ಅ. 28 : ವಿಶ್ವ ಸಂವಹನಕಾರರ ದಿನಾಚರಣೆ, ಸಾಧಕರಿಗೆ ಪುರಸ್ಕಾರ
ಉಡುಪಿ: ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ.ಆರ್.ಸಿ.ಐ.) ಉಡುಪಿ- ಮಣಿಪಾಲ ಘಟಕ ಆಶ್ರಯದಲ್ಲಿ ಅ. 28ರಂದು ವಿಶ್ವ ಸಂವಹನಕಾರರ ದಿನಾಚರಣೆ ನಡೆಯಲಿದೆ.
ಸಂಜೆ 6ರಿಂದ ಕರಾವಳಿ ಜಂಕ್ಷನ್ ಬಳಿಯ ಹೋಟೆಲ್ ಮಣಿಪಾಲ ಇನ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು.
ಮಾಧ್ಯಮ ಕ್ಷೇತ್ರದ ಹಿರಿಯರೂ ಜಾನಪದ ವಿದ್ವಾಂಸರೂ ಆಗಿರುವ ಕೆ. ಎಲ್. ಕುಂಡಂತಾಯ, ಕಾರ್ಕಳದ ಕೃಷಿ ಬಿಂಬ ಪತ್ರಿಕೆ ಸಂಪಾದಕ ರಾಧಾಕೃಷ್ಣ ತೋಡಿಕಾನ ಮತ್ತು ಕುಂದಾಪುರದ ಕುಂದಪ್ರಭ ಪತ್ರಿಕೆ ಸಂಪಾದಕ ಯು. ಸುರೇಂದ್ರ ಶೆಣೈ ಅವರಿಗೆ ಮರವಂತೆ ರಾಮಕೃಷ್ಣ ಹೆಬ್ಬಾರ್ ಸ್ಮಾರಕ ಮಾಧ್ಯಮ ಜಾಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಇದೇ ಸಂದರ್ಭದಲ್ಲಿ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯಾಧ್ಯಕ್ಷ ಕರಾವಳಿ ಎಕ್ಸೆಸ್ ಡಾಟ್ ಕಾಮ್ ನ ಜನಾರ್ದನ ಕೊಡವೂರು ಅವರಿಗೆ ಕರಾವಳಿ-ಇ ಧ್ವನಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.
ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಹಾಗೂ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ಮತ್ತು ಪ್ರಭಾವತಿ ಶೆಣೈ ದಂಪತಿ ಹಾಗೂ ಹಡಿಲು ಭೂಮಿ ಕೃಷಿಯ ಪೂರಕ ಶಕ್ತಿ ಉಡುಪಿ, ಯಕ್ಷಗಾನ ಕಲಾರಂಗ ಕಾರ್ಯದರ್ಶಿ, ವಿಶ್ರಾಂತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಅವರನ್ನು ಗೌರವಿಸಲಾಗುವುದು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪಿ.ಆರ್.ಸಿ.ಐ. ದಕ್ಷಿಣ ಭಾರತ ಘಟಕ ಸಭಾಪತಿ ಕೆ. ಜಯಪ್ರಕಾಶ್ ರಾವ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮತ್ತು ಪುಣೆಯ ಉದ್ಯಮಿ ಸುಭಾಶ್ಚಂದ್ರ ಹೆಗ್ಡೆ ಅಭ್ಯಾಗತರಾಗಿ ಆಗಮಿಸುವರು ಎಂದು ನಾಗರಾಜ ಹೆಬ್ಬಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
