ಕಾಪು ತಾಲೂಕು ಮಟ್ಟದ ಸ್ವಾತಂತ್ರ‍್ಯೋತ್ಸವ ಸಂಭ್ರಮ
ಕಾಪು : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ೭೫ ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಪು ತಹಶೀಲ್ದಾರ್ ಪ್ರದೀಪ್ ಎಸ್. ಕುರ್ಡೇಕರ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಪ್ರದೀಪ್ ಕುರ್ಡೇಕರ್ ಮಾತನಾಡಿ, ನಾವು ಸಾಧಿಸಿದ್ದು ಕಡಿಮೆ, ಸಾಧಿಸಬೇಕಾದದ್ದು ಬಹಳಷ್ಟು ಇವೆ. ಸಂವಿಧಾನದ ಹಕ್ಕುಗಳ ರಕ್ಷಣೆಗೆ ಕಟಿ ಬದ್ಧರಾಗಬೇಕಿದೆ. ಕೊರೊನಾ ಮಹಾಮಾರಿಯ ಹೊಡೆತದಿಂದಾಗಿ ಜನತೆ ಕಂಗೆಟ್ಟಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಆಹಾರ ಕ್ಷೇತ್ರದ ಬೆಳವಣಿಗೆಯತ್ತ ಗಮನಹರಿಸಬೇಕಿದೆ. ಸಾಮಾಜಿಕ ಪಿಡುಗುಗಳ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ. ಅದರೊಂದಿಗೆ ರಾಷ್ಟ್ರೀಯತೆಯನ್ನು ಉಳಿಸಲು ನಾವೆಲ್ಲರೂ ಒಂದಾಗಬೇಕಿದೆ. ಎಲ್ಲರ ಸಹಕಾರದೊಂದಿಗೆ ಕಾಪು ತಾಲೂಕನ್ನು ಸಮಗ್ರವಾಗಿ ಕಟ್ಟುವ ವಿಶ್ವಾಸವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ದೇಶದ ಜನತೆಯನ್ನು ಕೊರೊನಾ ಮಹಾಮಾರಿ ಸಂಕಷ್ಟಕ್ಕೆ ಸಿಲುಕಿಸಿದೆ. ಕಾಪು ತಾಲೂಕಿನಲ್ಲಿ ಕೊರೊನಾ ವಿರುದ್ಧ ಮುಂಜಾಗ್ರತಾ ಕ್ರಮಗಳ ಪಾಲನೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದರ ಜೊತೆಗೆ ಅಭಿವೃದ್ಧಿಯತ್ತಲೂ ವಿಶೇಷ ಗಮನ ಹರಿಸಬೇಕಿದ್ದು, ಇದಕ್ಕೆ ಸರ್ವ ಜನರ ಸಹಕಾರದ ಅಗತ್ಯತೆಯಿದೆ. ಜಾತಿ ಮತ, ಪಕ್ಷ ಭೇಧ ಮರೆತು ಕಾಪುವಿನ ಅಭಿವೃದ್ಧಿಗೆ ಪ್ರಯತ್ನಿಸೋಣ ಎಂದರು.
ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಕಾಪು ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ವಿವೇಕಾನಂದ ಗಾಂವ್ಕರ್, ವೃತ್ತ ನಿರೀಕ್ಷಕ ಪ್ರಕಾಶ್, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅನಿಲ್ ಕುಮಾರ್ ಅತಿಥಿಗಳಾಗಿದ್ದರು.
ಕಾಪು ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಉಪತಹಶೀಲ್ದಾರ್ ಕೆ. ರವಿಶಂಕರ್, ಅಶೋಕ್ ಕೋಟೆಕಾರ್, ಚಂದ್ರಹಾಸ ಭಂಡಾರಿ, ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾಪು ತಾಲೂಕು ರಾಷ್ಟ್ರೀಯ ಹಾಗು ನಾಡ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸಾಧಕರಾದ ಗಿನ್ನೆಸ್ ದಾಖಲೆ ವೀರೆ ಯೋಗಪಟು ತನುಶ್ರೀ ಪಿತ್ರೋಡಿ, ಗೃಹರಕ್ಷಕದಳದ ಘಟಕಾಧಿಕಾರಿ ಲಕ್ಷ್ಮೀನಾರಾಯಣ ರಾವ್, ಪಡುಬಿದ್ರಿ ಎಎಸೈ ದಿವಾಕರ್, ಕಾಪು ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಮಹಾಬಲ ಗಾಣಿಗ, ಕಂದಾಯ ಇಲಾಖೆಯ ಸಿಬಂದಿ ಫಿರೋಜ್ ಖಾನ್, ಗ್ರಾಮ ಸಹಾಯಕ ಮಂಜು ದೇವಾಡಿಗ, ಆರೋಗ್ಯ ಇಲಾಖೆಯ ಅಭಿಲಾಷ್, ಕೃಷ್ಣ, ಪುರಸಭೆಯ ರಾಘು, ಕಿರಣ್, ಗ್ರಾ.ಪಂ. ಅಧಿಕಾರಿಗಳಾದ ಪಂಚಾಕ್ಷರಿ ಕೇರಿಮಠ, ವಸಂತಿ ಬಾಯಿ ಹಾಗೂ ಸ್ಕೌಟ್ ಗೈಡ್ಸ್ ನ ಶಾಲೆಟ್ ಕರ್ಕಡ ಅವರನ್ನು ಸಮ್ಮಾನಿಸಲಾಯಿತು.
ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಸ್ವಾಗತಿಸಿದರು. ಪೊಲಿಪು ಪ. ಪೂ. ಕಾಲೇಜಿನ ಉಪನ್ಯಾಸಕ ನಾಗರಾಜ್ ಜಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
