ಭಂಡಾರಿಬೆಟ್ಟು : ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನೆ
Thumbnail
ಮಂಗಳೂರು : ಬಂಟ್ವಾಳ ತಾಲೂಕಿನ ಯುವಜನ ವ್ಯಾಯಾಮಶಾಲೆ ಭಂಡಾರಿಬೆಟ್ಟುವಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.) ಮತ್ತು ತುಲುನಾಡ ಯುವಸೇನೆ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನಾ ಸಮಾರಂಭ ನಡೆಯಿತು. ಜೈ ತುಲುನಾಡ್ (ರಿ.) ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ತುಲು ಲಿಪಿ ಕಲಿಯುವ ಕಾರ್ಯಗಾರವನ್ನು ಚೇತನ್ ಮುಂಡಾಜೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತುಲು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳ ರವರು ತುಲು ಲಿಪಿ ಬರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಉದ್ಘಾಟಿಸಿ ಮಾತನಾಡಿದ ಚೇತನ್ ಮುಂಡಾಜೆರವರು ತುಲು ಭಾಷೆಗೆ ಲಿಪಿ ಇದ್ದರೂ ಅದೆಷ್ಟೋ ಜನರಿಗೆ ತಿಳಿಯದೆ ಹೋಗಿದೆ, ತುಲು ಭಾಷೆಗೆ ಸುಮಾರು 2500 ವರ್ಷದ ಇತಿಹಾಸ ಇದೆ, ಇಂತಹ ಭಾಷೆಯನ್ನು ನಾವು ಕಲಿಯದೆ ಹಿಂದುಳಿಯುವಂತೆ ಮಾಡಿದ್ದೇವೆ. ಇನ್ನಾದರೂ ಈ ಭಾಷೆಯನ್ನು, ಲಿಪಿಯನ್ನು ಕಲಿತು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ಮಾಡುವ ಎಂದರು. ಜೈ ತುಲುನಾಡ್ (ರಿ) ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮಾತನಾಡಿ, ಸಂಘಟನೆ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುವ ಕಾಲದಿಂದ ಇಂದಿನ ತನಕವೂ ತುಲುವಿಗೆ ಸ್ಥಾನಮಾನಕ್ಕಾಗಿ ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಅಕಾಡೆಮಿಯೊಟ್ಟಿಗೆ ಸಂಘಟನೆಯು ಸಹಕಾರ ನೀಡುತ್ತಾ ಬರುತ್ತಿದೆ. ತುಲುನಾಡಿನ ಎಲ್ಲಾ ಅಂಗಡಿ, ಶಾಲೆ, ಕಚೇರಿಯಲ್ಲಿ ತುಲು ಲಿಪಿಯ ನಾಮಫಲಕ ಹಾಕಬೇಕು ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಸಜಿಪ, ಜೈ ತುಲುನಾಡ್ (ರಿ.) ಉಪಾಧ್ಯಕ್ಷರಾದ ಉದಯ್ ಪೂಂಜ, ಉಪ ಸಂಘಟನಾ ಕಾರ್ಯದರ್ಶಿ ಅಶ್ರಫ್ ಭಸ್ಥಿಕೋಡಿ, ತುಲು ಲಿಪಿ ಶಿಕ್ಷಕರಾದ ಪೂರ್ಣಿಮಾ ಬಂಟ್ವಾಳ ಹಾಗೂ ಪೃಥ್ವಿ ತುಲುವೆ ಉಪಸ್ಥಿತರಿದ್ದರು. ಧೀರಜ್ ಸ್ವಾಗತಿಸಿ, ಮಹೇಶ್ ವಂದಿಸಿ, ಲಿಖಿತ್‌ರಾಜ್ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.
Additional image Additional image Additional image
23 Aug 2021, 09:53 AM
Category: Kaup
Tags: