ಕರ್ನಾಟಕ ಸೊಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್ 1960ರ ಅಡಿಯಲ್ಲಿ ನೋಂದಾಣಿಗೊಂಡ ‘ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ’ ಬಂಟಕಲ್ಲು
ಕಾಪು : ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ (ರಿ.), ಬಂಟಕಲ್ಲು ಇದರ ಸಾಮಾನ್ಯ ಸಭೆ ಹಾಗೂ ಕರ್ನಾಟಕ ಸೋಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್ 1960ರ ಅಡಿಯಲ್ಲಿ ನೋಂದಾಣಿಗೊಂಡ ಪ್ರಮಾಣ ಪತ್ರ ಹಸ್ತಾಂತರಿಸುವ ಕಾರ್ಯಕ್ರಮ ಡಿಸೆಂಬರ್ 7ರಂದು 92,ಹೇರೂರಿನ ಶ್ರೀ ಗುರುರಾಘವೇಂದ್ರ ಸಮಾಜಸೇವಾ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಬಂಟಕಲ್ಲಿನ ಯುವ ಉದ್ಯಮಿ ಶ್ರೀ ಮಾಧವ ಕಾಮತ್ ರವರು ಉಪಸ್ಥಿತರಿದ್ದರು.
ಕಳೆದ ಮಹಾಸಭೆಯಲ್ಲಿ ನಿರ್ಣಯಿಸಿದಂತೆ, ಆಟೋ ಸ್ಟಾಂಡಿನ ಹಿರಿಯ ಮಾಲಕ-ಚಾಲಕ ಹಾಗೂ ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ (ರಿ.) 92-ಹೇರೂರು ಇದರ ಸ್ಥಾಪಕ ಕಾರ್ಯದರ್ಶಿಯವರೂ ಆಗಿರುವ ಶ್ರೀನಿವಾಸ್ ಪ್ರಭು (ಸ್ಪೂರ್ತಿ ಬಂಟಕಲ್ಲು) ಇವರು ಕರ್ನಾಟಕ ಸೋಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್ 1960ರ ಪ್ರಕಾರ ಜ್ಞಾಪನ ಪತ್ರ ಮತ್ತು ನಿಯಮ ನಿಬಂಧನೆಗಳನ್ನು ತಯಾರಿಸಿ, ಉಡುಪಿ ಜಿಲ್ಲಾ ಸಂಘಸಂಸ್ಥೆಗಳ ನೋಂದಾಣಿ ಕಛೇರಿಯಲ್ಲಿ ನೋಂದಾಣಿಗೊಳಿಸಿ, ತನ್ಮೂಲಕ ಕಛೇರಿಯಿಂದ ಪಡೆದ ಪ್ರಮಾಣ ಪತ್ರ ಮತ್ತು ಪ್ರಮಾಣಿತ ಬೈಲಾವನ್ನು ಈ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ ಪೂಜಾರಿಯವರಿಗೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಂಟಕಲ್ಲಿನ ಯುವ ಉದ್ಯಮಿ ಮಾಧವ ಕಾಮತ್ ರವರ ಮೂಲಕ ಹಸ್ತಾಂತರಿಸಿದರು.
1997 ರಲ್ಲಿ ಸ್ಥಾಪಿತವಾದ ಬಂಟಕಲ್ಲು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘವು ಜಿಲ್ಲಾ ನೋಂದಾಣಿ ಕಛೇರಿಯಲ್ಲಿ ನೋಂದಾವಣೆ ಆಗದೇ ಇದ್ದುದರಿಂದ ಕೊರೊನದಂತಹ ಮಹಾಮಾರಿಯ ಸಮಯದಲ್ಲಿ ಅಸಂಘಟಿತ ಕಾರ್ಮಿಕರ ಅಡಿಯಲ್ಲಿ ಬರುವ ಅಟೋ ಚಾಲಕ-ಮಾಲಕರಿಗೆ ಸರಕಾರದಿಂದ ಸಿಗಬೇಕಿದ್ದ ಯಾವುದೇ ಸೌಲತ್ತು ಸಿಗದೇ ವಂಚಿತರಾಗಿದ್ದರು. ಅಲ್ಲದೆ ಬ್ಯಾಂಕ್ ವ್ಯವಹಾರಕ್ಕೂ ನೊಂದಾಣಿ ಪ್ರಮಾಣ ಪತ್ರ ಹಾಗೂ ಪಾನ್ ಕಾರ್ಡಿನ ಅಗತ್ಯತೆ ಇದ್ದುದರಿಂದ ಸಂಘದ ಕಾರ್ಯದರ್ಶಿ ಹರೀಶ್ ಹೇರೂರ್ ರವರು ತಮ್ಮ ಸಂಘದ ಸದಸ್ಯರೊಡನೆ ಸಮಾಲೋಚಿಸಿ, ಸುಮಾರು 40 ಸದಸ್ಯರನ್ನೊಳಗೊಂಡ ಈ ಸಂಘವನ್ನು ‘’ಅಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು’’ ಎಂಬ ಹೆಸರಿನಡಿಯಲ್ಲಿ ಉಡುಪಿ ಜಿಲ್ಲಾ ಸಂಘ ಸಂಸ್ಥೆಗಳ ನೋಂದಾಣಿ ಕಛೇರಿಯಲ್ಲಿ ನೋಂದಾಯಿಸಿ ಕೊಡುವಂತೆ ಶ್ರೀನಿವಾಸ್ ಪ್ರಭು ರವರಲ್ಲಿ ವಿನಂತಿಸಿದ್ದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುರೇಶ ಪೂಜಾರಿ ಕಲ್ಲುಗುಡ್ಡೆ, ಕಾರ್ಯದರ್ಶಿ ಹರೀಶ್ ಹೇರೂರು, ಜತೆಕಾರ್ಯದರ್ಶಿ ಶೈಲೇಶ್ ಪೂಜಾರಿ ಕಲ್ಲುಗುಡ್ಡೆ, ಕೋಶಾಧಿಕಾರಿ ರಾಘವೇಂದ್ರ ಕುಲಾಲ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಉಮೇಶ್ ಪ್ರಭುರವರು ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಹೇರೂರ್ ವಂದಿಸಿದರು.
