಿರ್ಲಿಪ್ತನಾಗಿಯೇ ಅರಸೊತ್ತಿಗೆ ,ಚಕ್ರವರ್ತಿಪೀಠವನ್ನು ತಿರಸ್ಕರಿಸುತ್ತಾನೆ . ಬಹಳ ಹಿಂದೆ ನೂತನವಾಗಿ ಭರತವರ್ಷದ ಐವತ್ತಾರಕ್ಕೆ ಹೊರತಾಗಿ ಐವತ್ತೇಳನೇದ್ದಾಗಿ ಕಟ್ಟಿದ ದ್ವಾರಾವತಿಗೆ ಅಣ್ಣ ಬಲರಾಮನಲ್ಲವೇ ಅರಸ .ಯಾದವರಿಗೆ ರಾಜತ್ವ ಇದೆ ಎಂಬುದನ್ನು ಸ್ಥಾಪಿಸಿದ ....ಇದು ಕೃಷ್ಣ .
ಲಾಲಿತ್ಯದಿಂದ ಅರಳುತ್ತದೆ
ಭಾರತೀಯ "ಧರ್ಮ - ತತ್ತ್ವಜ್ಞಾನ"ವು ಲಾಲಿತ್ಯದಿಂದ ಅರಳುವುದು ಬಹಳ ವಿರಳ .
ಆದರೆ ಕೃಷ್ಣನ ಸಂದರ್ಭದಲ್ಲಿ ಮಾತ್ರ ಅರಳಿ ಘಮಘಮಿಸುತ್ತದೆ .ಇದು ಪ್ರೀತಿಯ ಕಣ್ಣು ಕುಕ್ಕುವ ಸೊಬಗಿನಿಂದ ಸಂಭ್ರಮಿಸುತ್ತದೆ .
ಪ್ರೇಮ ಕತೆಗಳಿಗೆ ಹೊಸತೊಂದು ಕೋಮಲತೆ ಬರುತ್ತದೆ .ಕೃಷ್ಣನ ಬಾಲ್ಯ ಮರೆಯಲಾಗದ ಸಂಗತಿ ಇವತ್ತಿಗೂ ಪ್ರತಿಯೊಂದು ಭಾರತೀಯನ ಮನೆಯಲ್ಲಿ ಈ ಬಾಲ್ಯ ಕುಣಿಯುತ್ತಲೇ ಇದೆ .ಆಡಿದ ರಾಸಕ್ರೀಡೆ ಕೃಷ್ಣ - ಗೋಪಿಕೆಯರ ವಿನೋದ ನೃತ್ಯ ಶ್ರೇಷ್ಠವಾಗಿಯೇ ನಿಲ್ಲುತ್ತದೆ ,
ಆಕ್ಷೇಪಾರ್ಹವಾಗುವುದೇ ಇಲ್ಲ , ರಂಜನೀಯ ಸಂದರ್ಭವಾಗುತ್ತದೆ .
ಸೀರೆಕದ್ದ - ಅಕ್ಷಯಾಂಬರ ಕೊಟ್ಟ
ಬಾಲ್ಯದಲ್ಲೊಮ್ಮೆ ತುಂಟಕೃಷ್ಣ ಗೋಪಿಕೆಯರ ಸೀರೆ ಕದ್ದು ಮರ ಏರಿ ಕುಳಿತು ಒಂದು ಅಪಕೀರ್ತಿಗೆ ಪಾತ್ರನಾಗುತ್ತಾನೆ .
ವಾಸುದೇವನಾಗಿ ಬೆಳೆದಾಗ ದ್ರೌಪದಿಗೆ ಅಕ್ಷಯಾಂಬರವಿತ್ತು ಮಾನ - ಪ್ರಾಣ ಉಳಿಸಿ ಆಪತ್ಬಂಧುವಾಗಿ ಮೆರೆಯುತ್ತಾನೆ .ಸೀರೆಕದ್ದ ದೋಷದಿಂದ ಮುಕ್ತನಾಗುತ್ತಾನೆ .ಬಹುಶಃ ಅಕ್ಷಯಾಂಬರದ ಕೊಡುಗೆಯಲ್ಲಿ ಈ ಭಾವವಿರಬಹುದು .ಹೀಗೆ ಬಾಲ್ಯದ ಪ್ರತಿಯೊಂದು ಬಾಲ್ಯ ಸಹಜವಾದ ಪ್ರಮಾದಗಳಿಗೂ ಬದುಕಿನುದ್ದಕ್ಕೂ ತಕ್ಕುದಾಗಿ ವರ್ತಿಸಿ , ಉತ್ತರಿಸುತ್ತಾ ಮನುಕುಲದ ಪ್ರಿಯ ಬಂಧುವಾಗುತ್ತಾನೆ .
ಕೃಷ್ಣ ಜನ್ಮಾಷ್ಟಮಿಯ ವೇಳೆ ಹೀಗೊಂದು ಓದಿದ ,ಕೇಳಿದ ವಿವರಗಳನ್ನು ಹಂಚಿಕೊಂಡದ್ದು .
ಅಷ್ಟಮಿ - ಅಟ್ಟೆಮಿ ಪೇರರ್ಘ್ಯೆ
ಅಷ್ಟಮಿ ದಿನದಂದು ಉಪವಾಸವಿದ್ದು ರಾತ್ರಿ ಚಂದ್ರೋದಯವಾಗುವ ( ತಿಂಗೊಲು ಮೂಡ್ನಗ) ಮುಹೂರ್ತದಲ್ಲಿ ಸ್ನಾನಮಾಡಿ ಮನೆ ತುಳಸಿಕಟ್ಟೆಯ ಎದುರು ತೆಂಗಿನಕಾಯಿ ಒಡೆದಿಟ್ಟು ಹಾಲು ಎರೆಯುವ ,ಬಿಲ್ವಪತ್ರೆ ಅರ್ಪಿಸುವ 'ಪೇರರ್ಘ್ಯೆ' ಬಿಡುವ ಕ್ರಮವಿದೆ .ಅರ್ಘ್ಯೆ ಪ್ರದಾನ ಎಂದರೆ "ಅಡಿಗೆ ಬುಡ್ಪುನು".ಅಷ್ಟಮಿದ 'ಉಡಾರಿಗೆ' ಎಂಬುದು ಅಷ್ಟಮಿಯ ವಿಶೇಷ ತಿಂಡಿ .
ಅರ್ಘ್ಯ ಪ್ರದಾನ
ಕೃಷ್ಣಜನ್ಮಾಷ್ಟಮಿ/ ಕೃಷ್ಣ ಜಯಂತಿಯ
ದಿನಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರೋದಯಕ್ಕೆ ಸರಿಯಾಗಿ ವಿವಿಧ ಭಕ್ಷ್ಯ ,ಉಂಡೆ , ಚಕ್ಕುಲಿ,ಕಡುಬು ಮುಂತಾದುವುಗಳನ್ನು ಮನೆ ದೇವರಿಗೆ ಸಮರ್ಪಿಸಿ ಪೂಜೆಮಾಡುವುದು .
ಕೃಷ್ಣ ,ಬಲರಾಮ,ವಸುದೇವ ,ದೇವಕಿ,
ನಂದಗೋಪ , ಯಶೋದಾ,ಸುಭದ್ರೆಯರನ್ನು ಸ್ಮರಿಸಿಕೊಂಡು ಬಿಲ್ವಪತ್ರೆ ಅರ್ಪಿಸಿ ಶಂಖದಲ್ಲಿ ನೀರು ತುಂಬಿ ದೇವರಿಗೆ ( ಶಾಲಗ್ರಾಮ ಒಂದಕ್ಕೆ) ಅರ್ಘ್ಯ ಸಮರ್ಪಿಸುವುದು . ಬಳಿಕ ತುಳಸಿಕಟ್ಟೆಯ ಮುಂಭಾಗ ಒಡೆದ ತೆಂಗಿನಕಾಯಿಯನ್ನು ( ತೆಂಗಿನ ಗಂಡು ಭಾಗದಲ್ಲಿ ಸುಲಿದ ಬಾಳೆಹಣ್ಣು ಇರಿಸಿ ಅರ್ಘ್ಯ ಅರ್ಪಿಸುವ ಕ್ರಮವೂ ಇದೆ) ಇರಿಸಿ ಬಿಲ್ವಪತ್ರೆ ಅರ್ಪಿಸಿ ಶಂಖದಲ್ಲಿ ಹಾಲು ತುಂಬಿಸಿ ರೋಹಿಣೀ ಸಹಿತ ಚಂದ್ರನಿಗೆ ಅರ್ಘ್ಯವನ್ನು ಸಮರ್ಪಿಸುವುದು .
ಸೌರಮಾನ , ಚಂದ್ರಮಾನ
ಪದ್ಧತಿಗಳಿಗನುಗುಣವಾಗಿ ಅರ್ಘ್ಯ ಪ್ರದಾನ ನೆರವೇರುತ್ತದೆ . ಈ ಆಚರಣೆಯಲ್ಲಿ ಪಾಠಾಂತರಗಳಿವೆ .
ವಿಟ್ಲ ಪಿಂಡಿ ; ಮಸುರ್ಡಿಕೆ -
ಮೊಸರು ಕುಡಿಕೆ
ವಿಠಲನ ಪಿಂಡಿ 'ವಿಟ್ಲಪಿಂಡಿ' . ಪಿಂಡಿ ಎಂದರೆ 'ಗಂಟು'. ವಿಠಲನಲ್ಲಿ ಇದ್ದುದು ಅಥವಾ ವಿಠಲನಿಗಾಗಿ ತಂದದ್ದು - ಬಂದದ್ದು .ಉಂಡೆ ,ಚಕ್ಕುಲಿಗಳಂತಹ ತಿಂಡಿಗಳುಳ್ಳ ಗಂಟು .ಈ ಗಂಟನ್ನು ಇಟ್ಟುಕೊಂಡು ಅದನ್ನು ನನಗೆ ,ನನಗೆ ಎಂದು ಪಡೆಯಲು ಆಡುವ ಮಕ್ಕಳಾಟವೇ ವಿಟ್ಲಪಿಂಡಿ .
'ವಿಠಲ' ಎಂಬ ಹೆಸರಿನ ಕೃಷ್ಣನು ಗೋಪಾಲರೊಂದಿಗೆ - ಗೋಪಿಯರೊಂದಿಗೆ ಆಡಿದ ಆಟಗಳೇ "ಕೃಷ್ಣ ಲೀಲೆ" . ಅದನ್ನು ಉತ್ಸವೆಂದು ಸುಂದರ ಸ್ಮರಣೆಯಾಗಿ ಆಚರಿಸುವುದರಿಂದ ಅದುವೇ ಲೀಲೋತ್ಸವ ಕೃಷ್ಣ ಲೀಲೋತ್ಸವ .
ಗೋಪಿಯರ ಕಣ್ಣುತಪ್ಪಿಸಿ ಗೋಪರ ಮನೆ ಹೊಕ್ಕು ಹಾಲು , ಮೊಸರುಗಳನ್ನು ಕದ್ದು ತಿಂದದ್ದು ಮತ್ತು ತಿನ್ನುವಾಗ ಕೈತಪ್ಪಿ ಕೆಳಗೆಬಿದ್ದು ಮಡಕೆಗಳು ಪುಡಿಯಾದಾಗ ಮೊಸರಿನ ಕುಡಿಕೆ ಪುಡಿಯಾಗುತ್ತದೆ . ಎತ್ತರದಲ್ಲಿ ತೂಗಿಸಿಡುವ ಹಾಲು - ಮೊಸರಿನ ಕುಡಿಕೆಗಳಿಗೆ ಕಲ್ಲಿನಿಂದ ಹೊಡೆದು ಅಥವಾ ಕೋಲಿನಿಂದ ರಂಧ್ರಮಾಡಿ ಅದರಿಂದ ಇಳಿಯುವ ಹಾಲಿಗೊ ಮೊಸರಿಗೊ ಬಾಯಿಕೊಟ್ಟು ಕುಡಿಯುವ ಕೃಷ್ಣ ಚೇಷ್ಟೆಗಳ 'ಮೊಸರುಕುಡಿಕೆ'ಯ ಅಣಕನ್ನು ಅಥವಾ ಮರುಪ್ರದರ್ಶನವೇ ನಾವಿಂದು ಕಾಣುವ 'ಕೃಷ್ಣಲೀಲೋತ್ಸವ' . ಬಹುಶಃ ಯಾವ ಮಹನೀಯರ ಬಾಲ್ಯದ ತುಂಟಾಟವೇ ಪ್ರಧಾನವಾಗುವ , ರೂಪಕವಾಗುವ ಪುರಾಣವಾಗುವುದನ್ನು ಕಾಣುವುದೇ ಇಲ್ಲ.
ಬರಹ : ಕೆ.ಎಲ್ .ಕುಂಡಂತಾಯ
