ವಾಹನಗಳ ಬ್ಯಾಟರಿ ಕಳ್ಳತನ - 2 ಲಕ್ಷ 70 ಸಾವಿರ ಮೌಲ್ಯದ ಸೊತ್ತುಗಳ ವಶ
ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ಸುಟ್ಟಾಡಿ ಕ್ರಾಸ್ ಎಂಬಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ವಾಹನಗಳ ತಪಾಸಣೆ ಮಾಡುವ ಸಂದರ್ಭ ಮೂಳೂರು ಕಡೆಯಿಂದ ಬಂದ ಟಾಟಾ ಎಸಿ ವಾಹನವನ್ನು ನಿಲ್ಲಿಸಿದಾಗ 10 ಬ್ಯಾಟರಿಗಳು ಕಂಡು ಬಂದಿದ್ದು, ಈ ಬಗ್ಗೆ ವಾಹನದಲ್ಲಿದ್ದವರನ್ನು ವಿಚಾರಿಸಲಾಗಿ ಕಳವು ಮಾಡಿ ಇಟ್ಟುಕೊಂಡಿರುವುದನ್ನು ಮಾರಾಟ ಮಾಡಲು ತೆಗೆದುಕೊಂಡು ಬಂದಿರುತ್ತೇವೆ ಎಂದು ಒಪ್ಪಿಕೊಂಡಿರುತ್ತಾರೆ.
ಕಡಬ ತಾಲೂಕಿನ ಎರ್ಮಾಳ್ ಮನೆ ಕುಂತ್ತೂರು ಪೆರಬೆ ಆಲಂಕಾರುವಿನ ರಾಜೀಕ್ ಕೆ (27) ಮತ್ತು ಬಂಟ್ವಾಳ ತಾಲೂಕಿನ ವಾಸಪತ್ರಿಕೋಡಿ ಮನೆ ಕೆದಿಲ ಗ್ರಾಮದ ಸಿನಾನ್ (24) ಬಂಧಿತರಾಗಿದ್ದಾರೆ.
ಬಂಧಿತರಿಂದ 2 ಲಕ್ಷ ರೂ. ಮೌಲ್ಯದ ಟಾಟಾ ಎಸ್, 70 ಸಾವಿರ ಮೌಲ್ಯದ ಬ್ಯಾಟರಿಗಳು, ಒಟ್ಟು ಮೌಲ್ಯ 2 ಲಕ್ಷದ 70 ಸಾವಿರ ಎಂದು ಅಂದಾಜಿಸಲಾಗಿದೆ.
ಮಹಮ್ಮದ್ ಶರೀಶ್ ಎಂಬವರ ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿರುವ ಸೈಟ್ ನಲ್ಲಿ ನಿಲ್ಲಿಸಿದ ಲಾರಿ, ಹಿಟಾಚಿ, ಜೆಸಿಬಿಗಳ 7 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿರುವ ಬಗ್ಗೆ ದೂರನ್ನು ದಾಖಲಿಸಿದ್ದರು.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶಶಿಕುಮಾರ್ ರವರ ನಿರ್ದೇಶನದಂತೆ, ಹರಿರಾಂ ಶಂಕರ್, ಡಿ.ಸಿ.ಪಿ. (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ದಿನೇಶ್ ಕುಮಾರ್ ಬಿ. ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ)ರವರ ಸಲಹೆಯಂತೆ, ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಂಜಿತ್ ಕುಮಾರ್ ಬಂಡಾರುರವರ ಮಾರ್ಗದರ್ಶನದಲ್ಲಿ ಕೊಣಾಜೆ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರರವರ ನೇತೃತ್ವದಲ್ಲಿ ಎಎಸ್‌ಐ ಮೋಹನ್, ಪಿಸಿ ಅಶೋಕ್, ಪಿಸಿ ಪುರುಷೋತ್ತಮ್, ಪಿಸಿ ಶಿವಕುಮಾರ್ ರವರು ಭಾಗವಹಿಸಿರುತ್ತಾರೆ.
