ಪುರಸಭೆಯ ಸಮಗ್ರ ಘನತ್ಯಾಜ್ಯ ನಿರ್ವಹಣೆಯ ಕನಸನ್ನು ಪೂರ್ಣಗೊಳಿಸುವ ಆಶಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ - ಅನಿಲ್ ಕುಮಾರ್ ಕಾಪು
Thumbnail
ಕಾಪು : ಕಾಪು ಪುರಸಭೆಯ ನೂತನ ಎಲ್ಲೂರು ಘನತ್ಯಾಜ್ಯ ಘಟಕದ ಪ್ರಗತಿ ಪರಿಶೀಲನೆ ನಡೆಸಲು ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಇವರು ಕಾಪು ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ ನಾವಡ ಬಿ. ಹಾಗೂ ಸಿಬ್ಬಂದಿಗಳೊಂದಿಗೆ ಮೇ, 4ರಂದು ಭೇಟಿ ನೀಡಿರುತ್ತಾರೆ. ಘಟಕದ ಕಾಮಗಾರಿಗಳ ಮಾಹಿತಿಯನ್ನು ಪಡೆದು, ಘಟಕವು ಶೀಘ್ರವಾಗಿ ಕಾರ್ಯಾರಂಭ ಮಾಡುವ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ಕಾಪು ಪುರಸಭೆಯ ಸಮಗ್ರ ಘನತ್ಯಾಜ್ಯ ನಿರ್ವಹಣೆಯ ಕನಸನ್ನು ಪೂರ್ಣಗೊಳಿಸುವ ಆಶಯವನ್ನು ವ್ಯಕ್ತಪಡಿಸಿದರು. ಪ್ರಸ್ತುತ ಕಾಪು ಪುರಸಭೆಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಕ್ತ ಜಾಗದ ಕೊರತೆಯಿದ್ದು ಎಲ್ಲೂರು ಘಟಕದ ನಿರ್ಮಾಣದಿಂದ ಪ್ರತಿದಿನ ಸುಮಾರು 10 ಟನ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಪರಿಸರಕ್ಕೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಬಹುದಾಗಿದೆ. ಇದರಲ್ಲಿ ಕಾಪು ಪುರಸಭಾ ವ್ಯಾಪ್ತಿಯ ಸಾರ್ವಜನಿಕರ ಸಹಕಾರವು ಅತೀ ಮುಖ್ಯವಾಗಿದ್ದು, ಘನತ್ಯಾಜ್ಯವನ್ನು ಹಸಿ ಕಸ (ಕೊಳೆಯುವ ತ್ಯಾಜ್ಯ), ಒಣ ಕಸ (ಪ್ಲಾಸ್ಟಿಕ್, ಪೇಪರ್, ಲೋಹ, ಗ್ಲಾಸ್ ಇತ್ಯಾದಿ) ಹಾಗೂ ಸ್ಯಾನಿಟರಿ ತ್ಯಾಜ್ಯ (ಸ್ಯಾನಿಟರಿ ಪ್ಯಾಡ್, ಡೈಪರ್) ಗಳಾಗಿ ವಿಂಗಡಿಸಿ ಪುರಸಭೆಯ ವಾಹನಕ್ಕೆ ನೀಡಬೇಕೆಂದು ಈ ಸಂದರ್ಭ ಸಾರ್ವಜನಿಕರಿಗೆ ಕರೆ ನೀಡಿದರು.
Additional image
06 May 2021, 10:29 PM
Category: Kaup
Tags: