ಸಾರಿಗೆ ಉದ್ಯಮಿ, ಶತಾಯುಷಿ, ಪಾಂಗಾಳ ರಬೀಂದ್ರ ನಾಯಕ್ : ದೈವಾಧೀನ
ಉಡುಪಿ : ಇಲ್ಲಿನ ಸುಪ್ರಸಿದ್ಧ ಸಾರಿಗೆ ಉದ್ಯಮಿ, ಶತಾಯುಷಿ, ಪಾಂಗಾಳ ರಬೀಂದ್ರ ನಾಯಕ್ ರವರು ಇಂದು ವಯೋ ಸಹಜ ಅನಾರೋಗ್ಯದಿಂದ ದೈವಾಧೀನರಾಗಿರುವರು ಎಂದು ತಿಳಿಸಲು ವಿಷಾದಿಸುತ್ತೇವೆ. ತನ್ನ ತಂದೆ ದಿವಂಗತ ಉಪೇಂದ್ರ ಶ್ರೀನಿವಾಸ ನಾಯಕ್ ರವರು ಹುಟ್ಟು ಹಾಕಿದ ಹನುಮಾನ್ ಹಾಗೂ ಗಜಾನನ ಟ್ರಾನ್ಸ್ ಪೋರ್ಟ್ ಕಂಪೆನಿಯನ್ನು ಉತ್ತುಂಗಕ್ಕೇರಿಸಿ, ಹಲವಾರು ಜನರಿಗೆ ಉದ್ಯೋಗದಾತರಾಗಿ, ಅನ್ನದಾತರಾಗಿ ಜನಾನುರಾಗಿದ್ದರು.
ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಬೇರೊಂದಿಲ್ಲ" ಎಂಬ ಧೃಡವಾದ ನಂಬಿಕೆಯಿಂದ ಶಿಕ್ಷಣಕ್ಕೆ ನಿರಂತರವಾಗಿ ಪ್ರೋತ್ಸಾಹವನ್ನು ನೀಡುತ್ತಾ, ಪಟ್ಲ ಯು ಎಸ್ ನಾಯಕ್ ಪ್ರೌಢಶಾಲಾ ಸ್ಥಾಪಕರಾಗಿಯೂ ಸಾವಿರಾರು ಜನರಿಗೆ ವಿದ್ಯಾದಾನಕ್ಕೆ ಅನುವು ಮಾಡಿರುತ್ತಾರೆ. ನಮ್ಮ ಪರ್ಕಳ ಶಾಲೆಗೂ ದೇಣಿಗೆಯನ್ನು ನೀಡಿರುತ್ತಾರೆ.
ಮಣಿಪಾಲದ ಆರ್ ಎಸ್ ಬಿ ಭವನದ ನಿರ್ಮಾಣಕ್ಕೆ , ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಅನ್ನದಾನ ನಿಧಿಗೆ ಸಾಕಷ್ಟು ದೇಣಿಗೆಯನ್ನು ನೀಡಿದ ಕೊಡುಗೈ ದಾನಿ. ದಿವಂಗತರು ಬಂಟಕಲ್ಲು ದೇವಸ್ಥಾನದ ಸ್ಥಾಪನೆಗೆ ಮೂಲ ಕಾರಣರಾದ ಪಾಂಗಾಳ ನಾಯಕ್ ಕುಟುಂಬಸ್ಥರು ಮಾತ್ರವಲ್ಲದೆ ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಆರಾಧಕರಾಗಿದ್ದರು.
