ಹಿರಿಯ ನಾಗರಿಕರನ್ನು ಗೌರವದಿಂದ ನೋಡಿಕೊಳ್ಳಬೇಕು : ಶಾಸಕ ರಘುಪತಿ ಭಟ್
Thumbnail
ಉಡುಪಿ : ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಹಿರಿಯ ನಾಗರಿಕರನ್ನು ನಿರ್ಲಕ್ಷಿಸದೇ, ಅವರನ್ನು ಗೌರವದಿಂದ ನೋಡಿಕೊಳ್ಳುವ ವಾತಾವರಣವನ್ನು ಸೃಷ್ಠಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾಸ್ಪತ್ರೆ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ವಕೀಲರ ಸಂಘ (ರಿ) ಉಡುಪಿ ಹಿರಿಯ ನಾಗರಿಕರ ಸಂಸ್ಥೆಗಳು ಉಡುಪಿ, ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ(ರಿ) ವೃದ್ಧಾಶ್ರಮಗಳು ಉಡುಪಿ ಜಿಲ್ಲೆ, ಇವರ ಸಂಯುಕ್ತ ಆಶ್ರಯದೊಂದಿಗೆ ನಡೆದ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿರಿಯ ನಾಗರಿಕರು ಜೀವನದಲ್ಲಿ ಹಲವು ಸಂಕಷ್ಠ ಮತ್ತು ಸಂಘರ್ಷಗಳನ್ನು ಎದುರಿಸಿ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಕೊಡುಗೆ ನೀಡಿರುತ್ತಾರೆ. ಅವರನ್ನು ಗೌರವದಿಂದ ಕಾಣುವುದು ಅತ್ಯಂತ ಅಗತ್ಯ, ಹಿರಿಯ ನಾಗರಿಕರಿಗೆ ಗೌರವ ನೀಡದವರಿಗೆ, ಸಮಾಜವೂ ಗೌರವ ನೀಡುವುದಿಲ್ಲ ಎಂಬ ವಾತಾವರಣವನ್ನು ನಿರ್ಮಿಸಬೇಕಿದೆ, ಅವರಿಗೆ ಸಹಾಯ, ಸಹಕಾರ ನೀಡುವುದಕ್ಕಿಂತ ಹೆಚ್ಚಾಗಿ ಪ್ರೀತಿ ನೀಡಬೇಕಿದೆ ಎಂದ ಶಾಸಕ ರಘುಪತಿ ಭಟ್, ಕಾನೂನು ಸಹ ಹಿರಿಯ ನಾಗರಿಕರಿಗೆ ರಕ್ಷಣೆ ನೀಡಿದೆ, ಸಮಾಜದಲ್ಲಿ ವೃದ್ದಾಶ್ರಮಗಳು ಕಡಿಮೆಯಾಗಿ ಮನೆಯಲ್ಲಿಯೇ ಹಿರಿಯರನ್ನು ಗೌರವ ಪ್ರೀತಿಯಿಂದ ನೋಡಿಕೊಳ್ಳುವಂತಾಗಬೇಕು ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, ಹಿರಿಯ ನಾಗರಿಕರಿಗೆ ವಯಸ್ಸು ಎಂಬುದು ಒಂದು ಸಂಖ್ಯೆ ಮಾತ್ರ, ಮನಸ್ಸಿಗೆ ವಯಸ್ಸು ಸಮಸ್ಯೆಯಗುವುದಿಲ್ಲ, ಕುಟುಂಬ ಮತ್ತು ಸಮಾಜದಲ್ಲಿ ಹಿರಿಯರಿಗೆ ಆತ್ಮಭಿಮಾನ ಮತ್ತು ಗೌರವ ದೊರೆಯುವಂತೆ ನೋಡಿಕೊಳ್ಳಬೇಕು. ಉಡುಪಿಯಲ್ಲಿ ಹಿರಿಯ ನಾಗರೀಕರಿಗೆ ಡೇ ಕೇರ್ ಸೆಂಟರ್ ಆರಂಭಿಸುವ ಕುರಿತಂತೆ ಪ್ರಯತ್ನಿಸಲಾಗುವುದು, ಕೇಂದ್ರ ಸರ್ಕಾರದ ಡಿಜಿಟಲ್ ಪ್ಲಾಟ್ ಫಾರಂ ಮತ್ತು ಪೋರ್ಟಲ್ ನಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುವಂತೆ ಹೇಳಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಹಿರಿಯ ನಾಗರಿಕರಿಗೆ ಕಾನೂನ್ಮಾಕವಾಗಿ ಇರುವ ರಕ್ಷಣೆ ಹಾಗೂ ಸರಕಾರದ ವಿವಿಧ ಯೋಜನೆ ಮತ್ತು ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು, ಹಿರಿಯರು ಸಮಾಜದ ಸಂಪನ್ಮೂಲ ವ್ಯಕ್ತಿಗಳು ಎಂದರು. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಗರಿಕ ದಿನಾಚರಣೆ ಅಂಗವಾಗಿ ನಡೆದ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಡುಪಿ ಜಿಲ್ಲಾಸ್ಪತ್ರೆ ವತಿಯಿಂದ ಹಿರಿಯ ನಾಗರಿಕರಿಗೆ, ಕಣ್ಣಿನ ಪರೀಕ್ಷೆ, ಮಧುಮೇಹ, ರಕ್ತದೊತ್ತಡ, ಟಿಬಿ ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ. ರಾಘವೇಂದ್ರ ಕಿಣಿ, ವಕೀಲ ಸಂಘದ ಅಧ್ಯಕ್ಷ ಬಿ.ನಾಗರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಆರ್, ವಿಕಲಚೇತನರ ಸಬಲೀಕರಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರತ್ನ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಡಿ.ವೈ.ಎಸ್ಪಿ ಸುಧಾಕರ್ ನಾಯಕ್ ಹಾಗೂ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸರಳ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಸಿ.ಎಸ್.ರಾವ್ ಸ್ವಾಗತಿಸಿ, ರೂಪಾಲಕ್ಷ್ಮಿ ನಿರೂಪಿಸಿದರು.
Additional image Additional image
02 Oct 2021, 12:43 PM
Category: Kaup
Tags: