ತುರ್ತು ಚಿಕಿತ್ಸೆಗೆ ಸಾಗಿಸಲು ಅಂಬುಲೆನ್ಸ್ ಸೌಲಭ್ಯ ಇಲ್ಲದ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ
Thumbnail
ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಸರಕಾರಿ ಗುಡ್ಡೆಯಲ್ಲಿ ಇರುವ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಆರೋಗ್ಯ ಸೇವೆಗಾಗಿ ಸರಕಾರಿ ಅಂಬುಲೆನ್ಸ್ ಸೌಲಭ್ಯ ಇಲ್ಲ. ತನ್ನ ಕಾರ್ಯ ವ್ಯಾಪ್ತಿಯ ಕಟಪಾಡಿ ಏಣಗುಡ್ಡೆ, ಮೂಡಬೆಟ್ಟು, ಮಟ್ಟು, ಕುರ್ಕಾಲು, ಕೋಟೆ, ಪಿತ್ರೋಡಿ, ಬೊಳ್ಜೆ, ಗುಡ್ಡೆಯಂಗಡಿ ಸಹಿತ 8 ಉಪ ಆರೋಗ್ಯ ಕೇಂದ್ರಗಳನ್ನು ಹೊಂದಿರುವ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರವು ಸುಮಾರು 34 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುತ್ತದೆ. ಬಹುತೇಕ ಗ್ರಾಮೀಣ ಪ್ರದೇಶದಲ್ಲಿಯೇ ಆರೋಗ್ಯ ಸೇವೆಯನ್ನು ನೀಡುತ್ತಿರುವ ಈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗರ್ಭಿಣಿಯರು, ಕೋವಿಡ್ ಸೋಂಕು ದೃಢಪಟ್ಟವರ ಸುರಕ್ಷತೆಯ ದೃಷ್ಟಿಯಿಂದ ರೋಗ ಲಕ್ಷಣ ಇರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಲು ಹಾಗೂ ಆಕ್ಸಿಜನ್ ಸ್ಯಾಚುರೇಶನ್ ಲೆವೆಲ್ 94 ಕ್ಕಿಂತ ಕಡಿಮೆ ಬಂದವರನ್ನು ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳುವ ಸಹಿತ ತುರ್ತು ರಕ್ಷಣೆಗಾಗಿ ಅಂಬುಲೆನ್ಸ್‍ಗೆ ಮೊರೆ ಹೋಗಬೇಕಾದ್ದು, ಅನಿವಾರ್ಯವಾಗುತ್ತದೆ. ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲೂ ಅಂಬುಲೆನ್ಸ್ ಉಪಯೋಗಿ ಹಾಗೂ ಸುರಕ್ಷಿತ. ಇಲ್ಲಿ ಮಾತ್ರ ರಿಕ್ಷಾ ಅಥವಾ ಖಾಸಗಿ ವಾಹನಗಳನ್ನು ಬಳಸಿಕೊಂಡು ಆರೋಗ್ಯ ಸೇವೆಯನ್ನು ನೀಡಬೇಕಾದಂತಹ ಅನಿವಾರ್ಯತೆ ಕಂಡು ಬರುತ್ತಿದೆ. ಜೊತೆಗೆ ಕೋವಿಡ್ ಲಸಿಕೆ ಸಹಿತ ಇತರೇ ಲಸಿಕೆ, ಇಂಜೆಕ್ಷನ್ ಸಂದರ್ಭ 8 ಆರೋಗ್ಯ ಉಪಕೇಂದ್ರದ ಆರೋಗ್ಯ ಸಹಾಯಕಿಯರು ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ತೆಗೆದುಕೊಂಡು ಹೋಗಿ ಆಯಾ ಗ್ರಾಮ ಮಟ್ಟದಲ್ಲಿ ಸೇವೆಯನ್ನು ನೀಡಬೇಕಾದಂತಹ ಪರಿಸ್ಥಿತಿ ಇದೆ. ಒಂದು ವೇಳೆ ಅಂಬುಲೆನ್ಸ್ ಇದ್ದಲ್ಲಿ ಆಯಾ ಉಪಕೆಂದ್ರಗಳಿಗೆ ಔಷಧಿ, ಸಿಬಂದಿಗಳನ್ನು ತುರ್ತಾಗಿ ತಲುಪಿಸುವಲ್ಲಿಯೂ ಸಹಕಾರಿಯಾಗಬಲ್ಲುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಜನಜಾಗೃತಿ ಮೂಡಿಸುವಲ್ಲಿಯೂ ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೈನೀ ಕ್ರಿಸ್ತಬೆಲ್ ತುರ್ತಾಗಿ ಅವಶ್ಯಕತೆ ಇದ್ದಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಅಂಬುಲೆನ್ಸ್ ಬಳಕೆಗೆ ಅವಕಾಶ ಇದೆ. ಕೇಂದ್ರಕ್ಕೆ ಸುಸಜ್ಜಿತ ಸರಕಾರಿ ಅಂಬುಲೆನ್ಸ್ ವ್ಯವಸ್ಥೆಯಾದಲ್ಲಿ ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ನೀಡಲು ಸಹಕಾರಿಯಾಗಲಿದೆ ಎಂದರು.
21 May 2021, 12:39 PM
Category: Kaup
Tags: