ಕಟಪಾಡಿಯ ಪ್ರಥಮ್ ಕಾಮತ್ ಕೈ ಚಳಕದಿ ಮೂಡಿದೆ ತರಕಾರಿಯ ತ್ರಿವರ್ಣ ಕಲಾಕೃತಿ
Thumbnail
ಕಾಪು : ನಮ್ಮ ರಾಷ್ಟ್ರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಚಿತ್ರಕಲೆ, ಕ್ರಾಫ್ಟ್, ಕ್ಲೇ ಮಾಡೆಲಿಂಗ್, ಮ್ಯಾಜಿಕ್ ಕಲೆಯಲ್ಲಿ ತನ್ನದೇ ಛಾಪನ್ನೊತ್ತಿದ ಬಾಲ ಪ್ರತಿಭೆ ಕಟಪಾಡಿಯ ಪ್ರಥಮ್ ಕಾಮತ್ ಇವರು ತರಕಾರಿಯಲ್ಲಿ ತ್ರಿವರ್ಣ ಕಲಾಕೃತಿ ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಉದಯ ಟಿ.ವಿ.ಯ ಸದಾ ನಿಮ್ಮೊಂದಿಗೆ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಶ್ರೀನಗರ ಕಿಟ್ಟಿಯವರೊಂದಿಗೆ ಮ್ಯಾಜಿಕ್ ಪ್ರದರ್ಶನ ನೀಡಿರುವುದಲ್ಲದೆ, ಕಾರ್ಕಳದಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಮ್ಯಾಜಿಕ್ ಪ್ರದರ್ಶನ ನೀಡಿ, 'ಕನಾರ್ಟಕ ಪ್ರತಿಭಾರತ್ನ' ರಾಜ್ಯ ಮಟ್ಟದ ಗೌರವ ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಈಗಾಗಲೇ ಹಲವು ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಿತರಾದ ಇವರು ರಮೇಶ್‌ರಾವ್ ನೇತೃತ್ವದ ಉಡುಪಿ ದೃಶ್ಯ ಸ್ಕೂಲ್ ಆಫ್‌ ಆರ್ಟ್‌ನಲ್ಲಿ ಚಿತ್ರಕಲೆ ಹಾಗೂ ಕ್ರಾಫ್ಟ್ ಕಲಿಯುತ್ತಿದ್ದು, ವೆಂಕಿ ಪಲಿಮಾರ್ ಬಳಿ ಕ್ಲೇ ಮಾಡೆಲಿಂಗ್, ಅಂತರಾಷ್ಟ್ರೀಯ ಖ್ಯಾತಿಯ ಮ್ಯಾಜಿಷಿಯನ್ ಸತೀಶ್ ಹೆಮ್ಮಾಡಿ ಬಳಿ ಮ್ಯಾಜಿಕ್ ಕಲೆಯನ್ನು ಕಲಿಯುತ್ತಿದ್ದಾರೆ. ಕಟಪಾಡಿಯ ಕೆ. ನಾಗೇಶ್ ಕಾಮತ್ ಮತ್ತು ಕೆ. ಸುಜಾತ ಕಾಮತ್ ದಂಪತಿಯ ಸುಪುತ್ರನಾಗಿರುವ ಪ್ರಥಮ್ ಕಾಮತ್, ಕಟಪಾಡಿ ಎಸ್.ವಿ.ಕೆ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.
Additional image
13 Aug 2021, 08:13 PM
Category: Kaup
Tags: