Updated News From Kaup
ಎಲ್ಲರಿಗೂ ಮಾದರಿಯಾದ ವಿಶೇಷ ಅಭಿಯಾನ ಗೋವಿಗಾಗಿ ಮೇವು
Posted On: 29 Aug 2020, 09:12 PM
ಗೋವನ್ನು ಹಿಂದೂ ಧಮ೯ದಲ್ಲಿ ಪ್ರಾಮುಖ್ಯವಾದ ಸ್ಥಾನದಲ್ಲಿ ನೋಡಲಾಗುತ್ತದೆ ಆದರೆ ದೇಶದಲ್ಲಿ ಇಂದು ಗಣನೀಯ ಪ್ರಮಾಣದಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ದು:ಖದ ವಿಚಾರ. ಸ್ವಾತಂತ್ರ್ಯ ಪೂವ೯ದಲ್ಲಿ ದೇಶದಲ್ಲಿ ಜನರ ಸಂಖ್ಯೆಗಿಂತ ಜಾನುವಾರುಗಳ ಸಂಖ್ಯೆ ಹೆಚ್ಚಾಗಿತ್ತು ಆದರೆ ಇಂದು ತದ್ವಿರುದ್ಧವಾಗಿದೆ. ಕೃಷಿಯು ಕಡಿಮೆಯಾದ ಪರಿಣಾಮ ಗೋವನ್ನು ಸಾಕಣೆಕೆ ಮಾಡುವವರು ಕಡಿಮೆಯಾಗಿದ್ದಾರೆ. ಗೋ ವನ್ನು ವದೆ ಮಾಡುವ ಸಲುವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡುವಾಗ ಅರಕ್ಷರ ರು ತಡೆಹಿಡಿದ ಜಾನುವಾರುಗಳು ಅದೇ ರೀತಿ ಗೋವನ್ನು ಸಾಕಲಾರದೆ ಕಷ್ಟದಲ್ಲಿರುವ ಕುಟುಂಬದ ಗೋವನ್ನು ಸಾಕಿ ಸಲಹುವ ದೃಷ್ಠಿಯಿಂದ ಅಪ್ಪಟ್ಟ ಗೋ ಪ್ರೇಮಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀಥ೯ ಶ್ರೀಪಾದರು ನೀಲಾವರ ಗೋ ಶಾಲೆಯನ್ನು ಸ್ಥಾಪನೆ ಮಾಡಿದ್ದಾರೆ. ಶಾಖಾ ಗೋಶಾಲೆ ಕೊಡವೂರು ಮತ್ತು ಹೆಬ್ರಿ ಯಲ್ಲಿದೆ ದಿನಂಪ್ರತಿ ಲಕ್ಷಾoತರ ರೂಪಾಯಿ ಖಚು೯ ಮಾಡಿ ಅದನ್ನು ಅವರು ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಕರೋನಾ ಎಂಬ ಮಹಾಮಾರಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತೊಂದರೆ ನೀಡಿದೆ. ಲಾಕ್ ಡೌನ್ ನಿಂದಾಗಿ ಜಾನುವಾರುಗಳಿಗೆ ಹಸಿರು ಹುಲ್ಲಿನ ಕೊರತೆ ಕಾಡಿತ್ತು.ಈ ಸಂದಭ೯ದಲ್ಲಿ ಮಂದಾತಿ೯ಯ ಯುವಕರು ಒಂದೆಡೆ ಸೇರಿ ಯುವ ಮುಂದಾಳು ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಯವರ ಸಂಚಾಲಕತ್ವದಲ್ಲಿ ಕಾಮಧೇನು ಗೋ ಸೇವಾ ಸಮಿತಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಆ ಮೂಲಕ " ಗೋವಿಗಾಗಿ ಮೇವು " ಎಂಬ ಅಭಿಯಾನವನ್ನು ಪ್ರಾರಂಭಿಸಿದರು.ಇದೀಗ ಈ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲೆಯ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಈ ಜಾನುರಾರುಗಳಿಗೆ ಮೇವು ನೀಡುವ ಕಾಯಕದಲ್ಲಿ ತೊಡಗಿವೆ. ಒಂದು ಅಭಿಯಾನ ಈ ರೀತಿಯಲ್ಲಿ ಕೂಡ ಮಾಡ ಬಹುದು ಎಂಬುದಾಗಿ ಕಾಮಧೇನು ಗೋ ಸೇವಾ ಸಮಿತಿ ಸಮಾಜಕ್ಕೆ ತೋರಿಸಿದೆ.ಈ ಸಂಸ್ಥೆಗೆ ಎಷ್ಟು ಅಭಿನಂದನೆ ಹೇಳಿದರೂ ಕಡಿಮೆಯೇ ಯುವಕರಿಗೆ ಮಾದರಿಯಾದ ಈ ಕಾಯ೯ ಮಾಡಿದ ಈ ಸಂಸ್ಥೆಗೆ ಶ್ರೀಗಳು ಸಹಿತ ನಾಡಿನ ಹಲವಾರು ಗಣ್ಯರು ಅಭಿನಂದಿಸಿದ್ದಾರೆ. ತಾವು ಕೂಡ ಈ ಗೋ ಸೇವೆ ಮಾಡಬಹುದು ಈ ಮೂಲಕ ದೇವರ ಸೇವೆ ಮಾಡಲು ಅವಕಾಶವಿದೆ. ಬರಹ : ರಾಘವೇಂದ್ರ ಪ್ರಭು,ಕವಾ೯ಲು
ಡ್ರಗ್ಸ್ ವ್ಯಸನದಿಂದ ಯುವ ಜನಾಂಗವನ್ನು ಬಂಧಮುಕ್ತಗೊಳಿಸಬೇಕಾಗಿದೆ
Posted On: 29 Aug 2020, 09:06 PM
ಇತ್ತಿಚೆಗೆ ಮಾದಕ ಡ್ರಗ್ಸ್ ವ್ಯಸನದ ಬಗ್ಗೆ ಬಹಳಷ್ಟು ಚಚೆ೯ ಯಾಗುತ್ತಿದೆ.ಬೆಂಗಳೂರು ಸೇರಿದಂತೆ ಹಲವಾರು ನಗರದಲ್ಲಿ ಇದರ ಜಾಲದ ಬಗ್ಗೆ ಹಾಗೂ ಚಿತ್ರರಂಗದಲ್ಲಿ ಇದರ ವ್ಯಾಪಕತೆಯ ಕುರಿತು ಮಾಧ್ಯಮಗಳಲ್ಲಿ ಬಹಳಷ್ಟು ವಿಸ್ತ್ರತ ಚಚೆ೯ ಯಾಗುತ್ತಿರುವುದನ್ನು ನಾವು ನೋಡುತ್ತಿದ್ದೆವೆ. ಮಾದಕತೆಯ ಹೆಸರಿನಲ್ಲಿ ನಡೆಯುವ ಈ ವ್ಯವಸ್ಥಿತ ಜಾಲದ ಬಗ್ಗೆ ತನಿಖೆ ನಡೆಯಬೇಕಾಗಿದೆ. ಈ ಜಾಲದ ಕಪಿ ಮುಷ್ಠಿಗೆ ದಾಸರಾಗುತ್ತಿರುವವಲ್ಲಿ ಹೆಚ್ಚಿನವರು ಯುವ ಜನಾಂಗದವರು ಎಂಬುದು ದುರದೃಷ್ಟಕರ. ಅದೇ ರೀತಿ ಮಕ್ಕಳು ಕೂಡ ಮಾದಕ ವ್ಯಸನಕ್ಕೆ ದಾಸರಾಗುತ್ತಿರುವುದು ಬೇಸರದ ವಿಚಾರ.
ಗೆಳೆಯ ಅಥವಾ ಗೆಳತಿಯೊಂದಿಗೆ ಸೇರಿ ಮಕ್ಕಳು ಏನೇನು ಮಾಡುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಪಾಠ ಚನ್ನಾಗಿ ಕಲಿಯುತ್ತಿದ್ದಾರೆಯೇ? ಹೆತ್ತವರಲ್ಲಿ ಮಾತನಾಡುವ ಶೈಲಿಯಲ್ಲಿ ವ್ಯತ್ಯಾಸವಾಗಿದೆಯೇ? ಸಂಬಂಧಿಕರೊಳಗಿನ ಬಾಂಧವ್ಯ ಚೆನ್ನಾಗಿದೆಯೇ? ಮುಂತಾದವುಗಳಿಂದ ವ್ಯಸನಿಗಳನ್ನು ತಿಳಿದುಕೊಳ್ಳಬಹುದು. ಮಾರುಹೋದರೆ ಮತ್ತೆ ವಾಸ್ತವಕ್ಕೆ ಮರಳುವುದು ಕಷ್ಟಕರ. ಇಂತಹ ಮಾದಕ ವಸ್ತುಗಳು ತುಂಬಾ ಕಡೆಗಳಲ್ಲಿ ಕಳ್ಳಸಾಗಾಣಿಕೆಯಾಗುತ್ತಿವೆ. ಪೋಲಿಸರು ಕಂಡು ಹಿಡಿದು ವಶಕ್ಕೆ ತೆಗೆದುಕೊಂಡರೂ ಸಹ ಕೆಲವೊಮ್ಮೆ ಕೈಗೆ ಸಿಗದೆ ಉಳಿದು ಬಿಡುತ್ತದೆ.
ಗಾಂಜಾ, ಅಫೀಮು ಚರಸ್ ನಂತಹ ಮಾದಕ ವಸ್ತುಗಳ
ಶೇಖರಣೆ, ಬಳಕೆ, ಸಾಗಾಣಿಕೆ ಹಾಗೂ ಉತ್ಪಾದನೆ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಯುವ ಜನತೆ ಮನದಟ್ಟು ಮಾಡಿಕೊಳ್ಳಬೇಕು. ಇಂತಹ ಅಪರಾದಕ್ಕೆ ಗರಿಷ್ಠ 10 ವರ್ಷಗಳ ಸೆರೆವಾಸ ಹಾಗೂ ಭಾರೀ ದಂಡ ವಿಧಿಸಲಾಗುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಯುವ ಜನಾಂಗ ಮುಂದಾಗಬೇಕಾಗಿದೆ.
ಇಂದಿನ ಯುವ ಜನಾಂಗ ಆರಂಭದಲ್ಲಿ ಸಂತೋಷ ವಿನೋದಕ್ಕಾಗಿ ಮಾದಕ ದ್ರವ್ಯ ಸೇವನೆ ಆರಂಭಿಸುತ್ತಾರೆ. ಅದು ಚಟವಾಗಿ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ. ಹಾಗಾಗಿ ಯುವಜನತೆ ಜಾಗೃತರಾಗಿರಬೇಕು .ಇಲ್ಲವಾದಲ್ಲಿ ಇದಕ್ಕೆ ದಾಸರಾಗಿ ಬದುಕನ್ನು ಅಂತ್ಯಗೊಳಿಸುವಲ್ಲಿಗೆ ಬರುವ ಸ್ಥಿತಿ
ನಿಮಾ೯ಣವಾಗಬಹುದು. ಈ ಬಗ್ಗೆ ವೈದ್ಯರ ಅಭಿಪ್ರಾಯದಂತೆ ಹೇಳುದಾದರೆ,
ಡ್ರಗ್ ಅಡಿಷನ್ ಎಂದರೇನು?
ವ್ಯಕ್ತಿಯೊಬ್ಬ ಪ್ರತಿ ನಿತ್ಯ ಮಾದಕ ವಸ್ತುಗಳನ್ನು ಬಳಸುವ ಅನಾರೋಗ್ಯಕರ ಪ್ರವೃತ್ತಿಯನ್ನು ಮಾದಕ ದ್ರವ್ಯ ವ್ಯಸನ (ಡ್ರಗ್ ಅಡಿಷನ್) ಅಥವಾ ಮಾದಕ ವಸ್ತುಗಳ ದುರುಪಯೋಗ ಎನ್ನಬಹುದು. ಈ ರೀತಿಯ ಮಾದಕ ವ್ಯಸನವು ಗಂಭೀರವಾದ, ಭಾವನಾತ್ಮಕ ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು.
ಮಾದಕ ದ್ರವ್ಯ ವ್ಯಸನ ಪ್ರಾರಂಭ ಜೀವನದ ಅಂತ್ಯದ ಸಂಕೇತ
ಮೊದ ಮೊದಲು ಮದ್ಯವನ್ನು ಅಥವಾ ಡ್ರಗ್ಸ್ ನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವಂತೆ, ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ, ಸಮಸ್ಯೆಗಳನ್ನು ಮರೆಯಲೆಂದೋ ಮಾದಕ ದ್ರವ್ಯಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಡ್ರಗ್ಸ್ ಬಳಕೆಯಿಂದ ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಮಾಡುತ್ತದೆ. ಅಂತವರು ಅದರ ಸೇವನೆಯನ್ನು ನಿಯಂತ್ರಣ ಮಾಡಲಾಗದೇ ಹೋಗುತ್ತಾರೆ.
ಮಾದಕ ದ್ರವ್ಯಗಳಿಂದ ಮನುಷ್ಯನ ಮಿದುಳಿನ ಮೇಲೆ ಪರಿಣಾಮ:
ವೈದ್ಯರ ಪ್ರಕಾರ ಹೇಳುದಾದರೆ ಡ್ರಗ್ಸ್ ಸೇವನೆಯಿಂದ ಮನುಷ್ಯನ ಮಿದುಳಿನ ನರಗಳಲ್ಲಿ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ. ಯಾವಾಗ ನೀವು ಮಾದಕ ವಸ್ತುಗಳನ್ನು ಬಳಸುತ್ತಿರೋ ಇದು ಮಿದುಳಿನ ಸಂದೇಶದ ವ್ಯವಸ್ಥೆಯನ್ನು ಪುನರಾವರ್ತಿಸುತ್ತದೆ ಹೀಗೆ ಡೋಪಮೈನ್ ಬಿಡುಗಡೆಯಾಗಿ ಮಿದುಳಿನಲ್ಲಿ ಸಂತೋಷ ಉಂಟಾಗುತ್ತದೆ. ಮಿದುಳು ಮತ್ತೆ ಮತ್ತೆ ಸಂತೋಷಪಡಲು ಬಯಸಿ ಮಾದಕ ದ್ರವ್ಯವನ್ನು ಹೆಚ್ಚು ಹೆಚ್ಚಾಗಿ ಬಳಸುವಂತೆ ಉತ್ತೇಜಿಸುತ್ತದೆ.
ದೀರ್ಘಕಾಲದ ಡ್ರಗ್ಸ್ ಸೇವೆನೆಯು ಮಿದುಳಿನ ಅರಿವಿನ ಕಾರ್ಯಕ್ಷಮತೆಯನ್ನು ಹಾನಿಗೊಳಿಸಬಹುದು. ಅಧ್ಯಯನಗಳು ತಿಳಿಸುವಂತೆ ದೀರ್ಘಕಾಲದ ಡ್ರಗ್ಸ್ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆಗೆ ಒಳಗಾಗಬಹುದು. ಅದೇ ರೀತಿ ಇತರ ಸಮಸ್ಯೆಗಳಾದ
* ನಡುಗುವಿಕೆ
* ಹಸಿವು ಮತ್ತು ನಿದ್ರೆಯಲ್ಲಿ ಏರುಪೇರು
* ಮೂರ್ಛೆ ಹೋಗುವುದು
* ತೂಕದಲ್ಲಿ ಏರಿಳಿತ
* ಸಾಮಾಜಿಕವಾಗಿ ಕಡೆಗಣಿಸಲ್ಪಡುವುದು
* ಅತಿಯಾದ ಅಥವಾ ಅತಿರೇಕದ ಚಟುವಟಿಕೆಗಳು
* ಹೆದರಿಕೆ ಮತ್ತು ತಳಮಳ
* ಆತಂಕ ಮತ್ತು ಮತಿ ವಿಕಲ್ಪ.ಉoಟಾಗುತ್ತವೆ.
ಹೆಚ್ಚಿನ ವಿದ್ಯಾಥಿ೯ಗಳು ಸೇರಿದಂತೆ ಯುವ ಜನಾಂಗ ಕ್ಷಣಿಕ ಸುಖ, ಮಾದಕತೆಗಾಗಿ ತಪ್ಪು ದಾರಿ ಹಿಡಿದು ಸಮಾಜ ಘಾತುಕ ಕಾಯ೯ದಲ್ಲಿ ತೊಡಗಿಕೊಳ್ಳುತ್ತಿರುದನ್ನು ತಡೆ ಹಿಡಿಯಬೇಕಾಗಿದೆ. ಸಕಾ೯ರ ಈ ಡ್ರಗ್ಸ್ ಜಾಲವನ್ನು ಭೇಧಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.ಸುಲಭ ರೀತಿಯ ಹಣ ಸಂಪಾದಿಸಲು ಈ ರೀತಿಯ ಕರಾಳ ದಂದೆಗೆ ಇಳಿಯುವವರ ಬಗ್ಗೆ ಕಠಿಣ ಶಿಕ್ಷೆ ನೀಡಬೇಕು.ಈಗಾಗಲೇ ಪಂಜಾಬ್ ರಾಜ್ಯದಲ್ಲಿರುವ ಅತೀ ಹೆಚ್ಚಿನ ಯುವ ಜನಾಂಗ ಈ ರೀತಿಯ ಡ್ರಗ್ಸ್ ಜಾಲಕ್ಕೆ ಒಳಪಟ್ಟಿರುವುದು ನಮ್ಮ ಮುಂದೆ ದೊಡ್ಡ ಉದಾಹರಣೆಯಾಗಿದೆ. ಭಾರತವು ಪ್ರಪಂಚದಲ್ಲಿ ಅತೀ ಹೆಚ್ಚಿನ ಯುವ ಜನಾಂಗವನ್ನು ಹೊಂದಿದೆ .ದೇಶದ ಅಭಿವೃದ್ಧಿ ಯುವ ಜನಾಂಗದಿಂದ ಮಾತ್ರ ಸಾಧ್ಯ ಹೀಗಾಗಿ ಕೇಂದ್ರ ಸಕಾ೯ರ ಇದರ ಬಗ್ಗೆ ಕಠಿಣ ಕಾನೂನು ಜಾರಿಗೆ ತಂದು ಇದರ ಅಂತ್ಯಮಾಡಬೇಕಾಗಿದೆ.
ರಾಘವೇಂದ್ರ ಪ್ರಭು, ಕವಾ೯ಲು, ಯುವ ಲೇಖಕ
ಮತ್ತೆ ಕೃಷಿಯತ್ತ ಆಸಕ್ತಿ : ಲೇಖನ - ಕೆ.ಎಲ್. ಕುಂಡಂತಾಯ
Posted On: 29 Aug 2020, 08:38 PM
'ನಿಸರ್ಗ' ದೇಶಕ್ಕೆ ಸೌಭಾಗ್ಯವನ್ನು ಕೊಡುತ್ತದೆ. 'ಅನ್ನ' ಮನುಕುಲಕ್ಕೆ "ಜೀವ - ಜೀವನ" ಕೊಡುತ್ತದೆ. ಹೌದು.... ನಿಸರ್ಗ, ತಾನು ಮೊದಲು ಸೌಭಾಗ್ಯವತಿ - ಫಲವತಿಯಾಗಬೇಕು.ಆಗ ದೇಶಕ್ಕೆ ಸೌಭಾಗ್ಯದ ಕೊಡುಗೆಯನ್ನು ಕೊಡಲಾದೀತು . ಸದಾ ಸಂಪದ್ಭರಿತ ನಿಸರ್ಗ "ಸೌಮಾಂಗಲ್ಯ"ವನ್ನು ಪಡೆದು ಹಸಿರು 'ಹೊದ್ದು' ಫಲ ಸಮೃದ್ಧಿಯನ್ನು 'ಹೊತ್ತು' ಸಂಭ್ರಮಿಸುವ ಕಾಲವೇ ವರ್ಷಾಕಾಲ - ಮಳೆಗಾಲ . ನಿಸರ್ಗ - ಪ್ರಕೃತಿ 'ಸ್ತ್ರೀ' . ಆಕಾಶ 'ಪುರುಷ'. ಸುರಿಯುವ 'ಮಳೆ' ; ಭೂಮಿ - ಆಕಾಶಕ್ಕೆ ಸಂಬಂಧವನ್ನು ಬೆಸೆಯುತ್ತದೆ . ರೈತ ಸಕಾಲವೆಂದು ಗದ್ದೆಗಿಳಿಯುತ್ತಾನೆ. ನಿಸರ್ಗ ನೀರೆ ಅರಳಿ ಸಿರಿವಂತಳಾಗುತ್ತಾಳೆ ಅಂದರೆ ಸಮೃದ್ಧಿಯ ಫಲವನ್ನು ಕೊಡುವುದಕ್ಕೆ ಸನ್ನದ್ಧಳಾಗುತ್ತಾಳೆ . ಭೂಮಿಯ ಫಲವಂತಿಕೆಯನ್ನು ಕಂಡು ಹೆಣ್ಣು ಫಲವತಿಯಾಗುವುದಕ್ಕೆ ಸಮೀಕರಿಸಿ ಒಬ್ಬಳನ್ನು "ಹೆತ್ತ ತಾಯಿ' ಎಂದು , ಮತ್ತೊಬ್ಬಳನ್ನು "ಹೊತ್ತ ತಾಯಿ" ಎಂದು ಮಾನವ ಕಂಡುಕೊಂಡುದುದು ಪ್ರಕೃತಿಯ ಅಂತರ್ಗತವಾಗಿರುವ ಪರಮ ಸತ್ಯ . ಈ ಸತ್ಯದ ಅರಿವು ಮೂಡಲು ಸಹಸ್ರಾರು ವರ್ಷಗಳ ಬದುಕಿನ ಅನುಭವ ಕಾರಣ. ಇದೇ 'ಮಾತೃ ಆರಾಧನೆಯ' ಮೂಲ . ಮಣ್ಣು - ಭೂಮಿಯನ್ನು ನಂಬುವುದು . ಅದರೊಂದಿಗೆ ಹೋರಾಡುವುದು , ಕೃಷಿಕನ ಕಾಯಕ . ಈ ಸಂಬಂಧ 'ಕೃಷಿ ಸಂಸ್ಕೃತಿ'ಯ ಪ್ರಾರಂಭದಿಂದ ಸಾಗಿ ಬಂದಿದೆ . ಮಣ್ಣಿನೊಂದಿಗೆ ನಡೆಸುವ ಹೋರಾಟ - ಕೃಷಿಕಾರ್ಯ , ಫಲ - ಬೆಳೆಯನ್ನು ಕೊಡಬಲ್ಲುದೇ ಹೊರತು , ಅಮ್ಮ ಮುನಿಯಲಾರಳು , ಏಕೆಂದರೆ ಅಮ್ಮನ ಅಂದರೆ ಮಣ್ಣಿನ ಮಗನಲ್ಲವೇ . ಆದರೆ ತುಳು ಗಾದೆಯೊಂದು ಎಚ್ಚರಿಸುತ್ತದೆ " ಮರಿ ತುಚಿಂಡ ಮರ್ದ್ ಉಂಡು , ಮಣ್ಣ್ ತುಚಿಂಡ ಮರ್ದ್ ಇಜ್ಜಿ" ಎಂದು .ಅಂದರೆ ವಿಷತುಂಬಿದ ಹಾವು ಕಚ್ಚಿದರೆ ಮದ್ದುಇದೆ ,ಆದರೆ ಮಣ್ಣು ಕಚ್ಚಿದರೆ - ಮುನಿದರೆ ಅದಕ್ಕೆ ಮದ್ದಿಲ್ಲ - ಪರಿಹಾರವಿಲ್ಲ . ಜನ್ಮ ಭೂಮಿಯನ್ನು ಜನನಿಗೆ ಹೋಲಿಸಿದರು . ಜನ್ಮ ಭೂಮಿಯ ರಕ್ಷಣೆ ಮೌಲ್ಯಯುತ ಕಾಯಕವಾಯಿತು . ಮಣ್ಣನ್ನು ನಂಬಿದಹಾಗೆ ಮಣ್ಣನ್ನು ಸಾಕ್ಷಿಯಾಗಿರಿಸಿಕೊಂಡರು . ಜನಪದ ಕತೆಗಳಲ್ಲಿ , ಪುರಾಣಗಳಲ್ಲಿ ಮಣ್ಣಿನ ಸತ್ಯಗಳು ಪ್ರಕಟಗೊಳ್ಳುತ್ತಿರುತ್ತವೆ . ಮಣ್ಣು ,ದಿಕ್ಕುಗಳು , ಆಕಾಶ ,ಸೂರ್ಯ - ಚಂದ್ರ ಮುಂತಾದ ಕಣ್ಣಿಗೆ ಕಾಣುವ ಸತ್ಯಗಳನ್ನು ಮಣ್ಣಿನಷ್ಟೇ ಮುಖ್ಯವಾಗಿ ಮನುಕುಲ ಸ್ವೀಕರಿಸಲ್ಪಟ್ಟಿದೆ . ಮುನಿಯಲು , ಶಾಪಕೊಡಲು ಮಣ್ಣು ಸಾಕ್ಷಿಯಾಗುವ ಪರಿಕಲ್ಪನೆ ಅದ್ಭುತ . 'ನೆಲಕಾಯಿ ದರ್ತೆರ್' , "ಮಣ್ಣ್ ಮುಟುದು ಪೊಣ್ಣ ಶಾಪ ಕೊರಿಯೊಲು ಸಿರಿ". ಸತ್ಯವನ್ನು ದೃಢೀಕರಿಸಲು ಅಥವಾ ಮತ್ತಷ್ಟು ಪರಿಣಾಮಕಾರಿಯಾಗಿಸಲು 'ತಾಯಿ ಸಾಕ್ಷಿ' , "ಭೂಮಿ ಸಾಕ್ಷಿ" ('ಅಪ್ಪೆ ಕಂಟಲ್ದೆ' , 'ಭೂಮಿ ಸಾಕ್ಷಿ' ಇವು ಜನಪದರಲ್ಲಿ ಸಾಮಾನ್ಯ) ಎಂದು ಹೇಳುವುದು ಜನಪದರ ಮುಗ್ಧ ; ಸರಳ ; ವಿಮರ್ಶೆಗಳಿಲ್ಲದ ಜೀವನ ವಿಧಾನದಲ್ಲಿದೆ. ಜನಪದ - ವೈದಿಕ ವಿಧಿಗಳಲ್ಲಿರುವ ಭೂಮಿ ಪ್ರಧಾನವಾದ ಆಚರಣೆಗಳು ಭೂಮಿಯನ್ನು ಮನುಕುಲ ಒಪ್ಪಿದ ಭಾವವನ್ನು ಪ್ರಕಟಿಸುತ್ತದೆ . ಅನುಷ್ಠಾನದಲ್ಲಿರುವ 'ಭೂಮಿಪೂಜೆ' ಒಂದು ಪ್ರತ್ಯಕ್ಷ ಉದಾಹರಣೆ . ಬೂತ - ದೈವಗಳನ್ನು ಮಣ್ಣಿನ ಸತ್ಯಗಳೆಂದೇ ಸ್ವೀಕಾರ.ಅಬ್ಬರದ ಅಭಯ ಕೊಡಲು ಮಣ್ಣಿನ ಸತ್ಯವೇ ಭರವಸೆ - ಪ್ರೇರಣೆ . ನಾಗ ಭೂಮಿಪುತ್ರ . ವೈದಿಕದ ಹೆಚ್ಚಿನ ದೇವರು ಅವತರಿಸಿದ್ದು , ಲೀಲಾನಾಟಕ ಪ್ರದರ್ಶಿಸುವುದು ಭೂಮಿಯಲ್ಲಿ , ಶಾಪ ವಿಮೋಚನೆಗೆ ಆರಿಸಿಕೊಳ್ಳುವುದು ಧರಿತ್ರಿಯನ್ನೆ . ಇದು ಸನಾತನವಾದುದು , ಎಂದರೆ 'ಬಾಲ ಪ್ರಾಕ್ ದ ನಂಬಿಕೆಲು'. ಈ ಭೂಮಿ ; ವಾಸಕ್ಕೆ , ಕಾಯಕಕ್ಕೆ , ಹುಟ್ಟಿನಿಂದ ಮರಣ ಪರ್ಯಂತದ ಕರ್ಮಗಳಿಗೆ ವೇದಿಕೆ . ಜೀವನಾಧಾರವಾದ ಅನ್ನವನ್ನು ಪಡೆಯಲು ಭೂಮಿ ಸಮೃದ್ಧಿಯ ನೆಲೆ . ಇಂತಹ ಹತ್ತಾರು ಅನುಸಂಧಾನಗಳೊಂದಿಗೆ ಭೂಮಿಯನ್ನು ಒಪ್ಪಿರುವ ಮಾನವ ಭೂಮಿ ಸಸ್ಯ ಶ್ಯಾಮಲೆಯಾಗಿರಬೇಕು ,ಅದಕ್ಕೆ ಕಾಲಕ್ಕೆ ಸರಿಯಾಗಿ ಮಳೆಬರಬೇಕು. ಅದರಿಂದ ಕ್ಷೋಭೆಗಳಿಲ್ಲದ ದೇಶ ,ಸಜ್ಜನರು ನಿರ್ಭಯದಿಂದ ಬದುಕುವಂತಹ ಸ್ಥಿತಿ ಸ್ಥಾಯಿಯಾಗ ಬೇಕು ಎಂಬುದೆ ಸಮಸ್ತರ ಪ್ರಾರ್ಥನೆಯಾಗುವುದು ಅರ್ಥಪೂರ್ಣ . "ಭೂಮಿ - ಮಳೆ - ಕಾಯಕ - ಬೆಳೆ" ಇವು ಶತಮಾನ ಶತಮಾನಗಳ ಅನುಬಂಧ . ಇಲ್ಲಿ ಪ್ರಾಪ್ತಿಯಾಗುವ ಸಮೃದ್ಧಿಯಿಂದ ದೇಶ ಕಟ್ಟಬಹುದು , ನೂತನ ,ಅತಿನೂತನ ಯುಗದಲ್ಲಿ ಪ್ರಸ್ತುತವಾಗಿ ಬದುಕಬಹುದು . ಅನ್ನ ಇಲ್ಲದೆ ಜೀವವಿಲ್ಲ , ಜೀವನವೂ ಇಲ್ಲ . ಭೂಮಿ ಇರುತ್ತದೆ , ಮಳೆ ಬರುತ್ತದೆ , ಆದರೆ ಕಾಯಕ ಬೇಕು ; ಆಗ ಬೆಳೆ - ಫಲ ಸಿದ್ಧಿ. ಇದೇ ನಮ್ಮ ಆಧಾರ - ಸಿದ್ಧಾಂತ . ಇದರಿಂದಲೇ ಮತ್ತೆಲ್ಲ ಅಭಿವೃದ್ಧಿ .ಲೋಕಕ್ಕೆ ಸುಭಿಕ್ಷೆ . ಕೃಷಿ ಇದ್ದಲ್ಲಿ ದುರ್ಭಿಕ್ಷೆ ಇಲ್ಲ ; ಹೌದಲ್ಲ. ಮಳೆ ಬರುತ್ತಿದೆ ಕೃಷಿ ಕಾಯಕ ಆರಂಭವಾಗಿದೆ .ಆದರೆ ಪ್ರಮಾಣ ಏಕೆ ಕುಸಿದಿದೆ . ಕೃಷಿ ಭೂಮಿ ಹಡೀಲು ಬಿದ್ದಿವೆ . ಮಣ್ಣು ,ಮಳೆ ಎರಡೂ ಇವೆ ಆದರೆ ಕೃಷಿಕಾಯಕವಿಲ್ಲ . ಮುನಿಯಲಿಕ್ಕಿಲ್ಲವೇ ನಿಸರ್ಗ ಎಂಬ ದಿನಗಳಿದ್ದುವು , ಆದರೆ ಈ ಮಳೆಗಾಲ ಬಹುತೇಕ ಸಮೃದ್ಧ ಗದ್ದೆಗಳು ಸಾಗುವಳಿಯ ಭಾಗ್ಯವನ್ನು ಪಡೆದಿವೆ . ಹಲವು ವರ್ಷಗಳಿಂದ ಹಡೀಲು ( ಪಡೀಲ್ ) ಬಿದ್ದಿದ್ದನ್ನು ಗಮನಿಸಿ ಕೃಷಿ ಕೃಶವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿತ್ತು. ಈ ವರ್ಷ ಅಂತಹ ಗೊಂದಲ ಸ್ವಲ್ಪಮಟ್ಟಿಗೆ ಪರಿಹಾರವಾದಂತೆ ಅನ್ನಿಸುತ್ತಿದೆ .. ನಮಗೆ ಸೌಭಾಗ್ಯವನ್ನು ಕೊಡಬಲ್ಲ ಭೂಮಿ ಮತ್ತು ಸುರಿಯುವ ಮಳೆ ,ಇವೇ ತಾನೆ "ನಿಸರ್ಗ"ಅಲ್ಲವೆ? ಉಳುವವ ಹೊಲದೊಡೆಯನಾದ ಉಳುವವ ಹೊಲದೊಡೆಯನಾದ , ಆದರೆ ನಿರೀಕ್ಷೆಯಷ್ಟು ಫಲಕೊಡಲಿಲ್ಲ ಕಾಯಿದೆ . ಹಿಂದಿನ ಭೂಸುಧಾರಣಾ ಕಾಯಿದೆಯ ಪರಿಣಾಮ ಕಾಣಲು ನೀವೊಮ್ಮೆ ಉಡುಪಿ - ದಕ್ಷಿಣಕನ್ನಡ ಜಿಲ್ಲೆಗೆ ಬನ್ನಿ . ಕಾಯಿದೆ ಮೂಲಕ ಅಧಿಭೋಗದ ಹಕ್ಕು ದೊರೆತ ಕೃಷಿ ಭೂಮಿಗಳು: • ಹಡೀಲು (ಕೃಷಿ ನಡಯದೆ ಬಂಜರು) ಬಿದ್ದಿವೆ. • ಹೆಚ್ಚಿನ ಭೂಮಿಗಳು ಮಾರಾಟವಾಗಿವೆ . • ರಸ್ತೆ ಬದಿಯಲ್ಲಿರುವ ಗದ್ದೆಗಳಿಗೆ ಮಣ್ಣು ತುಂಬಿಸಿ ಕಟ್ಟಡ ಕಟ್ಟಲಾಗುತ್ತಿದೆ . • ಮೂರು ಬೆಳೆ ಬೆಳೆಯ ಬಲ್ಲ ಫಲವತ್ತಾದ ಗದ್ದೆಗಳು .ನೀರಿನ ಸಹಜ ಸೌಲಭ್ಯವಿರುವ ಗದ್ದೆಗಳ ಸ್ಥಿತಿ ಒಮ್ಮೆ ನೋಡಿ .ಹುಲ್ಲು ,ಕಳೆಗಿಡ ,ಮುಟ್ಟಿದರೆ ಮುನಿಯಂತಹ ಮುಳ್ಳು ಬೆಳೆದು ನಿಂತಿವೆ . • ಗ್ತಾಮಾಂತರಗಳಲ್ಲಿ ಬಯಲಿನ ನಡುವೆ ಅಥವಾ ಬದಿಯಲ್ಲಿ ಸಣ್ಣ ತೊರೆಗಳು , ನದಿಗಳು , ದೊಡ್ಡ ನದಿಗಳ ಉಪತೊರೆಗಳು ಹರಿಯುತ್ತಿರುತ್ತವೆ . ಈ ನದಿಗಳಿಗೆ - ತೊರೆಗಳಿಗೆ ಅಡ್ಡ 'ಕಟ್ಟ' ಕಟ್ಟಿ ಇದರಿಂದ ಹರಿಯುವ ನೀರಿನಿಂದ ಎರಡನೇಯ ಬೆಳೆಯನ್ನು ಸುಲಭವಾಗಿ ಮಾಡುತ್ತಿದ್ದರು ನಮ್ಮ ಹಿರಿಯರು. ಇದರಿಂದ ಪರಿಸರದ ಬಾವಿಗಳಲ್ಲಿ ಬೇಸಗೆಯ ಕಾಲಕ್ಕೆ ನೀರಿನ ಬರವೇ ಇರುತ್ತಿರಲಿಲ್ಲ .ಆರೀತಿಯಲ್ಲಿ ಸಹಜವಾಗಿ ಪರಿಸರದಲ್ಲಿ ಅಂತರ್ಜಲ ವೃದ್ಧಿಯಾಗುತ್ತಿತ್ತು. ರೈತ ಕಷ್ಟಪಟ್ಟು ಪ್ರತಿವರ್ಷ ತೊರೆಗಳಲ್ಲಿ ಹರಿಯುತ್ತಿದ್ದ ನೀರಿಗೆ ಅಡ್ಡನೆ ಕಟ್ಡವನ್ನು ಕಟ್ಟುತ್ತಿದ್ದು ಆ ನೀರಿನ ಫಲಾನುಭವಿಗಳೆಲ್ಲ ಸೇರಲೇ ಬೇಕಿತ್ತು . ಬೇಸಾಯದ ಸಹಕಾರ - ಸೌಹಾರ್ದ ಪದ್ಧತಿಯಂತೆ ಈ ಕಾಯಕ ನಡೆಯುತ್ತಿತ್ತು . ಕೆಲವು ಕಟ್ಟಗಳು ಊರಿನ ದೇವರ ಹೆಸರಿನಲ್ಲಿ - ಬೂತಗಳ ಹೆಸರಿನಲ್ಲಿರುತ್ತಿದ್ದುವು . ಕಟ್ಟ ದೃಢವಾಗಿ ನಿಲ್ಲಲು ಊರ ದೈವ - ದೇವರಿಗೆ ಮಾಮೂಲು ಹರಕೆಗಳನ್ಮು ಹೇಳಲಾಗುತ್ತಿತ್ತು . ಬಳಿಕ ನಿರ್ದಿಷ್ಟ ದಿನದಂದು ಹರಕೆ ಸಲ್ಲಿಸಲಾಗುತ್ತಿತ್ತು ( ಪಡುಬಿದ್ರಿಯ ಕಟ್ಟದಪ್ಪ , ಬೇರೆ ಊರುಗಳಲ್ಲಿ ದೇವರಿಗೆ , ದೈವಗಳಿಗೆ ಹೂವಿನಪೂಜೆ ಮುಂತಾದ ಹರಕೆ ಸಮರ್ಪಿಸಲಾಗುತ್ತಿತ್ತು) . ಆದರೆ ಸರಕಾರದ ಕಿರುನೀರಾವರಿ ಯೋಜನೆಯ ವತಿಯಲ್ಲಿ ಸಣ್ಣ ಅಣೆಕಟ್ಡು(ಕಿಂಡಿ ಅಣೆಕಟ್ಟು)ಗಳನ್ನು ಕಟ್ಟುತ್ತಾರೆ , ಇದಕ್ಕೆ ಹಲಗೆ ಹಾಕಿದರೆ ಅಣೆಕಟ್ಟು ಅಥವಾ 'ಕಟ್ಟ' ಸಿದ್ಧ. ಹರಿದು ಹೋಗುವ ನೀರಿಗೆ ತಡೆಯಾಗಿ ನೀರು ಶೇಖರಣೆಯಾಗುತ್ತದೆ . ಈ ನೀರನ್ನು ಗದ್ದೆಯಿಂದ ಗದ್ದೆಗೆ ಹಾಯಿಸಿ ಬೆಳೆ ಬೆಳೆಯ ಬಹುದು ,ಆದರೆ ಈಗ ಸರಕಾರವು ಗ್ರಾಮಪಂಚಾಯತ್ ಮೂಲಕ ಒದಗಿಸಿದ ಅಣೆಕಟ್ಟುಗಳು ಬಹುತೇಕ ಉಪಯೋಗವಾಗುವುದೇ ಇಲ್ಲ .ಅಲ್ಲೊಂದು ಇಲ್ಲೊಂದು ಒಂದಷ್ಟು ಗದ್ದೆಗಳಿಗೆ ಉಪಯೋಗವಾಗತ್ತಿರಬಹುದು . ಇದು ನಾವು ಕೃಷಿಭೂಮಿಗಳಲ್ಲಿ ಬೆಳೆಬೆಳೆಯುವ ವಿಧಾನ . ಅಂದರೆ ಒಂದು ವಿಶಾಲವಾದ ಬಯಲಿನಲ್ಲಿ ಅಲ್ಲಲ್ಲಿ ನಾಲ್ಕೈದು ಗದ್ದೆಗಳು ನಾಟಿಯಾಗಿ , ಉಳಿದವುಗಳು ಹುಲ್ಲು ,ಕಳೆಗಿಡಗಳಿಂದ ತುಂಬಿರುವುದನ್ನು ಕಾಣುತ್ತೇವೆ . ಇದು ಭೂಸುಧಾರಣಾ ಕಾಯಿದೆಯ ಫಲಶ್ರುತಿ . ಯಾವುದೋ ಒಂದು ಕ್ಷೇತ್ರಕಾರ್ಯ ನಿಮಿತ್ತ ಬಯಲಿನ ನಡುವೆ ಹುಣಿಯಲ್ಲಿ ನಡೆದು ಹೋಗುವ ಸಂದರ್ಭ ಬಂತು .ಆಗ ನಾನು ಗಮನಿಸಿದ್ದು ಗದ್ದೆಗಳಲ್ಲಿ ನೀರು ತುಂಬಿದೆ ,ಆದರೆ ಬೆಳೆ ಬೆಳೆದಿಲ್ಲ . ಯಾಕೆಂದು ಕೇಳಿದಾಗ ಅಣೆಕಟ್ಟು ಕಾರಣವಾಗಿ ಗದ್ದೆಗಳಿಗೆ ನೀರು ಹರಿಯುತ್ತದೆ , ಆದರೆ ಬೆಳೆ ಬೆಳೆಯುವವರಿಲ್ಲ . ಮತ್ತೊಂದು ಊರಿನಲ್ಲಿ ನೀರಿನ ಸೌಲಭ್ಯವಿದ್ದೂ ಬೆಳೆಬೆಳೆದಿಲ್ಲ ಏಕೆ ಎಂಬ ಪ್ರಶ್ನೆ ಕೇಳುತ್ತಾರೆ ಎಂದೇ ಆ ಊರಿನಲ್ಲಿ ಸಕಾಲದಲ್ಲಿ ಅಣೆಕಟ್ಟಿಗೆ ಹಲಗೆ ಹಾಕುವುದೇ ಇಲ್ಲ . ಹಲಗೆ ಹಾಕಿದರೆ ತಾನೆ ನೀರು ಹರಿದು ಗದ್ದೆಗೆ ಬರುವುದು . ನೀರು ತೊರೆಯಲ್ಲಿಯೇ ಸರಾಗವಾಗಿ ಹರಿದು ಹೋದರೆ ಯಾರು ಕೇಳುತ್ತಾರೆ ? ಅಂದರೆ ಕೃಷಿ - ಬೇಸಾಯ ಅಷ್ಟು ಅವಗಣಿಸಲ್ಪಟ್ಟಿದೆ . ಆದರೆ ಬಹಳ ಶ್ರದ್ಧೆಯಿಂದ ಕೃಷಿಕಾಯಕದಲ್ಲಿ ತೊಡಗುವವರಿದ್ದಾರೆ , ಅವರ ಸಂಖ್ಯೆ ವಿರಳ .ಕೃಷಿ ಲಾಭದಾಯಕವಲ್ಲ ,ಅವಿಭಕ್ತ ಕುಟುಂಬ ವಿಭಕ್ತ ಕುಟುಂಬಗಳಾಗಿವೆ . ಕಾರ್ಮಿಕರಲ್ಲ . ಒಪ್ಪ ಬಹುದು ಆದರೆ ಹಡೀಲು ಭೂಮಿಗೆ ಉತ್ತರವಿಲ್ಲ,ಕಾಯಿದೆಗೆ ಅರ್ಥವಿಲ್ಲದಾಗಿದೆ .ಇವತ್ತಿಗೂ ಬೆಳೆ ಬೆಳೆಯುವುದು ಪ್ರತಿಷ್ಠೆ ಎಂದು ಗೌರವದಿಂದ ಬೆಳೆ ಬೆಳೆಯುವವರಿದ್ದಾರೆ ,ಅವರು ಕೃಷಿ ಕಾಯಕವನ್ನು ನಿಲ್ಲಿಸಲೇ ಇಲ್ಲ . • ಕಾಯಿದೆಯ ಮೂಲಕ ದೊರೆತ ಕೃಷಿ ಭೂಮಿಗಳ ಮಾರಾಟ ಈಗಾಗಲೇ ಆರಂಭವಾಗಿ ವರ್ಷ ಕೆಲವು ಕಳೆಯಿತು . ಭೂಸುಧಾರಣಾ ಕಾಯಿದೆಯಂತೆ ಡಿಕ್ಲರೇಶನ್ ಕೊಟ್ಟು ಟ್ರಿಬ್ಯೂನಲ್ ಗಳಲ್ಲಿ ಅಧಿಭೋಗದ ಹಕ್ಕನ್ನು ಕೊಡುವಾಗ ಕುಟುಂಬದ ಪರವಾಗಿ ಎಂದು ತೀರ್ಪು ನೀಡಿರುವ ಭೂಮಿಗಳು ಮಾರಾಟಕ್ಕೆ ಕಷ್ಟವಾಗುತ್ತದೆ . ಆದರೆ ಒಬ್ಬ ವ್ಯಕ್ತಿಯ ಹೆಸರಲ್ಲಿ ತೀರ್ಪು ಇದ್ದಾಗ ಭೂಮಿ ಮಾರಾಟ ಸುಲಭ . ಒಟ್ಟಿನಲ್ಲಿ ಶೇ.ನೂರಕ್ಕೆ ನೂರು ಭೂಸುಧಾರಣಾ ಕಾನೂನು ರೈತನಿಗೆ ಮತ್ತು ಕೃಷಿಗೆ ಪೂರಕವಾಗಲೇ ಇಲ್ಲ . ಒಮ್ಮೆ ಉಡುಪಿಯಿಂದ ಮಂಗಳೂರಿಗೆ ಹೆದ್ದಾರಿಗುಂಟ ಸಾಗಿದರೆ ದೇವರಾಜ ಅರಸರ ಕನಸು "ಉಳುವವನೆ ಹೊಲದೊಡೆಯ" ಹೇಗೆ ನನಸಾಗಿದೆ ಎಷ್ಟು ಕೃಷಿ ಭೂಮಿ ಹಡೀಲು ಬಿದ್ದಿವೆ , ಎಷ್ಟು ಫಲವತ್ತಾದ ಗದ್ದೆಗಳು ಅನ್ಯ ಕಾರ್ಯ ನಿಮಿತ್ತ ಬಳಕೆಯಾಗುತ್ತಿವೆ ಎಂದು ತಿಳಿಯುತ್ತದೆ . ಉಭಯ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕವಿರುವಲ್ಲಿ ಸಂಚರಿಸಿ ,ಕೃಷಿ ಭೂಮಿ ಹೇಗೆ ಪರಿವರ್ತನೆಯಾಗಿದೆ ಎಂದು ಮನಗಾಣ ಬಹುದು . "ಈ ರೀತಿ ಕೃಷಿ ಅವಗಣಿಸಲ್ಪಡ ಬೇಕಿದ್ದರೆ ಕಾರಣ ಕೃಷಿ ಲಾಭದಾಯಕವಾಗಿಲ್ಲ , ಕಾರ್ಮಿಕರ ಸಮಸ್ಯೆ ಮುಂತಾದ ಸಾರ್ವತ್ರಿಕ , ಸಿದ್ಧ ಉತ್ತರಗಳಿವೆ " ಆದರೆ ಈ ವರ್ಷ ಪರಿಸ್ಥಿತಿ ಸ್ವಲ್ಪ ಬದಲಾಗಿದೆ ಕೃಷಿ ಕಾಯಕ ಹೆಚ್ಚಿದಂತೆ ಕಾಣುತ್ತದೆ .ಫಲವತ್ತಾದ ಗದ್ದೆಗಳಲ್ಲಿ ಉಳುವ ಯಂತ್ರಗಳು ಓಡಾಡುತ್ತಿವೆ. ಹಲವು ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಬೇಸಾಯ ಆರಂಭವಾಗಿದೆ . ಈ ಪ್ರಮಾಣ ಇನ್ನೂ ಹೆಚ್ಚಾಗಲಿ. ಮತ್ತೆ ಮಣ್ಣು ಆಕರ್ಷಿಸಲಿ . "ಪೃಥ್ವೀ ಗಂಧವತೀ" ತಾನೆ ? ಈ ಗಂಧ ಮಣ್ಣಿನ ಮಕ್ಕಳನ್ನು ಆಕರ್ಷಿಸಲಿ . ಇನ್ನೇನು ಎರಡು ತಿಂಗಳಲ್ಲಿ "ಬೆಳೆ" ಎಂಬ 'ಭಾಗ್ಯ - ಸಮೃದ್ಧಿ' ಮನೆಯಂಗಳಕ್ಕೆ ಬರುತ್ತದೆ , ಮನೆಯ ಚಾವಡಿಯಲ್ಲಿ ರಾಶಿಯಾಗಲಿದೆ .ಆಗ ನೋಡಿ ರೈತನ ಧನ್ಯತೆಯ ಸಂಭ್ರಮವನ್ನು. ಬರಹ : ಕೆ .ಎಲ್. ಕುಂಡಂತಾಯ
ತಿಂಗಳು ಕಳೆದರು ಉಡುಪಿ ಜಿಲ್ಲಾ ದೈವಾರಾಧಕರ ಮನವಿಗೆ ಶಾಸಕರ ಪ್ರತಿಕ್ರಿಯೆಯಿಲ್ಲ
Posted On: 27 Aug 2020, 02:43 PM
ತುಳುನಾಡ ಧೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ವತಿಯಿಂದ ಇಂದು ಮಾಜಿ ಉಸ್ತುವಾರಿ ಸಚಿವರು ಹಾಗೂ ಮಾಜಿ ಶಾಸಕರಾದಂತಹ ಪ್ರಮೋದ್ ಮಧ್ವರಾಜ್ ಅವರಿಗೆ ಅವರ ನಿವಾಸದಲ್ಲಿ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಮನವಿಯನ್ನು ಕೊಡಲಾಯಿತು. ಕೋರನ ತುರ್ತು ಸಂದರ್ಭದಲ್ಲಿ ಸರ್ಕಾರದಿಂದ ದೈವ ಚಾಕ್ರಿ ವರ್ಗದವರಿಗೆ ಯಾವುದೇ ವಿಶೇಷ ಪ್ಯಾಕೇಜನ್ನು ಬಿಡುಗಡೆ ಮಾಡಲಿಲ್ಲ. ಹಾಗೂ ತಕ್ಕಮಟ್ಟಿಗೆ ಕರಾವಳಿಯಲ್ಲಿ ನಡೆಯುವ 150 ಜನ ಸೀಮಿತಕ್ಕೆ ದೈವಾರಾಧನೆಗೆ ಸರ್ಕಾರದಿಂದ ಅನುಮತಿ ಬರಲಿಲ್ಲ. ಉಡುಪಿ ಜಿಲ್ಲಾಧಿಕಾರಿಯವರಿಗೆ ಹಾಗೂ ಎಷ್ಟೇ ರಾಜಕೀಯ ವ್ಯಕ್ತಿಗಳಿಗೆ ಮನವಿ ನೀಡಿದರೂ ಕೂಡ ಸ್ಪಂದನೆ ದೊರಕದಿರುವುದರಿಂದ ಪ್ರಮೋದ್ ಮದ್ವರಾಜ್ ಮುಖಾಂತರ ವಿರೋಧ ಪಕ್ಷದ ವತಿಯಿಂದ ದೈವಾರಾಧಕರ ಸಮಸ್ಯೆಗಳನ್ನು ಮನವರಿಕೆ ಮಾಡಿ ಎಂದು ಮನವಿಯಲ್ಲಿ ಒಕ್ಕೂಟದ ಪರವಾಗಿ ವಿನಂತಿಸಿಕೊಂಡಿದ್ದಾರೆ. ಮನವಿಯನ್ನು ಪಡೆದುಕೊಂಡ ಮಾಜಿ ಶಾಸಕರು ಪ್ರಮೋದ್ ಮಧ್ವರಾಜ್ ದೈವಾರಾಧಕರ ಸಮಸ್ಯೆಯನ್ನು ಈ ದಿನ ಮುಖ್ಯಮಂತ್ರಿ ಹಾಗೂ ಇದಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಮಾತಾಡುತ್ತೇನೆ. ಯಾವುದೇ ಸಮಸ್ಯೆಗೆ ನಿಮ್ಮೊಂದಿಗೆ ಬೆಂಬಲವಾಗಿ ನಾನಿರುತ್ತೇನೆ ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಧಿಕಾರಿ ಶ್ರೀಧರ್ ಪೂಜಾರಿ, ಉಪಾಧ್ಯಕ್ಷರಾದ ರವಿ ಶೆಟ್ಟಿ, ಯೋಗೀಶ್ ಪೂಜಾರಿ, ಕಾಪು ಘಟಕದ ಅಧ್ಯಕ್ಷರಾದ ಯಶೋಧರ್ ಶೆಟ್ಟಿ ಹಾಗೂ ದಯೆಶಾ ಕೊಟ್ಯಾನ್, ಸುನಿಲ್ ಕುಮಾರ್, ಸಂತೋಷ್ ದೇವಾಡಿಗ, ನಿತ್ಯಾನಂದ, ಸೂರ್ಯಕಾಂತ್ ದೇವಾಡಿಗ ಮತ್ತು ರಕ್ಷಿತ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪಿತ್ರೋಡಿ,ಜಾರುಕುದ್ರು ಸೇತುವೆ ಪೂರ್ಣಗೊಳಿಸದಿದ್ದಲ್ಲಿ ಧರಣಿ ಮಾಜಿ ಸಚಿವ ಸೊರಕೆ ಎಚ್ಚರಿಕೆ
Posted On: 27 Aug 2020, 01:56 PM
ಕಟಪಾಡಿ: ಜಾರುಕುದ್ರು ಸಂಪರ್ಕ ಸೇತುವೆ ಕಾಮಗಾರಿ ಪೂರೈಸಿ ಅಕ್ಟೋಬರ್ ಒಳಗಾಗಿ ಜನರ ಉಪಯೋಗಕ್ಕೆ ಲಭ್ಯವಾಗದಲ್ಲಿ ಧರಣಿ ನಡೆಸುವ ಎಚ್ಚರಿಕೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೀಡಿರುತ್ತಾರೆ.
ಅವರು ಆ.26ರಂದು ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸುಮಾರು 7 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಾರುಕುದ್ರು ಸೇತುವೆಯ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಕಳೆದ 3 ವರ್ಷಗಳ ಹಿಂದೆ ತಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಜೂರುಗೊಳಿಸಿರುವ ಈ ಸೇತುವೆಯ ಅಭಿವೃದ್ಧಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯ ವೇಗವನ್ನು ಹೆಚ್ಚಿಸಿ ಶೀಘ್ರದಲ್ಲಿ ಜನೋಪಯೋಗಕ್ಕೆ ಒದಗಿಸಬೇಕೆಂದು ಒತ್ತಾಯಿಸಿದ್ದು, ಇಲ್ಲವಾದಲ್ಲಿ ಇಲ್ಲಿನ ಸಮಸ್ಯೆಯ ಬಗ್ಗೆ ಸರಕಾರದ ಗಮನಕ್ಕೆ ತರಲು ಸರಕಾರಿ ಕಚೇರಿಯ ಮುಂದೆ ಧರಣಿ ನಡೆಸುವ ಮೂಲಕ ಸರಕಾರಕ್ಕೆ ಒತ್ತಡ ಹಾಕಲು ಸಿದ್ಧ ಎಂದರು.
ಕಾಪು ಕ್ಷೇತ್ರದ ವಿವಿಧೆಡೆ ಒಟ್ಟು 7 ಸಂಪರ್ಕ ಸೇತುವೆ ಕಾಮಗಾರಿಗಳನ್ನು ಶಾಸಕತ್ವದ ಅವಧಿಯಲ್ಲಿ ಮಂಜೂರುಗೊಳಿಸಲಾಗಿದ್ದು, ಭೇಟಿ ನೀಡಿ ವೀಕ್ಷಿಸಲಾಗುತ್ತದೆ. ಈ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಲ್ಲಿ ಈ ಭಾಗಗಳ ಜನರ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮದಲ್ಲೂ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭ ಸೇತುವೆಯನ್ನು ಮಂಜೂರು ಗೊಳಿಸಿದ್ದಕ್ಕಾಗಿ ಸ್ಥಳೀಯ ಜಾರುಕುದ್ರು ನಿವಾಸಿಗಳು ಮಾಜಿ ಸಚಿವ ವಿನಯ ಕುಮಾರ್ ಸೊರಕೆಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಮಾಜಿ ತಾ.ಪಂ. ಸದಸ್ಯ, ಉದ್ಯಾವರ ಗಿರೀಶ್ ಕುಮಾರ್, ಉದ್ಯಾವರ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಚಂದ್ರಾವತಿ ಎಸ್ ಭಂಡಾರಿ, ಸರಳಾ ಎಸ್ ಕೋಟ್ಯಾನ್, ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಮಾಜಿ ಗ್ರಾ.ಪಂ ಸದಸ್ಯರುಗಳಾದ ಲಾರೆನ್ಸ್ ಡೇಸಾ, ರಾಜೀವಿ, ಲಕ್ಷ್ಮಣ್ ಸನಿಲ್, ಗ್ಲಾಡಿಸ್ ಮೆಂಡೋನ್ಸಾ, ಪ್ರಮುಖರಾದ ಉದ್ಯಾವರ ನಾಗೇಶ್ ಕುಮಾರ್, ಅಬಿದ್ ಆಲಿ, ಗಿರೀಶ್ ಗುಡ್ಡೆಯಂಗಡಿ, ಶೇಖರ್ ಕೋಟ್ಯಾನ್, ಶ್ರೀಧರ್ ಕಲಾೈ, ರಾಯ್ಸ್ ಫೆರ್ನಾಂಡೀಸ್, ಅಶೋಕ್ ನಾೈರಿ, ನಾಗೇಶ್ ಕಾಪು, ಇಲಾಖೆಯ ಎ.ಡಬ್ಲೂ ್ಯ .ಇ. ಚೆನ್ನಪ್ಪ ಮೊಯ್ಲಿ, ಸಹಾಯಕ ಎಂಜಿನಿಯರ್ ತ್ರಿನೇಶ್, ಜಾರುಕುದ್ರು ನಿವಾಸಿಗಳು, ಮತ್ತಿತರರು ಉಪಸ್ಥಿತರಿದ್ದರು.
ಕರೋನಾ ವಾರಿಯರ್ಸ್ಗಳನ್ನು ಟೀಕಿಸುವ ಮೊದಲು ಅವರ ಸೇವೆಯ ಬಗ್ಗೆ ಕೃತಜ್ಞತೆಯಿರಲಿ
Posted On: 26 Aug 2020, 11:18 PM
ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿ ಇರುವುದು "ಕೊರೊನಾ ದಂದೆ" ಎಂಬ ಒಂದು ಪದ ಈ ಪದವನ್ನ ಉಪಯೊಗಿಸಿಕೊಂಡು ಮನಬಂದಂತೆ ನಮ್ಮ ವೈದ್ಯರು , ವೈದ್ಯಕೀಯ ಸಿಬ್ಬಂದಿ, ಅಂಬ್ಯುಲೆನ್ಸ್ ಚಾಲಕರು ಪೊಲೀಸ್ ಅದೇ ರೀತಿ , ಜನಪ್ರತಿನಿದಿಗಳ ಮೇಲೆ ಮನಬಂದಂತೆ ಬೈಯುದನ್ನು ಕಾಣುತ್ತಿದ್ದೇವೆ ಕೆಲವರಂತು ಇದಕ್ಕೆ ಅಧಿಕಾರಿಗಳೇ ಕಾರಣ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರಿಸಿ ಅವರನ್ನು ಬಲಿಪಶು ಮಾಡುವ ಷಡ್ಯಂತ್ರ ನಡೆಯುತ್ತಿರುವುದು ಖಂಡನೀಯ. ಟೀಕೆ ಟಿಪ್ಪಣಿ ಮಾಡುವುದು ಸುಲಭ ಆದರೆ ಆ ಕೆಲಸ ಮಾಡಿದಾಗ ಮಾತ್ರ ಅದರ ನೈಜತೆ ತಿಳಿಯಲು ಸಾಧ್ಯ ಅಲ್ಲವೆ? ಕೊರೊನಾ ದಿಂದ ಪ್ರಜೆಗಳನ್ನ ರಕ್ಷಣೆ ಮಾಡಲು ಕೊರೊನಾ ಉಡುಪಿಗೆ ಕಾಲಿಟ್ಟ ದಿನದಿಂದ ಇಲ್ಲಿಯವರೆಗೆ ರಾತ್ರಿ ಹಗಲೆನ್ನದೆ ತನ್ನ ಪ್ರಾಣವನ್ನ ಒತ್ತೆಯಾಗಿಟ್ಟು ತನ್ನ ಕುಟುಂಬದ ಬಗ್ಗೆ ಚಿಂತನೆ ಮಾಡದೆ ರೋಗಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸೇವೆ ಸಲ್ಲಿಸುತ್ತಿರುವ ಕೊರೊನಾ...ಚಿಕಿತ್ಸೆ ನೀಡುತ್ತಿರುವ ಪ್ರಾಮಾಣಿಕ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಅಧಿಕಾರಿಗಳು ಸೇರಿದಂತೆ ಆಯಾಗಳು , ಅಂಬ್ಯುಲೆನ್ಸ್ ಚಾಲಕರು ಇವರ ಈ ಒಂದು ನಿಸ್ವಾರ್ಥ ಸೇವೆಗೆ ಬೆಲೆ ಇಲ್ಲದಂತೆ ಮಾಡುತ್ತಿರುವ ಈ ರೀತಿಯ ಮನಸ್ಥಿತಿಯ ಜನರಿಗೆ ಏನು ಹೇಳುವುದು. ವೈದ್ಯರು ಸಿಬಂದಿಗಳು ಜನರ ಈ ಟೀಕೆಗಳಿಗೆ ಬೇಸತ್ತು ತನ್ನ ಕರ್ತವ್ಯದಿಂದ ಹಿಂದೆ ಸರಿದರೆ ಆಗುವ ಪರಿಣಾಮದ ಬಗ್ಗೆ ಅರಿವಿದೆಯೇ ?ಆಗ ಎನು ಗತಿ? ಇದರ ಬಗ್ಗೆ ಯಾಕೆ ಜನರು ಚಿಂತನೆ ಮಾಡುತ್ತಾ ಇಲ್ಲ ?ಎಂಬ ಬೇಸರವಿದೆ. ಆಸ್ಪತ್ರೆ ಅಥವಾ ವೈದ್ಯರು ಅದೇ ರೀತಿ ವೈದ್ಯಕೀಯ ಸಿಬ್ಬoದಿಗಳು ಮಾಡಿದ ಒಂದು ತಪ್ಪನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಿ ಅವರ ಬಗ್ಗೆ ಟೀಕೆ ಮಾಡುವ ಮೂಲಕ ಅವರ ಮಾನಸಿಕ ಸ್ಥಯ೯ ಕಡಿಮೆ ಮಾಡುತ್ತಿರುವ ಈ ರೀತಿ ಮನಸ್ಸಿನ ಜನರು ಅವರ ಒಳ್ಳೆಯ ಕೆಲಸವನ್ನು ಒಂದು ಬಾರಿಯೂ ಪ್ರಶಂಸಿಸುವ ಕಾಯ೯ ಮಾಡದಿರುವುದು ಸರಿಯೇ ? ಕೊರೊನಾದಿಂದ ಸತ್ತ ವ್ಯಕ್ತಿಗಳ ದೇಹವನ್ನ ಸ್ವಂತ ಕುಟುಂಬಿಕರೆ ಮುಟ್ಟಲು ತಯಾರಿಲ್ಲದ ಈ ಸಮಯದಲ್ಲಿ ನಮ್ಮ ವೈದ್ಯಕೀಯ ಸಿಬ್ಬಂದಿಗಳು ಇದುವರೆಗೆ 70 ಕ್ಕಿಂತ ಹೆಚ್ಚು ಮಂದಿ ಕೊರೊನಾ ದಿಂದ ಮೃತ ವ್ಯಕ್ತಿಗಳ ದೇಹಗಳನ್ನು ಅವರವರ ಸಂಬಂದಿಕರಿಗೆ ತಾವೇ ಖುದ್ದಾಗಿ ಅವರ ಅಂತಿಮ ವಿಧಿ ವಿದಾನಗಳನ್ನ ಮಾಡಲು ಸಹಕರಿಸಿದ್ದಾರೆ.ಈ ಬಗ್ಗೆ ಜನರು ಮಾತನಾಡುದಿಲ್ಲ. ಕೇವಲ ತಪ್ಪುಗಳನ್ನು ವೈಭವಿಕರಿಸದೆ ಅವರ ಉತ್ತಮ ಮಾನವೀಯ ಕಾಯ೯ ದ ಬಗ್ಗೆ ಕೂಡ ವೈಭವೀಕರಣ ಮಾಡಬೇಕಾಗಿದೆ. ಅಂದ ಮಾತ್ರಕ್ಕೆ ಅಸ್ಪತ್ರೆಯವರು ಅಧಿಕಾರಿಗಳು ತಪ್ಪೆ ಮಾಡುದಿಲ್ಲ ಎಂದು ಹೇಳಿದರೆ ತಪ್ಪಾಗಬಹುದು ಒತ್ತಡದಲ್ಲಿ ಕೆಲಸ ನಿವ೯ಹಿಸುವಾಗ ಅರಿವಿಗೆ ಬಾರದೆ ತಪ್ಪಾಗಬಹುದು ಅದನ್ನು ಅವರಿಗೆ ಮನದಟ್ಟು ಮಾಡಿ ಮುಂದೆ ತಪ್ಪಾಗದಂತೆ ಮನವರಿಕೆ ಮಾಡಬೇಕು. ನಾವೆಲ್ಲರೂ ಕರೋನಾ ವಾರಿಯರ್ಸ್ ಗಳ ಬಗ್ಗೆ ಸಹನುಭೂತಿ ತೋರಿಸಬೇಕು. ಇತ್ತಿಚಿಗೆ ಕರೋನಾ ಸೈನಿಕರಿಗೆ ಗೌರವಾಪ೯ಣಿ ಸಂದಭ೯ ಕರೋನಾ ಲ್ಯಾಬ್ ಸಿಬ್ಬಂದಿ ಹೇಳಿದ ಮಾತು ಮನಮಿಡಿಯುವಂತೆ ಮಾಡಿತ್ತು "ನಾವು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸತತವಾಗಿ ಪಿ.ಪಿ ಕಿಟ್ ಧರಿಸಿ ಕೆಲಸ ಮಾಡುತ್ತೆವೆ ಮನೆಯಲ್ಲಿರುವ ಮಕ್ಕಳು ಮತ್ತು ಹಿರಿಯರಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಬೇರೆ ರೂಂ ಮಾಡಿ ವಾಸ ಮಾಡುತ್ತೆನೆ ಒತ್ತಡದಲ್ಲಿ ಕಾಯ೯ ನಿವ೯ಹಣೆಯಲ್ಲಿ ಕೆಲವೊಮ್ಮೆ ಊಟ ಉಪಹಾರವನ್ನು ಬಿಟ್ಟ ಪ್ರಸಂಗ ಕೂಡ ಇದೆ" ಅವರ ಈ ಮಾತೇ ಸಾಕು ಅವರ ಸೇವಾ ತತ್ಪರತೆ ತಿಳಿಯಲು. ಸಕಾ೯ರ ದಿಂದ ಪ್ರಮುಖವಾಗಿ ಆಗಬೇಕಾದ ನಿಧಾ೯ರ : ಮುಖ್ಯವಾಗಿ ಸಕಾ೯ರ ಸೋ೦ಕಿತರ ಮನೆ ಸೀಲ್ಡೌನ್ ಮತ್ತು ಮನೆಗೆ ನೋಟಿಸ್ ಅಂಟಿಸುವ ಸಂಪ್ರದಾಯವನ್ನು ಬದಲಾವಣೆ ಮಾಡಬೇಕಾದ ಅಗತ್ಯಯಿದೆ. ವೈದ್ಯ ಸಲಹೆಗಾರರು ಕೂಡ ಇದೇ ಸಲಹೆಯನ್ನು ಸಕಾ೯ರಕ್ಕೆ ನೀಡಿದೆ. ಕಾರಣ ಮನೆ ಸೀಲ್ ಡೌನ್ ನಿ೦ದ ಬೇರೆ ಜನರು ಇವರನ್ನು ನೋಡುವ ದೃಷ್ಟಿಯೇ ಬೇರೆ ಅವರನ್ನು ಭಯೋತ್ಪಾದಕರಂತೆ ಕಾಣುವಾಗ ಮನಸ್ಸಿಗೆ ಆಗುವ ನೋವು ಅವರಿಗೇ ಗೊತ್ತು ಅದೇ ರೀತಿ ದಿನಾಲೂ ಬಂದು ಸೋಂಕಿತ ಕುಟುಂಬದ ಭಾವಚಿತ್ರ ತೆಗೆಯುವಾಗ ಇತರೆ ಜನರು ಇಲ್ಲ ಸಲ್ಲದ ಮಾತು ಕೇಳುವಾಗ ಆಗುವ ಮಾನ ಆಘಾತದಿಂದ ತಪ್ಪಿಸಿಕೊಳ್ಳಲು ಜನರು ಸ್ವಪ್ರೇರಿತರಾಗಿ ಪರೀಕ್ಷೆ ಮಾಡಲು ಮುಂದೆ ಬರುತ್ತಿಲ್ಲ ಅವರಿಗೆ ಕರೋನಾ ಕ್ಕಿoತ ಸೀಲ್ಡೌನ್ ಭಯವೇ ಹೆಚ್ಚು. ಹೀಗಾಗಿ ಅವರಿಗೆ ಮನವರಿಕೆ ಮಾಡಿ ಮನೆಯಿಂದ ಹೊರಬರದಂತೆ ನೋಡಬೇಕೆ ಹೊರತು ಈ ರೀತಿಯ ಆಚರಣೆಯಿಂದ ಮುಕ್ತಗೊಳಿಸಬೇಕು.ಅಧಿಕಾರಿಗಳಿಗೆ ಕರೋನಾ ಪರೀಕ್ಷೆ ಟಾಗೆ೯ಟ್ ಕೊಡದಿರುವುದು ಒಳಿತು.ವೈದ್ಯರು ಮುಖ್ಯವಾಗಿ ಕ್ಲಿನಿಕ್ ನಲ್ಲಿ ಪ್ರಾಕ್ಟಿಸ್ ಮಾಡುವವರಿಗೆ ಫಿವರ್ ಟೆಸ್ಟ್ ಮಾಡಲು ಅವಕಾಶ ನೀಡಿದರೆ ಉತ್ತಮ ಹಾಗೂ ಅವರಿಗೆ ಯಾವುದೇ ಒತ್ತಡವಿಲ್ಲದೆ ಸೇವೆ ಸಲ್ಲಿಸಲು ಅವಕಾಶ ನೀಡಿದರೆ ಮಾತ್ರ ಇತರೆ ರೋಗಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕರೋನಾಕ್ಕಿಂತ ಹೆಚ್ಚು ಜನರು ಸರಿಯಾಗಿ ಚಿಕಿತ್ಸೆ ಸಿಗದೆ ಸಾಯಬಹುದು. ಹೀಗೆ ಸಕಾ೯ರ ಸ್ಪಷ್ಟವಾದ ನಿಧಾ೯ರ ಕೈಗೊಳ್ಳಬೇಕಾಗಿದೆ. ಯಾವುದೇ ಕಾರಣಕ್ಕೆ ಆಸ್ಪತ್ರೆ ಅಥವಾ ವೈದ್ಯರ ಹೆಸರನ್ನು ಕೆಡಿಸುವ ಭರದಲ್ಲಿ ನಮ್ಮತನವನ್ನು ಮರೆಯದಿರೋಣ. ಕೊನೆಯದಾಗಿ ಕೊರೊನಾ ದಂದೆಕೊರರಿಗೆ ಬೈಯ್ಯವ ಬರದಲ್ಲಿ ನೈಜ ಕೊರೊನಾ ವಾರಿಯರ್ಸ್ ಬೆಸರಿಸದೇ ಇರೋಣ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕಾಯ೯ ಬೇಡ, ಸರಕಾರಿ ಆಸ್ಪತ್ರೆಗಳಲ್ಲಿ ಕಳೆದ 3-4 ತಿಂಗಳುಗಳಿಂದ ಒಂದೇ ಒಂದು ದಿನದ ರಜೆ ಪಡೆಯದೆ ನಮಗಾಗಿ ಸೇವೆ ನೀಡುತ್ತಿರುವ ಅದೆಷ್ಟೋ ವೈದ್ಯರುಗಳಿಗೆ ಇತರ ವೈದ್ಯಕೀಯ ಸಿಬಂದಿ ಅಂಬ್ಯುಲೆನ್ಸ್ ಚಾಲಕರಿಗೆ ಹೆಚ್ಚಿನ ಗೌರವವನ್ನ ನೀಡಿ ಅವರ ಆತ್ಮಸ್ಥೈರ್ಯ ವನ್ನು ಹೆಚ್ಚಿಸೋಣ.. ಆದಷ್ಟು ಬೇಗ ಕರೋನಾ ದೂರವಾಗಲಿ. ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ
ಕೋಸ್ಟಲ್ ಗಾರ್ಡ್ ಪೊಲೀಸ್ ವತಿಯಿಂದ ಮಲ್ಪೆ ಮೀನುಗಾರ ಮುಖಂಡರೊಂದಿಗೆ ಸಂವಾದ ಕಾರ್ಯಕ್ರಮ
Posted On: 25 Aug 2020, 08:11 PM
ಆಂತರಿಕ ಭದ್ರತೆಗೆ ಆಧುನಿಕ ತಂತ್ರ‍್ರಜ್ಞಾನ ಬಳಕೆ: ಭಾಸ್ಕರ್ ರಾವ್
ಉಡುಪಿ ಆಗಸ್ಟ್ 25 : ರಾಜ್ಯದ ಆಂತರಿಕ ಭದ್ರತೆಗೆ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ರಾಜ್ಯದ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಅವರು ಮಂಗಳವಾರ, ಮಲ್ಪೆ ಯ ಕರಾವಳಿ ಕವಲು ಪಡೆಯ ಕಚೇರಿಯಲ್ಲಿ ಮೀನುಗಾರ ಮುಖಂಡರೋಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ರಾಜ್ಯದ ಅಂತರಿಕ ಭದ್ರೆತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕರಾವಳಿ ಕಾವಲು ಪಡೆಗೆ ಅಗತ್ಯ ಉಪಕರಣಗಳ ಖರೀದಿ, ಪ್ರತ್ಯೇಕ ಸಿಬ್ಬಂದಿ ನೇಮಕ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಿಬ್ಬಂದಿಗಳಲ್ಲಿ ದೈಹಿಕ , ತಾಂತ್ರಿಕ, ಎಮೋಷನಲ್ ದೃಡತೆ ಹೆಚ್ಚಿಸುವ ಮೂಲಕ , ಅವರ ಕಾರ್ಯ ಕ್ಷಮತೆ ಹೆಚ್ಚಿಸಲು ಸಹ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಕರಾವಳಿಯ ರಕ್ಷಣೆಗೆ 3 ಹೊಸ ಜೆಟ್ ಸ್ಕೀ ಗಳನ್ನು ಶೀಘ್ರದಲ್ಲಿ ಸರಬರಾಜು ಮಾಡಲಾಗುವುದು ಎಂದು ಭಾಸ್ಕರ್ ರಾವ್ ಹೇಳಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಆಂತರಿಕ ಭದ್ರತೆಗೆ ಅಡ್ಡಿಪಡಿಸುವವರನ್ನು, ಇಲಾಖೆಯ ಸೋಷಿಯಲ್ ಮೀಡಿಯಾ ಸೆಲ್ ಮೂಲಕ ಪತ್ತೆ ಮಾಡಿ, ಕ್ರಮ ಕೈಗೊಳ್ಳಲಾಗುವುದು , ದೇಶವಿರೋದಿ ಚಟುವಟಿಕೆ ನಡೆಸುವವರನ್ನು ಪತ್ತೆ ಹಚ್ಚಿ, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಮುದ್ರದಲ್ಲಿ ಮೀನುಗಾರಿಕಗೆ ಹೋಗುವವರು ಮತ್ತು ಬರುವವರ ಖಚಿತ ಮಾಹಿತರಿಗಾಗಿ ಚಿಪ್ ಆಧಾರಿತ ತಂತ್ರಜ್ಞಾನ ಬಳಕೆ ಮಾಡಲಾಗುವುದು, ಮೀನುಗಾರರ ರಕ್ಷಣೆಗೆ ಜೊತೆಗೆ ಸಮುದ್ರದದಲ್ಲಿನ ಜೀವ ವೈವಿದ್ಯ ರಕ್ಷಣೆಗೆ ಸಹ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ರಾಜ್ಯದಲ್ಲಿನ 43 ಬೀಚ್ ಗಳಿಗೆ ಸೂಕ್ತ ಭದ್ರತೆ ನೀಡುವುದರ ಮೂಲಕ ರಾಜ್ಯದ 322 ಕಿಮೀ ವ್ಯಾಪ್ತಿಯ ಕರಾವಳಿಯಲ್ಲಿ ಆಂತರಿಕ ಭದ್ರತೆ ಮಾಡಲಾಗುವುದು, ಈಗಾಗಲೇ ಕರಾವಳಿ ಕಾವಲು ಪಡೆಯ ಜೊತೆಗೆ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಒಳಗೊಂಡ ಕರಾವಳಿ ನಿಯಂತ್ರಣ ದಳ ಹಾಗೂ ಸ್ಥಳಿಯ ಮೀನುಗಾರರನ್ನು ಒಳಗೊಂಡ ಸಾಗರ ರಕ್ಷಕ ದಳ ವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ಉಪಸ್ಥಿತರಿದ್ದರು
ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನಕ್ಕೆ ನೂತನ ರಜತ ಉಯ್ಯಾಲೆ ಸಮರ್ಪಣೆ
Posted On: 24 Aug 2020, 04:11 PM
ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಇಲ್ಲಿ ವಾರ್ಷಿಕ ಸುಗ್ಗಿ ಮಾರಿಪೂಜೆ ಸಂದರ್ಭದಲ್ಲಿ ವಿಶೇಷವಾಗಿ ನಡೆಯಲ್ಪಡುವ ಶ್ರೀ ದೇವಿಯ ಗೊಪುರೋತ್ಸವ ಹಾಗೂ ಚಂಡಿಕಾ ಹೋಮ ಸಂದರ್ಭ ವಿನಿಯೋಗಕ್ಕೆ .ನೂತನ ರಜತ ಉಯ್ಯಾಲೆ ಯನ್ನು ದಿ.ಕಾಪು ಬಾಲಕೃಷ್ಣ ಭಟ್ ಸ್ಮರಣಾರ್ಥ ಇವರ ಮಕ್ಕಳು ಸೇವಾರ್ಥವಾಗಿ ಸಮರ್ಪಿಸಿದರು.
ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಾಪು ಪ್ರಖಂಡದ ನೂತನ ಜವಾಬ್ದಾರಿಗಳ ಆಯ್ಕೆ
Posted On: 24 Aug 2020, 02:01 PM
ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾಪು ಪ್ರಖಂಡದ ನೂತನ ಹಲವು ಜವಾಬ್ದಾರಿ ಗಳನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಘೋಷಣೆ ಮಾಡಲಾಯಿತು.
ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್,ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಪ್ರವೀಣ್ ಹಿರಿಯಡ್ಕ,ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ನೂತನ ಜವಾಬ್ದಾರಿಗಳನ್ನು ಘೋಷಿಸಲಾಯಿತು.
ಉಪಾಧ್ಯಕ್ಷರಾಗಿ ಗೋವರ್ಧನ ಭಟ್ ಮಜೂರು ಮತ್ತು ಶರತ್ ಕಟಪಾಡಿ
ಸಹ ಕಾರ್ಯದರ್ಶಿಯಾಗಿ ನಿತೇಶ್ ಸುವರ್ಣ ಎರ್ಮಾಳ್, ಕೋಶಾಧಿಕಾರಿಯಾಗಿ ಮಹೇಶ್ ಉಚ್ಚಿಲ, ಮಠಮಂದಿರ ಸಂಪರ್ಕ ಪ್ರಮುಖ್ ಸದಾಶಿವ ಕುಲಾಲ್ ಶಿರ್ವ, ಸಾಮರಸ್ಯ ಪ್ರಮುಖ್ ಭಾಸ್ಕರ ಭಂಡಾರಿ ಪಡುಬಿದ್ರಿ,
ಧರ್ಮ ಪ್ರಸಾರ ಪ್ರಮುಖ್ ರಾಘವೇಂದ್ರ ಶೆಟ್ಟಿ ಪಡುಬೆಳ್ಳೆ
ಬಜರಂಗದಳ ಸಂಯೋಜಕರಾಗಿ ಸುಧೀರ್ ಕಾಪು, ಸಹ ಸಂಯೋಜಕರಾಗಿ ಶರಣ್ ಸಾಲಿಯಾನ್ ಹೆಜಮಾಡಿ, ಸೇವಾ ಪ್ರಮುಖ್ ಸುಭಾಷ್ ಶೆಟ್ಟಿ ಹೇರೂರು, ಗೋರಕ್ಷಾ ಪ್ರಮುಖ್ ನಾಗೇಶ್ ಕೋಟ್ಯಾನ್ ಪಾಂಗಾಳ, ಸುರಕ್ಷಾ ಪ್ರಮುಖ್ ಆನಂದ ಶಿರ್ವ,
ಅಖಾಡ ಪ್ರಮುಖ್ ಅಭಿಜಿತ್ ಶೆಟ್ಟಿ ಪಾಂಗಾಳ ಆಯ್ಕೆಯಾದರು.
ಬೊಲ್ಜೆ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಮಲ್ಲಾರ್ ನಿವಾಸಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ
Posted On: 24 Aug 2020, 11:07 AM
ಕಾಪು.24,ಆಗಸ್ಟ್ : ಉಬೇದುಲ್ಲಾ (54), ಮಲ್ಲಾರ್ ನಿವಾಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಮನೆ. ಉದ್ಯಾವರ ಬೊಲ್ಜೆ ರೈಲ್ವೆ ಬ್ರಿಡ್ಜ್ ಪಕ್ಕದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆ.. ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದ್ದು, ಬ್ರಿಡ್ಜ್ ಪಕ್ಕದಲ್ಲೇ ಬೈಕ್, ಮೊಬೈಲ್ ವಾಚ್ ಪತ್ತೆಯಾಗಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶವವನ್ನು ಮಣಿಪಾಲ ಶವಾಗಾರಕ್ಕೆ ಸಮಾಜ ಸೇವಕ ಸೂರಿ ಶೆಟ್ಟಿಯವರು ಸಾಗಿಸಿದರು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
