ಮಂಗಳೂರು ಪೊಲೀಸರಿಂದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 7 ಜನ ಆರೋಪಿಗಳ ಬಂಧನ, ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳ ವಶ.
ಮಂಗಳೂರು : ಇಲ್ಲಿನ ನಗರದ ವ್ಯಾಪ್ತಿಯಲ್ಲಿ ಸರಗಳ್ಳತನ, ದರೋಡ, ದ್ವಿಚಕ್ರ ವಾಹನಗಳನ್ನು ಕಳವು ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಲ್ಲಿ ಮಂಗಳೂರು ಕಾವೂರು ನಿವಾಸಿ ಅಬ್ದುಲ್ ಇಶಾಮ್ ಯಾನೆ ಆಶಾಮ್ (26), ಪಂಜಿಮೊಗರಿನ ಸವಾನ್ ಯಾನೆ ಸಪ್ಪು ಯಾನೆ ದೊದ್ದ (29), ಕಾವೂರಿನ ಮೊಹಮ್ಮದ್ ತೌಸೀಪ್ ಯಾನೆ ಆಚಿ ಯಾನೆ ಹಾರೀಸ್ (30), ಶಾಂತಿನಗರದ ಅಬ್ದುಲ್ ಖಾದರ್ ಯಾಸಿನ್ (30), ಮಲ್ಲೂರಿನ ಮೊಹಮ್ಮದ್ ಪಜಲ್ ಯಾನೆ ಪಜ್ಜು (32), ಚೊಕ್ಕಬೆಟ್ಟುವಿನ ಅರ್ಷಾದ್ (34), ಕುಂದಾಪುರದ ಕುಂಬಾಶಿಯ ಮುಜಾಹಿದುರ್ ರೆಹಮಾನ್ (23) ಎಂಬವನ್ನು ಬಂಧಿಸಿ ಸದ್ರಿಯವರು ಸರಗಳ್ಳತನ ಮಾಡಿ ಮಹಿಳೆಯರಿಂದ ಎಳೆದುಕೊಂಡಿದ್ದ ಸುಮಾರು 10 ಲಕ್ಷ ಮೌಲ್ಯದ 210 ಗ್ರಾಂ ತೂಕದ ಚಿನ್ನದ ಸರ ಮತ್ತು ಕರಿಮಣಿ ಸರಗಳನ್ನು ಹಾಗು ಎರಡು ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಲ್ಲದ ಆರೋಪಿಗಳು ವಿವಿಧ ಕಡೆಗಳಲ್ಲಿ ಎಳೆದುಕೊಂಡಿರುವ ಚಿನ್ನಾಭರಣವನ್ನು ಮತ್ತು ಕಳವು ಮಾಡಿರುವ 5 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲು ಬಾಕಿ ಇರುತ್ತದೆ. ಈ ಆರೋಪಿಗಳ ವಿರುದ್ಧ ಬಜಪೆ ಠಾಣೆ, ಬಂದರು ಠಾಣೆ, ಬರ್ಕೆ ಠಾಣೆ, ಕಾವೂರು ಠಾಣೆ, ಉರ್ವ ಠಾಣೆ, ಮಂಗಳೂರು ಪೂರ್ವ ಠಾಣೆ, ಕಂಕನಾಡಿ ನಗರ ಠಾಣೆ, ಉಳ್ಳಾಲ್ ಠಾಣೆ ಸೇರಿದಂತೆ ಒಟ್ಟು 24 ಕೇಸುಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿರುತ್ತದೆ.
ಈ ಪ್ರಕರಣವನ್ನು ಅತೀ ಶೀಘ್ರದಲ್ಲಿ ಪತ್ತೆ ಹಚ್ಚುವಲ್ಲಿ ಡಿಸಿಪಿ, ಕಾನೂನು ಸುವ್ಯವಸ್ಥೆ ಮತ್ತು ಡಿಸಿಪಿ, ಅಪರಾಧ ಮತ್ತು ಸಂಚಾರ ರವರ ಉಸ್ತುವಾರಿಯಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಎನ್. ಮಹೇಶ್ ಕುಮಾರ್, ಕೇಂದ್ರ ಉಪವಿಭಾಗದ ಎಸಿಪಿ ಪರಮೇಶ್ವರ ಹಗ್ಡೆ ರವರ ನೇತೃತ್ವದಲ್ಲಿ ಉತ್ತರ ಮತ್ತು ಕೇಂದ್ರ ಉಪವಿಭಾಗ ವ್ಯಾಪ್ತಿಯ ಪೊಲೀಸ್ ನಿರೀಕ್ಷಕರುಗಳು ಹಾಗೂ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.
