Updated News From Kaup
ಕುತ್ಯಾರಿನ ಯುವಕರು ರಚಿಸಿದ ಕನಸು ಫಿಲಮ್ಸ್'ನ ಚೊಚ್ಚಲ ಚಿತ್ರ 'ಜಂಕ್ಷನ್' ಬಿಡುಗಡೆಯ ಹೊಸ್ತಿಲಲ್ಲಿ
Posted On: 29 Jun 2020, 10:53 AM
ಕಾಪು(ಜೂನ್ 29 ನಮ್ಮ ಕಾಪು ನ್ಯೂಸ್) ಕಾಪುವಿನ ಕುತ್ಯಾರಿನ ಯುವಕರ ತಂಡವೊಂದು ಸಮಾಜಕ್ಕೆ ಉತ್ತಮ ಸಂದೇಶ ಸಾರುವಂತಹ ಕಿರುಚಿತ್ರ ಜಂಕ್ಷನ್ ಅತೀ ಶೀಘ್ರದಲ್ಲಿ ತಮ್ಮ ನಡುವೆ ಬರಲಿದ್ದು,ಕಿರುಚಿತ್ರದ ಮೂಹೂರ್ತವು ನಿನ್ನೆ ಕುತ್ಯಾರು ಶ್ರೀ ವೀರಭದ್ರ ದೇವಸ್ದಾನದಲ್ಲಿ ನಡೆಯಿತು.. ಪ್ರವೀಣ್ ಡಿ ಆಚಾರ್ಯ ಇವರ ಸುಂದರ ಕಥೆ,ನಿರ್ದೇಶನ ಸಂಭಾಷಣೆ ಜೊತೆಗೆ ನಿರ್ಮಾಪಕರಾಗಿ ಯುವಕರ ಪಾಲಿನ ಉತ್ಸಾಹಿ ಚಿಲುಮೆ ಶ್ರೀ ಪ್ರಸಾದ್ ಕುತ್ಯಾರು,ಶ್ರೀ ಜಿನೇಶ್ ಬಲ್ಲಾಳ್,ಶ್ರೀ ನಿತೇಶ್ ಭಂಡಾರಿ ಕುತ್ಯಾರು,ಶ್ರೀಮತಿ ಸರಿತಾ ಕುಲಾಲ್,ಉದ್ಯಮಿ ಶ್ರೀ ರಾಜೇಶ್ ಶೆಟ್ಟಿ(ಶಬರಿ ಶಾಮಿಯಾನ) ನಿರ್ವಸಿರುತ್ತಾರೆ.. ಶ್ರೀ ನಿಲೇಶ್ ದೇವಾಡಿಗ ಇವರ ಕ್ಯಾಮರದಲ್ಲಿ ಸೆರೆಯಾಗುವ ಈ ಕಿರುಚಿತ್ರಕ್ಕೆ ಶ್ರೀ ಬಸಂತ್ ಕುಮಾರ್ ಪೊಸ್ಟರ್ ಹಾಗೂ ಎಡಿಟಿಂಗ್ ಮಾಡಿ ಶ್ರೀ ಧೀರಜ್ ಕುಲಾಲ್ ಕುತ್ಯಾರು ಈ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿರುತ್ತಾರೆ... ಒಂದೊಳ್ಳೆ ಕಿರುಚಿತ್ರವಾಗಿ ಜನಮಾನಸದಲ್ಲಿ ನೆಲೆಯೂರಲಿ ಎನ್ನುತ್ತ ತಂಡದ ಸರ್ವರಿಗೂ ನಮ್ಮ ಕಾಪು ನ್ಯೂಸ್ ತಂಡ ಶುಭವನ್ನ ಕೊರುತ್ತದೆ...
ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ರಾಘವೇಂದ್ರ ಪ್ರಭು,ಕವಾ೯ಲು ರವರಿಗೆ ಸನ್ಮಾನ
Posted On: 28 Jun 2020, 07:27 PM
ಉಡುಪಿ.28, ಜೂನ್ : ಸಮಾಜಿಕ ಕಾಯ೯ಕತ೯, ವಿಶೇಷವಾಗಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಊಟ ವನ್ನು ದಿನ ನಿತ್ಯ ಹಂಚಿದ ಟೀಮ್ ಹೆಲ್ಪಿಂಗ್ ಹ್ಯಾಂಡ್ಸ್ ನ ಅತ್ಯಂತ ಸಕ್ರಿಯ ಸದಸ್ಯ, ಇನ್ನಿತರ ಸಮಾಜಮುಖಿ ಚಟುವಟಿಕೆಗಳಲ್ಲಿ ತನ್ನನ್ನು ತಾನು ಕಳೆದ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿರುವ ರಾಘವೇಂದ್ರಪ್ರಭುಕರ್ವಾಲು ಇವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಲ್ಲರೂ ಸೂರ್ಯನ ಹಾಗೆ ಪ್ರಪಂಚಾದದ್ಯಂತ ಬೆಳಕನ್ನು ನೀಡಲು ಸಾಧ್ಯವಿಲ್ಲ ಆದರೆ ಹಣತೆಯಂತೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬೆಳಕು ನೀಡುತ್ತಾ ,ಅದೇ ಮಾದರಿಯಲ್ಲಿ ಸಮಾಜ ಸೇವೆ ಮಾಡಬೇಕು ಎಂದರು ಹಾಗೂ ಇತ್ತೀಚೆಗೆ ರಾಜ್ಯದಲ್ಲಿ ಉತ್ತಮ ಹೆಸರು ಮಾಡುತ್ತಾ ಇರುವ ಕರಾಸಪಕ್ಷ ವನ್ನು ಅಭಿನಂದಿಸಿದರು. ಪ್ರಸಾದ್ ಕರ್ಕಡ, ಶಾಹಿದ್ ಅಲಿ, ವಿನುತಾ ಕಿರಣ್,ರಫಿಕ್ ಕಲ್ಯಾಣಪುರ ,ಅಮೀರ್ ಬೆಳಪು, ಕಿರಣ್ ಕುಮಾರ್ ಪೆರ್ಡೂರು, ವಿನೋದ್ ಬಂಗೇರ, ಸಲ್ಮಾನ್ ಅಹ್ಮದ್, ದಿನೇಶ್ ರಾಮ್, ಅಬ್ದುಲ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು
ರೋಟರಿ ಶಂಕರಪುರದ ಪದಪ್ರಧಾನ ಸಮಾರಂಭ ರೋಟರಿ ಶತಾಬ್ದಿ ಭವನದಲ್ಲಿ ಜರಗಿತು
Posted On: 28 Jun 2020, 03:38 PM
ಶಂಕರಪುರ.28, ಜೂನ್ : ರೋಟರಿ ಶಂಕರಪುರದ ಪದಪ್ರಧಾನ ಸಮಾರಂಭವು ರೋಟರಿ ಶತಾಬ್ದಿ ಭವನದಲ್ಲಿ ಜರುಗಿತು.ಪದಪ್ರಧಾನ ಅಧಿಕಾರಿಯಾದ ಎಸ್ ಸದಾನಂದ ಚಾತ್ರ ಇವರು ನಿರ್ಗಮನ ಅಧ್ಯಕ್ಷರು ಆದ ಸಂದೀಪ್ ಬಂಗೇರ ಇವರಿಂದ ನೂತನ ಅಧ್ಯಕ್ಷರು ಆದ ವಿಕ್ಟರ್ ಮಾರ್ಟಿಸ್ ಇವರಿಗೆ ಅಧಿಕಾರ ಹಸ್ತಾಂತರ ಮಾಡಿದರು.. ಈ ಸಂದರ್ಭದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ಮತ್ತು ಧ್ವನಿ ಮತ್ತು ಬೆಳಕು ಉದ್ಯಮದಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದ ಹಿರಿಯ ರೋಟರಿ ಸದಸ್ಯರುಗಳಾದ ಡಾ ಎಡ್ವರ್ಡ್ ಲೋಬೊ ಮತ್ತು ಆಂಟನಿ ಡೇಸಾ ಇವರನ್ನು ಮುಖ್ಯ ಅತಿಥಿಗಳಾದ ರೋಟರಿ ಜಿಲ್ಲೆ 3180..ಯ ಮಾಜಿ ಜಿಲ್ಲಾ ಸಭಾಪತಿಯಾದ ಎಸ್ ಸದಾನಂದ ಚಾತ್ರ, ಸಹಾಯಕ ಗವರ್ನರ್ ನವೀನ್ ಅಮೀನ್, ವಲಯ ಸೇನಾನಿ ಸುರೇಶ್ ರಾವ್ ಅವರ ಉಪಸ್ಥಿತಿಯಲ್ಲಿ ಗುರುತಿಸಿ ಗೌರವಾದರಗಳಿಂದ ಸಮ್ಮಾನಿಸಲಾಯಿತು.. ಈ ಸಂದರ್ಭದಲ್ಲಿ ರೋಟರಿ ಶಂಕರಪುರ ನೂತನ ಕಾರ್ಯದರ್ಶಿ ಜೆರಾಮ್ ರೋಡ್ರಿಗೆಸ್, ಸಂದೀಪ್ ಬಂಗೇರ ಮತ್ತು ಜಾನ್ ರೋಡ್ರಿಗೆಸ್ ಫ್ರಾನ್ಸಿಸ್ ಡೇಸಾ, ಅನಿಲ್ ಡೇಸಾ ಉಪಸ್ಥಿತರಿದ್ದರು..
ಆಟಿ - ಆಷಾಢ ಗೊಂದಲ 'ಆಟಿ' 'ಆಷಾಢ'ವಲ್ಲ - ಕೆ.ಎಲ್.ಕುಂಡಂತಾಯ
Posted On: 28 Jun 2020, 02:42 PM
ಆಟಿ , ಆಷಾಢವಲ್ಲ , ಆಷಾಢ, ಆಟಿಯಲ್ಲ. 'ಆಟಿ' ತುಳುವರಾದ ನಮ್ಮ ಸೌರ ಪದ್ಧತಿಯ ನಾಲ್ಕನೇ ತಿಂಗಳು.ಈ ವರ್ಷ ಜುಲೈ 17 ನೇ ತಾರೀಕಿನಿಂದ ಆರಂಭವಾಗುತ್ತದೆ . ಆಟಿ ಎಂದರೆ ಕರ್ಕಾಟಕ ಮಾಸ. ಆಷಾಢ ಚಾಂದ್ರ ಪದ್ಧತಿಯ ನಾಲ್ಕನೇ ತಿಂಗಳು .ಈ ವರ್ಷ ಜೂನ್ 22 ನೇ ತಾರೀಕಿನಿಂದ ಆರಂಭವಾಗಿದೆ . ರೂಢಿಯಲ್ಲಿ ಇರುವಂತೆ ಸೌರ ವರ್ಷದ ತಿಂಗಳುಗಳ ಯಾದಿ ಇಂತಿದೆ : ಪಗ್ಗು (ಮೇಷ) , ಬೇಶ (ವೃಷಭ) , ಕಾರ್ತೆಲ್ (ಮಿಥುನ) , ಆಟಿ (ಕರ್ಕಾಟಕ ) , ಸೋಣ(ಸಿಂಹ) , ಕನ್ಯಾ (ನಿರ್ನಾಲ್) , ಬೊಂತೆಲ್( ತುಲಾ) , ಜಾರ್ದೆ( ವೃಶ್ಚಿಕ) , ಪೆರಾರ್ದೆ(ಧನು) , ಪೊನ್ನಿ- ಪಯಿಂತೆಲ್(ಮಕರ) ,ಮಾಗಿ - ಮಾಯಿ( ಕುಂಭ) ,ಸುಗ್ಗಿ( ಮೀನ) . ಸೌರಮಾನಿಗಳ ಕ್ರಮದಂತೆ "ಸೌರಯುಗಾದಿ" ಎಂದರೆ ವಿಷು , ಬಿಸು ,ಇಗಾದಿ ಸನ್ನಿಹಿತವಾಗುವ ಸೌರ ವರ್ಷದ ಆರಂಭದ ದಿನ . "ಪಗ್ಗು ತಿಂಗೊಲ್ದ ತಿಂಗೊಡೆ" ಸೌರಯುಗಾದಿ .ಮೇಷ ಮಾಸದ ಮೊದಲದಿನ . ಚಾಂದ್ರ ವರ್ಷ ಆರಂಭವಾಗುವುದು ಚಾಂದ್ರ ಪದ್ಧತಿಯ ಮೊದಲ ತಿಂಗಳಾದ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ . ಪಾಲ್ಗುನ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ಚಾಂದ್ರ ವರ್ಷದ ಕೊನೆಯ ದಿನ . ಚೈತ್ರ , ವೈಶಾಖ , ಜ್ಯೇಷ್ಠ , ಆಷಾಡ , ಶ್ರಾವಣ , ಭಾದ್ರಪದ , ಆಶ್ವಯುಜ , ಕಾರ್ತಿಕ , ಮಾರ್ಗಶಿರ , ಪೌಷ , ಮಾಘ , ಪಾಲ್ಗುನ .ಇವು ಚಂದ್ರ ತಿಂಗಳುಗಳು . ಈ ತಿಂಗಳುಗಳ ಯಾದಿಯಂತೆ ದಿನಗಳು ಉರುಳುತ್ತಾ ವರ್ಷ ಕ್ರಮಿಸುತ್ತದೆ .ಹಳೆ ವರ್ಷ ನೇಪಥ್ಯಕ್ಕೆ ಸರಿಯುತ್ತಾ ಹೊಸವರ್ಷ ಬರುತ್ತದೆ . ತುಳುವರಲ್ಲಿ ಚಾಂದ್ರಮಾನಿಗಳೂ ಇದ್ದಾರೆ . ಕೆಲಂಡರ್ ಅನುಸರಿಸುವವರೂ ಇದ್ದಾರೆ . ಇವರೊಂದಿಗೆ ಬದುಕುವ ನಮಗೆ ಇಂತಹ ಗೊಂದಲಗಳು ಸಹಜ .ನಾವು ಚಾಂದ್ರಯುಗಾದಿಯನ್ನೂ ಆಚರಿಸೋಣ , ಕೆಲಂಡರ್ ಹೊಸವರ್ಷವನ್ನೂ ಆಚರಿಸೋಣ . ಆದರೆ ನಮ್ಮದೇ ಆದ ವಿಷು , ಬಿಸು , ಇಗಾದಿಯನ್ನು " ಕಣಿ " ನೋಡುತ್ತಾ , ಹಿರಿಯರಿಗೆ ನಮಸ್ಕರಿಸುತ್ತಾ , ಪಾಯಸದ ಊಟಮಾಡುತ್ತಾ ಆಚರಿಸೋಣ . ಆಷಾಢ - ಚಾಂದ್ರ ಪದ್ಧತಿಯಲ್ಲಿ ಅಂತಹ ದೊಡ್ಡ ನಿಷಿದ್ಧಗಳಿಲ್ಲ , ನಿಷಿದ್ಧಗಳಿವೆ . ಸಣ್ಣಪುಟ್ಟ ಆಚರಣೆಗಳಿರುತ್ತವೆ . ಆದರೆ ಆಟಿ - ಸೌರ ಪದ್ಧತಿಯ ತಿಂಗಳಲ್ಲಿ "ಆಟಿ ಕುಲ್ಲುನು"ಎಂದು ತವರು ಮನೆಗೆ ಹೋಗುವ ಕ್ರಮವಿದೆ . ಆಟಿ ತಿಂಗಳಲ್ಲಿ ಕುಳಿತು ತಿನ್ನಬೇಕು , ಕೆಲಸವಿಲ್ಲ ಅದಕ್ಕಾಗಿ ತವರು ಮನೆಗೆ ಕಳುಹಿಸುವುದು ಎಂದೂ ಒಂದು ಒಡಂಬಡಿಕೆ ಇದೆ . ಆಟಿ ಅಮಾವಾಸ್ಯೆಯಂದು "ಆಟಿ ಮದ್ದು" ಕುಡಿಯುವ ಕ್ರಮವಿದೆ . ಧಾರಾಕಾರ ಸುರಿಯುವ ಮಳೆಯಿಂದ ಆರೋಗ್ಯ ಕೆಡಬಾರದಲ್ಲ ,ಅದಕ್ಕೆ ಮದ್ದು ಕುಡಿಯುವ ಆಚರಣೆ .ನಾವು ಆರೋಗ್ಯವಂತರಾದರೆ ಸಾಲದು ಗದ್ದೆಯಲ್ಲಿ ಬೆಳೆಯುತ್ತಿರುವ ನಮ್ಮಬೆಳೆಯ ರಕ್ಷಣೆಗೂ ಕಾವೇರಿ ಮರದ ಗೆಲ್ಲುಗಳನ್ನು ಕಡಿದು ಗದ್ದೆಗಳಿಗೆ ಹಾಕುವ ಕ್ರಮವಿತ್ತು. ನಾಗರಪಂಚಮಿಯು ಆಟಿ ಅಮಾವಾಸ್ಯೆ ಕಳೆದು ಐದನೇ ದಿನವೇ ಬರುತ್ತದೆ . ತುಳುವಾಲ ಬಲೀಂದ್ರ ಪಾಡ್ದನದಲ್ಲಿ ಬಲೀಂದ್ರ ಅವನು ಬಿಟ್ಟುಹೋದ ಭೂಮಿಯನ್ನು , ಪ್ರಜೆಗಳನ್ನು ನೋಡಿಬರಲು ಆಳು ಕಳುಹಿಸುತ್ತಾನೆ ಎಂದಿದೆ . ಇದು ನಿಜವಾಗಿ ಜನ ಬೆಳೆಬೆಳೆಯುತ್ತಿದ್ದಾರಾ ,ಮಳೆ ಹೇಗೆ ಸುರಿಯುತ್ತದೆ ಎಂಬುದನ್ನು ತಿಳಿದು ಬರಲು ಆಳನ್ನು ಕಳುಹಿಸುವುದು ಎಂದು ಒಂದು ವಿವರಣೆ ಇದೆ .ಮುಂದೆ ಸೋಣ ತಿಂಗಳಿಗೆ ಬಲೀಂದ್ರನ ತಾಯಿ ಬರುತ್ತಾಳೆ ಎಂಬುದು ನಂಬಿಕೆ . ಸೌರಯುಗಾದಿ ಹೊಸ ವರ್ಷದ ಮೊದಲ ದಿನ ಮಾತ್ರವಲ್ಲ "ಕೃಷಿ"ಗೆ ತೊಡಗುವ ದಿನವೂ ಹೌದು . "ನಾಲೆರು ಮಾದಾವೊಡು , ಪುಂಡಿಬಿತ್ತ್ ಪಾಡೋಡು" ಎಂಬುದು ಸೌರಯುಗಾದಿಯ ದಿನ ಕೃಷಿಕನು ಕೃಷಿಗೆ ತೊಡಗುವುದು ಸಂಪ್ರದಾಯ. ನಮ್ಮ ಬಹುತೇಕ ಹಬ್ಬಗಳು ಕೃಷಿಯನ್ನು ಆಧರಿಸಿಯೇ ಒದಗಿಬರುವಂತಹದ್ದು . ತುಳು ತಿಂಗಳ ಇಷ್ಟು ಹೋಗುವ ದಿನ ಎಂಬ ನಿರ್ಧಾರದೊಂದಿಗೆ ನಾವು ನಮ್ಮ ಕೋಲ , ನೇಮ ಹಾಗೂ ನಾಗ ತನು ತಂಬಿಲ ,ವಾರ್ಷಿಕ ದಿನಗಳನ್ನು , ಪೂರ್ವಾಪರ ಆಚರಣೆಗಳನ್ನು ನಡೆಸಿದರೆ ಇಂತಹ ಗೊಂದಲ ಇರಲಾರದು . ಇಷ್ಟನೇ ತಾರೀಕು ಎನ್ನುವುದು ನಮ್ಮ ಆಚರಣೆಗಳಿಗೆ ಹೊಂದಿಕೆ ಆಗುವುದೇ ಇಲ್ಲ . ಈ ವಿವರಣೆ ತುಳು ಸಂಸ್ಕೃತಿ ಪ್ರೀತಿಯಿಂದ ಮಾತ್ರ ಬರೆದೆ. ಬರಹ : ಕೆ ಎಲ್ ಕುಂಡಂತಾಯ (ಹಿರಿಯ ಜಾನಪದ ವಿದ್ವಾಂಸರು)
ಚಮ್ಮಾರರಿಗೆ ಮತ್ತು ಬೀದಿ ಬದಿಯ ವ್ಯಾಪಾರಸ್ಥರಿಗೆ ಕೊರೊನಾ ತಡೆಗಟ್ಟುವ ಕಿಟ್ ವಿತರಣೆ
Posted On: 27 Jun 2020, 09:39 PM
ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಇಂದು ಸಂಜೆ ಉಡುಪಿ ನಗರದಲ್ಲಿರುವ ಚಮ್ಮಾರರಿಗೆ ಮತ್ತು ಬೀದಿ ಬದಿಯ ವ್ಯಾಪಾರಸ್ಥರಿಗೆ ಕೊರೊನಾ ತಡೆಗಟ್ಟುವ ಸಲುವಾಗಿ ಮರುಬಳಕೆ ಮಾಡಬಹುದಾದಂತಹ ಬಟ್ಟೆಯ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಬೂನು ಒಳಗೊಂಡ ಸೇಫ್ಟಿ ಕಿಟ್ ವಿತರಿಸಿ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧಾರಣೆಯಿಂದ ಆಗುವಂತಹ ಲಾಭಗಳು, ಸ್ಯಾನಿಟೈಸರ್ ಬಳಕೆಯ ವಿಧಾನ ಮತ್ತು ಬರುವ ಗ್ರಾಹಕರಲ್ಲಿಯೂ ಅರಿವು ಮೂಡಿಸುವಂತೆ ಅವರಲ್ಲಿ ಸಂಘಟನೆಯ ಸದಸ್ಯರು ವಿನಂತಿ ಮಾಡಿದರು. ಈ ಸಂದರ್ಭದಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಗ್ರಾಮೀಣಾಭಿವೃದ್ಧಿ ಯೋಜನೆ ಸಂಯೋಜಕ ಜಗದೀಶ್ ಶೆಟ್ಟಿ, ತಾಲೂಕು ಸಂಯೋಜಕ ಉದಯ ನಾಯ್ಕ್, ನಗರ ಸಂಯೋಜಕ ನಾಗರಾಜ್ ಭಂಡಾರ್ಕಾರ್ ಮತ್ತು ಯುವ ಘಟಕದ ವೀಕ್ಷಿತ್ ಉಪಸ್ಥಿತರಿದ್ದರು. ವೋಕಲ್ ಫಾರ್ ಲೋಕಲ್ ಅಭಿಯಾನದ ಅಂಗವಾಗಿ ಸ್ಥಳೀಯರಿಗೆ ಬೆಂಬಲಿಸುವ ಸಲುವಾಗಿ ಮರುಬಳಕೆ ಮಾಡುವಂತಹ ಬಟ್ಟೆಯ ಮಾಸ್ಕ್ ತಯಾರಿಸಲು ಸ್ಥಳೀಯ ಗ್ರಾಮೀಣ ಮಹಿಳೆಗೆ ಸೂಚಿಸಿ ಅವರಿಂದಲೇ ಮಾಸ್ಕ್ ಗಳನ್ನು ಖರೀದಿಸಲಾಗಿತ್ತು.
ಸಹಕಾರಿ ಬ್ಯಾಂಕುಗಳು ಆರ್.ಬಿಐ ವ್ಯಾಪ್ತಿಗೆ ಬಂದ ನಂತರ ಸಹಕಾರಿ ಕ್ಷೇತ್ರ ಏನಾಗಲಿದೆ?
Posted On: 27 Jun 2020, 11:56 AM
ದೇಶದ ಅಧಿಕಕಾರ ರಂಗದಲ್ಲಿ ಸಹಕಾರಿಗಳ ಪಾತ್ರ ಹೆಚ್ಚಲಿದೆ ದೇಶದಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿ ತನ್ನ ಸದಸ್ಯರ ಹಿತಕ್ಕಾಗಿ ಮತ್ತು ಸಹಕಾರಿ ಮನೋಭಾವದಿಂದ ದೇಶದ ಆರ್ಥಿಕವಾಗಿ ಮುನ್ನಡೆಯಲು ಬಹಳಷ್ಟು ಕೊಡುಗೆ ನೀಡುವಂತಹ ಸಹಕಾರಿ ಬ್ಯಾಂಕ್‍ಗಳು ಇನ್ನು ಆರ್.ಬಿ.ಐ ವ್ಯಾಪ್ತಿಗೆ ಬರಲಿದೆ ಎಂದು ಈಗಾಗಲೇ ಕೇಂದ್ರ ಸರಕಾರದ ಸಂಪುಟ ಸಭೆಯಲ್ಲಿ ಅನುಮೋದನೆಯನ್ನೂ ಪಡೆಯಲಾಗಿದ್ದು, ಈ ನಿಲುವಿನಿಂದಾಗಿ ದೇಶದ ಸಹಕಾರಿ ಕ್ಷೇತ್ರಕ್ಕೆ ಇನ್ನಷ್ಟು ಬಲ ಮತ್ತು ಒತ್ತು ನೀಡುತ್ತಿದ್ದು ಸಹಕಾರಿ ಕ್ಷೇತ್ರಕ್ಕೆ ಈ ಬಲದಿಂದಾಗಿ 100 ವರ್ಷಗಳಷ್ಟು ಹಳೆಯ ಇತಿಹಾಸಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಗುತ್ತದೆ. ಸಹಕಾರಿಗಳು ಈ ಒಂದು ಬಲದಿಂದಾಗಿ ತನ್ನ ಗ್ರಾಹಕರನ್ನು ಇನ್ನಷ್ಟು ಆಕರ್ಷಿಸಿ ಬಹಳಷ್ಟು ಠೇವಣಿ ಜೊತೆಗೆ ಸಾಲ ನೀಡಿ ತಮ್ಮ ಸದಸ್ಯರ ಬದಲಾವಣೆಯ ಈ ಕಾಲಘಟ್ಟದಲ್ಲಿ ಶಕ್ತಿ ಸಾಮರ್ಥ್ಯದ ಜೊತೆಗೆ ಬೆಳವಣಿಗೆ ಹೊಂದಿ ದೇಶದ ಆರ್ಥಿಕತೆಗೆ ಸಹಕಾರಿಯ ಕೊಡುಗೆ ಬಹಳಷ್ಟು ಎನ್ನುವಂತೆ ಅಭಿವೃದ್ಧಿ ಆಗುವುದಕ್ಕೆ ಸಂಶಯವಿಲ್ಲ. ಈ ಎಲ್ಲದರೊಳಗೆ ಸಹಕಾರಿಯ ಪತಾಕೆ ಇನ್ನಷ್ಟು ಬೆಳೆದು ದೂರದೃಷ್ಟಿತ್ವ, ಸ್ವಾವಲಂಬಿಯಾಗಿ ಆರ್.ಬಿ.ಐ ನ ಮಾರ್ಗದರ್ಶನದೊಂದಿಗೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎನ್ನುವುದು ನನ್ನ ಆಶಯ. ಕೇಂದ್ರ ಸರ್ಕಾರದ ಈ ದಿಟ್ಟ ನಿರ್ಧಾರದಿಂದ ದೇಶದ ಅಧಿಕಾರ ಕ್ಷೇತ್ರದಲ್ಲಿ ಸಹಕಾರಿಗಳ ಪಾತ್ರ ಹೆಚ್ಚಲಿದೆ. ಮಂಜುನಾಥ ಎಸ್.ಕೆ, ನಿರ್ದೇಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಮತ್ತು ಅಧ್ಯಕ್ಷರು, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ., ಉಡುಪಿ.
ಉಡುಪಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ತಂಡ ರಚನೆ : ಮಹೇಶ್ವರ ರಾವ್
Posted On: 26 Jun 2020, 10:34 PM
ಉಡುಪಿ ಜೂನ್ 26 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯುವ ಕುರಿತಂತೆ ಕೂಡಲೇ ಎಸ್ಪಿ ಮತ್ತು ಕುಂದಾಪುರ ಎಸಿ ಅವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಕಟ್ಟುನಿಟ್ಟಿನ ತಪಾಸಣಾ ಕಾರ್ಯ ಕೈಗೊಳ್ಳುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಮರಳು ಸಮಸ್ಯೆ ಮತ್ತು ಕೋವಿಡ್-19 ಪ್ರಸ್ತುತ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಮರಳು ಸಾಗಾಟ ತಡೆಯುವ ಕುರಿತಂತೆ ಎಸ್ಪಿ ಮತ್ತು ಎಸಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ, ಮರಳುಗಾರಿಕೆ ನಡೆಯುವ ಪ್ರದೇಶಗಳ ಮೇಲೆ ದೀಢೀರ್ ದಾಳಿ ನಡೆಸುವುದರ ಮೂಲಕ ಹಾಗೂ ನಿರಂತರವಾಗಿ ಪರಿಶೀಲನೆ ನಡೆಸುವುದರ ಮೂಲಕ ಜಿಲ್ಲೆಯಲ್ಲಿ ಯಾವುದೇ ಅಕ್ರಮ ಮರಳು ಸಾಗಾಟ ನಡೆಯದಂತೆ ಎಚ್ಚರವಹಿಸುವಂತೆ ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಂಡಗಳನ್ನು ರಚಿಸುವಂತೆ ಹಾಗೂ ತಂಡದಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸುವಂತೆ ಮಹೇಶ್ವರ ರಾವ್ ಸೂಚನೆ ನೀಡಿದರು. ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ಸಾಗಾಟಕ್ಕೆ ಸಂಬಂದಿಸಿದ ಯಾವುದೇ ವಾಹನ ಕಂಡುಬಂದಲ್ಲಿ ಕೂಡಲೇ ಮುಟ್ಟುಗೋಲು ಹಾಕಿಕೊಂಡು ಸಂಬಂದಪಟ್ಟವರ ವಿರುದ್ದ ಎಫ್.ಐ.ಆರ್. ದಾಖಲಿಸುವಂತೆ ಹಾಗೂ ಮರಳುಗಾರಿಕೆ ನಡೆಸಲು ಅನುಮತಿ ಪಡೆದು ನಿಯಮ ಉಲ್ಲಂಘಿಸಿರುವ ವಾಹನಗಳ ವಿರುದ್ದ ಸಹ ಕೂಡಲೇ ಕ್ರಮ ಕೈಗೊಳ್ಳುವಂತೆ ಮಹೇಶ್ವರ ರಾವ್ ಸೂಚಿಸಿದರು. ಅಕ್ರಮ ಮರಳುಗಾರಿಕೆ ತಡೆಯುವ ಜವಾಬ್ದಾರಿ ಹೊಂದಿರುವ ಸಂಬಂದಪಟ್ಟ ತಹಸೀಲ್ದಾರ್ ಗಳು, ಪಿಡಿಓ ಗಳು, ಗಣಿ ಇಲಾಖೆ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳು ಮರಳುಗಾರಿಕೆ ನಡೆಯುವ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಕ್ರಮ ನಡೆಯದಂತೆ ಎಚ್ಚರವಹಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಚೇತರಿಕೆ ಪ್ರಮಾಣ 63% ಇದೆ ಆದರೆ ಜಿಲ್ಲೆಯಲ್ಲಿ ಇದರ ಪ್ರಮಾಣ 92% ಇದೆ, ಸೋಂಕಿತರ ಮರಣ ಪ್ರಮಾಣ ರಾಜ್ಯದಲ್ಲಿ 1.6% ಇದ್ದರೆ ಜಿಲ್ಲೆಯಲ್ಲಿ 0.2 ಇದೆ, ಜಿಲ್ಲೆಯಲ್ಲಿ ಕೋವಿಡ್ 19 ವಿರುದ್ದ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಕರೋನಾ ಸೋಂಕಿತರ ಸಂಪರ್ಕದವರ ಟ್ರೇಸಿಂಗ್ ಕಾರ್ಯ ಸಹ ಉತ್ತಮವಾಗಿ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಕಾರ್ಯವನ್ನು ಅಭಿನಂದಿಸಿದ ಮಹೇಶ್ವರ ರಾವ್, ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 3 ಮಂದಿಯ ವಿರುದ್ದ ಎಫ್.ಐ.ಆರ್ ದಾಖಲಿಸಿದ್ದು, ಕ್ವಾರಂಟೈನ್ ನಲ್ಲಿರುವವರ ಮನೆಗೆ ಪ್ರತಿದಿನ ಭೇಟಿ ನೀಡಿ, ಕ್ವಾರಂಟೈನ್ ಆಪ್ ನಲ್ಲಿ ದಾಖಲಿಸುವ ಕಾರ್ಯದಲ್ಲಿ ಜಿಲ್ಲೆಯಲ್ಲಿ 92% ಸಾಧನೆ ಮಾಡಿದ್ದು, ರಾಜ್ಯದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ, ಕೋವಿಡ್ -19 ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿಗಳ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ 19 ಚಿಕಿತ್ಸೆಗಾಗಿ 2400 ಹಾಸಿಗೆ ಸೌಲಭ್ಯವಿದ್ದು, 9 ಫಿವರ್ ಕ್ಲಿನಿಕ್ ತೆರೆಯಲಾಗಿದೆ, ಐ.ಎಲ್.ಐ ಮತ್ತು ಸಾರಿ ಪ್ರಕರಣಗಳ ಕುರಿತಂತೆ ಪ್ರತಿದಿನ ವರದಿ ಪಡೆಯಲಾಗುತ್ತಿದೆ, 13840 ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು ಪ್ರಸ್ತುತ 116 ಸಕ್ರಿಯ ಪ್ರಕರಣಗಳು ಮಾತ್ರ ಇವೆ ಎಂದು ಕೋವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿದರು. ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ಎಲ್ಲಾ ತಾಲೂಕುಗಳ ತಹಸೀಲ್ದಾರರು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿಯಲ್ಲಿ ಆದಿತ್ಯವಾರವೇ ಸೆಲೂನ್'ಗಳಿಗೆ ರಜೆ ಸವಿತಾ ಸಮಾಜದ ನಿರ್ಧಾರ
Posted On: 26 Jun 2020, 09:26 PM
ಉಡುಪಿ. 26, ಜೂನ್ : ದಿನಾಂಕ 02/06/2020 ರಂದು ಜಿಲ್ಲಾ ಸವಿತಾ ಸಮಾಜದ ಏಳು ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷರು, ವಲಯ ಘಟಕದ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೊರೊನ ನಿಮಿತ್ತ ಸೆಲೂನ್ ಗಳಿಗೆ ಭಾನುವಾರ ರಜೆ ಮಾಡಿ ಮಂಗಳವಾರ ತೆರೆದಿಡುವಂತೆ ತೆಗೆದುಕೊಂಡ ನಿರ್ಣಯದಂತೆ ಈಗಾಗಲೇ ನಾಲ್ಕು ಭಾನುವಾರ ರಜೆ ಆಗಿದ್ದರು ಉಡುಪಿ ನಗರದ ಮಣಿಪಾಲ ಮತ್ತು ಶಿರ್ವ ಮುದರಂಗಡಿಯಲ್ಲಿ ಕೆಲವು ಮಾಲೀಕರ ಅಸಹಕಾರದಿಂದ ಸಮಸ್ಯೆ ಆಗಿರುವುದನ್ನು ಮನಗಂಡು ಇಂದು ಎಲ್ಲಾ ಜಿಲ್ಲಾ ಸವಿತಾ ಸಮಾಜದ ಸಮಾಲೋಚನಾ ಸಭೆ ನಡೆಯಿತು. ಸಾಮಾಜಿಕ ಸ್ವಾಸ್ಥ್ಯ ಹಾಗೂ ಕ್ಷೌರಿಕರ ಆರೋಗ್ಯವನ್ನು ಕಾಪಾಡುವುದು ಅದರೊಂದಿಗೆ ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುವುದರೊಂದಿಗೆ ಎಲ್ಲಾದರೂ ಭಾನುವಾರ ಸೆಲೂನ್ ಗಳಲ್ಲಿ ಒತ್ತಡ ಜಾಸ್ತಿಯಾಗಿ ನಿಯಮಾವಳಿಗಳನ್ನು ಪಾಲಿಸಲು ಆಗದೇ ಕ್ಷೌರ ವೃತ್ತಿ ನಿಭಾಯಿಸಲು ಕಷ್ಟ ಸಾಧ್ಯವಾಗಿರುವುದರಿಂದ ಸದ್ಯದ ಮಟ್ಟಿಗೆ ಭಾನುವಾರವೇ ರಜೆ ಮಾಡಿ ಮಂಗಳವಾರ ತೆರೆದು ಹಿಂದೆ ನಿರ್ಧರಿಸಿದಂತೆ ಮುಂದುವರಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು, ಆದ್ದರಿಂದ ಸಮಾಜದ ಸಂಘಟನೆಯ ವಿರುದ್ಧವಾಗಿ ಕೆಲವರು ಸೆಲೂನ್ ಗಳನ್ನು ತೆರೆದಿಟ್ಟರು ಸಾರ್ವಜನಿಕರು, ಹಿರಿಯರ, ಮಕ್ಕಳ ಮತ್ತು ತಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಭಾನುವಾರ ಸೆಲೂನ್ಗಳಿಗೆ ತೆರಳದೆ ವಾರದ ಇತರ ದಿನಗಳಲ್ಲಿ ಸೇವೆ ಪಡೆಯುವಂತೆ ಜಿಲ್ಲಾ ಸವಿತಾ ಸಮಾಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಗವಂತ ಬದುಕು ಕೊಟ್ಟಿರುವುದು ಸಾಯಲು ಅಲ್ಲ ಬದುಕಲು - ದಿವ್ಯಾಂಗ ಗಣೇಶ್ ಪಂಜಿಮಾರ್
Posted On: 26 Jun 2020, 04:57 PM
"ಸಾವನ್ನು ನಾವು ಹುಡುಕಿಕೊಂಡು ಹೋಗಬಾರದು. ನಮ್ಮನ್ನು ಸಾವು ಹುಡುಕಿಕೊಂಡು ಬರಬೇಕು. ಆ ದಿನದ ವರೆಗೆ ಬಾಳಬೇಕು." ಮರಣವೆಂಬುದು ಮಹಾ ನವಮಿಯಾಗಬೇಕೇ ಹೊರತು ಸ್ವಯಂ ವಧಾಮಿಯಾಗಬಾರದು. ಮರಣ ನಮ್ಮ ವಿಳಾಸ ಹಿಡಿದುಕೊಂಡು ಪರದಾಡಬೇಕು. ನಾವು ಯಾಕೆ ಬಾರದೆ ಇರುವ ಮರಣವನ್ನು ಬಲವಂತದಿಂದ ಬರಮಾಡಿಸಿಕೊಂಡು ಒದ್ದಾಡಿ ಸಾಯಬೇಕು? ಭಗವಂತ ನಮಗೆ ಬದುಕು ಕೊಟ್ಟಿರುವುದು ಬದುಕಲು. ಸಾವು ಬರುವ ತನಕ ನಾವು ಬದುಕಿ ತೋರಿಸಬೇಕು. ಈ ಬದುಕಿ ತೋರಿಸುವ ಕಲೆಯೇ ಜೀವನ. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುವವರು ಒಮ್ಮೆ ನಮ್ಮಂತವರನ್ನು ನೋಡಬೇಕು. ಅಥವಾ ನಮ್ಮಂತವರ ಬಗ್ಗೆ ತಿಳಿದುಕೊಳ್ಳಬೇಕು. ತಂದೆ ಗದರಿದರು ತಾಯಿ ಬೈದರು, ಶಿಕ್ಷಕರು ಜೋರು ಮಾಡಿದ್ರು, ಎಂದು ಒಂದು ಕ್ಷಣದಲ್ಲಿ ಬದುಕೇ ಬೇಡ ಎಂದು ನಿರ್ಧರಿಸಿ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಬೇಸರಿಸುತ್ತಾರೆ ಭಾವಚಿತ್ರ ಕಲಾವಿದ ಗಣೇಶ್ ಪಂಜಿಮಾರು. ತಾನು ಸ್ವತಃ Osteogenesis imperfecta (ಮೂಳೆಗಳ ತೀವ್ರ ದುರ್ಬಲತೆಯಿಂದ ಬರುವ ಅನುವಂಶಿಕ ರೋಗ) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಅಪರೂಪದ ಕಾಯಿಲೆಯ ಪರಿಣಾಮದಿಂದಾಗಿ ಮೂವತ್ತೊಂದರ ಹರೆಯದ ಗಣೇಶ್ ಅವರ ಎತ್ತರ ಮೂರುವರೆ ಅಡಿ. ಭಾರ ಇಪ್ಪತ್ಮೂರು ಕಿಲೋಗ್ರಾಂ. ಆರು ಮಂದಿ ಒಡಹುಟ್ಟಿದವರಲ್ಲಿ ನಾಲ್ಕು ಮಂದಿಗೆ ಈ ಭೀಕರ ಕಾಯಿಲೆ ಇದೆ. ಅಣ್ಣ ಒಬ್ಬ ಇದೇ ಮಾರಕ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ. ದಿವ್ಯಾಂಗತೆ ಇರುವುದು ನನ್ನ ದೇಹಕ್ಕೆ ಅನ್ಯತಾ ಮನಸ್ಸಿಗಲ್ಲ. ಅದು ಅದರ ಕಾರ್ಯ ಮಾಡಲಿ. ನಾನು ನನ್ನ ಕಾರ್ಯ ಮಾಡುತ್ತೇನೆ ಎಂದು ಪಣತೊಟ್ಟವರು ಗಣೇಶ್ ಪಂಜಿಮಾರು. ವಿಧಿಯನ್ನು ಹಳಿಯುತ್ತ ಬದುಕುವುದಕ್ಕಿಂತ ಬಂದದೆಲ್ಲ ಬರಲಿ. ದಾಸರು ಹೇಳುವ ಹಾಗೆ "ಈಸ ಬೇಕು. ಇದ್ದು ಜೈಸಬೇಕು." ಇವರೊಂದಿಗೆ ಮನೆಯವರೆಲ್ಲ ಈ ತತ್ವವನ್ನು ಪರಿಪಾಲಿಸಿಕೊಂಡು ಬದುಕುತ್ತಿದ್ದಾರೆ. ಬಿ. ಕಾಂ ಪದವೀಧರರಾದ ಗಣೇಶ್ ಸದ್ಯ ನಿರುದ್ಯೋಗಿ. ಹಲವು ಬಾರಿ ಬ್ಯಾಂಕಿಂಗ್ ಪರೀಕ್ಷೆ ಕಟ್ಟಿದರೂ ಉತ್ತೀರ್ಣರಾಗದೇ ಮರಳಿ ಯತ್ನವ ಮಾಡುತ್ತಲ್ಲಿದ್ದಾರೆ. ಪದವಿ ಪಡೆದ ನಂತರ ಮನೆಯಲ್ಲಿರುತ್ತ ಏನಾದರೊಂದು ಮಾಡಬೇಕು. ನನ್ನ ಸಂಸಾರದ ನೇಗಿಲಿಗೆ ಹೆಗಲು ಕೊಡಬೇಕೆಂದು ಹಪಹಪಿಸುತ್ತಿದ್ದರು. ಒಂದು ಗುರುವಾರ ತನ್ನ ತಾಯಿ ಶಿರ್ವದ ಸಂತೆಗೆ ಹೋಗಿರುವ ಸಮಯದಲ್ಲಿ ತದೇಕ ಚಿತ್ತದಿಂದ ತಾಯಿಯನ್ನು ನೆನೆಸುತ್ತ ಹಾಳೆಯ ಮೇಲೆ ತಾಯಿಯ ಭಾವಚಿತ್ರವನ್ನು ಬಿಡಿಸಿದರು. ನೂರಕ್ಕೆ ನೂರರಷ್ಟು ಅಲ್ಲದಿದ್ರೂ ತೊಂಬತ್ತೇಳು ಪ್ರತಿಶತ ಚೆನ್ನಾಗಿಯೇ ಬಿಡಿಸಿದರು. ತಾಯಿ ಮರಳಿ ಬಂದು ನೋಡಿದಾಗ ಆನಂದ ಭಾಷ್ಪಿತರಾದರಂತೆ. ಅಂದೇ ಭಾವಚಿತ್ರ ಬಿಡಿಸುವ ಕಲೆಗೆ ಗಣಪತಿ ಮಂತ್ರ ಹಾಡಿದ ಗಣೇಶ್ ಮತ್ತೆ ಹೊರಳಿ ನೋಡಲಿಲ್ಲ. ಗಣೇಶ್ ಅವರು ಇಂದು ತನ್ನದೇ ಆದ Ganesh Panjimar Arts ಎಂಬ ಯುಟ್ಯೂಬ್' ಚಾನೆಲ್ ಹೊಂದಿದ್ದಾರೆ. ನೂರಾರು ಭಾವಚಿತ್ರಗಳನ್ನು ಬಿಡಿಸಿ ಯುಟ್ಯೂಬ್ ವಾಹಿನಿಯಲ್ಲಿ ಹರಿಯಬಿಟ್ಟಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಯ ಚಲನಚಿತ್ರ ರಂಗದ ದಿಗ್ಗಜರ ಭಾವಚಿತ್ರಗಳನ್ನು ರಚಿಸಿದ್ದಾರೆ. ಕ್ರಿಕೆಟ್, ಫುಟ್‌ಬಾಲ್, ಡಬ್ಲು. ಡಬ್ಲು. ಎಫ್ ತಾರೆಯರ ರಾಜಕೀಯ ನೇತಾರರ, ಸಾಮಾಜಿಕ ಗಣ್ಯರ ಭಾವಚಿತ್ರಗಳನ್ನು ರಚಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರಿಂದ ಸನ್ಮಾನಿತರಾಗಿದ್ದಾರೆ ಬಂಜರಾ ಗ್ರೂಪಿನ ಮಾಲಕರಾದ ಡಾ. ಪ್ರಕಾಶ್ ಶೆಟ್ಟಿಯವರ ಅಭಿನಂದನ ಕಾರ್ಯಕ್ರಮದಲ್ಲಿ ಪುರಸ್ಕೃತರಾಗಿದ್ದಾರೆ. ಪರ್ಯಾಯೋತ್ಸವದಲ್ಲಿ ಸನ್ಮಾನಿತರಾಗಿದ್ದಾರೆ. ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜ್ ಶಿರ್ವ, ಹಳೆ ವಿದ್ಯಾರ್ಥಿ ಸಂಘ ಮುಂಬೈ ಘಟಕದ ಜಾಗತಿಕ ಸಮಾವೇಶದಲ್ಲಿ ಸನ್ಮಾನಿತರಾಗಿದ್ದಾರೆ. ಊರಿನ ಹಲವಾರು ಸಂಘ ಸಂಸ್ಥೆಗಳು ಗಣೇಶ್ ಅವರ ಸಾಧನೆಯನ್ನು ಗುರುತಿಸಿವೆ. ಮಾಧ್ಯಮಗಳೂ ಪರಿಚಯಿಸಿವೆ. ಗಣೇಶ್ ಅವರ ಓರ್ವ ಹಿರಿಯ ಸೋದರ ದಿವ್ಯಾಂಗರಾದರೂ ಸಾಫ್ಟ್‌ವೇರ್ ಇಂಜಿನಿಯರಿಂಗ್ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಉದ್ಯೋಗಿ ಆಗಿದ್ದಾರೆ ಇವರ ತಮ್ಮ ಕೂಡ ಸಾಫ್ಟ್‌ವೇರ್ ಇಂಜಿನಿಯರ್. ಕುಟುಂಬದ ಪೋಷಣೆಯ ಭಾರ ಆ ಇಬ್ಬರ ಮೇಲಿದೆ. ಇವರ ದಿವ್ಯಾಂಗವುಳ್ಳ ತಂಗಿ ಮನೆಯಲ್ಲಿ ಕಾಗದಗಳ ಪಟ್ಟಿಯಿಂದ (Quill Arts) ಗೊಂಬೆ ತಯಾರಿಸುವ ಸೃಜನಶೀಲತೆಯನ್ನು ಬೆಳೆಸಿಕೊಂಡಿದ್ದಾರೆ. ಗಣೇಶ್ ಪಂಜಿಮಾರು ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹತ್ತಿರದ ಕೋಡು ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆಯಿಂದ ಕಲಿತವರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಶ್ರೀಗುರು ನಾರಾಯಣ ಹೈಸ್ಕೂಲ್, ಪಡುಬೆಳ್ಳೆ ಇಲ್ಲಿಂದ ಮಾಡಿದವರು. ಪದವಿ ಪೂರ್ವ ಶಿಕ್ಷಣವನ್ನು ಹಿಂದೂ ಜೂನಿಯರ್ ಕಾಲೇಜ್ ಹಾಗೂ ಬಿಕಾಂ ಪದವಿಯನ್ನು ಎಂ. ಎಸ್. ಆರ್. ಎಸ್ ಕಾಲೇಜ್ ಇಲ್ಲಿಂದ ಪಡೆದಿರುವರು. ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಎಂ. ಎಸ್. ಆರ್. ಎಸ್. ಕಾಲೇಜಿನ ಹಳೆ ವಿದ್ಯಾರ್ಥಿ ಮುಂಬೈ ಘಟಕವು ಮೂರು ವರ್ಷ ಧನ ಸಹಾಯ ಮಾಡಿದೆ ಎಂದು ಸದಾ ಸ್ಮರಿಸುತ್ತಾರೆ ಗಣೇಶ್. ಪದವಿ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿಗೆ ಹೋಗಿ ಬರಲು ವಿಶೇಷವಾಗಿ ತಯಾರಿಸಿದ ತ್ರಿಚಕ್ರ ವಾಹನವನ್ನು ಕೊಡುಗೆಯಾಗಿ ನೀಡಿದ ಉಡುಪಿಯ ಉದ್ಯಮಿ ಶ್ರೀಸುದರ್ಶನ್ ಶೆಟ್ಟಿಯವರನ್ನೂ ಅದಕ್ಕಾಗಿ ಶ್ರಮಿಸಿದ ಹಿಂದಿ ಪ್ರಾಧ್ಯಾಪಕರಾಗಿದ್ದ ಶ್ರೀಮತಿ ಶಾರದ ಎಂ. ಅವರನ್ನೂ ಈಗಲೂ ನೆನೆಯುತ್ತಾರೆ ಗಣೇಶ್. ಗಣೇಶ್ ಪಂಜಿಮಾರು ಅವರ ಹಿರಿಯರು ಉಡುಪಿಯವರಾದರೂ ನೆಲೆಸಿದ್ದು ಆಂಧ್ರ ಪ್ರದೇಶದಲ್ಲಿ. ಮೂರು ದಶಕಗಳ ಹಿಂದೆ ಗಣೇಶ್ ಅವರ ಹೆತ್ತವರಾದ ದಿವಗಂತ ರಾಮ ಮೂಲ್ಯರು ಹಾಗೂ ಶ್ರೀಮತಿ ನಾಗಮಣಿ ಅವರು ಪಂಜಿಮಾರಲ್ಲಿ ಬಂದು ನೆಲೆಸಿದವರು. ಆರೋಗ್ಯದಲ್ಲಿ ಸರಿಯಿರುವ ಗಣೇಶ್ ಅವರ ದೊಡ್ಡಣ್ಣ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಅವರು ಸಂಸಾರಿಕರಾಗಿ ಬೇರೆ ವಾಸವಾಗಿದ್ದಾರೆ. ದುಡಿಯವ ಕೈಗಳಿಗಿಂತ ಉಣ್ಣುವ ಬಾಯಿಗಳ ಸಂಖ್ಯೆ ಹೆಚ್ಚು. ಔಷದಕ್ಕೆ ತಿಂಗಳಿಗೆ ತಲಾ ಒಂದೂವರೆ ಸಾವಿರ ರೂಪಾಯಿಗಳಷ್ಟು ವ್ಯಯವಾಗುತ್ತದೆ. ಆದರೂ ನಗು ನಗುತ್ತ ಬಾಳುವ ಇವರು ಊರಿಗೆಲ್ಲ ಮಾದರಿಯಾಗಿದ್ದಾರೆ. ತನ್ನ ಅನ್ನವನ್ನು ತಾನು ದುಡಿದು ತಿನ್ನಬೇಕು ಎಂಬ ಅಚಲ ನಿರ್ಧಾರ ಹೊಂದಿದ ಗಣೇಶ್ ಪಂಜಿಮಾರು ಕಾಯಿಲೆಯೊಂದಿಗೆ ನಿರುದ್ಯೋಗ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. ಬ್ಯಾಂಕಿನ ಪರೀಕ್ಷೆ ಪಾಸು ಮಾಡಿ ಕೆಲಸಕ್ಕೆ ಸೇರಬೇಕೆಂಬ ಗಣೇಶ್ ಅವರ ಕನಸು ನನಸಾಗಲಿ. ಅಥವಾ ಅದಕ್ಕೆ ತತ್ಸಮಾನವಾದ ಕೆಲಸವೊಂದು ಆದಷ್ಟು ಬೇಗ ದೊರೆಯಲಿ ಎಂದು ಹಾರೈಸೋಣ. ಲೇಖನ: ಉದಯ ಶೆಟ್ಟಿ ಪಂಜಿಮಾರು
ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ವಾಹನದ ವ್ಯವಸ್ಥೆ ಕಲ್ಪಿಸಿದ ಕಾಪುವಿನ ಮರ್ಣೆಯ ತಂಡ
Posted On: 25 Jun 2020, 02:43 PM
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮರ್ಣೆ ಕನರಾಡಿ ಕೊಡಂಗಳ ಕರ್ವಾಲು ಇವರ ವತಿಯಿಂದ ಉಚಿತ ವಾಹನದ ವ್ಯವಸ್ಥೆ. ಕಾಪು:(ಜೂನ್25) ವಿದ್ಯಾರ್ಥಿ ಜೀವನದ ಅತ್ಯಮೂಲ್ಯ ಘಟ್ಟ ಆಗಿರುವಂತಹ ಎಸ್.ಎಸ್.ಎಲ್.ಸಿ. ಯ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಕೆಗಳನ್ನು ಸಲ್ಲಿಸುತ್ತಿದ್ದೇವೆ. ಕೊರೊನ ಸಮಯದಲ್ಲಿ ಇನ್ನೂ ಸರಿಯಾಗಿ ಬಸ್ ಇಲ್ಲದ ಕರ್ವಾಲು ಕೊಡಂಗಳ ಮರ್ಣೆ ಅಲೆವೂರಿಗೆ ನಮ್ಮ "ಸಾರ್ವಜನಿಕ ಗಣೇಶೋತ್ಸವ ಸಮಿತಿ ಮರ್ಣೆ ಕನರಾಡಿ ಕೊಡಂಗಳ ಕರ್ವಾಲು" ಇದರ ವತಿಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತದೃಷ್ಟಿಯಿಂದ ಊರಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗಬಾರದೆಂದು ಪ್ರಜ್ವಲ್ ಹೆಗ್ಡೆ ಮರ್ಣೆ ಇವರ ಮುತುವರ್ಜಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪರವಾಗಿ ವಾಹನ ಸೌಕರ್ಯ ಮಾಡಿದ್ದು ಇಂದು ಬೆಳಿಗ್ಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಕರ್ವಾಲು ಮತ್ತು ರಂಜಿತ್ ನಾಯಕ್ ಕನರಾಡಿ ಇವರೊಂದಿಗೆ ಬಸ್ಸಿನ ತನಕ ಹೋಗಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
